ದೇಶಭಕ್ತಿ ಇಲ್ಲದೆ ಸೊರಗುತ್ತಿರುವ ಸ್ವಾತಂತ್ರೋತ್ಸವ

  •  
  •  
  •  
  •  
  •    Views  

ನಿನ್ನೆಯ ದಿನವಷ್ಟೇ ಸ್ವಾತಂತ್ರ್ಯೋತ್ಸವವನ್ನು ದೇಶದ ಉದ್ದಗಲ್ಲಕ್ಕೂ ಆಚರಿಸಲಾಗಿದೆ. ಅಂತೆಯೇ ಸಿರಿಗೆರೆಯ ನಮ್ಮ ಮಠದ ಶಾಲಾ ಮಕ್ಕಳು ಟಾಕುಟೀಕಾಗಿ ತಂತಮ್ಮ ಶಾಲೆಗಳ ಸಮವಸ್ತ್ರ ಧರಿಸಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು, ವಾದ್ಯಗಳ ಲಯಬದ್ಧ ಶಬ್ದಕ್ಕೆ ಶಿಸ್ತಿನಿಂದ ಹೆಜ್ಜೆ ಹಾಕುತ್ತಾ "ಭಾರತ್ ಮಾತಾ ಕೀ ಜಯ್", "ವಂದೇ ಮಾತರಂ" ಎಂದು ಜಯಘೋಷ ಮೊಳಗಿಸುತ್ತಾ ಹಳ್ಳಿಯ ಕೇರಿ ಕೇರಿಗಳಲ್ಲಿ ನಡೆಸಿದ ಪ್ರಭಾತಫೇರಿ ಪ್ರೇಕ್ಷಕರ ಕಣ್ಮನಗಳನ್ನು ತುಂಬಿದವು! ಧ್ವಜಾರೋಹಣ ಮಾಡಲು ಆಗಮಿಸುತ್ತಿದ್ದಂತೆಯೇ ರಸ್ತೆಯ ಇಕ್ಕೆಲಗಳಲ್ಲಿ ಹಾಲುಗಲ್ಲದ ಶಾಲಾ ಮಕ್ಕಳು ಗಾಂಧೀ ತಾತ, ನೆಹರೂ ಚಾಚ, ಸುಭಾಷ್ ಚಂದ್ರ ಭೋಸ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ, ಸ್ವಾಮಿ ವಿವೇಕಾನಂದರನ್ನು ಒಳಗೊಂಡಂತೆ ಅನೇಕ ಧಾರ್ಮಿಕ ನೇತಾರರ ಪೋಷಾಕು ಧರಿಸಿ ಮುಗ್ಧತೆಯಿಂದ ನಿಂತಿದ್ದ ದೃಶ್ಯ ಮನಮೋಹಕವಾಗಿತ್ತು. ಧ್ವಜಾರೋಹಣದ ನಂತರ ಬಯಲು ರಂಗಮಂದಿರದಲ್ಲಿ ರಾಷ್ಟ್ರಭಕ್ತಿ ಮತ್ತು ದೇಶಾಭಿಮಾನವನ್ನು ಪ್ರದರ್ಶಿಸಿದ ರಂಗುರಂಗಿನ ಕಾರ್ಯಕ್ರಮಗಳು ಆಕರ್ಷಕವಾಗಿದ್ದವು. ಆದರೆ ಈ ಎಲ್ಲ ಶಿಸ್ತು, ರಾಷ್ಟ್ರಭಕ್ತಿ ಮತ್ತು ದೇಶಾಭಿಮಾನ ಶಾಲಾ ಮಕ್ಕಳಿಗೇ ಮೀಸಲಾಗಿದೆಯೇ ಹೊರತು ನಾಗರಿಕರಲ್ಲಿ ಕಾಣಿಸುತ್ತಿಲ್ಲ, ರಾಜಕೀಯ ನೇತಾರರಲ್ಲೂ ಇಲ್ಲ. "ಸಡಗರ, ಸಂಭ್ರಮಗಳ ಸ್ವಾತಂತ್ರ್ಯ ದಿನಾಚರಣೆ" ಎಂಬ ತಲೆ ಬರಹಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವುದೇನೋ ನಿಜ. ಆದರೆ ಆ ಸಡಗರ ಸಂಭ್ರಮ ಶಾಲಾ ಮಕ್ಕಳಲ್ಲಿ ಇವೆಯೇ ಹೊರತು ನಾಗರಿಕರಲ್ಲಿಲ್ಲವೆಂಬುದು ವಿಷಾದನೀಯ. ಸ್ವತಂತ್ರಭಾರತದ ಆರಂಭದ ವರ್ಷಗಳಲ್ಲಿ ಸ್ವಾತಂತ್ರೋತ್ಸದ ಆಚರಣೆಯಲ್ಲಿದ್ದ ಮೈ ಜುಮ್ಮೆನ್ನುವ ರೊಮಾಂಚನ ಈಗ ಇಲ್ಲ. ಶಾಲಾ ಮಕ್ಕಳ ಸಡಗರದ ಪ್ರಭಾತ್ ಫೇರಿಯ ಮಧ್ಯೆ ಬೈಕ್ ತೂರಿಸಿಕೊಂಡು ಹೋಗುವ, ಕಾರು ನುಗ್ಗಿಸಿಕೊಂಡು ಸಾಗುವ ಜನರಿಗೆ ಏನೆನ್ನಬೇಕು? ಭಯೋತ್ಪಾದಕರ, ಉಗ್ರಗಾಮಿಗಳ ಕರಿನೆರಳಿನ ಆತಂಕದಲ್ಲಿ ಭೀತಿ ಭಯಗಳಿಂದ ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸುವಂತಹ ಸ್ಥಿತಿ ಇರುವುದಂತೂ ಸ್ವಾತಂತ್ರ್ಯವೆಂಬ ಶಬ್ದಕ್ಕೆ ಅರ್ಥವೇ ಇಲ್ಲದಂತೆ ಮಾಡಿದೆ.

ಮೊನ್ನೆ ತಾನೇ ಕೃಷ್ಣ ಜನ್ಮಾಷ್ಟಮಿ ದೇಶಾದ್ಯಂತ ಜರುಗಿತು. ಈಗ ರಂಜಾನ್ ಆಚರಣೆ ನಡೆಯುತ್ತಿದೆ. ಮುಂದೆ ಕ್ರಿಸ್ಮಸ್ ಹಬ್ಬ ಸಹ ಬರುತ್ತದೆ. ಈ ಹಬ್ಬಗಳನ್ನು ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗಿದೆ. ಆದರೂ ಇವುಗಳ ಆಚರಣೆಯಲ್ಲಿ ಯಾಂತ್ರಿಕತೆಯೆಂಬುದು ತಲೆಹಾಕಿಲ್ಲ. ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವ ಈ ಹಬ್ಬಗಳನ್ನು ಸಂಬಂಧಪಟ್ಟ ಧರ್ಮೀಯರು ಪ್ರತಿವರ್ಷವೂ ಇನ್ನೂ ಹೆಚ್ಚಿನ ಉತ್ಸಾಹದಿಂದ, ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ. ಈ ಹಬ್ಬಗಳ ಆಚರಣೆ ಆರಂಭವಾಗಿ ಸಾವಿರಾರು ವರ್ಷಗಳು ಉರುಳಿದರೂ ಉತ್ಸಾಹ ಹೆಚ್ಚುತ್ತಾ ಸಾಗಿದೆಯೇ ಹೊರತು ಕಿಂಚಿತ್ತೂ ಕಡಿಮೆಯಾಗಿಲ್ಲ. ಆದರೆ ಸ್ವಾತಂತ್ರೋತ್ಸವ ಆಚರಣೆಯ ವಿಚಾರಕ್ಕೆ ಬಂದರೆ ಸ್ವತಂತ್ರಗೊಂಡ ಕೇವಲ 65 ವರ್ಷಗಳಲ್ಲಿ ಆರಂಭದ ವರ್ಷಗಳಲ್ಲಿದ್ದ ನಾಗರಿಕ ಸ್ಪಂದನ "ಮೊದಲ ದಿನ ಹಣೆ ಮುಟ್ಟಿ, ಮರುದಿನ ಕೈಯ ಮುಟ್ಟಿ, ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ" ಎಂಬಂತೆ ಕಡಿಮೆಯಾಗುತ್ತಾ ಸಾಗಿ ಅದು ತೀರಾ ಯಾಂತ್ರಿಕವೆನಿಸಿರುವುದು ಏಕೆ? ಧಾರ್ಮಿಕ ಹಬ್ಬಗಳಲ್ಲಿ ಕಾಣಬರುವ ಸಡಗರ ಸಂಭ್ರಮ ಉತ್ಸಾಹಗಳು ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಏಕೆ ಕಾಣಿಸುತ್ತಿಲ್ಲ?

ಅಮೇರಿಕೆಯಲ್ಲಿ ಶಾಲಾಮಕ್ಕಳು ಸ್ವಾತಂತ್ರ್ಯದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸುವುದಿಲ್ಲ. ಆ ದೇಶದ ಸ್ವಾತಂತ್ರೋತ್ಸವ ದಿನವಾದ ಜುಲೈ 4 ಬೇಸಿಗೆಯ ರಜಾದಿನಗಳಲ್ಲಿ ಬರುತ್ತದೆ. ಆದರೂ  ಆ ದಿನದಂದು ಅಮೇರಿಕೆಯ ಪ್ರತಿಯೊಂದು ಮನೆಯೂ ರಾಷ್ಟ್ರಧ್ವಜದಿಂದ ಕಂಗೊಳಿಸುತ್ತಿರುತ್ತದೆ. ನಮ್ಮಲ್ಲಿ ದೀಪಾವಳಿಯಂದು ಮನೆಯ ಅಂಗಳದಲ್ಲಿ ದೀಪಗಳು ಕಂಗೊಳಿಸಿದಂತೆ! ನಮ್ಮ ದೇಶದಲ್ಲಿ ಶಾಲಾ ಮಕ್ಕಳಿಲ್ಲದೆ ಸರಕಾರೀ ಕಛೇರಿಗಳಲ್ಲಿ ನಡೆಸುವ ಸ್ವಾತಂತ್ರ್ಯ ದಿನಾಚರಣೆ ಕಡ್ಡಾಯಕ್ಕಾಗಿ ನಡೆಸುವ ಶುಷ್ಕ ವಾರ್ಷಿಕ ಆಚರಣೆ ಅಷ್ಟೇ! ಜಿಲ್ಲಾ ಮಂತ್ರಿಗಳು ಮತ್ತು ಶಾಸಕರು ಆಯಾಯ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಧ್ವಜಾರೋಹಣದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂಬ ನಿಯಮವಿಲ್ಲದಿದ್ದರೆ ಯಾವ ರೆಸಾರ್ಟ್ಗೆ ಹೋಗಿ ಏನು ಪಿತೂರಿ ನಡೆಸುತ್ತಿದ್ದರೋ ಏನೋ! ಈ ಬಾರಿಯ ಸ್ವಾತಂತ್ರೋತ್ಸವವು ಭಾನುವಾರ ಬರದೆ ವಾರದ ಮಧ್ಯೆ ಬಂದದ್ದು ಅನೇಕ ಸರಕಾರಿ ನೌಕರರಿಗೆ ಸಂತೋಷದ ಸಂಗತಿ. ಆದರೆ ಬುಧವಾರ ಬರುವ ಬದಲು ಸೋಮವಾರವೋ ಶುಕ್ರವಾರವೋ ಬಂದಿದ್ದರೆ ಇನ್ನೂ ಚೆನ್ನಾಗಿತ್ತು. ಅದರ ಹಿಂದೆ ಮುಂದೆ ಒಂದೆರಡು ಸಿ.ಎಲ್ ಹಾಕಿ ರಜೆಯ ಆನಂದವನ್ನು ಅನುಭವಿಸುವ ಆಲೋಚನೆಯುಳ್ಳವರ ಮನಸ್ಸಿನಲ್ಲಿ ಯಾವ ದೇಶಭಕ್ತಿ ತಾನೆ ಇರಲು ಸಾಧ್ಯ?

ನಿಜವಾದ ದೇಶಭಕ್ತಿ ಹೇಗಿರುತ್ತದೆ ಎಂಬುದಕ್ಕೆ ನಮ್ಮ ಅನುಭವಕ್ಕೆ ಬಂದ ಘಟನೆಯೊಂದು ಹೀಗಿದೆ: ಕಾರ್ಗಿಲ್ ಯುದ್ಧ (1999) ಆಗ ತಾನೇ ಮುಗಿದಿತ್ತು. ನಮ್ಮ ಮಠದ ಶಿಷ್ಯರಾದ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆಯ ಬಸಪ್ಪ ಮಾಸ್ತರರ ಮಗ ಕರ್ನಲ್ ರವೀಂದ್ರನಾಥ್ ಆ ಯದ್ಧದಲ್ಲಿ ವೀರಾವೇಶದಿಂದ ಹೋರಾಡಿದ್ದರು. ಕಾರ್ಗಿಲ್ ನ ಆಯಕಟ್ಟು ಪ್ರದೇಶವನ್ನು ವಶಪಡಿಸಿಕೊಂಡು ಅಲ್ಲಿ ತ್ರಿವರ್ಣಧ್ವಜವನ್ನು ಹಾರಿಸಿದ ಅವರಿಗೆ ಭಾರತ ಸರ್ಕಾರ "ವೀರ ಚಕ್ರ" ಪ್ರಶಸ್ತಿಯನ್ನು ಪ್ರದಾನ ಮಾಡಿತ್ತು. ಅವರನ್ನು ಗೌರವಿಸಲು ದಾವಣಗೆರೆಯಲ್ಲಿ ನಮ್ಮ ಸಮ್ಮುಖದಲ್ಲಿ ಸನ್ಮಾನ ಸಮಾರಂಭ ಏರ್ಪಾಡಾಗಿತ್ತು. ಅವರು ಆ ಸಂದರ್ಭದಲ್ಲಿ ಆಡಿದ ಮಾತು ಸಭಿಕರಿಗೆ ಮೈರೋಮಾಂಚನವನ್ನು ಉಂಟುಮಾಡಿತು. 800 ಯೋಧರುಳ್ಳ ರಜಪೂತಾನ್ ರೈಫಲ್ಸ್ನ ಕಮಾಂಡರ್ ಆಫೀಸರಾಗಿದ್ದ ಅವರ ಸೇನಾಪಡೆಯಲ್ಲಿ ರಾಜಸ್ತಾನದ ಸುಬೇದಾರ್ ಋಷಿರಾಜ್ ಎಂಬ ಯೋಧನೊಬ್ಬನಿದ್ದ. ಜೇಬಿನಲ್ಲಿ ಸದಾ ಒಂದು ಕಾಗದವನ್ನು ಜತನವಾಗಿ ಇಟ್ಟುಕೊಂಡಿದ್ದ. ಅದು ಅವನ ಪತ್ನಿ ಬರೆದಿದ್ದ ಪತ್ರ. ಮದುವೆಯಾಗಿ ಒಂದು ವರ್ಷವಾಗಿತ್ತು. ಅವನ ಪತ್ನಿ ಆ ಪತ್ರದಲ್ಲಿ ಹೀಗೆ ಬರೆದಿದ್ದಳು: "ಲಢಾಯೀ ಮೇಂ ಅಗರ್ ಗೋಲೀ ಖಾನಾ ಪಡೇ ತೋ ಛಾತೀ ಪರ್ ಖಾನಾ ಪೀಠ್ ಪರ್ ನಹೀಂ” (ರಣರಂಗದಲ್ಲಿ ಗುಂಡು ತಾಗುವುದಿದ್ದರೆ ನಿನ್ನ ಎದೆಯನ್ನೊಡ್ಡು, ಬೆನ್ನನ್ನು ಒಡ್ಡಬೇಡ!).

ಅಂತಹ ವೀರಯೋಧರನ್ನು ಹುರಿದುಂಬಿಸಿ ವೀರಾವೇಶದಿಂದ ಹೋರಾಡಿ ಗೆಲುವನ್ನು ಸಾಧಿಸಿದ ಕರ್ನಲ್ ರವೀಂದ್ರನಾಥ್ ಅವರ ತಂದೆತಾಯಂದಿರನ್ನೂ ಅಂದಿನ ಸಭೆಯಲ್ಲಿ ಸನ್ಮಾನಿಸಲಾಯಿತು. ಶಾಲುಹೊದಿಸಿ ಸನ್ಮಾನಿಸುವಾಗ ಅವರ ತಾಯಿ ಶ್ರೀಮತಿ ಸರೋಜಮ್ಮನವರಿಗೆ ನಾವು ಕೇಳಿದ ಪ್ರಶ್ನೆ: “ನಿಮ್ಮ ಮಗ ಯುದ್ಧದಲ್ಲಿ ಮಡಿದಿದ್ದರೆ ನಿಮಗೆ ಏನೆನಿಸುತ್ತಿತ್ತು?” ಅದಕ್ಕೆ ಆ ತಾಯಿ ತಟ್ಟನೆ ಕೊಟ್ಟ ಉತ್ತರ: “ಬುದ್ಧಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ನಡೆಯುವ ಅಪಘಾತಗಳಲ್ಲಿ ಎಷ್ಟೋ ಜನ ಸಾಯುತ್ತಾರೆ. ಅಂಥದ್ದರಲ್ಲಿ ನನ್ನ ಮಗ ದೇಶಕ್ಕಾಗಿ ಹೋರಾಡಿ ಸತ್ತಿದ್ದರೆ ಅದಕ್ಕಿಂತ ಹೆಚ್ಚಿನ ಪುಣ್ಯ ಬೇರೆ ಏನಿದೆಯೆಂದು ಹೆಮ್ಮೆಪಟ್ಟುಕೊಳ್ಳುತ್ತಲಿದ್ದೆ”.

ಸಹೃದಯ ಓದುಗರೇ! ಇದಲ್ಲವೇ ನಿಜವಾದ ದೇಶಭಕ್ತಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 16.8.2012