ಜನಸಾಮಾನ್ಯರ ಪ್ರಾಮಾಣಿಕತೆ

  •  
  •  
  •  
  •  
  •    Views  

ದಿನಬೆಳಗಾದರೆ ಪತ್ರಿಕೆಗಳ ಮುಖಪುಟಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುವ ಪ್ರಮುಖ ಸುದ್ದಿಗಳೆಂದರೆ ಕೊಲೆ, ದರೋಡೆ, ಭ್ರಷ್ಟಾಚಾರ, ಭೂಹಗರಣ ಇತ್ಯಾದಿ ಕೆಟ್ಟ ಸುದ್ದಿಗಳು. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ರಾಜಕಾರಣಿಗಳು ಬಹಿರಂಗ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ. ಒಂದು ಮನೆಯಲ್ಲಿ ನಡೆದ ಕೆಟ್ಟ ಘಟನೆಗಳು ಬಹಿರಂಗಗೊಳ್ಳುವುದನ್ನು ಮನೆಯವರು ಯಾರೂ ಇಷ್ಟಪಡುವುದಿಲ್ಲ. ಮನೆತನದ ಗೌರವದ ಪ್ರಶ್ನೆ ಎನಿಸಿಕೊಳ್ಳುತ್ತದೆ. ಹಾಗೆಯೇ ನಮ್ಮ ರಾಜ್ಯದಲ್ಲಿ ದಿನನಿತ್ಯ ವರದಿಯಾಗುತ್ತಿರುವ ಭ್ರಷ್ಟಾಚಾರದ ಸುದ್ದಿಗಳು ಭ್ರಷ್ಟಾಚಾರದ ಹಣೆಪಟ್ಟಿಯನ್ನು ಬಿಹಾರದಿಂದ ಕಿತ್ತು ಕರ್ನಾಟಕಕ್ಕೆ ಅಂಟಿಸುವಂತಾಗಿ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ.

ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ ಎನ್ನುತ್ತಾರೆ. ಅದು ನಿಜ, ಏಕೆಂದರೆ ಇಂದು ಹಣವೇ ಎಲ್ಲವನ್ನು ನಿರ್ಧರಿಸುವ ಮಾನದಂಡವಾಗಿದೆ. ದುಡ್ಡಿದ್ದವನೇ ದೊಡ್ಡಪ್ಪ ಎಂಬುದು ಎಂದಿಗಿಂತ ಇಂದು ಸತ್ಯವಾಗಿದೆ. ಎಲ್ಲೆಲ್ಲೂ ಕಿವಿಗೆ ರಾಚುವ ಹಣದ ಝಣತ್ಕಾರದಲ್ಲಿ ಬದುಕಿನ ಮೌಲ್ಯಗಳು ನರಳುವುದು ಯಾರಿಗೂ ಕೇಳಿಸುತ್ತಿಲ್ಲ. ಎಲ್ಲ ರಂಗಗಳೂ ಹಣದ ಕಥಕ್ಕಳಿ ಕುಣಿತದಲ್ಲಿ ಮಲಿನಗೊಂಡಿವೆ. ಕುರುಡು ಕಾಂಚಾಣವನ್ನೇ ನಂಬಿ ಕೈವಿಡಿದು ನಡೆಯುವ ಮನುಷ್ಯ ಕಣ್ಣಿದ್ದೂ ಕಾಣನು, ಕಿವಿಯಿದ್ದೂ ಕೇಳನು. ಸರ್ವೇ ಗುಣಾಃ ಕಾಂಚನಮಾಶ್ರಯಂತಿ ಎನ್ನುವಂತೆ ಹಣ ಮತ್ತು ಅಧಿಕಾರ ಉಳ್ಳವರಿಗೆ ಭೋಪರಾಕು ಹೇಳುವ ವಂದಿಮಾಗಧರು ನಾಡಿನಲ್ಲಿ ಹೆಚ್ಚಾಗಿದ್ದಾರೆ. ಹಣವನ್ನು ಸತ್ಯಶುದ್ದ ಕಾಯಕದಿಂದ ಗಳಿಸಬೇಕು, ಅದನ್ನು ಕೂಡಿಡದೆ ತಾನು ಉಂಡು ಸತ್ಪಾತ್ರರ ನೆರವಿಗೆ ಅದನ್ನು ಬಳಸಬೇಕೆನ್ನುವುದು ಕೇವಲ ಉಪದೇಶದ ಮಾತಾಗಿದೆ. ಕಣ್ಣಿನಲಿ ನೋಡಿ ಮಣ್ಣಿನಲಿ ನೆರಹಿ ಉಣ್ಣದೆ ಹೋಗದಿರಾ ಎನ್ನುತ್ತಾರೆ ಬಸವಣ್ಣನವರು. “ಆರು ಹಿತವರು ನಿನಗೆ ಈ ಮೂವರೊಳಗೆ” ಎಂದು ಪುರಂದರದಾಸರು ಕೇಳುವ ಪ್ರಶ್ನೆಯಲ್ಲಿ ಬಲುಧನದ ಸಿರಿಯೂ ಒಂದು. ರಾಮಕೃಷ್ಣ ಪರಮಹಂಸರಿಗೆ ಹಾಸಿಗೆಯ ಕೆಳಗೆ ಹಣ ಇದ್ದರೆ ನಿದ್ದೆಯೇ ಬರುತ್ತಿರಲಿಲ್ಲವಂತೆ. ಆದರೆ ಇಂದಿನ ವರ್ತಮಾನದಲ್ಲಿ ಏನಾಗಿದೆ? ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿನಿಂದೆಗಳಿಗೆ ಅಂಜಿದೊಡೆ ಎಂತಯ್ಯಾ ಎಂದು ಅಕ್ಕ ಹೇಳಿದರೆ ಆ ಯಾವ ಆತ್ಮಶುದ್ದಿಯೂ ಇಲ್ಲದೆ ಲೋಕದಲ್ಲಿ ಹುಟ್ಟಿರ್ದ ಬಳಿಕ ಲೋಕಾಯುಕ್ತರಿಗೆ ಅಂಜಿದೊಡೆಂತಯ್ಯಾ ಎನ್ನುವ ಧೋರಣೆ ವಿಜೃಂಭಿಸುತ್ತಿದೆ. “Honesty is the best policy” ಎನ್ನುತ್ತಾರೆ. ಪ್ರಾಮಾಣಿಕತೆ ಇದ್ದಲ್ಲಿ ಉಳಿದೆಲ್ಲ ಮೌಲ್ಯಗಳು ತಾವಾಗಿಯೇ ಆವಿರ್ಭವಿಸುತ್ತವೆ.

ಒಂದು ಭೀಕರ ಭೂಕಂಪದಲ್ಲಿ ನೂರಾರು ಮನೆಗಳು ನೆಲಸಮವಾದವು. ಸಾವಿರಾರು ಜನರು ಸಾವುನೋವಿಗೀಡಾದರು. ಮನೆಮಠ ಕಳೆದುಕೊಂಡ ನಿರಾಶ್ರಿತರಿಗೆ ಸೇವಾಸಂಸ್ಥೆಗಳು ಗಂಜಿಕೇಂದ್ರಗಳನ್ನು ಏರ್ಪಡಿಸಿದವು. ನಿರಾಶ್ರಿತರ ಮಕ್ಕಳಿಗೆ ಉಚಿತ ಊಟ ವಸತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಅಂಥವರಲ್ಲಿ 12 ವರ್ಷದ ಒಬ್ಬ ಬಾಲಕ ಮತ್ತು ಆತನ ತಂಗಿ. ತಂದೆತಾಯಂದಿರನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ಆ ದುರ್ದೈವಿ ಮಕ್ಕಳನ್ನು ನೋಡಿದವರೊಬ್ಬರು ಮನಕರಗಿ ಖರ್ಚಿಗೆಂದು ಸ್ವಲ್ಪ ಹಣವನ್ನು ಕೊಟ್ಟರು. ಬಾಲಕನ ಮುಖ ಅರಳಿತು. ಆ ಹಣದಿಂದ ತನಗೆ ಮತ್ತು ತನ್ನ ತಂಗಿಗೆ ತಿನ್ನಲು ಏನಾದರೂ ಕೊಂಡುತರಬೇಕೆಂದು ಒಂದು ಮನಸ್ಸು. ದಿನವೂ ತನಗೆ ಯಾರು ಈ ರೀತಿ ತಿಂಡಿ ತಿನ್ನಲು ಹಣ ಕೊಡುತ್ತಾರೆ ಎಂದು ಇನ್ನೊಂದು ಮನಸ್ಸು. ಆಲೋಚಿಸುತ್ತಾ ಅಂಗಡಿಗೆ ಹೋದ. ಅಲ್ಲಿದ್ದ ತಿಂಡಿತಿನಸುಗಳನ್ನು ನೋಡಿ ಎಷ್ಟೇ ಬಾಯೂರಿದರೂ ಗಟ್ಟಿಮನಸ್ಸು ಮಾಡಿ ಶೂಪಾಲೀಷ್ ಮಾಡಲು ಬೇಕಾದ ಪಾಲೀಷ್ ಡಬ್ಬಿ, ಬ್ರಷ್ ಮತ್ತಿತರ ಸಣ್ಣಪುಟ್ಟ ಸಲಕರಣೆಗಳನ್ನು ಕೊಂಡುತಂದ. ಪ್ರತಿದಿನ ಸಂಜೆ ಶಾಲೆಯಿಂದ ಹಿಂದಿರುಗುವಾಗ ರಸ್ತೆ ಬದಿಯಲ್ಲಿ ಶೂಶೈನ್ ಎಂದು ರಟ್ಟಿನ ಮೇಲೆ ಒಂದು ಬೋರ್ಡನ್ನು ಬರೆದುಕೊಂಡು ಕುಳಿತು ದಾರಿಹೋಕರ ಬೂಟುಗಳನ್ನು ಪಾಲಿಷ್ ಮಾಡಿ ಹಣ ಸಂಪಾದಿಸತೊಡಗಿದ. ಒಂದು ದಿನ ಸಂಜೆ ತುಂತುರು ಮಳೆ ಸುರಿಯಲಾರಂಭಿಸಿತು. ಬಾಲಕ ಎಂದಿನಂತೆ ಅಂಗಡಿಯೊಂದರ ಮುಂದೆ ರಸ್ತೆ ಬದಿಯಲ್ಲಿ ತನ್ನ ನಿತ್ಯದ ಕಾಯಕ ಮಾಡಲು ಕುಳಿತಿದ್ದ. ಮಳೆ ಹನಿಯ ಕಾರಣದಿಂದ ಅಷ್ಟಾಗಿ ಯಾರೂ ಗಿರಾಕಿಗಳು ಬರಲಿಲ್ಲ. ಬಾಲಕನಿಗೆ ನಿರಾಶೆ ಆವರಿಸಿತು. ಆಗ ಇದ್ದಕ್ಕಿದ್ದಂತೆಯೇ ಒಂದು ದೊಡ್ಡ ಕಾರು ಬಂತು. ಅದರಲ್ಲಿದ್ದ ವ್ಯಕ್ತಿಯೊಬ್ಬ ಕೆಳಗಿಳಿದ. ನೋಡಲು ಶ್ರೀಮಂತನಿದ್ದಂತೆ ತೋರಿತು. ಏನನ್ನೋ ಖರೀದಿಸಲೆಂದು ಸೀದಾ ಅಂಗಡಿಗೆ ಹೋಗಿ ಸ್ವಲ್ಪ ಹೊತ್ತಿನಲ್ಲಿಯೇ ಹೊರಗೆ ಬಂದ. ಬೀದಿಯಲ್ಲಿ ಕಾಲಿಡುತ್ತಿದ್ದಂತೆಯೇ ಕೆಸರು ಸಿಡಿದು ಆತನ ಶೂಗಳು ಕೊಳೆಯಾದವು. ತುಂಬಾ ತರಾತುರಿಯಲ್ಲಿದ್ದ ಆತ ಹತ್ತಿರದಲ್ಲಿಯೇ ಇದ್ದ ಬಾಲಕನಿಂದ ತನ್ನ ಶೂಗಳನ್ನು ಬೇಗನೆ ಪಾಲಿಷ್ ಮಾಡಿಸಿಕೊಂಡ. ಎಷ್ಟು ಹಣ ಕೊಡಬೇಕೆಂದು ಕೇಳದೆ ಧಾರಾಳವಾಗಿ ಒಂದು ನೂರು ರೂ. ನೋಟನ್ನು ಬಾಲಕನ ಕೈಗೆ ಕೊಟ್ಟು ಅವಸರದಲ್ಲಿ ತನ್ನ ಕಾರನ್ನು ಹತ್ತಿ ಹೊರಟುಹೋದ. ಎಂದೂ ಸಿಗದಷ್ಟು ಹಣ ಸಿಕ್ಕಿದ್ದರಿಂದ ಬಾಲಕನಿಗೆ ಖುಷಿಯಾಯಿತು. ಆ ದಿನ ಮುಂಚಿತವಾಗಿಯೇ ಶೂ ಪಾಲಿಷ್ ಕೆಲಸ ಮುಗಿಸಿಕೊಂಡು ಹೊರಡಲು ನಿರ್ಧರಿಸಿದ. ತನ್ನ ಸಾಮಾನು ಸರಂಜಾಮುಗಳನ್ನು ಜೋಡಿಸಿಕೊಂಡು ಕೈಚೀಲದಲ್ಲಿ ಹಾಕಿಕೊಳ್ಳುವಾಗ ಪಕ್ಕದಲ್ಲಿ ಏನೋ ಒಂದು ಹೊಳಪುಳ್ಳ ವಸ್ತು ಕಣ್ಣಿಗೆ ಬಿತ್ತು. ಏನೆಂದು ಕುತೂಹಲದಿಂದ ಎತ್ತಿಕೊಂಡು ನೋಡಿದ. ಅದು ಅವಸರದಲ್ಲಿ ಆ ಶ್ರೀಮಂತ ಬೀಳಿಸಿಕೊಂಡು ಹೋಗಿದ್ದ ಬೆಲೆಬಾಳುವ ಪರ್ಸ್! ಅದರಲ್ಲಿ ನೂರು ಮತ್ತು ಸಾವಿರ ರೂ. ಗಳ ಅನೇಕ ಗರಿಗರಿ ನೋಟುಗಳು ಇದ್ದವು. ತನ್ನ ಜೀವನದಲ್ಲಿ ಎಂದೂ ಅಷ್ಟೊಂದು ಹಣವನ್ನು ನೋಡದ ಬಾಲಕನಿಗೆ ಎಲ್ಲಿಲ್ಲದ ಸಂತಸ. ಅತ್ತಿತ್ತ ನೋಡಿ ಯಾರಿಗೂ ಕಾಣಿಸದಂತೆ ತನ್ನ ಕೈಚೀಲದೊಳಗೆ ಆ ಪರ್ಸನ್ನು ಇಳಿಯಬಿಟ್ಟ. ರಾತ್ರಿ ಕೈಚೀಲವನ್ನು ತಲೆದಿಂಬಾಗಿಸಿಕೊಂಡು ಮಲಗಿದ. ನಿದ್ರೆ ಬರಲಿಲ್ಲ. ಎಲ್ಲರೂ ಮಲಗಿದ್ದಾಗ ಮಧ್ಯರಾತ್ರಿ ಎದ್ದು ಕೈಚೀಲದಿಂದ ಪರ್ಸನ್ನು ಹೊರತೆಗೆದು ಗರಿಗರಿ ನೋಟುಗಳನ್ನು ಎಣಿಸತೊಡಗಿದ. ಕೈ ನಡುಗುತ್ತಿತ್ತು. ಎದೆ ಢವಢವ ಹೊಡೆದುಕೊಳ್ಳುತ್ತಿತ್ತು. ಹೊರಗಿನಿಂದ ಏನೋ ಶಬ್ಧ ಕೇಳಿಬಂದು ತಕ್ಷಣವೇ ಮತ್ತೆ ಕೈಚೀಲದೊಳಗೆ ಇಟ್ಟುಕೊಂಡು ಮಲಗಿದ. ನಾನೇನೂ ಈ ಹಣವನ್ನು ಕದ್ದು ತಂದಿಲ್ಲ, ಇದು ನನಗೆ ದಾರಿಯಲ್ಲಿ ಸಿಕ್ಕಿದ್ದು. ಇಟ್ಟುಕೊಂಡರೆ ಏನು ತಪ್ಪು? ಎಂದು ಒಂದು ಮನಸ್ಸು. ನಾನು ಸ್ವತಃ ದುಡಿಯದೆ ಇನ್ನೊಬ್ಬರ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳುವುದು ಸರಿಯೇ? ಎಂದು ಇನ್ನೊಂದು ಮನಸ್ಸು. ಈ ತಾಕಲಾಟದಿಂದ ಹಾಸಿಗೆಯಲ್ಲಿ ಹೊರಳಾಡಿದ. ಬಹಳ ಹೊತ್ತಿನ ಮೇಲೆ ನಿದ್ರೆ ಆವರಿಸಿತು. ಕನಸಿನಲ್ಲಿ ತಾಯಿ ಕಾಣಿಸಿಕೊಂಡಳು. ಆಕೆ ಕಂಬನಿ ಮಿಡಿಯುತ್ತಾ ಹೇಳಿದಳು: "ಕಂದಾ, ನಾನು ನಿನ್ನನ್ನು ಬೆಳೆಸಿದ್ದು ಒಬ್ಬ ಕಳ್ಳನನ್ನಾಗಿ ಮಾಡಲು ಅಲ್ಲ. ತನ್ನದಲ್ಲದ ವಸ್ತುವನ್ನು ಇಟ್ಟುಕೊಳ್ಳುವುದು ಸರಿಯಲ್ಲ. ವಾಪಾಸು ಕೊಟ್ಟುಬಿಡು” ಎಂದು ತಿಳಿಹೇಳಿದಳು. ಅದೇ ರೀತಿ ತಂದೆಯೂ ಸಹ ಕನಸಿನಲ್ಲಿ ಬಂದು ಹೇಳಿದ: “ಮಗನೇ, ಈ ಹಣ ನಿನ್ನ ಕೈಯಲ್ಲಿ ಕೆಲವು ದಿನಗಳ ಮಟ್ಟಿಗೆ ಇದ್ದು ಖರ್ಚಾಗಿ ಹೋಗುತ್ತದೆ. ಆದರೆ ನಿನ್ನ ಮನಸ್ಸಿನಲ್ಲಿ ಅಪರಾಧಿ ಪ್ರಜ್ಞೆ ಖಾಯಂ ಆಗಿ ಉಳಿಯುತ್ತದೆ”.

ಬಾಲಕ ಬೆಳಗ್ಗೆ ಎದ್ದಾಗ ಕಣ್ಣು ಕೆಂಪಾಗಿದ್ದವು, ಮೈ ಬೆವರುತ್ತಿತ್ತು. ತನ್ನ ತಂದೆತಾಯಿ ಹತ್ತಿರದಲ್ಲಿ ಎಲ್ಲೋ ಇದ್ದು ತನ್ನನ್ನು ಸಂತೈಸಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುವಂತೆ ದಾರಿ ತೋರಿಸುತ್ತಿದ್ದಾರೆಂದು ಅನಿಸಿತು. ಮತ್ತೆ ಕೈಚೀಲದಿಂದ ಪರ್ಸನ್ನು ಹೊರತೆಗೆದ. ಈಗ ಅವನಿಗೆ ಹೆದರಿಕೆ ಆಗಲಿಲ್ಲ. ಪರ್ಸಿನಲ್ಲಿದ್ದ ಗರಿಗರಿ ನೋಟುಗಳ ಕಡೆ ಗಮನ ಕೊಡಲಿಲ್ಲ. ಏನಿದೆಯೆಂದು ತಡಕಾಡಿದ. ಕೆಲವು ರಸೀದಿಗಳು, ವಿಮಾನದ ಟಿಕೆಟ್ಗಳು ಇದ್ದವು. ಕೆದಕುತ್ತಾ ಹೋದಂತೆ ಆ ಪರ್ಸ್ ಮಾಲೀಕನಾದ ಶ್ರೀಮಂತನ ಫೋಟೋ ಮತ್ತು ಅವನ ವಿಳಾಸವುಳ್ಳ ವಿಸಿಟಿಂಗ್ ಕಾರ್ಡುಗಳು ಕಾಣಿಸಿದವು. ಬಾಲಕ ತಡಮಾಡಲಿಲ್ಲ. ಆ ಧನಿಕನ ಮನೆಯನ್ನು ಹುಡುಕಿಕೊಂಡು ಹೋದ. ಭವ್ಯವಾದ ಬಂಗಲೆ. ಗೇಟ್ ಬಳಿ ಇದ್ದ ಕಾವಲುಗಾರರನ್ನು ಕಂಡು ಸಾಹುಕಾರರನ್ನು ತುರ್ತಾಗಿ ಕಾಣಬೇಕಾಗಿದೆಯೆಂದು ಕೇಳಿದ. ಇವನಾರೋ ಭಿಕ್ಷುಕ ಅಥವಾ ಹುಚ್ಚನಿರಬೇಕೆಂದು ಕಾವಲುಗಾರರು ಗದರಿಸಿದರು. ಕೈದೋಟದಲ್ಲಿ ಬೆಳಗಿನ ಉಪಾಹಾರ ಸೇವಿಸುತ್ತಿದ್ದ ಧನಿಕ ಆ ಹುಡುಗನನ್ನು ನೋಡಿ ಗುರುತಿಸಿ ಒಳಗೆ ಬಿಡುವಂತೆ ಆದೇಶಿಸಿದ. ಬಾಲಕ ಅಂಜುತ್ತಲೇ ಹತ್ತಿರ ಹೋಗಿ ತನ್ನ ಕೈಚೀಲದಿಂದ ಆ ಪರ್ಸನ್ನು ಹೊರತೆಗೆದು ಧನಿಕನ ಕೈಗೆ ಕೊಟ್ಟ. ಧನಿಕನಿಗೆ ಹಿಂದಿನ ಸಂಜೆ ತನ್ನ ಪರ್ಸ್ ಕಳೆದುಹೋದದ್ದು ಗೊತ್ತೇ ಇರಲಿಲ್ಲ. ಇದರಲ್ಲಿ ಏನಿದೆಯೆಂದು ನಿನಗೆ ಗೊತ್ತೇ? ಎಂದು ಧನಿಕ ಕೇಳಿದ. “ಹೌದು, ಸಾರ್ ಗೊತ್ತು. ನಾನು ಅದನ್ನು ತೆರೆದು ನೋಡಿದೆ. ಆದರೆ ಏನನ್ನೂ ತೆಗೆದುಕೊಳ್ಳದೆ ಹಾಗೆಯೇ ತಂದಿದ್ದೇನೆ” ಎಂದು ಬಾಲಕ ಹೇಳಿದ. ಹಣ ಸಂಪಾದನೆಯನ್ನೇ ತಮ್ಮ ಜೀವನದ ಪರಮಗುರಿಯನ್ನಾಗಿಸಿಕೊಂಡಿರುವ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ದುರಾಸೆಯ ಬಂಧುಬಾಂಧವರು ತನ್ನಿಂದ ಲಕ್ಷಾಂತರ ರೂ. ದೋಚಿಕೊಂಡಿರುವುದನ್ನು, ಮೋಸ ಮಾಡಿರುವುದನ್ನು ನೆನೆಸಿಕೊಂಡ ಧನಿಕ ಆ ಬಾಲಕನ ಪ್ರಾಮಾಣಿಕತೆಯನ್ನು ಕಂಡು ಬೆಕ್ಕಸಬೆರಗಾದ. ಹತ್ತಿರ ಕೂರಿಸಿಕೊಂಡು ಅವನ ತಂದೆತಾಯಿಗಳ ಬಗ್ಗೆ ವಿಚಾರಿಸಿದ. ಬಾಲಕ ಕಣ್ತುಂಬ ನೀರು ತಂದುಕೊಂಡು ಹಿಂದಿನ ರಾತ್ರಿ ತನ್ನ ದಿವಂಗತ ತಂದೆತಾಯಿ ಕನಸಿನಲ್ಲಿ ಬಂದು ಹೇಳಿದ್ದನ್ನು ವಿವರಿಸಿದ. ಧನಿಕನಿಗೆ ಕರುಳು ಕಿವುಚಿದಂತಾಯಿತು. “ನಿನ್ನ ಈ ಪ್ರಾಮಾಣಿಕತೆಗೆ ಏನನ್ನು ಬಹುಮಾನವಾಗಿ ಕೊಡಲಿ?” ಎಂದು ಕೇಳಿದ. ಬಾಲಕ ಏನೂ ಹೇಳದೆ ಸುಮ್ಮನಿದ್ದ. ಅದನ್ನು ನೋಡಿ ಧನಿಕ ಭಾವುಕನಾದ. ಕೇಳಿದ್ದನ್ನೆಲ್ಲಾ ಕೊಟ್ಟರೂ ಇನ್ನೂ ಬೇಕೆಂದು ಮೋಜುಮೇಜವಾನಿಯಲ್ಲಿ ದುಂದು ವೆಚ್ಚ ಮಾಡುವ ತನ್ನ ಇಬ್ಬರೂ ಮಕ್ಕಳ ವರ್ತನೆಯನ್ನು ನೆನೆಸಿಕೊಂಡು ದುಃಖಿತನಾದ ಧನಿಕ ಎದ್ದು ಹೋಗಿ ಆ ಬಾಲಕನನ್ನು ಬಿಗಿದಪ್ಪಿಕೊಂಡ. “ನಿನಗೆ ಬೇಕಾದುದನ್ನು ಕೊಡುವೆ, ಯಾವ ಸಂಕೋಚವೂ ಇಲ್ಲದೆ ಕೇಳು” ಎಂದು ಒತ್ತಾಯಪಡಿಸಿದಾಗ ಆ ಬಾಲಕ ಕೇಳಿದ್ದು ತನ್ನ ಪುಟ್ಟ ತಂಗಿಗೆ ಆಡಲು ಒಂದು ಸುಂದರವಾದ ಗೊಂಬೆ ಮತ್ತು ಹಳ್ಳಿಯಲ್ಲಿ ಹಾಸಿಗೆ ಹಿಡಿದು ನರಳುತ್ತಿರುವ ತನ್ನ ಅಜ್ಜನಿಗೆ ಬೇಕಾದ ಬೆಚ್ಚನೆಯ ಹೊದಿಕೆ! ಧನಿಕ ಕೂಡಲೇ ತನ್ನ ಕಾರನ್ನು ಕಳುಹಿಸಿ ಬಾಲಕನ ತಂಗಿ ಮತ್ತು ಅಜ್ಜನನ್ನು ತನ್ನ ಬಂಗಲೆಗೆ ಕರೆಸಿಕೊಂಡು ಅವರನ್ನೂ ತನ್ನ ಕುಟುಂಬದ ಸದಸ್ಯರಂತೆ ನೋಡಿಕೊಂಡ!

ಸಹೃದಯ ಓದುಗರೇ! ಇದು ಗುಲ್ರುಖ್ ತಾಸಿಫ್ (Gulrukh Tausif) ಬರೆದ ಮನಕರಗುವ ಕಾಲ್ಪನಿಕ ಕಥೆ. ಜೀವನ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಈ ಕಥೆಯನ್ನು ಓದಿ ನಿಮ್ಮ ಮನಸ್ಸೂ ಮಿಡಿಯುವುದರಲ್ಲಿ ಸಂದೇಹವಿಲ್ಲ. ಇಂತಹ ಘಟನೆಗಳು ಈಗಲೂ ನಮ್ಮ ಸುತ್ತಮುತ್ತ ನಡೆದರೂ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರವಿಲ್ಲದೆ ಅವಜ್ಞೆಗೆ ಗುರಿಯಾಗುತ್ತವೆ. ಅಂತಹ ಒಂದು ಅಪರೂಪದ ಘಟನೆ ಮೊನ್ನೆ ನಮ್ಮ ಕಣ್ಮುಂದೆ ಘಟಿಸಿತು. ಸಂದರ್ಭ: ಹಾವೇರಿ ತಾಲ್ಲೂಕು ಹಿರೇಕೆರೂರಿನಲ್ಲಿ ನಡೆದ ಒಂದು ಸನ್ಮಾನ ಸಮಾರಂಭ. ಸನ್ಮಾನಿತರು ದೂರದ ಬಾಗಲಕೋಟೆಯಲ್ಲಿ ನೆಲೆಸಿರುವ ಡಾ. ಬಸವರಾಜ ಕೆರೂಡಿಯವರು. ಬಾಗಲಕೋಟೆಯಲ್ಲಿ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನುಳ್ಳ ಅವರ ಕೆರೂಡಿ ಆಸ್ಪತ್ರೆ ಎಲ್ಲ ನರ್ಸಿಂಗ್ ಹೋಂಗಳಂತೆ ಅಲ್ಲ. ಅಲ್ಲಿಗೆ ಹೋಗಲು ಯಾವ ವಿಳಾಸವೂ ಬೇಕಿಲ್ಲ. ಬಾಗಲಕೋಟೆಯ ಯಾವುದೇ ಮೂಲೆಯಲ್ಲಿ ಯಾರನ್ನೇ ಕೇಳಿದರೂ ಅಭಿಮಾನದಿಂದ ನಿಮಗೆ ದಾರಿ ತೋರಿಸುತ್ತಾರೆ. ಕೈಯಲ್ಲಿ ಕಾಸಿಲ್ಲದೆ ಚಿಕಿತ್ಸೆ ಸಿಗಲಿಲ್ಲವೆಂದು ಹಿಂದಕ್ಕೆ ಹೋದ ಯಾವ ಬಡ ರೋಗಿಯೂ ಅಲ್ಲಿಲ್ಲ. ಡಾ. ಕೆರೂಡಿಯವರ ಈ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಮೂಲತಃ ಹಂಸಭಾವಿಯಲ್ಲಿ ಜನಿಸಿದ ಅವರನ್ನು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಡಾ. ಅನಸೂಯ ಕೆರೂಡಿಯವರನ್ನು ಹಿರೇಕೆರೂರು ತಾಲ್ಲೂಕಿನ ಹಳ್ಳಿಯ ಜನರು ಅಭಿಮಾನದಿಂದ ನಮ್ಮ ಸಮ್ಮುಖದಲ್ಲಿ ಅಭಿನಂದಿಸಿದರು. ಯಾವ ರಾಜಕಾರಣಿಯನ್ನೂ ಆಹ್ವಾನಿಸದೆ ಸನ್ಮಾನ ಏರ್ಪಡಿಸಿದ್ದು ಒಂದು ವಿಶೇಷ. ಸನ್ಮಾನಿತರನ್ನು ಅಭಿನಂದಿಸಲು ವೇದಿಕೆಯ ಮೇಲೆ ಬಂದ ಸಭಿಕರಲ್ಲಿ ಒಬ್ಬರು ನಮ್ಮ ದರ್ಶನಾಶೀರ್ವಾದ ಪಡೆಯುವಾಗ ಒಂದು ಲಕೋಟೆಯನ್ನು ನಮ್ಮ ಕೈಗೆ ನೀಡಿದರು. ಯಾರು ಎಷ್ಟು ಕಾಣಿಕೆಯನ್ನು ಕೊಡುತ್ತಾರೆಂದು ಎಂದೂ ಎಣಿಸುವ ಜಾಯಮಾನ ನಮ್ಮದಲ್ಲ. ಭಕ್ತರ ಭಕ್ತಿಯನ್ನು ಅವರು ಕೊಡುವ ಕಾಣಿಕೆಯಿಂದ ಅಳೆಯಬಾರದು ಎಂಬುದು ನಮ್ಮ ನಿಲುವು. ಮಠಕ್ಕೆ ಬಂದಮೇಲೆ ಕಾಣಿಕೆಯ ಬುಟ್ಟಿಯನ್ನು ಕರಣಿಕರಿಗೆ ಕೊಟ್ಟು ಅದರಲ್ಲಿರುವ ಕಾಣಿಕೆಯನ್ನು ಮಠದ ಅಕೌಂಟಿಗೆ ಜಮಾ ಮಾಡಿಸುವುದು ನಮ್ಮ ಗುರುವರ್ಯರ ಕಾಲದಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿ. ಆದರೆ ಅಂದು ಲಕೋಟೆಯಲ್ಲಿದ್ದ ಕಾಣಿಕೆಯನ್ನು ಎಣಿಸಬೇಕಾದ ಅನಿವಾರ್ಯತೆ ಒದಗಿಬಂತು. ಕಾರಣ ಅದನ್ನು ಕೊಟ್ಟವರು ಇದು ನನ್ನ ದುಡಿಮೆಯ ಹಣವಲ್ಲ, ಸಮಾರಂಭಕ್ಕೆ ಬರುವಾಗ ದಾರಿಯಲ್ಲಿ ಸಿಕ್ಕ ಹಣ ಎಂದು ಹೇಳಿದರು. ಅವರ ಪ್ರಾಮಾಣಿಕತೆಯನ್ನು ನೋಡಿ ಹೃದಯ ತುಂಬಿ ಬಂತು. ಸಭೆಯಲ್ಲಿ ಅದರ ಬಗ್ಗೆ ನಮ್ಮ ಆಶೀರ್ವಚನದಲ್ಲಿ ಪ್ರಸ್ತಾಪಿಸಿ ಕಳೆದುಕೊಂಡವರು ಬಂದು ತೆಗೆದುಕೊಂಡು ಹೋಗಲು ಸೂಚಿಸಿದಾಗ ಹಿಂದೆ ಕುಳಿತಿದ್ದವರೊಬ್ಬರು ಬಂದರು. ಈ ಲಕೋಟೆಯಲ್ಲಿ ಎಷ್ಟು ಹಣವಿದೆಯೆಂದು ಕೇಳಿದಾಗ ಅವರು ಹೇಳಿದಂತೆ ಅದರಲ್ಲಿ ಸರಿಯಾಗಿ 6,100/- ರೂ. ಗಳು ಇದ್ದು ಅವರ ಪ್ರಾಮಾಣಿಕತೆಯನ್ನು ಎತ್ತಿಹಿಡಿದಿತ್ತು. ಆ ಹಣವನ್ನು ಅವರು ನಮ್ಮಿಂದ ಪಡೆದರಾದರೂ ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಹೋಗದೆ ಅದನ್ನು ತಮ್ಮ ಅಲ್ಪ ಕಾಣಿಕೆಯೆಂದು ಸ್ವೀಕರಿಸಬೇಕೆಂದು ಹೇಳಿ ನಮ್ಮ ಕೈಗೆ ಕೊಟ್ಟು ನಮಸ್ಕರಿಸಿ ಹೋಗಿ ಸಭೆಯಲ್ಲಿ ಕುಳಿತುಕೊಂಡರು. ಅವರ ಪ್ರಾಮಾಣಿಕತೆಯ ಕುರುಹಾಗಿ ಸ್ಥಳೀಯ ಶಾಲೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಮಕ್ಕಳಿಗೆ ಬಹುಮಾನವನ್ನು ನೀಡಲು ಅದರ ಜೊತೆಗೆ ಮಠದಿಂದ ಇನ್ನೂ ನಾಲ್ಕು ಸಾವಿರ ರೂ. ಗಳನ್ನು ಸೇರಿಸಿ ಕೊಡುವುದಾಗಿ ನಾವು ಘೋಷಿಸಿದಾಗ ಸಭೆಯಲ್ಲಿ ಕರತಾಡನ. ಹಣವನ್ನು ಕಳೆದುಕೊಂಡವರು ಪುನಃ ಎದ್ದು ಪಕ್ಕದಲ್ಲಿ ಕುಳಿತಿದ್ದ ಸ್ನೇಹಿತರಿಂದ ನಾಲ್ಕು ಸಾವಿರ ರೂ. ಗಳನ್ನು ಕೈಗಡ ಪಡೆದು ತಾವೇ 10 ಸಾವಿರಕ್ಕೆ ಭರ್ತಿ ಮಾಡಿದಾಗ ಸಭಿಕರು ರೋಮಾಂಚಿತರಾದರು. ಅವರು ಬೇರೆ ಯಾರೂ ಆಗಿರದೆ ಅಂದು ಸನ್ಮಾನಗೊಂಡ ಡಾ. ಬಸವರಾಜ ಕೆರೂಡಿಯವರ ತಮ್ಮಂದಿರಾದ ಧಾರವಾಡದ ಶಿವಯೋಗಿ ಕೆರೂಡಿಯವರು. ಸಮಾರಂಭದ ವರದಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದರೂ ಮೇಲಿನ ಘಟನೆಯ ಉಲ್ಲೇಖವಿರಲಿಲ್ಲ. ಕಾರಣ ದಾರಿಯಲ್ಲಿ ಸಿಕ್ಕ ಹಣವನ್ನು ಪ್ರಾಮಾಣಿಕವಾಗಿ ತಂದು ಒಪ್ಪಿಸಿದ ರಾಮು ಮುದಿಗೌಡರು ವಿಜಯ ಕರ್ನಾಟಕ ಪತ್ರಿಕೆಯ ಸ್ಥಳೀಯ ವರದಿಗಾರರೇ ಆಗಿದ್ದರು. ಮನೆಯನ್ನು ಕಟ್ಟುತ್ತಿದ್ದ ಅವರಿಗೆ ಹಣದ ಅವಶ್ಯಕತೆ ಇತ್ತು. ಆದರೆ ಇನ್ನೊಬ್ಬರ ದುಡಿಮೆಯ ಹಣದಲ್ಲಿ ತಮ್ಮ ಮನೆಯನ್ನು ಕಟ್ಟಿಕೊಳ್ಳುವ ದುರಾಸೆ ಅವರಿಗಿರಲಿಲ್ಲ! ಇಂತಹವರ ಸಂತತಿ ಸಾವಿರವಾಗಲಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 8.12.2010.