ಹಳತೆಲ್ಲವೂ ಶ್ರೇಷ್ಠವಲ್ಲ, ಹೊಸತೆಲ್ಲವೂ ಕನಿಷ್ಟವಲ್ಲ
ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಎಂದು ನಾಲ್ಕು ಯುಗಗಳು ಇವೆಯೆಂಬುದು ಭಾರತೀಯರೆಲ್ಲರಿಗೂ ಗೊತ್ತಿರುವ ಸಂಗತಿ. ಈಗ ನಾವಿರುವುದು ಕಲಿಯುಗ ಎಂದು ಹೇಳುತ್ತಾರೆ. ಹಿಂದಿನ ಎಲ್ಲ ಯುಗಗಳಿಗಿಂತಲೂ ಕಲಿಯುಗ ಬಹಳ ಕೆಟ್ಟದ್ದು, ಮೋಸ-ವಂಚನೆಗಳಿಂದ ಕೂಡಿದ್ದು ಎಂದು ಹೇಳುತ್ತಾರೆ. ಅಗಾಗ್ಗೆ ಪತ್ರಿಕೆಗಳಲ್ಲಿ ವರದಿಯಾಗುವ ಲೋಕಾಯುಕ್ತರ ಧಾಳಿಗಳನ್ನು ಗಮನಿಸಿದರೆ ಇದು ನಿಜಾಂಶದಿಂದ ಕೂಡಿರುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಹಿಂದಿನ ಇತರ ಎಲ್ಲ ಯುಗಗಳೂ ಕಲಿಯುಗಕ್ಕಿಂತ ಚೆನ್ನಾಗಿ ಇದ್ದವು ಎಂದು ನಂಬುವುದು ಮಾತ್ರ ಸಾಧ್ಯವಿಲ್ಲ. ಒಳ್ಳೆಯವರು ಮತ್ತು ಕೆಟ್ಟವರು ಎಲ್ಲ ಕಾಲಗಳಲ್ಲಿಯೂ ಇದ್ದರು. ಅದರಂತೆ ಈಗಲೂ ಇದ್ದಾರೆ ಮುಂದೆಯೂ ಇರುತ್ತಾರೆ. ಈ ನಾಲ್ಕು ಯುಗಗಳನ್ನು ಕುರಿತು ಅಲ್ಲಮಪ್ರಭುಗಳು ಮಾಡಿದ ವಿಡಂಬನೆ ಕೆಳಕಂಡಂತಿದೆ.
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ!
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ!
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ದಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು!
ನಾವು ಈಗ ಬರೆಯಲು ಹೊರಟಿರುವುದು ನಾಲ್ಕು ಯುಗಗಳ ತುಲನಾತ್ಮಕ ವಿಮರ್ಶೆಯಲ್ಲ, ಈ ನಾಲ್ಕು ಯುಗಗಳನ್ನು ಮೀರಿದ ಐದನೆಯ ಯುಗದಲ್ಲಿ ನಾವಿಂದು ಬದುಕುತ್ತಿದ್ದೇವೆ. ಅದೇ ಕಂಪ್ಯೂಟರ್ ಯುಗ ಅಥವಾ ಗಣಕಯಂತ್ರಯುಗ. ಇದನ್ನು ಕಲಿಯುಗದ ಒಂದು ಭಾಗವೆನ್ನಿ ಅಥವಾ ಐದನೆಯ ಸ್ವತಂತ್ರಯುಗವೆನ್ನಿ. ಕಳೆದ ಶತಮಾನದವರೆಗೆ ಓದು ಬರಹ ಬಾರದವರನ್ನು "ಅನಕ್ಷರಸ್ಥರು" (illiterates) ಎಂದು ಕರೆಯುತ್ತಿದ್ದರು. "ಕರಿಯಂಣನ ಎಡಗೈ ಹೆಬ್ಬೆಟ್ಟಿನ ಗುರುತಿಗೆ ಚೆಲುವಂಣನ ಸಾಕ್ಷಿ" ಎಂದು ಸಾಲ ಕೊಟ್ಟ ಸಾಹುಕಾರರು ಪ್ರಾಂಸರಿನೋಟುಗಳ ಮೇಲೋ, ಸರ್ಕಾರೀ ಅಧಿಕಾರಿಗಳು ರೆವಿನ್ನೂ ದಾಖಲೆಗಳ ಮೇಲೋ ಅನಕ್ಷರಸ್ಥರ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿದ್ದರು. ಎಡಗೈ ಹೆಬ್ಬೆಟ್ಟು ಏಕೆ, ಬಲಗೈ ಹೆಬ್ಬೆಟ್ಟು ಏಕಾಗಬಾರದು? ಎರಡರಲ್ಲಿಯೂ ಏನಾದರೂ ವ್ಯತ್ಯಾಸವಿದೆಯೇ ಎಂದು ಕೇಳಬಹುದು. ಜಗತ್ತಿನಲ್ಲಿ ಯಾರೊಬ್ಬನೆ ವ್ಯಕ್ತಿಯ ಎರಡೂ ಹೆಬ್ಬೆರಳುಗಳಲ್ಲಿರುವ ಗೆರೆಗಳು ಸಹ ಒಂದೇ ತೆರನಾಗಿ ಇರುವುದಿಲ್ಲ, ನಿಜ. ಯಾವ ಬೆರಳನ್ನು ಒತ್ತಿದರೂ ವ್ಯಕ್ತಿ ಒಬ್ಬನೆ ತಾನೆ. ಆದರೂ ಹಳ್ಳಿಯ ಅನಕ್ಷರಸ್ಥರಿಂದ ಎಡಗೈ ಹೆಬ್ಬೆಟ್ಟಿನಿಂದಲೇ ಒತ್ತಿಸಿಕೊಳ್ಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಪಾಪ, ಶ್ರಮಿಕರಾದ ನಮ್ಮ ಹಳ್ಳಿಯ ಜನರ ಬಲಗೈ ಹೆಬ್ಬೆಟ್ಟುಗಳು ಹೊಲ ಮನೆ ಕೆಲಸಗಳಲ್ಲಿ ಸವೆದುಹೋದ ಕಾರಣ ಎಡಗೈ ಹೆಬ್ಬೆಟ್ಟನ್ನೇ ಆಯ್ಕೆ ಮಾಡಿಕೊಂಡಿದ್ದಾರೆಂದು ತೋರುತ್ತದೆ.
ಕಂಪ್ಯೂಟರ್ ಯುಗದಲ್ಲಿ ನಾವು ಕಾಲಿಟ್ಟಿದ್ದರೂ ಹೆಬ್ಬೆಟ್ಟಿನ ಯುಗ ಇನ್ನೂ ಮುಗಿದಿಲ್ಲ. ಅನಕ್ಷರಸ್ಥರನ್ನು ಹೆಬ್ಬೆಟ್ಟಿನವರು ಎಂದು ಮೂದಲಿಸುತ್ತಿದ್ದ ಹಿಂದಿನ ಕಾಲದಂತೆ ಈಗ ಕಂಪ್ಯೂಟರ್ ಬಳಸಲು ಬರದೇ ಇರುವವರನ್ನು “ಅನಕ್ಷರಸ್ಥರು (computer illiterates) ಎಂದು ಕರೆಯುವಂತಾಗಿದೆ. ಕಂಪ್ಯೂಟರ್ ಬಳಸಲು ಬಂದರೂ ಹೆಬ್ಬೆರಳುಗಳ ಮಹತ್ವ ಹೋಗಿಲ್ಲ. ನೀವು ಆಫೀಸಿಗೆ ಸರಿಯಾಗಿ ಬರುತ್ತೀರೋ ಇಲ್ಲವೋ ಎಂದು ಪರಿಶೀಲಿಸಲು ಈಗ ಕೆಲವು ಸರ್ಕಾರಿ ಕಛೇರಿಗಳಲ್ಲಿ ಬಯೋಮೆಟ್ರಿಕ್ (Bio-metric) ಯಂತ್ರ ಬಂದಿದೆ. ಈ ಯಂತ್ರಕ್ಕೆ ನೌಕರರ ಬೆರಳುಗಳ ಗುರುತು ಬೇಕು. ನೌಕರರು ಆಫೀಸಿಗೆ ಬಂದಾಗ ಮತ್ತು ಆಫೀಸಿನಿಂದ ಹೊರಗೆ ಹೋಗುವಾಗ ಈ ಬಯೋಮೆಟ್ರಿಕ್ ಯಂತ್ರದ ಬೆಳಕಿನ ಗುಂಡಿಯ ಮೇಲೆ ನೌಕರನು ಕೈಬೆರಳುಗಳನ್ನು ಇಡಬೇಕು. ಆ ಯಂತ್ರ ತಕ್ಷಣವೇ ನೌಕರನು ಬಂದ ಮತ್ತು ಹೋದ ಸಮಯವನ್ನು ಕಂಪ್ಯೂಟರ್ನಲ್ಲಿ ದಾಖಲಿಸುತ್ತದೆ. ಮೊದಲೆಲ್ಲಾ ಆಫೀಸಿಗೆ ಬಂದಾಗ ಹಾಜರಾತಿ ಪುಸ್ತಕಕ್ಕೆ ಸಹಿಮಾಡಬೇಕಾಗಿತ್ತು. ಆ ದಿನವೇ ಏಕೆ ಹಿಂದಿನ ಮುಂದಿನ ದಿನಗಳಿಗೂ ಒಮ್ಮೆಲೇ ಸಹಿಮಾಡುವ ಸ್ವಾಂತಂತ್ರ್ಯವಿತ್ತು. ಯಾವಾಗ ಬಂದು ಹೋದರೂ ಮೇಲಧಿಕಾರಿಗಳನ್ನು ಒಲಿಸಿಕೊಂಡಿದ್ದರೆ ನಡೆಯುತ್ತಿತ್ತು. ಈಗ ಅದು ಸಾಧ್ಯವಿಲ್ಲ. ಹೀಗಾಗಿ ಅದೆಷ್ಟು ಜನ ನೌಕರರು ಈ ಬಯೋಮೆಟ್ರಿಕ್ ಯಂತ್ರ ಕಂಡುಹಿಡಿದವನನ್ನು ಮನಸ್ಸಿಲ್ಲಿಯೇ ಶಪಿಸುತ್ತಿದ್ದಾರೋ ಏನೋ! ಈ ತಂತ್ರಜ್ಞಾನವನ್ನು ನಮ್ಮ ದೇಶದ ಸಾರ್ವತ್ರಿಕ ಚುನಾವಣೆಗಳಲ್ಲಿ ಓಟು ಹಾಕಲು ಇತ್ತೀಚೆಗೆ ಬಂದಿರುವ ವಿದ್ಯುನ್ಮಾನ ಮತಪೆಟ್ಟಿಗೆಗಳಿಗೆ (EVM = Electronic Voting Machine) ಮತದಾರರ ಕೈಬೆರಳುಗಳ ಗೆರೆಗಳನ್ನು ಅಳವಡಿಸಿದರೆ ಅದೆಷ್ಟೋ ಚುನಾವಣಾ ಅಕ್ರಮಗಳು ನಿಲ್ಲುವಂತಾಗಬಹುದು. ಆಗಲೂ ಸತ್ತವರನ್ನು ಸ್ಮಶಾನಕ್ಕೆ ಹೊತ್ತುಕೊಂಡು ಹೋಗುವಾಗ ದಾರಿಯಲ್ಲಿ ಮತಗಟ್ಟೆಗೆ ಭೇಟಿ ನೀಡಿ ಒತ್ತಿಸಿದರೆ, ಚುನಾವಣಾಧಿಕಾರಿಗಳು ಮಾನವೀಯ ದೃಷ್ಟಿಯಿಂದ ಅನುವು ಮಾಡಿಕೊಟ್ಟರೆ ಏನು ಮಾಡಬೇಕೆಂದು ಯೋಚಿಸುವ ಕಾಲ ಮುಂದೆ ಬರಬಹುದು. ಇಂತಹ ಯುಗಪುರುಷರ ಸಾಧನೆಗಳು ಪತ್ರಿಕೆಗಳಲ್ಲಿ ಆಗಾಗ್ಗೆ ಬರುತ್ತಿರುತ್ತವೆ. "ತಿಮಿಂಗಿಲಗಳು ಲೋಕಾಯುಕ್ತರ ಬಲೆಗೆ" ಎಂಬ ವರದಿಗಳನ್ನು ಓದುವಾಗ ಲೋಕಾಯುಕ್ತರನ್ನು ಮತ್ಸ್ಯಾವತಾರಿ ವಿಷ್ಣು ಎನ್ನಬೇಕೋ, ಅಥವಾ ಅವರು ಬೀಸಿದ ಬಲೆಗೆ ಬಿದ್ದವರನ್ನು ಮತ್ಸ್ಯಾವತಾರಿ ಎನ್ನಬೇಕೋ ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ.
"ನೀವಿನ್ನೂ ಯಾವ ಕಾಲದಲ್ಲಿದ್ದೀರಾ, ಈಗ ಕಾಲ ಬದಲಾವಣೆಯಾಗಿದೆ" ಎಂಬ ಮಾತು ಆಗಾಗ್ಗೆ ಸಂಭಾಷಣೆಯ ಸಂದರ್ಭದಲ್ಲಿ ನಿಮ್ಮ ಕಿವಿಗೆ ಬಿದ್ದಿರಬಹುದು. ಇದಕ್ಕೆ ಉತ್ತರರೂಪವಾಗಿ ಹೌದು ನನಗೆ ಇದು ಗೊತ್ತೇ ಇರಲಿಲ್ಲ ನೋಡಿ ಎಂದು ಉದಾರವಾಗಿ ಒಪ್ಪಿಕೊಳ್ಳುವವರೂ ಇದ್ದಾರೆ; "ಹಳೆಯ ಕಾಲವೇ ಚೆನ್ನಾಗಿತ್ತು, ಹೊಸ ಕಾಲ ಚೆನ್ನಾಗಿಲ್ಲ" ಎಂದು ಅಸಹನೆಯಿಂದ ಹೀಗಳೆಯುವವರೂ ಇದ್ದಾರೆ. ಈ ಹಪಾಹಪಿಯ ಮಾತು ಹಳೆಯ ಕಾಲದಿಂದಲೂ ಕೇಳಿಬರುತ್ತಿರುವುದು ಒಂದು ವಿಶೇಷ. ಆಯಾ ಕಾಲದ ಹಿರಿಯರು ನಮ್ಮ ಕಾಲ ಬಹಳ ಚೆನ್ನಾಗಿತ್ತು, ಈಗಿನ ಕಾಲದ ಹುಡುಗರು ತುಂಬಾ ಕೆಟ್ಟುಹೋಗಿದ್ದಾರೆ, ಗುರುಹಿರಿಯರು ಎಂಬ ಗೌರವಭಾವನೆಯೇ ಸ್ವಲ್ಪವೂ ಇಲ್ಲ ಎಂದು ತಾತ್ಸಾರದಿಂದ ತೆಗಳುವುದನ್ನು ನೀವು ಕೇಳಿದ್ದೀರಿ. ವಿಪರ್ಯಾಸದ ಸಂಗತಿಯೆಂದರೆ ಅದೇ ಹಿರಿಯರು ಹುಡುಗರಾಗಿದ್ದಾಗ ಅವರ ಹಿರಿಯರೂ ಸಹ ಅವರನ್ನು ಕುರಿತು ಇದೇ ಮಾತನ್ನೇ ಹೇಳುತ್ತಿದ್ದರು!
ಇದು ಹಿರಿಯ ವಯಸ್ಸಿನವರ ಮಾತಿನ ಧಾಟಿಯಾದರೆ ಕಿರಿಯ ವಯಸ್ಸಿನವರ ಮಾತಿನ ಧಾಟಿಯೇ ಬೇರೆ. ಹಿರಿಯವಯಸ್ಸಿನವರೊಂದಿಗೆ ಹೊಂದಾಣಿಕೆಯಾಗದ ಇಂದಿನ ವಿದ್ಯಾವಂತ ಯುವಕರು ಮಾತೆತ್ತಿದರೆ ತಲೆಮಾರಿನ ಅಂತರ (generation gap) ಎನ್ನುತ್ತಾರೆ. ಹಾಗೆಂದರೇನು? ಹಿಂದಿನ ತಲೆಮಾರಿನವರಿಗೆ ನಮ್ಮನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲ ಎಂದು ಇಂದಿನ ಯುವಪೀಳಿಗೆ ಆಪಾದಿಸಿದರೆ ನಮಗೇನು ತಲೆ ಇಲ್ಲವೇ? ಇಂದಿನ ಯುವಕ/ಯುವತಿಯರಿಗೆ ನಮ್ಮ ಜೀವನಾನುಭವದ ಮಾತನ್ನು ಕೇಳುವ ತಾಳ್ಮೆ ಇಲ್ಲ ಎಂದು ಹಿರಿಯರು ಗೊಣಗುತ್ತಾರೆ. ಹಿರಿಯ ತಲೆಮಾರಿನ ಜನರ ಆಲೋಚನಾಕ್ರಮಕ್ಕೂ ಆಧುನಿಕ ಕಾಲದ ಯುವಕ/ಯುವತಿಯರ ಆಲೋಚನಾಕ್ರಮಕ್ಕೂ ವ್ಯತ್ಯಾಸವಿದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಹಿರಿಯರು ಹೇಳಿದ್ದೇ ಸರಿ, ಕಿರಿಯರು ಹೇಳುವುದೆಲ್ಲಾ ತಪ್ಪು ಎಂದು ವಾದಿಸುವುದು ಸರಿಯಲ್ಲ.
ಮಹಾಕವಿ ಕಾಳಿದಾಸನ ಕಾಲದಲ್ಲಿಯೂ ಈ ಮನೋಧರ್ಮ ಇತ್ತು ಎಂಬುದಕ್ಕೆ ಅವನ ಗ್ರಂಥಗಳಲ್ಲಿಯೇ ಪುರಾವೆ ಸಿಕ್ಕುತ್ತದೆ. ಕಾಳಿದಾಸ ರಚಿಸಿದ ಮೊಟ್ಟಮೊದಲ ನಾಟಕವೆಂದರೆ ಮಾಲವಿಕಾಗ್ನಿಮಿತ್ರ. ಅದನ್ನು ಪ್ರಸ್ತುತಪಡಿಸುವಾಗ ಜನರು ಹೇಗೆ ಸ್ವೀಕರಿಸುತ್ತಾರೋ ಏನೋ ಎಂಬ ಅನುಮಾನ ಕಾಳಿದಾಸನಿಗೆ ಇತ್ತು. ಕಾಲಮಾನದಲ್ಲಿ ಅವನಿಗಿಂತಲೂ ಮೊದಲು ಇದ್ದ ಭಾಸ ಮತ್ತಿತರ ಕವಿಗಳು ಬರೆದ ಸ್ವಪ್ನವಾಸವದತ್ತ, ಚಾರುದತ್ತ, ಊರುಭಂಗ ಇತ್ಯಾದಿ ಸಂಸ್ಕೃತನಾಟಕಗಳು ತುಂಬಾ ಪ್ರಸಿದ್ದಿಯನ್ನು ಪಡೆದಿದ್ದವು. ಹೀಗಾಗಿ ತಾನು ಬರೆದ ಹೊಸ ನಾಟಕಕ್ಕೆ ಮಾನ್ಯತೆ ಸಿಗುವುದೋ ಇಲ್ಲವೋ ಎಂಬ ಆಶಂಕೆಯನ್ನು ಕಾಳಿದಾಸ ತನ್ನ ಮಾಲವಿಕಾಗ್ನಿಮಿತ್ರ ನಾಟಕದ ಆರಂಭದ ಅಂಕದಲ್ಲಿ ಪಾರಿಪಾರ್ಶ್ವಿಕ ಎಂಬ ಪಾತ್ರಧಾರಿಯ ಬಾಯಲ್ಲಿ ಹೀಗೆ ಹೇಳಿಸಿದ್ದಾನೆ: “ಪ್ರಥಿತ-ಯಶಸಾಂ ಭಾಸ-ಸೌಮಿಲ್ಲಕವಿಪುತ್ರಾದೀನಾಂ ಪ್ರಬಂಧಾನತಿಕ್ರಮ್ಯ ವರ್ತಮಾನ-ಕವೇಃ ಕಾಲಿದಾಸಸ್ಯ ಕ್ರಿಯಾಮಿಮಾಂ ದ್ರಷ್ಟುಂ ಕಥಂ ಪರಿಷದೋ ಬಹುಮಾನಃ?”. ಇದಕ್ಕೆ ನಾಟಕದ ಸೂತ್ರಧಾರನ ಬಾಯಲ್ಲಿ ಕಾಳಿದಾಸ ಕೊಡಿಸಿದ ಈ ಕೆಳಗಿನ ಉತ್ತರ ಅವನ ವೈದುಷ್ಯಕ್ಕೆ ಕನ್ನಡಿ ಹಿಡಿದಂತಿದೆ:
ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ
ಸಂತಃ ಪರೀಕ್ಷಾನ್ಯತರದ್ ಭಜಂತೇ
ಮೂಢಃ ಪರಪ್ರತ್ಯಯ-ನೇಯ-ಬುದ್ಧಿಃ –
- (ಮಾಲವಿಕಾಗ್ನಿಮಿತ್ರ)
(ಭಾವಾನುವಾದ)
ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಶ್ರೇಷ್ಠವಲ್ಲ
ಹೊಸದೆಂದ ಮಾತ್ರಕ್ಕೆ ಎಲ್ಲವೂ ಕನಿಷ್ಠವಲ್ಲ
ಎಂಬ ಆಶಯ ಪಡೆದಿದ್ದವು. ಇರದ ಸ್ವಪ್ರವಾಸ
ಹೊಸದಾದರೇನಂತೆ, ಕಡೆಗಣಿಸುವುದು ತರವಲ್ಲ
ಮೆಚ್ಚುವರು ಪರೀಕ್ಷಿಸಿ ಗುಣಗ್ರಾಹಿ ಜನರು
ನಿಂದಿಸುವರು ಸ್ವಂತಬುದ್ದಿ ಇಲ್ಲದ ಮೂಢರು!
ಕಾಳಿದಾಸನ ಈ ಮಾತಿಗೆ ಪೂರಕವಾಗಿ ದನಿಗೂಡಿಸಿ ಹೇಳುವುದಾದರೆ ಉಪ್ಪಿನಕಾಯಿ ಹಳೆಯದಾದಷ್ಟೂ ರುಚಿಯಾಗಿರುತ್ತದೆ, ನಿಜ. ಉಪ್ಪಿನಕಾಯಿ ಶಬ್ದವನ್ನು ಕೇಳುತ್ತಿದ್ದಂತೆಯೇ ನಿಮ್ಮ ಬಾಯಲ್ಲಿ ನೀರೂರಿರಬಹುದಲ್ಲವೇ? ಆದರೆ ಇದೇ ಮಾತನ್ನು ನೀವು ದಿನ ನಿತ್ಯ ಓಡಾಡುವ ಮೋಟಾರು ಬೈಕ್ ಅಥವಾ ಕಾರು ಇತ್ಯಾದಿ ಆಧುನಿಕ ವಾಹನಗಳನ್ನು ಕುರಿತು ಹೇಳಲು ಸಾಧ್ಯವಿಲ್ಲ. ನೀವು ಇಂದಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಆಧುನಿಕವಾದ ಕಾರನ್ನು Show Room ನಿಂದ ಮನೆಗೆ ತಂದ ಮಾರನೆಯ ದಿನವೇ ಅದು ಹಳೆಯ ಕಾರಿನ ಪಟ್ಟವೇರುತ್ತದೆ. ಮಾರಲು ಹೋದರೆ ಅದನ್ನು ಅರ್ಧಬೆಲೆಗೂ ಕೊಳ್ಳುವವರು ಸಿಕ್ಕುವುದಿಲ್ಲ, ಆದರೂ ಸಿಕ್ಕಷ್ಟು ಹಣಕ್ಕೆ ಅದನ್ನು ಮಾರಿ ಮಾರುಕಟ್ಟೆಗೆ ಹೊಸದಾಗಿ ಬಂದ ಕಾರಿಗೆ ಮಾರುಹೋಗಿ ನೀವು ಹೊಸಕಾರನ್ನು ಕೊಳ್ಳಲು ಮುಂದಾಗುತ್ತೀರಲ್ಲವೇ? Latest Model ನಿಮ್ಮ ಹತ್ತಿರವಿದೆಯೆಂದು ಬೀಗುತ್ತೀರಲ್ಲವೇ? ಕಾರು ಹಳೆಯದಾದರೆ Old Model ಎಂದು ಹೀಗಳೆಯುತ್ತೀರಿ. ಹೊಸದಾದರೆ Latest Model ಎಂದು ಹೆಮ್ಮೆ ಪಟ್ಟುಕೊಳ್ಳುತ್ತೀರಿ. ಆದರೆ ಕಿರಿಯ ವಯಸ್ಸಿನವರ ವಿಚಾರ ಬಂದಾಗ ವಿಭಿನ್ನ ರೀತಿಯಲ್ಲಿ ವರ್ತಿಸುತ್ತೀರಿ. ವಯಸ್ಸಿನಲ್ಲಿ ಹಿರಿಯರಾದ ಮಾತ್ರಕ್ಕೆ ಅವರು ಹೇಳಿದ್ದೆಲ್ಲಾ ಸರಿ, ವಯಸ್ಸಿನಲ್ಲಿ ಕಿರಿಯರಾದ ಮಾತ್ರಕ್ಕೆ ಅವರು ಹೇಳಿದ್ದೆಲ್ಲಾ ತಪ್ಪು ಎಂದು ಪರಿಭಾವಿಸುವುದೇ ತಪ್ಪು, ಹಿರಿಯರಾದರೇನು, ಕಿರಿಯರಾದರೇನು ಅರಿವಿಂಗೆ ಹಿರಿದು ಕಿರಿದುಂಟೇ? ಎಂದು ಶತಮಾನಗಳ ಹಿಂದೆಯೇ ಅಲ್ಲಮ ಪ್ರಭುಗಳು ಪ್ರಶ್ನಿಸುತ್ತಾರೆ.
ನಮ್ಮ ಲಿಂಗೈಕ್ಯ ಗುರುವರ್ಯರ ಕಾಲದಲ್ಲಿ ದಾವಣಗೆರೆಯಲ್ಲಿ ಬಾತಿ ರೇವಣಸಿದ್ದಪ್ಪ ಎಂಬ ನಿವೃತ್ತ ಇಂಜಿನಿಯರ್ ಇದ್ದರು. ನಿವೃತ್ತರಾದ ಮೇಲೂ ಅವರು ಖಾಸಗಿಯಾಗಿ ಹೊಸ ಹೊಸ ಕಟ್ಟಡಗಳ ನಿರ್ಮಾಣದಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಸರಳ ಪ್ರಾಮಾಣಿಕ ಇಂಜಿನಿಯರ್, ಅಪ್ಪಟ ಗಾಂಧೀವಾದಿ ಎಂದು ಹೆಸರು ಪಡೆದಿದ್ದರು. ನಮ್ಮ ಮಠದ ಯಾವುದೋ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣದ ನೀಲಿನಕ್ಷೆ ತಯಾರು ಮಾಡುವ ಸಂದರ್ಭದಲ್ಲಿ ಅವರೊಂದಿಗೆ ಸಮಾಲೋಚನೆಗೆ ಕುಳಿತಾಗ ನಡೆದ ಸಂಭಾಷಣೆಯಲ್ಲಿ “ನಾನು ಇಂಜಿನಿಯರ್ ಇರಬಹುದು; ಆದರೆ ಅಡುಗೆ ಮನೆಯಲ್ಲಿ ಒರಳುಕಲ್ಲು ಎಲ್ಲಿರಬೇಕೆಂದು ನಾನು ಗೃಹಿಣಿಯರನ್ನು ಕೇಳಿ ತಿಳಿದುಕೊಂಡು ಅದರಂತೆ ಮಾಡುತ್ತೇನೆ!” ಎಂದು ಅವರು ಹೇಳಿದ ಮಾತು ಈಗಲೂ ನಮ್ಮ ನೆನಪಿನಲ್ಲಿದೆ. ಮಿಕ್ಸರ್, ಗ್ರೈಂಡರ್ ಇತ್ಯಾದಿ ಅನೇಕ ಆಧುನಿಕ ಉಪಕರಣಗಳು ಬಂದಿರುವ ಈಗಿನ ಅಡುಗೆ ಮನೆಗಳಲ್ಲಿ ಒರಳುಕಲ್ಲಿನ ಅವಶ್ಯಕತೆ ಅಷ್ಟಾಗಿ ಇಲ್ಲ. ಆದರೂ ದೊಡ್ಡ ದೊಡ್ಡ ನಗರಗಳಲ್ಲಿ ನಿರ್ಮಾಣವಾಗುತ್ತಿರುವ ಸುಂದರ ವಿನ್ಯಾಸದ ಮನೆಗಳಲ್ಲಿಯೂ ವಾಸ್ತು ಪ್ರಕಾರ ಇಂತಹ ದಿಕ್ಕಿನಲ್ಲಿಯೇ ಒರಳುಕಲ್ಲು ಇರಬೇಕೆಂದು ನೀಲಿನಕ್ಷೆ ತಯಾರು ಮಾಡುವ ಇಂಜಿನಿಯರುಗಳು ಇದ್ದಾರೆ! ಈ ವಿಚಾರದಲ್ಲಿ ಗಣಕಯಂತ್ರದ ಗಂಧಗಾಳಿ ಇಲ್ಲದ ಹಳೆಯ ಕಾಲದ ಇಂಜಿನಿಯರ್ ಬಾತಿ ರೇವಣಸಿದ್ದಪ್ಪನವರು ಮತ್ತು Autocad ಬಲ್ಲ ಇಂದಿನ ಆಧುನಿಕ ಇಂಜಿನಿಯರುಗಳಲ್ಲಿ ಯಾರು ಬುದ್ಧಿವಂತ ಇಂಜಿನಿಯರ್ ಎಂಬುದನ್ನು ನೀವೇ ನಿರ್ಧರಿಸಿ. ಮನೆ ಕಟ್ಟಿಸುವವರು ತಮ್ಮ ಮನೆ ವಾಸ್ತುವಿಗೆ ಅನುಗುಣವಾಗಿ ಇರಬೇಕೆಂದು ಬಯಸುವಾಗ ಪಾಪ ಯಾವ ಇಂಜಿನಿಯರಾದರೂ ಏನು ಮಾಡಿಯಾರು? ವಾಸ್ತವ್ಯ ಮಾಡಿದ ಮೇಲೆ ಸದ್ಯ ಬೆವರು ಸುರಿಸಿ ಸಾಲ-ಸೋಲ ಮಾಡಿ ಕಟ್ಟಿದ ಮನೆಯನ್ನು ಒಡೆಯುವಂತಹ ಮಕ್ಕಳು ಆ ಮನೆಯಲ್ಲಿ ಹುಟ್ಟದಿದ್ದರೆ ಸಾಕು! ಈ ವಿಚಾರದಲ್ಲಿ ನಮ್ಮ ಮಂತ್ರಿಮಾನ್ಯರೇನೂ ಕಡಿಮೆ ಇಲ್ಲ. ಸಚಿವ ಸಂಪುಟ ರಚನೆಯಾಗುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಮಗೆ ಸರಿಯಾದ ಖಾತೆಯನ್ನು ಕೊಟ್ಟಿಲ್ಲವೆಂದು ಕ್ಯಾತೆ ತೆಗೆಯುತ್ತಾರೆ. ರಾಜ್ಯಪಾಲರಿಂದ ಮಂತ್ರಿಗಿರಿ ಶಪಥಗ್ರಹಣ ಮಾಡಿ ವಿಧಾನಸೌಧದಲ್ಲಿರುವ ಅವರ ಖಾತೆಯ ಕೊಠಡಿಗೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿರುವ ಬಾಗಿಲು, ಕಿಟಕಿ, ಖುರ್ಚಿ, ಟೇಬಲ್,ಸೋಫಾಸೆಟ್‌ಗಳು ವಾಸ್ತು ಪ್ರಕಾರ ಇಲ್ಲವೆಂದೂ ಕ್ಯಾತೆ ತೆಗೆಯುತ್ತಾರೆ. ವಾಸ್ತುಪ್ರಕಾರ ಕೊಠಡಿ ಸಿದ್ಧ ಮಾಡಿಕೊಟ್ಟ ಮೇಲೂ ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಜಿಲ್ಲೆಗೆ ಹಾಕಿಸಿಕೊಳ್ಳುವುದಕ್ಕೂ ಕ್ಯಾತೆ ತೆಗೆಯುತ್ತಾರೆ. ಹೀಗಾದರೆ ನಮ್ಮ ಹಳ್ಳಿ ಕ್ಯಾತನ ಗತಿಯೇನು?
ಅಧಿಕಾರ ವಹಿಸಿಕೊಳ್ಳುವ ನಮ್ಮ ಈ ಜನಪ್ರಿಯ ಮತ್ತು ವಾಸ್ತುಪ್ರಿಯ ಮಂತ್ರಿಗಳು ವಾಸ್ತು ಸರಿಯಿಲ್ಲವೆಂದು ಸದ್ಯ ಕೆಂಗಲ್ ಹನುಮಂತಯ್ಯನವರು ಕಷ್ಟಪಟ್ಟು ಕಟ್ಟಿಸಿದ ವಿಧಾನಸೌಧವನ್ನು ಕೆಡವದಿದ್ದರೆ ಸಾಕು! ಸರ್ಕಾರದ ಕೆಲಸ ದೇವರ ಕೆಲಸ ಅದು ನಮ್ಮ ಕೆಲಸ ಅಲ್ಲವೇ ಅಲ್ಲ ಎಂದು ನಿರ್ಧರಿಸಿ ಅಧಿಕಾರ ಕುರ್ಚಿಗಾಗಿ ಹಗ್ಗ ಜಗ್ಗಾಟ ನಡೆಸುವ ಇಂಥಹ ಜನನಾಯಕರಿಂದ ಮತದಾರರು ಇನ್ನಾದರೂ ಎಚ್ಚರದಿಂದಿರಲಿ.ಭ್ರಷ್ಟರಾಜಕಾರಣಿಗಳು .ಭ್ರಷ್ಟಪ್ರಜಾತನದ ಶನಿಸಂತಾನವೆಂಬ ವಾಸ್ತವ ಸಂಗತಿಯನ್ನು ಮರೆಯದಿರಲಿ! ಉಪ್ಪು ತಿಂದವ ನೀರು ಕುಡಿಯಲ್ಲೆ ಬೇಕು ಎಂಬ ದುಃಸ್ಥಿತಿಯನ್ನು ತಂದುಕೊಳ್ಳದಿರಲಿ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 9.12.2009.