ಧರ್ಮಸಂಕಟ ಮತ್ತು ದ್ವಂದ್ವ
"ಹಪ್ಪಳ ಮಾಡ್ಯಾಳ ಹದ ಹಾಕಿ ಗಂಡನು ಬಡಿದಾನಾ ಕದ ಹಾಕಿ”
ಇದು ಜನಪದಗೀತೆಯ ಒಂದು ಸಾಲು. ಇದನ್ನು ಓದಿ ನಿಮಗೆ ಏನನ್ನಿಸುತ್ತದೆ? ಕ್ಷಣ ಕಾಲ ಕಣ್ಮುಚ್ಚಿ ಚಿಂತಿಸಿ ನಂತರ ಮುಂದೆ ಓದಿ. ಜನಪದರ ಒಡನಾಟವಿಲ್ಲದವರಿಗೆ ಇದರ ಹಿನ್ನೆಲೆ ಮುನ್ನೆಲೆ ಅರ್ಥವಾಗದು. ಯಾವ ವಿಶ್ವಕೋಶದ ಪುಟಗಳನ್ನು ತಿರುವಿ ಹಾಕಿದರೂ ಅಥವಾ ಅಂತರಜಾಲವನ್ನು ಜಾಲಾಡಿದರೂ ತಿಳಿಯಲು ಸಾಧ್ಯವಿಲ್ಲ. ಹಳ್ಳಿಯ ಅನಕ್ಷರಸ್ಥ ಜನರು ತಮ್ಮ ಸ್ವಾನುಭವದಿಂದ ರಚಿಸಿ ಹಾಡಿದ ಈ ಜನಪದಗೀತೆಯಲ್ಲಿ ಬಳಸಿರುವ ಪ್ರಾಸಬದ್ಧವಾದ ಶಬ್ದಗಳು ಮತ್ತು ಅದರ ಹಿಂದಿರುವ ಅರ್ಥ ಸಂಸ್ಕೃತದ ಶ್ರೇಷ್ಠ ಕವಿಗಳಾದ ದಂಡಿಯ ಪದಲಾಲಿತ್ಯವನ್ನೂ, ಭಾರವಿಯ ಅರ್ಥಗೌರವವನ್ನೂ ಮೀರಿಸುವಂತಿವೆ. ಇದರಲ್ಲಿ ಹೆಂಡತಿಯನ್ನು ಪ್ರೀತಿಸುವ ಗಂಡನೊಬ್ಬನ ಧರ್ಮಸಂಕಟದ ರೋಚಕ ಕಥಾನಕ ಅಡಗಿದೆಯೆಂದರೆ ಓದುಗರಿಗೆ ಆಶ್ಚರ್ಯವಾಗದಿರದು. ಹೊಲಗದ್ದೆಗಳಲ್ಲಿ ಇಡೀ ದಿನವೆಲ್ಲಾ ಕೆಲಸ ಮಾಡಿ ದಣಿದು ಸಂಜೆ ಮನೆಗೆ ಬಂದ ಮಗನಿಗೆ ಸಖೇದಾಶ್ಚರ್ಯ ಕಾದಿತ್ತು. ಅವನ ತಾಯಿ ಬೇಸರಗೊಂಡು ಮಧ್ಯಾಹ್ನ ಊಟ ಮಾಡದೆ ಮಲಗಿದ್ದಳು. ರಾತ್ರಿ ಊಟಕ್ಕೆ ಕರೆಯಲು ಹೋದರೂ ನಿರಾಕರಿಸಿದಳು. ಏಕೆಂದು ಕೇಳಿದಾಗ ಆಕೆಯ ಕೋಪಕ್ಕೆ ಕಾರಣವೆಂದರೆ ಮನೆಯಲ್ಲಿದ್ದ ಸೊಸೆ ಅವಳ ಅನುಮತಿಯಿಲ್ಲದೆ ಹಪ್ಪಳ ಮಾಡಿದ್ದು. “ಯಾರನ್ನು ಕೇಳಿ ನಿನ್ನ ಹೆಂಡತಿ ಹಪ್ಪಳ ಮಾಡಿದಳು? ಈ ಮನೆಯ ಯಜಮಾನತಿ ಯಾರು? ನಾನೋ, ಮೊನ್ನೆ ಮೊನ್ನೆ ಬಂದ ಇವಳೊ? ಇದು ತೀರ್ಮಾನ ಆಗುವವರೆಗೂ ನಾನು ಉಣ್ಣುವುದಿಲ್ಲ” ಎಂದು ತಾಯಿ ಸತ್ಯಾಗ್ರಹ ಹೂಡಿದಳು. ನಿಜಸಂಗತಿಯೆಂದರೆ ಸೊಸೆಯ ತಪ್ಪು ಅದರಲ್ಲಿ ಏನೂ ಇರಲಿಲ್ಲ. ಮಗನೇ ತನ್ನ ಹೆಂಡತಿಗೆ ಹೇಳಿ ಹಪ್ಪಳ ಮಾಡಿಸಿದ್ದ. ಹಾಗೆಂದು ತಾಯಿಯ ಮುಂದೆ ಹೇಳಲು ಅವನಿಗೆ ಧೈರ್ಯ ಬರಲಿಲ್ಲ. ಒಂದು ಕಡೆ ತಾಯಿಯ ಮೇಲೆ ಪ್ರೀತಿ ಮತ್ತೊಂದು ಕಡೆ ಹೆಂಡತಿಯ ಮೇಲೆ ಅನುಕಂಪ. ಧರ್ಮಸಂಕಟಕ್ಕೆ ಸಿಲುಕಿದ ಅವನಿಗೆ ತಾಯಿಯನ್ನು ಸಮಾಧಾನಪಡಿಸಲು ಬೇರೆ ಯಾವ ಮಾರ್ಗವೂ ತೋಚಲಿಲ್ಲ, “ನಿನ್ನನ್ನು ಕೇಳದೆ ಈಕೆ ಮಾಡಿದ್ದು ತಪ್ಪು” ಎಂದು ಏಕಪಕ್ಷೀಯ ತೀರ್ಮಾನ ಕೊಟ್ಟು ತಾಯಿಯ ಎದುರಿಗೆ ತನ್ನ ಹೆಂಡತಿಯನ್ನು ಎಳೆದುಕೊಂಡು ಹೋದ. ಮಲಗುವ ಕೋಣೆಗೆ ಹೋಗಿ ಬಾಗಿಲನ್ನು ರಪ್ ಎಂದು ಹಾಕಿದ. ಸಿಟ್ಟಿನಲ್ಲಿ ಹೆಂಡತಿಯನ್ನು ಧಪ್ ಧುಪ್ ಎಂದು ಹೊಡೆಯುತ್ತಿರುವ ಶಬ್ದ ಹೊರಗೆ ಕೇಳಿ ತಾಯಿ ಎಷ್ಟೇ ಆಗಲಿ ನನ್ನ ಮಗನಲ್ಲವೇ? ಎಂದು ಸಮಾಧಾನಪಟ್ಟುಕೊಳ್ಳುತ್ತಾಳೆ. ಆದರೆ ಅವನು ಕೋಣೆಯೊಳಗೆ ಹೊಡೆಯುತ್ತಿದ್ದುದು ತನ್ನ ಹೆಂಡತಿಯನ್ನಲ್ಲ, ಹಾಸಿಗೆಯ ಮೇಲಿನ ತಲೆದಿಂಬನ್ನು! ಸಂಸಾರದಲ್ಲಿ ಬರುವ ವಿರಸ ಪ್ರಸಂಗಗಳನ್ನು ಹೇಗೆ ಜಾಣ್ಮೆಯಿಂದ ನಿಭಾಯಿಸಬಹುದೆಂಬ ನೀತಿಬೋಧೆ ಈ ಜಾನಪದ ಕಥಾನಕದಲ್ಲಿದೆ. ಆದರೆ ನಿಜ ಜೀವನದಲ್ಲಿ ಹೀಗೆ ಆಗುವುದು ಅಪರೂಪ. ವಾಸ್ತವ ಸಂಗತಿಯನ್ನು ಮಗ ತಾಯಿಗೆ ಹೇಳಿ ಸಮಾಧಾನಪಡಿಸಲು ಬರುತ್ತಿರಲಿಲ್ಲವೇ ಎಂದು ಅನಿಸುವುದು ಸಹಜ. ಬದುಕು ಅನೇಕ ವಾಸ್ತವತೆಗಳಿಂದ ಕೂಡಿದ್ದರೂ ಯಾರೂ ಅದನ್ನು ಅರ್ಥಮಾಡಿಕೊಳ್ಳುವ ಪರಿಪಕ್ವತೆಯನ್ನು ಹೊಂದಿರುವುದಿಲ್ಲ. ರಾಗದ್ವೇಷಗಳಿಂದ ಕೂಡಿದ ಮನಸ್ಸಿಗೆ ಅದರ ಅರಿವೂ ಉಂಟಾಗುವುದಿಲ್ಲ. ಧರ್ಮಸಂಕಟಕ್ಕೆ ಸಿಲುಕಿಕೊಂಡ ವ್ಯಕ್ತಿ ಹೇಳಲಾಗದೆ ವಿಲಿವಿಲಿ ಒದ್ದಾಡುತ್ತಾನೆ.
ಧರ್ಮಸಂಕಟಕ್ಕೂ ಮನಸ್ಸಿನ ದ್ವಂದ್ವಕ್ಕೂ ವ್ಯತ್ಯಾಸವಿದೆ. ಧರ್ಮಸಂಕಟದಲ್ಲಿರುವ ವ್ಯಕ್ತಿಯ ಮನಸ್ಸಿನಲ್ಲಿ ದ್ವಂದ್ವವಿದ್ದರೂ ಧರ್ಮಸಂಕಟವೇ ಬೇರೆ, ದ್ವಂದ್ವವೇ ಬೇರೆ. ದ್ವಂದ್ವದಲ್ಲಿ ಸಂಕಟವಿರುವುದಿಲ್ಲ. ವ್ಯಾವಹಾರಿಕವಾದ ತಾಕಲಾಟವಿರುತ್ತದೆ. ಧರ್ಮಸಂಕಟದಲ್ಲಿ ಧರ್ಮದ ಅಂದರೆ ಕರ್ತವ್ಯದ ತಾಕಲಾಟವಿರುತ್ತದೆ. ನೈತಿಕ ನೆಲೆಗಟ್ಟಿನ ಮೇಲೆ ಯಾವುದು ಸರಿ, ಯಾವುದು ತಪ್ಪು ಎಂಬ ಸ್ಪಷ್ಟತೆಯ ಹೊಯ್ದಾಟವಿರುತ್ತದೆ. ಕೆಲವೊಮ್ಮೆ ಮಾಡುವ ಕಾರ್ಯ ಎಷ್ಟೇ ಒಳ್ಳೆಯದಾಗಿ ಕಂಡುಬಂದರೂ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಹಾಗೆಯೇ ಮಾಡಬೇಕಾದ ಕಾರ್ಯ ಎಷ್ಟೇ ಕೆಟ್ಟದಾಗಿ ಕಂಡರೂ ಅದರ ಪರಿಣಾಮ ಒಳ್ಳೆಯದಾಗಿರುತ್ತದೆ. ಮಾಡುವ ಹಂತದಲ್ಲಿ ಕಾಣಬರುವ ಈ ಒಳಿತು ಕೆಡುಕುಗಳಲ್ಲಿ ಅವುಗಳಿಂದ ಉಂಟಾಗುವ ಪರಿಣಾಮ/ದುಷ್ಪರಿಣಾಮಗಳ ದೃಷ್ಟಿಯಿಂದ ಯಾವುದು ಸರಿ, ಯಾವುದು ತಪ್ಪು ಎಂದು ನಿಖರವಾಗಿ ನಿರ್ಧರಿಸಲಾಗದೆ ವ್ಯಕ್ತಿ ತಾಕಲಾಟಕ್ಕೆ ಒಳಗಾಗುತ್ತಾನೆ. ಅದುವೇ ಧರ್ಮಸಂಕಟ. ಈ ಕೆಳಗಿನ ಪ್ರಸಂಗಗಳನ್ನು ಗಮನಿಸಿ. ಇಂತಹ ಸಂದರ್ಭಗಳಲ್ಲಿ ನೀವು ಸಿಲುಕಿಕೊಂಡಿದ್ದರೆ ಏನು ಮಾಡುತ್ತಿದ್ದಿರಿ ಆಲೋಚಿಸಿ.
-1-
ಸಮುದ್ರದ ಮೇಲೆ ಹೋಗುತ್ತಿದ್ದ ಒಂದು ಹಡಗು ಇದ್ದಕ್ಕಿದ್ದಂತೆಯೇ ಭೀಕರ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ಮುಳುಗಿಹೋಯಿತು. ಅದರಲ್ಲಿದ್ದ ಪ್ರಯಾಣಿಕರಲ್ಲಿ ಅನೇಕರು ಸತ್ತು ಹೋದರು. ಕೆಲವರು ಹೇಗೋ ಪಾರಾಗಿ ರಕ್ಷಣಾದೋಣಿಯನ್ನು (lifeboat) ಹತ್ತಿ ಕುಳಿತುಕೊಂಡರು. ಆದರೆ ಆ ದೋಣಿಯ ಕ್ಷಮತೆ ಇದ್ದದ್ದು 7 ಜನರಿಗೆ ಮಾತ್ರ. ಆದರೆ ಹತ್ತಿ ಕುಳಿತವರು 30 ಮಂದಿ. ಅಷ್ಟೊಂದು ಜನರೂ ಆ ಬಿರುಗಾಳಿಯಲ್ಲಿ ಸುರಕ್ಷಿತವಾಗಿ ದಡ ಸೇರುವ ಸಾಧ್ಯತೆಗಳು ಇರಲಿಲ್ಲ. ಎಲ್ಲರೂ ಸಾಯುವ ಬದಲು ಕೆಲವರಾದರೂ ಸಮುದ್ರಕ್ಕೆ ಜಿಗಿದು ಪ್ರಾಣಾರ್ಪಣೆ ಮಾಡಿ ಉಳಿದವರನ್ನು ಬದುಕಿಸುವುದು ಒಳ್ಳೆಯದೆಂದು ಕ್ಯಾಪ್ಟನ್ ಸಲಹೆ ಮಾಡಿದ. ಎಲ್ಲರೂ ಕ್ಯಾಪ್ಟನ್ ಸಲಹೆಯನ್ನು ವಿರೋಧಿಸಿದರು. ಹಾಗೆ ಮಾಡಿದರೆ ಕೆಲವರನ್ನು ಕೈಯಾರೆ ಸಮುದ್ರಕ್ಕೆ ತಳ್ಳಿ ಸಾಯಿಸಿದ ಹೊಣೆಗಾರಿಕೆ ಕ್ಯಾಪ್ಟನ್ ಮೇಲೆ ಬೀಳುತ್ತದೆ. ರಕ್ಷಿಸಬೇಕಾದವನೇ ಹೀಗೆ ಮಾಡಿದರೆ ಹೇಗೆ? ಅದರ ಬದಲು ಎಲ್ಲರೂ ಸತ್ತರೆ ಯಾರೊಬ್ಬರ ಮೇಲೂ ಅಪವಾದ ಬರುವುದಿಲ್ಲ ಎಂದು ಕೆಲವರು ವಾದಿಸಿದರು. ಇನ್ನು ಕೆಲವರು ಲಾಟರಿ ಎತ್ತುವ ಮೂಲಕ ಯಾರು ದೋಣಿಯಿಂದ ಹೊರಗೆ ಜಿಗಿಯಬೇಕೆಂದು ನಿರ್ಧರಿಸುವುದು ಒಳ್ಳೆಯದು, ಆಗ ಯಾರ ಮೇಲೂ ಅಪವಾದ ಬರುವುದಿಲ್ಲವೆಂದು ಸೂಚಿಸಿದರು. ಕ್ಯಾಪ್ಟನ್ ಅದಕ್ಕೆ ಒಪ್ಪಲಿಲ್ಲ. ದೋಣಿಯನ್ನು ಹುಟ್ಟು ಹಾಕಿ ಮುನ್ನಡೆಸಲು ಶಕ್ತಿಶಾಲಿಗಳು ಬೇಕು. ಆದಕಾರಣ ಅವರಲ್ಲಿ ದುರ್ಬಲರಾದವರನ್ನು ಗುರುತಿಸಿ ಅಂಥವರನ್ನು ಸಮುದ್ರಕ್ಕೆ ತಳ್ಳಬೇಕೆಂದು ಕ್ಯಾಪ್ಟನ್ ನಿರ್ಧರಿಸಿದ. ಅನೇಕ ದಿನಗಳ ಪರಿಶ್ರಮದಿಂದ ಅಳಿದುಳಿದ ಕೆಲವರು ದಡ ಸೇರಿದರು. ಅವರನ್ನು ಬದುಕಿಸಲು ದುರ್ಬಲರನ್ನು ಸಾಯಿಸುವ ನಿರ್ಧಾರ ತೆಗೆದುಕೊಂಡ ಕ್ಯಾಪ್ಟನ್ ವಿಚಾರಣೆಯನ್ನು ಮಾಡಲು ನ್ಯಾಯಾಲಯಕ್ಕೆ ವಹಿಸಲಾಯಿತು. ನೀವು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದರೆ ಏನು ಮಾಡುತ್ತಿದ್ದಿರಿ? ಕ್ಯಾಪ್ಟನ್‌ಗೆ ಶಿಕ್ಷೆ ವಿಧಿಸುತ್ತಿದ್ದಿರೇ ಅಥವಾ ಬಿಡುಗಡೆ ಮಾಡುತ್ತಿದ್ದಿರೇ?
-2-
ಒಬ್ಬ ಪ್ರಖ್ಯಾತ ಮನೋವೈದ್ಯರು ಇದ್ದರು. ಅವರಲ್ಲಿಗೆ ಚಿಕಿತ್ಸೆಗೆಂದು ಮನೋರೋಗಿಯೊಬ್ಬ ಬಂದ. ವೈದ್ಯರು ನಡೆಸಿದ ಮಂಪರು ಪರೀಕ್ಷೆಯ ಸಂದರ್ಭದಲ್ಲಿ ಅವನು ತಾನು ಪ್ರೀತಿಸಿದ್ದ ಮಹಿಳೆಯ ಹೆಸರು ಮತ್ತು ಆಕೆಯ ವಿಳಾಸವನ್ನು ಹೇಳಿ ಆಕೆಯನ್ನು ಕೊಲೆ ಮಾಡಲು ರೂಪಿಸಿರುವ ಸಂಚಿನ ವಿವರಗಳನ್ನು ನೀಡುತ್ತಾನೆ. ಅವನು ಮನೋರೋಗಿಯಾಗಿ ಹಾಗೆ ಹೇಳುತ್ತಿದ್ದಾನೆಯೇ ಅಥವಾ ಆಸ್ಪತ್ರೆಯಿಂದ ಹಿಂದಿರುಗಿದ ಮೇಲೆ ನಿಜವಾಗಿಯೂ ಕೊಲೆ ಮಾಡುವನೇ ಎಂದು ವೈದ್ಯರಿಗೆ ನಿರ್ಧರಿಸಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ವೈದ್ಯರು ತಮಗೆ ಏನೂ ಗೊತ್ತಿಲ್ಲದಂತೆ ಸುಮ್ಮನಿರಬೇಕೇ ಅಥವಾ ಪೋಲೀಸರಿಗಾಗಲೀ ಅಥವಾ ಆ ಮಹಿಳೆಗಾಗಲೀ ಹುಷಾರಾಗಿರಲು ತಿಳಿಸಬೇಕೇ? ಹಾಗೆ ತಿಳಿಸಿದರೆ ರೋಗಿಯ ಖಾಸಗಿ ವಿಚಾರಗಳನ್ನು ಬಹಿರಂಗಪಡಿಸಬಾರದೆಂಬ ವೈದ್ಯಕೀಯ ನೀತಿಗೆ ವಿರುದ್ಧವಾಗುವುದಿಲ್ಲವೇ? ಒಂದು ಪಕ್ಷ ಮೌನ ತಾಳಲು ನಿರ್ಧರಿಸಿ ನಿಜವಾಗಿಯೂ ಆ ಮಹಿಳೆಯ ಕೊಲೆಯಾದರೆ ವೈದ್ಯರು ವಿಷಯ ಗೊತ್ತಿದ್ದೂ ಅವಳ ಸಾವಿಗೆ ಕಾರಣರಾದಂತೆ ಆಗುವುದಿಲ್ಲವೇ? ನೀವೇ ಆ ವೈದ್ಯರಾಗಿದ್ದರೆ ಏನು ಮಾಡುತ್ತಿದ್ದಿರಿ?
-3-
ಇಬ್ಬರು ಆತ್ಮೀಯ ಸ್ನೇಹಿತರಿದ್ದರು. ಒಬ್ಬ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ನಿರುದ್ಯೋಗಿಯಾಗಿದ್ದ. ನಿರುದ್ಯೋಗಿ ಸ್ನೇಹಿತ ಅದೇ ಕಂಪನಿ ಪತ್ರಿಕೆಯಲ್ಲಿ ಕರೆದಿದ್ದ ಜಾಹಿರಾತನ್ನು ನೋಡಿ ನೌಕರಿಗಾಗಿ ಅರ್ಜಿ ಸಲ್ಲಿಸಿದ. ಆ ಕಂಪನಿಯಲ್ಲಿ ಉನ್ನತಸ್ಥಾನದಲ್ಲಿದ್ದು ನೇಮಕಾತಿ ಮಾಡುವ ಅಧಿಕಾರವನ್ನು ಹೊಂದಿದ್ದ ಸ್ನೇಹಿತ ನೌಕರಿಗಾಗಿ ಬಂದಿದ್ದ ಅರ್ಜಿಗಳನ್ನು ಪರಿಶೀಲಿಸಿದ. ಅವನ ಸ್ನೇಹಿತನಿಗಿಂತ ಹೆಚ್ಚಿನ ಅಂಕ ಮತ್ತು ಅರ್ಹತೆ ಹೊಂದಿದ್ದ ಮತ್ತೊಬ್ಬ ಅಭ್ಯರ್ಥಿ ಇದ್ದ. ತನ್ನ ಆತ್ಮೀಯ ಸ್ನೇಹಿತನಿಗೆ ನೌಕರಿ ಕೊಡಬೇಕೆಂದು ಒಂದು ಮನಸ್ಸು. ಇಂತಹ ವಿಚಾರಗಳಲ್ಲಿ ಸ್ನೇಹ ವಿಶ್ವಾಸಕ್ಕೆ ಕಟ್ಟುಬೀಳದೆ ಅರ್ಹ ಅಭ್ಯರ್ಥಿಗೆ ಕೊಡಬೇಕೆಂದು ಇನ್ನೊಂದು ಮನಸ್ಸು. ಈ ತಾಕಲಾಟದಲ್ಲಿ ಕಷ್ಟದಲ್ಲಿರುವ ತನ್ನ ಸ್ನೇಹಿತನಿಗೆ ನೆರವಾಗದಿದ್ದರೆ ಅದೆಂತಹ ಸ್ನೇಹ ಎಂದು ಯೋಚಿಸಿ ಕೊನೆಗೆ ತನ್ನ ಸ್ನೇಹಿತನಿಗೇ ನೌಕರಿ ಆದೇಶವನ್ನು ನೀಡಿದ. ಇದರಿಂದ ಕಂಪನಿಗೆ ಆತ ಮೋಸ ಮಾಡಿದಂತೆ ಆಗುವುದಿಲ್ಲವೇ? ಹಾಗೆಂದು ಸ್ನೇಹಕ್ಕೆ ಮೋಸ ಮಾಡಬಹುದೇ?
-4-
ಜೈಲಿನಲ್ಲಿದ್ದ ಒಬ್ಬ ಕೈದಿ ಹೇಗೋ ಪಾರಾದ. ಬೇರೆ ಹೆಸರನ್ನು ಇಟ್ಟುಕೊಂಡು ಹೊಸ ಜೀವನ ಆರಂಭಿಸಿದ. ತನ್ನ ಹಳೆಯ ಕಸುಬನ್ನು ಬಿಟ್ಟು ಹೊಸ ಮನುಷ್ಯನಾದ. ಸಮಾಜದಲ್ಲಿ ಒಳ್ಳೆಯ ಹೆಸರು ಮತ್ತು ಉನ್ನತ ಸ್ಥಾನಮಾನಗಳನ್ನು ಗಳಿಸಿ ನಗರದ ಮೇಯರ್ ಆಗಿಯೂ ಸಹ ಆಯ್ಕೆಯಾದ. ಅವನು ಜೈಲಿಗೆ ಹೋಗುವ ಮುನ್ನ ಮಾಡಿದ ದರೋಡೆಯ ಅಪರಾಧಕ್ಕಾಗಿ ಪೊಲೀಸರು ಹುಡುಕುತ್ತಿದ್ದರು. ಒಂದು ಸಣ್ಣ ಅಪರಾಧ ಮಾಡಿದ ಮತ್ತೊಬ್ಬ ಕಳ್ಳ ಅವರ ಕೈಗೆ ಸಿಕ್ಕಿಬಿದ್ದ. ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದ ದರೋಡೆಕೋರನೇ ಅವನೆಂದು ಪೊಲೀಸರು ಭ್ರಮಿಸಿದರು. ತನ್ನನ್ನು ರಕ್ಷಿಸಲು ದೇವರೇ ಈ ರೀತಿ ಮಾಡಿದ್ದಾನೆಂದು ಮೇಯರ್ ಭಾವಿಸಿದ. ತನ್ನ ತಪ್ಪಿಗಾಗಿ ಇನ್ನೊಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂದು ಒಂದು ಮನಸ್ಸು. ಅವನೂ ಸಹ ಕಳ್ಳನೇ ಆಗಿದ್ದರಿಂದ ಶಿಕ್ಷೆಯಾದರೇನಂತೆ ಎಂದು ಇನ್ನೊಂದು ಮನಸ್ಸು. ಈ ತಾಕಲಾಟದಲ್ಲಿ ಮೇಯರ್ ತನ್ನ ಸ್ಥಾನಮಾನಗಳಿಗೆ ಎಷ್ಟೇ ಧಕ್ಕೆ ಬಂದರೂ ಚಿಂತೆಯಿಲ್ಲ ಎಂದು ನಿರ್ಧರಿಸಿ ನ್ಯಾಯಾಲಯಕ್ಕೆ ತಾನೇ ಹಾಜರಾಗಿ ತನ್ನ ತಪ್ಪನ್ನು ಒಪ್ಪಿಕೊಂಡು ಪೋಲೀಸರು ಬಂಧಿಸಿದ್ದ ಕಳ್ಳ ಬಿಡುಗಡೆಯಾಗುವಂತೆ ಮಾಡಿದ. ನ್ಯಾಯಾಲಯವು ಅವನು ಹಿಂದೆ ಮಾಡಿದ ತಪ್ಪಿಗೆ ಶಿಕ್ಷೆಯನ್ನು ವಿಧಿಸಬೇಕೇ ಅಥವಾ ಒಳ್ಳೆಯ ಮನುಷ್ಯನಾಗಿ ಬದಲಾವಣೆಯಾಗಿದ್ದಾನೆಂದು ಕ್ಷಮಿಸಬೇಕೇ?
-5-
ಒಂದು ರೈಲು ಬಹಳ ವೇಗವಾಗಿ ಓಡುತ್ತಿತ್ತು. ರೈಲ್ವೆ ನಿಲ್ದಾಣದಲ್ಲಿ ಅದು ಬರುತ್ತಿದ್ದ ಹಳಿಯ ಮೇಲೆ ಐದಾರು ಜನ ನಿಂತಿದ್ದರು. ಸ್ಟೇಷನ್ ಮಾಸ್ಟರ್ ಅದನ್ನು ಗಮನಿಸಿ ಗಾಬರಿಗೊಂಡ. ಪಕ್ಕದ ಹಳಿಯ ಮೇಲೆ ನಿಲ್ದಾಣದ ಕಾರ್ಮಿಕನೊಬ್ಬ ಕೆಲಸ ಮಾಡುತ್ತಿದ್ದ. ರೈಲು ಬರುತ್ತಿದ್ದ ಹಳಿಯನ್ನು ಬದಲಾಯಿಸುವ ವಿದ್ಯುತ್‌ಗುಂಡಿ ಸ್ಟೇಷನ್ ಮಾಸ್ಟರ್ ಕೈಯಲ್ಲಿತ್ತು. ವಿದ್ಯುತ್‌ಗುಂಡಿಯನ್ನು ಒತ್ತದೇ ಇದ್ದರೆ ಐದು ಜನ ಸಾಯುವುದು ಖಚಿತ. ಗುಂಡಿಯನ್ನು ಒತ್ತಿ ಹಳಿಯನ್ನು ಬದಲಾಯಿಸಿದರೆ ಒಬ್ಬ ಕಾರ್ಮಿಕ ಮಾತ್ರ ಸಾಯುತ್ತಾನೆ. ನೀವು ಸ್ಟೇಷನ್ ಮಾಸ್ಟರ್‌ಗೆ ಏನು ಸಲಹೆ ಕೊಡುತ್ತೀರಿ? ಹೆಚ್ಚು ಸಮಯವಿಲ್ಲ. ಐದು ಜನ ಸಾಯುವ ಬದಲು ಒಬ್ಬ ಸತ್ತರೆ ಪರವಾಗಿಲ್ಲ ಎಂದು ಹಳಿ ಬದಲಾಯಿಸುವಂತೆ ವಿದ್ಯುತ್‌ಗುಂಡಿಯನ್ನು ಒತ್ತಲು ಸ್ಟೇಷನ್‌ಮಾಸ್ಟರ್‌ಗೆ ಹೇಳುತ್ತೀರಾ? ಅಂತರಜಾಲದಲ್ಲಿರುವ ಈ ಕಥೆಗೆ ಓದುಗರಿಂದ ಬಂದ ಪ್ರತಿಕ್ರಿಯೆ:
•ಗುಂಡಿಯನ್ನು ಒತ್ತಿ ಹಳಿಯನ್ನು ಬದಲಾಯಿಸಬಾರದು. ರೈಲ್ವೆ ಹಳಿಯ ಮೇಲೆ ಬೇಜವಾಬ್ದಾರಿಯಿಂದ ನಿಂತ ವ್ಯಕ್ತಿಗಳನ್ನು ಏಕಾದರೂ ರಕ್ಷಿಸಬೇಕು? ಕರ್ತವ್ಯನಿರತ ಕಾರ್ಮಿಕ ಸಂಖ್ಯಾದೃಷ್ಟಿಯಿಂದ ಒಬ್ಬನಾದರೂ ಬದುಕಲು ಅರ್ಹ.
•ಒಬ್ಬನನ್ನು ರಕ್ಷಿಸಲು ಹೋಗಿ ಐದು ಜನರನ್ನು ಸಾಯಿಸಿದಂತೆ ಆಗುತ್ತದೆ. ಐದು ಜನರ ಸಂಸಾರಗಳನ್ನು ಹಾಳುಮಾಡಿದಂತೆ ಆಗುತ್ತದೆ. ಹೆಚ್ಚಿನ ಅನಾಹುತವನ್ನು ತಪ್ಪಿಸುವುದು ಒಳ್ಳೆಯದು.
•ಹಳಿ ಬದಲಾಯಿಸಿದರೆ ಉದ್ದೇಶಪೂರ್ವಕವಾಗಿ ಕೊಂದಂತೆ ಆಗುತ್ತದೆ.
-6-
ಇದೊಂದು ಸತ್ಯಕಥೆ. ಇಟಲಿಯಲ್ಲಿ ಒಬ್ಬ ಯುವ ಮಹಿಳೆ ಇದ್ದಳು. ಗರ್ಭಿಣಿಯಾದ ಕೆಲವೇ ದಿನಗಳಲ್ಲಿ ಆಕೆ ತಪಾಸಣೆಗೆಂದು ಆಸ್ಪತ್ರೆಗೆ ಹೋದಳು. ತಪಾಸಣೆ ಮಾಡಿದ ವೈದ್ಯರು ಆಕೆಗೆ ಕ್ಯಾನ್ಸರ್ ರೋಗ ಇದೆಯೆಂದು ಪತ್ತೆ ಹಚ್ಚಿದರು. ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಗರ್ಭಪಾತ ಮಾಡಿಸಿಕೊಳ್ಳಬೇಕೆಂದು ವೈದ್ಯರು ಸಲಹೆ ಮಾಡಿದರು. ಇಲ್ಲದಿದ್ದರೆ ಅವಳು ಸಾಯುತ್ತಾಳೆಂದು ಎಚ್ಚರಿಸಿದರು. ತಾಯಿ ಮತ್ತು ಮಗು ಈ ಇಬ್ಬರಲ್ಲಿ ಯಾರಾದರೊಬ್ಬರು ಉಳಿಯಲು ಮಾತ್ರ ಸಾಧ್ಯವಿತ್ತು. ಪತಿಯು ತನ್ನ ಪತ್ನಿಯನ್ನು ಉಳಿಸಿಕೊಳ್ಳಬೇಕೆಂದು ಬಯಸಿದ. ಆದರೆ ತನ್ನ ಒಡಲೊಳಗೆ ಇರುವ ಮಗುವನ್ನು ತಾನೇ ಕೈಯಾರೆ ಕೊಂದು ಬದುಕಿ ಉಳಿಯಲು ಆ ಮಹಿಳೆ ಇಷ್ಟಪಡಲಿಲ್ಲ. ಈ ಧರ್ಮಸಂಕಟದಲ್ಲಿ ಗಟ್ಟಿ ಮನಸ್ಸು ಮಾಡಿ ಕ್ಯಾನ್ಸರ್ ಚಿಕಿತ್ಸೆಯನ್ನೇ ನಿರಾಕರಿಸಿದಳು. ಮಗುವಿಗೆ ಜನ್ಮ ನೀಡಿದ ಮಾರನೆಯ ದಿನವೇ ಆ ತಾಯಿ ತೀರಿಕೊಂಡಳು!
ಸಹೃದಯ ಓದುಗರೇ! ಇಂತಹ ಕಠಿಣ ಸಂದರ್ಭಗಳಲ್ಲಿ ಯಾರು ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ತೀರ್ಪು ನೀಡುವುದೇ ನಿಮಗೆ ಒಂದು ಧರ್ಮಸಂಕಟ ಎನಿಸುವುದಿಲ್ಲವೇ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 30.12.2010.