ಬಾಳ ಪಯಣದಲ್ಲಿ ಇರಬೇಕಾದ ಒಳ ಎಚ್ಚರ

  •  
  •  
  •  
  •  
  •    Views  

ಪ್ರಪಂಚದಲ್ಲಿ ದಿನನಿತ್ಯ ಲೆಕ್ಕವಿಲ್ಲದಷ್ಟು ಜನ ದೂರ ದೂರದ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಒಂದು ಕಾಲದಲ್ಲಿ ವಿಮಾನ ಪ್ರಯಾಣ ಶ್ರೀಮಂತ ವರ್ಗದವರಿಗೆ ಮಾತ್ರ ಮೀಸಲಾಗಿತ್ತು. ಈಗ ಕರ್ನಾಟಕ ಸರ್ಕಾರದ ಕೃಪಾಕಟಾಕ್ಷದಿಂದ ನಮ್ಮ ರೈತರು ಚೀನಾಪ್ರವಾಸಕ್ಕೆ ಹೊರಟು ನಿಂತಮೇಲಂತೂ ವಿಮಾನ ನಿಲ್ದಾಣಗಳು ರೈಲ್ವೆನಿಲ್ದಾಣಗಳಂತೆ ಕಿಕ್ಕಿರಿದು ತುಂಬಿರುತ್ತವೆ. ನಮ್ಮ ಬಾಲ್ಯದಲ್ಲಿ ಕಂಡಂತೆ ಮೊದಲೆಲ್ಲಾ ಬಸ್ನಿಲ್ದಾಣಗಳಲ್ಲಿ ಬಸ್ಸು ಹೊರಡುವಾಗ ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ ಎಂದು ಕೂಗುತ್ತಿದ್ದರೆ ಈಗ ವಿಮಾನನಿಲ್ದಾಣಗಳಲ್ಲಿ ವಿಮಾನ ಹೊರಡುವ ಮುನ್ನ ಬೋರ್ಡಿಂಗ್ ಲಾಂಜ್ನಲ್ಲಿ ಚೆನೈ, ಮುಂಬೈ, ಡೆಲ್ಲಿ, ದುಬೈ, ಸಿಂಗಪೂರ್ ಎಂದು ಕೂಗುವುದು ಕೇಳಿಸುತ್ತದೆ. ಒಂದು ವರ್ಷದ ಅವಧಿಯಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವ ಜನರ ಒಟ್ಟು ಸಂಖ್ಯೆ 1.09 ಬಿಲಿಯನ್ ಅಂದರೆ ಒಂದು ನೂರು ಕೋಟಿಗೂ ಹೆಚ್ಚು ಎಂದು ಅಂದಾಜು ಮಾಡಲಾಗಿದೆ. ವಿಶ್ವಾದ್ಯಂತ ಸಾವಿರಾರು ವಿಮಾನಗಳು ಹಕ್ಕಿಗಳಂತೆ ಆಗಸಕ್ಕೆ ಹಾರಿ ಗಂಟೆಗಟ್ಟಲೆ ವಿಹರಿಸಿ ಖಂಡಖಂಡಾಂತರಗಳನ್ನು ದಾಟಿ ಕೆಳಗಿಳಿಯುತ್ತಿವೆ. ಈ ಲೇಖನವನ್ನು ಬರೆದು ಕಳುಹಿಸುವ ಮುನ್ನ ಅಂತರಜಾಲವನ್ನು ಜಾಲಾಡಿದಾಗ ದೊರೆತ ಮಾಹಿತಿಯೆಂದರೆ ಆಕಾಶದಲ್ಲಿ ಈಗ 4,241 ವಿಮಾನಗಳು ಹಾರಾಡುತ್ತಿವೆ, ಕಳೆದ 24 ಗಂಟೆಗಳಲ್ಲಿ 36,483 ವಿಮಾನಗಳು ವಿಮಾನನಿಲ್ದಾಣಗಳಿಗೆ ಬಂದಿಳಿದಿವೆ.

ಜನರ ಓಡಾಟ ವರ್ಷ ವರ್ಷಕ್ಕೂ ಹೆಚ್ಚುತ್ತಿದೆ. ಚೆನ್ನೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಅರ್ಧ ಗಂಟೆಯೊಳಗೆ ಬಂದಿಳಿದರೆ ಬೆಂಗಳೂರಿನಲ್ಲಿ ವಾಸಿಸುವ ಬಡಾವಣೆಗೆ ಹೋಗಲು ಒಂದು ಗಂಟೆಗೂ ಹೆಚ್ಚು ಕಾಲ ಬೇಕು. ಅಷ್ಟೊಂದು ದಟ್ಟವಾದ ವಾಹನಗಳ ಸಂಚಾರ ಪೇಟೆಪಟ್ಟಣಗಳಲ್ಲಿ ಕಂಡುಬರುತ್ತಿದೆ. ಎಲ್ಲರೂ Traffic Jam ಎಂದು ಗೊಣಗುತ್ತಾರೆ. ಆದರೆ ಆ Traffic Jam ನಲ್ಲಿ ತಮ್ಮ ವಾಹನದ ಪಾತ್ರವೂ ಇದೆ ಎಂಬುದನ್ನು ಯಾರೂ ಮನಗಾಣುವುದಿಲ್ಲ, Traffic light ಹತ್ತಿರ ನಿಂತ ನೂರಾರು ವಾಹನಗಳು ಸ್ಪರ್ಧೆಗೆ ನಿಂತ ಜೂಜಾಟದ ಕುದುರೆ (race horse) ಗಳಂತೆ ತುದಿಗಾಲ ಮೇಲೆ ನಿಂತು ಹೂಂಕರಿಸುತ್ತಿರುತ್ತವೆ. ಯಾರಿಗೂ ಕಾಯಲು ಪುರಸೊತ್ತು ಇಲ್ಲ, ಎಲ್ಲರಿಗೂ ಬೇಗ ಮುಟ್ಟಬೇಕೆಂಬ ಅವಸರ. ಈ ಅವಸರವನ್ನು rat race ಎಂದು ಕರೆಯುವುದು ವಾಡಿಕೆ. ಬಹಳ ಹಳೆಯ ಕಾಲದಿಂದ ಬಳಕೆಯಲ್ಲಿರುವ ಈ ಶಬ್ದ ಗಣಕಯಂತ್ರ ಬಂದ ಮೇಲೆ outdated ಎನಿಸುತ್ತಿದೆ. ಇನ್ನು ಮುಂದೆ rat race ಎನ್ನುವ ಬದಲು mouse catch ಎನ್ನುವುದು ಸಮುಚಿತವೆಂದು ತೋರುತ್ತದೆ. ಹಳ್ಳಿಗಳಲ್ಲಿ ರೈತರ ಮನೆಯ ಮೂಲೆಯ ಗೋಡೆಗಳಲ್ಲಿ, ದವಸ-ಧಾನ್ಯಗಳನ್ನು ಸಂಗ್ರಹಿಸಿಟ್ಟ ಚೀಲಗಳ ಮಧ್ಯೆ ಇಲಿಗಳು ಹರಿದಾಡಿದರೆ ಈಗ ಪೇಟೆಪಟ್ಟಣಗಳಲ್ಲಿ ಪ್ರತಿಯೊಂದು ಮನೆ ಮತ್ತು ಆಫೀಸುಗಳಲ್ಲಿಯೂ ಇಲಿಗಳು ರಾಜಾರೋಷವಾಗಿ ಟೇಬಲ್ಗಳ ಮೇಲೆಯೇ ಹರಿದಾಡುತ್ತಿವೆ! ಅವು ಯಾವ ಇಲಿಗಳೆಂದು ನಿಮಗೆ ಈ ವೇಳೆಗೆ ಅರ್ಥವಾಗಿರಬಹುದು. ಅಂತರ್ಜಾಲ ಈಮೇಲ್ ನೋಡುವ ಪ್ರತಿಯೊಬ್ಬ ನವನಾಗರೀಕರಿಗೂ ಈ ಇಲಿ (mouse) ಏನೆಂಬುದು ಗೊತ್ತು. ವಿಘ್ನನಿವಾರಕ ಗಣೇಶನ ವಾಹನವಾದ ಇಲಿ ಈಗ ಸಾಫ್ಟ್ವೇರ್ ಇಂಜಿನಿಯರಾದ ನಮ್ಮ ನವ ಯುವಕ/ಯುವತಿಯರ ಕೈಯಲ್ಲಿ! ಆದರೆ ಅವರ ಕೈಯಲ್ಲಿ ಇಲಿಗಳು ಇವೆಯೋ ಇಲಿಗಳ ಕೈಯಲ್ಲಿ ಅವರು ಇದ್ದಾರೆ ಎಂಬುದೇ ಆಧುನಿಕ ಯಕ್ಷಪ್ರಶ್ನೆ!

ಗಣಕಯಂತ್ರಕ್ಕೆ ಅಳವಡಿಸಿರುವ ಈ ಚಿಕ್ಕ ಉಪಕರಣಕ್ಕೆ ವಿಜ್ಞಾನಿಗಳು ಏಕೆ mouse ಎಂದು ಹೆಸರಿಟ್ಟರೆಂಬ ಪ್ರಶ್ನೆ ನಮ್ಮನ್ನು ಅನೇಕ ವರ್ಷಗಳಿಂದ ಕಾಡಿತ್ತು. ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿರಲಿಲ್ಲ. ಈಗ ವಿಚಾರಮಾಡಿದಾಗ ತಿಳಿದುಬಂದ ಸಂಗತಿಯೆಂದರೆ ಇದನ್ನು ಕಂಡುಹಿಡಿದವನು ಅಮೇರಿಕಾದ ಸ್ಟ್ಯಾನ್ಫೋರ್ಡ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾದ Douglas Engelbart, 1964 ರಲ್ಲಿ ಅವನು ಈ ಉಪಕರಣವನ್ನು ಕಂಡುಹಿಡಿದಾಗ ಅದಕ್ಕೆ ಅಳವಡಿಸಿದ ವಿದ್ಯುದ್ವಾಹಕ ತಂತಿ (wire) ಈಗಿನಂತೆ ಮುಂಭಾಗದಲ್ಲಿ ಇರಲಿಲ್ಲ, ಇಲಿಯ ಬಾಲದಂತೆ ಹಿಂಭಾಗದಲ್ಲಿತ್ತು! ಇದರಲ್ಲಿರುವ ಎರಡು ಬಟನ್ಗಳನ್ನು ಇಲಿಯ ಕಿವಿಗಳಿಗೆ ವಿಜ್ಞಾನಿಗಳು ಹೋಲಿಸುತ್ತಾರೆ. ಹಿಂಭಾಗದಲ್ಲಿದ್ದ ತಂತಿಯನ್ನು ಮುಂಭಾಗಕ್ಕೆ ಅಳವಡಿಸುವುದು ಹೆಚ್ಚು ಅನುಕೂಲಕರವೆಂದು ತಿಳಿದು ಬಂದು ಕ್ರಮೇಣ ಬದಲಾವಣೆ ಮಾಡಿದರೂ ಬಾಲ ಕಳೆದುಕೊಂಡ ಈ ಉಪಕರಣಕ್ಕೆ mouse ಎಂಬ ಜನ್ಮನಾಮವೇ ಮುಂದುವರಿಯಿತು. ಜೀವ ವಿಜ್ಞಾನಿಗಳು ಎಷ್ಟೇ ಪ್ರಯೋಗ ಮಾಡಿದರೂ ಜೀವಂತ ಇಲಿಗಳ ಸ್ವರೂಪದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಈ ನಿರ್ಜೀವ ಇಲಿಗಳ ಬಾಹ್ಯ ಸ್ವರೂಪ ಕಾಲಕಾಲಕ್ಕೆ ಬದಲಾವಣೆಯಾಗುತ್ತಾ ಬಂದಿರುತ್ತದೆ. ಮೇಲೆ ಆಂಗ್ಲ ಭಾಷೆಯ ಮಿಸ್‌  mouse ಎಂಬ ಶಬ್ದದ ಬಹುವಚನ ರೂಪ ಕೇಳಿದರೆ ನರ್ಸರಿ ಮಕ್ಕಳು mice ಎಂದೇ ಹೇಳಬೇಕು. ಆದರೆ ವಿಜ್ಞಾನದಲ್ಲಿ mouses ಎಂದು ಬಳಕೆಯಲ್ಲಿದೆ. ಬಹುವಚನದಲ್ಲಿ mouses ಎನ್ನುವುದಕ್ಕಿಂತ mouse devices ಎನ್ನುವುದು ಒಳ್ಳೆಯದೆಂದು ಮೈಕ್ರೋಸಾಫ್ಟ್ ಕಂಪನಿ ಹೇಳುತ್ತದೆ.

ವಿಚಾರ ಎಲ್ಲಿಂದ ಎಲ್ಲಿಗೋ ಹೋಯಿತು. ಇಷ್ಟೆಲ್ಲಾ ವಿಜ್ಞಾನ ಸಾಧನೆ ಮಾಡಿದ ಮನುಷ್ಯನ ಮನಸ್ಸು ಅಂತರಂಗದಲ್ಲಿ ಹೇಗಿದೆ? ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಿಮ್ಮ ಸ್ವಂತ ವಾಹನದಲ್ಲಿ ಹೋಗಲು ಎರಡು ರಸ್ತೆಗಳಿವೆ ಎಂದಿಟ್ಟುಕೊಳ್ಳಿ, ಅವುಗಳಲ್ಲಿ ಒಂದು ಸಮತಟ್ಟಾದ ಒಳ್ಳೆಯ ಟಾರ್ ರಸ್ತೆ ಮತ್ತೊಂದು ತಗ್ಗು ದಿಣ್ಣೆಗಳಿಂದ ಕೂಡಿದ ತೀರಾ ಕೆಟ್ಟ ರಸ್ತೆ, ನೀವು ಹೋಗಬೇಕೆಂದಿರುವ ಸ್ಥಳಕ್ಕೆ ತಗ್ಗು ದಿಣ್ಣೆಗಳಿಂದ ಕೂಡಿದ ರಸ್ತೆಗಿಂತ ಟಾರ್ ರಸ್ತೆ ಸ್ವಲ್ಪ ದೂರ. ಹಾಗಾದರೆ ಯಾವುದರಲ್ಲಿ ನೀವು ಹೋಗಲು ಬಯಸುತ್ತೀರಿ? ಸ್ವಲ್ಪ ದೂರವಾದರೂ ಪರವಾಗಿಲ್ಲ, ಒಳ್ಳೆಯ ಟಾರ್ ರಸ್ತೆಯಲ್ಲಿಯೇ ಹೋಗುವುದೆಂದು ನಿರ್ಧರಿಸುತ್ತೀರಲ್ಲವೇ? ನಿಮ್ಮ ಆ ನಿರ್ಧಾರಕ್ಕೆ ಕಾರಣ ಒಳ್ಳೆಯ ದಾರಿ ಪ್ರಯಾಣ ಮಾಡಲು ಸುಖಕರ. ತಗ್ಗು ದಿಣ್ಣೆಗಳ ರಸ್ತೆ ಆಯಾಸವನ್ನುಂಟುಮಾಡುತ್ತದೆ. ಅಷ್ಟೇ ಅಲ್ಲ ಸ್ವಂತ ವಾಹನವನ್ನೂ ಹಾಳು ಮಾಡುತ್ತದೆ. ಹೀಗೆ ವಿಚಾರಮಾಡಬಲ್ಲ ಬುದ್ಧಿಶಕ್ತಿ ಮನುಷ್ಯನಿಗಿದ್ದರೂ ಬದುಕಿನ ದಾರಿಯನ್ನು ಕಂಡುಕೊಳ್ಳುವಾಗ ಎಡವುತ್ತಾನೆ. ಮನುಷ್ಯನ ಮನಸ್ಸು ದೇವರಂತೆಯೇ ಜಗದಗಲ, ಮುಗಿಲಗಲ. ಅದರ ಉದ್ದ-ಅಗಲ-ಆಳಗಳನ್ನು ಅಳೆಯಲು ಬರುವುದಿಲ್ಲ. ಪ್ರಪಂಚದಲ್ಲಿ ಏನನ್ನಾದರೂ ಕ್ಷಣಾರ್ಧದಲ್ಲಿ ಮುಟ್ಟಿಬರಬಲ್ಲುದು.

ಗಣಕಯಂತ್ರ ಬಲ್ಲವರಿಗೆ ಮೈಕ್ರೋಸಾಫ್ಟ್ ಕಂಪನಿ ತಯಾರಿಸಿದ Excel ಎಂಬ ತಂತ್ರಾಂಶದ ಪರಿಚಯವಿರುತ್ತದೆ. ಆದರೆ ಸಾಮಾನ್ಯ ಹೆಸರು SpreadSheet. ಅದನ್ನು ಮಾಮೂಲಾಗಿ (by default) ಸುಮಾರು 358 x 5.6 ಮೀಟರ್ ಉದ್ದಗಲವುಳ್ಳ ಬೃಹದಾಕಾರದ ಗ್ರಾಫಿಕ್ ಹಾಳೆ ಎನ್ನಬಹುದು (ಇದು ನೀವು ಆಯ್ಕೆಮಾಡಿಕೊಂಡ ಅಕ್ಷರಗಳ ವಿನ್ಯಾಸ ಮತ್ತು ಗಾತ್ರವನ್ನು ಅವಲಂಬಿಸಿರುತ್ತದೆ). ಅದರಲ್ಲಿ ಮೇಲಿನಿಂದ ಕೆಳಕ್ಕೆ 65,536 ಸಾಲುಗಳಿವೆ, ಎಡದಿಂದ ಬಲಕ್ಕೆ A, B, C, D …. AA, AB, AC, AD….. ಎಂದು 256 ಕಾಲಂಗಳು ಇವೆ. ಒಂದೊಂದು ಸಾಲು ಅಥವಾ ಕಾಲಂಗಳನ್ನು ಒಂದು ಮಿತಿಯೊಳಗೆ ನಿಮಗೆ ಬೇಕಾದ ಅಳತೆಗೆ ಹಿಗ್ಗಿಸಬಹುದು ಅಥವಾ ಕುಗ್ಗಿಸಬಹುದು. ಗರಿಷ್ಠ ಮಿತಿಯವರೆಗೆ ಹಿಗ್ಗಿಸಿದರೆ ಆಗ ನಿಮ್ಮ ಗಣಕಯಂತ್ರದಲ್ಲಿರುವ ಗ್ರಾಫಿಕ್ ಹಾಳೆಯ ಉದ್ದಗಲ ಅಂದಾಜು 9 x 1.7 ಕಿಲೋ ಮೀಟರ್ ಆಗುತ್ತದೆ. ನೀವು ಮೊದಲನೆಯ ಸಾಲಿನಿಂದ 65,536 ನೆಯ ಸಾಲಿಗೆ ಹೋಗಬೇಕಾದರೆ ಅಂದರೆ 9 ಕಿ.ಮೀ ಕ್ರಮಿಸಬೇಕೆಂದರೆ ಗಣಕಯಂತ್ರದ ಕೀಲಿಮಣೆಯಲ್ಲಿ (keyboard) ಇರುವ ಕಂಟ್ರೋಲ್ ಕೀ (Ctrl) ಮತ್ತು ಕೆಳಗಿನ ಬಾಣದ ಗುರುತಿನ  ಕೀಗಳನ್ನು ಒಟ್ಟಿಗೆ ಒತ್ತಿದರೆ ಸಾಕು ಮಿಲಿಸೆಕೆಂಡಿನಲ್ಲಿ  ನೀವು ಕೊನೆಯ ಸಾಲನ್ನು ಮುಟ್ಟುತ್ತೀರಿ. ಅದೇ ರೀತಿ ಕಂಟ್ರೋಲ್ ಕೀ (Ctrl) ಮತ್ತು ಬಲಗಡೆಯ ಬಾಣದ ಗುರುತು ಇರುವ (right arrow) ಕೀಗಳನ್ನು ಒಟ್ಟಿಗೆ ಒತ್ತಿದರೆ ಮೊದನೆಯ ಕಾಲಂನಿಂದ ಕೊನೆಯ ಕಾಲಂಗೆ ಮಿಲಿಸೆಕೆಂಡಿನಲ್ಲಿ ತಲುಪುತ್ತೀರಿ. ಕೇವಲ ಕೆಳಭಾಗದ/ಬಲಭಾಗದ ಬಾಣದ ಗುರುತಿನ ಕೀಗಳನ್ನು ಒತ್ತಿದರೆ ಒಂದೊಂದು ಸಾಲು/ಕಾಲಂಗಳನ್ನು ಮಾತ್ರ ಮುಟ್ಟಲು ಸಾಧ್ಯ. ಕೊನೆಯ ಸಾಲು/ಕಾಲಂ ಮುಟ್ಟಲು ಬಾಣದ ಗುರುತಿನ ಕೀ ಜೊತೆಗೆ ಕಂಟ್ರೋಲ್ ಕೀಯನ್ನು ಒತ್ತಬೇಕಾಗುತ್ತದೆ. ಹಾಗೇನೆ ಜೀವನದಲ್ಲಿ ನಿಮ್ಮ ಗೊತ್ತುಗುರಿಗಳನ್ನು ಮುಟ್ಟಬೇಕೆಂದರೆ ನಿಮ್ಮ ಮನಸ್ಸಿನ ಮೇಲೆ ನಿಮಗೆ ಹಿಡಿತ (control) ಇದ್ದರೆ ಮಾತ್ರ ಸಾಧ್ಯ. ಇದನ್ನೇ ಪತಂಜಲಿ ಮಹರ್ಷಿಗಳು ತಮ್ಮ ಯೋಗಸೂತ್ರದ ಆರಂಭದಲ್ಲಿ “ಯೋಗಃ ಚಿತ್ತವೃತ್ತಿನಿರೋಧಃ” ಎಂದು ಹೇಳುತ್ತಾರೆ. ಮನಸ್ಸಿನಲ್ಲಿ ಆವಿರ್ಭವಿಸುವ ಆಲೋಚನೆಗಳನ್ನು ನಿಯಂತ್ರಿಸುವುದೇ ಯೋಗ ಎಂದು ಇದರ ಅರ್ಥ. ಯೋಗಃ ಕರ್ಮಸು ಕೌಶಲಂ ಎಂದು ಭಗವದ್ಗೀತೆ ಹೇಳುತ್ತದೆ. ತಾನು ಮಾಡುವ ಕೆಲಸದಲ್ಲಿರುವ ಕೌಶಲವೇ ಯೋಗ ಎಂದು ಇದರ ತಾತ್ಪರ್ಯ. ಹಾಗೆಂದರೆ ತಾನು ಮಾಡುವ ಕೆಲಸದಲ್ಲಿ ತನಗಿರುವ ಪ್ರಾವೀಣ್ಯತೆ (expertise) ಎಂದರ್ಥವಲ್ಲ, ಯಾವುದೇ ಕೆಲಸವನ್ನು ಮಾಡುವಾಗ ತನ್ನ ಮನಃಸ್ಥಿತಿ ಹೇಗಿರಬೇಕೆಂಬ ನಿರೀಕ್ಷೆ, ತಾನು ಕೈಗೊಂಡ ಕೆಲಸವನ್ನು ಹೇಗೆ ಮಾಡಬೇಕೆಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ಬಸವಣ್ಣನವರು ಕೆಳಗಿನ ವಚನದಲ್ಲಿ ತಿಳಿಹೇಳಿದ್ದಾರೆ.

ಮಾಡುವಂತಿರಬೇಕು, ಮಾಡದಂತಿರಬೇಕು 
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು!
ಭಗವದ್ಗೀತೆಯ ಆಶಯವಾಗಲೀ ಬಸವಣ್ಣನವರ ಆಶಯವಾಗಲೀ ಈ ವಿಚಾರದಲ್ಲಿ ಒಂದೇ. ತಾನು ಕೈಗೊಂಡ ಕೆಲಸವನ್ನು ತನ್ಮಯತೆಯಿಂದ, ನಿರ್ಮೋಹ ಭಾವದಿಂದ ಮಾಡಬೇಕೆಂಬುದೇ ಅದಾಗಿದೆ.

ಇಂತಹ ಅನೇಕ ಒಳ್ಳೆಯ ವಿಚಾರಗಳು ನಮ್ಮ ಪರಂಪರೆಯಲ್ಲಿ ಇದ್ದರೂ ವ್ಯಕ್ತಿಗತ ಜೀವನದ ವಿಚಾರ ಬಂದಾಗ ಆದರ್ಶವೇ ಬೇರೆ, ವ್ಯವಹಾರವೇ ಬೇರೆ ಆಗಿ ಪರಿಣಮಿಸುತ್ತವೆ. ನಮ್ಮ ದೇಶದ ರೈಲುಗಳಲ್ಲಿ ಪ್ರಯಾಣ ಮಾಡುವವರಿಗೆ ತಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುವ ಅವಸರದಲ್ಲಿ ರೈಲ್ವೆ ಬೋಗಿಗಳಲ್ಲಿ ಬರೆಸಿದ “Less Luggage, more Comfort” ಎಂಬ ನುಡಿಗಟ್ಟು ಎದುರಿಗೆ ಇದ್ದರೂ ಕಾಣಿಸುವುದೇ ಇಲ್ಲ. ರೈಲ್ವೆ ಇಲಾಖೆಯ ಈ ಧಾರಾಳವಾದ ಉಪದೇಶದಿಂದ ನಮ್ಮವರು ಬದಲಾಗುವುದಿಲ್ಲ. ಅವರ ಹೊರೆಯನ್ನು ಇಳಿಸಬೇಕೆಂದರೆ ವಿಮಾನ ಯಾನದ Check-in Counter ನಲ್ಲಿ “More than 20 Kgs NOT allowed” ಎಂಬ ಧೋರಣೆಯೇ ಸರಿ ಏನೋ ಎನಿಸುತ್ತದೆ. ಮನುಷ್ಯನ ಜೀವನ ಒಂದು ಅಪರೂಪವಾದ ಪಯಣ. ಒಂದು ವ್ಯತ್ಯಾಸವೆಂದರೆ ಬಸ್ಸು, ರೈಲು, ವಿಮಾನಗಳಲ್ಲಿ ಪ್ರಯಾಣಿಸುವಾಗ ಎಲ್ಲಿಂದ ಎಲ್ಲಿಗೆ ಹೋಗಿ ತಲುಪಬೇಕೆಂಬ ನಿರ್ದಿಷ್ಟ ಗುರಿ ಇರುತ್ತದೆ. ಆದರೆ ಜೀವನದಲ್ಲಿ ಹಾಗಲ್ಲ, ಹೊರಟಿದ್ದು ಎಲ್ಲಿಂದ, ಮುಟ್ಟುವುದು ಎಲ್ಲಿಗೆ ಎರಡೂ ಗೊತ್ತಿಲ್ಲ. ಆದರೂ ಅದರ ಪರಿವೆಯಿಲ್ಲದೆ ಮನುಷ್ಯನು ಆಸೆ-ಆಕಾಂಕ್ಷೆಗಳ, ದುಃಖ-ದುಮ್ಮಾನಗಳ ದೊಡ್ಡ ಹೊರೆಯನ್ನು ಹೊತ್ತುಕೊಂಡು ಸಾಂಸಾರಿಕ ಜೀವನದಲ್ಲಿ ಮೈಮರೆತು ಪಯಣಿಸುತ್ತಾನೆ. ನಲವತ್ತು ವರ್ಷಗಳ ಹಿಂದೆ ಕಾಶಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಲ್ಲಿಯೋ ಓದಿದ್ದ ಕೆಳಗಿನ ಕಥಾನಕ ತುಂಬಾ ಮನನೀಯವಾಗಿದೆ:

ದಾರಿಹೋಕನೊಬ್ಬ ದಾರಿತಪ್ಪಿ ಕಾಡು ಸೇರಿದ. ಏನೋ ಶಬ್ದವಾಗಿ ಹಿಂತಿರುಗಿ ನೋಡಿದರೆ ಮದಿಸಿದ ಕಾಡಾನೆಯೊಂದು ಅವನ ಹಿಂದೆ ಬೆನ್ನಟ್ಟಿ ಬರುತ್ತಿತ್ತು. ದಾರಿಹೋಕ ಕಾಲ್ಕಿತ್ತ, ಕಾಡಾನೆ ಹತ್ತಿರ ಹತ್ತಿರ ಬರುತ್ತಿದ್ದಂತೆಯೇ ಅವನು ಗಾಬರಿಗೊಂಡು ಹತ್ತಿರದಲ್ಲಿಯೇ ಕಾಣಿಸಿದ ಹಾಳು ಬಾವಿಯ ಕಟ್ಟೆಯನ್ನೇರಿ ಮೇಲಿನಿಂದ ಇಳಿಬಿದ್ದಿದ್ದ ಆಲದ ಮರದ ಬಿಳಲುಗಳನ್ನು ಹಿಡಿದುಕೊಂಡು ಮೇಲೇರಿದ. ಬೆನ್ನಟ್ಟಿ ಬಂದ ಆನೆ ಮರದಡಿಯಲ್ಲಿಯೇ ಕುಳಿತುಬಿಟ್ಟಿತು. ಆನೆ ಮುಂದೆ ಹೋದ ಮೇಲೆ ಇಳಿದುಹೋಗಬೇಕೆಂಬ ಅವನ ಎಣಿಕೆ ಫಲಿಸಲಿಲ್ಲ. ಮೇಲೆ ನೋಡಿದರೆ ಆ ದಾರಿಹೋಕ ಹಿಡಿದುಕೊಂಡಿದ್ದ ಬಿಳಲುಗಳನ್ನು ಎರಡು ಇಲಿಗಳು ಕತ್ತರಿಸುತ್ತಿದ್ದವು. ಅವುಗಳಲ್ಲಿ ಒಂದು ಕಪ್ಪು ಇಲಿ ಮತ್ತೊಂದು ಬಿಳಿ ಇಲಿ, ದಾರಿಹೋಕ ಮತ್ತಷ್ಟೂ ಗಾಬರಿಗೊಂಡ. ಈ ಮಧ್ಯೆ ಅವನು ಹಿಡಿದುಕೊಂಡಿದ್ದ ಬಿಳಿಲುಗಳ ಮೇಲೆ ಒಂದು ಜೇನುಗೂಡು ಕಟ್ಟಿತ್ತು. ಬಿಳಿಲುಗಳನ್ನು ಹಿಡಿದು ಜೋತು ಬಿದ್ದಿದ್ದ ಆ ದಾರಿಹೋಕನನ್ನು ನೋಡಿ ಜೇನುಗಳು ಸಿಟ್ಟಿಗೆದ್ದು ಕಚ್ಚತೊಡಗಿದವು. ದಾರಿಹೋಕನಿಗೆ ಹಾಗೆಯೇ ಇರುವುದೂ ಕಷ್ಟವಾಯಿತು. ಕೆಳಗೆ ನೋಡಿದರೆ ಹಾಳು ಬಾವಿಯಲ್ಲಿ ಕಾಳಿಂಗ ಸರ್ಪ ಬುಸುಗುಟ್ಟುತ್ತಿತ್ತು. ದಾರಿಹೋಕ ದಿಕ್ಕುಗಾಣದೆ ಕಣ್ಣುಮುಚ್ಚಿ ಅಳತೊಡಗಿದ. ಈ ಮಧ್ಯೆ ಜೇನುಗೂಡಿನಿಂದ ಜೇನುತುಪ್ಪ ಜಿನುಗಿ ಒಂದೊಂದೇ ತೊಟ್ಟು ಆ ದಾರಿಹೋಕನ ಬಾಯಲ್ಲಿ ಬೀಳತೊಡಗಿತು. ಬಾಯಲ್ಲಿ ಜೇನುತುಪ್ಪ ಬಿದ್ದೊಡನೆಯೇ ಆ ದಾರಿಹೋಕ ಅಲ್ಲಿಂದ ಹೇಗೆ ಪಾರಾಗಬೇಕೆಂಬ ಬಗೆಯನ್ನು ಯೋಚಿಸದೆ ಮೈಮರೆತು ಜೇನುತುಪ್ಪವನ್ನು ಆಹಾ! ಎಷ್ಟು ರುಚಿಯಾಗಿದೆ ಎಂದು ಆಸ್ವಾದಿಸತೊಡಗಿದನಂತೆ! ಇಲ್ಲಿ ಪ್ರತಿಯೊಂದಕ್ಕೂ ಸಾಂಕೇತಿಕ ಅರ್ಥವಿದೆ. ದಾರಿಹೋಕನನ್ನು ಬೆನ್ನಟ್ಟಿಕೊಂಡು ಬಂದ ಕಾಡಾನೆ ಬೇರೆ ಏನೂ ಅಲ್ಲ. ಮನುಷ್ಯನನ್ನು ಸದಾ ಬೆನ್ನಟ್ಟಿ ಬರುವ ಸಾವು! ಕಾಳಿಂಗ ಸರ್ಪವಿದ್ದ ಹಾಳು ಬಾವಿಯೇ ಮೃತ್ಯುಕೂಪ (Death trap). ದಾರಿಹೋಕ ಹಿಡಿದುಕೊಂಡಿದ್ದ ಬಿಳಿಲುಗಳು ಅವನ ಆಯುಷ್ಯದ ಪ್ರತೀಕ! ಬಿಳಿ ಇಲಿ, ಕಪ್ಪು ಇಲಿ ಹಗಲು-ರಾತ್ರಿಗಳ ಪ್ರತೀಕ. ಮನುಷ್ಯನ ಆಯುಷ್ಯವೆಂಬ ಬಿಳಲುಗಳನ್ನು ಹಗಲು-ರಾತ್ರಿ ಎಂಬ ಎರಡು ಇಲಿಗಳು ಕತ್ತರಿಸಿಹಾಕುತ್ತಿವೆ. ದಾರಿಹೋಕನನ್ನು ಕಚ್ಚಿ ಪೀಡಿಸುತ್ತಿದ್ದ ಜೇನುಹುಳುಗಳು ಬೇರೆ ಏನೂ ಅಲ್ಲ, ಮನುಷ್ಯನ ಶರೀರವನ್ನು ಕಿತ್ತುತಿನ್ನುವ ರೋಗ-ರುಜಿನಗಳು. ಈ ಎಲ್ಲ ಆತಂಕಕಾರಿ ಘಟನೆಗಳ ಮಧ್ಯೆಯೂ ಪರಿಹಾರ ಮಾರ್ಗ ಕಂಡುಕೊಳ್ಳದ ಆ ದಾರಿಹೋಕ ಮೈಮರೆತು ಬಾಯಲ್ಲಿ ಚಪ್ಪರಿಸುತ್ತಿದ್ದ ಸವಿಯಾದ ಜೇನುತುಪ್ಪವೇ ಈ ಸಾಂಸಾರಿಕ ಸುಖ! ಅದರಲ್ಲಿಯೇ ಮೈಮರೆಯದೆ ಬದುಕುವ ಗೊತ್ತುಗುರಿಗಳನ್ನು ಕಂಡುಕೊಳ್ಳಲು ಎಚ್ಚರಿಸುವ ಅಕ್ಕಮಹಾದೇವಿಯ ಈ ಕೆಳಗಿನ ಹಿತನುಡಿಗಳನ್ನು ಗಮನಿಸಿ.

ಆಯಷ್ಯ,ಹೋಗುತ್ತಿದೆ,ಭವಿಷ್ಯ ತೊಲಗುತ್ತಿದೆ
ಕೂಡಿರ್ದ ಸತಿ-ಸುತರು ತಮ ತಮಗೆ ಹರಿದು ಹೋಗುತ್ತೈದಾರೆ
ಬೇಡ ಬೇಡವೆಲೆ ಬಂಜೆಯಾಗಿ ಕೆಡಬೇಡ ಬಯಲಿಂಗೆ ಮನವೆ
ಚನ್ನಮಲ್ಲಿಕಾರ್ಜುನನ ಶರಣರ ಸಂಗದಲ್ಲಿ 
ಹೊಣೆಹೊಕ್ಕು ಬದುಕು ಕಂಡ, ಮನವೇ!  

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 16.12.2009.