ವಕೀಲರು ಮತ್ತು ವೃತ್ತಿಧರ್ಮ!
ಈ ಜಗತ್ತು ಸತ್ಯದ ಮೇಲೆ ನಿಂತಿದೆಯೇ ಅಥವಾ ಸುಳ್ಳಿನ ಮೇಲೆ ನಿಂತಿದೆಯೇ ಕ್ಷಣಕಾಲ ಯೋಚಿಸಿ ಮುಂದೆ ಓದಿ. ಈ ಸೃಷ್ಟಿಯಲ್ಲಿ ಒಂದು ಕ್ರಮವಿದೆ, ಶಿಸ್ತು (Order) ಇದೆ. ಅದನ್ನು ಪ್ರಾಚೀನ ಋಷಿಮುನಿಗಳು ಋತ ಎಂದು ಕರೆಯುತ್ತಾರೆ. ಆಕಾಶದಲ್ಲಿ ಗೋಚರಿಸುವ ಗ್ರಹತಾರೆಗಳು ಒಂದೆಡೆ ನಿಂತಂತೆ ತೋರಿದರೂ ನಿಂತಲ್ಲಿಯೇ ನಿಂತಿರುವುದಿಲ್ಲ. ಮನುಷ್ಯನಂತೆ ಅಡ್ಡಾದಿಡ್ಡಿ ತಿರುಗಾಡುವುದೂ ಇಲ್ಲ. ಒಂದು ನಿರ್ದಿಷ್ಟ ಕಕ್ಷೆಯಲ್ಲಿ ನಿರ್ದಿಷ್ಟ ಅವಧಿಯಲ್ಲಿ ಮನುಷ್ಯನ ಗ್ರಹಿಕೆಗೂ ಮೀರಿದ ಗತಕಾಲದಿಂದ ತಿರುಗುತ್ತಾ ಬಂದಿವೆ. ಆದಕಾರಣ ಈ ಜಗತ್ತು ಸತ್ಯದ ಮೇಲೆ ನಿಂತಿದೆ ಎನ್ನುತ್ತಾರೆ. ಆದರೆ ಅದು ಪ್ರಾಕೃತಿಕ ಜಗತ್ತು. ಚೇತನ ಜಗತ್ತಿನ ವಿಚಾರವೇ ಬೇರೆ. ಈ ಜಗತ್ತಿನ ವ್ಯವಹಾರಗಳು ಅನಾದಿಕಾಲದಿಂದಲೂ ಸುಳ್ಳು, ವಂಚನೆ, ಮೋಸ ಮತ್ತು ಕಪಟತನದ ಮೇಲೆ ನಿಂತಿವೆ. ಅವು ಇಲ್ಲದೇ ಹೋಗಿದ್ದರೆ ಲೋಕವ್ಯವಹಾರಗಳಲ್ಲಿ ಕಂಡುಬರುವ ಅನೇಕ ವ್ಯವಸ್ಥೆಗಳು ಇರುತ್ತಿರಲಿಲ್ಲ. ಉದಾಹರಣೆಗೆ ಕೋರ್ಟು-ಕಛೇರಿಗಳು, ನ್ಯಾಯಾಧೀಶರು, ವಕೀಲರು, ಕಾನೂನುಗಳು, ಪೋಲೀಸರು ಇತ್ಯಾದಿ.
ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ ಎಂದು ನ್ಯಾಯಾಲಯಗಳ ಕಟಕಟೆಯಲ್ಲಿ ಮಾಡಿಸುವ ಪ್ರಮಾಣವಚನದಂತೆ ಎಲ್ಲರೂ ಸತ್ಯವನ್ನೇ ಹೇಳಿದ್ದರೆ ನ್ಯಾಯಾಲಯಗಳಲ್ಲಿ ಕೇಸುಗಳೇ ಇರುತ್ತಿರಲಿಲ್ಲ. ಸಾಕ್ಷಿ ಹೇಳುವವರಿಂದ ಈ ರೀತಿ ಪ್ರಮಾಣ ಮಾಡಿಸುವುದಕ್ಕಿಂತ ಹೆಚ್ಚಾಗಿ ಸಾಕ್ಷಿ ಹೇಳಿಸುವ ವಕೀಲರಿಂದಲೇ ಸತ್ಯವನ್ನು ಹೇಳಿಸುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳಿಸುವುದಿಲ್ಲ, ನಾನು ಹೇಳಿಸುವುದೆಲ್ಲಾ ಸತ್ಯ ಎಂದು ಪ್ರಮಾಣ ಮಾಡಿಸುವುದು ಒಳಿತೆಂದು ತೋರುತ್ತದೆ. ಕೇಸನ್ನು ಗೆಲ್ಲಲು ವಕೀಲರು ಮಾಡುವ ತಂತ್ರಗಾರಿಕೆ ಯಾರಿಗೆ ಗೊತ್ತಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಹಿಂದಿನ ದಿನ ಕೇಸನ್ನು ಗೆಲ್ಲಬೇಕೆಂದರೆ ಹೇಗೆ ಸುಳ್ಳುಸಾಕ್ಷಿ ಹೇಳಬೇಕೆಂದು ತಮ್ಮ ಕಕ್ಷಿದಾರರಿಗೆ ತರಬೇತಿ! ಇದನ್ನು ವಕೀಲರು ತಮ್ಮ ವೃತ್ತಿಧರ್ಮ ಎಂದು ಹೇಳುತ್ತಾರೆ. ನೂರು ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು ಎಂಬ ಗಾದೆ ಮಾತಿನಂತೆ ಕಕ್ಷಿದಾರರ ಹಿತವನ್ನು ಕಾಪಾಡಲು ಸುಳುಸಾಕ್ಷಿ ಹೇಳಿಸುವುದು ತಪ್ಪಲ್ಲ ಎಂಬ ಧೋರಣೆ ವಕೀಲರದು. “A lawyer has no business with the justice or injustice of the case which he undertakes, unless his client asks his opinion, and then he is bound to give it honestly. The justice or injustice of the case is to be decided by the judge”. ನ್ಯಾಯವೊ ಅನ್ಯಾಯವೊ ಅದನ್ನು ಕಟ್ಟಿಕೊಂಡು ತನಗೇನಾಗಬೇಕು? ಅದನ್ನು ತೀರ್ಮಾನಿಸಬೇಕಾದವರು ನ್ಯಾಯಾಧೀಶರು. ತನ್ನ ಕಕ್ಷಿದಾರ ಕೊಲೆಗಾರನೆಂದು ಗೊತ್ತಿದ್ದರೂ ಅವನಿಗೆ ಶಿಕ್ಷೆಯಾಗದಂತೆ ಶತಾಯಗತಾಯ ಪ್ರಯತ್ನಿಸಬೇಕೆಂಬುದೇ ವಕೀಲರಾದವರ ವೃತ್ತಿಧರ್ಮ ಎಂದು ಪರಿಭಾವಿಸಲಾಗಿದೆ. ಇದನ್ನು ಆಂಗ್ಲಭಾಷೆಯಲ್ಲಿ "professional ethics ಎನ್ನುತ್ತಾರೆ. ವೈದ್ಯಕೀಯ ವೃತ್ತಿಯಲ್ಲಿಯೂ ಈ ಶಬ್ಧವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮರಣದಂಡನೆಗೆ ಒಳಗಾದ ಕೊಲೆಗಾರನ ಜೀವ ಉಳಿಸುವ ಪ್ರಯತ್ನವನ್ನು ವಕೀಲರೂ ಮಾಡುತ್ತಾರೆ, ವೈದ್ಯರೂ ಮಾಡುತ್ತಾರೆ. ಜೈಲಿನಲ್ಲಿರುವ ಕೊಲೆಗಾರನಿಗೆ ಹೃದಯದ ಬೇನೆ ಕಾಣಿಸಿಕೊಂಡರೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ನ್ಯಾಯಾಧೀಶರು ಅವಕಾಶ ಕಲ್ಪಿಸಿಕೊಡುತ್ತಾರೆ. ಮಾರನೆಯ ದಿನವೇ ನೇಣುಗಂಬಕ್ಕೆ ಏರಲಿರುವ ಆ ಕೊಲೆಪಾತಕಿಗೆ ವೈದ್ಯಕೀಯ ಚಿಕಿತ್ಸೆ ಏಕೆ ಎಂದು ನ್ಯಾಯಮೂರ್ತಿಗಳಾಗಲೀ, ವೈದ್ಯರಾಗಲೀ ಉದಾಸೀನ ಮಾಡುವುದಿಲ್ಲ. ಇದು ನಿಜವಾಗಿಯೂ ವೃತ್ತಿಧರ್ಮ, ಆದರೆ ಕೊಲೆಗಾರನೆಂದು ಗೊತ್ತಿದ್ದೂ ಅವನು ನಿರಪರಾಧಿಯೆಂದು ಅವನ ಪರವಾಗಿ ವಕೀಲರು ನ್ಯಾಯಾಲಯದಲ್ಲಿ ನಿಂತು ವಾದಿಸುವುದು ಎಷ್ಟರಮಟ್ಟಿಗೆ ವೃತ್ತಿಧರ್ಮ ಎನಿಸಬಲ್ಲದು? ಇದರಿಂದ ಕಾನೂನಿನ ಆಶಯವನ್ನು ಕಾನೂನು ತಜ್ಞರಾದ ವಕೀಲರೇ ಮುರಿದಂತೆ ಆಗುವುದಿಲ್ಲವೇ?
- ವಕೀಲ ವೃತ್ತಿಯಲ್ಲಿ ತಮ್ಮ ಕಕ್ಷಿದಾರರ ಹಿತಕ್ಕೆ ವಿರುದ್ಧವಾದ ಎಲ್ಲ ಆರೋಪಗಳನ್ನು ಅವು ಎಷ್ಟೇ ಸತ್ಯದಿಂದ ಕೂಡಿದ್ದರೂ ಅಸತ್ಯವೆಂದು ನಿರಾಕರಿಸುವುದು ಪರಿಪಾಠವಾಗಿದೆ. ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರರ ವಿರುದ್ಧ ದಾಖಲಾದ ಆರೋಪಗಳೆಲ್ಲವನ್ನೂ ನಿರಾಧಾರ, ಸುಳ್ಳಿನ ಕಂತೆ, ಸತ್ಯಕ್ಕೆ ದೂರವಾದ ಸಂಗತಿ ಎಂದು ಸಾರಾಸಗಟಾಗಿ ತಿರಸ್ಕರಿಸಿ ತಕರಾರು ಅರ್ಜಿಯನ್ನು ಸಲ್ಲಿಸುವುದು ರೂಢಿಗತವಾಗಿಬಿಟ್ಟಿದೆ. Concocted, baseless, fabricated, far from the truth, frivolous ಇತ್ಯಾದಿ ಶಬ್ದಗಳನ್ನು ಬಳಸದ ತಕರಾರು ಅರ್ಜಿಗಳೇ ಇಲ್ಲ. ಸಮಾನಾರ್ಥಕ ಶಬ್ದಕೋಶದಲ್ಲಿ (thesaurus) ಸುಳ್ಳು ಎಂಬ ಶಬ್ಧಕ್ಕೆ ಇರುವಷ್ಟು ಸಮಾನಾರ್ಥಕ ಪದಗಳು (synonyms) ಬೇರಾವ ಶಬ್ದಕ್ಕೂ ಇರಲಾರವು. ಅವೆಲ್ಲಾ ವಕೀಲರ ಕೊಡುಗೆ ಆಗಿರಬಹುದೇ? ಭಾಷಾತಜ್ಞರು ಚಿಂತಿಸುವುದೊಳಿತು. ನ್ಯಾಯಾಧೀಶರ ಮುಂದೆ ನಿಂತು ತಮ್ಮ ಕಕ್ಷಿದಾರರ ಪರವಾಗಿ ವಾದಿಸುವ ಕಿರಿಯ ವಕೀಲರಿಗೆ ಹಿರಿಯ ವಕೀಲರು ಹೇಳಿಕೊಡುವ ಉಪದೇಶಾಮೃತದ ಕಿವಿಮಾತುಗಳೆಂದರೆ:
ಸಾಧ್ಯವಾದ ಮಟ್ಟಿಗೆ ನ್ಯಾಯಾಧೀಶರ ಮನಸ್ಸಿಗೆ ನಾಟುವಂತೆ ವಾದ ಮಾಡಿ. ಆದು ಸಾಧ್ಯವಾಗದಿದ್ದರೆ ಅವರನ್ನು ದಿಕ್ಕುತಪ್ಪಿಸಿ. (As far as possible, try to convince the judge. If you fail in that attempt, then confuse him!)
- ನಿಮ್ಮ ವಾದದಲ್ಲಿ ಏನಾದರೂ ಹುರುಳಿದ್ದರೆ ನ್ಯಾಯಾಧೀಶರ ಮುಖಕ್ಕೆ ಹೊಡೆದಂತೆ ಹೇಳಿ, ಇಲ್ಲವಾದರೆ ನಿಮ್ಮ ಮುಂದಿರುವ ಮೇಜನ್ನು ಗುದ್ದಿ ಹೇಳಿ! (If you have a point, hit at the jury. If you do not have any, hit at the table!)
ವಕೀಲವೃತ್ತಿಯು ಸುಳ್ಳಿನ ವೃತ್ತಿಯೆಂದು ವಿದ್ಯಾರ್ಥಿ ದೆಶೆಯಿಂದಲೂ ತಮಗೆ ಗೊತ್ತಿತ್ತು ಎಂದು ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ (As a student I had heard that the lawyers profession was a liars profession). ಆದರೆ ಸತ್ಯವನ್ನು ಮರೆಮಾಚದೆ ವಕೀಲ ವೃತ್ತಿಯನ್ನು ನಡೆಸಲು ಬರುವುದಿಲ್ಲವೆಂಬ ಮಾತನ್ನು ಗಾಂಧೀಜಿ ಒಪ್ಪುವುದಿಲ್ಲ. ಅವರು ತಮ್ಮ ವಕೀಲವೃತ್ತಿಯಲ್ಲಿ ಎಂದೂ ಅಸತ್ಯಕ್ಕೆ ಬೆಲೆ ಕೊಟ್ಟವರಲ್ಲ. ಸತ್ಯದ ಹಾದಿಯಿಂದ ತಪ್ಪಿ ನಡೆಯದಂತೆ ಅವರು ಸದಾ ಎಚ್ಚರ ವಹಿಸುತ್ತಿದ್ದರು. ವಕೀಲವೃತ್ತಿಯಲ್ಲಿ ಸುಳ್ಳನ್ನು ಹೇಳಿ ಹೇರಳವಾಗಿ ಹಣ ಸಂಪಾದನೆ ಮಾಡುವುದು ಅವರಿಗೆ ಸುತರಾಂ ಇಷ್ಟವಿರಲಿಲ್ಲ. ಈ ನಿರ್ಧಾರದಿಂದಾಗಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲವೃತ್ತಿಯನ್ನು ನಡೆಸುವಾಗ ಅನೇಕ ಸತ್ವ ಪರೀಕ್ಷೆಗಳಿಗೆ ಗುರಿಯಾದರು. ಎದಿರು ವಕೀಲರು ತಮ್ಮ ಕಕ್ಷಿದಾರರಿಗೆ ಸುಳ್ಳು ಸಾಕ್ಷಿ ಹೇಳಲು ತರಬೇತು ಕೊಡುತ್ತಿದ್ದರೆ ಗಾಂಧೀಜಿಯವರು ಅದೇ ರೀತಿ ತಮ್ಮ ಕಕ್ಷಿದಾರರಿಂದ ಸುಳ್ಳು ಸಾಕ್ಷಿ ಹೇಳಿಸಿ ಕೇಸು ಗೆಲ್ಲಲು ಸುತರಾಂ ಇಷ್ಟಪಡುತ್ತಿರಲಿಲ್ಲ. ಯಾವುದೋ ಒಂದು ಕೇಸನ್ನು ಗೆದ್ದ ಮೇಲೆ ತಮ್ಮ ಕಕ್ಷಿದಾರ ವಿಚಾರಣೆ ಸಂದರ್ಭದಲ್ಲಿ ಸುಳ್ಳು ಹೇಳಿದ್ದಾನೆಂದು ತಿಳಿದು ಅತೀವ ಸಂಕಟಪಡುತ್ತಾರೆ. ಅವರು ಕೇಸನ್ನು ಗೆದ್ದರೆ ಹೆಚ್ಚು ಫೀಜು, ಸೋತರೆ ಕಡಿಮೆ ಫೀಜು ತೆಗೆದುಕೊಳ್ಳುತ್ತಿರಲಿಲ್ಲ. ಸುಳ್ಳು ಕೇಸುಗಳನ್ನು ಅವರು ಎಂದೂ ತೆಗೆದುಕೊಳ್ಳುತ್ತಿರಲಿಲ್ಲ. ಅಂತಹ ಕೇಸುಗಳನ್ನು ತಮ್ಮ ಹತ್ತಿರ ತರಬಾರದೆಂದು ಮೊದಲೇ ಕಕ್ಷಿದಾರರಿಗೆ ಹೇಳುತ್ತಿದ್ದರು. ಇದರಿಂದ ಅಲ್ಲಿಯ ಜನರಲ್ಲಿ ಅವರ ಬಗ್ಗೆ ತುಂಬಾ ಗೌರವ ಭಾವನೆ ಮೂಡಿತು. ಕಕ್ಷಿದಾರರು ತಮ್ಮ ಕೇಸುಗಳು ಸತ್ಯದಿಂದ ಕೂಡಿದ್ದರೆ ಮಾತ್ರ ಅವರ ಹತ್ತಿರ ಹೋಗುತ್ತಿದ್ದರು. ಸುಳ್ಳಿನಿಂದ ಕೂಡಿದ್ದರೆ ಬೇರೆ ವಕೀಲರ ಹತ್ತಿರ ಹೋಗುತ್ತಿದ್ದರು.
ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ಕೋರ್ಟಿನಲ್ಲಿ ನಡೆಸಿದ ಒಂದು ಕೇಸಿನ ವಿಚಾರಣೆಯ ಸಂದರ್ಭದಲ್ಲಿ ತಮ್ಮ ಕಕ್ಷಿದಾರ ಸುಳ್ಳು ಹೇಳಿ ತಮಗೆ ಮೋಸ ಮಾಡಿದ್ದಾನೆಂದು ಗಾಂಧೀಜಿಗೆ ಮನವರಿಕೆಯಾಯಿತು. ಸುಳ್ಳು ಕೇಸನ್ನು ತಮ್ಮ ಹತ್ತಿರ ತಂದಿದ್ದಕ್ಕಾಗಿ ಕಕ್ಷಿದಾರನನ್ನು ಗಾಂಧೀಜಿ ಕೋರ್ಟ್ ಹಾಲ್‌ನಲ್ಲಿಯೇ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಕೂಡಲೇ ನ್ಯಾಯಾಧೀಶರತ್ತ ತಿರುಗಿ ತಮ್ಮ ಕಕ್ಷಿದಾರನ ಕೇಸನ್ನು ವಜಾಗೊಳಿಸಬೇಕೆಂದು ವಿನಂತಿಸಿಕೊಂಡರು. ಎದಿರು ವಕೀಲರಿಗೆ ಆಶ್ಚರ್ಯವಾಯಿತು. ನ್ಯಾಯಮೂರ್ತಿಗಳಿಗೆ ಸಂತೋಷವಾಯಿತು. ಕಕ್ಷಿದಾರನೂ ತಾನು ಮಾಡಿದ ತಪ್ಪಿಗಾಗಿ ವಿಷಾದ ವ್ಯಕ್ತಪಡಿಸಿದನೇ ಹೊರತು ಗಾಂಧೀಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಿಲ್ಲ. ಪ್ರತಿಯೊಬ್ಬ ಕಕ್ಷಿದಾರನಿಗೂ ತಾನು ಗೆಲ್ಲಬೇಕೆಂಬ ಪ್ರಬಲವಾದ ಇಚ್ಛೆ ಇರುತ್ತದೆ. ಹೀಗೆ ತಮ್ಮ ವಕೀಲರಿಂದಲೇ ತನ್ನ ಕೇಸು ಬಿದ್ದುಹೋಗುತ್ತದೆ ಎನ್ನುವುದಾದರೆ ಅಂತಹ ಸತ್ಯಸಂಧ ವಕೀಲರನ್ನು ಯಾರಾದರೂ ವಕೀಲರನ್ನಾಗಿ ನೇಮಿಸಿಕೊಳ್ಳಲು ಬಯಸುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ ಮೇಲ್ಕಂಡ ಘಟನೆಯಿಂದ ತಮ್ಮ ವಕೀಲವೃತ್ತಿಗೆ ಯಾವ ಧಕ್ಕೆಯೂ ಉಂಟಾಗಲಿಲ್ಲವೆಂದು ಗಾಂಧೀಜಿ ಹೇಳುತ್ತಾರೆ. ಇದರಿಂದ ದಕ್ಷಿಣ ಆಫ್ರಿಕಾದ ವಕೀಲ ಸಮುದಾಯದಲ್ಲಿ ತಮ್ಮ ಮೇಲೆ ಗೌರವಭಾವನೆ ಹೆಚ್ಚಾಯಿತೆಂದೂ, ಅಲ್ಲಿದ್ದ ಬಿಳಿಯರು - ಕರಿಯರು ಎಂಬ ವರ್ಣದ್ವೇಷದ ವಿಷಮವಾತಾವರಣದ ಮಧ್ಯೆಯೂ ಬಿಳಿಯರ ಪ್ರೀತಿಗೆ ತಾವು ಪಾತ್ರರಾಗಿದ್ದಾಗಿಯೂ, ನೂರಾರು ಜನ ಕಕ್ಷಿದಾರರು ತಮ್ಮ ಆತ್ಮೀಯ ಸ್ನೇಹಿತರಾಗಿ ಸಾರ್ವಜನಿಕ ಜೀವನದಲ್ಲಿ ತಮಗೆ ನೆರವಾದರೆಂದೂ ಹೇಳಿಕೊಂಡಿದ್ದಾರೆ. ಗಾಂಧೀಜಿಯಂತೆ ವಕೀಲವೃತ್ತಿಯಲ್ಲಿ ಸತ್ಯದ ಪ್ರತಿಪಾದಕರಾಗಿ, ಬಡವರ ದನಿಯಾಗಿ ನಿಂತ ಮತ್ತೊಬ್ಬ ಮಹಾನ್ ವ್ಯಕ್ತಿಯೆಂದರೆ ಅಮೇರಿಕದ ಅಧ್ಯಕ್ಷರಾಗಿದ್ದ ಆಬ್ರಹಂ ಲಿಂಕನ್.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವುದರಲ್ಲಿ ವಕೀಲರ ಕೊಡುಗೆ ಅಪಾರ. ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಬಿ.ಆರ್. ಅಂಬೇಡ್ಕರ್ ಮೊದಲಾದವರೆಲ್ಲರೂ ಪ್ರಖ್ಯಾತ ವಕೀಲರಾಗಿದ್ದವರು. ಕಾನೂನನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು. ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಅವರು ಮಾಡಿದ ಸೇವೆ ಅಮೋಘವಾದುದು. ಇಂತಹ ಹಿರಿದಾದ ಪರಂಪರೆಯಲ್ಲಿ ಬಂದ ಸ್ವತಂತ್ರ ಭಾರತದಲ್ಲಿ ಅದೆಷ್ಟು ಜನ ವಕೀಲರು ನ್ಯಾಯವಾದಿಗಳು ಎನಿಸಿಕೊಳ್ಳಲು ಅರ್ಹರಿದ್ದಾರೆ? I have a strong objection before the Lordships of our country. ವಕೀಲರನ್ನು ಲಾಯರ್ಸ, ಅಡ್ವೊಕೇಟ್ಸ್, ಬ್ಯಾರಿಸ್ಟರ್ಸ್ ಎಂದು ಕರೆಯಲು ನಮ್ಮ ತಕರಾರು ಏನೂ ಇಲ್ಲ. ಆದರೆ ಕನ್ನಡದಲ್ಲಿ ನ್ಯಾಯವಾದಿ ಎಂದು ಕರೆಸಿಕೊಳ್ಳುವ ಅರ್ಹತೆ ರಾಷ್ಟ್ರಪಿತ ಗಾಂಧೀಜಿಯವರನ್ನು ಬಿಟ್ಟರೆ ಇನ್ನೆಷ್ಟು ಜನರಿಗಿದೆ ಎಂಬ ಸಂದೇಹ ನಮ್ಮನ್ನು ಬಲವಾಗಿ ಕಾಡಿಸುತ್ತಿದೆ.
ನ್ಯಾಯವಾದಿಗಳು ಹೆಸರೇ ಹೇಳುವಂತೆ ನ್ಯಾಯದ ಪರವಾಗಿ ನಿಂತು ವಾದಿಸುವ ವೃತ್ತಿಯನ್ನು ಕೈಗೊಂಡಿರುವವರು. ಅವರ ಕಾಳಜಿ ಇರಬೇಕಾದುದು ನ್ಯಾಯದ ಪರವಾಗಿಯೇ ಹೊರತು ಅನ್ಯಾಯದ ಪರವಾಗಿ ಅಲ್ಲ. ನ್ಯಾಯಾಲಯದಲ್ಲಿ ನ್ಯಾಯದೇವತೆಯ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಲಾಗಿರುತ್ತದೆ. ನ್ಯಾಯಾಧೀಶರು ಕೇಸಿನ ವಿದ್ಯಮಾನಗಳನ್ನು ಯಾವುದೇ ಪೂರ್ವಾಗ್ರಹ ಭಾವನೆಗಳಿಂದ ಪರಿಶೀಲಿಸದೆ ಸತ್ಯಪರಿಶೋಧಕರಾಗಿ ನ್ಯಾಯೋಚಿತವಾದ ತೀರ್ಪನ್ನು ನೀಡುವ ಹೊಣೆಗಾರಿಕೆಯುಳ್ಳವರು ಎಂದು ಇದರ ಸಾಂಕೇತಿಕ ಅರ್ಥ. ನ್ಯಾಯಮೂರ್ತಿಗಳು ಅಂತಹ ನಿರ್ಣಯಕ್ಕೆ ಬರಲು ನ್ಯಾಯವಾದಿಗಳ ವಾದ ನೆರವಿಗೆ ಬರಬೇಕು. ಆದರೆ ಈಗ ಆಗುತ್ತಿರುವುದೇನು? ಕಾನೂನಿನ ಜಟಿಲಾತಿ ಜಟಿಲ ಪರಿಭಾಷೆಗಳು, ನಾನಾ ಕಲಮುಗಳು, ಅವುಗಳ ಕೂದಲು ಸೀಳುವ ಅರ್ಥವಿವರಣೆಗಳು ನ್ಯಾಯಮೂರ್ತಿಗಳ ಕಣ್ಣಿಗೆ ಸತ್ಯವು ಸುಲಭವಾಗಿ ಗೋಚರಿಸದಂತೆ ಕಟ್ಟಿ ಹಾಕುವ ಕಪ್ಪುಬಟ್ಟೆಯಂತಾಗಿವೆ. ನ್ಯಾಯವು ನ್ಯಾಯಾಧೀಶರ ಗ್ರಹಿಕೆಗೆ ಸುಲಭವಾಗಿ ಸಿಗದಂತೆ ಮಾಡುವುದೇ ನ್ಯಾಯವಾದಿಗಳ ನೈಪುಣ್ಯವಾಗಿದೆ. ಹೀಗಾಗಿ ಜಾಣ ವಕೀಲ ಅಪರಾಧಿಯನ್ನು ಸುಲಭವಾಗಿ ಹಿಡಿಯದಂತೆ ಕಾನೂನಿನ ಉದ್ದದ ಕೈಗಳನ್ನು ಗಿಡ್ಡವಾಗಿಸಬಲ್ಲ, ನ್ಯಾಯದ ಚಕ್ರವ್ಯೂಹವನ್ನು ಭೇದಿಸದಂತೆ ಮಾಡಬಲ್ಲ. ಅಪರಾಧಿಯನ್ನು ಮತ್ತೆ ಎಂದಿನಂತೆ ಸಮಾಜದಲ್ಲಿ ಸಭ್ಯನ ಪೋಜು ಕೊಟ್ಟುಕೊಂಡು ಸಲೀಸಾಗಿ ತಿರುಗಾಡುವಂತೆ ಮಾಡಬಲ್ಲ.
ನೂರು ಅಪರಾಧಿಗಳು ಪಾರಾದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಕೂಡದು ಎನ್ನುವುದು ನಮ್ಮ ನ್ಯಾಯಾಂಗದ ಧೋರಣೆ. ಈಗ ಶಿಕ್ಷೆ ಆಗುವುದು ಶ್ರೀಮಂತ ಅಪರಾಧಿಗಲ್ಲ, ಒಳ್ಳೆಯ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ಬಡವನಿಗೆ ಮಾತ್ರ. ಕಾನೂನುಗಳು ಜೇಡರ ಬಲೆ ಇದ್ದಂತೆ ಎಂಬ ಮಾತೊಂದು ಆಂಗ್ಲಭಾಷೆಯಲ್ಲಿದೆ. (Written laws are like spiders webs; they will catch, it is true, the weak and poor, but would be torn in pieces by the rich and powerful). ಕಾನೂನು ಎಂಬ ಜೇಡರ ಬಲೆಯು ಸಣ್ಣಪುಟ್ಟ ಕ್ರಿಮಿ-ಕೀಟ, ನೊಣಗಳನ್ನು ಹಿಡಿಯಬಲ್ಲುದೇ ಹೊರತು ಗಿಡುಗನನ್ನು ಹಿಡಿಯುವ ತಾಕತ್ತು ಅದಕ್ಕೆ ಇಲ್ಲ. ಬಡವ ಸಣ್ಣಪುಟ್ಟ ತಪ್ಪುಗಳಿಗೂ ಘೋರಾತಿಘೋರ ಶಿಕ್ಷೆ ಪಡೆದು ಜೈಲಿನ ಸರಳುಗಳ ಹಿಂದೆ ನರಳಬೇಕಾಗಿದೆ. ಆದರೆ ಶ್ರೀಮಂತ ಮತ್ತು ಪ್ರಭಾವೀ ವ್ಯಕ್ತಿಗಳು ಮಾತ್ರ ಎಷ್ಟೇ ಅಪರಾಧಗಳನ್ನು ಮಾಡಿದರೂ ಜಾಣ ವಕೀಲರ ನೆರವಿನಿಂದ ಕಾನೂನಿನ ಜಾಲವನ್ನು ಸುಲಭವಾಗಿ ಹರಿದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರಣದಿಂದಲೇ ಈಗ ಜೈಲಿನಲ್ಲಿ ಇರಬೇಕಾದವರನೇಕರು ಬಹುತೇಕ ರಾಜ್ಯ ಮತ್ತು ಕೇಂದ್ರದ ಶಾಸನ ಸಭೆಗಳಲ್ಲಿ ರಾರಾಜಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಕುರಿಗಳನ್ನು ಕಾಯಲು ತೋಳಗಳು ನೇಮಕಗೊಂಡಂತಾಗಿದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 13.1.2011.