ನಾಲ್ಕು ಜರ್ಮನ್ ಸಣ್ಣ ಕತೆಗಳು

  •  
  •  
  •  
  •  
  •    Views  

ಗದ್ಗುರುವಾಗುವವನು ಜಗತ್ತನ್ನು ಸುತ್ತಿಬರಬೇಕು ಎಂಬುದು ನಮ್ಮ ಗುರುವರ್ಯರ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯವಾಗಿತ್ತು. ಅವರು ಕಾಶಿಯಲ್ಲಿ ಸಾಂಪ್ರದಾಯಿಕವಾಗಿ ಸಂಸ್ಕೃತವನ್ನು ಓದಿದ್ದರೂ ಅವರ ಆಲೋಚನೆಗಳು ಸಂಪ್ರದಾಯದ ಚೌಕಟ್ಟನ್ನು ಮೀರಿ ನಿಂತಿದ್ದವು. ಆದರೆ ಸಮಾಜದಿಂದ ಹಣವನ್ನು ಪಡೆದು ಪರದೇಶದಲ್ಲಿ ಓದಲು ನಮಗೆ ವೈಯಕ್ತಿಕವಾಗಿ ಇಷ್ಟವಿರಲಿಲ್ಲ. ಮೊದಲಿನಿಂದಲೂ ವಿದ್ಯಾರ್ಥಿವೇತನವನ್ನು ಪಡೆದು ಓದುತ್ತಾ ಬಂದವರು ನಾವು ಪರದೇಶದಲ್ಲಿರುವ ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿವೇತನ ದೊರೆತರೆ ಮಾತ್ರ ಓದಲು ಹೋಗಬೇಕೆಂಬುದು ನಮ್ಮ ದೃಢನಿರ್ಧಾರವಾಗಿತ್ತು. ಈ ವಿಷಯ ಹೇಗೋ ಕೆನಡಾದಲ್ಲಿದ್ದ ಪ್ರೊಫೆಸರ್ ಹಿರೇಮಲ್ಲೂರ ಈಶ್ವರನ್‌ರವರಿಗೆ ತಿಳಿದು “ಸಮಾಜಕ್ಕಾಗಿ ಜೀವನವನ್ನು ಮುಡುಪಿಡುವವರು ಸಮಾಜದಿಂದ ಹಣ ಪಡೆಯುವುದರಲ್ಲಿ ತಪ್ಪೇನೂ ಇಲ್ಲ. ನಾನೂ ಸಹ ಮಠದಿಂದ ಆರ್ಥಿಕಸಹಾಯ ಪಡೆದಿದ್ದೇನೆ, ನನ್ನಿಂದ ಸಾಧ್ಯವಾದ ಸಹಾಯ ಮಾಡುತ್ತೇನೆ” ಎಂದು ನಮಗೆ ಪತ್ರ ಬರೆದು ಪ್ರೋತ್ಸಾಹಿಸಿದರು. ಆದರೂ ನಮ್ಮ ಮನಸ್ಸು ಒಪ್ಪಲಿಲ್ಲ. ಈ ಮಧ್ಯೆ ಉನ್ನತ ಅಧ್ಯಯನಕ್ಕಾಗಿ ಕೇಂದ್ರಸರ್ಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಸಂಸ್ಕೃತವನ್ನು ಓದಲು ನಮ್ಮ ದೇಶವನ್ನು ಬಿಟ್ಟು ಪರದೇಶಕ್ಕೆ ಹೋಗುವ ಅವಶ್ಯಕತೆ ಏನಿದೆಯೆಂಬ ಅಪಸ್ವರಗಳು ಕೇಳಿಬಂದವು. ಪರದೇಶಕ್ಕೆ ಹೋದವರು ಮತ್ತೆ ವಾಪಾಸು ಬರುತ್ತಾರೆಯೇ ಎಂಬ ಅನುಮಾನಗಳೂ ಕೆಲವರಲ್ಲಿದ್ದವು. ಸಂಸ್ಕೃತ ಅಧ್ಯಯನಕ್ಕೆ ಎರಡನೆಯ ತವರೂರು ಎನಿಸಿದ ಜರ್ಮನಿಯಲ್ಲಿರುವ ವಿಶ್ವವಿದ್ಯಾನಿಲಯಗಳಿಂದ DAAD ಸಂಸ್ಥೆಯ ಮೂಲಕ ವಿದ್ಯಾರ್ಥಿವೇತನ ಪಡೆಯುವ ಪ್ರಯತ್ನ ನಡೆಸುತ್ತಿರುವಾಗ ನಮ್ಮ ಸುದೈವಕ್ಕೆ ನೆರೆಯ ಆಸ್ಟ್ರಿಯಾ ದೇಶದ ರಾಜಧಾನಿಯಲ್ಲಿರುವ ವಿಯೆನ್ನಾ ವಿಶ್ವವಿದ್ಯಾನಿಲಯದಿಂದ Post-doctoral Fellowship ಮಂಜೂರಾಗಿ ಬಂದಿತು. ಅಲ್ಲಿಂದ ಮುಂಜೂರಾಗಿ ಬರಲು ಕಾರಣ ಕಾಶಿಯಲ್ಲಿರುವ ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ವಿಯೆನ್ನಾ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರೊಫೆಸರ್ ಡಾ. ಗೆರ್‌ಹಾರ್ಡ್ ಓಬರ್‌ಹಾಮರ್ (Gerhard Oberhammer) ಅವರು ನಮ್ಮ Ph.D ಮಹಾಪ್ರಬಂಧದ ಬಾಹ್ಯಪರೀಕ್ಷಕರಾಗಿದ್ದರು (External Examiner) ಎಂಬ ವಿಷಯ ನಂತರ ವಿಯೆನ್ನಾಕ್ಕೆ ಹೋದಮೇಲೆ ತಿಳಿಯಿತು. ಅಲ್ಲಿಗೆ ಹೋಗುವ ಮುನ್ನ ಪೂನಾದ Goethe Institute ನಲ್ಲಿ ಜರ್ಮನ್ ಭಾಷೆಯನ್ನು ಕಲಿಯುವಾಗ ಪಠ್ಯಗ್ರಂಥದಲ್ಲಿ ಓದಿದ ಕೆಲವು ರೋಚಕ ಕತೆಗಳು ಹೀಗಿವೆ:

1.ಜೇಬುಗಳ್ಳ
ಒಮ್ಮೆ ವ್ಯಾಪಾರಿಯೊಬ್ಬ ವ್ಯವಹಾರಾರ್ಥವಾಗಿ ಬೇರೊಂದು ನಗರಕ್ಕೆ ಪ್ರಯಾಣ ಬೆಳೆಸಿದ. ಆ ನಗರ ತಲುಪಿದ ಮೇಲೆ ಹೋಟೆಲೊಂದರಲ್ಲಿ ತಂಗಿದ್ದು ತನ್ನ ವ್ಯವಹಾರವನ್ನು ಮುಗಿಸಿಕೊಂಡು ಸಂಜೆ ವೇಳೆಗೆ ಹತ್ತಿರದಲ್ಲಿಯೇ ವಾಸವಾಗಿದ್ದ ತನ್ನ ಆತ್ಮೀಯ ಸ್ನೇಹಿತನನ್ನು ನೋಡಲು ಹೋದ. ಅಪರೂಪಕ್ಕೆ ಭೇಟಿಯಾದ ಇಬ್ಬರೂ ಸ್ನೇಹಿತರು ಬಹಳ ಹೊತ್ತು ಹರಟೆ ಹೊಡೆಯುತ್ತಾ ಕುಳಿತರು. ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಮಧ್ಯರಾತ್ರಿಯಾಯಿತು. ವ್ಯಾಪಾರಿ ತನ್ನ ಸ್ನೇಹಿತನಿಂದ ಬೀಳ್ಕೊಂಡು ತಾನು ಉಳಿದುಕೊಂಡಿದ್ದ ಹೋಟೆಲ್ನತ್ತ ಹೊರಟ. ವಾಪಾಸು ಬರುವಾಗ ಹೆಚ್ಚು ಬೆಳಕು ಇರಲಿಲ್ಲ, ಮಬ್ಬುಗತ್ತಲು. ದಾರಿ ಅಷ್ಟು ಸರಿಯಾಗಿ ಕಾಣಿಸುತ್ತಿರಲಿಲ್ಲ. ಜನರ ಓಡಾಟವೂ ಅಷ್ಟಾಗಿ ಇರಲಿಲ್ಲ. ಕತ್ತಲಲ್ಲಿ ಇದ್ದಕ್ಕಿದ್ದಂತೆಯೇ ಯಾರದೋ ಕಾಲಿನ ಸಪ್ಪಳ ಕೇಳಿಸಿತು. ಆಚೆಬದಿಯ ಮೂಲೆಯೊಂದರಿಂದ ಒಬ್ಬ ವ್ಯಕ್ತಿ ಬಿರುಸಿನ ಹೆಜ್ಜೆ ಇಟ್ಟು ಬಂದವನೇ ಇವನಿಗೆ ಡಿಕ್ಕಿ ಹೊಡೆದ. ಕತ್ತಲಲ್ಲಿ ಸರಿಯಾಗಿ ಕಾಣಿಸಲಿಲ್ಲವೆಂದು ಕ್ಷಮೆ ಯಾಚಿಸಿದ ಆ ವ್ಯಕ್ತಿ ಮತ್ತೆ ಬಿರುಸಿನ ಹೆಜ್ಜೆ ಇಟ್ಟು ಮುಂದೆ ನಡೆದ. ವ್ಯಾಪಾರಿ ಏನನ್ನೋ ನೆನೆಸಿಕೊಂಡು ತನ್ನ ಜೇಬಿಗೆ ಕೈಹಾಕಿದ. ಜೇಬಿನಲ್ಲಿದ್ದ ಜೇಬುಗಡಿಯಾರ ಮತ್ತು ಪರ್ಸ್ ಕಾಣೆಯಾಗಿದ್ದವು. ತಕ್ಷಣವೇ ನೆನಪಾಯಿತು. ಕೆಲವೇ ಕ್ಷಣಗಳ ಹಿಂದೆ ತನಗೆ ಡಿಕ್ಕಿ ಹೊಡೆದು ದಾಪುಗಾಲಿಟ್ಟು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಯ ಹಿಂದೆ ಓಡಿದ. ಅವನನ್ನು ಹಿಡಿದು ಕೊರಳ ಪಟ್ಟಿಗೆ ಕೈಹಾಕಿ ಗಡಿಯಾರ ಮತ್ತು ಪರ್ಸ್ ಕೊಡುತ್ತೀಯೋ ಇಲ್ಲವೋ ಎಂದು ಏರುಧ್ವನಿಯಲ್ಲಿ ಕೇಳಿದ. ಅಪರಿಚಿತ ವ್ಯಕ್ತಿ ಹೆದರಿ ಮರುಮಾತಾಡದೆ ಅವೆರಡನ್ನೂ ಕೊಟ್ಟ, ಕಳುವಾಗಿದ್ದ ತನ್ನ ಜೇಬುಗಡಿಯಾರ ಮತ್ತು ಪರ್ಸ್ ಸಿಕ್ಕಿದ್ದಕ್ಕಾಗಿ ವ್ಯಾಪಾರಿ ಸಂತೋಷಪಟ್ಟು ತಾನು ತಂಗಿದ್ದ ಹೋಟೆಲ್ ಗೆ ಹಿಂತಿರುಗಿದ. ಕೊಠಡಿಯೊಳಗೆ ಕಾಲಿಡುತ್ತಲೇ ವಿದ್ಯುದ್ದೀಪದ ಗುಂಡಿಯನ್ನು ಒತ್ತಿದ. ಆಗ ಅವನಿಗೆ ಕಂಡದ್ದೇನು? ಅವನು ಮಲಗಿದ್ದ ಹಾಸಿಗೆಯ ಪಕ್ಕದ ಟೀಪಾಯ್ ಮೇಲೆ ಅವನ ಸ್ವಂತದ ಜೇಬುಗಡಿಯಾರ ಮತ್ತು ಪರ್ಸ್ ಎರಡೂ ಇದ್ದವು! ಅವುಗಳನ್ನು ಅಲ್ಲಿಯೇ ಮರೆತು ಬಿಟ್ಟು ಹೋಗಿದ್ದ ವ್ಯಾಪಾರಿ ದಾರಿಯಲ್ಲಿ ಡಿಕ್ಕಿ ಹೊಡೆದ ಅಪರಿಚಿತ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ ಅವನ ಜೇಬುಗಡಿಯಾರ ಮತ್ತು ಪರ್ಸನ್ನು ದೋಚಿಕೊಂಡು ಬಂದ ಜೇಬುಗಳ ತಾನೇ ಆಗಿದ್ದ!

2. ಕಳ್ಳಸಾಗಣಿಕೆ
ರೈಲು ಜರ್ಮನಿಯ ಗಡಿರೇಖೆಯನ್ನು ಸಮೀಪಿಸಿತ್ತು. ಅಕ್ಕಪಕ್ಕದ ಪ್ರಯಾಣಿಕರೆಲ್ಲರೂ ಗಡಿಯಲ್ಲಿ ಸುಂಕ ಕೊಡುವ ಬಗ್ಗೆ ಮಾತನಾಡತೊಡಗಿದರು. ಅವರಲ್ಲಿದ್ದ ಸುಂದರವಾದ ಯುವತಿಯೊಬ್ಬಳು ನನ್ನ ಹತ್ತಿರ ಎರಡು ಪೌಂಡ್ ಕಾಫಿಪುಡಿ ಇದೆ, ಇಲ್ಲಿಯ ಸುಂಕದ ಅಧಿಕಾರಿಗಳು ಬಹಳ ಬಿಗಿ ಎಂದು ಕೇಳಿದ್ದೇನೆ, ಸುಂಕ ತೆರಬೇಕಾಗುತ್ತದೆಯೋ ಏನೋ” ಎಂದು ತನ್ನ ಆತಂಕ ವ್ಯಕ್ತಪಡಿಸಿದಳು. ಎದುರಿಗಿದ್ದ ಬೋಳುತಲೆಯ ಡೊಳ್ಳು ಹೊಟ್ಟೆಯ ಹಿರಿಯ ಪ್ರಯಾಣಿಕನೊಬ್ಬ ಆ ಯುವತಿಯನ್ನು ಸಮಾಧಾನ ಪಡಿಸಿ ಒಂದು ಸಲಹೆಯನ್ನು ಕೊಟ್ಟ: “ನೋಡಿ, ನಾನು ಈ ಮಾರ್ಗವಾಗಿ ಬೇರೆ ದೇಶಗಳಿಗೆ ಅನೇಕ ಬಾರಿ ಪ್ರಯಾಣಮಾಡಿದ್ದೇನೆ. ನೀವೇನೂ ಗಾಬರಿಯಾಗಬೇಡಿ. ಇಲ್ಲಿಯ ಸುಂಕದ ಅಧಿಕಾರಿಗಳು ನೀವು ತಿಳಿದುಕೊಂಡಂತೆ ಅಷ್ಟೇನೂ ಬಿಗಿಯಲ್ಲ. ಕೆಲವು ಬೋಗಿಗಳಿಗಂತೂ ಅವರು ಬರುವುದೇ ಇಲ್ಲ, ಬಾಗಿಲಲ್ಲೇ ನಿಂತು ಪ್ರಯಾಣಿಕರ ಪಾಸ್ ಪೋರ್ಟ್‌ಗಳನ್ನು ಮಾತ್ರ ತನಿಖೆ ಮಾಡುತ್ತಾರೆ. ಒಂದು ಪಕ್ಷ ಅವರು ಬ್ಯಾಗೇಜ್ ತನಿಖೆ ಮಾಡಲು ಬಂದರೂ ಎಲ್ಲ ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ತನಿಖೆಮಾಡುವುದಿಲ್ಲ. ಒಂದು ಕೆಲಸ ಮಾಡಿ. ನೀವು ತಂದಿರುವ ಕಾಫಿಪುಡಿಯನ್ನು ನಿಮ್ಮ ತಲೆಯ ಮೇಲಿರುವ ಹ್ಯಾಟ್ ಒಳಗಡೆ ಬಚ್ಚಿಟ್ಟುಕೊಳ್ಳಿ”. ಸಹಪ್ರಯಾಣಿಕನು ಕೊಟ್ಟ ಸಲಹೆ ಆ ಯುವತಿಗೆ ಸೂಕ್ತವೆಂದು ಕಂಡಿತು. ಅದಕ್ಕಾಗಿ ಅವನಿಗೆ ಧನ್ಯವಾದ ಹೇಳಿ ಅವನು ಹೇಳಿದಂತೆ ಮಾಡಿದಳು.

ರೈಲು ಸ್ವಲ್ಪ ಹೊತ್ತಿನಲ್ಲಿಯೇ ಗಡಿಯನ್ನು ತಲುಪಿತು. ರೈಲ್ವೆನಿಲ್ದಾಣದಲ್ಲಿ ಅನೇಕ ಅಧಿಕಾರಿಗಳು ಅತ್ತಿಂದಿತ್ತ ಓಡಾಡುತ್ತಿರುವುದು ಕಾಣಿಸಿತು. ರೈಲು ನಿಲ್ಲುತ್ತಿದ್ದಂತೆಯೇ ಪ್ರಯಾಣಿಕರೆಲ್ಲರೂ ತಮ್ಮ ತಮ್ಮ ಬೋಗಿಗಳಲ್ಲಿಯೇ ಇರಬೇಕೆಂದೂ ಪಾಸ್ ಪೋರ್ಟ್ ಮತ್ತು ಸುಂಕದ ತನಿಖೆ ನಡೆಸಲಾಗುವುದೆಂದೂ ಧ್ವನಿವರ್ಧಕಗಳಲ್ಲಿ ಸೂಚನೆ ಕೇಳಿಬಂತು. ಕೆಲವೇ ನಿಮಿಷಗಳಲ್ಲಿ ಆ ಯುವತಿ ಪ್ರಯಾಣಿಸುತ್ತಿದ್ದ ಬೋಗಿಗೆ ಒಬ್ಬ ಅಧಿಕಾರಿ ಬಂದ. ಅವನು ಕೇವಲ ಪಾಸ್ ಪೋರ್ಟ್ ತನಿಖೆ ಮಾಡಿ ಮುಂದೆ ಸಾಗಿದ. ಅವನ ಹಿಂದೆಯೇ ಮತ್ತೊಬ್ಬ ಅಧಿಕಾರಿ ಬಂದ. “ನಮಸ್ಕಾರ, ನಿಮ್ಮ ಹತ್ತಿರ ಸುಂಕ ಕೊಡಬೇಕಾದ ವಸ್ತುಗಳೇನಾದರೂ ಇವೆಯೇ?” ಎಂದು ಪ್ರಯಾಣಿಕರನ್ನು ಕೇಳಿದ. ಯಾರೂ ಉತ್ತರ ಕೊಡದೆ ಮೌನವಾಗಿದ್ದರು. ಸುಂಕದ ಅಧಿಕಾರಿ ಪ್ರಯಾಣಿಕರ ಸಾಮಗ್ರಿಗಳತ್ತ ಕಣ್ಣುಹಾಯಿಸಿದ. ಇಲ್ಲಿ ಎಲ್ಲಿಂದಲೋ ಕಾಫಿಪುಡಿಯ ವಾಸನೆ ಬರುತ್ತಿದೆಯಲ್ಲಾ, ಯಾರ ಹತ್ತಿರ ಇದೆ, ಹೇಳಿ” ಎಂದು ಹುಬ್ಬುಗಂಟಿಕ್ಕಿ ಕೇಳಿದ. ಯುವತಿ ಗಾಬರಿಗೊಂಡಳು. ಬೋಳುತಲೆಯ ಪ್ರಯಾಣಿಕ ಸುಂಕದ ಅಧಿಕಾರಿಗೆ ಕಣ್ಣುಮಿಟುಕಿಸಿ ಆ ಯುವತಿಯತ್ತ ಬೆರಳುಮಾಡಿ ತೋರಿಸಿ ಅವಳು ತನ್ನ ಹ್ಯಾಟಿನೊಳಗೆ ಕಾಫಿಪುಡಿಯನ್ನು ಬಚ್ಚಿಟ್ಟುಕೊಂಡಿದ್ದಾಳೆ ನೋಡಿ ಎಂದು ಹೇಳಿಯೇ ಬಿಟ್ಟ. ಯುವತಿಯ ಮುಖ ಸಿಟ್ಟಿನಿಂದ ಕೆಂಪೇರಿತು. ಆದರೆ ಏನೂ ಮಾಡಲು ಬರುವಂತಿರಲಿಲ್ಲ. “ಮಿಸ್, ನಿಮಗೆ ನಿಯಮಾನುಸಾರ ಒಂದು ಪೌಂಡ್ ಕಾಫೀಪುಡಿ ಮಾತ್ರ ತೆಗೆದುಕೊಂಡು ಹೋಗಲು ವಿನಾಯಿತಿ ಇದೆ, ಉಳಿದ ಇನ್ನೊಂದು ಪೌಂಡಿಗೆ ನೀವು ಸುಂಕ ಕೊಡಲೇ ಬೇಕು” ಎಂದು ಆ ಅಧಿಕಾರಿ ಯುವತಿಯಿಂದ ಸುಂಕವನ್ನು ವಸೂಲಿ ಮಾಡಿಕೊಂಡು ಮುಂದೆ ಹೋದ. ಸುಂಕದ ಅಧಿಕಾರಿ ಅತ್ತ ಹೋದೊಡನೆ ಯುವತಿ ಬೋಳುತಲೆಯವನನ್ನ ಅಸಹನೆಯ ಕಣ್ಣುಗಳಿಂದ ನೋಡುತ್ತಾ “ನಿಮ್ಮಿಂದ ಒಳ್ಳೆಯ ಪಾಠ ಕಲಿತಂತಾಯಿತು. ಮುಚ್ಚಿಟ್ಟುಕೊಳ್ಳಬೇಕೆಂದು ಸಲಹೆ ಕೊಟ್ಟವರೂ ನೀವೆ, ಮುಚ್ಚಿಟ್ಟುಕೊಂಡಿದ್ದಾಳೆಂದು ಹೇಳಿ ಮೋಸ ಮಾಡುವವರೂ ನೀವೆ” ಎಂದು ಸಿಡಿಮಿಡಿಗೊಂಡಳು. ಬೋಳುತಲೆಯ ವ್ಯಕ್ತಿ ಅವಳ ಬಿರುನುಡಿಯನ್ನು ಕಿವಿಗೆ ಹಾಕಿಕೊಳ್ಳದೆ ಸುಮ್ಮನಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ರೈಲು ಜರ್ಮನ್ ಗಡಿಯನ್ನು ದಾಟಿ ಮುಂದೆ ಸಾಗಿತು. ಬೋಳು ತಲೆಯ ವ್ಯಕ್ತಿ ತನ್ನ ಸೀಟಿನಿಂದ ಮೇಲೆದ್ದು ಯುವತಿಯ ಹತ್ತಿರ ಹೋಗಿ ಕ್ಷಮೆ ಯಾಚಿಸಿದ. “ನೋಡಿ, ನಿಮಗೆ ಮೋಸಮಾಡಬೇಕೆಂಬ ಉದ್ದೇಶ ನನಗೆ ಇರಲಿಲ್ಲ ಎಂದು ಮಾತಿಗೆ ಆರಂಭಿಸಿದ. “ನಿಮ್ಮಂಥ ಮೋಸಗಾರೊಂದಿಗೆ ಮಾತನಾಡಲು ನನಗೆ ಇಷ್ಟವಿಲ್ಲ, ನನ್ನ ನೆಮ್ಮದಿಯನ್ನು ಹಾಳುಮಾಡಬೇಡಿ” ಎಂದು ಆಕೆ ತನ್ನ ಅಸಹನೆಯನ್ನು ವ್ಯಕ್ತಪಡಿಸಿದಳು. ಆದರೂ ಬೋಳುತಲೆಯ ವ್ಯಕ್ತಿ ಸುಮ್ಮನಾಗದೆ “ಕ್ಷಮಿಸಿ ಮಿಸ್, ನನ್ನ ಮಾತನ್ನು ಸ್ವಲ್ಪ ಕೇಳಿ, ಆ ಅಧಿಕಾರಿ ಕಾಫಿಪುಡಿಯ ವಾಸನೆಯನ್ನು ಹಿಡಿದಿದ್ದರಿಂದ ನಾನು ಅನಿವಾರ್ಯವಾಗಿ ಹಾಗೆ ಹೇಳಲೇಬೇಕಾಯಿತು. ಕಾರಣವೇನೆಂದರೆ ನನ್ನ ಹತ್ತಿರ ಐವತ್ತು ಪೌಂಡ್ ಕಾಫಿಪುಡಿ ಇದೆ. ಅದಕ್ಕೆ ಸುಂಕ ತೆರುವುದನ್ನು ನೀವು ಉಳಿಸಿಕೊಟ್ಟಿದ್ದೀರಿ. ಅದಕ್ಕಾಗಿ ಇಗೋ ತೆಗೆದುಕೊಳ್ಳಿ ಎಂದು ಐದು ಪೌಂಡಿನ ಕಾಫಿಪುಡಿಯ ಒಂದು ಪ್ಯಾಕೆಟ್ಟನ್ನು ಆ ಯುವತಿಯ ಕೈಗೆ ಕೊಟ್ಟ !

3. ಮೌಖಿಕ ಪರೀಕ್ಷೆ
ಬರ್ಲಿನ್ನಲ್ಲಿ ಒಬ್ಬ ಪ್ರಖ್ಯಾತ ವೈದ್ಯಕೀಯ ಪ್ರೊಫೆಸರ್ ಇದ್ದರು. ಅವರನ್ನು ಕಂಡರೆ ವಿದ್ಯಾರ್ಥಿಗಳಿಗೆ ಬಹಳ ಹೆದರಿಕೆಯಾಗುತ್ತಿತ್ತು. ಮೌಖಿಕ ಪರೀಕ್ಷೆಯಲ್ಲಿ ಅವರು ತುಂಬಾ ಕಠಿಣವಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸರಿಯಾದ ಉತ್ತರಗಳನ್ನು ಕೊಡದಿದ್ದರೆ ಮುಲಾಜಿಲ್ಲದೆ ನಪಾಸು ಮಾಡುತ್ತಿದ್ದರು. ಅವರ ಪರೀಕ್ಷೆಯಲ್ಲಿ ಪಾಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೇರೆ ಯಾವ ಶಿಫಾರಿಸ್ಸು ಪತ್ರವೂ ಬೇಕಿರಲಿಲ್ಲ. ಅವರು ಭವಿಷ್ಯ ಜೀವನದ ಬಗ್ಗೆ ಸ್ವಲ್ಪವೂ ಯೋಚನೆ ಮಾಡುವ ಅವಶ್ಯಕತೆ ಇರಲಿಲ್ಲ. ಅವರ ಕೈಯಲ್ಲಿ ಪಾಸಾದವರೆಲ್ಲಾ ಅತ್ಯುತ್ತಮ ವೈದ್ಯರೆನಿಸಿಕೊಂಡಿದ್ದರು. ಒಮ್ಮೆ ಅವರ ಮುಂದೆ ಪರೀಕ್ಷೆಗೆ ಹಾಜರಾದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ತುಂಬಾ ಹೆದರಿದ್ದ. ಆ ಪ್ರೊಫೆಸರ್ ಯಾವುದೋ ರೋಗವನ್ನು ಕುರಿತು ಕೇಳಿದ ಕಠಿಣ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಿದ. ಆ ರೋಗಕ್ಕೆ ಏನು ಔಷಧಿಯನ್ನು ಕೊಡುತ್ತೀಯಾ ಎಂದು ಕೇಳಿದ ಪ್ರಶ್ನೆಗೂ ಸರಿಯಾದ ಉತ್ತರವನ್ನೇ ಕೊಟ್ಟ.ಆದರೆ ಎಷ್ಟು ಪ್ರಮಾಣದಲ್ಲಿ ಕೊಡುತ್ತೀಯಾ ಎಂದು ಕೇಳಿದ ಪ್ರಶ್ನೆಗೆ ಒಂದು ಊಟದ ಚಮಚೆಯಷ್ಟು ಎಂದು ನೀಡಿದ ಉತ್ತರ ತಪ್ಪೆಂದು ವಿದ್ಯಾರ್ಥಿಗೆ ಪರೀಕ್ಷಾ ಕೊಠಡಿಯಿಂದ ಹೊರಬಂದಾಗ ಅರಿವಾಯಿತು. ಕೂಡಲೇ ಒಳಗೆ ಹೋಗಿ “ಸಾರ್, ನಾನು ಹೇಳಿದ್ದು ತಪ್ಪು, ಊಟದ ಚಮಚೆಯಷ್ಟಲ್ಲ, ನಾಲ್ಕು ಹನಿ ಮಾತ್ರ ಕೊಡಬೇಕು” ಎಂದು ಸ್ಪಷ್ಟನೆ ನೀಡಿದರೂ ಅವನನ್ನು ನಪಾಸುಗೊಳಿಸಿದ ಆ ಪ್ರೊಫೆಸರ್ ಹೀಗೆ ಹೇಳಿದರು: “Es tut mir lied; der patient is schon gestorben” I am sorry, the patient is already dead!

 4. ಜಾಣ ಹೆಂಡತಿ
ಬೆಳಗಿನ ರೈಲಿಗೆ ಗಂಡ ಬೇಗನೆ ಮನೆಯನ್ನು ಬಿಡಬೇಕಾಗಿತ್ತು. ಹೆಂಡತಿ ಒಂದು ಅಂಚೆಯ ಲಕೋಟೆಯನ್ನು ತಂದು “ಇದು ಬಹಳ ಮುಖ್ಯವಾದ ಪತ್ರ. ನಾಳೆಯೇ ಅಮ್ಮನಿಗೆ ಇದು ತಲುಪಬೇಕು. ನೀನು ಪೇಟೆ ತಲುಪಿದಾಗ ಮರೆಯದೆ ಇದನ್ನು ಅಂಚೆಪೆಟ್ಟಿಗೆಗೆ ಹಾಕು” ಎಂದು ಹೇಳಿ ಗಂಡನ ಕೈಯಲ್ಲಿ ಕೊಟ್ಟಳು. ಹ್ಞೂಂ ಎಂದ ಗಂಡ ಒಂದು ಗಂಟೆ ಪ್ರಯಾಣದ ನಂತರ ಪೇಟೆ ತಲುಪಿ ರೈಲ್ವೆನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಮರತೇಬಿಟ್ಟ, ಆಫೀಸಿಗೆ ಸಮಯಕ್ಕೆ ಸರಿಯಾಗಿ ಹೋಗುವ ಅವಸರದಲ್ಲಿ ಹೆಂಡತಿ ಕೊಟ್ಟಿದ್ದ ಪತ್ರ ಕೋಟಿನ ಜೇಬಿನಲ್ಲಿ ಹಾಗೆಯೇ ಉಳಿದುಕೊಂಡುಬಿಟ್ಟಿತು. ರೈಲ್ವೆ ನಿಲ್ದಾಣದಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ “ನಿಮ್ಮ ಹೆಂಡತಿ ಕೊಟ್ಟ ಪತ್ರ ನೆನಪಿದೆಯೇ?” ಎಂದು ಕೇಳಿದ. ಆಗ ನೆನೆಸಿಕೊಂಡು ಹತ್ತಿರದಲ್ಲಿದ್ದ ಅಂಚೆ ಪೆಟ್ಟಿಗೆಗೆ ಹಾಕಲು ಧಾವಿಸುತ್ತಿದ್ದಂತೆಯೇ ಮತ್ತೊಬ್ಬ ಅಪರಿಚಿತ ವ್ಯಕ್ತಿ ನಿಮ್ಮ ಹೆಂಡತಿ ಕೊಟ್ಟ ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕಲು ಮರೆಯಬೇಡಿ” ಎಂದು ಜ್ಞಾಪಿಸಿದ. ಅವಸರವಾಗಿ ಅಂಚೆಪೆಟ್ಟಿಗೆಯಲ್ಲಿ ಪತ್ರವನ್ನು ಹಾಕಿ ರೈಲ್ವೆನಿಲ್ದಾಣದಿಂದ ನಿರ್ಗಮಿಸುತ್ತಿದ್ದಂತೆಯೇ ಇನ್ನೋರ್ವ ಅಪರಿಚಿತ ಮಹಿಳೆ ಮುಗುಳ್ನಗುತ್ತಾ “ನಿಮ್ಮ ಪತ್ನಿಯು ಕೊಟ್ಟಿದ್ದ ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕಿದಿರಾ?” ಎಂದು ಕೇಳಿದಳು. “ಓ ದೇವರೇ! ನನ್ನ ಹೆಂಡತಿ ಕೊಟ್ಟ ಪತ್ರ ಇವರಿಗೆಲ್ಲಾ ಹೇಗೆ ಗೊತ್ತು, ಈಗ ತಾನೆ ಅಂಚೆಪೆಟ್ಟಿಗೆಗೆ ಹಾಕಿದೆನಲ್ಲಾ!” ಎಂದು ಆಶ್ಚರ್ಯ ವ್ಯಕ್ತಪಡಿಸಿದ. ಅಪರಿಚಿತ ವ್ಯಕ್ತಿಗಳು ಹಾಗೆ ಕೇಳಲು ಕಾರಣ ಅವನ ಹೆಂಡತಿ ಗಂಡನ ಬೆನ್ನ ಹಿಂದೆ ಕೋಟಿನ ಮೇಲೆ ಒಂದು ಚೀಟಿಯನ್ನು ಅಂಟಿಸಿದ್ದಳು. ಅದರಲ್ಲಿ ಹೀಗೆ ಬರೆದಿದ್ದಳು: "ನಾನು ಕೊಟ್ಟ ಪತ್ರವನ್ನು ಅಂಚೆಪೆಟ್ಟಿಗೆಗೆ ಹಾಕಬೇಕೆಂದು ದಯಮಾಡಿ ನನ್ನ ಗಂಡನಿಗೆ ಜ್ಞಾಪಿಸಿರಿ!”

ಸಹೃದಯ ಓದುಗರೇ! ಇನ್ನೋಂದು ದಿನ ಕಳೆದರೆ ಈ ವರ್ಷ ಕೊನೆಯಾಗುತ್ತದೆ. ಈ ವರ್ಷ ನಡೆದ ಘಟನಾವಳಿಗಳು ನಾಲ್ಕನೆಯ ಕಥೆಯ ಗಂಡನ ಬೆನ್ನ ಹಿಂದೆ ಅಂಟಿಸಿದ್ದ ಚೀಟಿಯಂತೆ ನಿಮ್ಮ ಬೆನ್ನ ಹಿಂದೆಯೇ ಇವೆ. ಅವುಗಳನ್ನು ಬೇರೆಯವರು ಓದಿ ನಿಮ್ಮ ಕರ್ತವ್ಯವೇನೆಂದು ಎಚ್ಚರಿಸುವ ಮೊದಲು ನೀವೇ ಓದಿಕೊಂಡು ಹೊಸ ವರ್ಷದಲ್ಲಿ ಮುನ್ನಡೆಯುವ ಪ್ರಯತ್ನ ಮಾಡಿರಿ. ನಿಮ್ಮ ಬೆನ್ನ ಹಿಂದಿರುವುದನ್ನು ಓದಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಿಮ್ಮ ಸ್ನೇಹಿತರು ಮತ್ತು ಹಿತೈಷಿಗಳು ಎಚ್ಚರಿಸಿದಾಗಲಾದರೂ ನಿಮ್ಮ ಮುಂದಿನ ಹೆಜ್ಜೆಗಳನ್ನು ಗುರುತಿಸಿಕೊಳ್ಳಿ! ತಿಳಿಯದೆ ಮಾಡಿದ ತಪ್ಪು ತಪ್ಪೇ ಆದರೂ ಕ್ಷಮ್ಯ; ತಿಳಿದು ಮಾಡುವ ತಪ್ಪು ಬರೀ ತಪ್ಪಲ್ಲ, ಅಕ್ಷಮ್ಯ ಅಪರಾಧ! ನಾಡಿನ ಮುಖ್ಯಮಂತ್ರಿಗಳೇ! ಹಳಿಯ ಸಾಮಾನ್ಯ ಮಹಿಳೆಗೆ ತಿಳಿಯುವ ಸಂಗತಿ ನಿಮಗೆ ತಿಳಿಯುವುದಿಲ್ಲವೆಂದರೆ ಏನರ್ಥ? ಈಗಲಾದರೂ ಎಚ್ಚರ ವಹಿಸಿ ಮರ್ಯಾದೆ ಉಳಿಸಿಕೊಳ್ಳಿ! ಮಾನ ಹೋಗುತ್ತಿರುವುದು ನಿಮ್ಮದಲ್ಲ: ಈ ನಾಡಿನದು ಎಂಬುದು ನಿಮ್ಮ ನೆನಪಿನಲ್ಲಿರಲಿ! |

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 30.12.2009.