ನೀವಾಗಿದ್ದರೆ ಏನು ಮಾಡುತ್ತಿದ್ದಿರಿ, ಪ್ರಾಮಾಣಿಕವಾಗಿ ಹೇಳಿ....

  •  
  •  
  •  
  •  
  •    Views  

ಹೊಸ ವರ್ಷ ಆರಂಭವಾಗಿ ಇಲ್ಲಿಗೆ ಒಂದು ವಾರವಾಯಿತು. ಆರಂಭದ ದಿನ ಅನೇಕರಿಗೆ ಇದ್ದ "ಥ್ರೀಲ್" ಬಹುತೇಕ ಇಲ್ಲ. ಆ ದಿನ ಮಧ್ಯರಾತ್ರಿಯಲ್ಲಿ ಅಲ್ಲಲ್ಲ ಮದ್ಯದ ರಾತ್ರಿಯಲ್ಲಿ ಏರಿದ ನಶೆ ವಾರದೊಳಗೆ ಇಳಿದು ಸಹಜಸ್ಥಿತಿಗೆ ಬಂದಿರಬಹುದು. ಈ "ನಿಶಾಚರ"ರಿಗೆ ಹೊಸವರ್ಷ ಒಂದು ನೆಪ. ಉಳಿದ ರಾತ್ರಿಗಳಲ್ಲಿಯೂ ಅವರಿಗೆ ಆಗಸದಲ್ಲಿ ಎರಡೆರಡು ಚಂದ್ರ ಕಂಡು "ಚಂದ್ರಯಾನ"ದ ದಿಕ್ಕು ಬದಲಾದರೆ ಆಶ್ಚರ್ಯವೇನಿಲ್ಲ. ಹಿಂದಿನ ವಾರಕ್ಕೂ ಈ ವಾರಕ್ಕೂ ಕಾಲಮಾನದಲ್ಲಿ ವ್ಯತ್ಯಾಸವಿದೆಯೇ ಹೊರತು ಜನರ ಮನಃಸ್ಥಿತಿಯಲ್ಲಿ ಬಹಳ ವ್ಯತ್ಯಾಸವೇನೂ ಇದ್ದಂತಿಲ್ಲ. ಇಂತಹ ಇಬ್ಬರು ಗುಂಡುಪ್ರಿಯರು ಮಟಮಟ ಮಧ್ಯಾಹ್ನ ಬೀದಿಯಲ್ಲಿ ಜಗಳಕ್ಕೆ ನಿಂತರು. ನೆತ್ತಿಯ ಮೇಲೆ ಕಾಣಿಸುತ್ತಿರುವವನು ಚಂದ್ರ ಎಂದು ಒಬ್ಬ, ಸೂರ್ಯ ಎಂದು ಇನ್ನೊಬ್ಬ. ಎರಡನೆಯವನು ಸ್ವಲ್ಪ ಇತಿಮಿತಿಯಲ್ಲಿ ಇದ್ದಂತೆ ತೋರುತ್ತದೆ. ದಾರಿಯಲ್ಲಿ ಬರುತ್ತಿದ್ದ ಆಗುಂತಕನನ್ನು ನೋಡಿ ಅವನು ಹೇಳಿದಂತೆ ಒಪ್ಪಿಕೋಳ್ಳೋಣವೆಂದು ಇಬ್ಬರೂ ರಾಜಿಯಾದರು. ಅವನು ಹತ್ತಿರ ಬರುತ್ತಿದ್ದಂತೆ "ಇದು ಸೂರ್ಯನೋ ಚಂದ್ರನೋ?" ಎಂದು ಕೇಳಿದರು. ಆ ಆಗುಂತಕ ಈ ಕುಡುಕರ ಸಹವಾಸ ಬೇಡವೆಂದು "ಮೇಲಿರುವವನು ಸೂರ್ಯನೋ, ಚಂದ್ರನೋ ನನಗೆ ಸರಿಯಾಗಿ ಗೊತ್ತಿಲ್ಲ, ನಾನು ಈ ಊರಿನವನಲ್ಲ, ಪರಸ್ಥಳದವನು, ಕ್ಷಮಿಸಿ" ಎಂದು ಹೇಳಿ ಮುಂದೆ ಸಾಗಿದನಂತೆ!

ಹೊಸವರ್ಷದ ನಿಮಿತ್ತ ಕೆಟ್ಟ ಚಾಳಿ ಬಿಡುವ "ಸಂಕಲ್ಪ" (resolution) ಮಾಡಿದವರ ವಿಚಾರ ಬೇರೆ. ಅದೂ ಸಹ ನಿಧಾನವಾಗಿ ಕರಗುತ್ತಾ ಪ್ರತಿವರ್ಷದ ಕನ್ನಡಸಾಹಿತ್ಯ ಸಮ್ಮೇಳನದಲ್ಲಿ ನಾಡು-ನುಡಿಯ ಬಗ್ಗೆ ಕೈಗೊಳ್ಳುವ "ಗೊತ್ತುವಳಿ"ಗಳಂತಾದರೆ ಆಶ್ಚರ್ಯವೇನೂ ಇಲ್ಲ – "ಮೊದಲ ದಿನ ಹಣೆ ಮುಟ್ಟಿ, ಮರುದಿನ ಕೈಯ ಮುಟ್ಟಿ, ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ" ಎಂದು ಬಸವಣ್ಣನವರು ಹೇಳಿರುವ ಹಾಗೆ. ಈ "ಚಾಳಿ"ಗೆ ಇಂಗ್ಲೀಷಿನಲ್ಲಿ "habit" ಎಂದು ಕರೆಯುತ್ತಾರೆ. ಈ ಶಬ್ದದಲ್ಲಿರುವ ಮೊದಲ ಮೂರು ಅಕ್ಷರಗಳಾದ h,a ಮತ್ತು b ಗಳನ್ನು ಒಂದೊಂದೇ ತೆಗೆಯುತ್ತಾ ಹೋದರೆ ಮತ್ತೆ ಅದೇ ಚಾಳಿ ಉಳಿಯುತ್ತದೆ ಎಂದು ಇಂಗ್ಲೀಷ್ ಬಲ್ಲವರು ಲೇವಡಿ ಮಾಡುತ್ತಾರೆ: "It is difficult to remove a habit. If you remove "h",a bit remains. If you remove "a", bit remains. If you remove "b", it itself remains. (ಚಾಳಿಯನ್ನು ಅಳಿಸಿಹಾಕುವುದು ಅಷ್ಟು ಸುಲಭವಲ್ಲ. "ಎಚ್" ತೆಗೆದರೆ ಸ್ವಲ್ಪ ಉಳಿಯುತ್ತದೆ, "ಎ" ತೆಗೆದರೆ ಇನ್ನೂ ಸ್ವಲ್ಪ ಉಳಿಯುತ್ತದೆ, "ಬಿ" ತೆಗೆದರೆ ಪೂರ್ಣವಾಗಿ ಅದೇ ಉಳಿಯುತ್ತದೆ) ಬಸವಣ್ಣನವರು "ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ" ಎಂದು ಹೇಳಿರುವುದಕ್ಕೂ habit ಎಂಬ ಶಬ್ದದ ಮೊದಲ ಮೂರಕ್ಷರ ತೆಗೆಯುವುದಕ್ಕೂ ಏನೋ ಸಂಬಂಧ ಇರುವಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ ಆರಂಭದ ಉತ್ಸಾಹ ಬರಬರುತ್ತಾ ಇರುವುದಿಲ್ಲ. ಇದನ್ನು ಆರಂಭಶೂರತ್ವ ಎಂದು ಕರೆಯುತ್ತಾರೆ. ಈ ಆರಂಭಶೂರತ್ವದ ಹಣೆಪಟ್ಟಿ ದಕ್ಷಿಣಭಾರತದವರಿಗೇ ಏಕೆ ಬಿತ್ತೋ ಗೊತ್ತಿಲ್ಲ. ಆರಂಭಶೂರಾಃ ಖಲು ದಾಕ್ಷಿಣಾತ್ಯಾಃ ಎಂಬ ಕಟುಟೀಕೆಯನ್ನು ದಕ್ಷಿಣಭಾರತೀಯ ಸಂಸ್ಕೃತ ಪಂಡಿತರು ಹೇಗೆ ಸಹಿಸಿಕೊಂಡು ಸುಮ್ಮನಿದ್ದಾರೋ ಅದೇ ಆಶ್ಚರ್ಯ! ಸಂಕಲ್ಪ ಈಡೇರಬೇಕಾದರೆ ಮನಸ್ಸಿನಲ್ಲಿ ಸ್ಥಿರತೆ ಇರಬೇಕು. ಸ್ಥಿರವಿಲ್ಲದ ಮನಸ್ಸು ತೂತಿನ ಮಡಕೆ ಇದ್ದಂತೆ! ನೀರು ನಿಲ್ಲಲು ಸಾಧ್ಯವಿಲ್ಲ. "ಹಿಡಿದುದ ಬಿಡದಿದ್ದರೆ ಕಡೆಗೆ ಚಾಚುವ ಇಲ್ಲದಿರೆ ನಡುನೀರಲದ್ದುವ ಕೂಡಲಸಂಗಮ ದೇವ" ಎನ್ನುತ್ತಾರೆ ಬಸವಣ್ಣನವರು.

ಜನವರಿ ತಿಂಗಳಿಗೆ ಆ ಹೆಸರು ಬರಲು ಒಂದು ವಿಶೇಷ ಕಾರಣವಿದೆ. ರೋಮನ್ನರು "ಜಾನಸ್" ಎಂಬ ಪೌರಾಣಿಕ ದೇವತೆಯ ಹೆಸರನ್ನು ವರ್ಷದ ಮೊದಲ ತಿಂಗಳಿಗೆ ಇಟ್ಟರು. ಜಾನಸ್ ದೇವತೆಗೆ ಒಂದು ತಲೆ, ಎರಡು ಮುಖಗಳು. ಒಂದು ಮುಖ ಮಾಮೂಲಾಗಿ ತಲೆಯ ಮುಂಭಾಗದಲ್ಲಿದ್ದರೆ ಇನ್ನೊಂದು ಮುಖ ಅದರ ತಲೆಯ ಹಿಂಭಾಗದಲ್ಲಿದೆಯಂತೆ. ಹೀಗಾಗಿ ಏಕಕಾಲದಲ್ಲಿ ಹಿಂದೆ ಮುಂದೆ ನೋಡಲು ಅದಕ್ಕೆ ಸಾಧ್ಯವಂತೆ. ಜನವರಿ ತಿಂಗಳ ಅಧಿದೇವತೆಯಾದ ಈ "ಜಾನಸ್" ಹೊಸ ವರ್ಷ ಪದಾರ್ಪಣ ಮಾಡುತ್ತಿದ್ದಂತೆ ಹಿಂಭಾಗದ ಮುಖದಿಂದ ಹಳೆಯ ವರ್ಷವನ್ನೂ, ಮುಂಭಾಗದ ಮುಖದಿಂದ ಹೊಸ ವರ್ಷವನ್ನೂ ನೋಡುತ್ತದೆಯಂತೆ. ಮುಂದುಗಡೆ ಒಂದೇ ಮುಖವಿದ್ದರೂ ಅನೇಕ ಮುಖವಾಡಗಳನ್ನು ಧರಿಸಿ ಪಂಚಮುಖಿ ಪರಮೇಶ್ವರನನ್ನೂ ಮೀರಿಸಿರುವ ಮನುಷ್ಯನಿಗೆ ಹಿಂದುಗಡೆ ಇನ್ನೊಂದು ಮುಖವಿದ್ದಿದ್ದರೆ ದೈನಂದಿನ ಜೀವನದಲ್ಲಿ ಬೆನ್ನ ಹಿಂದೆ ಚಾಕು ಹಾಕುವ ಹಿತಶತ್ರುಗಳಿಂದ ಎಚ್ಚರದಿಂದಿರಲು ಸಾಧ್ಯವಾಗುತ್ತಿತ್ತೋ ಏನೋ! ಹಾಗಾಗಿದ್ದರೆ ಆತ್ಮೀಯ ಸ್ನೇಹಿತನಾಗಿದ್ದ "ಬ್ರೂಟಸ್" ನ  ಮೋಸ, ವಂಚನೆ, ಕಪಟತನಗಳಿಂದ ಹತಾಶನಾಗಿ "You too Brutus?" ಎಂದು ಕೊನೆಯುಸಿರೆಳೆದ ಜೂಲಿಯಸ್ ಸೀಜರ್ನನ್ನು ಅಮರನನ್ನಾಗಿಸಲು ಷೇಕ್ಸ್ಪಿಯರ್ಗೆ ಬರುತ್ತಿರಲಿಲ್ಲ! ಅದೇನೇ ಇರಲಿ ಈ ಕೆಳಕಂಡ ಘಟನಾವಳಿಗಳನ್ನು ಸರಿಯಾಗಿ ಓದಿ ಮನನಮಾಡಿಕೊಳ್ಳಿ. ಇಂತಹ ಸಂದರ್ಭಗಳಲ್ಲಿ ನೀವಾಗಿದ್ದರೆ ಏನು ಮಾಡುತ್ತಿದ್ದಿರಿ? ಪ್ರಾಮಾಣಿಕವಾಗಿ ಹೇಳಿ.

ಘಟನೆ  1

ನ್ಯೂಯಾರ್ಕ್ ಕಂಪನಿಯೊಂದರ ಎಂ.ಡಿ ಅವಸರದಲ್ಲಿ ತನ್ನ ಕಛೇರಿಗೆ ಹೊರಟ. ಕಂಪನಿಯ ಪ್ರವೇಶದ್ವಾರದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಕಾರನ್ನು ನಿಲ್ಲಿಸಿ ಅವರ ಗುರುತಿನ ಚೀಟಿಯನ್ನು (Identity Card) ಕೇಳಿದ. ಎಂ.ಡಿ. ತನ್ನ ಕೋಟಿನ ಎಲ್ಲ ಜೇಬುಗಳನ್ನು ತಡಕಾಡಿದ; ಸಿಗಲಿಲ್ಲ. ಬೇರೆ ಕೋಟನ್ನು ಹಾಕಿಕೊಂಡು ಬಂದಿದ್ದರಿಂದ ಮರೆತು ಬಂದಿರುವುದಾಗಿ ಹೇಳಿದ. ಆ ಉನ್ನತ ಅಧಿಕಾರಿಯನ್ನು ಸೆಕ್ಯೂರಿಟಿ ಗಾರ್ಡ್ ಗುರುತಿಸಿದರೂ "ಕಂಪನಿಯ ನಿಯಮಾನುಸಾರ ಐ.ಡಿ. ತೋರಿಸದೆ ಒಳಗೆ ಬಿಡಲು ಸಾಧ್ಯವಾಗುವುದಿಲ್ಲ, ದಯವಿಟ್ಟು ಕ್ಷಮಿಸಿ" ಎಂದು ನಿರಾಕರಿಸಿದ. ಆ ಅಧಿಕಾರಿ ಎಷ್ಟೇ ಒತ್ತಾಯಪಡಿಸಿದರೂ ಕೇಳಲಿಲ್ಲ. ಬೇಸರಗೊಂಡ ಎಂ.ಡಿ. ಅನಿವಾರ್ಯವಾಗಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸ್ ಮನೆಗೆ ಹೋದ. ತನ್ನ ಐ.ಡಿ. ಕಾರ್ಡನ್ನು ತೆಗೆದುಕೊಂಡು ಪುನಃ ಬಂದ. ಈ ಬಾರಿ ಯಾವುದೇ ಅಡೆತಡೆ ಇಲ್ಲದೆ ಪ್ರವೇಶ ಪಡೆದ. ತನ್ನ ಕಛೇರಿಯನ್ನು ಪ್ರವೇಶಿಸಿ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಆ ಸೆಕ್ಯುರಿಟಿ ಗಾರ್ಡನ್ನು ತನ್ನೆದುರು ಹಾಜರುಪಡಿಸಲು ಆಪ್ತ ಕಾರ್ಯದರ್ಶಿಗೆ ಆದೇಶಿಸಿದ. ಸೆಕ್ಯುರಿಟಿಗಾರ್ಡಿಗೆ ಕರೆ ಹೋಯಿತು. ಅವನ ಜಂಘಾಬಲವೇ ಉಡುಗಿತು. ಇನ್ನೇನು ತನ್ನ ನೌಕರಿ ಹೋಯಿತೆಂದು ಹೆದರಿ ಆತ ಎಂ.ಡಿ. ಮುಂದೆ ಹಾಜರಾಗಿ ಸೆಲ್ಯೂಟ್ ಹೊಡೆದು ವಿನೀತನಾಗಿ ನಿಂತ. ಎಂ.ಡಿ ನಗುಮುಖದಿಂದ ಅವನನ್ನು ನೋಡಿ "ನನ್ನ ಐ.ಡಿ ಕಾರ್ಡನ್ನು ಮರೆತು ಬಂದಿದ್ದಕ್ಕೆ ನನಗೆ ಬೇಸರ ಉಂಟಾಗಿದೆಯೇ ಹೊರತು, ನಿನ್ನ ಮೇಲೆ ಬೇಸರವಿಲ್ಲ. ನೀನು ನಿನ್ನ ಕರ್ತವ್ಯವನ್ನು ಚೆನ್ನಾಗಿ ಮಾಡಿದ್ದೀಯಾ, ಅದಕ್ಕಾಗಿ ನಿನಗೆ ಹೆಚ್ಚಿನ ವೇತನವನ್ನು ಮುಂಜೂರು ಮಾಡಿದ್ದೇನೆ" ಎಂದು ಹೇಳಿದಾಗ ಸೆಕ್ಯುರಿಟಿಗಾರ್ಡ್ ತನ್ನ ಕಿವಿಗಳನ್ನು ತಾನೇ ನಂಬದಾದ. ಹೋದ ಜೀವ ಮರಳಿ ಬಂದಿತ್ತು!.... ಇವರಲ್ಲೊಬ್ಬರು ನೀವಾಗಿದ್ದರೆ  ಏನು ಮಾಡುತ್ತಿದ್ದಿರಿ? ಪ್ರಾಮಾಣಿಕವಾಗಿ ಹೇಳಿ.

 ಘಟನೆ  2

ಲಂಡನ್ನಲ್ಲಿದ್ದ ಕಂಪನಿಯೊಂದರ ಎಂ.ಡಿ. ಮಾರನೆಯ ದಿನ ಮಧ್ಯಾಹ್ನ ಕಂಪನಿಯ ಕೆಲಸಾರ್ಥವಾಗಿ ರೈಲಿನಲ್ಲಿ ಎಲ್ಲಿಗೋ ಹೋಗಬೇಕಾಗಿತ್ತು. ಬೆಳಿಗಿನ ನಸುಕಿನಲ್ಲಿಯೇ ರಾತ್ರಿ ಕಾವಲುಗಾರ ಎಂ.ಡಿ. ಮನೆಗೆ ಧಾವಿಸಿ ಕರೆಗಂಟೆ ಒತ್ತಿದ. ಪ್ರಯಾಣದ ಸಿದ್ಧತೆಯಲ್ಲಿದ್ದ ಎಂ.ಡಿ ಬಾಗಿಲು ತೆರೆದ:

"ಸರ್, ದಯವಿಟ್ಟು ಈ ದಿನ ನೀವು ರೈಲಿನಲ್ಲಿ ಪ್ರಯಾಣ ಮಾಡುವುದು ಬೇಡ."
"ಏಕೆ?"
"ಸರ್, ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ಆ ರೈಲು ಥೇಮ್ಸ್ ನದಿಯನ್ನು 
ದಾಟುವಾಗ ಲಂಡನ್ ಸೇತುವೆ ಮುರಿದ ಕಾರಣ ಕೆಳಗೆ ಉರುಳಿ 
ಬಿದ್ದು ಅದರಲ್ಲಿದ್ದವರೆಲ್ಲಾ ಸತ್ತು ಹೋದರು."
"ಒಳ್ಳೆ ಚೆನ್ನಾಗಿದೆ ನಿನ್ನ ಕಂತೆಪುರಾಣ!"
"ಸರ್, ಫೀಸ್ ಕೇಳಿ ನನ್ನ ಮಾತು"

ಕಾವಲುಗಾರ ಹೋದ ಮೇಲೆ ಎಂ.ಡಿ ಚಿಂತಿಸತೊಡಗಿದ. ಅವನ ಎದೆಯ ಮೂಲೆಯೊಂದರಲ್ಲಿ ತಣ್ಣನೆಯ ನಡುಕ ಆರಂಭವಾಯಿತು. ಕಛೇರಿಗೆ ಹೋದವನೇ ಮಧ್ಯಾಹ್ನದ ಪ್ರಯಾಣವನ್ನು ರದ್ದುಪಡಿಸಿದ. ಕುತೂಹಲದಿಂದ ದೂರದರ್ಶನವನ್ನು ಆನ್ ಮಾಡಿಕೊಂಡು ಸುದ್ದಿಗಳನ್ನು ಕೇಳತೊಡಗಿದ. ಕಾವಲುಗಾರ ಹೇಳಿದಂತೆ ರೈಲು ಲಂಡನ್ ಸೇತುವೆಯ ಮೇಲೆ ಹೋಗುವಾಗ ಅಪಘಾತಕ್ಕೆ ಒಳಗಾಗಿ ಪ್ರಯಾಣಿಕರೆಲ್ಲಾ ಸತ್ತುಹೋಗಿದ್ದರು. ಎಂ.ಡಿ. ಅವಾಕ್ಕಾದ. ಬದುಕಿದೆಯಾ ಬಡಜೀವವೇ ಅಂದುಕೊಂಡ. ಆದರೆ ಸುದ್ದಿಯನ್ನು ಕೇಳಿದೊಡನೆಯೇ ಆ ಕಾವಲುಗಾರನನ್ನು ಸೇವೆಯಿಂದ ಅಮಾನತ್ತುಗೊಳಿಸಿದ. ಇದು ಸರಿಯೇ? ಪ್ರಾಣ ಉಳಿಸಿದವನನ್ನು ಹೀಗೆ ಸಸ್ಪೆಂಡ್ ಮಾಡಬಹುದೇ? ನೀವಾಗಿದ್ದರೆ ಏನು ಮಾಡುತ್ತಿದ್ದಿರಿ? ಪ್ರಾಮಾಣಿಕವಾಗಿ ಹೇಳಿ.

ಅದಕ್ಕೆ ಮುಂಚೆ ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಚಿಕ್ಕ ಮಕ್ಕಳಿದ್ದರೆ ಅವರಿಗೆ ಈ ಘಟನೆಯನ್ನು ವಿವರಿಸಿ ಅವರು ಏನು ಹೇಳುತ್ತಾರೆ ಕೇಳಿ. "ರಾತ್ರಿಕಾವಲುಗಾರ ರಾತ್ರಿಯೆಲ್ಲಾ ಎಚ್ಚರವಿದ್ದು ತನ್ನ ಕೆಲಸ ಮಾಡುವುದನ್ನು ಬಿಟ್ಟು ನಿದ್ರೆ ಮಾಡುತ್ತಿದ್ದ. ಅದಕ್ಕಾಗಿ ಅವನನ್ನು ಎಂ.ಡಿ. ಅಮಾನತ್ತುಗೊಳಿಸಿದ್ದು ಸರಿ" ಎಂಬ ಉತ್ತರ ಬಂದರೆ ನಿಮ್ಮ ಮಕ್ಕಳು ತುಂಬಾ ಜಾಣರು. "ಭೇಷ್" ಎಂದು ಬೆನ್ನುತಟ್ಟಿ ಅವರಿಗೆ ಏನಾದರೊಂದು "ಗಿಫ್ಟ್" ಕೊಡಿ. ಆದರೆ ಇದೇ ಉತ್ತರವನ್ನು ನೀವು ನಮಗೆ ಕೊಟ್ಟರೆ ನಾವು ನಿಮ್ಮ ಬೆನ್ನು ತಟ್ಟುವುದಿಲ್ಲ. ಏಕೆಂದರೆ ಆ ಎಂ.ಡಿ. ರೈಲು ದುರಂತ ಆಗುವವರೆಗೂ ಕಾಯ್ದು ಕಾವಲುಗಾರನನ್ನು ತಡವಾಗಿ ಅಮಾನತ್ತುಗೊಳಿಸಿದ್ದು ತಪ್ಪು. ಮಧ್ಯಾಹ್ನದ ತನ್ನ ಪ್ರಯಾಣವನ್ನು ರದ್ದು ಮಾಡುವ ಮೊದಲೇ ರಾತ್ರಿಕಾವಲುಗಾರನನ್ನು "ಕರ್ತವ್ಯಚ್ಯುತಿ"ಯ ಆರೋಪದ ಮೇಲೆ ಅಮಾನತ್ತುಗೊಳಿಸಬೇಕಾಗಿತ್ತು. ಅಥವಾ ಸುದ್ದಿ ತಿಳಿದ ಮೇಲೆ ಭಯೋತ್ಪಾದಕರಿಗೂ ಅವನಿಗೂ ಏನೋ ಸಂಬಂಧವಿದೆಯೇ ಎಂಬ ಅನುಮಾನದ ಮೇಲೆ ಅಮಾನತ್ತುಗೊಳಿಸಿದ್ದರೂ ಸರಿಯಾಗುತ್ತಿತ್ತು. ಅಂತಹ ಯಾವ ಅನುಮಾನ ಇಲ್ಲವೆಂದು ಕಂಡುಬಂದರೆ ಅವನಿಗೆ "ಅತೀಂದ್ರಿಯಶಕ್ತಿ" ಇದೆಯೆಂದು ಭಾರತೀಯ ರೈಲ್ವೆ ಇಲಾಖೆಗೆ ಆತನನ್ನು ಸಲಹೆಗಾರನನ್ನಾಗಿ ತೆಗೆದುಕೊಳ್ಳಲು ಶಿಫಾರಸ್ಸು ಮಾಡಿದ್ದರೆ ಇನ್ನೂ ಒಳ್ಳೆಯದಾಗುತ್ತಿತ್ತು!

ಘಟನೆ  3

80 ರ ದಶಕವಿರಬಹುದು. ಆಗಿನ್ನೂ ಮಠಾಧಿಪತಿಗಳು ಈಗಿನಂತೆ ಪರದೇಶಗಳಿಗೆ ಹೋಗುವ ಪರಿಪಾಠ ಇರಲಿಲ್ಲ. ಒಮ್ಮೆ ಅಮೇರಿಕೆಗೆ ಹೊರಟಿದ್ದೆವು. ಮುಂಬಯಿ ವಿಮಾನನಿಲ್ದಾಣದಲ್ಲಿ ಸುರಕ್ಷಾ ತನಿಖೆಗಿಂತ ಮುಂಚೆ Emigration ನಲ್ಲಿ ಹಾಜರಾಗಿ ನಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಬೆಳ್ಳಿಯ ಪೂಜಾಸಾಮಗ್ರಿಗಳ ಪಟ್ಟಿಯನ್ನು ಕಸ್ಟಂಸ್ ಅಧಿಕಾರಿಗಳ ಮುಂದಿಟ್ಟೆವು.

"Have you got permission from the Reserve Bank?" 

"No, Officer. I didnt know it. I am honestly producing you the list of silver Pooja articles that I am carrying, as advised by my travel agent?"

"No, Swamiji! I can’t allow you to take these articles." 

"Look Officer! I am not smuggling these silver articles. I can do my Pooja even without these. Look straight at my face. You are well trained in your profession. If you think that I am a smuggler, you may impound them."

"Sorry Swamiji. I know, you are a religious man. What shall I do! I am governed by the rules. But.... I will just close my eyes. Please take them with you!"

ವಿಮಾನ ಹತ್ತಿ ಕುಳಿತ ಮೇಲೆ ಯೋಚಿಸತೊಡಗಿದೆವು. ಆ ಅಧಿಕಾರಿಯ ಧಾರ್ಮಿಕ ಶ್ರದ್ಧೆ ಕಾನೂನನ್ನು ಮೀರಿತ್ತು! ನೀವಾಗಿದ್ದರೆ ಏನು ಮಾಡುತ್ತಿದ್ದಿರಿ? ಪ್ರಾಮಾಣಿಕವಾಗಿ ಹೇಳಿ. ಸ್ವಲ್ಪಹೊತ್ತಿನಲ್ಲಿಯೇ ವಿಮಾನ ಹೊರಟಿತು. ಹಿಂದಿನ ಮೈಸೂರು ಮಹಾರಾಜರ ನೆನಪಾಗಿ ನಗು ಬಂತು. ಇದೇನು ಕಟ್ಟುಕತೆಯೋ ನಿಜವಾದ ಘಟನೆಯೋ ಗೊತ್ತಿಲ್ಲ. ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರು ವಿಮಾನದಲ್ಲಿ ಪರದೇಶಗಳಿಗೆ ಪ್ರಯಾಣ ಮಾಡುವಾಗ ಯಾವಾಗಲೂ ಜೊತೆಯಲ್ಲಿ ಅವರ ಆರಾಧ್ಯದೇವರ ಪೂಜಾಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದರಂತೆ. ಅದಕ್ಕಾಗಿ ಅವರು ಬೇರೊಂದು ಟಿಕೆಟ್ಟನ್ನು ಕೊಂಡು ಪ್ರತ್ಯೇಕ ಆಸನದಲ್ಲಿ ಪೂಜಾಪೆಟ್ಟಿಗೆಯನ್ನು ಇಡುತ್ತಿದ್ದರಂತೆ. ವಿಮಾನ ಹೊರಡುವ ಸಮಯ. ಗಗನಸಖಿ ಪ್ರಯಾಣಿಕರ ತಲೆ ಎಣಿಕೆ ಮಾಡಿದಳು. ಒಬ್ಬ ಪ್ರಯಾಣಿಕ ಕಡಿಮೆಬಿದ್ದನು. ಕೂಡಲೇ ವಿಮಾನನಿಲ್ದಾಣದ ಧ್ವನಿವರ್ಧಕದಲ್ಲಿ ಸೂಚನೆ ನೀಡಲಾಯಿತು:  "This is the last and final boarding call for the passenger, Mr Pooja Pettige!"

ಘಟನೆ  4

ಬೆಂಗಳೂರಿನಲ್ಲಿ ಎಲೆ ಮಲ್ಲಪ್ಪ ಶೆಟ್ಟರು ಎಂಬ ದೊಡ್ಡ ಶ್ರೀಮಂತರಿದ್ದರು. ಅವರು ಕೊಡುಗೈದಾನಿಗಳಾಗಿದ್ದು ಹೃದಯಶ್ರೀಮಂತರೂ ಆಗಿದ್ದರೆಂಬ ಅಪರೂಪದ ಘಟನೆಯೊಂದನ್ನು ಶ್ರೀಮತಿ ಜಯಾ ರಾಜಶೇಖರ್ ನಿರೂಪಿಸಿದ್ದಾರೆ. ಇದನ್ನು ಡಾ. ವೆಂಕಟಾಚಲ ಶಾಸ್ತಿಯವರು ತಮ್ಮ "ಉದಾರಚರಿತರ ಉದಾತ್ತಪ್ರಸಂಗಗಳು" ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಮಲ್ಲಪ್ಪ ಶೆಟ್ಟರು ದುರದೃಪ್ಪವಶಾತ್ ಇಳಿವಯಸ್ಸಿನಲ್ಲಿ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಒಳಗಾದರು. ಅವರ ಔದಾರ್ಯವನ್ನು ಯಾರೂ ದುರುಪಯೋಗಮಾಡಿಕೊಳ್ಳಬಾರದೆಂದು ಮನೆಯವರು ಕಾವಲು ಹಾಕಿದ್ದರು. ಒಬ್ಬ ಬಡಬ್ರಾಹ್ಮಣ ಹೇಗೋ ಕಣ್ತಪ್ಪಿಸಿಕೊಂಡು ನುಸುಳಿ ಅವರ ಕಾಲು ಹಿಡಿದುಕೊಂಡು ಅಳತೊಡಗಿದ. ದುಡ್ಡಿನ ತೊಂದರೆಯಿಂದಾಗಿ ತನ್ನ ಮಗಳ ಮದುವೆ ನಿಲ್ಲುವ ಪರಿಸ್ಥಿತಿ ಬಂದಿರುವುದನ್ನು ನಿವೇದಿಸಿಕೊಂಡ. ಶೆಟ್ಟರು "ಅಯ್ಯೋ ಕಷ್ಟ ಎಂದು ಬಂದವರಿಗೆ ಏನೂ ಕೊಡಲಾಗದಂತೆ ನನ್ನ ಕೈ ಕಟ್ಟಿಹಾಕಿದೆಯಲ್ಲಾ ಶಿವನೇ" ಎಂದು ಕೊರಗುತ್ತಾ ತಮ್ಮ ಎರಡೂ ಕೈಗಳನ್ನು ಎದೆಯ ಮೇಲಿಟ್ಟುಕೊಂಡರು. ಅವರಿಗೆ ಏನೋ ಹೊಳೆದಂತಾಯಿತು. ಕೂಡಲೇ ಎದ್ದು ಬಚ್ಚಲುಮನೆಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡು ದೇವರಮನೆಗೆ ಹೋದರು. ತಾವು ಧರಿಸಿದ್ದ ಬಂಗಾರದ ಕರಡಿಗೆಯಲ್ಲಿದ್ದ ಲಿಂಗವನ್ನು ಹೊರತೆಗೆದು ಕೆಂಪುಮಡಿವಸ್ತ್ರದಲ್ಲಿಟ್ಟು ಸುತ್ತಿ ಕೊರಳಿಗೆ ಕಟ್ಟಿಕೊಂಡರು. ಬೇರೊಂದು ಬಟ್ಟೆಯಲ್ಲಿ ಬಂಗಾರದ ಕರಡಿಗೆಯನ್ನು ಸುತ್ತಿಕೊಂಡು ಬಂದು ಬಡಬ್ರಾಹ್ಮಣನಿಗೆ ಕೊಟ್ಟು "ಮನೆಯಲ್ಲಿ ಯಾರಿಗೂ ಕಾಣಿಸಿಕೊಳ್ಳದಂತೆ ಬೇಗನೆ ಹೊರಡು, ನಿನ್ನ ಮಗಳ ಕಲ್ಯಾಣವಾಗಲಿ" ಎಂದು ಹರಸಿ ಕಳುಹಿಸಿದರು. ಮನೆಯವರಿಗೆ ಗೊತ್ತಾಗದಿರಲೆಂದು ಎದೆಯ ಮೇಲೆ ಸದಾ ವಲ್ಲಿಯನ್ನು ಹೊದ್ದುಕೊಂಡಿದ್ದರು. ಮುಂದೊಂದು ದಿನ ಎದೆಯ ಮೇಲೆ ಬಂಗಾರದ ಕರಡಿಗೆ ಇಲ್ಲವೆಂದು ಗೊತ್ತಾಗಿ ಮನೆಯವರು ಎಲ್ಲಿದೆಯೆಂದು ಕೇಳಿದಾಗ "ಅದು ಹೋಗಬೇಕಾದ ಜಾಗಕ್ಕೆ ಹೋಯಿತು"  ಎಂದು ಗಂಭೀರವದನರಾಗಿ ಹೇಳಿದರು .... ನೀವಾಗಿದ್ದರೆ ಏನು ಮಾಡುತ್ತಿದ್ದಿರಿ? ಪ್ರಾಮಾಣಿಕವಾಗಿ ಹೇಳಿ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 7.1.2009.