ಮುಗಿಯದ ಮಹಾಭಾರತದ ಕತೆ!
ಪ್ರಾಚೀನ ಕಾಲದ ಗುರು-ಶಿಷ್ಯ ಬಾಂಧವ್ಯದ ಹೆಗ್ಗಳಿಕೆಯ ಪ್ರತೀಕವಾಗಿ ಮಹಾಭಾರತದಲ್ಲಿ ಬರುವ ಏಕಲವ್ಯನ ಪ್ರಕರಣವನ್ನು ಉದಾಹರಿಸುತ್ತಾರೆ. ಏಕಲವ್ಯನ ಗುರುಭಕ್ತಿಯೆಂದೇ ಅದು ಪ್ರಸಿದ್ಧವಾಗಿದೆ. ಪಾಂಡವರು ಮತ್ತು ಕೌರವರಿಗೆ ಶಸ್ತ್ರ ವಿದ್ಯೆಯನ್ನು ಬೋಧಿಸುತ್ತಿದ್ದ ದ್ರೋಣಾಚಾರ್ಯರನ್ನು ಕಾಡಿನಿಂದ ಅರಸಿ ಕಲಿಯಲು ಬಂದ ಕೀಳು ಜಾತಿಯ ಬೇಡ ಏಕಲವ್ಯ ಹತಾಶನಾಗಿ ಹಿಂದಿರುಗಬೇಕಾಗುತ್ತದೆ. ಆದರೂ ಗುರುವಿನಲ್ಲಿ ಗೌರವ ಭಾವನೆಯನ್ನು ಕಳೆದುಕೊಳ್ಳದೆ ಕಾಡಿನಲ್ಲಿ ಅವರ ಮಣ್ಣಿನ ಮೂರ್ತಿಯನ್ನೇ ಇರಿಸಿಕೊಂಡು ಅಭ್ಯಸಿಸಿದ. ಬಿಲ್ಲುಗಾರಿಕೆಯಲ್ಲಿ ಅರ್ಜುನನನ್ನೂ ಮೀರಿಸಬಲ್ಲವನಾದ. ದೂರದಲ್ಲಿ ಬೊಗಳುತ್ತಿದ್ದ ನಾಯಿಯನ್ನು ನೋಡದೆಯೇ ಶಬ್ಧವೇಧಿ ಬಾಣಗಳಿಂದ ಅದರ ಬಾಯಿಗೆ ಗುರಿಯಿಟ್ಟು ಹೊಡೆದು ಅದರ ಬಾಯನ್ನೇ ಬಾಣಗಳ ಬತ್ತಳಿಕೆಯನ್ನಾಗಿಸಿದ. ಅರ್ಜುನನಿಗೆ ಮನುಷ್ಯ ಸಹಜವಾದ ಅಸೂಯೆ ಬೆಳೆಯಿತು. ಧನುರ್ವಿದ್ಯೆಯಲ್ಲಿ ಲೋಕದಲ್ಲಿಯೇ ಅದ್ವಿತೀಯನನ್ನಾಗಿ ಮಾಡುವುದಾಗಿ ಮಾತುಕೊಟ್ಟಿದ್ದ ದ್ರೋಣಾಚಾರ್ಯರ ಬಗ್ಗೆ ಅಸಮಾಧಾನಗೊಳ್ಳುತ್ತಾನೆ. ದ್ರೋಣಾಚಾರ್ಯರು ಅರ್ಜುನನೊಂದಿಗೆ ಏಕಲವ್ಯನಿದ್ದಲ್ಲಿಗೆ ಬರುತ್ತಾರೆ. ಬಡವ ನಿಧಾನವ ಕಂಡಂತಾಯಿತ್ತು ಏಕಲವ್ಯನಿಗೆ. ಗುರುದರ್ಶನದಿಂದ ಪುಳಕಗೊಂಡ. ಏನನ್ನು ಗುರುದಕ್ಷಿಣೆಯನ್ನಾಗಿ ಕೊಡಬೇಕೋ ತೋಚದಾಯಿತು. ಏನಿಲ್ಲದಿದ್ದರೂ ತನ್ನ ಗುರುವಿಗಾಗಿ ಏನನ್ನಾದರೂ ತಂದು ಕೊಡಬೇಕೆಂಬ ಅಪರಿಮಿತ ಭಕ್ತಿ ಅವನಿಗೆ. ಗುರುವನ್ನೇ ಕೇಳಿದ. ಕ್ಷಣಾರ್ಧದಲ್ಲಿ ಅವನ ಸಡಗರ ಸಂಭ್ರಮವೆಲ್ಲ ಕುಸಿದುಬಿತ್ತು. ರಾಜಮನೆತನದ ಉಪ್ಪುಂಡ ದ್ರೋಣ ಬಯಸಿದ್ದು ಅವನ ಬಲಗೈ ಹೆಬ್ಬೆರಳನ್ನು! ಏಕಲವ್ಯ ತಡಮಾಡಲಿಲ್ಲ. ತನ್ನ ಸೊಂಟದಲ್ಲಿದ್ದ ಕತ್ತಿಯನ್ನು ಹೊರತೆಗೆದು ಕಚಕ್ಕನೆ ಕತ್ತರಿಸಿದ. ರಕ್ತ ಕಾರಂಜಿಯಂತೆ ಚಿಮ್ಮಿತ್ತು. ಕ್ಷಣಾರ್ಧದಲ್ಲಿ ತುಂಡಾದ ರಕ್ತಸಿಕ್ತವಾದ ಆತನ ಬಲಗೈ ಹೆಬ್ಬೆರಳು ದ್ರೋಣನ ಪದತಲದಲ್ಲಿ ಬಿತ್ತು!
ಇದು ಗುರುಭಕ್ತಿಯ ಹೆಗ್ಗಳಿಕೆಯೆಂದು ನಮ್ಮವರು ಮಹಾಭಾರತದ ಕಾಲದಿಂದಲೂ ಹಾಡಿ ಹರಸುತ್ತಾ ಬಂದಿದ್ದಾರೆ. ನಿಜ, ಏಕಲವ್ಯನ ನಿಷ್ಕಪಟ, ನಿರ್ವ್ಯಾಜ, ನಿರ್ಮಲ ಭಕ್ತಿಯನ್ನು ಮೆಚ್ಚಿಕೊಳ್ಳಲೇಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಅವನ ಗುರುಭಕ್ತಿಯನ್ನು ಪರೀಕ್ಷಿಸಲು ಬಲಗೈ ಹೆಬ್ಬೆರಳನ್ನೇ ದ್ರೋಣಾಚಾರ್ಯರು ಏಕೆ ಕೇಳಬೇಕಿತ್ತು? ಕೇಳಿದರೂ ಅದನ್ನು ಕಡಿಯುವವರೆಗೂ ಏಕೆ ಸುಮ್ಮನಿರಬೇಕಿತ್ತು? ತನ್ನ ಹೆಬ್ಬೆರಳನ್ನು ಕತ್ತರಿಸಿಕೊಳ್ಳಲು ಉದ್ಯುಕ್ತನಾಗುತ್ತಿದ್ದಂತೆಯೇ, ಅವನನ್ನು ತಡೆದು ನಿಲ್ಲಿಸದ ದ್ರೋಣನ ಹೃದಯ ಎಂತಹ ಕಲ್ಲು ಹೃದಯ? ಅರ್ಜುನನ ಅಸೂಯೆಯನ್ನು ತೃಪ್ತಿಗೊಳಿಸಲು ಎಂತಹ ಕ್ರೂರ ಬಲಿ ಇದು! ಅರ್ಜುನನನ್ನು ಅಪ್ರತಿಮ ವೀರನನ್ನಾಗಿ ಮಾಡಲೋ ಅಥವಾ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲೋ ದ್ರೋಣ ಎಸಗಿದ ಎಂಥ ಹೀನ ಕೃತ್ಯವಿದು! ಏಕಲವ್ಯನ ಮುಗ್ಧ ಭಕ್ತಿ ಇದನ್ನರಿಯದೆ ಮೋಸಹೋಯಿತು.
ಈ ಕಥೆ ಗೊತ್ತಿರದ ಭಾರತೀಯ ಮಕ್ಕಳಾರೂ ಇಲ್ಲ. “No, Mom, he was innocent and a poor boy with talent” ಎಂದು ತನ್ನ 12 ವರ್ಷದ ಮಗ argue ಮಾಡುತ್ತಾನೆಂದೂ, ಇದರಿಂದ ತುಂಬಾ upset ಆಗಿದ್ದಾನೆಂದೂ ಅವನನ್ನು ಸಮಾಧಾನಪಡಿಸುವ ಬಗೆ ಹೇಗೆ ಎಂದು ಕೇಳಿ ಶ್ರೀಮತಿ ಪೂರ್ಣಿಮಾ ಎಂಬ ಓರ್ವ ತಾಯಿ ನಮಗೆ ವಿದ್ಯುನ್ಮಾನ ಪತ್ರ ಬರೆದಿದ್ದಾರೆ. ಮಕ್ಕಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರ ಹೇಳುವುದು ಅಷ್ಟು ಸುಲಭದ ಮಾತಲ್ಲ.
ಈ ಪ್ರಕರಣವನ್ನು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ನೀಡಿದ ಒಂದು ತೀರ್ಪಿನಲ್ಲಿ ಉಲ್ಲೇಖಿಸಿದೆ: “This was a shameful act on the part of Dronacharya. He had not even taught Eklavya, so what right had he to demand guru dakshina, and that too of the right thumb of Eklavya so that the latter may not become a better archer than his favourite pupil Arjun?” ದ್ರೋಣಾಚಾರ್ಯರದು ಲಜ್ಜೆಗೇಡಿ ವರ್ತನೆ. ಏಕಲವ್ಯನಿಗೆ ಅವರೇನೂ ಪಾಠ ಹೇಳಿದ ಗುರುವಲ್ಲ. ಹೀಗಿರುವಾಗ ಅವನಿಂದ ಗುರುದಕ್ಷಿಣೆಯನ್ನು ಕೇಳುವ ಹಕ್ಕಾದರೂ ಎಲ್ಲಿದೆ? ಗುರುದಕ್ಷಿಣೆಯಾಗಿ ಅವನ ಬಲಗೈ ಹೆಬ್ಬೆರಳನ್ನು ಕೇಳಿದ್ದು ಯಾವ ನ್ಯಾಯ? ಅದರ ಹಿಂದೆ ಬಿಲ್ಲು ವಿದ್ಯೆಯಲ್ಲಿ ತನ್ನ ಶಿಷ್ಯ ಅರ್ಜುನನನ್ನು ಮೀರಿಸಬಲ್ಲ ಅಪ್ರತಿಮ ಬಿಲ್ಲುಗಾರ ಅವನಾಗಬಾರದೆಂಬ ದುರುದ್ದೇಶ ದ್ರೋಣಾಚಾರ್ಯರಿಗೆ ಇತ್ತು. ಏಕಲವ್ಯ ಕಾಡಿನಲ್ಲಿದ್ದ ಆದಿವಾಸಿ. ಮಹಾಭಾರತದ ಆದಿಪರ್ವದಲ್ಲಿ ಬರುವ ಈ ಪ್ರಕರಣ ಇತಿಹಾಸದಲ್ಲಿ ಆದಿವಾಸಿ ಜನರ ಮೇಲೆ ನಡೆದ ಘೋರ ಅನ್ಯಾಯಕ್ಕೆ ಒಂದು ಉದಾಹರಣೆ (well-known example of the injustice to tribals) ಎಂದು ನಮ್ಮ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಬಣ್ಣಿಸಿದ್ದಾರೆ. ಸಂದರ್ಭ: ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಭಿಲ್ಲ ಜನಾಂಗದ ಮಹಿಳೆಯೊಬ್ಬಳ ಮೇಲೆ ಸವರ್ಣೀಯರು ನಡೆಸಿದ ಹಲ್ಲೆ. ಅವಳನ್ನು ವಿವಸ್ತ್ರಳನ್ನಾಗಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ ಅಪರಾಧಿಗಳಿಗೆ ಅಹಮದ್‌ನಗರದ ನ್ಯಾಯಾಲಯ ವಿಚಾರಣೆ ನಡೆಸಿ ಒಂದು ವರ್ಷ ಕಾಲ ಜೈಲುಶಿಕ್ಷೆಯನ್ನು ವಿಧಿಸಿತ್ತು. ಅಪರಾಧಿಗಳು ಮುಂಬಯಿ ಹೈಕೋರ್ಟಿನ ಔರಂಗಾಬಾದ್ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿ ಬಿಡುಗಡೆ ಹೊಂದಿದ್ದರು. ಪ್ರಕರಣವು ದೇಶದ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದು ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಾಟ್ಜು ಮತ್ತು ಜ್ಞಾನಸುಧಾ ಮಿಶ್ರ ಅವರಿದ್ದ ದ್ವಿಸದಸ್ಯಪೀಠವು ಅಪರಾಧಿಗಳಿಗೆ ಕೆಳಗಿನ ಕೊರ್ಟು ವಿಧಿಸಿದ್ದ ಜೈಲು ಶಿಕ್ಷೆಯನ್ನು ಖಾಯಂಗೊಳಿಸಿತು. ಬಡ ಮಹಿಳೆಯ ಮೇಲೆ ನಡೆದ ದೌರ್ಜನ್ಯವನ್ನು ನಿರ್ಲಕ್ಷಿಸಿ ದಿವ್ಯ ಮೌನ ತಳೆದ ಮಹಾರಾಷ್ಟ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಅಂತರಜಾಲದಲ್ಲಿ ಅನೇಕ ಓದುಗರ ಕಟು ಟೀಕೆಗೆ ಗುರಿಯಾಗಿದೆ. ಭಿಲ್ಲ ಜನಾಂಗದ ಆದಿವಾಸಿ ಮಹಿಳೆಯನ್ನು ಅವಮಾನಗೊಳಿಸಿದ ಅಯೋಗ್ಯರಿಗೆ ಶಿಕ್ಷೆ ವಿಧಿಸಿದ ಬಗ್ಗೆ ಯಾರ ತಕರಾರೂ ಇಲ್ಲ. ಆದರೆ ಮಹಾಭಾರತದ ಪ್ರಕರಣವನ್ನು ಈ ಘಟನೆಗೆ ಸಮೀಕರಿಸಿದ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವು ಆಯ್ದ ಪ್ರತಿಕ್ರಿಯೆಗಳ ಸಾರ ಹೀಗಿದೆ:
- ಆದಿವಾಸಿ ಮಹಿಳೆಯೇ ಏಕೆ ನಾಗರೀಕ ಸಮಾಜದಲ್ಲಿ ಯಾವ ಮಹಿಳೆಯೊಂದಿಗೂ ಹೀಗೆ ಅಸಭ್ಯ ರೀತಿಯಲ್ಲಿ ವರ್ತಿಸುವುದು ಅನುಚಿತವೂ ಶಿಕ್ಷಾರ್ಹವೂ ಹೌದು. ಆದರೆ ಅದರ ಸಮರ್ಥನೆಗಾಗಿ ಮಹಾಭಾರತದ ಏಕಲವ್ಯ ಪ್ರಸಂಗವನ್ನು ಉಲ್ಲೇಖಿಸುವ ಅವಶ್ಯಕತೆ ಇರಲಿಲ್ಲ. ಆದಿವಾಸಿಗಳ ಶೋಷಣೆ ಮಹಾಭಾರತದ ಕಾಲಕ್ಕಿಂತಲೂ ಆಧುನಿಕ ಕಾಲದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಕಾಡಿನ ನಾಶದಿಂದ ಕಾಡಿನ ಪ್ರಾಚೀನ ಸಂಸ್ಕೃತಿಯ ನಾಶ ಆಗುತ್ತಿದೆ. ಹಿಂದಿನ ರಾಜಮಹಾರಾಜರುಗಳ ಕಾಲದಲ್ಲಿ ಗುಡ್ಡಗಾಡಿನಲ್ಲಿದ್ದ ಜನರು ತಮ್ಮದೇ ಸಾಮ್ರಾಜ್ಯವನ್ನು ಹೊಂದಿದ್ದರು. ಆಯಾಯ ರಾಜರ ಆಳ್ವಿಕೆಯ ಪ್ರದೇಶದಲ್ಲಿದ್ದ ಅವರಿಗೆ ರಾಜರಿಂದ ಯಾವುದೇ ಕಿರುಕುಳ ಇರಲಿಲ್ಲ. ಅವರೂ ಸಹ ರಾಜರಿಗೆ ಯುದ್ಧಕಾಲದಲ್ಲಿ ನೆರವಾದರೇ ಹೊರತು ರಾಜರ ವಿರುದ್ಧ ಬಂಡುಕೋರರಾಗಿ ವರ್ತಿಸಿಲ್ಲ.
- ನ್ಯಾಯಾಲಯವು ಆದಿವಾಸಿ ಮಹಿಳೆಗೆ ನ್ಯಾಯ ಒದಗಿಸಿಕೊಟ್ಟಿದೆ. ಆದರೆ ಅದಕ್ಕಾಗಿ ಮಹಾಭಾರತದ ಘಟನೆಯನ್ನು ಹೋಲಿಕೆಯಾಗಿ ಕೊಡಬೇಕಾಗಿರಲಿಲ್ಲ. ನ್ಯಾಯಾಧೀಶರೂ ಎಷ್ಟೇ ಆಗಲಿ ಮನುಷ್ಯರೇ ಅಲ್ಲವೇ?
- ಹೋಲಿಕೆ ಕೊಟ್ಟಿರುವುದು ಸಮಂಜಸವಲ್ಲ, ನಿಜ. ಆದರೆ ದ್ರೋಣಾಚಾರ್ಯರು ಬೆಳೆಯುವ ಪ್ರತಿಭೆಯನ್ನು ಎಳೆಯದರಲ್ಲಿಯೇ ಹೊಸಕಿಹಾಕುವ ಪ್ರಯತ್ನ ಮಾಡಿದ್ದು ತಪ್ಪು.
- ಆದಿವಾಸಿ ಮಹಿಳೆಗೆ ಆದ ಅನ್ಯಾಯವನ್ನು ಏಕಲವ್ಯನಿಗೆ ದ್ರೋಣಾಚಾರ್ಯರಿಂದ ಆದ ಅನ್ಯಾಯಕ್ಕೆ ಹೋಲಿಸುವುದು ಸರಿಯಲ್ಲ. ದ್ರೋಣಾಚಾರ್ಯರು ಏಕಲವ್ಯನಿಗೆ ಅನ್ಯಾಯ ಮಾಡಿದರೆಂದು ಮೇಲ್ನೋಟಕ್ಕೆ ಕಂಡುಬಂದರೂ ಅವರ ಮೂಲ ಉದ್ದೇಶ ರಾಜ್ಯದ ಹಿತ ಆಗಿತ್ತು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಸರ್ಕಾರವೂ ತನ್ನ ದೇಶದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಬಲಪಡಿಸಿಕೊಳ್ಳುತ್ತದೆ. ಯಾವ ಸರ್ಕಾರವೂ ಮಿಲಿಟರಿ ಕಾರ್ಯಾಚರಣೆಯ ರಹಸ್ಯವನ್ನು ಬಹಿರಂಗಗೊಳಿಸುವುದಿಲ್ಲ. ಅದರಂತೆ ಏಕಲವ್ಯ ಮುಂದೆ ಅಪ್ರತಿಮ ವೀರನಾಗಿ ರಾಜ್ಯಕ್ಕೆ ಅವನಿಂದ ತೊಂದರೆಯುಂಟಾಗಬಾರದೆಂಬ ಮುನ್ನೆಚ್ಚರಿಕೆಯಿಂದ ದ್ರೋಣರು ಅವನನ್ನು ದುರ್ಬಲನನ್ನಾಗಿ ಮಾಡಲು ಮುಂದಾದರು.
- ನ್ಯಾಯಮೂರ್ತಿಗಳು ಮೂಲ ಮಹಾಭಾರತವನ್ನು ಓದಿದಂತೆ ಕಾಣಿಸುವುದಿಲ್ಲ. ದ್ರೋಣರನ್ನು ಸಾಕ್ಷಿ ಕಟ್ಟೆಗೆ ಕರೆಸಿ ವಿಚಾರಮಾಡದೆ ತೀರ್ಪು ಕೊಟ್ಟಿರುವುದು ಸರಿಯಲ್ಲ.
- ಅನ್ಯಾಯ ಅನ್ಯಾಯವೇ. ಈಗಲೂ ಇಂತಹ ಅನ್ಯಾಯಗಳು ಹೇರಳವಾಗಿ ನಡೆಯುತ್ತಿವೆ. ಆದಕಾರಣ ಬೇಸತ್ತ ಆದಿವಾಸಿಗಳು ಅನ್ಯ ಧರ್ಮಕ್ಕೆ ಮತಾಂತರಗೊಂಡರೆ ಆಶ್ಚರ್ಯವಿಲ್ಲ.
- ನ್ಯಾಯಮೂರ್ತಿಗಳು ಕೊಟ್ಟಿರುವ ಹೋಲಿಕೆ ಪೂರ್ವಾಗ್ರಹ ಭಾವನೆಯಿಂದ ಕೂಡಿದೆ. ಕಾಲ-ದೇಶ, ಸಂದರ್ಭ-ಸನ್ನಿವೇಶಗಳಿಗೆ ಅನುಗುಣವಾಗಿ ವ್ಯಕ್ತಿಯ ಮನಸ್ಸಿನಲ್ಲಿ ಉಂಟಾಗುವ ಆಲೋಚನೆಗಳನ್ನು, ತಳಮಳ-ತಾಕಲಾಟಗಳನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ.
- ನ್ಯಾಯಮೂರ್ತಿಗಳು ದ್ರೋಣಾಚಾರ್ಯರನ್ನೇಕೆ ಇಲ್ಲಿ ಎಳೆತರಬೇಕು? ಅವರನ್ನು ಉಲ್ಲೇಖಿಸದೆ ನ್ಯಾಯ ಪ್ರದಾನ ಮಾಡಲು ಬರುತ್ತಿರಲಿಲ್ಲವೇ?
ಇತಿಹಾಸದಲ್ಲಿ ರಾಜರುಗಳು ಕೇವಲ ಮೇಲುಜಾತಿಯವರನ್ನೇ ಓಲೈಸಿ ಕೆಳವರ್ಗದವರನ್ನು ಧಿಕ್ಕರಿಸಿದರು ಎಂದು ಸಾಮಾನ್ಯೀಕರಿಸಿ (generalize) ಹೇಳುವುದು ಕಷ್ಟ. ತಮ್ಮ ಅಧಿಕಾರ ಗದ್ದುಗೆಯನ್ನು ಉಳಿಸಿಕೊಳ್ಳಲು ಆಡಳಿತಕ್ಕೆ ಅನುಕೂಲವಾಗುವುದಾದರೆ ಅವರು ಮೇಲು ವರ್ಗದವರ ವಿರೋಧವನ್ನು ಕಟ್ಟಿಕೊಂಡು ಕೆಳವರ್ಗದವರ ಮರ್ಜಿ ಹಿಡಿದಿರುವ ಉದಾಹರಣೆಗಳೂ ದೊರಕುತ್ತವೆ. ಅಂಥದೊಂದು ಪ್ರಸಂಗವನ್ನು ತ.ರಾ.ಸು. ಅವರು ವೀರ ಮದಕರಿನಾಯಕನನ್ನು ಕುರಿತು ಬರೆದ ತಮ್ಮ ದುರ್ಗಾಸ್ತಮಾನ ಕಾದಂಬರಿಯಲ್ಲಿ ಉಲ್ಲೇಖಿಸಿದ್ದಾರೆ. ಕೋಗುಂಡೆ ಗ್ರಾಮದಲ್ಲಿ ಕೆಳವರ್ಗದ ಯುವಕರ ದುರ್ವರ್ತನೆಯನ್ನು ಗಮನಿಸಿ ಚಿತ್ರದುರ್ಗ ಮಠದ ಆಗಿನ ಸ್ವಾಮಿಗಳು ಬಹಿಷ್ಕಾರ ಹಾಕುತ್ತಾರೆ. ಸ್ವಾಮಿಗಳು ವಿರೋಧ ಮಾಡಿದರೂ ಮದಕರಿನಾಯಕ ಆ ಯುವಕರ ಪರವಾಗಿ ನಿಲ್ಲುತ್ತಾನೆ. ಏಕೆಂದರೆ ಅವನಿಗೆ ಸ್ವಾಮಿಗಳು ಪ್ರತಿಪಾದಿಸುವ ನೈತಿಕತೆಗಿಂತ ಸೈನ್ಯದಲ್ಲಿ ಹೋರಾಡಲು ಬೇಕಾದ ಅಂಥ ಯುವಕರು ಮುಖ್ಯವೆನಿಸಿದರು. ಸ್ವಾಮಿಗಳೇ ಮಠ ಬಿಟ್ಟು ಹೋದ ಪ್ರಸಂಗ ಉದ್ಭವಿಸುತ್ತದೆ.
ಯಾವುದೇ ಘಟನೆಯನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಲು ಬರುತ್ತದೆ. ಏಕಲವ್ಯ-ದ್ರೋಣರ ಪ್ರಸಂಗದಲ್ಲಿ ಒಂದೆಡೆ ಏಕಲವ್ಯನ ಗುರುಭಕ್ತಿ ಕಾಣಿಸಿದರೆ ಮತ್ತೊಂದೆಡೆ ದ್ರೋಣಾಚಾರ್ಯರ ಶಿಷ್ಯದ್ರೋಹ ಕಾಣಿಸುತ್ತದೆ. ಅದನ್ನು ರಾಜನಿಷ್ಠೆಯಿಂದ ಮಾಡಿದ ತಂತ್ರಗಾರಿಕೆಯೆಂದು ವ್ಯಾಖ್ಯಾನಿಸಬಹುದಾದರೂ ಮೂಲ ಮಹಾಭಾರತದಲ್ಲಿ ವ್ಯಾಸಮಹರ್ಷಿಯು ದ್ರೋಣರನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಚಿತ್ರಿಸಿಲ್ಲ. ಅರ್ಜುನನನ್ನು ಅಪ್ರತಿಮ ವೀರನನ್ನಾಗಿ ಮಾಡುವ ಮಾತು ಕೊಟ್ಟ ದ್ರೋಣರು ಅಂತರಂಗದಲ್ಲಿ ಮಾಡಿದ್ದೇನು? ಈ ಕೆಳಗಿನ ಶ್ಲೋಕಗಳನ್ನು ಗಮನಿಸಿ:
ಕಮಂಡಲುಂ ಚ ಸರ್ವೇಷಾಂ ಪ್ರಾಯಚ್ಛಚಿರಕಾರಣಾತ್ |
ಪುತ್ರಾಯ ಚ ದದೌ ಕುಂಭಕಮವಿಲಂಬನಕಾರಣಾತ್ || <
ಯಾವತ್ ತೇ ನೋಪಗಚ್ಛಂತಿ ತಾವದಸ್ಮೈ ಪರಾಂ ಕ್ರಿಯಾಂ |
(ಮಹಾಭಾರತ 131.16-17)
ದ್ರೋಣರು ತಮ್ಮ ಶಿಷ್ಯರೆಲ್ಲರಿಗೂ ಒಂದೊಂದು ಕಮಂಡಲವನ್ನು ಕೊಟ್ಟು ನದಿಯಿಂದ ನೀರನ್ನು ತರಲು ಆಜ್ಞಾಪಿಸಿರುತ್ತಾರೆ. ಅವರ ಮಗನಾದ ಅಶ್ವತ್ಥಾಮನೂ ಒಳಗೊಂಡಂತೆ ಅರ್ಜುನ ಮೊದಲಾದ ರಾಜಕುಮಾರರೆಲ್ಲರೂ ನೀರು ತರಲು ನದಿಗೆ ಒಟ್ಟಿಗೇ ಹೋಗುತ್ತಾರೆ. ಆದರೆ ಎಲ್ಲರಿಗಿಂತಲೂ ಮೊದಲು ಅಶ್ವತ್ಥಾಮ ನೀರನ್ನು ತರುತ್ತಾನೆ, ಉಳಿದ ರಾಜಕುಮಾರರೆಲ್ಲರೂ ತಡವಾಗಿ ತರುತ್ತಾರೆ. ಅದಕ್ಕೆ ಕಾರಣ ದ್ರೋಣರು ಅರ್ಜುನಾದಿ ರಾಜಕುಮಾರರಿಗೆ ನಿಧಾನವಾಗಿ ನೀರು ತುಂಬುವ ಕಿರಿದಾದ ಬಾಯುಳ್ಳ ಕಮಂಡಲವನ್ನು ಕೊಟ್ಟಿದ್ದರೆ ತಮ್ಮ ಮಗನಾದ ಅಶ್ವತ್ಥಾಮನಿಗೆ ಬೇಗನೆ ನೀರು ತುಂಬುವ ಅಗಲವಾದ ಬಾಯುಳ್ಳ ಕಮಂಡಲವನ್ನು ಕೊಟ್ಟಿರುತ್ತಾರೆ. ಬೇಗನೆ ಬಂದ ತಮ್ಮ ಮಗನಿಗೆ ಗೋಪ್ಯವಾಗಿ ಶಸ್ತ್ರಾಸ್ತ್ರಗಳ ರಹಸ್ಯವನ್ನು ಬೋಧಿಸುತ್ತಾರೆ. ಇದನ್ನು ಆಧುನಿಕ ಪರಿಭಾಷೆಯಲ್ಲಿ ದ್ರೋಣರು ತೋರಿದ nepotism, favoritism ಎನ್ನದೆ ವಿಧಿಯಿಲ್ಲ.
ಈ ಹಿನ್ನೆಲೆಯಲ್ಲಿ ಮಹಾಭಾರತದ ದ್ರೋಣ ಆದರ್ಶಗುರುವಾಗಿ ಕಾಣಿಸುವುದಿಲ್ಲ. ಹಾಗೆ ನೋಡಿದರೆ, ಯಾರನ್ನೂ ಆದರ್ಶ ಪುರುಷ/ಸ್ತ್ರೀ ಎಂದು ಚಿತ್ರಿಸುವ ಉದ್ದೇಶ ವ್ಯಾಸ ಮಹರ್ಷಿಗಳಿಗೆ ಇರಲಿಲ್ಲವೆನಿಸುತ್ತದೆ. ವ್ಯಾಸರು ಮನುಷ್ಯನ ಮನೋವ್ಯಾಪಾರಗಳನ್ನು ಚೆನ್ನಾಗಿ ಚಿತ್ರಿಸುತ್ತಾರೆ. ಮನುಷ್ಯನ ಪ್ರೀತಿ, ತ್ಯಾಗ, ಶೌರ್ಯ, ಸೇಡು, ಮತ್ಸರ, ಸಣ್ಣತನ, ಸ್ವಾರ್ಥ, ಸ್ವಜನಪಕ್ಷಪಾತ ಎಲ್ಲವುಗಳ ಹಾಳತ ಚಿತ್ರಣ ಮಹಾಭಾರತದಲ್ಲಿ ದೊರೆಯುತ್ತದೆ. ಮಹಾಭಾರತದ ಎಲ್ಲ ಪಾತ್ರಗಳು ಇಂದಿನ ಮನುಷ್ಯನ ಪಡಿಯಚ್ಚೇ ಆಗಿವೆ. ಅವರು ಪೂರ್ಣ ಒಳ್ಳೆಯವರೂ ಅಲ್ಲ, ಹಾಗಂತ ಪೂರ್ತಿ ಕೆಟ್ಟವರೂ ಅಲ್ಲ. ಯಾವುದೇ ಮನುಷ್ಯ ಆದರ್ಶನೂ ಅಲ್ಲ, ಅಧಮನೂ ಅಲ್ಲ; ಎರಡರ ಸಮ್ಮಿಶ್ರಣ ಎಂಬ ಚಿತ್ರಣವನ್ನೇ ವ್ಯಾಸರು ನೀಡುವುದು. ಆದ್ಧರಿಂದ ಮಹಾಭಾರತವೆಂಬುದು ದ್ವಾಪರಯುಗಕ್ಕೆ ಮುಗಿದುಹೋದ ಕಥೆಯಲ್ಲ. ಕಲಿಯುಗದಲ್ಲಿ ಮುಗಿಯುವ ಕಥೆಯೂ ಅಲ್ಲ. ಯುಗಯುಗಾಂತರಗಳು ಉರುಳಿದರೂ ಮನುಷ್ಯನ ಸ್ವಭಾವವೇನೂ ಬದಲಾಗುವುದಿಲ್ಲ. ನಮ್ಮ ಸುತ್ತ ಈಗಲೂ ಮಹಾಭಾರತದ ಪಾತ್ರಗಳು ಜೀವಂತವಾಗಿವೆ. ಆದಕಾರಣ “History repeats itself?” ಎನ್ನುವಂತೆ ಭಾರತದ ಮಹಾಕಾವ್ಯವಾದ ಮಹಾಭಾರತ ಈಗಲೂ ಜೀವಂತವಾಗಿರುವುದಲ್ಲದೆ ಮತ್ತೆ ಮತ್ತೆ ಪುನರ್ಭವಗಳನ್ನು ಪಡೆಯುತ್ತಾ ನಿತ್ಯನಿರಂತರವಾಗಿ ಸಾಗುವ Immortal Epic ಆಗಿದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 20.1.2011.