ತಲ್ಲಣಿಸದಿರು ಕಂಡ್ಯಾ, ತಾಳು ಮನವೇ!?

  •  
  •  
  •  
  •  
  •    Views  

ಹರ್ಷಿ ಕಣ್ವರ ಆಶ್ರಮ. ಮುದ್ದಿನಿಂದ ಸಾಕಿ ಬೆಳೆಸಿದ ಸಾಕುಮಗಳಾದ ಶಕುಂತಲೆಯು ತಮ್ಮಿಂದ ಅಗಲಿ ಗಂಡನಾದ ಚಕ್ರವರ್ತಿ ದುಷ್ಯಂತನ ಅರಮನೆಗೆ ಹೊರಡುವ ಸಂದರ್ಭ. ಆಗ ಕಣ್ವ ಮಹರ್ಷಿಗಳ ಹೃದಯದಲ್ಲಿ ಆವಿರ್ಭವಿಸಿದ ಭಾವನೆಗಳೇನೆಂಬುದನ್ನು ಮಹಾಕವಿ ಕಾಳಿದಾಸ ತನ್ನ ಅಭಿಜ್ಞಾನ ಶಾಕುಂತಲ ನಾಟಕದ ನಾಲ್ಕನೆಯ ಅಂಕದಲ್ಲಿ ಮನೋಜ್ಞವಾಗಿ ವರ್ಣಿಸಿದ್ದಾನೆ. ಸಂಸ್ಕೃತ ಸಾಹಿತ್ಯದಲ್ಲಿಯೇ ಅತ್ಯಂತ ಕಾವ್ಯಮಯವಾದ ಶ್ಲೋಕವೆಂದು ಪರಿಗಣಿತವಾದ ಆ ಪದ್ಯ ಹೀಗಿದೆ:

ಯಾಸ್ಯತ್ಯದ್ಯ ಶಕುಂತಲೇತಿ ಹೃದಯಂ ಸಂಸ್ಪೃಷ್ಟಮುತ್ಕಂಠಯಾ 
ಕಂಠಃ ಸ್ತಂಭಿತಭಾಷ್ಪವೃತ್ತಿಕಲುಷಃ ಚಿಂತಾಜಡಂ ದರ್ಶನಂ |
ವೈಕ್ತವ್ಯಂ ಮಮ ತಾವದೀದೃಶಮಿದಂ ಸ್ನೇಹಾದರಣ್ಯೌಕಸಃ 
ಪೀಡ್ಯಂತೇ ಗೃಹಿಣಃ ಕಥಂ ನ ತನಯಾವಿಶ್ಲೇಷದುಃಖೈರ್ನವೈಃ?

ಸಾಕುಮಗಳಾದ ಶಕುಂತಲೆಯನ್ನು ಆಶ್ರಮದಿಂದ ಬೀಳ್ಕೊಡುವ ಆ ಸಂದರ್ಭದಲ್ಲಿ ಕಣ್ವ ಮಹರ್ಷಿಗಳ ಹೃದಯ ಉತ್ಕಂಠಿತವಾಗುತ್ತದೆ, ಕಂಠ ಬಿಗಿಯುತ್ತದೆ, ಕಣ್ಣುಗಳು ಹನಿಗೂಡುತ್ತವೆ. ವೀರವಿರಾಗಿಯಾಗಿ ಯತಿವರೇಣ್ಯನೆನಿಸಿದ ನನ್ನ ಹೃದಯದಲ್ಲಿಯೇ ಸಾಕುಮಗಳ ಮೇಲಿನ ಮಮತೆಯಿಂದ ಇಂತಹ ವೇದನೆಯುಂಟಾಗುತ್ತಿದೆ. ಹೀಗಿರುವಾಗ ನಿಜವಾದ ಹೆತ್ತ ತಂದೆತಾಯಂದಿರಿಗೆ ತಮ್ಮ ಮುದ್ದು ಮಗಳು ಗಂಡನ ಮನೆಗೆ ಹೊರಟು ನಿಂತ ಆ ಅಗಲಿಕೆಯ ಸಂದರ್ಭದಲ್ಲಿ ಎಂತಹ ನೋವು, ಸಂಕಟ ಉಂಟಾಗುತ್ತಿರಬಹುದು! ಎಂದು ಕಣ್ವ ಮಹರ್ಷಿ ಉದ್ಗರಿಸುತ್ತಾನೆ.

ಇದನ್ನು ಉದಾಹರಿಸಲು ಕಾರಣ ಕಳೆದ ವಾರ ನಮ್ಮ ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿ ಸಮಾರಂಭದ ಕೊನೆಯಲ್ಲಿ ನಮ್ಮ ಹೃದಯದಲ್ಲಿ ಉಂಟಾದ ಭಾವತೀವ್ರತೆಯ ತಲ್ಲಣ. ಅದಕ್ಕೆ ಕಾರಣ ಪೀಠನಿವೃತ್ತಿಯನ್ನು ಬಯಸಿ ಆಡಿದ ನಮ್ಮ ಮಾತುಗಳಿಂದ ಭಾವುಕರಾಗಿ ಉದ್ವಿಗ್ನಗೊಂಡ ಭಕ್ತಸಮೂಹ. ಮನೆಯಲ್ಲಿ ಪ್ರೀತಿಯ ತಂದೆತಾಯಂದಿರು, ಅಕ್ಕ-ತಂಗಿಯರು, ಮಡದಿ-ಮಕ್ಕಳು ಇದ್ದರೂ ಅವರು ಆರಾಧಿಸಿಕೊಂಡು ಬಂದ ಗುರುವಿನ ಮೇಲಿನ ಅಪರಿಮಿತವಾದ ಭಕ್ತಿ. ಅಂದು ಶಿಷ್ಯರು ಸುರಿಸಿದ ಕಣ್ಣೀರು ನಮ್ಮನ್ನು ಕ್ಷಣಕಾಲ ವಿಚಲಿತರನ್ನಾಗಿ ಮಾಡಿತು. ಭಕ್ತಿಕಂಪಿತ ನಮ್ಮ ಕೂಡಲ ಸಂಗಮದೇವಾ ಎಂಬ ಬಸವಣ್ಣನವರ ವಚನದ ಆಶಯವೇನೆಂಬುದು ಹೃದ್ಗತವಾಯಿತು.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬುದ್ಧಿ ಮತ್ತು ಹೃದಯದ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಬುದ್ಧಿಯ ಸ್ತರದಲ್ಲಿ ವೈಚಾರಿಕತೆ ಮತ್ತು ತರ್ಕಗಳು ಕೆಲಸ ಮಾಡುತ್ತವೆ. ಹೃದಯದಲ್ಲಿ ಭಾವನೆಗಳು ಓತಪ್ರೋತವಾಗಿ ಹರಿಯುತ್ತವೆ. ಬುದ್ಧಿಯ ಸ್ತರದಲ್ಲಿ ಕಂಡು ಬಂದ ಕಟು ಸತ್ಯವನ್ನು ಹೃದಯ ಒಪ್ಪಿಕೊಳ್ಳಲು ಆಗದಿದ್ದಾಗ ಭಾವನೆಗಳ ಮಿಡಿತ ಉಂಟಾಗುತ್ತದೆ. ಮನುಷ್ಯನ ಮನಸ್ಸು ಒಂದು ಸರೋವರವಿದ್ದಂತೆ. ಕಲ್ಲೆಸೆದರೆ ಶಾಂತ ಸರೋವರದಲ್ಲಿಯೂ ತರಂಗಗಳು ಉಂಟಾಗುತ್ತವೆ, ಅವುಗಳನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಆದರೆ ತಲ್ಲಣಗೊಂಡ ಮನಸ್ಸನ್ನು ತಹಬಂದಿಗೆ ತರುವುದು ವಿವೇಕಿಯ ಲಕ್ಷಣ. ಬುದ್ಧಿ ಭಾವಗಳ ಸಂಘರ್ಷ ಸದಾ ಇದ್ದರೂ ವ್ಯಕ್ತಿ ಭಾವತೀವ್ರತೆಯಲ್ಲಿ ಮುಗ್ಗರಿಸದೆ ಸರಿಯಾದ ದಾರಿಯಲ್ಲಿ ನಡೆಯುವ ಒಳ ಎಚ್ಚರ ಇರಬೇಕಾಗುತ್ತದೆ. 

ನಮ್ಮ ನಿವೃತ್ತಿಯ ಅಪೇಕ್ಷೆ ಇಷ್ಟೊಂದು ವ್ಯಾಪಕವಾಗಿ ನಾಡಿನೆಲ್ಲೆಡೆ ವೈಚಾರಿಕ ತಲ್ಲಣಗಳಿಗೆ ಅನುವು ಮಾಡಿಕೊಡುತ್ತದೆ ಎಂಬ ಪರಿಕಲ್ಪನೆ ನಮಗೆ ಇರಲಿಲ್ಲ. ಕಳೆದ ಒಂದು ವಾರದಿಂದ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ವಸ್ತುನಿಷ್ಠವಾಗಿಯೇ ಇವೆ. ನಮ್ಮ ಈ ನಿಲುವಿನಲ್ಲಿ ವಿಶೇಷತೆ ಏನೂ ಇಲ್ಲ. ಅದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ನಮ್ಮ ಲಿಂಗೈಕ್ಯ ಗುರುವರ್ಯರು. ಅವರ ಕಾಲದಲ್ಲಿಯೂ ಇಂತಹುದೇ ಪರಿಸ್ಥಿತಿ ಇತ್ತು. ಆಗಲೂ ಶಿಷ್ಯರು ಕಣ್ಣೀರಿಟ್ಟಿದ್ದರು. ಮುಂದುವರಿಯಲು ಒತ್ತಾಯಿಸಿದ್ದರು. ಆದರೆ ಆ ಒತ್ತಾಯಕ್ಕೆ ಅವರು ಮಣಿಯಲಿಲ್ಲ. ಅಂದಿನ ಅವರ ಪೀಠತ್ಯಾಗದ ನಿರ್ಧಾರ ನಮ್ಮ ನಿರ್ಧಾರಕ್ಕಿಂತಲೂ ಕಠಿಣವಾದುದಾಗಿತ್ತು. ಆಗ ದೂರದರ್ಶನಗಳು ಇರಲಿಲ್ಲ. ಇಂದಿನಂತೆ ಮಾಧ್ಯಮಗಳು ವ್ಯಾಪಕವಾಗಿ ಇರದ ಕಾರಣ ಅವರ ಕಠಿಣ ನಿರ್ಧಾರ ಅಷ್ಟಾಗಿ ಪ್ರಚುರಗೊಳ್ಳಲಿಲ್ಲ.

ನಮ್ಮ ಲಿಂಗೈಕ್ಯ ಗುರುವರ್ಯರು ಹುಲಿಯಂತೆ ಬದುಕಿದವರು. ಅವರ ಅಧಿಕಾರಾವಧಿಯಲ್ಲಿ ವಿರೋಧಿಗಳು ಬಹಳ ಜನರಿದ್ದರು. ವಿರೋಧಿಗಳ ಪಾಲಿಗೆ ಅವರು ಸಿಂಹಸ್ವಪ್ನವಾಗಿದ್ದರು. ತಮ್ಮ 60ನೆಯ ವಯಸ್ಸಿನಲ್ಲಿ (1974) ಅವರು ನಿವೃತ್ತಿ ಘೋಷಿಸಿ ತ್ಯಾಗಪತ್ರ ಸಲ್ಲಿಸಿದ ಸಂದರ್ಭದಲ್ಲಿ ಆಗದವರು ಮಾತನಾಡಿಕೊಂಡರಂತೆ: “ಅಯ್ಯೋ, ಹುಲಿಯಂಥವರಿವರು, ಎಲ್ಲಿ ಅಧಿಕಾರ ಬಿಟ್ಟುಕೊಡುತ್ತಾರೆ.” ನಂತರ ನಮ್ಮನ್ನು ಆಯ್ಕೆಮಾಡಿ ಪರದೇಶದಲ್ಲಿ ಓದು ಮುಗಿಸಿಕೊಂಡು ಬರುವವರೆಗೂ ಅಧಿಕಾರದಲ್ಲಿ ಮುಂದುವರಿದಾಗ ಅದೇ ಕೊಂಕು ಮಾತು: “ಇವರಿಗೆ ಅಧಿಕಾರ ಬಿಟ್ಟು ಕೊಡಲು ಇಷ್ಟವಿಲ್ಲ; ಅದಕಾರಣವೇ ಓದಲು ಪರದೇಶಕ್ಕೆ ಕಳುಹಿಸಿದ್ದಾರೆ. ಇವರು ಸತ್ತು ಸಮಾಧಿಯಾಗುವ ತನಕ ಅಧಿಕಾರ ತ್ಯಾಗವೆಂಬುದು ಕನಸಿನ ಮಾತು”. ಇಂತಹ ಅಪಲಾಪದ ಮಾತುಗಳಿಗೆ ಅವರು ಕೊಟ್ಟ ಮಾತಿನ ಚಾಟಿ “ನಮ್ಮ ವಿರೋಧಿಗಳು ನಾವು ಸತ್ತಿದ್ದೇವೆಂದು ಹೇಳಿದರೂ ನಮ್ಮ ಸಮಾಧಿ ಮಾಡುವವರೆಗೆ ನಂಬುವುದಿಲ್ಲ. ನಾವು ಸತ್ತ ಮೇಲೆಯೇ ಅವರು ನೆಮ್ಮದಿಯಿಂದ ನಿದ್ರೆ ಮಾಡುವುದು!”

1979 ರಲ್ಲಿ ವಿಯೆನ್ನಾದಿಂದ ಹಿಂದಿರುಗಿದ ಮೇಲೆ ಏನೂ ಅನುಭವವಿಲ್ಲದ ನಮಗೆ ಒಂದೆರಡು ವರ್ಷವಾದರೂ ತರಬೇತಿ ನೀಡಿ ನಂತರ ಪಟ್ಟಾಭಿಷೇಕ ಮಾಡಬಹುದಿತ್ತು. ಗುರುಗಳವರು ಹಾಗೆ ಮಾಡದೇ ದಿಢೀರನೆ ಅಧಿಕಾರ ಹಸ್ತಾಂತರ ಮಾಡಿದರು. ಸ್ವಲ್ಪವೂ ಅನುಮಾನ ಪಡದೆ ಸಮಸ್ತ ಅಧಿಕಾರವನ್ನೂ ವಹಿಸಿಕೊಟ್ಟರು. ಪಟ್ಟಗಟ್ಟಿದ ಮಾರನೆಯ ದಿನವೇ ಎಲ್ಲ ಬ್ಯಾಂಕುಗಳಿಗೂ ನಮಗೆ ಪಟ್ಟಗಟ್ಟಿದ ವಿಷಯವನ್ನು ತಿಳಿಸಿ ಮುಂದೆ ಅಲ್ಲಿನ ಖಾತೆಗಳನ್ನು ನಿರ್ವಹಿಸುವ ಅಧಿಕಾರವನ್ನು ಸಹ ಹಸ್ತಾಂತರಿಸಿದರು. ಇದರಿಂದ ಆಶ್ಚರ್ಯಚಕಿತರಾದ ಶಿಷ್ಯರು ಆಡಳಿತ ಜ್ಞಾನವಿಲ್ಲದೆ ಎಲ್ಲೋ ಯೂನಿವರ್ಸಿಟಿಯಲ್ಲಿ ಓದಿಕೊಂಡು ಬಂದವರಿಗೆ ಹೀಗೆ ಎಲ್ಲ ಅಧಿಕಾರವನ್ನು ಕೊಟ್ಟುಬಿಟ್ಟರಿ, ಮುಂದೆ ಮಠದ ಗತಿ ಏನು? ಆ ರೀತಿ ಅನುಮಾನಪಟ್ಟವರಿಗೆ ಅವರು ಕೊಟ್ಟ ಉತ್ತರ: ನಾಯಿ ಮರಿಗೆ ಯಾರಾದರೂ ಈಜು ಕಲಿಸುತ್ತಾರೆಯೇ? ನೀರಿನಲ್ಲಿ ಎಸೆದರೆ ಅದು ತಾನೇ ತಾನಾಗಿ ಈಜುತ್ತದೆ. ಅವರ ಕೃಪಾಶೀರ್ವಾದಗಳಿಂದ ಇದುವರೆಗೆ ಈಜಿಕೊಂಡು ಬಂದ ತೃಪ್ತಿ ನಮಗಿದೆ.

ಮಠದ ಅಧಿಕಾರವನ್ನು ನಾವು ಎಂದೂ ಬಯಸಿ ಬಂದವರಲ್ಲ. ನಮ್ಮ ಅಭಿಪ್ರಾಯದಲ್ಲಿ ಪರಂಪರೆ ಮುಖ್ಯವೇ ಹೊರತು ಅದರಲ್ಲಿ ಬರುವ ವ್ಯಕ್ತಿಗಳಲ್ಲ. ವ್ಯಕ್ತಿ ಎಷ್ಟೇ ದೊಡ್ಡವನಿದ್ದರೂ ಗೌರವಾದರಣೀಯನಾಗಿದ್ದರೂ ಅವನಿಗಿಂತ ಪರಂಪರೆಯೇ ಶ್ರೇಷ್ಠ. ಹಾಗಂತ ವ್ಯಕ್ತಿಯನ್ನು ಮತ್ತು ಅವನ ಸಾಧನೆಗಳನ್ನು ಅನಾದರಣೆ ಮಾಡಬೇಕೆಂದಲ್ಲ. ವ್ಯಕ್ತಿಯನ್ನು ಗೌರವಿಸಿದರೂ ವ್ಯಕ್ತಿ ಪೂಜೆ ಸಲ್ಲದು. ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ವ್ಯಕ್ತಿಯ ಆರಾಧನೆ ಆಗಬಾರದು, ಬದಲು ಪರಂಪರೆಯ ಆರಾಧನೆ ಆಗಬೇಕು.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 4.10.2012.