ಎತ್ತಿನ ಬಂಡಿ ಗಗನಕ್ಕೆ ಹಾರಿದಾಗ!...
ಹಳ್ಳಿಯ ನೂರೊಂದು ಶಿಷ್ಯರೊಂದಿಗೆ 1994 ರಲ್ಲಿ ಒಂದು ತಿಂಗಳ ಕಾಲ “ವಿಶ್ವಶಾಂತಿ ಯಾತ್ರೆ" ಕೈಗೊಂಡು ಯೂರೋಪ್, ಅಮೇರಿಕಾ, ಕೆನಡಾ ಇತ್ಯಾದಿ ಅನೇಕ ದೇಶಗಳನ್ನು ತೋರಿಸಿಕೊಂಡು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ಹಲವು ತಿಂಗಳುಗಳ ಕಾಲ ಹಳ್ಳಿಯ ಜನರ ಬಾಯಲ್ಲಿ ನಮ್ಮ ಪ್ರವಾಸದ್ದೇ ಸುದ್ದಿ. ಬೆಂಗಳೂರಿನ ಮುಖವನ್ನೂ ನೋಡದವರು ಪ್ಯಾರಿಸ್, ಲಂಡನ್, ರೋಂ, ನ್ಯೂಯಾರ್ಕ್, ವಾಷಿಂಗ್ಟನ್ ಇತ್ಯಾದಿ ಪ್ರಸಿದ್ಧ ನಗರಗಳನ್ನು ಬೆರಗುಗಣ್ಣುಗಳಿಂದ ನೋಡಿಕೊಂಡು ಬಂದಿದ್ದರು. ಅದುವರೆಗೆ ನಮ್ಮನ್ನು foreign returned ಗುರುಗಳೆಂದು ಆಡಿಕೊಳ್ಳುತ್ತಿದ್ದವರಿಗೆ ಈಗ ಬಾಯೇ ಇಲ್ಲದಂತಾಗಿತ್ತು. ಯಾವ ಹಳ್ಳಿಗೆ ಹೋದರೂ foreign returned ಶಿಷ್ಯರ ಸುದ್ದಿಯೇ ಸುದ್ದಿ. ಪ್ರವಾಸಿಗರ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ! ಬಂಧು ಬಾಂಧವರ ಮನೆಗಳಲ್ಲಿ ಪ್ರವಾಸಿಗರಿಗೆ ವಿಶೇಷ ಔತಣ. ಪರದೇಶಗಳ ಅವರ ಅನುಭವವನ್ನು ಆಸ್ವಾದಿಸುವ ಕುತೂಹಲ! ಅವರ ಬಾಯಿಂದ ಆ ದೇಶಗಳ ವರ್ಣನೆಯನ್ನು ಕೇಳಿ ಪ್ರವಾಸ ಹೊರಟು ಕೊನೇ ಗಳಿಗೆಯಲ್ಲಿ ಹಿಂದಕ್ಕೆ ಸರಿದಿದ್ದ ಜನರ ಮನಸ್ಸಿನಲ್ಲಿ ಹಳಹಳಿ! ಬಾ ಎಂದು ಕರೆದರೆ ಆಗ ನೀನು ಕೇಳಿದೆಯಾ? ಎಂದು ಯಾತ್ರಿಕರ ಬಾಯಲ್ಲಿ ಅವರನ್ನು ಹಂಗಿಸುವ ಮಾತು! ಅಂಥವರ ಮನಸ್ಸಿನಲ್ಲಿ ಇನ್ನೊಂದು ಪ್ರವಾಸ ಏರ್ಪಡಿಸಿದಾಗ ತಪ್ಪದೆ ಹೋಗಬೇಕೆಂಬ ಆಸೆಯ ಚಿಗುರು. ಮತ್ತೆ ಯಾವಾಗ ಗುರುಗಳು ಏರ್ಪಡಿಸುತ್ತಾರಂತೆ? ಎಂದೇ ಎಲ್ಲರ ಪ್ರಶ್ನೆ, ಮುಂದಿನ ಸಾರಿ ಏರ್ಪಡಿಸಿದಾಗ ಪ್ರವಾಸಿಗರ ಪಟ್ಟಿಯಲ್ಲಿ ನನ್ನ ಹೆಸರೇ First ಎಂದೂ ಕೆಲವರು ಹೇಳಿಕೊಳ್ಳತೊಡಗಿದರು. ಆದರೆ ನಾವಂತೂ ಪ್ರವಾಸವೆಂದರೆ ಸಾಕು, ಸುಡುವ ಹಾಲಿನಿಂದ ಬಾಯನ್ನು ಸುಟ್ಟುಕೊಂಡು ದೂರದಿಂದ ಹಾಲನ್ನು ಕಂಡರೇ ಓಡಿಹೋಗುತ್ತಿದ್ದ ತೆನಾಲಿ ರಾಮಕೃಷ್ಣನ ಬೆಕ್ಕಿನಂತಾಗಿದ್ದೆವು! ಪ್ರವಾಸದಿಂದ ಹಿಂದಿರುಗಿದ ಮೇಲಿನ ನಮ್ಮ ಮನಃಸ್ಥಿತಿ, ಹಳ್ಳಿಯ ಜನರನ್ನು ವಿದೇಶಗಳಿಗೆ ಪ್ರವಾಸ ಕರೆದುಕೊಂಡು ಹೋಗುವುದೆಂದರೆ ಬೆಕ್ಕಿಗೆ ಚಿನ್ನಾಟ ಇಲಿಗೆ ಪ್ರಾಣಸಂಕಟ ಎನ್ನುವ ಗಾದೆಯ ಮಾತಿನಂತಾಗಿತ್ತು! ಇನ್ನೆಂದೂ ಇಂತಹ ದುಃಸಾಹಸಕ್ಕೆ ಕೈಹಾಕಬಾರದೆಂದು ಕೊಂಡಿದ್ದೆವು. ಆದರೂ ಅದು ಪ್ರಸವವೇದನೆಯನ್ನು ತಾಳಲಾರದೆ ಇನ್ನೆಂದೂ ಮಕ್ಕಳೇ ಬೇಡವೆನ್ನುವ ತಾಯಂದಿರ ಪ್ರಸೂತಿ ವೈರಾಗ್ಯದಂತಾಗಿ 6 ವರ್ಷಗಳ ನಂತರ ಮತ್ತೆ ವಿಶ್ವಶಾಂತಿ ಯಾತ್ರೆ - 2000 ಕ್ಕೆ ಕೈ ಹಾಕಿದೆವು. ಅದಕ್ಕೆ ಮುಖ್ಯ ಕಾರಣ ಮೊದಲನೆಯದಾಗಿ 2000 ನೇ ಇಸವಿ ಈ ಶತಮಾನದ ಕೊನೆಯ ವರ್ಷ! ಅಷ್ಟೇ ಏಕೆ ಈ ಸಹಸ್ರಮಾನದ ಕೊನೆಯ ವರ್ಷವೂ ಹೌದು.
1994 ರಲ್ಲಿ ಏರ್ಪಡಿಸಿದ್ದ ಪ್ರವಾಸದಲ್ಲಿ 101 ಜನ ಶಿಷ್ಯರಿದ್ದರೆ ಈಗಿನ ಪ್ರವಾಸದಲ್ಲಿ 151 ಜನರಿದ್ದರು. ಅವರಲ್ಲಿ 59 ಜನರಿಗೆ ನಾನಾ ಕಾರಣಗಳಿಂದ ಅಮೇರಿಕಾ ವೀಸಾ ದೊರೆಯಲಿಲ್ಲ. ಅವರಿಗೆಲ್ಲಾ ತುಂಬಾ ನಿರಾಶೆಯುಂಟಾಯಿತು. ಅದರಲ್ಲಿ ಕೆಲವರು ಅಮೇರಿಕಾ ರಾಯಭಾರಿ ಕಛೇರಿಯನ್ನೇ ಕೊಂಡುಕೊಳ್ಳುವಷ್ಟು ಶ್ರೀಮಂತರಿದ್ದರು. ಹೆಂಡತಿಗೆ ವೀಸಾ ಸಿಕ್ಕು ಗಂಡನಿಗೆ ಸಿಗಲಿಲ್ಲವೆಂದರೆ ವೀಸಾ ಅಧಿಕಾರಿಗಳು ಪ್ರವಾಸಿಗರ ದಾಖಲಾತಿ ಪತ್ರಗಳನ್ನು ಸರಿಯಾಗಿ ಗಮನಿಸಿಲ್ಲವೆಂದೇ ಹೇಳಬೇಕಾಗುತ್ತದೆ. ಅದನ್ನೆಲ್ಲಾ ಪ್ರಶ್ನಿಸಿ ರಾಯಭಾರಿ ಕಛೇರಿಗೆ ಬರೆಯುವಷ್ಟು ಕಾಲಾವಕಾಶ ಇರಲಿಲ್ಲ. ಹಿಂದೆ ಇದೇ ರೀತಿ ಕೆಲವರಿಗೆ ನಿರಾಕರಿಸಿದಾಗ ನಾವು ವಿವರಿಸಿ ಪತ್ರ ಬರೆದ ಮೇಲೆ ಕೊಟ್ಟಿದ್ದರು. ವೀಸಾ ನಿರಾಕರಣೆಯಿಂದಾಗಿ, ಉತ್ಸಾಹದಿಂದ ಪ್ರವಾಸ ಹೊರಟಿದ್ದ ಜನರ ಮಂಕು ಕವಿದ ಮುಖವನ್ನು ನೋಡಿ ಮರುಕ ಉಂಟಾಯಿತು. ಅವರಿಗಾಗಿ ವಿಶೇಷವಾಗಿ ಯೂರೋಪ್ ಪ್ರವಾಸ ಏರ್ಪಡಿಸುವುದು ಸೂಕ್ತವೆಂದು ತೀರ್ಮಾನಿಸಿದೆವು. ಜನರೂ ಖುಷಿಯಿಂದ ಒಪ್ಪಿದರು. ಬ್ರಿಟಿಷ್ ಹೈಕಮಿಷನರ್ ರವರಿಗೆ ಇದೆಲ್ಲವನ್ನೂ ವಿವರಿಸಿ ಪತ್ರ ಬರೆದು ಅವರೆಲ್ಲರಿಗೂ ಇಂಗ್ಲೆಂಡಿನ ವೀಸಾ ದೊರೆಯುವಂತೆ ಮಾಡಿದೆವು. ಯೂರೋಪಿನ ಉಳಿದೆಲ್ಲ ದೇಶಗಳ ವೀಸಾ ದೊರೆತಿದ್ದರಿಂದ ಕಮರಿದ ಅವರ ಉತ್ಸಾಹ ಮತ್ತೆ ಚಿಗುರಿ ಪ್ರವಾಸ ಹೊರಡಲು ಸಿದ್ಧರಾದರು. ಕೆಲವರಂತೂ ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಅಮೇರಿಕಾದಿಂದ ತಾವು ವಾಪಾಸ್ ಬರುವವರೆಗೂ ಲಂಡನ್ನಿನಲ್ಲಿಯೇ ಇದ್ದು ತಮ್ಮೊಟ್ಟಿಗೇ ಭಾರತಕ್ಕೆ ಬರುತ್ತೇವೆಂದು ತಮ್ಮ ಭಕ್ತಿಯನ್ನು ತೋರ್ಪಡಿಸಿದರು. ಭೀಮಸಮುದ್ರದ ಶ್ರೀಮತಿ ಶಂಕರಮ್ಮ ತನಗೆ ಮತ್ತು ಅತ್ತೆ ಬಿ.ಟಿ.ರುದ್ರಮ್ಮನವರಿಗೆ ಅಮೇರಿಕಾದ ವೀಸಾ ಸಿಕ್ಕಿದ್ದರೂ ತನ್ನ ಪತಿ ಪುಟ್ಟಣ್ಣನಿಗೆ ವೀಸಾ ನಿರಾಕರಿಸಿದ ಕಾರಣ ಅಮೇರಿಕಾ ದೇಶವನ್ನೇ ನೋಡಲು ನಿರಾಕರಿಸಿದಳು! ಇಂತಹ ಒಂದು ಅವಕಾಶ ಜೀವನದಲ್ಲಿ ಮತ್ತೆ ಸಿಗುವುದಿಲ್ಲ ಹೋಗು ಎಂದು ಗಂಡನಾದಿಯಾಗಿ ಯಾರು ಎಷ್ಟೇ ಹೇಳಿದರೂ ಕೇಳಲಿಲ್ಲ. ಗುರುಗಳಾದ ನಮ್ಮ ಮಾತನ್ನೂ ಸಹ ಕೇಳಲಿಲ್ಲ. ತನ್ನ ಪತಿಯೊಂದಿಗೆ ಯೂರೋಪ್ ಪ್ರವಾಸವನ್ನಷ್ಟೇ ಮುಗಿಸಿಕೊಂಡು ಪತಿಯೊಂದಿಗೇ ಹಿಂದಿರುಗುವುದಾಗಿ ಪಟ್ಟು ಹಿಡಿದಳು. ಗಂಡನಿಗೆ ಬೇಡವಾದ್ದು ಗುಂಡುಕಲ್ಲಿಗೂ ಬೇಡ ಎಂಬ ನಮ್ಮ ಜನಪದರ ಮಾತು ಅಕ್ಷರಶಃ ಎಷ್ಟು ಸತ್ಯ! ಭಾರತೀಯ ಮಹಿಳೆಯರ ಈ ಮನೋಧರ್ಮ ಬೇರಾವ ದೇಶದ ಸಂಸ್ಕೃತಿಯಲ್ಲಿಯೂ ನೋಡಲು ನಮಗೆ ದೊರೆಯುವುದಿಲ್ಲ, ಆದಕಾರಣವೇ ಒಮ್ಮೆ ನಾವು ನ್ಯೂಜಿಲೆಂಡ್‌ಗೆ ಹೋದಾಗ ಅಲ್ಲಿಯ ಹಿಂದೂಗಳೆಲ್ಲರೂ ಸೇರಿ ಕಟ್ಟಿಕೊಂಡಿದ್ದ ದೇವಾಲಯದಲ್ಲಿ ಏನಾದರೂ ಬರೆಯಬೇಕೆಂದು ನಮ್ಮ ಕೈಗೆ Visitors Book ನೀಡಿದಾಗ ಹೀಗೆ ಬರೆದ ನೆನಪು: The more I travel outside India, the more I understand my own country! (ಭಾರತದ ಹೊರಗೆ ಹೆಚ್ಚು ಸಂಚಾರ ಮಾಡಿದಷ್ಟೂ ನಮ್ಮ ದೇಶ ನಮಗೆ ಹೆಚ್ಚು ಅರ್ಥವಾಗುತ್ತದೆ!)
ವಿಮಾನವು ಪ್ರವಾಸಿಗರನ್ನೆಲ್ಲಾ ತನ್ನ ಹೊಟ್ಟೆಯೊಳಗಿಟ್ಟು ಕೊಂಡು ಪಶ್ಚಿಮಾಭಿಮುಖವಾಗಿ ಗಗನಕ್ಕೆ ಹಾರಿತು. ಮುಂಬೈನಿಂದ ಲಂಡನ್ನಿಗೆ ಸತತವಾಗಿ ಸುಮಾರು ಒಂಭತ್ತು ಗಂಟೆಗಳ ಪ್ರಯಾಣ. ಏರ್ ಫ್ರಾನ್ಸ್ ವಿಮಾನದಲ್ಲಿ ಪ್ರಯಾಣಿಸಿದ ತಂಡ ಆಗಲೇ ಪ್ಯಾರಿಸ್ ಮುಟ್ಟಿತ್ತು. ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ನಮ್ಮೊಂದಿಗೆ ಪಯಣಿಸುತ್ತಿದ್ದ ಇನ್ನೊಂದು ತಂಡ ಲಂಡನ್ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ವಿಮಾನ ಬದಲಾಯಿಸಿ ಬೇರೊಂದು ವಿಮಾನದಲ್ಲಿ ಪ್ಯಾರಿಸ್ ನಗರಕ್ಕೆ ಹೋಗಬೇಕಾಗಿದ್ದರಿಂದ ನಿಲ್ದಾಣದ ನಿರೀಕ್ಷಣಾ ಅಂಗಳದಲ್ಲಿ (Waiting Lounge) ಎಲ್ಲರೂ ಕುಳಿತುಕೊಂಡೆವು. ಪ್ಯಾರಿಸ್‌ಗೆ ವಿಮಾನ ಹೊರಡಲು ಕಡಿಮೆಯೆಂದರೆ ಇನ್ನೂ 4 ಗಂಟೆಗಳ ಕಾಲ ಕಾಯಬೇಕಾಗಿತ್ತು. ಲಂಡನ್ನಿಂದ ಪ್ಯಾರಿಸ್ಗೆ ಒಂದೇ ಗಂಟೆ ಪ್ರಯಾಣ. ಆದರೆ ಇಂಗ್ಲೆಂಡಿಗೂ ಮತ್ತು ಫ್ರಾನ್ಸಿಗೂ ಒಂದು ಗಂಟೆಯ ಕಾಲಮಾನದ ವ್ಯತ್ಯಾಸವಿರುವುದರಿಂದ ಇಂಗ್ಲೆಂಡಿನಿಂದ ಬೆಳಿಗ್ಗೆ 8 ಗಂಟೆಗೆ ಹೊರಟರೆ ಪ್ಯಾರಿಸ್ ತಲುಪುವ ಹೊತ್ತಿಗೆ ಅಲ್ಲಿಯ ಗಡಿಯಾರದಲ್ಲಿ ಬೆಳಿಗ್ಗೆ 10 ಗಂಟೆ ಆಗಿರುತ್ತದೆ. ಅದೇ ಪ್ಯಾರಿಸ್‌ನಿಂದ ಲಂಡನಿಗೆ ಹೊರಟರೆ ಪ್ಯಾರಿಸ್ಸನ್ನು ಬೆಳಿಗ್ಗೆ 8 ಗಂಟೆಗೆ ಬಿಟ್ಟರೆ ಲಂಡನ ತಲುಪಿದಾಗಲೂ ಬೆಳಿಗ್ಗೆ 8 ಗಂಟೆಯೇ ಆಗಿರುವುದು ನಿಮಗೆ ವಿಸ್ಮಯವನ್ನುಂಟುಮಾಡಬಹುದು. ಆದರೆ ನಿಮ್ಮ ಗಡಿಯಾರದಲ್ಲಿ ಮಾತ್ರ 9 ಗಂಟೆ ಆಗಿರುತ್ತದೆ. ಗಡಿಯಾರದ ಮುಳ್ಳನ್ನು ಒಂದು ಗಂಟೆ ಹಿಂದಕ್ಕೆ ತಿರುಗಿಸಬೇಕಾಗುತ್ತದೆ. ಈಗೆಲ್ಲಾ ಎಲೆಕ್ಟ್ರಾನಿಕ್ ಗಡಿಯಾರಗಳು ಬಂದಿದ್ದು ಬೇಕಾದ ದೇಶದ ಗುಂಡಿಯನ್ನು ಒತ್ತಿದರೆ ಸಾಕು ಆ ದೇಶದ ಸಮಯವನ್ನು ನಿಖರವಾಗಿ ತೋರಿಸುತ್ತವೆ. ಗಡಿಯಾರದ ಮುಳ್ಳನ್ನು ಹಿಂದೆ ಮುಂದೆ ಸರಿಸುವ ಪ್ರಮೇಯವೇ ಇಲ್ಲ.
ಪ್ಯಾರಿಸ್ ತಲುಪಿದ ಮೇಲೆ ಪ್ರವಾಸಿಗರು ತುಂಬಾ ಉತ್ಸಾಹದಿಂದ ಐಫೆಲ್ ಟವರ್, ಲೂವ್ರ್ ಮೂಜಿಯಂ, ಷಾಂಜೆಲಿಜೆ, ಆರ್ಚ್ ಡೆ ಟ್ರೈಯೋಂಫ್, ನೆಪೋಲಿಯನ್ ಡೂಂ, ಸ್ಯಾಕ್ರಕರ್, ವರ್ಸೈ ಇತ್ಯಾದಿ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಸಂತೋಷಪಟ್ಟರು. ಯೂರೋಪ್ನಲ್ಲಿರುವ ಎಲ್ಲ ಪ್ರಮುಖ ನಗರಗಳು ಮತ್ತು ಪ್ರಸಿದ್ದ ಪಟ್ಟಣಗಳು ಯಾವುದಾದರೂ ಒಂದು ನದಿಯ ದಂಡೆಯ ಮೇಲಿರುವುದು ಒಂದು ವಿಶೇಷ. ನಗರದ ಮಧ್ಯೆಯೇ ನದಿ ಹಾಯ್ದು ಹೋಗುವುದು, ಉದ್ದಕ್ಕೂ ಎರಡೂ ದಂಡೆಗಳ ಸಂಚಾರಕ್ಕೆಂದು ಅನೇಕ ಸೇತುವೆಗಳಿರುವುದೂ ಯಾವುದೇ ನಗರಕ್ಕೆ ಹೋದರೂ ಕಾಣಬರುವ ಒಂದು ಸರ್ವೇ ಸಾಮಾನ್ಯ ದೃಶ್ಯ. ಕೆಲವೊಂದು ಸೇತುವೆಗಳಂತೂ ಶತಮಾನಗಳಷ್ಟು ಹಳೆಯವು. ಪ್ರವಾಸಿಗರೊಂದಿಗೆ ಸೇನ್ ನದಿಯ ಮೇಲೆ ದೋಣಿಯಲ್ಲಿ ವಾಯುವಿಹಾರ ಹೋಗಬೇಕೆಂಬ ಮನಸ್ಸಿದ್ದರೂ ಪ್ರವಾಸದ ಸಿದ್ಧತೆಯಲ್ಲಿ ಉಂಟಾದ ದಣಿವಿನಿಂದ ಹೋಗಲಿಲ್ಲ. ನಮ್ಮನ್ನು ಕಾಣಲು ಬಂದಿದ್ದ ಪ್ಯಾರಿಸ್ ನಿವಾಸಿಗಳಾದ ಡಾ|| ಮಹೇಶ್ ಘಟ್ರಡ್ಯಾಲ್ ಅವರೊಂದಿಗೆ ಬಹಳ ಹೊತ್ತು ಮಾತನಾಡುತ್ತಾ ಕುಳಿತೆವು. ಅದುವರೆಗಿನ ನಮ್ಮ ಪ್ರವಾಸದ ಆತಂಕಗಳನ್ನು ಅವರೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರಮಾಡಿಕೊಂಡೆವು.
ಡಾ|| ಮಹೇಶ್ ಘಟ್ರಡ್ಯಾಲ್ ರವರು ಮೂಲತಃ ಕರ್ನಾಟಕದವರು. ಗದುಗಿನ ಸಮೀಪದ ಹಳ್ಳಿಗುಡಿ ಅವರ ಊರು. ಉತ್ತಮ ಕ್ರೀಡಾಪಟುವಾಗಿ 1947 ರಲ್ಲಿ ಸ್ವಾತಂತ್ರ್ಯ ಬರುವ ಕೆಲವೇ ತಿಂಗಳ ಹಿಂದೆ ಆಗಿನ ಬಾಂಬೆ-ಕರ್ನಾಟಕ ಪ್ರಾಂತ್ಯದಲ್ಲಿದ್ದ ಮಹಾರಾಜರುಗಳಿಂದ ಆರ್ಥಿಕ ಸಹಾಯ ಪಡೆದು ಯೂರೋಪಿಗೆ ಹೋದವರು, ಪ್ಯಾರಿಸ್ ನಲ್ಲಿ ನಡೆದ ರನ್ನಿಂಗ್ ರೇಸ್ ನಲ್ಲಿ ಭಾಗವಹಿಸಿ ಭಾರತದ ತ್ರಿವರ್ಣ ಧ್ವಜವನ್ನು ವಿದೇಶೀ ನೆಲದಲ್ಲಿ ಮೊಟ್ಟಮೊದಲು ಹಾರಿಸಿದ ಹೆಮ್ಮೆ ಮಹೇಶ್ರವರದು. ನಂತರ ಅಲ್ಲಿಯೇ ಉಳಿದು ಓದಲು ಆರಂಭಿಸಿದರು. ವೈದ್ಯಕೀಯ ಪದವಿಯನ್ನು ಅಭ್ಯಾಸಮಾಡಿ ಕೆಲವು ವರ್ಷಗಳ ನಂತರ ಮದುವೆಗೆಂದು ಭಾರತಕ್ಕೆ ಬಂದರು. ಇಲ್ಲಿಯೇ ಇರುವುದಾದರೆ ಮಾತ್ರ ಹೆಣ್ಣು ಕೊಡುವುದಾಗಿಯೂ ವಾಪಾಸು ಫ್ರಾನ್ಸಿಗೆ ಹೋಗುವುದಾದರೆ ಆಗುವುದಿಲ್ಲವೆಂದು ಹೆಣ್ಣುಹೆತ್ತವರು ನಿರಾಕರಿಸಿದರು. ಮರಳಿ ಪ್ಯಾರಿಸ್ಸಿಗೆ ಹೋದ ಡಾ|| ಮಹೇಶ್ ಅಲ್ಲಿಯೇ ಮದುವೆಯಾಗಿ ನೆಲೆಸಿದರು. ಅವರ ಧರ್ಮಪತ್ನಿ ಶ್ರೀಮತಿ ಮೋನಿಕಾರವರ ತಂದೆ ಚಾರ್ಲ್ಸ್ ಡಿಗಾಲೆ ಕಾಲದಲ್ಲಿ ಫ್ರೆಂಚ್ ಆಡಳಿತಕ್ಕೊಳಪಟ್ಟ ವೆಸ್ಟ್ ಇಂಡೀಸ್ ನಲ್ಲಿರುವ ಹಾರುವ ಚಿಟ್ಟೆಯಾಕಾರದ ಗ್ವಾದಲೂಪ್ ದ್ವೀಪದಲ್ಲಿ ಕೆಲವು ವರ್ಷಗಳ ಕಾಲ ಗವರ್ನರ್ ಆಗಿದ್ದರು. ಅದೇ ವರ್ಷ ಏಪ್ರೀಲ್ ತಿಂಗಳಲ್ಲಿ ಡಾ|| ಮಹೇಶ್ ರವರು ತಾವು ನಿರ್ದೇಶಕರಾಗಿದ್ದ ಇಂಡೋ-ಫ್ರೆಂಚ್ ಸಂಸ್ಥೆಯ ಮೂಲಕ ನಮ್ಮನ್ನು ಆಹ್ವಾನಿಸಿ ಆ ದ್ವೀಪಕ್ಕೆ ಕರೆದುಕೊಂಡು ಹೋಗಿದ್ದರು. ಕಳೆದ ಶತಮಾನದಲ್ಲಿ (1850) ಅಲ್ಲಿನ ಕಬ್ಬಿನ ಗದ್ದೆಗಳಲ್ಲಿ ಕೆಲಸಮಾಡಲೆಂದು ಫ್ರೆಂಚರು ಕರೆದುಕೊಂಡು ಹೋಗಿದ್ದ ಸುಮಾರು 70-80 ಸಾವಿರ ಭಾರತೀಯ ಮೂಲದವರು ಮುಖ್ಯವಾಗಿ ಪಾಂಡಿಚರಿ, ಬಿಹಾರ ಮತ್ತು ಬಂಗಾಳದವರು ಈ ದ್ವೀಪದಲ್ಲಿದ್ದಾರೆ. ನಮ್ಮನ್ನು ನೋಡಿದಾಗ ಆ ಜನರಲ್ಲಿ ಉಂಟಾದ ಆನಂದಕ್ಕೆ ಪಾರವೇ ಇಲ್ಲ! ಡಾ|| ಮಹೇಶ್ ತಾವು ಹುಟ್ಟಿದ ಮಣ್ಣಿನ ಋಣ ತೀರಿಸಬೇಕೆಂಬ ಅಪೇಕ್ಷೆಯಿಂದ ಗದುಗಿನ ಸಮೀಪದಲ್ಲಿರುವ ಅವರ ತಾಯಿಯ ತವರೂರು ಹಳ್ಳಿಗುಡಿಯಲ್ಲಿ ಸುಮಾರು 80 ಲಕ್ಷ ರೂ. ಖರ್ಚು ಮಾಡಿ ಒಂದು ಆಸ್ಪತ್ರೆ ಕಟ್ಟಿಸಿಕೊಟ್ಟು ಬಡಜನರಿಗೆ ಉಚಿತ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ. ಕುವೆಂಪುರವರ "ನೆನಪಿನ ದೋಣಿಯಲಿ" ಆತ್ಮಕಥನದಲ್ಲಿ ಆಗಿನ ಕಾಲದಲ್ಲಿ ಪ್ಯಾರಿಸ್‌ನಲ್ಲಿದ್ದ ರಾಮಕೃಷ್ಣ ಆಶ್ರಮದ ಸ್ವಾಮಿ ಸಿದ್ಧೇಶ್ವರಾನಂದರು ದಿನಾಂಕ 28.3.1951ರಲ್ಲಿ ಬರೆದ ಒಂದು ಸುದೀರ್ಘ ಪತ್ರ ಪ್ರಕಟವಾಗಿದ್ದು ಅದರಲ್ಲಿ ಉಲ್ಲೇಖಿಸಿರುವ ಬಾಲಕ ಮಹೇಶ್ ಇವರೇ. ಪ್ಯಾರಿಸ್ಸಿನಲ್ಲಿ ಭಾರತದ ದೂತಾವಾಸವಿದ್ದರೂ ಡಾ|| ಮಹೇಶ್‌ರವರು ಭಾರತದ ಖಾಯಂ ಸಾಂಸ್ಕೃತಿಕ ರಾಯಭಾರಿಯಂತೆ ಆಗಿದ್ದರು!
ಫ್ರಾನ್ಸ್‌ನಿಂದ ಹೊರಟು ಸ್ವಿಟ್ಸರ್‌ಲ್ಯಾಂಡ್ ತಲುಪಿದಾಗ ಸಂಜೆಯಾಗಿತ್ತು. ಯೂರೋಪ್ ನಲ್ಲಿ ನಮ್ಮೆರಡು ಬಸ್ಸುಗಳ ಜೊತೆಯಲ್ಲಿಯೇ ನೂರೈವತ್ತು ಜನರಿಗೂ ಬೇಕಾದ ಅಡುಗೆ ಸಾಮಾನು-ಸರಂಜಾಮುಗಳನ್ನು ಹೊತ್ತು ವಾಹನದೊಳಗೇ ಅಡುಗೆ ಮಾಡುವ ವ್ಯವಸ್ಥೆಯಿದ್ದ ವ್ಯಾನೊಂದು ಪ್ರವಾಸದುದ್ದಕ್ಕೂ ನಮ್ಮ ಹಿಂದೆ ಹಿಂದೆಯೇ ಬರುತ್ತಿತ್ತು. ಪ್ರವಾಸಿಗರು ಬೇಗನೆ ರಾತ್ರಿ ಊಟ ಮುಗಿಸಿದರು. ರಾತ್ರಿ ಊಟ ಎನ್ನುವುದಕ್ಕಿಂತ ಸಂಜೆ ಊಟ ಎನ್ನುವುದೇ ಲೇಸೆಂದು ಕಾಣಿಸುತ್ತದೆ. ಯೂರೋಪಿನ ಎಲ್ಲ ದೇಶಗಳಲ್ಲಿ ರಾತ್ರಿ 10 ಗಂಟೆಯಾದರೂ ಸಂಜೆಯ ಬೆಳಕು ಇರುವುದರಿಂದ ಗಡಿಯಾರ ನೋಡಿಕೊಂಡೇ ರಾತ್ರಿಯ ಊಟ ಮಾಡಬೇಕು. ಆ ದಿನ ಸಂಜೆ ಯಾವ ನಿರ್ದಿಷ್ಟ ಕಾರ್ಯಕ್ರಮವೂ ಇರಲಿಲ್ಲ. ಪ್ರವಾಸಿಗರು ಊಟವಾದ ಮೇಲೆ ಅಲ್ಲಲ್ಲಿ ದಾರಿಯಲ್ಲಿದ್ದ ಟೆಲಿಫೋನ್ ಬೂತ್‌ಗಳಿಂದ ತಮ್ಮ ಊರುಗಳಿಗೆ ಫೋನ್ ಮಾಡತೊಡಗಿದರು. ಕೆಲವರು ಹಾಗೆಯೇ ಹಾಯಾಗಿ ಅಡ್ಡಾಡಿಕೊಂಡು ಬರಲು ಹೊರಟರು. ಹೆಣ್ಣುಮಕ್ಕಳು ಹೋಟೆಲ್ ಲಾಂಜ್ ನಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದರು. ಅಂದಾಜು ಸಂಜೆ 10 ಗಂಟೆಯ ಸಮಯ. ನಮ್ಮ ಪೂಜಾ ಮರಿ ಬಸವರಾಜ ನಮ್ಮ ರೂಮಿಗೆ ಓಡಿ ಬಂದ. ಹೊರಗೆ ಹೋದವರು ಎಲ್ಲರೂ ಬಂದಿದ್ದಾರೆ. ಆದರೆ ದಾವಣಗೆರೆಯವರಾದ ಹಿರಿಯ ವಯಸ್ಸಿನ ನಿವೃತ್ತ ಇಂಜಿನಿಯರ್ ಜಯದೇವಪ್ಪನವರು ಮಾತ್ರ ಇನ್ನೂ ವಾಪಾಸು ಬಂದಿಲ್ಲ. ಕೆಳಗೆ ಅವರ ಪತ್ನಿ ಚೆನ್ನಮ್ಮ ಒಬ್ಬರೇ ಸಪ್ಪೆ ಮುಖಮಾಡಿಕೊಂಡು ಗಂಡನ ದಾರಿಕಾಯುತ್ತಾ ಕುಳಿತಿದ್ದಾರೆ ಎಂದು ಹೇಳಿದ. ಕಾದಿರುವಳು ಶಬರಿ ರಾಮ ಬರುವನೆಂದು... ಎಂಬ ರಾಮಾಯಣದ ದೃಶ್ಯ ನಮಗೆ ನೆನಪಾಯಿತು. ಮುಂಚಿತವಾಗಿ ರೂಮಿಗೇನಾದರೂ ಬಂದಿದ್ದಾರೋ ಎಂದು ಅವರ ರೂಮಿಗೆ ಫೋನ್ ಮಾಡಿಸಿದರೆ ಏನೂ ಉತ್ತರ ಬರಲಿಲ್ಲ. ಯಾವಾಗಲೂ ನಮ್ಮ ಪಕ್ಕದ ರೂಮಿನಲ್ಲಿಯೇ ನಮಗೆ ಸಹಾಯಕನಾಗಿ ಇರುತ್ತಿದ್ದ ಮುಂಬೈ ರಾಜುವನ್ನು ನಮ್ಮ ಪೂಜಾಮರಿಯ ಜೊತೆಗೆ ಕೆಳಗೆ ಕಳುಹಿಸಿದೆವು. ಆತನೂ ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ಬಹಳ ಹುಡುಕಿ ನೋಡಿದ. ಜಯದೇವಪ್ಪನವರು ಸಿಗಲಿಲ್ಲ. ರೂಮಿನಲ್ಲಿ ಮಲಗಿರಬಹುದು ಬಾಗಿಲು ತಟ್ಟಿ ನೋಡಿ ಎಂದು ಸೂಚಿಸಿದರೆ, ಚೆನ್ನಮ್ಮನವರು ನಮ್ಮ ಯಜಮಾನರು ನನ್ನನ್ನು ಬಿಟ್ಟು ಹಾಗೆ ಹೋಗಲು ಸಾಧ್ಯವಿಲ್ಲ ಎಂಬ ತಮ್ಮ ದೃಢವಾದ ನಂಬಿಕೆಯನ್ನು ವ್ಯಕ್ತಪಡಿಸಿದರು. ಆದರೂ ಮುಂಬೈ ರಾಜು ಒಬ್ಬನೇ ಹೋಗಿ ರೂಮಿನ ಬಾಗಿಲು ಬಡಿದ. ಒಳಗಿನಿಂದ ಉತ್ತರವೇ ಇಲ್ಲ, ಚೆನ್ನಮ್ಮ ಹೇಳುವುದು ನಿಜವೆನಿಸಿತು. ರೂಮಿನ ಕೀ ಅವರ ಕಡೆಗೇ ಇದ್ದುದರಿಂದ ಚೆನ್ನಮ್ಮನವರಿಗೆ ರೂಮಿಗೆ ಹೋಗಲು ಬರುವಂತಿರಲಿಲ್ಲ, ಎಷ್ಟು ಹೊತ್ತು ಹೀಗೇ ಹೊರಗೆ ಕಾಯಿಸುವುದೆಂದು ಆಲೋಚಿಸಿ ರಿಸೆಪ್ಪನಿಸ್ಟ್ ಗೆ ಪರಿಸ್ಥಿತಿಯನ್ನು ವಿವರಿಸಿ ರೂಮಿನ ಡೂಪ್ಲಿಕೇಟ್ ಕೀ ಕೊಡಿಸಿದೆವು. ಇನ್ನೇನು ಪೋಲೀಸರಿಗೆ ದೂರು ಸಲ್ಲಿಸಬೇಕೆಂದು ಆಲೋಚನೆ ಮಾಡುವಷ್ಟರಲ್ಲಿ ರಾಜು ಚೆನ್ನಮ್ಮನವರನ್ನು ಕರೆದುಕೊಂಡು ಹೋಗಿ ರೂಮಿನ ಬೀಗ ತೆಗೆದು ಬಾಗಿಲು ತೆರೆದರೆ ಅಲ್ಲಿ ಕಾಣುವುದೇನು: ಸನ್ಮಾನ್ಯ ಜಯದೇವಪ್ಪನವರು ಮುಖದ ತುಂಬಾ ಹೊದ್ದುಕೊಂಡು ಮುಗಿಲು ಬಿದ್ದರೂ ಜಪ್ಪಯ್ಯಾ ಎನ್ನದಂತೆ ಮಂಚದ ಮೇಲೆ ಮಲಗಿ ಗೊರಕೆ ಹೊಡೆಯುತ್ತಿದ್ದರು! ಮಾರನೆಯ ದಿನ ಅವರನ್ನು ತರಾಟೆಗೆ ತೆಗೆದುಕೊಂಡಾಗ ಬಂದ ಸಮಜಾಯಿಷಿ: “ಇಲ್ಲ ಬುದ್ದೀ, ನಾನು ವಾಪಾಸು ಬಂದಾಗ ಅವಳನ್ನು ಕರೆದೆ, ಅವಳು ಬೇರೆ ಹೆಣ್ಣುಮಕ್ಕಳೊಂದಿಗೆ ಹರಟೆ ಹೊಡೆಯುತ್ತಾ ಕುಳಿತಿದ್ದರಿಂದ ನನ್ನ ಮಾತು ಕೇಳಿಸಿದಂತಿಲ್ಲ!” ಆದರೆ ಫೋನ್ ಮಾಡಿದರೂ, ಬಾಗಿಲು ತಟ್ಟಿದರೂ ಒಳಗೆ ಇದ್ದೂ ಮೈಮರೆತು ನಿದ್ದೆ ಹೊಡೆಯುತ್ತಾ ಬಾಗಿಲನ್ನೇ ತೆಗೆಯದಿದ್ದರೆ ನಿಮ್ಮ ಪತ್ನಿಯ ಗತಿ ಏನು? ಎಂದು ಗದರಿಸಿದಾಗ ಜಯದೇವಪ್ಪನವರು ನಿರುತ್ತರವಾಗಿ ತಲೆತಗ್ಗಿಸಿಕೊಂಡು ತಮ್ಮ ಶ್ರೀಮತಿಯವರತ್ತ ತಿರುಗಿ ಇದೆಲ್ಲಾ ನಿನ್ನಿಂದಲೇ ಆಗಿದ್ದು ಎಂದು ಆಪಾದಿಸುತ್ತಿರುವ ರೀತಿಯಲ್ಲಿ ದಿಟ್ಟಿಸಿ ನೋಡುತ್ತಿದ್ದರು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 6.1.2010.