ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡಿ!
"ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡುವ" ದಿನ ನಾಳೆ ಬರಲಿದೆ. ಅದುವೇ ಸಂಕ್ರಾಂತಿ ಎಂದೂ ಕೆಟ್ಟ ಮಾತನ್ನಾಡದ ಸಜ್ಜನರು ತಮ್ಮ ಮೇಲೆ ಇದೆಂಥಾ ಮಿಥ್ಯಾರೋಪವೆಂದು ಸಿಡಿಮಿಡಿಗೊಳ್ಳದೆ ಮುಗುಳ್ನಕ್ಕು ಬಾಯ್ತುಂಬ ಎಳ್ಳು-ಬೆಲ್ಲ ಮೆಲ್ಲುತ್ತಾರೆ. ಅವರ ಸ್ನೇಹಿತರಿಗೂ/ಬಂಧುಗಳಿಗೂ ಎಳ್ಳುಬೆಲ್ಲ ಕೊಟ್ಟು ಸಂತೋಷಪಡುತ್ತಾರೆ. ಅದುವೇ ಸಂಕ್ರಾಂತಿ. ಲಕ್ಷಾಂತರ ಜನ ಹಿಂದೂಗಳು ಪ್ರಯಾಗದ ಪಾವನ ಗಂಗೆಯ ತ್ರೀವೇಣೀಸಂಗಮದಲ್ಲಿ ಮಿಂದು ನಲಿದೇಳುತ್ತಾರೆ. ಗುಜರಾತಿನಲ್ಲಿ ಮುಗಿಲು ಮುಟ್ಟುವಂತೆ ಪೈಪೋಟಿಯಿಂದ ಗಾಳಿಪಟ ಹಾರಿಸುತ್ತಾರೆ. ತಮಿಳು ನಾಡಿನಲ್ಲಿ ವಿಶೇಷ ಭಕ್ಷವಾದ ಪೊಂಗಲ್ ಮಾಡಿ ಸವಿಯುತ್ತಾರೆ. ನಾಳೆ ಆಚರಿಸಲಿರುವ ಸಂಕ್ರಾಂತಿ ಹಬ್ಬವನ್ನು ಭಾರತೀಯರಷ್ಟೇ ಅಲ್ಲ ದಕ್ಷಿಣ ಏಷ್ಯಾದ ನೇಪಾಳ, ಥೈಲ್ಯಾಂಡ್ ಮತ್ತಿತರ ದೇಶದವರೂ ಆಚರಿಸುತ್ತಾರೆ. ಥೈಲ್ಯಾಂಡ್ನಲ್ಲಿ ಈ ಹಬ್ಬಕ್ಕೆ ಸೊಂಕ್ರಾನ್ ಎಂದು ಕರೆಯುತ್ತಾರೆ. ಚಾಂದ್ರಮಾನ ಪಂಚಾಂಗದ ಪ್ರಕಾರ ಭಾರತೀಯ ಹಬ್ಬಗಳು ಪ್ರತಿವರ್ಷವೂ ಬೇರೆ ಬೇರೆ ದಿನಾಂಕಗಳಂದು ಬಂದರೆ ಸೌರಮಾನ ಪಂಚಾಂಗದಲ್ಲಿ ಸೂರ್ಯನ ಗತಿಯನ್ನು ಅವಲಂಬಿಸಿ ಬರುವ ಈ ಸಂಕ್ರಾಂತಿ ಹಬ್ಬ ಮಾತ್ರ ಯಾವಾಗಲೂ ಜನವರಿ 14 ರಂದೇ ಬರುತ್ತದೆ. ಇಲ್ಲಿಂದ ಮುಂದಕ್ಕೆ ಆರು ತಿಂಗಳ ಕಾಲ ಸೂರ್ಯ ತನ್ನ ಗತಿಯನ್ನು ಬದಲಾಯಿಸಿ ಉತ್ತರದಿಕ್ಕಿನತ್ತ ಪಯಣಿಸುವುದರಿಂದ ಇದನ್ನು ಉತ್ತರಾಯಣ ಎಂದು ಕರೆಯುತ್ತಾರೆ. ಖಗೋಳವಿಜ್ಞಾನಿಗಳ ಪ್ರಕಾರ ಆಗಲೇ ಒಂದು ವಾರದ ಹಿಂದೆ ಸೂರ್ಯ ತನ್ನ ಗತಿಯನ್ನು ಬದಲಾಯಿಸಿದ್ದಾನೆ. ಈ ಅವಧಿಯಲ್ಲಿ ಹಗಲು ಹೊತ್ತು ಹೆಚ್ಚುತ್ತಾ ಹೋಗುತ್ತದೆ; ರಾತ್ರಿ ಕಡಿಮೆಯಾಗುತ್ತದೆ.
ಸಂಸಾರದ ಬೇಗೆಯಲ್ಲಿ ಬೆಂದ ಮನಸ್ಸಿಗೆ ಮುದವನ್ನು ನೀಡುವ ದಿನಗಳೇ ಹಬ್ಬಗಳು, ಬದುಕಿಗೆ ಹೊಸ ಚೈತನ್ಯವನ್ನು ತುಂಬುವ ಇಂತಹ ಹಬ್ಬಗಳು ಇಲ್ಲದೇ ಹೋಗಿದ್ದರೆ ಸಂಸಾರದ ಏಕತಾನತೆಯಲ್ಲಿ ಜಿಗುಪ್ಪೆಗೊಂಡು ಅದೆಷ್ಟು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದರೋ ಏನೋ, ಕಾವ್ಯಕ್ಕೆ ನವನವೋನೇಷಶಾಲಿನೀ ಎನ್ನುತ್ತಾರೆ. ಈ ಮಾತು ಅಕ್ಷರಶಃ ಹಬ್ಬಗಳಿಗೂ ಅನ್ವಯಿಸುತ್ತದೆಯೆಂದರೆ ಅತಿಶಯೋಕ್ತಿಯಾಗಲಾರದು. ಪಂಚಾಂಗದ ಲೆಕ್ಕಾಚಾರದ ಪ್ರಕಾರ ಸೂರ್ಯನು ಸಂಕ್ರಾತಿಯಂದು ಸೂರ್ಯನು ಧನುರ್ ರಾಶಿಯಿಂದ ಮಕರರಾಶಿಗೆ ಕಾಲಿಡುತ್ತಾನೆ. ಮಕರರಾಶಿಯ ಅಧಿಪತಿ ಶನಿ; ಸೂರ್ಯನ ಮಗ, ತಾಯಿ ಸಂಜ್ಞಾ ಕಾರಣಕ್ಕಾಗಿ ತಂದೆ-ಮಗನಿಗೆ ಯಾವಾಗಲೂ ಸರಿಯಿಲ್ಲ. ಇಬ್ಬರು ಹೆಂಡತಿಯರ (ಸಂಜ್ಞಾ ಮತ್ತು ಛಾಯಾ ಗಂಡನಾಗಿ ತಂದೆ ತನ್ನ ಜೀವನಾಂಶಕ್ಕೆ ಒಂದೇ ಮನೆ (ಸಿಂಹರಾಶಿ) ಇಟ್ಟುಕೊಂಡು ಮಗನಿಗೆ ಎರಡು ಮನೆಗಳನ್ನು (ಮಕರ-ಕುಂಭ ರಾಶಿಗಳು) ಕೊಟ್ಟಿದ್ದರೂ ಮಗನಿಗೆ ತೃಪ್ತಿ ಇಲ್ಲ. ಉಭಯತರ ಮಧ್ಯೆ ಏನೇ ಜಗಳ ಇದ್ದರೂ ಸ್ವತಃ ತಂದೆಯೇ ಮನೆಗೆ ಬಂದಾಗ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಬೇಕಾದ್ದು ಮಗನ ಕರ್ತವ್ಯ. ಮಗ ಮನೆಯಲ್ಲಿ ಇಲ್ಲದಿರುವುದನ್ನು ನೋಡಿಕೊಂಡು ತಂದೆ ಬಂದನೋ, ಬಡಪಾಯಿ ತಂದೆ ಒಂದು ತಿಂಗಳು ಇದ್ದು ಹೋಗಲಿ ಬಿಡು ಎಂದು ಮಗ ಸುಮ್ಮನಿದ್ದಾನೋ ಹೇಳಲಾಗದು. ಮಗ ಸುಮ್ಮನಿರುವುದೂ ಹೆಚ್ಚಿನ ಮಾತೇ ಸರಿ. ಜಗತ್ತಿನ ಜನರಿಗೆ ಬೆಳ್ಳಂಬೆಳಕಾಗಿ ಕಾಣುವಂತೆ ಬುದ್ದಿ ಹೇಳಿ ಪ್ರಾತಃಸ್ಮರಣೀಯನೆನಿಸಿಕೊಂಡಿರುವ (ಓಂ ತತ್ ಸವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನಃ ಪ್ರಚೋದಯಾತ್) ಸೂರ್ಯದೇವನಿಗೆ ಅಷ್ಟೂ ಬುದ್ದಿ ಬೇಡವೇ? ಅಷ್ಟೊಂದು ಉರಿಸುವ ಗಂಡನ ಕೈಯಲ್ಲಿ ಯಾವ ಹೆಂಡತಿಗಾದರೂ ಹೇಗೆ ಬಾಳುವೆ ಮಾಡಲು ಸಾಧ್ಯ ನೀವೇ ಹೇಳಿ. ಪಾಪ, ಚಿಕ್ಕ ಹುಡುಗ ಮಾಡಿದ ತಪ್ಪಾದರೂ ಏನು? ತಾಯಿಯ ಪರ ನಿಂತು ವಾದಿಸಿದನೆಂದು ಅವನ ಕಣ್ಣು ಹೋಗುವಂತೆ ನಿರ್ದಯಿಯಾಗಿ ಹೊಡೆಯಬಹುದೇ? ಒಂದು ಕಣ್ಣನ್ನು ಶಾಶ್ವತವಾಗಿ ಕಳೆದುಕೊಂಡ ಶನಿ ಅವನು ಜೀವನದುದ್ದಕ್ಕೂ ಜನರಿಂದ ಒಕ್ಕಣ್ಣ ಎನಿಸಿಕೊಂಡು ಬದುಕಲು ಅವನಿಗಾದರೂ ಕಷ್ಟವಾಗುತ್ತದೆಯಲ್ಲವೇ? ತಾನು ಮಾಡದ ತಪ್ಪಿಗಾಗಿ ಹಾಗೆ ಹಂಗಿಸುವವರನ್ನು ಕಂಡು ಸಿಟ್ಟಿಗೆದ್ದು ಶನಿ ಕಾಡದೆ ಬಿಡುತ್ತಾನೆಯೇ? ಆದರೂ ಶನಿ ಕಾಡಿ ಸತ್ತವರಿಲ್ಲ ಎಂಬ ಸಮಾಧಾನಕರವಾದ ಗಾದೆ ಮಾತಿದೆ. ನಿವೇನು ಹೆದರಬೇಕಾಗಿಲ್ಲ. ಅದೇನೇ ಇರಲಿ, ಅಂತೂ ಸೂರ್ಯನಿಗೆ ತಾನು ಕಟ್ಟಿಸಿದ ಮನೆಯಲ್ಲಿ ಒಂದು ತಿಂಗಳಾದರೂ ಇರಲು ಅವಕಾಶ ಸಿಕ್ಕಿದ್ದಕ್ಕಾಗಿ ಸ್ವರ್ಗದ ಬಾಗಿಲು ತೆರೆದಷ್ಟೇ ಸಮಾಧಾನವಾಗಿರಬೇಕು. ಸ್ವರ್ಗದ ಬಾಗಿಲು ತೆರೆಯುವುದು ಇದೇ ದಿನ ಎಂದು ಹೇಳುತ್ತಾರೆ. ಕುರುಕ್ಷೇತ್ರದ ಕಾಳಗದಲ್ಲಿ ಅರ್ಜುನನಿಂದ ಹತನಾದ ಇಚ್ಛಾಮರಣಿ ಭೀಷ್ಮ ಶರಶಯ್ಯೆಯ ಮೇಲೆ ಮಲಗಿ ಸ್ವರ್ಗದ ಬಾಗಿಲು ತೆರೆಯುವ ಇದೇ ದಿನವನ್ನು ಎಷ್ಟೋ ದಿನಗಳ ಕಾಲ ಕಾದಿದ್ದನಂತೆ! ಸ್ವರ್ಗದಲ್ಲಿರುವ ಮನೆಗಳು ಮಳೆಗಾಲದಲ್ಲಿ ನೆರೆಹಾವಳಿಯಿಂದ ಜಲಾವೃತಗೊಂಡು, ಚಳಿಗಾಲದಲ್ಲಿ ಥಂಡಿಗಾಳಿಯ ಹೊಡೆತಕ್ಕೆ ಸಿಲುಕಿ ಬಾಗಿಲು ಮುಚ್ಚಿಕೊಂಡಿದ್ದವೋ ಏನೋ!
ನರಕದಿಂದ ಇತ್ತೀಚೆಗೆ ತಾನೇ ಹಾಯ್ ಇಂಡಿಯಾ ಪತ್ರಿಕೆಯಲ್ಲಿ ಬಂದ ಒಂದು ಕೆಟ್ಟ ವಾರ್ತೆಯೆಂದರೆ ಅಲ್ಲಿಯೂ ಆರ್ಥಿಕ ಮುಗ್ಗಟ್ಟು (recession) ಆರಂಭವಾಗಿದೆಯಂತೆ! ಪಾಪ-ಪುಣ್ಯಗಳ ಲೆಕ್ಕ ಬರೆಯುವ ಚಿತ್ರಗುಪ್ತನ ವರದಿಯಿಂದ ಯಮನೂ ಕಂಗಾಲಾಗಿದ್ದಾನೆ. ಪಾಪಿಗಳಿಗೆ ಶಿಕ್ಷೆ ವಿಧಿಸಲು ಮೀಸಲಾತಿ ನಿಯಮಾನುಸಾರ ಮಾಡಿಕೊಂಡ ನೇಮಕಾತಿಗಳಿಗೆ ಆರ್ಥಿಕಮಿತವ್ಯಯ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾನೆ. ಬೇರೆ ಬೇರೆ ದೇಶಗಳ ಪಾಪಿಗಳನ್ನು ಬೇರೆ ಬೇರೆ ಎಣ್ಣೆ ಕೊಪ್ಪರಿಗೆಗಳಲ್ಲಿ ಕುದಿಸುತ್ತಿದ್ದು ಅಮೇರಿಕಾ, ಇಂಗ್ಲೆಂಡ್ ಇತ್ಯಾದಿ ರಾಷ್ಟ್ರಗಳ ಪಾಪಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು ಕಾವಲುಭಟರ ನೇಮಕಾತಿಗಳನ್ನು ಮುಂದುವರಿಸಿದ್ದಾನೆ. ಆದರೆ ಭಾರತದ ಪಾಪಿಗಳನ್ನು ಕುದಿಸುತ್ತಿರುವ ಕೊಪ್ಪರಿಗೆಗಳ ಸುತ್ತ ಕಾಯಲು ಮಾಡಿಕೊಂಡಿದ್ದ ಕಾವಲುಭಟರ ನೇಮಕಾತಿಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಿದ್ದಾನೆ. ಅನೇಕ ವರ್ಷಗಳ ಅನುಭವದಿಂದ ಯಮರಾಜ ಈ ಕ್ರಮ ಕೈಗೊಂಡಿದ್ದಾನಂತೆ! ಬೇರೆ ದೇಶದ ಪಾಪಿಗಳ ಪೈಕಿ ಯಾರಾದರೂ ತಪ್ಪಿಸಿಕೊಳ್ಳಲು ಯತ್ನಿಸಿದರೆ ಹೋಗಲಿ ಬಿಡು ಒಬ್ಬನಾದರೂ ಬದುಕಿಕೊಳ್ಳಲಿ ಎಂದು ಸುಮ್ಮನಿರುತ್ತಾರಂತೆ! ಆದರೆ ನಮ್ಮ ದೇಶದ ಪಾಪಿಗಳಿರುವ ಕೊಪ್ಪರಿಗೆಗಳಲ್ಲಿ ಯಾರಾದರೂ ತಪ್ಪಿಸಿಕೊಳ್ಳಲು ಯತ್ನಿಸಿದರೆ ಪರಸ್ಪರ ಕಾಲೆಳೆದು ತಪ್ಪಿಸಿಕೊಳ್ಳದಂತೆ ಮಾಡುತ್ತಾರಂತೆ! ಹೀಗೆ ಒಬ್ಬರನ್ನೊಬ್ಬರು ಕಾಲೆಳೆಯುವ ಭಾರತೀಯರ ಸ್ವಭಾವವನ್ನು ನೋಡಿ ಅವರನ್ನು ಕಾಯಲು ಪ್ರತ್ಯೇಕ ಕಾವಲುಭಟರನ್ನು ನೇಮಿಸುವ ಅವಶ್ಯಕತೆ ಇಲ್ಲ, ವೃಥಾ ಖರ್ಚು ಎಂಬ ತೀರ್ಮಾನಕ್ಕೆ ಯಮ ಬಂದಿದ್ದಾನಂತೆ! ಇದುವರೆಗೂ ಪ್ರಾಮಾಣಿಕವಾಗಿ ಪಾಪ-ಪುಣ್ಯಗಳ ಲೆಕ್ಕ ಬರೆಯುತ್ತಾ ಬಂದಿರುವ ನಂಬಿಗಸ್ಥ ಕರಣಿಕನಾದ ಚಿತ್ರಗುಪ್ತ ರೆಸಾರ್ಟ್ ಸಂಸ್ಕೃತಿಯ ರಾಜಕೀಯ ಆಮಿಷಕ್ಕೆ ಒಳಗಾಗಿ ಎಲ್ಲಿ ತಪ್ಪುಲೆಕ್ಕ ಬರೆಯುತ್ತಾನೋ ಎಂಬ ಒಂದೇ ಒಂದು ಚಿಂತೆ ಯಮನನ್ನು ಬಲವಾಗಿ ಕಾಡಿಸುತ್ತಿದೆಯಂತೆ! |
ಈ ಸ್ವರ್ಗ-ನರಕಗಳು ನಿಜವಾಗಿಯೂ ಇವೆಯೇ? ಹಾಲನ್ನು ಕುಡಿಯದೆ ಹಠಮಾಡುವ ಮಗುವನ್ನು ಗುಮ್ಮ ಬರುತ್ತೆ ನೋಡು, ಗುಮ್ಮ ಬರುತ್ತೆ... ಎಂದು ತಾಯಿ ಹೆದರಿಸುತ್ತಾಳೆ. ಗುಮ್ಮ ಎಲ್ಲಿಂದ ಬರುತ್ತೆ, ಹೇಗಿರುತ್ತೆ ತಾಯಿಗೂ ಗೊತ್ತಿಲ್ಲ, ಮಗುವಿಗೂ ಗೊತ್ತಿಲ್ಲ. ಬಂದರೆ ಏನೋ ಮಾಡುತ್ತೆ ಎನ್ನುವ ಭಯ ಮಾತ್ರ ಮಗುವಿನ ಮನಸ್ಸಿನಲ್ಲಿ ಉಂಟಾಗುತ್ತದೆ. ತನ್ನ ಪಾಲನೆ ಪೋಷಣೆಯನ್ನು ಮಾಡುವ ತಾಯಿಯ ಮಾತನ್ನು ಕೇಳುವುದು ಲೇಸು ಎಂದು ಮಗು ಹಠಮಾಡುವುದನ್ನು ನಿಲ್ಲಿಸಿ ಹಾಲನ್ನು ಕುಡಿಯುತ್ತದೆ. ತೀರಾ ಗಾಬರಿಯಾಗಿ ಹಾಲು ಕುಡಿಯಲು ಹಿಂದೆಗೆದರೆ ಗುಮ್ಮ ಇಲ್ಲ... ಹೋಯ್ತು ... ಎಂದು ಮಗುವಿನ ಮನಸ್ಸಿಗೆ ಭರವಸೆಯನ್ನು ತುಂಬುತ್ತಾಳೆ. ಮರುದಿನ ಮತ್ತೆ ಹಠಮಾಡಿದರೆ ಗುಮ್ಮನ ಕರೀತೀನ್ ನೋಡು ಎಂದು ಮತ್ತೆ ಬೆದರಿಸುತ್ತಾಳೆ. ಮಗು ಸುಮ್ಮನೆ ಹಾಲು ಕುಡಿಯುತ್ತೆ. ಗುಮ್ಮನ ಹೆದರಿಕೆಗಾಗಿ ಮಗು ಸುಮ್ಮನಾಗುತ್ತೋ, ತಾಯಿ ತನ್ನನ್ನು ಸುಮ್ಮನೆಮಾಡುವ ಆ ಗುಮ್ಮನ ನಾಟಕೀಯ ತಂತ್ರಕ್ಕೆ ಖುಷಿಪಟ್ಟು ಹಾಗೆ ಮಾಡುತ್ತೋ ಆ ಮಗುವಿಗೇ ಗೊತ್ತು. ಹಾಲು ಕುಡಿಸಿಯಾದ ಮೇಲೆ ಅದನ್ನು ಎತ್ತಾಡಿಸಲು ಪುಟ್ಟ ಮಗಳಿಗೆ ನಿನಗೆ ಕೊಬರಿ ಚಿನ್ನಿ ಕೊಡ್ತೀನಮ್ಮ, ಸ್ವಲ್ಪ ನೋಡಿಕೊಳ್ತಿಯಾ? ಎಂದು ಪುಸಲಾಯಿಸುತ್ತಾಳೆ. ಮಗಳು ಕೊಬರಿಚಿನ್ನಿಯ ಆಸೆಯಿಂದಲೋ ಪುಟ್ಟ ತಮ್ಮನ ಮೇಲಿನ ಪ್ರೀತಿಯಿಂದಲೋ ಕೈಗೆತ್ತಿಕೊಂಡು ತಾಯಿಯ ಬದುಕಿಗೆ ನೆರವಾಗುತ್ತಾಳೆ. ಹೀಗೇನೆ ಮನುಷ್ಯನ ದುಃಖ ದುಮ್ಮಾನದ ಬದುಕಿನಲ್ಲಿ ಇಲ್ಲಿಲ್ಲದ ಸುಖ ಅಲ್ಲಿ ಸಿಗುತ್ತದೆ ಎಂಬ ಆಸೆಯಿಂದಲಾದರೂ ಒಳ್ಳೆಯ ಕಾರ್ಯವನ್ನು ಜನರು ಮಾಡುವಂತೆ ಪ್ರೇರೇಪಿಸುವ ಸಲುವಾಗಿ ಹುಟ್ಟಿಕೊಂಡ ಕಾಲ್ಪನಿಕ ಮಾಯಾಪ್ರಪಂಚವೇ ಸ್ವರ್ಗ ಇಲ್ಲಿ ಪಾಪಕೃತ್ಯಗಳನ್ನು ಮಾಡಿದರೆ ಸತ್ತ ಮೇಲೆ ಯಮಧರ್ಮ ನಿನಗೆ ಇಂಥಾ ಶಿಕ್ಷೆಯನ್ನು ಕೊಡುತ್ತಾನೆ ಎಂಬ ಭಯ ಹುಟ್ಟಿಸಿ ಕೆಟ್ಟ ಕೆಲಸಗಳನ್ನು ಮಾಡಲು ಹಿಂದೆಗೆಯುವಂತೆ ಮಾಡುವ ಸಲುವಾಗಿ ಹುಟ್ಟಿಕೊಂಡ ಕಾಲ್ಪನಿಕ ಸ್ಥಳವೇ ನರಕ. ಒಳ್ಳೆ ಕೆಲಸ ಮಾಡುವುದರಿಂದ ಪುಣ್ಯ ಬರುತ್ತೆ; ಕೆಟ್ಟ ಕೆಲಸ ಮಾಡುವುದರಿಂದ ಪಾಪ ಬರುತ್ತೆ. ಅದಕ್ಕನುಗುಣವಾಗಿ ಸ್ವರ್ಗಕ್ಕೇ ನರಕಕ್ಕೆ ಮನುಷ್ಯ ಹೋಗುತ್ತಾನೆ ಎಂಬುದು ಒಂದು ಸಾಮಾನ್ಯ ನಂಬಿಕೆ. ಸತ್ತ ಮೇಲಾದರೂ ಸ್ವರ್ಗಸುಖವನ್ನು ಪಡೆಯುವ ಆಸೆಯಿಂದ ಪುಣ್ಯದ ಕಾರ್ಯವನ್ನು ಮಾಡಲಿ, ನರಕಯಾತನೆಯನ್ನು ಅನುಭವಿಸುವ ಭೀತಿಯಿಂದ ಪಾಪದ ಕಾರ್ಯಗಳನ್ನು ಬಿಡಲಿ, ಒಟ್ಟಾರೆ ಸದಾಬಾರಸಂಪನ್ನರಾಗಿ ಈ ಪ್ರಪಂಚದಲ್ಲಿ ಬದುಕಿರುವಷ್ಟು ಕಾಲ ನೆರೆಹೊರೆಯವರೊಡನೆ ನೆಮ್ಮದಿಯಿಂದ ಬದುಕಲಿ ಎಂಬುದು ಈ ಸ್ವರ್ಗ-ನರಕ ಕಲ್ಪನೆಗಳ ಮೂಲ ಸದಾಶಯ. ಇದಕ್ಕೆ ತದ್ವಿರುದ್ಧವಾಗಿ ಸ್ವರ್ಗ-ನರಕಗಳು ನಿಜವಾಗಿಯೂ ವಾಸ್ತವ ಪ್ರಪಂಚಗಳೇ ಎನ್ನುವ ಮೂಢನಂಬಿಕೆಯನ್ನು ತುಂಬಿ ಜನರ ಮನೋದೌರ್ಬಲ್ಯದ ದುರ್ಲಾಭವನ್ನು ಪಡೆಯಲು ಯತ್ನಿಸಿದಾಗ ಬಸವಣ್ಣನವರು ಜನರನ್ನು ವಿಚಾರಪರರನ್ನಾಗಿ ಮಾಡಲು ಹೇಳಬೇಕಾಯಿತು.
ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ.
ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ!
ಸತ್ಯವ ನುಡಿವುದೇ ದೇವಲೋಕ,
ಮಿಥ್ಯವ ನುಡಿವುದೇ ಮರ್ತ್ಯಲೋಕ.
ಆಚಾರವೇ ಸ್ವರ್ಗ, ಅನಾಚಾರವೇ ನರಕ
ಕೂಡಲಸಂಗಮ-ದೇವಾ, ನೀವೇ ಪ್ರಮಾಣು,
ಸ್ವರ್ಗ-ನರಕಗಳು ಬೇರೆಲ್ಲೂ ಇರುವ ಲೋಕಗಳಲ್ಲ, ಅವು ಇರುವುದಾದರೆ ನಮ್ಮ ನಡೆ-ನುಡಿಯಲ್ಲಿಯೇ ಇವೆಯೆಂದು ಒಂದೆಡೆ ಬಲವಾಗಿ ಪ್ರತಿಪಾದಿಸುವ ಬಸವಣ್ಣನವರೇ ಮತ್ತೊಂದೆಡೆ ನರಕದ ಬಗ್ಗೆ ಅವರಿಗೂ ನಂಬಿಕೆ ಇತ್ತೇನೋ ಎಂದು ಭ್ರಮಿಸುವಷ್ಟರಮಟ್ಟಿಗೆ ತಮ್ಮ ಅನೇಕ ವಚನಗಳಲ್ಲಿ ನರಕ ಶಬ್ದದ ಪ್ರಯೋಗವನ್ನು ಮಾಡಿದ್ದಾರೆ.
ಉದಾಹರಣೆಗೆ:
ಎರದೆಲೆಯಂತೆ ಒಳಗೊಂದು ಹೊರಗೊಂದಾದಡೆ ಮೆಚ್ಚುವನೆ?
ಬಾರದ ಭವಂಗಳ ಬರಿಸುವನಲ್ಲದೆ ಮೆಚ್ಚುವನೆ?
ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ?
ನೋಡಲಾಗದು ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ!
ತಗರ ಬೆನ್ನಲಿ ಹರಿವ ಸೊಣಗನಂತೆ, ಬೇಡ ಕಾಣಿರೋ!
ಒಂದಾಸೆಗೆ ಸಾಸಿರ ವರುಷ ನರಕದೊಳದ್ದುವ
ಕೂಡಲ ಸಂಗಮ-ದೇವ!
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ
ಕೂಡಲ-ಸಂಗಮ-ದೇವಾ!
ಕೂಡಲ-ಸಂಗಮ-ದೇವ ಅಘೋರನರಕದಲ್ಲಿಕ್ಕುವ!
ಒಡೆಯ ಕೂಡಲ ಸಂಗಯ್ಯ ಕೆಡಹಿ ನರಕದಲ್ಲಿಕ್ಕುವ!
ನಮ್ಮ ಕೂಡಲ-ಸಂಗನ ಶರಣರನವರಿವರೆಂದಡೆ
ಕುಂಭೀಪಾತಕ ನಾಯಕ ನರಕ ತಪ್ಪದು ಕಾಣಾ.
ಆಚಾರವಿದು, ಪ್ರಸಾದವಿದೆಂದರಿಯದಿದ್ದಡೆ
ಕುಂಭಿಪಾತಕ ನಾಯಕನರಕ!
ಕೂಡಲ ಸಂಗಮ-ದೇವಾ.
ಇವೆಲ್ಲಾ ಆರಂಭದಲ್ಲಿ ಹೇಳಿದ ಪ್ರಕಾರ ತಾಯಿ ಮಗುವಿಗೆ ಗುಮ್ಮನ ಬೆದರಿಕೆಯೊಡ್ಡಿದಂತೆ, ದೈನಂದಿನ ಜೀವನದಲ್ಲಿ ಎಷ್ಟೋ ಗಹನವಾದ ತಾತ್ವಿಕ ವಿಚಾರಗಳು ಜನರ ಆಡು ಮಾತಿನಲ್ಲಿ ಬೆರೆತು ಅವುಗಳ ಅರ್ಥವನ್ನು ತಿಳಿದೋ ತಿಳಿಯದೆಯೋ ಸಂದರ್ಭಾನುಸಾರ ಜನರು ಯಥೋಚಿತವಾಗಿ ಬಳಸುವ ಆಡುಂಬೊಲಗಳಾಗಿರುತ್ತವೆ. ಏನು ಮಾಡಲಿ, ಇದು ನನ್ನ ಪ್ರಾರಬ್ಧ, ಬಂದದ್ದನ್ನು ಅನುಭವಿಸಲೇಬೇಕು ಎಂದು ಗೊಣಗುವ ಹಳ್ಳಿಯ ಮುದುಕನಿಗೆ ಪ್ರಾರಬ್ಧಕರ್ಮ, ಸಂಚಿತಕರ್ಮ, ಆಗಾಮಿಕರ್ಮ ಎನ್ನುವ ಪ್ರಭೇದಗಳಾಗಲೀ ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ ಎನ್ನುವ ಕರ್ಮಸಿದ್ಧಾಂತದ ಪರಿಕಲ್ಪನೆಯಾಗಲೀ ಎಲ್ಲಿದೆ! ಹಾಗೆಯೇ ನರಕದಲ್ಲಿಕ್ಕುವ, ನಾಯಕ ನರಕ ತಪ್ಪದು ಎನ್ನುವ ಬಸವಣ್ಣನವರು ಜನರನ್ನು ಸದ್ವರ್ತನೆಯತ್ತ ಕರೆದೊಯ್ಯಲು ಬಳಸಿದ ಜನರ ಆಡುಮಾತಿನಲ್ಲಿರುವ ನುಡಿಗಟ್ಟುಗಳೇ ವಿನಾ ಅವರಿಗೆ ನಿಜವಾಗಿ ನರಕದಲ್ಲಿ ನಂಬಿಕೆ ಇತ್ತೆಂದು ಅರ್ಥವಲ್ಲ. ಅವರು ತಮ್ಮ ಜೀವನಲ್ಲಿ ಬಲವಾಗಿ ನಂಬಿದ್ದೆಂದರೆ:
ಪುಣ್ಯವೆಂದರಿಯೆ, ಪಾಪವೆಂದರಿಯೆ,
ಸ್ವರ್ಗವೆಂದರಿಯೆ ನರಕವೆಂದರಿಯೆ.
ಹರಹರ ಮಹಾದೇವ! ಶಿವಶರಣೆಂದು ಶುದ್ಧ ನೋಡಯ್ಯಾ,
ಹರಹರ ಮಹಾದೇವ! ಶಿವಶರಣೆಂದು ಧನ್ಯ ನೋಡಯ್ಯಾ,
ಕೂಡಲ-ಸಂಗಮ-ದೇವಯ್ಯಾ,
ನಿಮ್ಮನರ್ಚಿಸಿ, ಪೂಜಿಸಿ ನಿಶ್ಚಿಂತನಾದೆನಯ್ಯಾ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 13.1.2010.