ಸರ್ವಂ ಲಂಚಮಯಂ ಜಗತ್!

  •  
  •  
  •  
  •  
  •    Views  

ತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಭಾರತ ಹೇಗಿತ್ತು ನೋಡಿ ಎಂದು ಇಂಗ್ಲೆಂಡಿನಿಂದ ಬಂದ ಒಂದು ಇ-ಮೇಲ್ ಸಂದೇಶವನ್ನು ಕಳೆದ ವಾರ ಶಿಷ್ಯರೊಬ್ಬರು ನಮಗೆ ರವಾನಿಸಿದ್ದಾರೆ. ಅದರ ಪೂರ್ಣಪಾಠ ಹೀಗಿದೆ:

“I have travelled across the length and breadth of India and I have not seen one person who is a beggar, who is a thief. Such wealth I have seen in this country, such high moral values, people of such caliber, that I do not think we would ever conquer this country, unless we break the very backbone of this nation, which is her spiritual and cultural heritage, and, therefore, I propose that we replace her old and ancient education system, her culture, for if the Indians think that all that is foreign and English is good and greater than their own, they will lose their selfesteem, their native culture and they will become what we want them, a dominated nation.”

ಭಾರತದ ಉದ್ದಗಲಕ್ಕೂ ಸಂಚರಿಸಿ ನೋಡಿದಾಗ ಈ ದೇಶದಲ್ಲಿ ಒಬ್ಬ ಭಿಕ್ಷುಕನಾಗಲೀ, ಕಳ್ಳನಾಗಲೀ ಕಂಡುಬರಲಿಲ್ಲ. ಈ ದೇಶದ ಜನರಲ್ಲಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ, ನೈತಿಕ ಮೌಲ್ಯದ ಔನ್ನತ್ಯ ಮತ್ತು ಆತ್ಮಗೌರವದ ಬೆನ್ನೆಲುಬನ್ನು ಮುರಿಯದ ಹೊರತು ಈ ದೇಶವನ್ನು ಗೆಲ್ಲಲು ಸಾಧ್ಯವಿಲ್ಲ. ಇದಕ್ಕೆ ಇರುವ ಒಂದೇ ಒಂದು ಉಪಾಯವೆಂದರೆ ಈ ಜನರು ಪರಂಪರಾಗತವಾಗಿ ಪಡೆದುಕೊಂಡು ಬಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಶಿಕ್ಷಣ ಪದ್ದತಿಯನ್ನು ಮೂಲೋತ್ಪಾಟನೆಗೊಳಿಸಿ ಇವರ ಮನಸ್ಸಿನಲ್ಲಿ ವಿದೇಶೀ ಸಂಸ್ಕೃತಿ ಮತ್ತು ಆಂಗ್ಲ ಶಿಕ್ಷಣವೇ ಮೇಲು ಎಂಬ ಮೋಹ ಉಂಟಾಗುವಂತೆ ಮಾಡಬೇಕು. 1835 ಫೆಬ್ರವರಿ 2 ರಂದು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಲಾರ್ಡ್ ಮೆಕಾಲೆ (Lord Macaulay) ಹೇಳಿದನೆನ್ನಲಾದ ಈ ಮಾತುಗಳು ತುಂಬಾ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು ಕಳೆದ ಎರಡು ವರ್ಷಗಳಿಂದ ಅಂತರಜಾಲದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಲಾರ್ಡ್ ಮೆಕಾಲೆ 1834 ರಿಂದ 1838 ರವರೆಗೆ ಭಾರತದಲ್ಲಿಯೇ ಇದ್ದ, ಸತತವಾಗಿ ಮೂರು ತಿಂಗಳ ಕಾಲ ಸಮುದ್ರಯಾನ ಮಾಡಿ 1834 ರ ಜೂನ್ ತಿಂಗಳಲ್ಲಿ ಭಾರತಕ್ಕೆ ಬಂದವನು ಅಷ್ಟು ಬೇಗ ಇಂಗ್ಲೆಂಡಿಗೆ ಹೋಗಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಹೀಗೆ ಮಾತನಾಡಿರಲು ಸಾಧ್ಯವಿಲ್ಲ, ಇದು ಶುದ್ಧ ಸುಳ್ಳು, ಇದೆಲ್ಲಾ ಇತ್ತೀಚಿನ ರಾಜಕೀಯ ದುರುದ್ದೇಶದಿಂದ ಕೂಡಿದ್ದು ಎಂದು ಅನೇಕರು ಆಧಾರಪೂರ್ವಕವಾಗಿ ಅಲ್ಲಗಳೆದಿದ್ದಾರೆ. ಇತಿಹಾಸಜ್ಞರು ಬ್ರಿಟಿಷ್ ಪಾರ್ಲಿಮೆಂಟಿನ ಪತ್ರಾಗಾರದಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದರೆ ಇದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ಕಷ್ಟದ ಕೆಲಸವೇನೂ ಆಗಲಾರದು. ಆದರೆ ಒಂದಂತೂ ಸತ್ಯ: ಲಾರ್ಡ್ ಮೆಕಾಲೆಗೆ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಷ್ಟಾಗಿ ಗೌರವಭಾವನೆ ಇರಲಿಲ್ಲ. ಭಾರತೀಯರಿಗೆ ಪಾಶ್ಚಾತ್ಯ ಶಿಕ್ಷಣವನ್ನು ಕೊಟ್ಟು ಒಂದು ಹೊಸ ವರ್ಗವನ್ನು ಸೃಷ್ಟಿಸಿ ಅವರಲ್ಲಿ ಬ್ರಿಟಿಷರ ಅಭಿರುಚಿ, ಅಭಿಪ್ರಾಯ ಮತ್ತು ಬುದ್ಧಿಮತ್ತೆಯನ್ನು ತುಂಬಿ ಅವರನ್ನು ಮೇಲ್ನೋಟಕ್ಕೆ ಭಾರತೀಯರಾಗಿರುವಂತೆ ಮಾಡಿ ಈ ದೇಶದ ಆಡಳಿತನಿರ್ವಹಣೆಗೆ ಅನುಕೂಲವಾಗುವಂತೆ ಬಳಸಿಕೊಳ್ಳಬೇಕು ಎಂಬ ವ್ಯಾವಹಾರಿಕ ಸಂಚು ಅವನದಾಗಿತ್ತು. ಭಾರತೀಯ ಸಾಹಿತ್ಯವನ್ನು ತೀರಾ ಕೀಳಾಗಿ ಕಂಡ ಅವನು “ಇಡೀ ಭಾರತದ ಪ್ರಾಚೀನ ಸಾಹಿತ್ಯ ಯೂರೋಪಿನ ಗ್ರಂಥಾಲಯದ ಬೀರುಗಳ ಒಂದು ಖಾನೆಯಲ್ಲಿರುವ ಪುಸ್ತಕಗಳಿಗೆ ಸಮನಲ್ಲ” ಎಂಬ ಧಾರ್ಷ್ಟದ ಮಾತುಗಳನ್ನಾಡುತ್ತಾನೆ (A single shelf of a good European library was worth the whole native literature of India” - British India 1772-1947 by M. Edwards, 1967, New Delhi: Rupa Press). ಅಷ್ಟೇ ಅಲ್ಲ ಸಂಸ್ಕೃತ ಮತ್ತು ಉರ್ದು ಪುಸ್ತಕಗಳು ಮುದ್ರಣಗೊಳ್ಳದಂತೆ ಮಾಡಬೇಕು; ಬನಾರಸ್ನಲ್ಲಿರುವ ಸಂಸ್ಕೃತ ಕಾಲೇಜು ಮತ್ತು ದೆಹಲಿಯಲ್ಲಿರುವ ಅರಾಬಿಕ್ ಕಾಲೇಜು ಇವೆರಡನ್ನು ಬಿಟ್ಟು ಕಲ್ಕತ್ತಾದಲ್ಲಿರುವ ಸಂಸ್ಕೃತ ಕಾಲೇಜು ಮತ್ತು ಉಳಿದೆಲ್ಲೆಡೆ ಇರುವ ಮದರಸಾಗಳನ್ನು ರದ್ದುಪಡಿಸಬೇಕೆಂದು ಅವನು ಬಯಸಿದ್ದ.

ಈ ವಿವಾದಾಸ್ಪದ ಹೇಳಿಕೆಯ ಹಿಂದಿರುವ ಐತಿಹಾಸಿಕ ಸತ್ಯ ಏನೇ ಇರಲಿ, ಸಮಕಾಲೀನ ಭಾರತೀಯ ಸಮಾಜದ ಗತಿವಿಧಾನಗಳನ್ನು ಗಮನಿಸಿದರೆ ದಾರಿಬೀದಿಗಳಲ್ಲಿ ಕಂಡುಬರುವ ಭಿಕ್ಷುಕರು ಮತ್ತು ಕಳ್ಳರಿಗಿಂತ ದೇಶದ ಆಡಳಿತನಿರ್ವಹಣೆಯ ಉನ್ನತಸ್ಥಾನಗಳಲ್ಲಿರುವ ಕಳ್ಳರೇ ಜಾಸ್ತಿ ಎಂದು ನಿಮ್ಮ ಅನುಭವಕ್ಕೆ ಬಂದಿರಬೇಕಲ್ಲವೇ? ಒಮ್ಮೆ ಶ್ರೀ ವ್ಯಾಸರಾಯರು ತಮ್ಮ ಶಿಷ್ಯರನ್ನು ಹತ್ತಿರ ಕರೆದು ಪ್ರತಿಯೊಬ್ಬರ ಕೈಯಲ್ಲಿ ಒಂದೊಂದು ಬಾಳೆಯ ಹಣ್ಣನ್ನು ಪ್ರಸಾದರೂಪವಾಗಿ ಕೊಟ್ಟರು. ಯಾರಿಂದಲೂ ಕಾಣಿಸಿಕೊಳ್ಳದಂತೆ ತಿನ್ನಬೇಕೆಂದು ಸೂಚನೆಯನ್ನು ನೀಡಿ ಕಳುಹಿಸಿದರು. ಒಬ್ಬ ಶಿಷ್ಯ ಬಾಗಿಲ ಮರೆಯಲ್ಲಿ ಇನ್ನೊಬ್ಬ ಆಶ್ರಮದ ಮೂಲೆಯಲ್ಲಿ, ಮಗುದೊಬ್ಬ ಕಂಬಳಿಯನ್ನು ಹೊದ್ದುಕೊಂಡು -ಹೀಗೆ ಕಷ್ಟಪಟ್ಟು ಯಾರಿಗೂ ಕಾಣದಂತೆ ತಿನ್ನಲು ಅವರ ಯತ್ನ ಸಾಗಿತ್ತು. ಕೆಲಹೊತ್ತಿನ ನಂತರ ಎಲ್ಲರೂ ತಮ್ಮ ತಮ್ಮ ಸಾಹಸಕೃತ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಗುರುಗಳ ಹತ್ತಿರ ಬಂದರು. ಆದರೆ ಕನಕದಾಸ ಒಬ್ಬ ಮಾತ್ರ ಹಣ್ಣನ್ನು ತಿನ್ನದೆ ಹಾಗೆಯೇ ಮರಳಿ ತಂದಿದ್ದ. “ಯಾರೂ ನೋಡದಂತಹ ಜಾಗ ನಿನಗೆ ಸಿಗಲಿಲ್ಲವೇ?” ಎಂದು ಆಕ್ಷೇಪಣೆಯ ದನಿಯಲ್ಲಿ ಗುರುಗಳು ಕೇಳಿದರು. “ಕ್ಷಮಿಸಿ ಗುರುಗಳೇ, ಮೊನ್ನೆ ತಾನೇ ತಾವು ದೇವರು ಸರ್ವಾಂತರ್ಯಾಮಿ, ಎಲ್ಲೆಲ್ಲೂ ಇದ್ದಾನೆ ಎಂದು ಉಪದೇಶಿಸಿದ್ದಿರಿ, ಹೀಗಾಗಿ ಎಲ್ಲಿ ಹೋದರೂ ದೇವರು ನನ್ನನ್ನು ನೋಡುತ್ತಿದ್ದಾನೆ ಎನಿಸಿತು. ಆದ್ದರಿಂದ ತಮ್ಮ ಅಪ್ಪಣೆಯ ಪ್ರಕಾರ ಯಾರಿಂದಲೂ ಕಾಣಿಸಿಕೊಳ್ಳದಂತೆ ತಿನ್ನಲು ಆಗದೆ ಹಿಂತಿರುಗಿ ತಂದೆ” ಎಂದು ವಿನಮ್ರನಾಗಿ ಉತ್ತರಿಸಿದನಂತೆ. ಇದು ಹಳೆಯ ಕಥೆಯಾಯಿತು. ಈಗಿನ ಕಥೆಯೇ ಬೇರೆ. ಇಂದು ಶಿಷ್ಯರ ಕೈಯಲ್ಲಿ ಬಾಳೆಯ ಹಣ್ಣನ್ನು ಕೊಟ್ಟು ಲಂಚವಿಲ್ಲದ ಸರ್ಕಾರೀ ಆಫೀಸಿನಲ್ಲಿ ತಿಂದು ಬನ್ನಿ ಎಂದರೆ ಆ ಶಿಷ್ಯರು ಪ್ರಾಮಾಣಿಕರಾಗಿದ್ದರೆ, ಬಹುಮಟ್ಟಿಗೆ ಆ ಎಲ್ಲ ಬಾಳೆಹಣ್ಣುಗಳೂ ಗುರುಗಳಿಗೆ ವಾಪಾಸ್ ಬರುತ್ತವೆ. “ತೇನ ವಿನಾ ತೃಣಮಪಿ ನ ಚಲತಿ” - ದೇವರ ಇಚ್ಛೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಈ ಪ್ರಪಂಚದಲ್ಲಿ ಚಲಿಸುವುದಿಲ್ಲ ಎಂದು ದೇವರ ಸರ್ವಶಕ್ತಿತ್ವವನ್ನು ಕುರಿತು ಹೇಳಿದ ಈ ಮಾತನ್ನು ಇಂದು ಬದಲಾಯಿಸಿ “ಲಂಚವಿಲ್ಲದೆ ಸರ್ಕಾರೀ ಆಫೀಸುಗಳಲ್ಲಿ ಒಂದು ಫೈಲೂ ಮುಂದಕ್ಕೆ ಹೋಗುವುದಿಲ್ಲ ಎಂದು ವ್ಯಾಖ್ಯಾನಿಸಿದರೆ ದೇವರಲ್ಲಿ ನಂಬುಗೆ ಇಲ್ಲದ ನಾಸ್ತಿಕನೂ ಮರುಮಾತಿಲ್ಲದೆ ಒಪ್ಪುವುದರಲ್ಲಿ ಸಂದೇಹವಿಲ್ಲ, ಉಡುಪಿ ಹೋಟೆಲುಗಳಲ್ಲಿ ಯಾವ ತಿಂಡಿಗೆ ಎಷ್ಟು ಬೆಲೆ ಎಂದು ಬೋರ್ಡ್ ಹಾಕಿರುವಂತೆ ಸರ್ಕಾರೀ ಆಫೀಸುಗಳಲ್ಲಿ ಬೋರ್ಡ್ ಹಾಕದಿದ್ದರೂ ಯಾವ ಕೆಲಸಕ್ಕೆ ಯಾರಿಗೆ ಎಷ್ಟು ಹಣ ಕೊಡಬೇಕೆಂದು ಜನರಿಗೆ ಖಚಿತವಾಗಿ ಗೊತ್ತಿರುತ್ತದೆ. ಸರ್ವಂ ಖಲ್ವಿದಂ ಬ್ರಹ್ಮಾ ಎನ್ನುವುದಕ್ಕಿಂತ ಸರ್ವಂ ಲಂಚಮಯಂ ಜಗತ್ ಎಂದು ಹೇಳುವುದು ಹೆಚ್ಚು ಸೂಕ್ತ ಎನಿಸುತ್ತದೆ.

ಬಹಳ ವರ್ಷಗಳ ಹಿಂದೆ ರಾಜಾಸ್ತಾನದ ಜೈಪುರದಲ್ಲಿ ನಡೆದ ಒಂದು ಧರ್ಮ ಸಮ್ಮೇಳನಕ್ಕೆ ಹೋದಾಗ ಪ್ರವಚನಕಾರರೊಬ್ಬರು ಆಡಿದ ಮಾತು: “ಕುಛ್ ಲೋಗ್ ಐಸೇ ಹೋತೇ ಹೈ ಜೋ ಪ್ಯಾಜ್ ಲಸೂನ್ ನಹೀ ಖಾತೆ ಹೈ, ಲೇಕಿನ್ ರಿಷ್ವತ್ ಜರೂರ್ ಖಾತೆ ಹೈ!” (ಕೆಲವರು ಈರುಳ್ಳಿ, ಬೆಳ್ಳುಳಿ, ತಿನ್ನುವುದಿಲ್ಲ; ಆದರೆ ಲಂಚ ಮಾತ್ರ ತಿನ್ನುತ್ತಾರೆ). ಇಂದು ಯಾವುದೇ ಸರ್ಕಾರ ಆಡಳಿತಕ್ಕೆ ಬರಲಿ, ಲಂಚದ ಬೇರುಗಳನ್ನು ಕಿತ್ತು ಹಾಕಲು ಸಾಧ್ಯವಾಗುತ್ತಿಲ್ಲ. ವಿಶ್ವಾಸದಲ್ಲಿ ಒಬ್ಬ ಶಾಸಕನಿಂದ ಅಥವಾ ಮಂತ್ರಿಯಿಂದ ಆಗದ ಕೆಲಸ ಲಂಚದಿಂದ ಸುಲಭವಾಗಿ ಆಗುತ್ತದೆ. ಹೀಗಾಗಿ ನಮ್ಮ ಜನ ಅದಕ್ಕೆ ತೀರಾ ಒಗ್ಗಿಕೊಂಡು ಬಿಟ್ಟಿದ್ದಾರೆ. ಏನೂ ಕೊಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ಎಲ್ಲಿಯಾದರೂ ಅಪರೂಪಕ್ಕೆ ಒಬ್ಬ ಪ್ರಾಮಾಣಿಕ ಅಧಿಕಾರಿ ಸಿಕ್ಕು ಲಂಚಕ್ಕೆ ಕೈಚಾಚದೆ ಆಯಿತು ನಿಮ್ಮ ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಹೇಳಿದರೆ ಅವನನ್ನು ನಂಬದಂತಹ ಸ್ಥಿತಿಯುಂಟಾಗಿದೆ - ವರದಕ್ಷಿಣೆಯನ್ನು ತೆಗೆದುಕೊಳ್ಳದೆ ಮದುವೆಯಾಗಲು ಮುಂದೆ ಬರುವ ಗಂಡನ್ನು ಹೆಣ್ಣಿನವರು ಹುಡುಗ ಹೇಗೋ ಏನೋ! ಎಂದು ಅನುಮಾನಪಡುವಂತೆ! ಈ ಅಧಿಕಾರಿ ದುಡ್ಡು ಕೇಳಲಿಲ್ಲವಲ್ಲಾ ಯಾರಿಂದಲೋ ಆಗಲೇ ತೆಗೆದುಕೊಂಡಿರಬೇಕು, ಇವನಿಂದ ಕೆಲಸ ಆಗುವಂತೆ ಕಾಣುವುದಿಲ್ಲ ಎಂದು ಹತಾಶಗೊಳ್ಳುತ್ತಾರೆ. ಅವನನ್ನು ಬಿಟ್ಟು ದುಡ್ಡು ತೆಗೆದುಕೊಳ್ಳುವ ಇತರೆ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುತ್ತಾರೆ. ದುಡ್ಡು ತೆಗೆದುಕೊಂಡರೆ ಕೆಲಸ ಆಯಿತೆಂದೇ ಜನರ ನಂಬಿಕೆ. ಲಂಚವನ್ನು ಪಡೆಯುವ ಅಧಿಕಾರಿಗಳು ಅಷ್ಟರಮಟ್ಟಿಗೆ ತಮ್ಮ ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಬಂದಿದ್ದಾರೆ.

ಈ ಪ್ರಾಮಾಣಿಕತೆ ಎಂಬ ಶಬ್ದಕ್ಕೆ ಇರುವ ಅರ್ಥ ಇಂದಿನ ರಾಜಕೀಯ ಪರಿಭಾಷೆಯಲ್ಲಿ ಹೊಸ ಆಯಾಮವನ್ನು ಪಡೆದಿದೆ. ಜನರು ಮಾತನಾಡಿಕೊಳ್ಳುವ ಪ್ರಕಾರ ಇಂದು ರಾಜಕೀಯದಲ್ಲಿ ಮೂರು ತೆರನಾದ ರಾಜಕಾರಣಿಗಳು ಇದ್ದಾರೆ: 1. ಪ್ರಾಮಾಣಿಕ ರಾಜಕಾರಣಿ (honest politician), 2. ಅಪ್ರಾಮಾಣಿಕ ರಾಜಕಾರಣಿ (dishonest politician) ಮತ್ತು 3. ಮೂರ್ಖ ರಾಜಕಾರಣಿ (foolish politician). ಯಾವನು ಜನರಿಂದ ದುಡ್ಡನ್ನು ತೆಗೆದುಕೊಂಡು ಅವರ ಕೆಲಸವನ್ನು ಮಾಡಿಕೊಡುತ್ತಾನೋ ಅವನು ಪ್ರಾಮಾಣಿಕ ರಾಜಕಾರಣಿ (The honest politician is the one who takes money and does the work). ಯಾವನು ಜನರಿಂದ ದುಡ್ಡನ್ನು ತೆಗೆದುಕೊಂಡು ಅವರ ಕೆಲಸವನ್ನು ಮಾಡಿಕೊಡುವುದಿಲ್ಲವೋ ಅವನು ಅಪ್ರಾಮಾಣಿಕ ರಾಜಕಾರಣಿ (The dishonest politician is the one who takes money but does not do the work). ಯಾವನು ಜನರಿಂದ ದುಡ್ಡನ್ನೂ ತೆಗೆದುಕೊಳ್ಳದೆ, ಕೆಲಸವನ್ನೂ ಮಾಡಿಕೊಡುವುದಿಲ್ಲವೋ ಅಂಥವನು ಮೂರ್ಖ ರಾಜಕಾರಣಿ (The foolish politician is the one who neither takes money nor does the work). ಕೊನೆಯ ವರ್ಗದ ರಾಜಕಾರಣಿಗಳಂತೂ ಬಹಳ ವಿರಳವೆಂದೇ ಹೇಳಬಹುದು.

ನಮ್ಮ ದೇಶದಲ್ಲಿ ಲಂಚ ಕೊಡುವುದು, ತೆಗೆದುಕೊಳ್ಳುವುದು ನಿತ್ಯ ಜೀವನ ವಿಧಾನವಾಗಿದೆ (order of the day).ಹಾಗದರೆ ಬೇರೆ ದೇಶಗಳಲ್ಲಿ ಲಂಚ,ರಿಷ್ವತ್ತು ಇಲ್ಲವೆ ಇಲ್ಲ ಎಂದು ಹೇಳಲಾಗದು. ಅಲ್ಲಿಯೂ ಇದೆ ಯೂರೋಪ್‌ ಮತ್ತು ಅಮೆರಿಕೆಯಲ್ಲಿ ಅದಕ್ಕೆ ನವಿರಾದ ಭಾಷೆಯಲ್ಲಿ Vitamin-B ಎಂದು ಕರೆಯುತ್ತಾರೆ (B=Bribe) ಅದು ದೊಡ್ಡ ದೊಡ್ಡ ಕಂಪನಿಗಳ ವ್ಯವಹಾರಗಳಲ್ಲಿ ನಡೆಯುತ್ತದೆ.ಆದರೆ ಅಲ್ಲಿಯ ಸಾಮಾನ್ಯ ಜನಜೀವನದಲ್ಲಿ ಲಂಚದ ಹಾವಳಿ ಇಲ್ಲವೇ ಇಲ್ಲ ಎಂದರೆ ತಪ್ಪಾಗಲಾರದು. ನಮ್ಮ ದೇಶದ ಅಧಿಕಾರಿಗಳು ಮತ್ತು ಗುಮಾಸ್ತರುಗಳು ಫೈಲುಗಳನ್ನು ನೋಡುವಾಗ ಮಾಡುವ ಆಕ್ಷೇಪಣೆಗಳು ಸರ್ಕಾರದ ನಿಯಮಗಳ ಪರಿಪಾಲನೆಗಾಗಿ ಅಲ್ಲ: ಲಂಚಕ್ಕಾಗಿ ಎನ್ನುವುದು ರಹಸ್ಯದ ಸಂಗತಿಯಾಗಿ ಉಳಿದಿಲ್ಲ. ದುಡ್ಡನ್ನು ಕೊಟ್ಟರೆ ಯಾವ ನಿಯಮಗಳೂ ಅಡ್ಡ ಬರುವುದಿಲ್ಲ, ಅಡ್ಡ ಬಂದ ನಿಯಮಗಳನ್ನು ಮೆಟ್ಟಿ ನಿಲ್ಲಬಲ್ಲ ಮಹಿಮಾ ಶಕ್ತಿ, ನಿಯಮಗಳ ಅಡಿಯಲ್ಲಿ ನುಸುಳಬಲ್ಲ ಅಣಿಮಾ ಶಕ್ತಿ, ಬೇಕಾದ ಫೈಲುಗಳನ್ನು ಮೇಜಿನಿಂದ ಮೇಜಿಗೆ ಹಾರಿಸಬಲ್ಲ ಲಘಿಮಾ ಶಕ್ತಿ, ಬೇಡವಾದ ಫೈಲುಗಳನ್ನು ಕಗ್ಗಂಟುಗೊಳಿಸಿ ಮುಂದಕ್ಕೆ ಅಡಿ ಇಡದಂತೆ ಭಾರವಾಗಿಸುವ ಗರಿಮಾ ಶಕ್ತಿ ನಮ್ಮ ಕೆಲವು ನುರಿತ ಅಧಿಕಾರಿಗಳ ಮತ್ತು ಗುಮಾಸ್ತರ ಕೈಯಲ್ಲಿದೆ. ಇವರು ಈ ನಾಲ್ಕು ಶಕ್ತಿಗಳಲ್ಲಿ ಅಷ್ಟಸಿದ್ದಿ ಪುರುಷನಾದ ಈಶ್ವರನನ್ನೂ ಮೀರಿಸಬಲ್ಲ ಅದ್ಭುತ ಸಿದ್ಧಿಯನ್ನು ಹೊಂದಿರುತ್ತಾರೆ. ಇನ್ನುಳಿದ ನಾಲ್ಕು ಸಿದ್ಧಿಗಳನ್ನೂ ಇವರು ಕರಗತಮಾಡಿಕೊಂಡರೆ ಸಾಕ್ಷಾತ್ ಶಿವನೂ ಇವರ ಮುಂದೆ ಕೈಜೋಡಿಸಿ ನಿಂತುಕೊಳ್ಳಬೇಕಾಗುತ್ತದೆ! |

“ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ |
ಅಜಾಪುತ್ರಂ ಬಲಿಂ ದಧ್ಯಾತ್ ದೈವೋ ದುರ್ಬಲಘಾತಕಃ |”

ಯಜ್ಞ-ಯಾಗಾದಿಗಳಲ್ಲಿ ಕುರಿ, ಕೋಳಿ, ಮೇಕೆಗಳನ್ನು ಬಲಿಕೊಡುತ್ತಾರೆ. ಹುಲಿ, ಸಿಂಹ, ಚಿರತೆಗಳನ್ನು ಯಾರೂ ಬಲಿಕೊಡುವುದಿಲ್ಲ. ಇದನ್ನು ನೋಡಿ ಸುಭಾಷಿತಕಾರನೊಬ್ಬನು ಉದ್ಗರಿಸಿದ್ದಾನೆ: “ಅಯ್ಯೋ, ದೇವರೂ ದುರ್ಬಲರನ್ನೇ ಹಿಂಸಿಸುತ್ತಾನಲ್ಲಾ!” (ದೈವೋ ದುರ್ಬಲಘಾತಕಃ). ಹಾಗೆಯೇ ನಮ್ಮ ದೇಶದಲ್ಲಿರುವ ಕಾನೂನುಗಳು ಭ್ರಷ್ಟ ರಾಜಕಾರಿಣಿಗಳನ್ನು, ಪ್ರಭಾವೀ ವ್ಯಕ್ತಿಗಳನ್ನು ಏನೂ ಮಾಡುವುದಿಲ್ಲ; ಅವು ದುರ್ಬಲ ನಾಗರೀಕರನ್ನು, ಬಡ ಬೋರೇಗೌಡನನ್ನು ಹಿಂಸಿಸಲು, ಶೋಷಿಸಲು ಅಧಿಕಾರಿಗಳಿಗೆ ಇರುವ ದಿವ್ಯ ಅಸ್ತ್ರಗಳಾಗಿವೆ.

ರಸ್ತೆ ಅಪಘಾತದಲ್ಲಿ ಸತ್ತು ಬಿದ್ದ ಹೆಣದ ಜೇಬಿನಲ್ಲಿರುವ ದುಡ್ಡನ್ನು ದೋಚುವ ಕ್ರೂರಿಗಳು, ಕಟ್ಟಡ ಕಾಮಗಾರಿ ಬಿಲ್ಲುಗಳಲ್ಲಿ ಪರ್ಸೆಂಟೇಜ್ ಕೇಳುವ ಇಂಜಿನಿಯರುಗಳು, ರಸ್ತೆ ರಿಪೇರಿ ಕೆಲಸದಲ್ಲಿ ಪ್ರಯಾಣಿಕರ ಕಣ್ಣಿಗೆ ಮಣ್ಣೆರಚಿ ಬಿಲ್ಲುಗಳನ್ನು ಕಬಳಿಸುವ ಕಂಟ್ರಾಕ್ಟರುಗಳು, ಆದಾಯ ತೆರಿಗೆಯನ್ನು ಸರಿಸುಮಾರಾಗಿ ಸರಿದೂಗಿಸಬಲ್ಲ ಜಾಣ ವ್ಯಾಪಾರಿಗಳು, ಭಕ್ತರ ಮುಗ್ಧ ಭಕ್ತಿಯನ್ನು ಬಂಡವಾಳವನ್ನಾಗಿಸಿಕೊಂಡು ಆತ್ಮಜ್ಞಾನವಿಲ್ಲದೆ ಸಾಂಸಾರಿಕರಿಗಿಂತಲೂ ತೀರಾ ಕಡೆಯಾಗಿ ವರ್ತಿಸುವ ಸಾಧು-ಸಂನ್ಯಾಸಿಗಳು, ಕೀರ್ತಿಶನಿಯ ಬೆನ್ನುಹತ್ತಿ ದುರಂಹಕಾರದಿಂದ ಮೆರೆಯುವ ಮಠ-ಪೀಠದ ಸ್ವಾಮಿಗಳು, ರೋಗಿಗಳ ಮೂತ್ರ ಪಿಂಡಗಳನ್ನು ಕದಿಯುವ ಖದೀಮ ಡಾಕ್ಟರುಗಳು, ಸತ್ತ ನೌಕರನ ಹತಭಾಗ್ಯಳಾದ ವಿಧವೆಯಿಂದಲೂ ಪೆನ್ಷನ್ ಮುಂಜೂರಾತಿಗಾಗಿ ಲಂಚವನ್ನು ಕೇಳುವ ನಿರ್ದಯಿ ಗುಮಾಸ್ತರು, ದೇಶದ ಸಂಪತ್ತನ್ನು ತಿಂದು ತೇಗುವ ಭ್ರಷ್ಟ ರಾಜಕಾರಣಿಗಳು, ಚುನಾವಣೆಯ ದ್ವೇಷಾಸೂಯೆಗಳಿಂದ ಹಾಡಹಗಲೇ ಕೊಲೆಮಾಡಲೂ ಹೇಸದ ರಾಜಕೀಯ ಮರಿಪುಢಾರಿಗಳು, ನ್ಯಾಯದ ತಕ್ಕಡಿಯನ್ನು ಹಿಡಿದು ತೂಗುವಲ್ಲಿ ವ್ಯಾಪಾರಿಗಳನ್ನೂ ನಾಚಿಸಬಲ್ಲ (ಅ)ನ್ಯಾಯಮೂರ್ತಿಗಳು ಹೀಗೆ ಇಂದಿನ ಭಾರತದ ಪರಿಸ್ಥಿತಿಯನ್ನು ಒಂದೊಂದೇ ಪಟ್ಟಿ ಮಾಡುತ್ತಾ ಹೋದರೆ ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬ ಕನ್ನಡದ ಗಾದೆ ಮಾತನ್ನು ಸಾರ್ಥಕಗೊಳಿಸಿದಂತಿದೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 20.1.2010.