ಕಾದಿರುವಳು ಶಬರಿ ರಾಮ ಬರುವನೆಂದು!”
"ಯೋಗಕ್ಷೇಮಂ ವಹಾಮ್ಯಹಮ್”: ಇದು ಭಗವದ್ಗೀತೆಯ 9ನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ದಿವ್ಯ ಸಂದೇಶ. ನಂಬಿದವರನ್ನು ದೇವರು ಕೈಬಿಡುವುದಿಲ್ಲ; ಅವರ ಯೋಗಕ್ಷೇಮವನ್ನು ಖಂಡಿತಾ ನೋಡಿಕೊಳ್ಳುತ್ತಾನೆಂಬುದು ಇದರ ಆಶಯ. ಭಗವದ್ಗೀತೆಯ ಈ ಪ್ರಸಿದ್ಧ ಶ್ಲೋಕದಲ್ಲಿ ಬಳಸಿರುವ ಯೋಗಕ್ಷೇಮ ಎಂಬ ಸಂಸ್ಕೃತ ಶಬ್ದ ಕನ್ನಡಿಗರ ಆಡುಮಾತಿನಲ್ಲಿ ಹಾಸುಹೊಕ್ಕಾಗಿ ಬೆರೆತಿದೆ. ಸ್ನೇಹಿತರು, ಬಂಧುಗಳು ಪರಸ್ಪರ ಸಂಧಿಸಿದಾಗ ಯೋಗಕ್ಷೇಮ ವಿಚಾರಿಸುವುದು ವಾಡಿಕೆ. ಹಳೆಯ ಕಾಲದ ಪತ್ರಗಳ ಒಕ್ಕಣಿಕೆಯಲ್ಲಿ ತಪ್ಪದೆ ಬಳಸುತ್ತಿದ್ದ ಪದ ಇದು. ಪತ್ರದ ಎಡಮೂಲೆಯಲ್ಲಿ ಓರೆಯಾಗಿ ಕ್ಷೇಮ ಎಂದು ಬರೆದು ಅದರ ಕೆಳಗೆ ಚೆಕ್ ಅನ್ನು ಕ್ರಾಸ್ ಮಾಡಿದ ರೀತಿಯಲ್ಲಿ ಎಳೆದ ಒಂದು ದಪ್ಪನೆಯ ಗೆರೆ, ಬಲ ಮೂಲೆಯಲ್ಲಿ ಪತ್ರ ಬರೆದ ದಿನಾಂಕ ಮತ್ತು ಸ್ಥಳ, ಅದೇ ಸಾಲಿನ ಮಧ್ಯೆ ಇಷ್ಟದೇವತಾ ಸ್ಮರಣೆ, ಇಂಥವರು ಇಂಥವರಿಗೆ ಮಾಡುವ ನಮಸ್ಕಾರ ಅಥವಾ ಆಶೀರ್ವಾದ ಎಂದು ಆರಂಭವಾಗುವ ಒಕ್ಕಣಿಕೆ, ಇತ್ತೆಲ್ಲಾ ಕ್ಷೇಮ, ನಿಮ್ಮ ಯೋಗಕ್ಷೇಮಕ್ಕೆ ಆಗಿಂದಾಗ್ಗೆ ಪತ್ರ ಬರೆಯಿರಿ, ಇಂತೀ ನಮಸ್ಕಾರಗಳು ಎಂದು ಸಹಿಯೊಂದಿಗೆ ಕೊನೆಗೊಳ್ಳುತ್ತಿದ್ದ ಪತ್ರ.
ಈಗ ಕಾಲ ಬದಲಾಗಿದೆ. ಪತ್ರಕ್ಕಾಗಿ ಅಂಚೆಯ ಅಣ್ಣನಿಗೆ ಬಾಗಿಲ ಬಳಿ ಕಾಯುವ ದರ್ದು ಇಲ್ಲ, ಪತ್ರ ಕೈಗೆ ಸಿಕ್ಕ ತಕ್ಷಣ ಇಡೀ ಮನೆಮಂದಿಯೆಲ್ಲಾ ಸೇರಿ ಒಬ್ಬರು ಸಾಭಿನಯವಾಗಿ ಓದಿದರೆ ಉಳಿದವರು ಮೈಯೆಲ್ಲಾ ಕಿವಿಯಾಗಿ ಕೇಳುತ್ತಿದ್ದ, ಪ್ರತಿಕ್ರಿಯಿಸುತ್ತಿದ್ದ ಕಾಲ ಈಗಿಲ್ಲ. ಅಂತರ್ಜಾಲ, ಮಿಂಚೋಲೆ ರೂಢಿಗೆ ಬಂದ ಮೇಲೆ ಪತ್ರ ಬರೆಯುವ ಪದ್ಧತಿಯೇ ಕುಂಠಿತವಾಗಿದೆ. ಪತ್ರವನ್ನು ಬರೆದು ಮುಗಿಸಿ ಕೊನೆಗೊಂದು ಸಹಿ ಮಾಡುವಾಗಿನ ಆನಂದ, ಪತ್ರವನ್ನು ಅಂಚೆ ಪೆಟ್ಟಿಗೆಗೆ ಹಾಕಿದ ನಂತರ ದೊರೆಯುವ ನಿರಾಳ ಈಗಿಲ್ಲ. ಈಗ ಸಹಿ ಮಾಡುವುದೇನಿದ್ದರೂ ಚೆಕ್ಕಿನ ಮೇಲಷ್ಟೆ! ಅದೂ ಸಹ ಆನ್ ಲೈನ್ ಬ್ಯಾಂಕಿಂಗ್, ATM ಕಾರ್ಡ್ ಬಂದ ಮೇಲೆ ಸಹಿಯೇ ಬೇಕಿಲ್ಲ; ಪೆನ್ನಿಗೇನೂ ಕೆಲಸವಿಲ್ಲದೆ ಕೇವಲ ಗಣಕಯಂತ್ರದ ಕೀಬೋರ್ಡಿನ ಮೇಲೆ ಟಂಕಿಸುವುದಷ್ಟೇ ಕೆಲಸ! ಮೊಬೈಲ್ ಬಂದ ಮೇಲಂತೂ ಅಕ್ಷರಸ್ಥರೂ ಅನಕ್ಷರಸ್ಥರಾಗುತ್ತಿದ್ದಾರೆ. ಈಗ ಏನಿದ್ದರೂ SMS ಸಂಸ್ಕೃತಿ. ಪತ್ರ, ಸಂಸ್ಕೃತಿಯ ಅಂತರಗಂಗೆ ಬತ್ತಿಹೋಗುತ್ತಿದೆ!
70ರ ದಶಕದಲ್ಲಿ ಬೆನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಓದುವಾಗಿನಿಂದಲೂ ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದ ಕೆಲವು ಸಂಸ್ಕೃತ ಪತ್ರಗಳು ನಮ್ಮ ಬಳಿ ಇವೆ. ಅವು ನಮ್ಮ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾಶಿಯಲ್ಲಿ ತಮ್ಮ ವಿದ್ಯಾಗುರುಗಳಾಗಿದ್ದ ಪಂಡಿತ್ ಗೌರೀನಾಥ ಪಾಠಕರಿಗೆ 30ರ ದಶಕದಲ್ಲಿ ಬರೆದ ಪತ್ರಗಳು. ಪಂಡಿತರ ಮನೆಯ ಗ್ರಂಥಭಂಡಾರದಲ್ಲಿದ್ದ ಪುಸ್ತಕಗಳ ಪುಟಗಳನ್ನು ಹೆಕ್ಕಿ ತೆಗೆದಾಗ ನಮಗೆ ದೊರೆತ ಅಪರೂಪದ ಪತ್ರಗಳು. “ವಿದ್ಯಾರ್ಥಿಷು ವಿನಯಸ್ಯ ಆವಶ್ಯಕತಾ”. ಇದು ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಗುರುವರ್ಯರು ಬರೆದ ಸಂಸ್ಕೃತ ಪ್ರಬಂಧದ ಶೀರ್ಷಿಕೆ. ಪ್ರಬಂಧ ಸ್ಪರ್ಧೆಯ ನಿರ್ಣಾಯಕರಾಗಿದ್ದ ಆಗಿನ ಕಾಶಿಯ ಮೂರ್ಧನ್ಯ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಗೋಪೀನಾಥ ಕವಿರಾಜರಿಂದ ಬಹುಮಾನ ಪಡೆದ ಪ್ರಬಂಧ. ಇಂದಿನ ವಿದ್ಯಾರ್ಥಿಪೀಳಿಗೆಯ ಚಾರಿತ್ರ್ಯ ನಿರ್ಮಾಣಕ್ಕೆ ಒಂದು ಕೈಪಿಡಿಯಾಗಬಹುದಾಗಿದ್ದ ಆ ಪ್ರಶಸ್ತಿವಿಜೇತ ಪ್ರಬಂಧ ನಮಗೆ ದೊರೆಯದೇ ಇರುವುದು ವಿಷಾದಕರ. ಆದರೆ ಒಂದು ಮಠದ ಪೀಠಾಧಿಪತಿಯಾಗಿದ್ದರೂ ನಮ್ಮ ಗುರುವರ್ಯರಿಗೆ ತಮ್ಮ ವಿದ್ಯಾಗುರುಗಳ ಬಗ್ಗೆ ಎಂತಹ ಗೌರವಭಾವನೆ ಇತ್ತೆಂಬುದಕ್ಕೆ ನಮಗೆ ಸಿಕ್ಕ ಈ ಪತ್ರಗಳೇ ಸಾಕ್ಷಿಯಾಗಿವೆ.
ದೀರ್ಘಕಾಲ ತಮ್ಮ ವಿದ್ಯಾಗುರುಗಳಿಂದ ಪತ್ರ ಬರದೇ ಇದ್ದಾಗ ಉದ್ವಿಗ್ನರಾಗಿ ಬರೆದಿದ್ದಾರೆ. ಸುಖದಲ್ಲಿಯೂ, ದುಃಖದಲ್ಲಿಯೂ ಸಮಭಾಗಿಯನ್ನಾಗಿ ಪರಿಗಣಿಸಿದ್ದ ತಮ್ಮ ಶಿಷ್ಯನ ಮೇಲೆ ಕೋಪವೇ ಅಥವಾ ಉದಾಸೀನವೇ? ಏನು ಕಾರಣ ಹೀಗೆ ಮೌನಮುದ್ರೆಯನ್ನು ಧರಿಸಿದ್ದೀರಿ, ಏನಾದರೂ ತಪ್ಪಿದ್ದರೆ ಹೇಳಿ ಅದನ್ನು ತಿದ್ದಿಕೊಳುತ್ತೇನೆ ಎಂದು ಕೇಳಿ ಬರೆದ ಭಾವಪೂರ್ಣ ಪತ್ರದ ಆಯ್ದಭಾಗ ಹೀಗಿದೆ:
“ಪೂಜ್ಯ ಗುರುದೇವ! ಸಾದರಂ ಪ್ರಣಮ್ಯ ವಿಜ್ಞಾಪಯಾಮಿ,
ಮಹತೀ ಹಿ ಮೌನಮುದ್ರಾ ತತ್ರಭವತಾಂ ಯಾ ಪ್ರಯತತಾಪಿ
ಆದ್ಯಾಪಿ ಮಯಾ ವಿಮೋಚಯಿತುಂ ನ ಶಕ್ಯೇತೇತೆ
ಮಹದಾಶ್ಚರ್ಯ್ಯಮ್, ಕಿಂ ನು ಕಾರಣಂ ಸ್ಯಾತ್?
ಶಿಷ್ಯಜನಸ್ಸೋಪರಿ ಕೋಪಃ ಕಿಮ್? ಉತ ಔದಾಸೀನ್ಯಮ್? ...
ಅದ್ಯಾವಧಿ ಸುಖೇsಪಿ ದುಃಖೇsಪಿ ಯಂ ದಾಸಜನಂ ತತ್ರಭವಂತಃ
ಸಮಭಾಗಿನಮಮನ್ಯಂತ, ತ ಏವಾದೈತಾದೃಶೀಂ ಮೌನಮುದ್ರಾಂ
ಧಾರಯಂತೀತಿ ಮಹದೇತನ್ ಮೇ ಹೃದಯಶಲ್ಯಮ್...ಕಿಂತು
ಗುರವಃ! ತತ್ರಭವತಾಂ ತಾದೃಶಂ ಶಿಷ್ಯಜನಸ್ಯೋಪರಿ ವಾತ್ಸಲ್ಯಂ
ಕ್ವಾದ್ಯ ಗತಮ್? ಕೇನ ಕಾರಣೇನ ಭವಾನ್ ರುಷ್ಟೋ ಮಯೋಪರಿ?
ಆಜ್ಞಾಪಯತು ಭವಾನ್, ಯೇನ ತತ್ ಪರಿಮಾರ್ಜಯಿತುಂ
ಯತಿಷ್ಯೇ. ನಹಿ ಶಕ್ಯಮೇತತ್ ಸೋಢುಂ
ಗುರುಜನೌದಾಸೀನ್ಯಮ್...”.
ಮಠದಲ್ಲಿ ಸ್ಥಾಪಿಸಿರುವ ಗ್ರಂಥಾಲಯಕ್ಕೆ ತಮ್ಮ ಭಾವಚಿತ್ರ ಬೇಕಾಗಿದೆಯೆಂದು ವಿದ್ಯಾಗುರುಗಳಾದ ಪಾಠಕರಿಗೆ ಪೂಜ್ಯ ಗುರುವರ್ಯರು ಬರೆದ ಇನ್ನೊಂದು ಸಂಸ್ಕೃತ ಪತ್ರ ಅತ್ಯಂತ ಹೃದಯಸ್ಪರ್ಶಿಯಾಗಿದೆ. “ಆ ಭಾವಚಿತ್ರದಲ್ಲಿ ಪಂಡಿತರಂತೆ ಕಾಣಬೇಕು, ಎದೆಯ ಮೇಲೆ ಬಟ್ಟೆ ಇರಬಾರದು, ಯಜ್ಞೋಪವೀತವು ಹೊರಗೆ ಕಾಣುವಂತಿರಬೇಕು. ಹಿಂಭಾಗದಲ್ಲಿ ದಿಂಬು ಇರಬೇಕು, ಎದುರಿಗೆ ಪುಸ್ತಕಗಳ ರಾಶಿ ಇರಬೇಕು, ಲಲಾಟದಲ್ಲಿ ತಿಲಕವಿರಬೇಕು” ಇತ್ಯಾದಿ ಕಲ್ಪಿಸಿಕೊಂಡು ಮಾಡಿರುವ ವರ್ಣನೆ "ಗದ್ಯಂ ಹೃದ್ಯಂ" ಎಂಬ ಮುದ್ದಣನ ಮಾತಿಗೆ ಉದಾಹರಣೆಯಂ
“...ಯಾದೃಶಂ ಚಿತ್ರಂ ಮನೋರಮಂ ಸ್ಯಾತ್ ತಾದೃಶಂ ತತ್ರಭವಂತ
ಏವಾಲೋಚ್ಯ ಪ್ರೇಷಯಂತು. ಮಮ ತು ಏತಾದೃಶಂ ರೋಚತೇ,
ಯತ್ ಶರೀರಸ್ಯೋಪರಿ ಭಾಗೇ (ಕಟ್ಯುಪರಿ) ಕಿಮಪಿ ವಸ್ತ್ರಂ ನ
ಸ್ಯಾತ್, ಪಶ್ಚಾದ್ ಭಾಗೇ ರಮ್ಯಮುಪಾಧಾನಂ ಸ್ಯಾತ್. ಸಮಕ್ಷಮೇಕಾ
ಪುಸ್ತಕರಾಶಿಃ ಸ್ಯಾತ್. ಲಲಾಟೇ ಚ ತಿಲಕಃ. ಯಜ್ಞೋಪವೀತಂ
ಬಹಿದೃಶ್ಯಮಾನಂ ಸ್ಯಾತ್. ಏತಾದೃಶೇನ
ಭಾವೇನೋಪವಿಷ್ಟಾನಾಂ ತತ್ರಭವತಾಮೇಕಂ ಚಿತ್ರಂ ಕೃಪಯಾ
ಪ್ರೇಷಣೀಯಮ್.
ಹಿರಿಯ ತಲೆಮಾರಿನ ಸಂಸ್ಕೃತ ಪಂಡಿತರಾಗಿದ್ದ ಗೌರೀನಾಥ್ ಪಾಠಕ್ ರವರು ಮೂಲತಃ ಮಹರಾಷ್ಟ್ರದವರು. ಎರಡು ತಲೆಮಾರಿನ ಹಿಂದೆ ಅವರ ಹಿರಿಯರು ಕಾಶಿಗೆ ಬಂದು ನೆಲೆಸಿದವರು. ಪರಂಪರಾಗತವಾಗಿ ಬಂದ ವಿದ್ವತ್ತು. ಶರೀರ ಕೃಶವಾಗಿದ್ದರೂ ನೆನಪಿನ ಶಕ್ತಿ ಕುಂದಿರಲಿಲ್ಲ. ನಮ್ಮ ಗುರುವರ್ಯರು 1973 ರಲ್ಲಿ ಏಳುನೂರು ಜನ ಶಿಷ್ಯರೊಂದಿಗೆ ಉತ್ತರಭಾರತ ರೈಲು ಪ್ರವಾಸ ಕೈಗೊಂಡಿದ್ದರು. ಅವರು ಕಾಶಿಗೆ ಬರುವ ವಿಷಯವನ್ನು ತಿಳಿಸಿದಾಗ ಆ ಮಾಗಿದ ಜೀವ ಕಿಂ ಶಿವಕುಮಾರಃ ಸಮೇಷ್ಯತಿ! ಎಂದು ಹಿಗ್ಗಿನಿಂದ ಆಲಿಸಿದ್ದನ್ನು ನೋಡಿ ಕಾದಿರುವಳು ಶಬರಿ ರಾಮ ಬರುವನೆಂದು ಎಂಬ ರಾಮಾಯಣದ ಸಾಲು ನೆನಪಾಯಿತು. ನಮ್ಮ ಗುರುವರ್ಯರು ತಮ್ಮ ವಿದ್ಯಾಗುರುವನ್ನು ಅವರ ಸ್ವಗೃಹ ಶಾರದಾಭವನದಲ್ಲಿ ನೋಡುತ್ತಲೇ ಭಾವಪರವಶರಾಗಿ ಅವರ ಪಾದಗಳಿಗೆ ಶಿರಬಾಗಿ ನಮಸ್ಕರಿಸಿದ್ದನ್ನು ನೋಡಿದ ಶಿಷ್ಯರು ಮೂಕವಿಸ್ಮಿತರಾದರು! ಈರ್ವರ ಸಂಭಾಷಣೆಯು ಕಾಲಗರ್ಭವನ್ನು ಭೇದಿಸಿ 40 ವರ್ಷಗಳ ಹಿಂದಿನ ವಿದ್ಯಾರ್ಥಿಜೀವನದ ಸಿಹಿ-ಕಹಿಯ ನೆನಪಿನ ಅಂಗಳದಲ್ಲಿ ವಿಹರಿಸಿತ್ತು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 18.10.2012