ಗ್ರಾಮೀಣ ಮಹಿಳೆಯರ ಕಣ್ಣೀರಿನ ಕಥೆ
ಸಾಂಸಾರಿಕ ಜೀವನದಲ್ಲಿ ಕುಟುಂಬದ ಸದಸ್ಯರ ನಡುವೆ ಪ್ರೀತಿ ವಿಶ್ವಾಸಗಳು ಬಹಳ ಮುಖ್ಯ. ಸಮಾಜದ ಅತಿ ಚಿಕ್ಕ ಘಟಕವೇ ಕುಟುಂಬ. ವ್ಯಕ್ತಿಗಳಿಂದ ಕುಟುಂಬ, ಕುಟುಂಬಗಳಿಂದ ಸಮಾಜ. ವ್ಯಕ್ತಿಗಳ ನೆಮ್ಮದಿಯು ಕುಟುಂಬದ ನೆಮ್ಮದಿಗೂ, ಕುಟುಂಬಗಳ ನೆಮ್ಮದಿಯು ಸಾಮಾಜಿಕ ನೆಮ್ಮದಿಗೂ ಕಾರಣವಾಗುತ್ತದೆ. ನೆಮ್ಮದಿಯಿಲ್ಲದ ವ್ಯಕ್ತಿ ಕುಟುಂಬಕ್ಕೂ ಬೇಡದವನಾಗಿ ಸಮಾಜಕ್ಕೂ ಬೇಡದವನಾಗಿ ಕುರುಕ್ಷೇತ್ರದ ಕೊನೆಯಲ್ಲಿ ದುರ್ಯೋಧನ ತಲುಪಿದ ಹತಾಶ ಸ್ಥಿತಿಯುಂಟಾಗುತ್ತದೆ: ಮನ ಶೂನ್ಯಂ, ಮನೆ ಶೂನ್ಯಂ ಬೀಡು ಶೂನ್ಯಂ ಅಕ್ಕಟಾ! ಸರ್ವಜ್ಞ ಹೇಳುತ್ತಾನೆ:
ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ
ಇಚ್ಚೆಯನು ಅರಿವ ಸತಿಯಾಗೆ | ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ.
ಬದುಕಲೊಂದು ಬೆಚ್ಚನೆಯ ಮನೆ, ಬದುಕಿನ ವೆಚ್ಚಗಳನ್ನು ತೂಗಿಸಲು ಬೇಕಾಗುವಷ್ಟು ಹಣ ಇರಬೇಕು ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಇಚ್ಛೆಯನು ಅರಿವ ಸತಿಯಾಗೆ ಎನ್ನುವ ಸರ್ವಜ್ಞನ ಮಾತು ಮಾತ್ರ ಪ್ರಶ್ನಾರ್ಹ. ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮೂಡಿ ಬರುವ ಸುಖ ಸಂಸಾರದ ಕಲ್ಪನೆ ಇದು. ಸ್ವಂತ ಉದ್ಯೋಗ-ದುಡಿಮೆಗಳಿಲ್ಲದೆ, ಆರ್ಥಿಕ ಸ್ವಾತಂತ್ರ್ಯವೂ ಇಲ್ಲದೆ, ಗಂಡನ ಛಾಯಾನುವರ್ತಿಯಾಗಿ ಬದುಕಬೇಕಾದ ಅನಿವಾರ್ಯತೆ ಹೆಣ್ಣಿಗಿದ್ದ ಸಂದರ್ಭದಲ್ಲಿ ಮೂಡಿಬಂದ ಚಿಂತನೆಯಿದು. ಗಂಡನಿಗೆ ಬೇಡವಾದ್ದು ಗುಂಡಕಲ್ಲಿಗೂ ಬೇಡ ಎನ್ನುವ ಕಾಲ ಇದಲ್ಲ. ಈಗ ಹೆಣ್ಣೂ ಸಹ ವಿದ್ಯಾವಂತಳಾಗಿದ್ದಾಳೆ, ಬದುಕಿನ ಬಂಡಿ ನಿರಾಳವಾಗಿ ಸಾಗಲು ಅವಳ ದುಡಿಮೆಯ ಪಾಲೂ ಸಲ್ಲುತ್ತಿದೆ. ಹೀಗಿರುವಾಗ ಅವಳು ಈಗಲೂ ಪತಿಯೇ ಪರದೈವ ಎಂದು ಆರಾಧಿಸುವ ಸತಿಯಾಗಿರಬೇಕೆಂದು ಬಯಸುವುದು ಸರಿಯೇ? ಇಚ್ಛೆಯರಿವ ಸತಿಯಾಗೆ ಅಥವಾ ಇಚ್ಛೆಯರಿವ ಪತಿಯಾಗೆ ಎನ್ನುವ ಬದಲು ಇಚ್ಛೆಯರಿವ ಸತಿಪತಿಗಳಾಗೆ ಎಂದು ಹೇಳುವುದು ಹೆಚ್ಚು ಅರ್ಥಪೂರ್ಣ.
ಪ್ರತಿ ಸೋಮವಾರ ನಡೆಯುವ ನಮ್ಮ ಸದ್ಧರ್ಮ ನ್ಯಾಯಪೀಠದ ಮುಂದೆ ಬಂದ ಈ ಮುಂದಿನ ಕೆಲವು ಪ್ರಕರಣಗಳನ್ನು ಗಮನಿಸಿ. ಹೆಸರುಗಳು ಮಾತ್ರ ಕಲ್ಪಿತ, ಆದರೆ ಇವೆಲ್ಲವೂ ಸತ್ಯ ಘಟನೆಗಳು:
- ಚಂದ್ರಕಲಾ ಮದುವೆಯಾಗಿ ಮೂರು ವರ್ಷ. ಒಬ್ಬ ಮಗನಿದ್ದಾನೆ. ಮದುವೆಯಾದ ಎರಡೇ ವರ್ಷಗಳಲ್ಲಿ ವಿರಸ ದಾಂಪತ್ಯ. ಅದಕ್ಕೆ ಕಾರಣ ಪತಿಯ ಅಕ್ಕ. ಇದ್ದ ಊರಲ್ಲೇ ಆಕೆಯ ಮದುವೆಯಾಗಿದ್ದು ತವರು ಮನೆಯಲ್ಲಿಯೇ ವಾಸ. ಆಕೆಯ ಚಾಡಿ ಮಾತುಗಳನ್ನು ಕೇಳಿ ಗಂಡನಿಂದ ನಿತ್ಯ ಕಿರುಕುಳ. ಅದನ್ನು ತಾಳಲಾರದೆ ಚಂದ್ರಕಲಾ ಆತ್ಮಹತ್ಯೆಗೆ ಯತ್ನಿಸಿದ್ದೂ ಉಂಟು; ಕರುಳ ಕುಡಿ ಅನಾಥವಾಗುತ್ತದೆಯೆಂದು ಗಟ್ಟಿಮನಸ್ಸು ಮಾಡಿಕೊಂಡು ಮಗನೊಂದಿಗೆ ತವರು ಮನೆಗೆ ಪಯಣ. ದಾರಿಯಲ್ಲಿ ಪ್ರತ್ಯಕ್ಷನಾದ ಗಂಡ ಅವಳಿಂದ ಮಗನನ್ನು ಬಲಾತ್ಕಾರದಿಂದ ಕಿತ್ತುಕೊಂಡ. ಈಗ ತವರು ಮನೆಯಲ್ಲಿ ಆಕೆ ಒಂಟಿ ಬಾಳನ್ನು ಬಾಳುತ್ತಿದ್ದಾಳೆ; ಪ್ರೀತಿಯ ಕರುಳ ಕುಡಿಯ ಮುಖವನ್ನೂ ನೋಡಲಾಗದೆ ದಿನ ದೂಡುತ್ತಿದ್ದಾಳೆ. ಈ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಗಂಡ ಬೇರೊಬ್ಬ ಚೆಲುವೆಯನ್ನು ಮದುವೆಯಾಗಿದ್ದಾನೆ! ಇದೆಲ್ಲಕ್ಕೂ ಅತ್ತೆ ಮಾವಂದಿರ ಕುಮ್ಮಕ್ಕು ಬೇರೆ.
- ತೆಂಗಿನ ಸೀಮೆಯ ಹಳ್ಳಿಯೊಂದರ ಕುಸುಮಾ ಮದುವೆಯಾಗಿ ನಾಲ್ಕು ವರ್ಷ. ಒಂದು ಹೆಣ್ಣು ಮಗು ಇದೆ. ಮದುವೆ ಸಂದರ್ಭದಲ್ಲಿ ಸಾಕಷ್ಟು ವರದಕ್ಷಿಣೆ ವಾಚು ಉಂಗುರ ಕೊಟ್ಟಿದ್ದರೂ ಇನ್ನೂ ಬೇಕೆಂದು ಗಂಡನ ಮನೆಯಲ್ಲಿ ಕಾಟ. ಅತ್ತೆ ಮಾವಂದಿರು ಕೊಟ್ಟ ಹಿಂಸೆ ಒಂದೇ ಎರಡೇ? ಹೀನಾ ಮಾನವಾಗಿ ಬೈಯುವುದು, ಹೊಡೆಯುವುದು, ಆಳಿನಂತೆ ಕೆಲಸ ಮಾಡಿಕೊಂಡು ಬಿದ್ದಿರು ಎಂದು ಗದರಿಸುವುದು! ಚಾಡಿ ಮಾತುಗಳನ್ನು ಕೇಳುವ ಹಿತ್ತಾಳೆ ಕಿವಿಯ ಗಂಡನಿಂದಲೂ ಕಿರುಕುಳ. ಮಗು ತನ್ನದಲ್ಲವೆಂಬ ದೂಷಣೆ. ಹೆಂಡತಿಯ ಕತ್ತು ಹಿಸುಕಲೂ ಸಹ ಯತ್ನಿಸಿದ್ದುಂಟು. ಮಗು ಅಳಲು ಆರಂಭಿಸಿದಾಗ ಕೈಬಿಟ್ಟ. ಅತ್ತೆ-ಮಾವ ಮತ್ತು ಗಂಡ ಕೊಟ್ಟ ಕಿರುಕುಳ ತಾಳಲಾರದೆ ತವರು ಸೇರಿದ್ದಾಳೆ. ಪಿತ್ರಾರ್ಜಿತ ಆಸ್ತಿಯನ್ನು ಪರಭಾರೆ ಮಾಡದಂತೆ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾಳೆ. ಕಾನೂನೇನೋ ಅವಳ ಪರವಾಗಿದೆ. ಆದರೆ ಹಂಡಾವರಣಗೊಂಡ ಆಕೆಯ ಬದುಕನ್ನು ಅದು ಮತ್ತೆ ಕಟ್ಟಿ ಕೊಡಬಲ್ಲುದೆ!
- ರಮಾದೇವಿ ಮದುವೆಯಾಗಿ ಆರು ವರ್ಷ. ಇಬ್ಬರು ಗಂಡು ಮಕ್ಕಳಿದ್ದಾರೆ. ಗಂಡನ ಮನೆಯಲ್ಲಿ ನಾದಿನಿಯರು ಕೊಡುತ್ತಿದ್ದ ಹಿಂಸೆಯನ್ನು ತಾಳಲಾರದೆ ಅದೇ ಊರಿನಲ್ಲಿಯೇ ಬೇರೆ ಮನೆ ಮಾಡಿಕೊಂಡಿದ್ದಳು. ಹೆಂಡತಿಯ ಬಗ್ಗೆ ಗಂಡನಿಗೆ ಪ್ರೀತಿ ಇದ್ದರೂ ನಾದನಿಯರ ಕಾರಣದಿಂದಾಗಿ ಬೇರೆ ಹೋಗುವ ಪ್ರಸಂಗ ಉಂಟಾಯಿತು. ಅವಳಿಗೆ ತಲೆ ಸರಿ ಇಲ್ಲವೆಂದು ಹುಚ್ಚಿಯ ಪಟ್ಟವನ್ನೀಗ ಕಟ್ಟಿದ್ದಾರೆ.
- ಶಾಂತಾ ಕಡುಬಡತನದ ಕುಟಂಬದಲ್ಲಿ ಹುಟ್ಟಿದವಳು. ಮೊದನೆಯ ಹೆಂಡತಿಗೆ 9 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಎರಡನೇ ಹೆಂಡತಿಯಾಗಿ ಶಾಂತಾಳ ಮದುವೆಯಾದ ಕೆಲವೇ ದಿನಗಳಲ್ಲಿ ಮೊದಲನೇ ಹೆಂಡತಿಯ ಸಂಬಂಧಿಕರು ಜಗಳ ತೆಗೆದು ಪೋಲೀಸ್ ಠಾಣೆಗೆ ಎಳೆಸಿ ಗಂಡನ ಆಸ್ತಿಯಲ್ಲಿ ಪಾಲು ತೆಗೆದುಕೊಂಡರು. ನಂತರ ಮೊದಲನೇ ಹೆಂಡತಿಯು ತನಗೆ ಗಂಡ ಬೇಕೆಂದು ಹಠ ಮಾಡಿದ್ದರಿಂದ ಶಾಂತಾ ಮತ್ತು ಆಕೆಯ ಸಂಬಂಧಿಕರ ಒಪ್ಪಿಗೆಯನ್ನು ಪಡೆದು ಇಬ್ಬರೂ ಪತ್ನಿಯರು ಗಂಡನೊಂದಿಗೆ ಬಾಳ್ವೆ ಮಾಡಿಕೊಂಡು ಹೋಗಲು ಊರ ಹಿರಿಯರು ಅವಕಾಶ ಮಾಡಿಕೊಟ್ಟರು. ವಿಧಿ ವಿಚಿತ್ರಕ್ಕೆ ಏನೆನ್ನಬೇಕು! ನಂತರ ಮೊದಲನೇ ಹೆಂಡತಿಗೆ ಮಗುವಾಯಿತು. ಮಗುವಾಗಿದ್ದೇ ತಡ ಗಂಡನು ತನ್ನ ಎರಡನೇ ಹೆಂಡತಿಯಾದ ಶಾಂತಾಳನ್ನು ತವರು ಮನೆಗೆ ಓಡಿಸಿದ.
- ಭಾಗೀರಥಿಯ ಗಂಡ ಶಾಲಾ ಶಿಕ್ಷಕ. ಮದುವೆಯಾದ 6 ತಿಂಗಳಲ್ಲೇ ಅಕಾಲ ಮರಣಕ್ಕೆ ತುತ್ತಾದ. ಆಗ ಆಕೆ ನಾಲ್ಕು ತಿಂಗಳ ಗರ್ಭಿಣಿ; ನಂತರ ಹೆಣ್ಣು ಮಗು ಹುಟ್ಟಿತು. ಈಗ ಮಗಳಿಗೆ 13 ವರ್ಷ. ಜೀವನೋಪಾಯಕ್ಕೆ ಗತಿಸಿದ ಗಂಡನ ಕಡೆಯಿಂದ ಯಾವ ಆಸ್ತಿಯೂ ದೊರೆತಿಲ್ಲ. ಗಂಡನ ಮನೆಯವರನ್ನು ಕೇಳಿದರೆ ಕೋರ್ಟಿಗೆ ಹೋಗು ಎಂದು ಸವಾಲು ಹಾಕುತ್ತಾರೆ. ನಿಸ್ಸಹಾಯಕಳಾದ ಅವಳು ಕಷ್ಟದಿಂದ ತನ್ನ ಜೀವನವನ್ನು ಸಾಗಿಸುತ್ತಿದ್ದಾಳೆ.
- ಸಹನಾಳಿಗೆ ಮದುವೆಯಾಗಿ ಮೂರು ವರ್ಷ. ಮದುವೆಯಾದ ದಿನದಿಂದಲೂ ಗಂಡನಿಗೆ ದಾಂಪತ್ಯ ಜೀವನದಲ್ಲಿ ನಿರಾಸಕ್ತಿ. ನಿನ್ನ ಮುಖ ರಾಕ್ಷಸಿಯಂತಿದೆ ಎಂದು ಒಂದು ಸಾರಿ ಹೇಳಿದರೆ ನೀನು ದೇವತೆಯಂತೆ ಇದ್ದೀಯಾ ಎಂದು ಇನ್ನೊಂದು ಸಾರಿ ಹೇಳುತ್ತಾನೆ. ನೀನು ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದೀಯಾ ಎಂದು ಮೂದಲಿಸುತ್ತಾನೆ. ಮೂರ್ಛೆ ಬಿದ್ದವನಂತೆ ನಟಿಸುತ್ತಾನೆ. ಅತ್ತೆ-ಮಾವ ಎಷ್ಟೇ ಕಿರುಕುಳ ಕೊಟ್ಟರೂ ಆಕೆ ಮಾತ್ರ ಅಂತರಂಗದ ನೋವನ್ನು ನುಂಗಿಕೊಳುತ್ತಲೇ ಬಂದಿದ್ದಾಳೆ.
- •ಶೋಭಾ ಈಗ ಮದುವೆ ವಯಸ್ಸಿನ ಕನ್ಯೆ. ಮೂರು ಜನ ಅಕ್ಕಂದಿರು. ಅವರೆಲ್ಲರ ಮದುವೆಯಾಗಿದೆ. ಈಗ ಶೋಭಾಳಿಗಾಗಿ ವರಾನ್ವೇಷಣೆ. ಅಣ್ಣಂದಿರು ತೋರಿಸುವ ಗಂಡುಗಳೆಲ್ಲಾ ಮಹಾನ್ ಕುಡುಕರು, ಗಡಂಗು ಪ್ರಿಯರು! ಅವರನ್ನು ಶೋಭಾ ತಿರಸ್ಕರಿಸಿದ್ದಾಳೆ. ಅವಳು ಒಪ್ಪಿದ ಗಂಡುಗಳನ್ನು ಅಣ್ಣಂದಿರು ತಿರಸ್ಕರಿಸುತ್ತಾರೆ. ತಾವು ತೋರಿಸಿದ ಗಂಡನ್ನೇ ಮದುವೆಯಾಗಬೇಕೆಂದು ಅಣ್ಣಂದಿರ ಒತ್ತಾಯ. ಯಾವನೋ ಒಬ್ಬನಿಗೆ ಕಟ್ಟಿ ಕೈತೊಳೆದುಕೊಳುವ ಅರ್ಜೆಂಟು ಅವರಿಗೆ. ಹೀಗಿದೆ ಅವಳ ಪ್ರಾಣ ಸಂಕಟ!
- ಬನಶಂಕರಮ್ಮ ವೃದ್ಧೆ. ಇಬ್ಬರು ಗಂಡು ಮಕ್ಕಳು. ಗಂಡ ತೀರಿಕೊಂಡಿದ್ದಾನೆ. ಜೀವನಾಂಶದ ಜಮೀನು, ಮನೆ ಆಸ್ತಿಯಲ್ಲವನ್ನೂ ಮಕ್ಕಳು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ತಾಯಿಗೆ ಊಟಕ್ಕೂ ಗತಿಯಿಲ್ಲದಂತೆ ಮಾಡಿದ್ದಾರೆ.
ದೇಶದ ಕಾನೂನುಗಳು ಹೆಣ್ಣಿಗೆ ಸ್ವಾತಂತ್ರ್ಯ ಸಮಾನತೆಗಳನ್ನು ಒದಗಿಸಿವೆ. ಆದರೂ ಅವಳಿಗೆ ಕೌಟುಂಬಿಕ ಹಿಂಸೆ ತಪ್ಪಿಲ್ಲ, ಸಾಮಾಜಿಕ ಕಿರುಕುಳ ಅಂತ್ಯ ಕಂಡಿಲ್ಲ. ಗಂಡಹೆಂಡಿರಲ್ಲಿ ಕಾನೂನಿನಿಂದ ಪ್ರೀತಿಯನ್ನು ತರಲು ಸಾಧ್ಯವಿಲ್ಲ. ಕಾನೂನಿನಿಂದ ಭಯವನ್ನು ಉಂಟುಮಾಡಬಹುದೇ ಹೊರತು ಪ್ರೀತಿಯನ್ನು ಉಂಟುಮಾಡುವುದು ಅಸಾಧ್ಯ. ಅವರು ಪರಸ್ಪರ ಅರ್ಥಮಾಡಿಕೊಂಡಾಗ ಯಾವ ಕಾನೂನಿನ ಅಗತ್ಯವೂ ಇಲ್ಲ. ಕಾನೂನುಗಳು ಸಂಬಂಧಗಳನ್ನು ಸುಧಾರಿಸಲು ನೆರವಾಗುವುದಿಲ್ಲ; ಬದಲಾಗಿ ಸಂಬಂಧ ಕೆಟ್ಟಾಗ ಕತ್ತಿ ಮಸೆಯಲು, ದ್ವೇಷವನ್ನು ಸಾಧಿಸಲು ದುರ್ಬಳಕೆಯಾಗುತ್ತಿವೆ.
ನಮ್ಮ ದೇಶದ ಗಂಡಸರು ಪುಣ್ಯಮಾಡಿದ್ದರು. ಇವರೇನಾದರೂ ಯೂರೋಪ್, ಅಮೇರಿಕಾದಿ ದೇಶಗಳಲ್ಲಿ ಹುಟ್ಟಿ ಇಲ್ಲಿ ಮಾಡುವ ಪುಣ್ಯಕಾರ್ಯಗಳನ್ನೇ ಮಾಡಿದ್ದರೆ ಅನೇಕರು ಶ್ರೀಕೃಷ್ಣನ ಜನ್ಮಸ್ಥಾನವನ್ನು ಸೇರುತ್ತಿದ್ದರು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 6.12.2012