ಭಾವಪೂರ್ಣ ಸ್ಮರಣಾಂಜಲಿ!

  •  
  •  
  •  
  •  
  •    Views  

ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಪ್ರಿಯವಾದ ವ್ಯಕ್ತಿಗಳು, ವಸ್ತುಗಳು, ವಿಚಾರಗಳು ಹಲವು ಹತ್ತು ಇರುತ್ತವೆ. ಅವರವರ ಅಭಿರುಚಿ, ಆಲೋಚನೆಗಳಿಗೆ ಅನುಗುಣವಾಗಿ ಅವು ವಿಭಿನ್ನವಾಗಿರುತ್ತವೆ. ಒಬ್ಬರಿಗೆ ಇಷ್ಟವಾದದ್ದು ಇನ್ನೊಬ್ಬರಿಗೆ ಇಷ್ಟವಾಗುತ್ತದೆಯೆಂದು ಹೇಳಲು ಬರುವುದಿಲ್ಲ. ಆದರೆ ಎಲ್ಲರಿಗೂ ಇಷ್ಟವಾದ ಯಾರಿಗೂ ಯಾವ ಕಾಲಕ್ಕೂ ಬೇಡವಾಗದ ಒಂದು ಅಪರೂಪದ ಸಂಗತಿಯೆಂದರೆ ಅವರವರ ಪ್ರಾಣ. ಎಷ್ಟೇ ವಯಸ್ಸಾಗಿರಲಿ ಯಾರೂ ಸಾಯಲು ಇಷ್ಟಪಡುವುದಿಲ್ಲ. ಬೇರೆಲ್ಲ ವ್ಯಕ್ತಿ ಅಥವಾ ವಸ್ತುವಿನ ಮೇಲಿನ ಪ್ರೀತಿಗಿಂತ ತನ್ನ ಪ್ರಾಣದ ಮೇಲಿನ ಪ್ರೀತಿಯೇ ಹೆಚ್ಚು. ಪ್ರಾಣಾಪಾಯದ ಪರಿಸ್ಥಿತಿ ಬಂದೊದಗಿದಾಗ ತನ್ನ ಪ್ರಾಣವನ್ನು ಉಳಿಸಿಕೊಳ್ಳುವ ಸಲುವಾಗಿ ತನಗೆ ಎಷ್ಟೇ ಪ್ರಿಯವಾದ ವಸ್ತು ಇದ್ದರೂ ಅದನ್ನು ತ್ಯಜಿಸಲು ವ್ಯಕ್ತಿ ಸಿದ್ದನಾಗುತ್ತಾನೆ. ದರೋಡೆಕೋರನ ಕೈಗೆ ಸಿಕ್ಕಾಗ ತನ್ನಲ್ಲಿರುವ ಹಣ ಮತ್ತು ಒಡವೆಗಳನ್ನು ಕೊಟ್ಟಾದರೂ ಬಚಾವಾಗಲು ಯತ್ನಿಸುವುದಿಲ್ಲವೇ? ಇದು ಪ್ರಾಣಿಸಹಜವಾದ ಗುಣ.

ಎಲ್ಲಿಯೋ ಓದಿದ ಒಂದು ಕಥೆ. ನದಿಯ ದಡದಲ್ಲಿ ಮರದ ಮೇಲೊಂದು ಕೋತಿ ಮತ್ತು ಅದರ ಮರಿ ಇದ್ದವು. ನದಿಯಲ್ಲಿ ದಿಢೀರನೆ ಪ್ರವಾಹ ಬಂದಿತು. ಮರಿಯು ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ತಾಯಿ ಕೋತಿಯು ರಕ್ಷಣೆಮಾಡಿತು. ಆದರೆ ಪ್ರವಾಹ ಏರುತ್ತಾ ಹೋಗಿ ತನ್ನ ಪ್ರಾಣಕ್ಕೇ ಸಂಚಕಾರ ಬಂದಾಗ ತನ್ನನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ತಾಯಿ ಕೋತಿಯು ಅದರ ಮರಿಯ ತಲೆಯ ಮೇಲೆ ಕುಳಿತುಕೊಂಡಿತಂತೆ! ಅದೇ ಆ ತಾಯಿ ಮನುಷ್ಯಳಾಗಿದ್ದರೆ ತಾನು ಮುಳುಗುವಂತಾದರೂ ಚಿಂತಿಸದೆ ತನ್ನ ಉಸಿರು ಇರುವ ತನಕ ತನ್ನ ತಲೆಯ ಮೇಲೆ ಮಗುವನ್ನು ಎತ್ತಿಹಿಡಿದು ರಕ್ಷಣೆ ಮಾಡುತ್ತಿದ್ದಳು. ತನ್ನ ಪ್ರಾಣವನ್ನು ತೆತ್ತಾದರೂ ತನ್ನ ಮುದ್ದು ಮಗುವನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಳು. ಇದಕ್ಕೆ ತ್ಯಾಗ ಎನ್ನುತ್ತಾರೆ. ಆ ತ್ಯಾಗದ ಹಿಂದಿರುವುದೇ ಮಾತೃವಾತ್ಸಲ್ಯ. ಇದೇ ರೀತಿ ತನ್ನ ಪ್ರಾಣದ ಹಂಗು ತೊರೆದು ಹೃದಯದಲ್ಲಿ ದೇಶಭಕ್ತಿಯನ್ನಿರಿಸಿಕೊಂಡು ದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಹೋರಾಡುವವನೇ ವೀರಯೋಧ. ಅವನಿಗೂ ತನ್ನದೇ ಆದ ಪುಟ್ಟ ಸಂಸಾರವಿರುತ್ತದೆ. ಮನೆಯಲ್ಲಿ ಮುದ್ದಿನ ಮಡದಿ ಮಕ್ಕಳಿದ್ದರೂ ತನ್ನ ಕುಟುಂಬದ ಹಿತಕ್ಕಿಂತ ದೇಶದ ಹಿತಕ್ಕಾಗಿ ಕೆಚ್ಚೆದೆಯಿಂದ ಹೋರಾಡುತ್ತಾನೆ. ತ್ಯಾಗವೆಂದರೆ ಸಂನ್ಯಾಸ ಸ್ವೀಕರಿಸಿ ಮಠದ ಸ್ವಾಮಿಗಳಾದವರದೇ ತ್ಯಾಗವೆಂದಾಗಬೇಕಾಗಿಲ್ಲ. ತ್ಯಾಗೇನೈಕೇ ಅಮೃತತ್ವಮಾನುಶುಃ (ತ್ಯಾಗದಿಂದ ಮಾತ್ರ ಅಮರತ್ವವನ್ನು ಪಡೆಯಲು ಸಾಧ್ಯ) ಎಂದು ಹೇಳುವ ಕೈವಲ್ಯೋಪನಿಷತ್ತಿನ ಮಾತು ಆಧ್ಯಾತ್ಮಿಕ ಸಾಧನೆಯನ್ನು ಕುರಿತು ಹೇಳಿದೆಯಾದರೂ ವೀರಯೋಧನಿಗೂ ಅಕ್ಷರಶಃ ಅನ್ವಯಿಸಬಲ್ಲುದು. ಸೈನ್ಯದಲ್ಲಿ ವಿಭಿನ್ನ ಧರ್ಮ, ಪ್ರಾಂತ್ಯ ಮತ್ತು ಭಾಷೆಯ ಯೋಧರಿರುತ್ತಾರೆ. ಆದರೆ ಅವಾವೂ ಅವರಲ್ಲಿ ಭಿನ್ನಭೇದಗಳನ್ನುಂಟುಮಾಡುವುದಿಲ್ಲ; ಯಾವ identity ಗಳಿಗೂ ಕಾರಣವಾಗುವುದಿಲ್ಲ.

ಮುಂದೆ ಏನಾಗಬೇಕೆಂದು ಬಯಸುತ್ತೀಯಾ ಎಂದು ಈಗಿನ ಯುವಕರನ್ನು ಕೇಳಿದರೆ ಬಹುತೇಕ ಪ್ರತಿಭಾನ್ವಿತರು ಕೊಡುವ ಉತ್ತರ ಒಂದೇ: ಡಾಕ್ಟರ್ ಅಥವಾ ಇಂಜಿನಿಯರ್! ಅದೇನೂ ತಪ್ಪಲ್ಲ. ತಂದೆತಾಯಂದಿರು ಬಯಸುವುದೂ ಅದನ್ನೇ. ಆದರೆ ಡಾಕ್ಟರು ಅಥವಾ ಇಂಜಿನಿಯರೇ ಏಕೆ ಎಂಬುದು ಇಲ್ಲಿಯ ಮುಖ್ಯ ಪ್ರಶ್ನೆ. ಇದು ಖಂಡಿತವಾಗಿಯೂ ತಂತ್ರಜ್ಞಾನ ಅಥವಾ ವೈದ್ಯಕೀಯಶಾಸ್ತ್ರಗಳ ಮೇಲಿನ ಅಭಿರುಚಿಯಿಂದ ಅಲ್ಲ. ಬದಲಾಗಿ ಆ ವೃತ್ತಿಗಳಲ್ಲಿ ದೊರೆಯುವ ಅಪಾರ ಹಣದ ಆಸೆಯಿಂದ. ಅಧ್ಯಯನದ ಅಭಿರುಚಿಗಿಂತ ಹಣ ಗಳಿಸುವ ಅಭಿಲಾಷೆಯೇ ಈ ವೃತ್ತಿಗಳಲ್ಲಿ ತೊಡಗುವವರಲ್ಲಿರುವ ಹಪಾಹಪಿ. ಅಪಾರ ಹಣ ದೊರೆಯದೇ ಹೋಗಿದ್ದರೆ ಆಗಲೂ ಇವರು ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಬಯಸುತ್ತಿದ್ದರೇ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟ. ದೇಶಕ್ಕೆ ಕೇವಲ ಇಂಜಿನಿಯರುಗಳೂ ವೈದ್ಯರೂ ಅಷ್ಟೇ ಮುಖ್ಯವಲ್ಲ; ಯೋಧರೂ ಅತ್ಯಾವಶ್ಯಕ. ದೇಶದ ವೆಚ್ಚದಲ್ಲಿ ವಿದ್ಯಾಭ್ಯಾಸ ಗಳಿಸಿ ಹೊನ್ನಿನಾಸೆಗೆ ವಿದೇಶಗಳಿಗೆ ಹಾರಿ ಹೋಗದೆ ಇಂಜಿನಿಯರುಗಳಾಗಿಯೂ, ವೈದ್ಯರಾಗಿಯೂ ಸೇನೆ ಸೇರಿ ದೇಶಸೇವೆ ಮಾಡಿ ಮಡಿದ ವೀರಯೋಧರಿದ್ದಾರೆ.

ದೇಶದ ರಕ್ಷಣೆಗಾಗಿ ಪ್ರಾಣವನ್ನು ಪಣವಿಟ್ಟು ಹೋರಾಟ ಮಾಡಿದ ಅಂತಹ ಯೋಧರ ಸಂಸ್ಮರಣೆಯಲ್ಲಿ ಇದೇ ಡಿಸೆಂಬರ್ 16 ರಂದು ಭಾನುವಾರ ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ಸ್ಮರಣಾಂಜಲಿ ಎಂಬ ವಿಶೇಷ ಕಾರ್ಯಕ್ರಮವನ್ನು ಬೆಂಗಳೂರು ದೂರದರ್ಶನ ಕೇಂದ್ರವು ಆಯೋಜಿಸಿತ್ತು. ಸಮಾರಂಭದಲ್ಲಿ ರಾಜ್ಯಪಾಲರೂ ಸೇರಿದಂತೆ ಅನೇಕ ಗಣ್ಯರು, ನಮ್ಮನ್ನೂ ಒಳಗೊಂಡಂತೆ ಅನೇಕ ಧರ್ಮಗುರುಗಳು, ನ್ಯಾಯಾಧೀಶರುಗಳು, ಸೈನ್ಯದ ಉನ್ನತ ಅಧಿಕಾರಿಗಳು ಇದ್ದರು. ವೇದಿಕೆಯ ಮೇಲೆ ಯಾರೂ ಆಸೀನರಾಗಿರಲಿಲ್ಲ. ವೇದಿಕೆಯ ಹಿಂದುಗಡೆ ಬೃಹದಾಕಾರದ ಹುತಾತ್ಮ ವೀರಯೋಧರ ಭವ್ಯಸ್ಮಾರಕ India Gate ಚಿತ್ರ. ಮಧ್ಯೆ ಹುತಾತ್ಮ ಸೈನಿಕರ ಸಂಕೇತವಾಗಿ ಒಂದು ಬಂದೂಕು ಮತ್ತು ಅದರ ತುದಿಯಲ್ಲಿ ಯೋಧರ ಶಿರಸ್ತ್ರಾಣ ಶೋಭಿಸುತ್ತಿದ್ದವು. ಗವರ್ನರ್ ಆದಿಯಾಗಿ ಗಣ್ಯರೆಲ್ಲ ಒಂದುಗೂಡಿ ವೇದಿಕೆಯ ಮೇಲೆ ಹೋಗಿ, ಕೈಯಲ್ಲಿ ಉರಿಯುವ ಒಂದೊಂದು ಮೇಣದ ಬತ್ತಿಯನ್ನು ಹಿಡಿದುಕೊಂಡು ಸಭಿಕರ ಮುಂದೆ ಕ್ಷಣ ಕಾಲ ನಿಂತು ಹಿಂತಿರುಗಿ ಹುತಾತ್ಮ ಸೈನಿಕರ ಗೌರವಾರ್ಥವಾಗಿ ಸ್ಮಾರಕದ ಮುಂದಿಟ್ಟರು. ಅದೊಂದು ಭಾಷಣದ ಭರಾಟೆ ಇಲ್ಲದ ಭಾವಪೂರ್ಣ ಸ್ಮರಣಾಂಜಲಿ! ದೇಶಭಕ್ತಿಯನ್ನು ಬಿಂಬಿಸುವ ಶುದ್ಧ ಸಾಂಸ್ಕೃತಿಕ ಕಾರ್ಯಕ್ರಮ.

ಯೋಧರಾರೂ ದೇಶಭಕ್ತಿಯ ಬಗೆಗೆ, ತ್ಯಾಗದ ಬಗೆಗೆ ಗಂಟಲು ಹರಿಯುವಂತೆ ಭಾಷಣ ಮಾಡುವುದಿಲ್ಲ. ಅವರ ಬದುಕೇ ದೇಶಭಕ್ತಿ ಮತ್ತು ತ್ಯಾಗದ ವೀರಗಾಥೆ! ಚಳಿಗೆ ನಡುಗದೆ, ಬಿಸಿಲಿಗೆ ಬಾಡದೆ ನಮ್ಮನ್ನೆಲ್ಲ ರಕ್ಷಣೆ ಮಾಡುವ ಅಮರ ವೀರಯೋಧರಿಗೆ ಇದೊಂದು ಗೀತ ನೃತ್ಯ ನಮನ ಎಂದು ಸ್ವಾಗತ ಕೋರಿದವರು ಹೇಳಿದ್ದು ಅರ್ಥಪೂರ್ಣವಾಗಿತ್ತು. “ವಂದೇ ಮಾತರಂ, ಝಂಡಾ ಊಂಚಾ ರಹೇ ಹಮಾರಾ, ಸರ್ ಕಟಾ ಸಕ್ತೇ ಹೈಂ ಲೇಕಿನ್ ಸರ್ ಝಕಾ ಸಕ್ತೇ ನಹೀಂ” ಇತ್ಯಾದಿ ದೇಶಭಕ್ತಿಗೀತೆಗಳನ್ನು ಕಲಾವಿದರು ಹಾಡುವಾಗ ಸುಮಧುರ ಸ್ವರಗಳ ಏರಿಳಿತಕ್ಕನುಗುಣವಾಗಿ ಖ್ಯಾತ ಚಿತ್ರಕಲಾವಿದ ಬಿ.ಕೆ.ಎಸ್. ವರ್ಮಾ ಅವರ ಕೈಬೆರಳುಗಳು ವೇದಿಕೆಯ ಬಲಭಾಗದಲ್ಲಿರಿಸಿದ್ದ ಚಿತ್ರಫಲಕದ ಮೇಲೆ ಲಯಬದ್ಧವಾಗಿ ಹರಿದಾಡುತ್ತಿದ್ದವು, ಸಂಗೀತ ಮುಗಿಯುವ ವೇಳೆಗೆ ಸುಂದರ ಚಿತ್ರವೂ ಮೂಡಿಬರುತ್ತಿತ್ತು! ಅವರ ಚಿತ್ರಗಳಲ್ಲಿ ಕಾಣುತ್ತಿದ್ದುದು: Sweet memories of victory and sad memories of mortyrs!

ನಮ್ಮ ದೇಶದ ಸೈನ್ಯದ ಇತಿಹಾಸದಲ್ಲಿ 1971 ಡಿಸೆಂಬರ್ 16 ಅವಿಸ್ಮರಣೀಯ ದಿನ. ಜನರಲ್ ಜಗ್ ಜಿತ್ ಸಿಂಹ್ ಅರೋರಾ ಅವರ ನೇತೃತ್ವದಲ್ಲಿ ಭಾರತದ ಸೈನ್ಯವು ಪಾಕಿಸ್ತಾನದ ಸೈನ್ಯದ ವಿರುದ್ಧ ಸೆಣಸಾಡಿ ಜಯ ಗಳಿಸಿದ ದಿನ. ಪೂರ್ವ ಪಾಕಿಸ್ತಾನವು ಬಾಂಗ್ಲಾದೇಶವಾಗಿ ರೂಪುಗೊಂಡ ದಿನ. ಇದನ್ನು ವಿಜಯ ದಿವಸ ಎಂದು ಸ್ಮರಣೆ ಮಾಡಲಾಗುತ್ತಿದೆ. ಇಂಥ ಅಪರೂಪದ ಕಾರ್ಯಕ್ರಮಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳೂ ಗೃಹಖಾತೆಯ ಸಚಿವರೂ ಆದ ಆರ್. ಅಶೋಕ್ ಬಂದಿರಲಿಲ್ಲ. ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಅಚ್ಚಾಗಿದ್ದರೂ ಗೈರುಹಾಜರು. ದೇಶವನ್ನು ಸಂರಕ್ಷಿಸುವ ವೀರಯೋಧರನ್ನು ಸ್ಮರಿಸುವ ಕಾರ್ಯಕ್ಕಿಂತ ಮಿಗಿಲಾದ ಇನ್ನಾವ ರಾಜಕಾರ್ಯ ವಿತ್ತೋ ಅವರೇ ಬಲ್ಲರು! ಶಾಸಕರು, ಸಂಸದರು, ಸಚಿವರುಗಳಾಗುವವರು ಸೈನ್ಯದಲ್ಲಿ ಇಂತಿಷ್ಟು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕೆಂಬ ನಿಯಮವನ್ನು ಜಾರಿಗೆ ತಂದರೆ ರಾಜಕಾರಣಿಗಳ ವರ್ತನೆಯಲ್ಲಿ ಒಂದು ಶಿಸ್ತು ಮೂಡೀತು; ಮುಂದಿನ ಚುನಾವಣೆಗಳಲ್ಲಿ ಟಿಕೆಟ್ಟು ಹೋರಾಟಗಾರರ ಸಂಖ್ಯೆ ಕಡಿಮೆಯಾದೀತು; ಹೈಕಮಾಂಡ್ ಗಳ ಕಾರುಬಾರು ಕೊನೆಗೊಂಡೀತು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 27.12.2012