ಮೌಲ್ಯಗಳ ಕುಸಿತ: ನಿಜವೇ?
ಕಳೆದ ವಾರ ಜೈಪುರದಿಂದ ಬೆಂಗಳೂರಿಗೆ ವಾಪಾಸು ಬರುವಾಗ ಮುಂಬೈನಲ್ಲಿ ಉಳಿಯಬೇಕಾಗಿ ಬಂತು. ಶೇರು ಮಾರುಕಟ್ಟೆಯ ಬೆಲೆ ಸೂಚ್ಯಂಕದ ಏಳು ಬೀಳುಗಳು ಮುಂಬಯಿ ಉದ್ಯಮಿಗಳ ರಕ್ತದೊತ್ತಡವನ್ನು ಏರುಪೇರಾಗಿಸಿದ್ದವು. ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪಾರ್ಲಿಮೆಂಟ್ ನಲ್ಲಿ ಮಂಡಿಸಲಿದ್ದ ಬಜೆಟ್‌ವಿಚಾರವೇ ಎಲ್ಲರೂ ಜಪಿಸುತ್ತಿದ್ದ ಪ್ರಣವ ಮಂತ್ರವಾಗಿತ್ತು! ಮಾರುಕಟ್ಟೆಯಲ್ಲಿ ಯಾವುದೇ ವಸ್ತುವಿನ ಬೆಲೆ ಒಂದೇ ತೆರನಾಗಿ ಇರುವುದಿಲ್ಲ. ಗ್ರಾಹಕ ವಸ್ತುಗಳ ಬೇಡಿಕೆ (demand) ಮತ್ತು ಪೂರೈಕೆಗೆ (Supply) ಅನುಗುಣವಾಗಿ ಅವುಗಳ ಬೆಲೆಯಲ್ಲಿ ಏರುಪೇರಾಗುತ್ತದೆ. ಇತ್ತೀಚೆಗೆ ಈರುಳ್ಳಿ ಬೆಲೆ ಏರಿಕೆಯಿಂದ ಜನರು ತತ್ತರಿಸುವಂತಾಯಿತು. ಪತ್ರಿಕೆಗಳ ಮುಖಪುಟದಲ್ಲಿ ಈರುಳ್ಳಿ ಸೇಬಿಗಿಂತ ತುಟ್ಟಿ ಎಂಬ ಸುದ್ದಿಯ ತಲೆಬರೆಹ! ಮಳೆ ಹೆಚ್ಚಾಗಿ ಈರುಳ್ಳಿ ಉತ್ಪಾದನೆ ಕಡಿಮೆ ಆಗಿದ್ದು ಅದಕ್ಕೆ ಕಾರಣ. ಕೆಲವು ವೇಳೆ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಾಗ ಕೇಳುವವರಿಲ್ಲದೆ ಸಾಗಾಣಿಕೆಗೆ ಮಾಡಿದ ವೆಚ್ಚವೂ ಹುಟ್ಟುವುದಿಲ್ಲವೆಂದು ರೈತರು ಪೈರನ್ನು ಕೀಳದೆ ಬಿಟ್ಟ ಪ್ರಸಂಗಗಳೂ ಉಂಟು. ಅಥವಾ ಮಾರುಕಟ್ಟೆಗೆ ತೆಗೆದುಕೊಂಡು ಹೋದ ರೈತರು ಸರಿಯಾದ ಬೆಲೆ ಸಿಗದೆ ದಾರಿಯಲ್ಲಿ ಬಿಸಾಡಿ ಬಂದದ್ದೂ ಉಂಟು. ಈರುಳ್ಳಿ ಬೆಲೆ ಏರಿದರೆ ರೈತರ ಮುಖದಲ್ಲಿ ಮಂದಹಾಸ, ನಗರವಾಸಿಗಳ ಕಣ್ಣಲ್ಲಿ ನೀರು, ಬೆಲೆ ಇಳಿದರೆ ನಗರನಿವಾಸಿಗಳಿಗೆ ಖುಷಿ, ರೈತರ ಕಣ್ಣಲ್ಲಿ ನೀರು. ಈರುಳ್ಳಿ, ದರ ಏರಲಿ, ಇಳಿಯಲಿ, ಅಡುಗೆ ಮನೆಯಲ್ಲಿ ಮಾತ್ರ ಗೃಹಿಣಿಯರಿಗೆ ನಿತ್ಯವೂ ಕಣ್ಣೀರು ತಪ್ಪಿದ್ದಲ್ಲ! ನಾವು ಪಡೆದುಕೊಂಡು ಬಂದಿರುವುದೇ ಇಷ್ಟು ಎಂದು ಅವರ ಗೊಣಗಾಟ. ಅವರ ನಿತ್ಯಜೀವನದ ಕಣ್ಣೀರಿನ ಗೋಳನ್ನು ಕೇಳುವವರಾರು? ಅವರದು ಒಂದು ರೀತಿಯಲ್ಲಿ ಅರಣ್ಯರೋದನ.
ಮೌಲ್ಯ ಎಂಬ ಶಬ್ದಕ್ಕೆ ಎರಡು ಅರ್ಥಗಳಿವೆ ಸಾಮಾನ್ಯ ಅರ್ಥದಲ್ಲಿ ಮೌಲ್ಯ ಎಂದರೆ ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುವಿನ ಬೆಲೆ. ವಿಶೇಷ ಅರ್ಥದಲ್ಲಿ ಮೌಲ್ಯ ಎಂದರೆ ವ್ಯಕ್ತಿ ತನ್ನ ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಆದರ್ಶ ನಡವಳಿಕೆ. ಮಾರುಕಟ್ಟೆಯಲ್ಲಿ ವಿಕ್ರಯಗೊಳ್ಳುವ ವಸ್ತುವಿಗೆ ಬೆಲೆ ಕಟ್ಟಿದಂತೆ, ಜೀವನಮೌಲ್ಯಗಳಿಗೆ ಬೆಲೆ ಕಟ್ಟಲು ಬರುವುದಿಲ್ಲ. ಅವು ಅಮೂಲ್ಯವೆನಿಸಿದರೂ ಜೀವನಮೌಲ್ಯಗಳ ಕುಸಿತ ಎಂಬ ಮಾತು ಆಗಾಗ್ಗೆ ಕೇಳಿಬರುತ್ತದೆ. ಏನಿದು ಮೌಲ್ಯಗಳ ಕುಸಿತ? ಜೀವನಮೌಲ್ಯಗಳಿಗೆ ನಿರ್ದಿಷ್ಟವಾದ ಬೆಲೆ ಕಟ್ಟಲು ಆಗುವುದಿಲ್ಲವೆಂದರೆ ಅವುಗಳ ಕುಸಿತ ಉಂಟಾಗುತ್ತಿದೆಯೆಂದು ಹೇಳುವುದಾಗಲೀ, ಅಳೆಯುವುದಾಗಲೀ ಹೇಗೆ ಸಾಧ್ಯ? ಮಾರುಕಟ್ಟೆಯಲ್ಲಿ ವಿಕ್ರಯಗೊಳ್ಳುವ ವಸ್ತುವಿನಂತೆ ಸತ್ಯ, ನೀತಿ, ಪ್ರಾಮಾಣಿಕತೆ ಮೊದಲಾದ ಜೀವನಮೌಲ್ಯಗಳು ವಿಕ್ರಯಗೊಳ್ಳುವ ವಸ್ತುಗಳಲ್ಲ. ಅವು ವಿಕ್ರಯಗೊಳುವ ವಸ್ತುವಾದಾಗ ಭ್ರಷ್ಟಾಚಾರ ಹೆಡೆಯೆತ್ತಿ ಮೌಲ್ಯಗಳ ಕುಸಿತ ಎಂಬ ಉದ್ಗಾರ ಕೇಳಿಬರುತ್ತದೆ. ಇದರ ಅರ್ಥ ವ್ಯಕ್ತಿಯ ನೈತಿಕತೆಯ ಅಧಃಪತನ, ಜೀವನ ಮೌಲ್ಯಗಳ ಬಗ್ಗೆ ಅವನು ತೋರುವ ಅನಾದರಣೆ, ಇದರಿಂದ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುತ್ತಿದೆಯೆಂದು ಹೇಳಬಹುದೇ ಹೊರತು ಜೀವನಮೌಲ್ಯಗಳೇ ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತಿವೆಯೆಂದು ಹೇಳಲಾಗದು. ಅವುಗಳಿಗೆ ಇರುವ ಬೆಲೆ ಸದಾ ಇದ್ದೇ ಇರುತ್ತದೆ. ಮಾರುಕಟ್ಟೆಯ ಬೇಡಿಕೆಯಂತೆ ವಸ್ತುಗಳ ಪೂರೈಕೆ ಆಗದೇ ಇದ್ದಾಗ ಅವುಗಳ ಬೆಲೆಯಲ್ಲಿ ಏರಿಕೆಯುಂಟಾದಂತೆ ಆದರ್ಶ ವ್ಯಕ್ತಿಗಳ ಕೊರತೆಯಿಂದ ಜೀವನಮೌಲ್ಯಗಳ ಮೇಲಿನ ಗೌರವಭಾವನೆ ಮತ್ತಷ್ಟೂ ಹೆಚ್ಚುತ್ತಾ ಹೋಗುತ್ತದೆ. ಸಮಾಜ ಜೀವನಮೌಲ್ಯಗಳನ್ನು ಅಳವಡಿಸಿಕೊಂಡಿರುವ ವ್ಯಕ್ತಿಗಳನ್ನು ಅರಸುತ್ತದೆ. ಅಂಥವರ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಾ ಸಾಗಿದೆಯೆಂದರೂ ಅವರ ಮೇಲಿನ ಗೌರವ ಭಾವನೆ ಕಡಿಮೆಯಾಗಿಲ್ಲ.
ಭಾರತೀಯರ ಕಾಲಮಾನದ ಲೆಕ್ಕಾಚಾರದ ಪ್ರಕಾರ ಕೃತ, ತ್ರೇತಾ, ದ್ವಾಪರ, ಕಲಿ ಎಂಬ ನಾಲ್ಕು ಯುಗಗಳಿವೆ. ಒಂದೊಂದೇ ಯುಗವನ್ನು ದಾಟುತ್ತಾ ಹೋದಂತೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ತತ್ವಗಳಿಗಾಗಿ ಬದುಕುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆಯೆಂದು ಭಾರತೀಯರ ನಂಬುಗೆ. ಈಗ ಸತ್ಯವನ್ನು ಹೇಳಿದರೆ ಹರಿಶ್ಚಂದ್ರನಂತೆ ಸ್ಮಶಾನ ಕಾಯಬೇಕಾಗುತ್ತದೆ, ಸುಳ್ಳು ಹೇಳದಿದ್ದರೆ ಈ ಕಲಿಕಾಲದಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಲಿಕಾಲದಲ್ಲಿ ಇದೆಲ್ಲಾ ಸಹಜ ಎಂಬ ಧೋರಣೆಯೂ ಇದ್ದಂತೆ ತೋರುತ್ತದೆ. ಇನ್ನು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಪರ್ಸೆಂಟೇಜ್ ಯುಗವೆಂಬ ಐದನೆಯ ಯುಗ ಆರಂಭವಾಗಿದೆ. ಮೌಲ್ಯಾಧಾರಿತ ರಾಜಾಕಾರಣ ಒಂದು ವಿಡಂಬನೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನದ ಮಾತುಗಳು ಕೇಳಿಬಂದರೂ ಇಂದಿನ ರಾಜಕೀಯ ಬಂಡವಾಳ ಶಾಯಿಗಳ ದುಷ್ಟಕೂಟವಾಗಿ ನಿರ್ಲಜ್ಜ ರಾಜಕಾರಣಿಗಳು ಇಂತಿಷ್ಟು ರೇಟಿಗೆಂದು ಬಿಕರಿಯಾಗುತ್ತಿದ್ದಾರೆ. ರಾಜಕೀಯರಂಗದಲ್ಲಿ ನೀತಿವಂತರ ಸಂಖ್ಯೆ ಬೆರಳೆಣಿಕೆಯಷ್ಟು ವಿರಳವಾಗಿದೆ. ರಕ್ತ ಮಾಂಸಗಳನ್ನು ತುಂಬಿಕೊಂಡ ಇಂಥ ವ್ಯಕ್ತಿಯೊಬ್ಬ ಭೂಮಿಯ ಮೇಲೆ ನಡೆದಾಡುತ್ತಿದ್ದ ಎಂದು ಹೇಳಿದರೆ ಮುಂದಿನ ತಲೆಮಾರು ನಂಬಲಾರದು ಎಂದು ಗಾಂಧಿಜೀಯನ್ನು ಕುರಿತು ಐನ್ಸ್ ಸ್ಟೀನ್ ಹೇಳಿದ್ದು ಈ ಕಾರಣಕ್ಕಾಗಿ ಇರಬೇಕು. ಮೌಲ್ಯಗಳಂತೆ ಬದುಕುವ ಜನರ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದ್ದರೂ ಮೌಲ್ಯಗಳಿಗೆ ಇರುವ ಗೌರವ ಮಾತ್ರ ಕಡಿಮೆಯಾಗಲು ಸಾಧ್ಯವಿಲ್ಲ. ಅವುಗಳಿಗೆ ಎಂದೆಂದಿಗೂ ಬೆಲೆ ಇದ್ದೇ ಇರುತ್ತದೆ. ಕುಡುಕನಾದವನಿಗೆ ತಾನು ಕುಡಿಯುವುದು ಸರಿಯಲ್ಲವೆಂದು ಗೊತ್ತಿದ್ದರೂ ಅದು ಅವನ ದೌರ್ಬಲ್ಯ. ತನ್ನ ಮಕ್ಕಳು ಮಾತ್ರ ತನ್ನಂತೆ ಕುಡಿದು ಕೆಟ್ಟು ಹಾಳಾಗಿ ಹೋಗಬಾರದೆಂದು ಆತನೂ ಬಯಸುತ್ತಾನೆ.
ಜೀವನದ ಮೌಲ್ಯಗಳು ಕೇವಲ ಯೋಗಿಗಳಿಗೆ ಮಹಾತ್ಮರಿಗೆ ಮೀಸಲು, ಅವು ಸಂಸಾರಸ್ಥರಿಗೆ ನಿಲುಕದ ಆದರ್ಶಗಳು ಎಂಬ ಭಾವನೆ ಇದೆ. ಇದು ತಪ್ಪು. ಎಲ್ಲರೂ ತಮ್ಮ ತಮ್ಮ ಇತಿಮಿತಿಯಲ್ಲಿ ಆದರ್ಶ ನಡವಳಿಕೆಗಳನ್ನು ಅಳವಡಿಸಿಕೊಳ್ಳುವತ್ತ ಹೆಜ್ಜೆಗಳನ್ನಿಡಲು ಬರುತ್ತದೆ. ಕುಚ್ ಪಾನಾ ಹೋ ತೋ ಕುಚ್ ಖೋನಾ ಪಡತಾ ಹೈಂ ಎಂಬ ಹಿಂದಿ ಗಾದೆ ಮಾತನ್ನು ನೀವು ಕೇಳಿರಬಹುದು. ಒಂದನ್ನು ಗಳಿಸಬೇಕೆಂದರೆ ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಇದರ ಅರ್ಥ. ಯಾವುದನ್ನು ಗಳಿಸಬೇಕು, ಯಾವುದನ್ನು ಕಳೆದುಕೊಳ್ಳಬಹುದು ಎಂಬ ವಿವೇಚನೆ ಮಾತ್ರ ವ್ಯಕ್ತಿಗೆ ಇರಬೇಕಾಗುತ್ತದೆ. ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವ ವ್ಯಕ್ತಿಯು ತನ್ನ ವೈಯಕ್ತಿಕ ಸುಖವನ್ನು (comforts) ಕಳೆದುಕೊಳ್ಳಬೇಕಾಗುತ್ತದೆ. ಆದರೂ ಆತ ನೆಮ್ಮದಿಯಿಂದ (peace) ಬದುಕಬಲ್ಲ. ಸಂಪತ್ತೇ ಸುಖವನ್ನು ತಂದುಕೊಡುತ್ತದೆಯೆಂಬುದು ಸುಳ್ಳು. ಹಣವಿದ್ದರೆ ಹಾಸಿಗೆಯನ್ನು ಕೊಳ್ಳಬಹುದೇ ಹೊರತು ನಿದ್ದೆಯನ್ನು ಕೊಳ್ಳಲು ಬರುವುದಿಲ್ಲ ಎಂಬ ಮಾತನ್ನು ನೀವು ಕೇಳಿರಬಹುದು.
ನಿನ್ನೆ ತಾನೇ ಶಿವರಾತ್ರಿ ಮುಗಿದಿದೆ. ಇಡೀ ರಾತ್ರಿ ಜಾಗರಣೆ ಮಾಡಲು ಜನರು ನಾನಾ ರೀತಿಯ ಆಚರಣೆಗಳನ್ನು ಮಾಡಿದ್ದಾರೆ. ಶಿವರಾತ್ರಿಯಂದು ಎಚ್ಚರದಿಂದಿರಲು ಮೂರೋ ನಾಲ್ಕೋ ಸಿನೆಮಾ ನೋಡಿದರೆ ಅದು ಸಿನಿಮಾರಾತ್ರಿಯಾಗಬಹುದೇ ಹೊರತು ಶಿವರಾತ್ರಿ ಆಗುವುದಿಲ್ಲ. ತೂಕಡಿಸಬಾರದೆಂದು ದೂರದರ್ಶನದ ಕಾರ್ಯಕ್ರಮಗಳನ್ನು ವೀಕ್ಷಿಸಿದರೆ ಅಂತರಂಗದ ದರ್ಶನವಾಗುವುದಿಲ್ಲ. ಹೊರಗೆ ಎಚ್ಚರವಾಗಿರಲು ಈ ತೆರನಾದ ಕಸರತ್ತುಗಳನ್ನು ಮಾಡುವುದಕ್ಕಿಂತ ನಿರಾಳವಾಗಿ ಮಲಗುವುದು ಒಳ್ಳೆಯದು! ಎಚ್ಚರವಾಗಿ ಇರಬೇಕಾದುದು ಹೊರಗಲ್ಲ ಅಂತರಂಗದೊಳಗೆ ಅಂತಹ ಒಳ ಎಚ್ಚರದಿಂದ ಬದುಕುವುದೇ ಜೀವನದ ಗುರಿ. ಆ ಒಳ ಎಚ್ಚರ ಒಂದು ದಿನ ಇದ್ದರೆ ಸಾಲದು; ಅದು ಅನುದಿನವೂ, ಅನುಕ್ಷಣವೂ ಬದುಕಿನುದ್ದಕ್ಕೂ ಕೈಹಿಡಿದು ನಡೆಸುವ ಗೆಳೆಯನಾಗಬೇಕು, ಬಾಳ ಹಾದಿಗೆ ಬೆಳಕೀವ ಕೈದೀವಿಗೆಯಾಗಬೇಕು.
ಶರಣ ನಿದ್ದೆಗೈದಡೆ ಜಪಕಾಣಿರೋ!
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ!
- (ಬಸವಣ್ಣನವರು)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 3.3.2011