ಅಮೇರಿಕನ್ನಡದ ಹರಿಕಾರ
ಸುಸಂಸ್ಕೃತ ಮನೆತನದ ಒಬ್ಬ ಯುವ ಮಹಿಳೆ. ಎರಡು ವರ್ಷದ ಮಗುವಿನ ತಾಯಿ, ಮದುವೆಯಾದ ಮೇಲೂ ಕನ್ನಡಸಾಹಿತ್ಯವನ್ನು ಓದಬೇಕೆಂಬ ತೀವ್ರತರವಾದ ಹಂಬಲ. ಗಂಡ ಇಂಜಿನಿಯರ್ ಆದರೂ ಸಾಹಿತ್ಯದ ಬಗ್ಗೆ ಒಲವು. ಆದಕಾರಣ ಗಂಡನ ಒಪ್ಪಿಗೆಯನ್ನು ಸುಲಭವಾಗಿ ಪಡೆದು ಕಾಲೇಜು ಸೇರಿದಳು. ಬೆಳಗಿನ ಹೊತ್ತು ಗೃಹಕೃತ್ಯದ ಕೆಲಸಗಳನ್ನು ಮಾಡಿಯಾದ ಮೇಲೆ ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನ್ನ ತಮ್ಮನಿಗೆ ವಹಿಸಿ ಕಾಲೇಜಿಗೆ ಓದಲು ಹೋಗುತ್ತಿದ್ದಳು. ಸಂಜೆ ವಾಪಾಸು ಮನೆಗೆ ಬರುತ್ತಲೇ ಮಗು ಬಾಗಿಲ ಬಳಿ ಬಂದು ಕಿಲಕಿಲನೆ ನಗುತ್ತಾ ಅಮ್ಮನ ಕೊರಳನಾಲಂಗಿಸುತ್ತಿತ್ತು. ಹೀಗೆ ಸಾಗಿತ್ತು ಅವಳ ಪುಟ್ಟ ಸಂಸಾರ. ಒಂದು ವರ್ಷ ಕಳೆಯಿತು. ಇನ್ನೇನು ಆರೇಳು ತಿಂಗಳಲ್ಲಿ ಆಕೆಯ ಕಾಲೇಜು ಅಧ್ಯಯನ ಮುಗಿಯಲಿತ್ತು. ಅಷ್ಟರಲ್ಲಿ ಕಾದಿತ್ತು ಘನ ಘೋರ ದುರಂತ. ಎಂದಿನಂತೆ ಆಕೆ ಮಗುವನ್ನು ತನ್ನ ತಮ್ಮನ ವಶಕ್ಕೆ ಕೊಟ್ಟು ಕಾಲೇಜಿಗೆ ಹೋಗಿದ್ದಳು. ತಮ್ಮನು ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ಕತೆ ಪುಸ್ತಕವನ್ನು ಓದುತ್ತಾ ತಾನೂ ಮಲಗಿದ್ದನು. ಯಾವಾಗಲೋ ಗಾಢವಾದ ನಿದ್ರೆ ಆವರಿಸಿತು. ನಿದ್ರೆಯಿಂದ ಎಚ್ಚೆತ್ತು ನೋಡಿದಾಗ ಮಗು ಪಕ್ಕದಲ್ಲಿರಲಿಲ್ಲ. ಮನೆಯ ಬಾಗಿಲು ತೆರೆದಿತ್ತು. ಮಗು ಪುಟ್ಟ ಹೆಜ್ಜೆಗಳನ್ನಿಡುತ್ತಾ ಅರೆ ತೆರೆದಿದ್ದ ಬಾಗಿಲನ್ನು ತಳ್ಳಿಕೊಂಡು ಹೊರಗೆ ಹೋಗಿ ಆಟವಾಡುತ್ತಿರಬಹುದೆಂದು ನೋಡಿದರೆ ಎಲ್ಲಿಯೂ ಅದರ ಸುಳಿವಿಲ್ಲ, ತಮ್ಮನಿಗೆ ದಿಗಿಲಾಯಿತು. ಸಂಜೆ ಮನೆಗೆ ಬಂದ ಅಕ್ಕನಿಗೆ ಬರಸಿಡಿಲು ಎರಗಿದಂತಾಯಿತು. ಬಾಗಿಲು ತೆರೆಯುತ್ತಿದ್ದಂತೆಯೇ ಓಡೋಡಿ ಬಂದು ನಗುಮುಖದಿಂದ ಸ್ವಾಗತಿಸುತ್ತಿದ್ದ ತನ್ನ ಕರುಳ ಕುಡಿ ಕಣ್ಮರೆಯಾಗಿರುವ ವಿಷಯ ತಿಳಿದು ಕುಸಿದುಬಿದ್ದಳು. ಸಾವರಿಸಿಕೊಂಡು ಹುಚ್ಚಿಯಂತೆ ಬೀದಿ ಬೀದಿ ಅಲೆದಳು, ಮನೆ ಮನೆ ತಿರುಗಿದಳು. ಸಂಜೆ ವೇಳೆ ಮನೆಗೆ ಬಂದ ಗಂಡ ದಿಙ್ಮೂಢನಾದ. ಗಂಡಹೆಂಡತಿ ಹತ್ತಿರದ ಪೋಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದರು. ಮಗು ಕಾಣೆಯಾಗಿದೆ ಎಂದು ರೇಡಿಯೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಣೆ ಕೊಟ್ಟರು. “ಸ್ಕೂಟರಿನ ಮೇಲೆ ನಗರದ ಬೀದಿ ಬೀದಿಗಳನ್ನೆಲ್ಲಾ ಸುತ್ತಿದರು. ಕಂಡ ಕಂಡ ಮಕ್ಕಳ ಮುಖವನ್ನೆಲ್ಲಾ ನೋಡಿದರು. ನಿಷ್ಕರುಣವಾದ ರಾತ್ರಿ ಕವಿಯಿತು. ಆಕೆಗೆ ಅನ್ನ ಸೇರಲಿಲ್ಲ, ನಿದ್ದೆ ಬರಲಿಲ್ಲ. ಆಕೆಯ ಕಣ್ಣೀರಿನಿಂದ ತಲೆದಿಂಬು ನೆನೆಯಿತು. ತನ್ನ ಮಗು ಎಲ್ಲಿ ಹೋಗಿರಬಹುದು, ಏನಾಗಿರಬಹುದು. ಅದನ್ನು ಯಾರು ಒಯ್ದಿರಬಹುದು, ಒಯ್ದು ಏನು ಮಾಡಿರಬಹುದು, ಆ ಮಗು ಹೇಗೆ ಪರಿತಪಿಸುತ್ತಿರಬಹುದು - ಇತ್ಯಾದಿ ಯೋಚನೆಗಳು ಆಕೆಯನ್ನು ಜರ್ಝರಿತಳನ್ನಾಗಿ ಮಾಡಿದವು. ಆಕೆ ಕಂಡ ಕಂಡ ದೇವರಿಗೆ ಕೈಮುಗಿದಳು. ಒಂದಷ್ಟು ದಿನ ಅನಾಥಾಲಯಗಳನ್ನೂ, ಆಸ್ಪತ್ರೆಗಳನ್ನೂ ನೋಡಿ ಬಂದಳು. ಏನಾದರೂ ಮಗುವಿನ ಪತ್ತೆಯಾಗಲಿಲ್ಲ”
ಇದು ಯಾವುದೋ ಕಾಲ್ಪನಿಕ ಕತೆಕಾದಂಬರಿಯ ಕಥಾನಿರೂಪಣೆಯಲ್ಲ, ರಾಷ್ಟ್ರಕವಿ ಜಿ.ಎಸ್.ಎಸ್ ಅವರ ಅಸಮಗ್ರ ಆತ್ಮಕಥನ “ಚತುರಂಗದ ಕೊನೆಯ ಪುಟಗಳಲ್ಲಿ ದಾಖಲಾಗಿರುವ ಶ್ರೀಮತಿ ನಾಗಲಕ್ಷ್ಮೀ ಮತ್ತು ಶಿಕಾರಿಪುರ ಹರಿಹರೇಶ್ವರ ದಂಪತಿಗಳ ಜೀವನದ ಸತ್ಯಘಟನೆ. ಜಿ.ಎಸ್.ಎಸ್ ಅವರ ಚತುರಂಗ ಅವರ ವ್ಯಕ್ತಿಗತ ಜೀವನದ ಅಸಮಗ್ರ ಆತ್ಮಕಥನವಷ್ಟೇ ಅಲ್ಲ ಅವರ ಒಡನಾಟಕ್ಕೆ ಬಂದ ಅನೇಕರ ಜೀವನದ ಅಸಮಗ್ರ ಕಥಾನಕವೂ ಹೌದು. ನಾಲ್ಕು ಅಧ್ಯಾಯಗಳ ಪುಟ್ಟ ಕೃತಿಯಾದ ಅವರ ಚತುರಂಗ ಜೀವನವೆಂಬ ಚದುರಂಗದಾಟದ ಒಂದು ಸೀಳುನೋಟ. ಜೀವನವೆಂಬ ಚದುರಂಗದಾಟವನ್ನು ವ್ಯಕ್ತಿ ಸ್ವತಃ ಆಡುತ್ತಾನೋ ಅಥವಾ ಅವನನ್ನು ಒಂದು ದಾಳವನ್ನಾಗಿ ಮಾಡಿಕೊಂಡು ವಿಧಿ ಆಡಿಸುತ್ತದೆಯೋ ನಿಖರವಾಗಿ ಹೇಳುವುದು ಕಷ್ಟ.
ನಾಳೆ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ. ಈ ಸಂದರ್ಭದಲ್ಲಿ ಅಮೇರಿಕೆಯಲ್ಲಿ ಕನ್ನಡಿಗರ ಸಂಘಟನೆಗೆ ಮತ್ತು ಕನ್ನಡ ನುಡಿಯ ಬೆಳವಣಿಗೆಗೆ ದುಡಿದವರಲ್ಲಿ ಪ್ರಮುಖರು ಯಾರು? ಥಟ್ ಅಂತ ಹೇಳಿ ಎಂದು ದೂರದರ್ಶನದ ಕಾರ್ಯಕ್ರಮದಲ್ಲಿ ಡಾ. ಸೋಮೇಶ್ವರರು ಕೇಳಿದ್ದರೆ ನಿರ್ವಿವಾದವಾಗಿ ಥಟ್ ಎಂದು ಬರುತ್ತಿದ್ದ ಉತ್ತರ: ಶಿಕಾರಿಪುರದ ಹರಿಹರೇಶ್ವರ. ಅವರ ಪೂರ್ವಜರು ಶಿಕಾರಿಪುರದವರು. ಹುಟ್ಟಿ ಬೆಳೆದದ್ದು ಶಿವಮೊಗ್ಗದಲ್ಲಿ. ತಾಂತ್ರಿಕ ಶಿಕ್ಷಣ ಪಡೆದದ್ದು ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗನಿಮಿತ್ತ ವಲಸೆಹೋಗಿದ್ದು ಅಮೇರಿಕೆಗೆ. ಜೀವನದ ಸಂಧ್ಯಾಕಾಲದಲ್ಲಿ ನೆಲೆಸಿದ್ದು ಮೈಸೂರಿನಲ್ಲಿ ದಿನನಿತ್ಯ ನಾವು ಓಡಾಡುವ ಸ್ಥಳದವರೇ ಆಗಿದ್ದರೂ ಅವರ ನಮ್ಮ ಮೊಟ್ಟಮೊದಲ ಭೇಟಿಯಾಗಿದ್ದು ದೂರದ ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಶಿಷ್ಯರೊಬ್ಬರ ಮನೆಯಲ್ಲಿ, ವೃತ್ತಿಯಿಂದ ಇಂಜಿನಿಯರಾಗಿದ್ದರೂ ಪ್ರವೃತ್ತಿಯಿಂದ ಅವರು ಅಪ್ಪಟ ಕನ್ನಡ ಪ್ರೇಮಿ ಆಗಿದ್ದರು. ಅವರ ಮದುವೆಯ ಮಾರನೆಯ ದಿನ ಬೀಗರ ಔತಣದ ದಿವಸ ನಡೆದದ್ದು ಇಂದಿನಂತೆ ಸಂಗೀತದ ಆರ್ಕೆಸ್ಟ್ರಾ ಅಲ್ಲ: ಸಾಹಿತಿಗಳ ಮಿಲನ, ಕವಿ ಸಮ್ಮೇಳನ. ನನಗಿಂತ ಹೆಚ್ಚಾಗಿ ಅವರು ಪುಸ್ತಕಗಳನ್ನು ಪ್ರೀತಿಸುತ್ತಿದ್ದರು ಎಂದು ಅವರ ಮಡದಿ ನಾಗಲಕ್ಷ್ಮೀ ಸ್ವತಃ ಒಂದೆಡೆ ಬರೆದಿದ್ದಾರೆ.
ಪುಸ್ತಕಗಳ ವಿಚಾರವಾಗಿ ಹೇಳುವುದಾದರೆ 1)ಕೆಲವರು ಓದುವುದಿಲ್ಲ, ಬರೆಯುತ್ತಾರೆ. 2)ಕೆಲವರು ಓದುತ್ತಾರೆ, ಬರೆಯುವುದಿಲ್ಲ, 3)ಕೆಲವರು ಓದುತ್ತಾರೆ, ಬರೆಯುತ್ತಾರೆ. 4)ಕೆಲವೇ ಕೆಲವರು ಓದುತ್ತಾರೆ, ಬರೆಯುತ್ತಾರೆ ಮತ್ತು ಕೊಂಡು ಹಂಚುತ್ತಾರೆ. ಇವರಲ್ಲಿ ಹರಿಹರೇಶ್ವರರು ನಾಲ್ಕನೆಯ ವರ್ಗಕ್ಕೆ ಸೇರಿದವರು ಎಂಬ ಸಂಗತಿ ಕನ್ನಡ ಸಾಹಿತಿಗಳೆಲ್ಲರಿಗೂ ಗೊತ್ತು. ಹಿಂದಿನ ಕಾಲದಲ್ಲಿ ತಾಳೆಗರಿಗಳನ್ನು ಪ್ರತಿಲಿಪಿಮಾಡಿಸಿ ಹಂಚಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆ ಇತ್ತು. ಅಂತಹ ಪುಣ್ಯಕಾರ್ಯವನ್ನು ಹರಿಹರೇಶ್ವರರು ಆಧುನಿಕ ಕಾಲದಲ್ಲಿ ಪುಣ್ಯಭಾಜನರಾಗಲು ಬಯಸದೆ ಕನ್ನಡದ ಮೇಲಿನ ಪ್ರೀತಿಯಿಂದ ಪುಸ್ತಕಗಳನ್ನು ಕೊಂಡು, ಮನೆಗೆ ಬಂದ ಅತಿಥಿಗಳಿಗೆ, ಬಂಧುಗಳಿಗೆ, ಆತ್ಮೀಯ ಗೆಳೆಯರಿಗೆ ಉಡುಗೊರೆಯಾಗಿ ಕೊಡುತ್ತಿದ್ದರು. ಅಷ್ಟೇ ಅಲ್ಲ ಅವರು ಓದುವಂತೆ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರ ನಾದಿನಿ ಶ್ರೀಮತಿ ಸತ್ಯಮತಿ ಜೈಶಂಕರ್ ಅವರಿಂದ ನಮಗೆ ಒಂದು ಪತ್ರ ಬಂದಿತ್ತು. ಆಗ ಅಮೇರಿಕದಲ್ಲಿ ನೆಲೆಸಿರುವ ಹರಿಹರೇಶ್ವರರ ಕಿರಿಯ ಮಗಳು ಸುಮನಾ ಮೈಸೂರಿಗೆ ಬಂದಿದ್ದಳಂತೆ. ಅಪರೂಪಕ್ಕೆ ಮಗಳು ಬಂದಿದ್ದಾಳೆಂದು ಅವರು ಮನೆಯಲ್ಲಿ ಔತಣ ಏರ್ಪಡಿಸಿ ಬಂಧುಬಾಂಧವರನ್ನು ಆಹ್ವಾನಿಸಿದ್ದರು. ಔತಣ ಮುಗಿದ ಮೇಲೆ ಎಲ್ಲರ ಕೈಯಲ್ಲಿ ಎರಡೆರಡು ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟು ವಿದಾಯ ಹೇಳಿದರಂತೆ. ಆ ಪುಸ್ತಕಗಳೇ ನಮ್ಮ ಈ ಅಂಕಣದಲ್ಲಿ ಮೂಡಿ ಬಂದ ಲೇಖನಗಳ ಸಂಗ್ರಹ: 1)ಬಿಸಿಲು ಬೆಳದಿಂಗಳು ಮತ್ತು 2)ಶರೀರಸೌಂದರ್ಯ v/s ಆತ್ಮಸೌಂದರ್ಯ, ಮಠದಿಂದ ಕೊಂಡು ತರಿಸಿದ್ದ 200 ಪ್ರತಿಗಳು! ಈ ಮೂಲಕ ಅವರು ಹೊಟ್ಟೆಗಷ್ಟೇ ರಸದೌತಣವಲ್ಲದೆ, ಬುದ್ಧಿಗೂ ರಸದೌತಣ ಬಡಿಸಿದ್ದಾರೆ ಎಂದು ಅವರ ನಾದಿನಿ ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಓದುಗರ ಇಂತಹ ಮೆಚ್ಚುಗೆಯ ಓಲೆಗಳೇ ನಮ್ಮೀ ಅಂಕಣ ಬರಹಕ್ಕೆ ಸ್ಫೂರ್ತಿ. ಅವರೆಲ್ಲರಿಗೂ ಮಾರುತ್ತರ ಬರೆಯಲಾಗದಿದ್ದುದಕ್ಕೆ ಪರಿತಾಪ.
ಹರಿಹರೇಶ್ವರರು ಅಮೇರಿಕೆಗೆ ಹೋಗಿದ್ದು ಪ್ರತಿಭಾಪಲಾಯನವಾಗಲಿಲ್ಲ, ಅವರು 80 ರ ದಶಕದಲ್ಲಿ ಹೊರತರುತ್ತಿದ್ದ ಅಮೇರಿಕನ್ನಡ ನಿಯತಕಾಲಿಕ ಪತ್ರಿಕೆ ಅಲ್ಲಿದ್ದ ಕನ್ನಡ ಪ್ರತಿಭೆಗಳ ವಿಕಸನಕ್ಕೆ ದಾರಿಯಾಯಿತು. ಅಮೇರಿಕದಲ್ಲಿ ಅವರು ಅನೇಕ ಸೇತುವೆಗಳನ್ನು ಕಟ್ಟಿದ್ದರೂ ಅವರು ವಿಶೇಷವಾಗಿ ಕಟ್ಟಿದ್ದು ಅಲ್ಲಿದ್ದ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಸಾಂಸ್ಕೃತಿಕ ಸೇತುವೆ! 40 ವರ್ಷಗಳ ಹಿಂದೆ ತಮ್ಮ ಪುಟ್ಟ ಮಗನನ್ನು ಕಳೆದುಕೊಂಡು ಇತ್ತೀಚೆಗೆ ತಮ್ಮ ಇಳಿವಯಸ್ಸಿನಲ್ಲಿ ಪತಿಯನ್ನೂ ಕಳೆದುಕೊಂಡ ಶ್ರೀಮತಿ ನಾಗಲಕ್ಷ್ಮೀ ಕಳೆದ ಶಿವರಾತ್ರಿಯ ಮಾರನೆಯ ದಿನದಂದು ನಮ್ಮನ್ನು ಮೈಸೂರಿನಲ್ಲಿ ಭೇಟಿಯಾಗಿದ್ದರು. ನಾಳೆಯ ದಿನ ಅವರ ಪತಿಯ ಜನ್ಮದಿನ. ಅಂದು ನಮ್ಮಿಂದ ಬಿಡುಗಡೆ ಮಾಡಿಸಲು ಬಯಸಿದ ಅವರ ದಿವಂಗತ ಪತಿಯ ಅಪ್ರಟಿತ ಲೇಖನಗಳನ್ನು ಅವರೇ ಸಂಪಾದಿಸಿ ಪ್ರಕಟಿಸಿದ “ನಮ್ಮ ಕಾಶ್ಮೀರ” ಮತ್ತು ಅವರ ಆತ್ಮೀಯ ಸ್ನೇಹಿತರು ಅಗಲಿ ಹೋದ ಗೆಳೆಯನನ್ನು ಕುರಿತು ಬರೆದ "ಸ್ನೇಹದಲ್ಲಿ ನಿಮ್ಮ ಹರಿ” ಎಂಬ ಪುಸ್ತಕಗಳನ್ನು ಕೊಟ್ಟರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾಹಿತ್ಯಕ ವಿಷಯವಾದ ಸಂವಾದ, ಮಾತಿನ ಮಧ್ಯೆ ಅಮೇರಿಕದಲ್ಲಿ ನೆಲೆಸಿರುವ ಅವರ ಹೆಣ್ಣುಮಕ್ಕಳಾದ ನಂದಿನಿ ಮತ್ತು ಸುಮನಾ ಪ್ರಸ್ತಾಪಗೊಂಡರು. ಅಪ್ಪಿತಪ್ಪಿಯೂ ಕಳೆದುಹೋದ ಅವರ ಮಗನ ವಿಚಾರವಾಗಿ ಹೇಳಲಿಲ್ಲ, ಅವರ ಹೃದಯದಲ್ಲಿ ಎಷ್ಟೇ ನೋವು ಮಡುಗಟ್ಟಿದ್ದರೂ ಮುಖ ಮಾತ್ರ ನಿರ್ಮೋಹ ಭಾವದ ನಿಸ್ತರಂಗ ಸರೋವರದಂತಿತ್ತು. ಮಾರನೆಯ ದಿನ ಚತುರಂಗ ಪುಸ್ತಕದ ಕೊನೆಯ ಪುಟಗಳಲ್ಲಿರುವ ಮೇಲಿನ ದುರಂತ ಕಥೆಯನ್ನು ವಿವರವಾಗಿ ಓದುವಾಗ ಸಿನಿಮೀಯ ಮಾದರಿಯಲ್ಲಿ ಕಣ್ಮರೆಯಾದ ಅವರ ಮಗ ಈಗಲಾದರೂ ತಾಯ ಮಡಿಲನ್ನು ಸೇರುವಂತೆ ದೇವರು ಅನುಗ್ರಹಿಸಬಾರದೇ ಎಂದು ನಮ್ಮ ಮನಸ್ಸು ತುಂಬಾ ಚಡಪಡಿಸುತ್ತಿತ್ತು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 10.3.2011.