ಬದುಕಿನ ಚದುರಂಗದಾಟ
ತಂದೆ ತಾಯಿ ಮತ್ತು ತೊಟ್ಟಿಲ ಕೂಸು. ಮನೆಯಲ್ಲಿ ಮೂವರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ತಂದೆ ಹಳ್ಳಿಯ ಶಾಲೆಯೊಂದರಲ್ಲಿ ಶಿಸ್ತಿನ ಮಾಸ್ತರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಾಸ್ತರು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋದರು. ಅವರ ಮಡದಿ ಮಗುವಿಗೆ ಹಾಲುಣಿಸಿ ತೊಟ್ಟಿಲಲ್ಲಿ ಮಲಗಿಸಿ ಬೆಳಗಿನ ಎಲ್ಲ ಮನೆಗೆಲಸಗಳನ್ನು ಮುಗಿಸಿ ಬಾಗಿಲನ್ನು ಎಳೆದುಕೊಂಡು ಹತ್ತಿರದ ಬಾವಿಯಿಂದ ನೀರು ಸೇದಿಕೊಂಡು ಬರಲು ಹೋದಳು. ಹೋದ ಕೆಲವೇ ನಿಮಿಷಗಳಲ್ಲಿ ಪಕ್ಕದ ಹುಲ್ಲುಜೋಪಡಿಗೆ ಬೆಂಕಿ ಹತ್ತಿಕೊಂಡಿತು. ಗಾಳಿಯ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಬೆಂಕಿ ಭುಗಿಲೆದ್ದು ಅಕ್ಕಪಕ್ಕದ ಮನೆಗಳೆಲ್ಲವೂ ಹೊತ್ತಿ ಉರಿಯಲಾರಂಭಿಸಿದವು. ಬೆಂಕಿಯ ಒಂದು ಉಂಡೆ ತೊಟ್ಟಿಲಲ್ಲಿ ಮಗು ಮಲಗಿದ್ದ ಮನೆಯ ಮೇಲೂ ಬಿದ್ದು ಮೇಲುಛಾವಣಿಗೆ ಹೊದಿಸಿದ್ದ ಗಳಗಳು ಬೆಂಕಿ ಹತ್ತಿ ಒಂದೊಂದೇ ಉರಿಯುತ್ತಾ ಬೀಳತೊಡಗಿದವು. ಬೆಂಕಿಯ ಜ್ವಾಲೆ ಮತ್ತು ಹೊಗೆ ಮುಗಿಲೇರಿದಂತೆ ಹಳ್ಳಿಗರ ಆರ್ತನಾದ ಮತ್ತು ಕೂಗು ಸಹ ಮುಗಿಲುಮುಟ್ಟಿತು. ಬೆಂಕಿಯನ್ನು ನಂದಿಸಲು ಹಳ್ಳಿಗರು ಹರಸಾಹಸ ಮಾಡುತ್ತಿದ್ದರು. ಬಾವಿಗೆ ನೀರು ಸೇದಲು ಹೋಗಿದ್ದ ತಾಯಿಗೆ ದಿಗಿಲಾಯಿತು. ಓಡೋಡಿ ಬಂದಳು. ಯಾರು ಎಷ್ಟೇ ಹೇಳಿದರೂ ಲೆಕ್ಕಿಸದೆ ನನ್ನ ಕಂದಾ.. ಎಂದು ಧಗಧಗಿಸುವ ಬೆಂಕಿಯ ಮಧ್ಯೆ ಮನೆಯೊಳಗೆ ನುಗ್ಗಿದಳು. ತೊಟ್ಟಿಲಲ್ಲಿದ್ದ ತನ್ನ ಮಗುವನ್ನು ಎತ್ತಿಕೊಂಡು ಹೊರಬಂದಳು. ಮನೆಯೊಳಗೆ ಆವರಿಸಿದ್ದ ದಪ್ಪನೆಯ ಹೊಗೆಯಿಂದ ಆಕೆಯ ಮುಖ ಕರಿಬಡಿದಿತ್ತು. ಅಳುತ್ತಿದ್ದ ಮಗುವನ್ನು ತನ್ನೆದೆಯಲ್ಲಿ ಬಿಗಿಯಾಗಿ ಅಪ್ಪಿಕೊಂಡು ಸೀರೆಯ ಅಂಚಿಗೆ ಹತ್ತಿಕೊಂಡ ಬೆಂಕಿಯನ್ನು ಕೊಡವಿಕೊಂಡಳು. ಜಾತ್ರೆಯಲ್ಲಿ ಕೆಂಡಹಾಯ್ದ ವೀರಭದ್ರೆ ಅವಳಾಗಿದ್ದಳು! ಏದುಸಿರು ಬಿಡುತ್ತಾ ಹುಚ್ಚಿಯಂತೆ ಬೀದಿಗಳಲ್ಲಿ ಓಡಿ ಊರ ಹೊರವಲಯದಲ್ಲಿದ್ದ ಮರದ ಕೆಳಗೆ ಕುಳಿತುಕೊಂಡು ಮಗುವನ್ನು ಸಂತೈಸತೊಡಗಿದಳು.
ಅರ್ಧಗಂಟೆಯಲ್ಲಿ ಅರ್ಧಕ್ಕರ್ಧ ಊರು ಸುಟ್ಟುಹೋಗಿ ಸ್ಮಶಾನವಾಗಿತ್ತು. ಸುದ್ದಿ ಕೇಳಿ ಶಾಲೆಯ ಮಾಸ್ತರಿಗೆ ಗರಬಡಿದಂತಾಯಿತು. ಓಡಿ ಬಂದು ನೋಡಿದರೆ ಮನೆಯ ಛಾವಣಿ ಕುಸಿದುಬಿದ್ದು ಸುಟ್ಟು ಕರಕಲಾಗಿತ್ತು. ತಾಯಿಮಗು ಇರಲಿಲ್ಲ. ಆಕಾಶವೇ ಕಳಚಿಬಿದ್ದಂತಾಗಿದ್ದ ಶಾಲಾಮಾಸ್ತರರಿಗೆ ನಂತರ ತಾಯಿಮಗು ಸುರಕ್ಷಿತವಾಗಿದ್ದಾರೆಂದು ಊರಜನರಿಂದ ತಿಳಿದು ಮರುಜೀವ ಬಂದಂತಾಯಿತು. ಆದರೆ ಆ ತಾಯಿ ಬಹಳ ಕಾಲ ಬದುಕಲಿಲ್ಲ. ಆರು ವರುಷಗಳ ನಂತರ ಅಸು ನೀಗಿದಳು. ಅವಳ ಮಗು ಬೇರೆ ಯಾರೂ ಅಲ್ಲ: ಕನ್ನಡ ಸಾರಸ್ವತ ಲೋಕದ ಮಕುಟ ಮಣಿಯಾದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು.
ಕಳೆದ ವಾರದ ಅಂಕಣದಲ್ಲಿ ಪ್ರಸ್ತಾಪಿಸಿದ ಅವರ ಅಸಮಗ್ರ ಆತ್ಮಕತೆ ಚತುರಂಗದ ಆರಂಭದ ಪುಟಗಳಲ್ಲಿ ಈ ಘಟನೆ ದಾಖಲಾಗಿದೆ. ಎರಡು ವಾರಗಳ ಹಿಂದೆ ಆರ್.ಜಿ.ಹಳ್ಳಿ ನಾಗರಾಜ್ ಕಳುಹಿಸಿಕೊಟ್ಟಿದ್ದ ಈ ಪುಸ್ತಕ ಮೈಸೂರಿನಿಂದ ಶಿವಮೊಗ್ಗೆಗೆ ಕಾರಿನಲ್ಲಿ ಪಯಣಿಸುವಾಗ ನಮ್ಮನ್ನು ಆಕರ್ಷಿಸಿತು. ಓದಲು ಕೈಗೆತ್ತಿಕೊಂಡದ್ದಷ್ಟೇ ನೆನಪು. ದಾರಿಯಲ್ಲಿ ಅದೆಷ್ಟು ವಾಹನಗಳು ಹಾಯ್ದು ಹೋದವೋ; ಅದೆಷ್ಟು ಊರುಗಳನ್ನು ದಾಟಿ ಬಂದೆವೋ, ಕತ್ತೆತ್ತಿಯೂ ಸಹ ನೋಡಲಿಲ್ಲ. ಕಾಲದ ಪರಿವೆಯಿಲ್ಲದೆ ಆರಂಭದ ಪುಟದಿಂದ ಕೊನೆಯವರೆಗೆ ಓದಿಸಿಕೊಂಡು ಹೋಯಿತು. ಕನ್ನಡ ಸಾರಸ್ವತಲೋಕದ ಹಿರಿಯ ಜೀವವೊಂದು ಕ್ರಮಿಸಿದ ಗತಕಾಲದ ದಾರಿಯಲ್ಲಿ ನಮ್ಮ ಮನಸ್ಸು ಸಾಗಿತ್ತು. ಅಂದಿನ ಕೆಲವು ಹೃದಯವಿದ್ರಾವಕ ಘಟನಾವಳಿಗಳು ಮನಸ್ಸನ್ನು ಘಾಸಿಗೊಳಿಸಿದರೆ ಇನ್ನು ಕೆಲವು ಹಾಸ್ಯ ಪ್ರಸಂಗಗಳು ಮನಸ್ಸಿಗೆ ಕಚಕುಳಿಯನ್ನಿಟ್ಟು ನಗುವಂತೆ ಮಾಡಿದವು. ಈ ಕಿರುಹೊತ್ತಿಗೆಯಲ್ಲಿ ಎಳೆಯಂದಿನ ಬೆಳಕು, ಉದ್ಯೋಗಪರ್ವ, ಕಾವ್ಯಾಲಾಪ ಮತ್ತು ಬಿಡಿನೆನಪಿನ ದೀಪಗಳು ಎಂದು ನಾಲ್ಕು ಅಧ್ಯಾಯಗಳಿವೆ. ಈ ಕಾರಣದಿಂದ ಜಿ.ಎಸ್.ಎಸ್ ತಮ್ಮ ಈ ಆತ್ಮಕಥನಕ್ಕೆ ಚತುರಂಗ ಎಂದು ಹೆಸರಿಟ್ಟಿದ್ದರೂ ಇದರ ಪರಿಷ್ಕೃತ ಆವೃತ್ತಿಯನ್ನು ಚದುರಂಗ ಎಂಬ ಹೊಸ ಶೀರ್ಷಿಕೆಯಿಂದ ಪುನರ್ಮುದ್ರಿಸಿದರೂ ಅರ್ಥಪೂರ್ಣ. ಇದರಲ್ಲಿ ಅವರ ಮತ್ತು ಅವರ ನಿಕಟವರ್ತಿಗಳ ಜೀವನಕ್ಕೆ ಸಂಬಂಧಪಟ್ಟಂತೆ ಅನೇಕ ಏಳುಬೀಳುಗಳ ಕುತೂಹಲಕರ ಘಟನೆಗಳ ನಿರೂಪಣೆ ಇದೆ. ಅವರು ರಚಿಸಿರುವ ಅನೇಕ ಪ್ರಸಿದ್ದ ಕವಿತೆಗಳಿಗೆ ದೊರೆತ ಪ್ರೇರಣೆಯ ಮೂಲಸ್ರೋತ ಇಲ್ಲಿದೆ. ಜಿ.ಎಸ್.ಎಸ್ ಅವರ ಕಾವ್ಯಾಂತರಂಗವನ್ನು ತಿಳಿದುಕೊಳ್ಳಬಯಸುವ ಕಾವ್ಯಾಸಕ್ತರಿಗೆ ಇದನ್ನು ಓದಿದ ಮೇಲೆ ಉಂಟಾಗುವ ರಸಾಸ್ವಾದವೇ ಬೇರೆ.
ಹಿರಿಯ ಕನ್ನಡ ಸಾಹಿತಿಗಳು ಸರಸ್ವತೀಪುತ್ರರು, ಲಕ್ಷ್ಮೀಪುತ್ರರಲ್ಲ. ಈಗಿನಂತೆ ಅವರಿಗೆ ಯು.ಜಿ.ಸಿ ವೇತನ ಬರುತ್ತಿರಲಿಲ್ಲ. ಬಹಳ ಕಷ್ಟದಿಂದ ಜೀವನ ನಡೆಸಿ ಸಾಹಿತ್ಯ ಸೇವೆ ಮಾಡಿದವರು. ವರಕವಿ ದ.ರಾ ಬೇಂದ್ರೆಯವರು ಆಗಾಗ ಬೆಂದು ಬೆಂದು ಬೇಂದ್ರೆ ಆದೆ ಎಂದು ಹೇಳುತ್ತಿದ್ದರಂತೆ. ವೈಯಕ್ತಿಕ ಬದುಕಿನ ಹಾದಿ ಅವರಿಗೆಂದೂ ಹೂವಿನ ಹಾಸಾಗಿರಲಿಲ್ಲ, ಎತ್ತ ಹೊರಳಿದರೂ ಬರೀ ಮುಳ್ಳುಗಳೇ! ಶಬ್ದಬ್ರಹ್ಮರೆಂದೇ ಹೆಸರಾದ ಪ್ರೊ. ಜಿ. ವೆಂಕಟಸುಬ್ಬಯ್ಯನವರು 40 ರ ದಶಕದಲ್ಲಿ ದಾವಣಗೆರೆಯ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿದ್ದರು. ಆಗ ಅವರಿಗೆ ಬರುತ್ತಿದ್ದ ವೇತನ ತಿಂಗಳಿಗೆ ಕೇವಲ 35 ರೂ. ಗಳು. ದುಡಿಮೆಯ ಹಣ ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ, ಆಗ ನಮ್ಮ ಮಠದ ತರಳಬಾಳು ಹಾಸ್ಟೆಲಿನ ಹುಡುಗರಿಗೆ ಪಾಠ ಹೇಳಿಕೊಡುವಂತೆ ನಮ್ಮ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಕರೆ ಹೋಯಿತು. ಅವರಿಗೆ ನೌಕರಿಯಲ್ಲಿ ಸಿಗುತ್ತಿದ್ದ ವೇತನಕ್ಕಿಂತ ಎರಡು ಪಟ್ಟು ಅಂದರೆ 75 ರೂ. ಗಳನ್ನು ನಮ್ಮ ಗುರುವರ್ಯರು ಕೊಟ್ಟರು. ಜೀವನ ರಥ ನೆಮ್ಮದಿಯಿಂದ ಸಾಗಿತು. ಬೆಂಗಳೂರಿನಲ್ಲಿ ನಡೆದ 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ನೀಡಿದ ಪತ್ರಿಕಾ ಸಂದರ್ಶನವೊಂದರಲ್ಲಿ ಅವರೇ ಇದನ್ನು ಸ್ಮರಿಸಿಕೊಂಡಿದ್ದಾರೆ.
ಹೀಗೆ ಹಿರಿಯ ತಲೆಮಾರಿನ ಸಾಹಿತಿಗಳ ಬದುಕಿನ ಮೇಲೊಂದು ಬೀಸುನೋಟ ಹರಿಸಿದರೆ ಅವರು ಹೊತ್ತು ನಿತ್ತರಿಸಿದ ಕಷ್ಟ ನಿಷ್ಠುರಗಳು ಬಾಯ್ದೆರೆದು ದರುಶನ ನೀಡುತ್ತವೆ. ಅವರು ಮಾಡಿದ ಸಾಹಿತ್ಯಸೇವೆಗೆ ಪಡೆಯುತ್ತಿದ್ದ ಸಂಭಾವನೆ ತೀರಾ ಅಲ್ಪ, ಕೈಗೆ ಸಿಗುತ್ತಿದ್ದ ವೇತನ ಹೊಟ್ಟೆಗಾದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ ಎಂಬಷ್ಟು ನಗಣ್ಯ. ಅವರು ಹುಟ್ಟಿದ್ದು ಆರ್ಥಿಕವಾಗಿ ಬಡತನವಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ಮನೆತನಗಳಲ್ಲಿ, ಅವರಿಗೆ ಪಿತ್ರಾರ್ಜಿತ ಬಳುವಳಿಯಾಗಿ ಬಂದದ್ದು ಬಡತನ ಮತ್ತು ಬವಣೆಯ ಬದುಕು, ಬವಣೆಯ ಬದುಕು ಎದುರಿಗಿದ್ದರೂ ಅವರು ಮೌಲ್ಯಗಳನ್ನು ಬಿಡಲಿಲ್ಲ, ರಾಜಿ ಮಾಡಿಕೊಳ್ಳಲಿಲ್ಲ. ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಾ ಮುಂದೆ ಸಾಗಿದರು. ಅದರಲ್ಲಿಯೇ ಧನ್ಯತೆಯನ್ನು ಕಂಡುಕೊಂಡರು. ಸಾಹಿತ್ಯ ಸರಸ್ವತಿಯ ಸಿರಿಮುಡಿ ಪರಿಶೋಭಿಸುವಂತೆ ಮಾಡಿದರು.
“ಒಬ್ಬ ಸೃಜನಶೀಲ ಲೇಖಕ ವಾಸ್ತವವಾಗಿ ತನ್ನ ಬರಹಗಳಲ್ಲಿ ತನ್ನ ನಿಜವಾದ ಆತ್ಮಕತೆಯನ್ನು ಬರೆದುಕೊಂಡಿರುತ್ತಾನೆ” ಎನ್ನುತ್ತಾರೆ ಜಿ.ಎಸ್.ಎಸ್. ಆರಂಭದಲ್ಲಿ ಉಲ್ಲೇಖಿಸಿದ ಘಟನೆಯ ಹಿನ್ನೆಲೆಯಲ್ಲಿ ನೋಡಿದಾಗ ಅವರ ಈ ಮುಂದಿನ ಕವಿತೆಯ ಸಾಲುಗಳು ಅವರ ಬಾಲ್ಯಜೀವನಕ್ಕೆ ಕನ್ನಡಿ ಹಿಡಿದಂತಿವೆ:
ಇದ್ದಕ್ಕಿದ್ದಂತೆಯೇ ನೀ ಹಾರಿ ಹೋದೆ
ಬುವಿಯ ಪಂಜರದಿಂದ ಬಿಡುಗಡೆಯ ಪಡೆದೆ,
ನಾನೊಬ್ಬನೇ ಉಳಿದೆ
ನಾನೊಬ್ಬನೇ ಬೆಳೆದೆ
ಬಾಳ ಬಿರುಗಾಳಿಯಲಿ ಎದೆಯನೊಡ್ಡಿ
ಕಳೆದ ಸಾಲಕೆ ಇನ್ನು ತೀರದಿದೆ ಬಡ್ಡಿ.
ನೀ ಸತ್ತು ಹೋಗಿರುವೆ ಎಂಬುದನ್ನು ಕೇಳಿ
ನಾನು ನಂಬಲೆ ಇಲ್ಲ, ನನ್ನೆಳೆವೆಯಲ್ಲಿ
ನೀನೆಲ್ಲೋ ಹೋಗಿರುವೆ
ಮತ್ತೆ ಬಳಿಗೈತರುವೆ
ಎಂಬ ನಂಬುಗೆಯಲ್ಲಿ
ಹಲವು ದಿನ ಕಾದೆ
ಕಡೆಗೆ ನಂಬಿದೆ ನಾನು - ನೀ ತೊರೆದು ಹೋದೆ!
ತಾಯೊಲವೆ ತಾಯೊಲವು ಈ ಲೋಕದೊಳಗೆ
ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ
ಓ ಅಮೃತಪ್ರೇಮವೇ
ಓ ಮಾತೃರೂಪವೇ
ತೀರಲಾರದ ತೃಷೆಗೆ ಮರುಜನ್ಮ ಬೇಕು
ಮತ್ತೊಮ್ಮೆ ಶಿಶುವಾಗಿ ನಾ ನಲಿಯಬೇಕು.
(ಕವನ: “ತಾಯಿಗೆ”, ಸಾಮಗಾನ 1951)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 17.3.2011