ಸಮುದಾಯದತ್ತ ಶಾಲೆ!
ಒಮ್ಮೆ ಪದವೀಧರ ಯುವಕನೊಬ್ಬ ನಮ್ಮ ದರ್ಶನಕ್ಕೆಂದು ಸಿರಿಗೆರೆಗೆ ಬಂದಿದ್ದ. ವಿನೀತನಾಗಿ ನಮಸ್ಕರಿಸಿ ಒಂದು ಪತ್ರವನ್ನು ನಮ್ಮ ಕೈಗೆ ಕೊಟ್ಟ. ಒಡೆದು ನೋಡಿದರೆ ನಮಗೆ ತುಂಬಾ ಆಪ್ತರಾದವರೊಬ್ಬರು ಬರೆದು ಕಳುಹಿಸಿದ್ದ ಶಿಫಾರಿಸು ಪತ್ರ ಅದಾಗಿತ್ತು. ಆ ಆಪ್ತರು ಬರೆದುಕಳುಹಿಸಿದ್ದರು ಎನ್ನುವುದಕ್ಕಿಂತ ಅವರಿಂದ ಆ ಯುವಕ ಬರೆಸಿಕೊಂಡು ಬಂದಿದ್ದ ಎನ್ನುವುದು ಹೆಚ್ಚು ಸೂಕ್ತವಾದೀತು. ಆ ಯುವಕ ತುಂಬಾ ಕಷ್ಟದಲ್ಲಿ ಓದಿದ್ದು ಅವನಿಗೆ ಮಠದ ಯಾವುದಾದರೂ ಶಾಲೆಯೊಂದರಲ್ಲಿ ಹಿಂದೀ ಶಿಕ್ಷಕ ಹುದ್ದೆಯನ್ನು ಕೊಟ್ಟು ಜೀವನಕ್ಕೆ ದಾರಿಮಾಡಿಕೊಡಬೇಕೆಂಬುದು ಆ ಪತ್ರದ ಆಶಯವಾಗಿತ್ತು. ಪತ್ರ ತಂದ ಯುವಕನಿಗೆ ಹಿಂದಿಯಲ್ಲಿ ಪಾಠಮಾಡುವ ಕ್ಷಮತೆ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬೇಕೆನಿಸಿತು. ಅದಕ್ಕಾಗಿ ಸ್ವಹಸ್ತಾಕ್ಷರಗಳಲ್ಲಿ ಹಿಂದಿಯಲ್ಲಿ ಒಂದು ಮನವಿ ಪತ್ರವನ್ನು ಬರೆದುಕೊಂಡು ಬರಲು ಸೂಚಿಸಿದೆವು. ಆ ಯುವಕ ಬರೆದುಕೊಂಡು ಬರುವುದಾಗಿ ಹೇಳಿ ಹೊರಗೆ ಹೋದವನು ಅರ್ಧ ಗಂಟೆಯಾದರೂ ಬರಲೇ ಇಲ್ಲ. ಆಪ್ತಸಹಾಯಕನನ್ನು ಕಳುಹಿಸಿ ಕರೆಸಿದಾಗ ಅವನಿಂದ ತಪ್ಪಿಲ್ಲದಂತೆ ಒಂದರ್ಧ ಪುಟವನ್ನೂ ಬರೆಯಲು ಆಗಿರಲಿಲ್ಲ. ಶಿಫಾರಿಸು ಪತ್ರದಿಂದ ತನ್ನ ಕೆಲಸವಾಗಬಹುದೆಂಬ ಆಸೆ ಹೊತ್ತು ಬಂದಿದ್ದ ಯುವಕನಿಗೆ ನಿರಾಸೆ ಕಾದಿತ್ತು! ಅಂಥವರನ್ನು ಶಿಕ್ಷಕರನ್ನಾಗಿ ನೇಮಿಸಿಕೊಂಡರೆ ವಿದ್ಯಾರ್ಥಿಗಳ ಪಾಡು ಏನಾಗಬಹುದು? “Good teachers are costly, but bad teachers Cost even more” ಎಂಬ ಮಾತನ್ನು ನೀವು ಕೇಳಿರಬಹುದು. ಒಳ್ಳೆಯ ಶಿಕ್ಷಕರನ್ನು ನೇಮಿಸಿಕೊಂಡರೆ ಭಾರಿ ಸಂಬಳ ಕೊಡಬೇಕಾಗುತ್ತದೆ. ಆದರೆ ಕೆಟ್ಟ ಶಿಕ್ಷಕರನ್ನು ನೇಮಿಸಿಕೊಂಡರೆ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಕಷ್ಟದಲ್ಲಿರುವವರು ಸಹಾಯಕೋರಿ ಶಿಫಾರಿಸು ಮಾಡಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಶಿಫಾರಿಸು ಯಾರಿಗೆ ಮಾಡಲಾಗುತ್ತದೆಯೋ ಅವರು ಅರ್ಹರಾಗಿರಬೇಕು. ಒಬ್ಬನ ಕಷ್ಟಕ್ಕೆ ಮರುಗಿ ನೌಕರಿಯನ್ನು ಕೊಟ್ಟರೆ ಅವನ ಮತ್ತು ಅವನ ಕುಟುಂಬವರ್ಗದವರ ಕಷ್ಟವೇನೋ ಪರಿಹಾರವಾಗಬಹುದು. ಆದರೆ ಅಂತಹ ಅಯೋಗ್ಯ ಶಿಕ್ಷಕನಿಂದ ಮುಂದಿನ ಹಲವು ಪೀಳಿಗೆಗಳನ್ನು ಹಾಳುಮಾಡಿದಂತಾಗುತ್ತದೆ ಎಂಬ ಒಳ ಎಚ್ಚರ ಜವಾಬ್ದಾರಿ ಸ್ಥಾನದಲ್ಲಿರುವವರ ಮನಸ್ಸಿನಲ್ಲಿ ಇರಬೇಕಾಗುತ್ತದೆ.
ನೇಮಕಾತಿ, ವರ್ಗಾವಣೆ, ಬಡ್ತಿ ಮತ್ತಿತರ ಉದ್ದೇಶಗಳಿಗಾಗಿ ಇತ್ತೀಚೆಗೆ ಎಲ್ಲ ವಲಯಗಳಲ್ಲಿ ಶಿಫಾರಿಸುಗಳು ಬಹಳ ನಡೆಯುತ್ತಲೇ ಇವೆ. ಶಿಫಾರಿಸುಗಳಿಂದ ಮಾತ್ರ ನೌಕರಿ ಶಿಕಾರಿಮಾಡಲು ಸಾಧ್ಯ, ಕೇವಲ ಪ್ರತಿಭೆಯಿಂದ ಸಾಧ್ಯವಿಲ್ಲ ಎಂಬ ಮನೋಧರ್ಮ ಮತ್ತು ವಾತಾವರಣ ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದೆ. ಒಬ್ಬರು ಒಂದಲ್ಲ ಅನೇಕ ಶಿಫಾರಿಸು ಪತ್ರಗಳನ್ನು ತರುತ್ತಾರೆ. ಯಾರ ಹೆಸರಿಗೆ ಪತ್ರ ಬೇಕಾಗಿದೆಯೋ ಅವರಿಗೆ ಯಾರು ತೀರಾ ಹತ್ತಿರವಾಗಿರುತ್ತಾರೆ, ಪ್ರಭಾವೀ ವ್ಯಕ್ತಿಗಳು ಯಾರು, ಯಾರ ಹತ್ತಿರ ಯಾರ ಮಾತು ನಡೆಯುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡೇ ಅಂಥವರಿಂದ ಪತ್ರ ತರುವ ಮತ್ತು ಹೇಳಿಸುವ ಪ್ರಯತ್ನ ಮಾಡುತ್ತಾರೆ. ಅವರು ತಮ್ಮ ಅಧ್ಯಯನದ ವಿಷಯದಲ್ಲಿ ಅರ್ಹತೆಯನ್ನು ಹೆಚ್ಚಿಸಿಕೊಳ್ಳುವುದರ ಕಡೆಗೆ ಕಿಂಚಿತ್ತೂ ಗಮನ ಹರಿಸುವುದಿಲ್ಲ. ಯಾರಿಂದ ಶಿಫಾರಿಸು ಮಾಡಿಸಿದರೆ ತಮ್ಮ ಕೆಲಸವಾಗುತ್ತದೆ ಎಂಬ ವಿಷಯದಲ್ಲಿ ಮಾತ್ರ ಅವರಿಗೆ ಹೆಚ್ಚಿನ ಪರಿಣತಿ ಇರುತ್ತದೆ. ಇತ್ತೀಚೆಗೆ ದೂರದ ಆಸ್ಟ್ರೇಲಿಯಾದಲ್ಲಿರುವ ಆಪ್ತಶಿಷ್ಯರಾದ ಓಂಕಾರಸ್ವಾಮಿಯವರಿಂದ ಒಂದು ಇ-ಮೇಲ್ ಬಂದಿತ್ತು. ಅವರನ್ನು ಇಲ್ಲಿಯ ಶಿಷ್ಯರೊಬ್ಬರು ವರ್ಗಾವಣೆಯ ವಿಚಾರವಾಗಿ ಸಂಪರ್ಕಿಸಿದ್ದರಂತೆ. ತಾಯ್ನಾಡಿನಿಂದ ಸಾವಿರಾರು ಕಿ.ಮೀ ದೂರದಲ್ಲಿದ್ದು ನಾನೇ ಇಲ್ಲಿ ಕೆಲಸಮಾಡುತ್ತಿರುವಾಗ, ನೂರಿನ್ನೂರು ಕಿ.ಮೀ. ದೂರದಲ್ಲಿ ಕೆಲಸಮಾಡಿಕೊಂಡಿರಲು ನಿನಗೇನಾಗಿದೆ ಧಾಡಿ ಎಂದು ಅವರಿಗೆ ಉತ್ತರ ಬರೆದಿರುವುದಾಗಿ ತಿಳಿಸಿದ್ದಾರೆ. ಅವರನ್ನು ಸಂಪರ್ಕಿಸಿದವರು ಪರದೇಶಕ್ಕೆ ಹೋಗದಿದ್ದರೂ ಪರದೇಶದವರ ಬಗ್ಗೆ ಇರುವ ಅವರ ಭೌಗೋಲಿಕ ಜ್ಞಾನ ಮೆಚ್ಚತಕ್ಕದ್ದೇ!
ಇನ್ನು ಶಿಫಾರಿಸು ಮಾಡುವ ಇಲ್ಲಿಯವರ ಮನೋಧರ್ಮವನ್ನು ನೋಡೋಣ. ಒಬ್ಬರು ಒಬ್ಬ ವ್ಯಕ್ತಿಗೇ ಬರೆದುಕೊಡದೆ ಒಂದೇ ಹುದ್ದೆಗೆ ಅನೇಕರಿಗೆ ಶಿಫಾರಿಸು ಪತ್ರಗಳನ್ನು ಕೊಡುತ್ತಾರೆ. ಶಾಸನಸಭೆಯಲ್ಲಿದ್ದುಕೊಂಡು ಶಾಸನಗಳನ್ನು ಮಾಡುವ ಜನರೇ ನಿಯಮಾವಳಿಗಳ ವಿರುದ್ಧ ಶಿಫಾರಿಸು ಮಾಡುತ್ತಾರೆ. ಎಷ್ಟು ಜನರಿಗೆ ಪತ್ರಗಳನ್ನು ಕೊಟ್ಟಿರುತ್ತಾರೆಂಬುದು ಅವರಿಗೆ ನೆನಪಿರುವುದಿಲ್ಲ. ಅಷ್ಟೊಂದು “ಉದಾರಚರಿತರು ಅವರು. ಅಭ್ಯರ್ಥಿ ಅರ್ಹನೋ ಅನರ್ಹನೋ ಅದರ ಬಗ್ಗೆ ಅವರು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ತಮಗೆ ತಲೆಬೇನೆ ಆಗಬಾರದು ಅಷ್ಟೆ. ತಮ್ಮ ತಲೆನೋವನ್ನು ಅವರು ಇನ್ನೊಬ್ಬರ ತಲೆಗೆ ವರ್ಗಾಯಿಸುತ್ತಾರೆ. ಶಿಫಾರಿಸು ಬಯಸಿ ಬಂದವರೊಂದಿಗೆ ಸುಮ್ಮನೇ ಏಕೆ ನಿಷ್ಠುರ ಕಟ್ಟಿಕೊಳ್ಳಬೇಕು ಎಂದು ವ್ಯಾವಹಾರಿಕವಾಗಿ ಯೋಚಿಸುವ ಅವರು ಯಾರಿಗೆ ಪತ್ರ ಬರೆದುಕೊಡುತ್ತಾರೋ ಅವರ ಮತ್ತು ತಮ್ಮ ಸಂಬಂಧದಲ್ಲಿ ವಿಶ್ವಾಸಘಾತುಕ ಕೃತ್ಯ ಮಾಡಿದಂತಾಗುತ್ತದೆ ಎಂಬ ಸಣ್ಣ ಆಲೋಚನೆಯನ್ನೂ ಮಾಡುವುದಿಲ್ಲ. ನಿಷ್ಠುರ ಕಟ್ಟಿಕೊಳ್ಳಲು ಸಿದ್ಧರಿಲ್ಲದ ಅವರು ಅನೇಕರಿಗೆ ಶಿಫಾರಿಸು ಪತ್ರಗಳನ್ನು ಕೊಟ್ಟು ಸುಮ್ಮನಿರುತ್ತಾರೆಯೇ? ಅದೂ ಇಲ್ಲ, ಅಯೋಗ್ಯರಿಗೆ ಪತ್ರ ಕೊಟ್ಟು ತಮ್ಮ ಒಂದು ಪತ್ರಕ್ಕೂ ಮಾನ್ಯತೆ ಸಿಗಲಿಲ್ಲವೆಂದು ನಂತರ ದೋಷಾರೋಪಣೆಯನ್ನು ಬೇರೆ ಮಾಡುತ್ತಾರೆ. ಕಷ್ಟದಲ್ಲಿರುವವರ ದೃಷ್ಟಿಯಲ್ಲಿ ಶಿಫಾರಿಸು ಮಾಡಿದವರು ಒಳ್ಳೆಯವರಾಗಿ ವಿಜೃಂಭಿಸುತ್ತಾರೆ, ಅವರ ಶಿಫಾರಿಸ್ಸಿನಂತೆ ಕೆಲಸ ಮಾಡಿಕೊಡದೆ ಇರುವವರು ಇಬ್ಬರ ದೃಷ್ಟಿಯಲ್ಲೂ ಕೆಟ್ಟವರಾಗುತ್ತಾರೆ.
ನಮ್ಮ ದೇಶದಲ್ಲಿ ಪ್ರತಿಭೆ ಮತ್ತು ಅಸಹಾಯಕತೆಯನ್ನು ಗುರುತಿಸಿ ಸ್ವಂತ ವಿವೇಚನೆಯಿಂದ ಮಾಡುವ ಶಿಫಾರಿಸುಗಳು ಅಪರೂಪ. ಅವುಗಳಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಭಾಗ ಜಾತಿ, ಹಣ, ಮುಲಾಜು ಇವುಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿ ವರ್ಷ ಮಾರ್ಚ್/ಏಪ್ರಿಲ್ ಬಂದರೆ ಸಾಕು, ಸರಕಾರದಲ್ಲಿ ವರ್ಗಾವಣೆ ರಾಜಕೀಯ ಕಾವೇರುತ್ತದೆ. ಅಭಿವೃದ್ದಿಕಾರ್ಯಗಳ ಕಡತಕ್ಕಿಂತ ವರ್ಗಾವಣೆಯ ಕಡತಗಳೇ ಮೇಜಿನ ಮೇಲೆ ರಾರಾಜಿಸುತ್ತವೆ. ರೈತರು ಮುಂಬರುವ ಮಳೆಗಾಲಕ್ಕಾಗಿ ಮುಗಿಲು ನೋಡುತ್ತಿದ್ದರೆ ರಾಜಕಾರಣಿಗಳಿಗೆ ಬೇಸಿಗೆಯ ಉರಿಬಿಸಿಲೇ ಸುಗ್ಗಿಯ ಕಾಲ! ತಮಗಾಗದ ಆಧಿಕಾರಿಗಳನ್ನು ಸರಿಯಾದ ಜಾಗಕ್ಕೆ ಎತ್ತಂಗಡಿ ಮಾಡಿಸಿ ಪಾಠ ಕಲಿಸುವ ಪಣ ತೊಡುತ್ತಾರೆ. ತನ್ನ ಜಾತಿಯ ಅಥವಾ ತನ್ನ ತಾಳಕ್ಕೆ ಸರಿಯಾಗಿ ಕುಣಿಯಬಲ್ಲ ಪೊಲೀಸು/ರೆವಿನ್ನೂ ಇತರೆ ಅಧಿಕಾರಿಗಳನ್ನು ಹಾಕಿಸಿಕೊಂಡು ತನ್ನ ಪಾಳೆಯಪಟ್ಟನ್ನು ನಾಲ್ಕು ದಿಕ್ಕುಗಳಿಂದಲೂ ಭದ್ರಪಡಿಸಿಕೊಳ್ಳಲು ಹವಣಿಸುತ್ತಾರೆ. ಜನರೂ ಸಹ ಹಾಗೆಯೇ ಇದ್ದಾರೆ.
ಬಹಳ ವರ್ಷಗಳ ಹಿಂದೆ ನಡೆದ ಒಂದು ಘಟನೆ. ಒಂದು ಹಳ್ಳಿಯ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿಯ ಮುಖಂಡನೊಬ್ಬ ಸಭೆಯಲ್ಲಿ ನಮಗೆ ಒಂದು ಮನವಿ ಪತ್ರವನ್ನು ಸಲ್ಲಿಸಿದ. ಆಗ ನಮ್ಮ ಮಠದ ಶಿಷ್ಯರಾದ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದರು. ಅವರಿಗೆ ಹೇಳಿ ಆ ಊರಿಗೆ ಒಂದು ಪ್ರೌಢಶಾಲೆಯನ್ನು ಮುಂಜೂರು ಮಾಡಿಸಿಕೊಡಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಿಕೊಳ್ಳಲಾಗಿತ್ತು. ಉದ್ದೇಶವೇನೋ ಒಳ್ಳೆಯದೇ. ಆದರೆ ಯಾರಿಗೂ ಅಷ್ಟು ಸುಲಭವಾಗಿ ಶಿಫಾರಿಸು ಪತ್ರ ಕೊಡುವ ಜಾಯಮಾನ ನಮ್ಮದಲ್ಲ. ವಿಚಾರಿಸಿದಾಗ ಆ ಹಳ್ಳಿಯಿಂದ ಒಂದು ಕಿ.ಮೀ ದೂರದಲ್ಲಿಯೇ ಖಾಸಗಿ ಪ್ರೌಢಶಾಲೆಯೊಂದು ಇರುವುದು ತಿಳಿಯಿತು. ಅಷ್ಟು ಹತ್ತಿರವಿರುವಾಗ ಬೇರೊಂದು ಶಾಲೆಯ ಅಗತ್ಯವೇನಿದೆಯೆಂದು ಕೇಳಿದರೆ ಆ ಊರ ಮುಖಂಡನಿಂದ ಬಂದ ಉತ್ತರ: “ಬುದ್ದಿ, ನಮ್ಮೂರ ಬಡ ಮಕ್ಕಳು ಉರಿಬಿಸಿಲಿನಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗುವುದನ್ನು ನೋಡಲು ನನ್ನಿಂದ ಆಗುತ್ತಿಲ್ಲ. ತಾವು ದೊಡ್ಡ ಮನಸ್ಸು ಮಾಡಿ ಮುಖ್ಯಮಂತ್ರಿಗಳಿಗೆ ಹೇಳಿ ಒಂದು ಪ್ರೌಢಶಾಲೆಯನ್ನು ಮುಂಜೂರು ಮಾಡಿಸಿಕೊಡಿ” ಎಂದು ಎಲ್ಲರೆದುರಿಗೆ ಆಗ್ರಹಪಡಿಸಿದ. ಸಭಿಕರೆಲ್ಲರೂ ಅವನ ಬೇಡಿಕೆಯನ್ನು ಸಮರ್ಥಿಸಿ ಚಪ್ಪಾಳೆ ತಟ್ಟಿದರು. ಹಳ್ಳಿಯಲ್ಲಿ ಒಂದು ಶಾಲೆಯನ್ನು ಆರಂಭಿಸಬೇಕೆಂದರೆ ಲಕ್ಷಾಂತರ ರೂ. ಖರ್ಚು ಬರುತ್ತದೆ. ಅಷ್ಟೆಲ್ಲಾ ನಿರ್ವಹಿಸಲು ನಿಮ್ಮಿಂದ ಆಗುತ್ತದೆಯೇ ಎಂದು ಕೇಳಿದಾಗ ಹತ್ತು ಲಕ್ಷ ಖರ್ಚು ಬಂದರೂ ಸಿದ್ಧನಿರುವುದಾಗಿ ಊರ ಮುಖಂಡ ಹೇಳಿದ. ಜನರೆಲ್ಲರೂ ಮತ್ತೊಮ್ಮೆ ಮೆಚ್ಚುಗೆಯ ಚಪ್ಪಾಳೆ ತಟ್ಟಿದರು. ಆದರೆ ಅವನ ಮುಖವನ್ನು ದಿಟ್ಟಿಸಿ ನೋಡಿದಾಗ ಏನನ್ನೋ ಮರೆಮಾಚುತ್ತಿದ್ದಾನೆಂದು ಅನಿಸಿತು. ಹತ್ತಿರ ಕರೆದು ಸರಕಾರದಿಂದ ಖಾಸಗಿ ಶಾಲೆಯನ್ನು ಮುಂಜೂರು ಮಾಡಿಸುವುದು ಬೇಗನೆ ಆಗುವುದಿಲ್ಲ, ಬೇರೊಂದು ಸುಲಭವಾದ ಉಪಾಯವಿದೆ: “ನೀನು ಮಠಕ್ಕೆ ಒಂದು ಲಕ್ಷ ರೂ. ಮಾತ್ರ ದಾನ ಕೊಟ್ಟರೆ ಸಾಕು, ನಿಮ್ಮೂರಲ್ಲಿ ಹುಟ್ಟುವ ಎಲ್ಲ ಮಕ್ಕಳಿಗೂ ನಿನ್ನ ಹೆಸರಿನಲ್ಲಿ ಮಠದಲ್ಲಿಯೇ ಉಚಿತವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದಾಗ ಆ ಊರ ಮುಖಂಡ ಕಂಗಾಲಾದ. ಏನನ್ನೋ ಹೇಳಲು ಅವನು ಅಂಜುತ್ತಿರುವಂತೆ ಕಾಣಿಸಿತು. ಹತ್ತು ಲಕ್ಷ ರೂ. ಖರ್ಚು ಮಾಡಲು ಸಿದ್ಧನಿದ್ದ ಆ ಉದಾರಿ ಒಂದು ಲಕ್ಷದಲ್ಲಿ ತನ್ನ ಕೆಲಸವಾಗುತ್ತದೆ ಎಂದರೆ ಏಕೆ ಹಿಂಜರಿಯಬೇಕು? ಏನೆಂದು ಕೇಳಿದಾಗ ಮೆಲುದನಿಯಲ್ಲಿ “ತಮಗೆ ಗೊತ್ತಿಲ್ಲದ ಸಂಗತಿ ಏನಿದೆ!” ಎಂದು ಹಲುಬಿದ. ನಿಜಸಂಗತಿ ಏನದು ಹೇಳು ಎಂದು ಒತ್ತಾಯಿಸಿದಾಗ ಅವನು ಕೊಟ್ಟ ಉತ್ತರ: “ನನ್ನ ಮಗಳನ್ನು ಮದುವೆ ಮಾಡಿಕೊಟ್ಟು ಇಲ್ಲಿಗೆ ಐದು ವರ್ಷಗಳಾಗಿವೆ. ಮದುವೆ ಸಂದರ್ಭದಲ್ಲಿ ಅಳಿಯನಿಗೆ ನೌಕರಿ ಕೊಡಿಸುವುದಾಗಿ ಹೇಳಿದ್ದೆ. ಈಗ ಎಲ್ಲಿಯೂ ನೌಕರಿ ಸಿಗುತ್ತಿಲ್ಲ. ಹೀಗೊಂದು ಶಾಲೆ ಮುಂಜೂರು ಮಾಡಿಸಿಕೊಟ್ಟರೆ ನನ್ನ ಅಳಿಯನಿಗೆ ನೌಕರಿ ಸಿಕ್ಕು ಮಗಳ ಬಾಳಿಗೆ ಅನುಕೂಲವಾಗುತ್ತದೆ!”
ಸಹೃದಯ ಓದುಗರೇ! ಸಮುದಾಯದತ್ತ ಶಾಲೆ ಎತ್ತ ಸಾಗಿದೆಯೆಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 24.3.2011