ಮಾನವೀಯ ಧರ್ಮ ಮೆರೆದ ನಾಡು
ಎಲ್ಲಿಯೋ ಓದಿದ ನೆನಪು. ಒಂದು ರೈಲಿನಲ್ಲಿ ಅನೇಕರು ಪ್ರಯಾಣಿಸುತ್ತಿದ್ದರು. ಮೂರನೇ ದರ್ಜೆಯ ಒಂದು ಬೋಗಿ, ಅದರಲ್ಲೊಬ್ಬ ಹಳ್ಳಿಯ ರೈತ ಕಬ್ಬನ್ನು ತಿನ್ನುತ್ತಿದ್ದ. ತಿಂದ ಕಬ್ಬಿನ ಸಿಪ್ಪೆಯನ್ನು ಬೋಗಿಯೊಳಗೆ ಉಗಿಯುತ್ತಿದ್ದ. ಸಹಪ್ರಯಾಣಿಕರಿಗೆ ಅವನ ಈ ಅಸಭ್ಯ ನಡವಳಿಕೆ ಅಸಹ್ಯಕರವೆನಿಸಿತ್ತು. ರೈತನ ಎದುರು ಒಬ್ಬ ಜಪಾನ್ ದೇಶದ ಪ್ರಯಾಣಿಕನಿದ್ದ. ರೈತ ತಿಂದು ಉಗಿಯುತ್ತಿದ್ದ ಕಬ್ಬಿನ ಸಿಪ್ಪೆಯನ್ನು ಅವನು ಆಯ್ದುಕೊಂಡು ಒಂದು ವಸ್ತ್ರದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ. ಅದನ್ನು ನೋಡಿದ ರೈತನಿಗೆ ನಗು ಬಂತು. ಕಬ್ಬಿನ ಸವಿಗಿಂತ ಕಬ್ಬನ್ನು ಜಗಿದು ಅವನೆದುರಿಗೆ ಉಗಿಯುವುದೇ ಒಂದು ರೀತಿಯ ಮೋಜು ಎನಿಸಿತು. ಇತರ ಪ್ರಯಾಣಿಕರಿಗೆ ಜಪಾನೀ ಪ್ರಯಾಣಿಕನ ನಡವಳಿಕೆ ಸೋಜಿಗವೆನಿಸಿತು. ಮುಂದಿನ ನಿಲ್ದಾಣದಲ್ಲಿ ರೈಲು ನಿಂತಾಗ ಜಪಾನೀ ಪ್ರಯಾಣಿಕ ಇಳಿದುಹೋಗಿ ಒಂದು ಬಣ್ಣದ ಡಬ್ಬಿ, ಕತ್ತರಿ ಮತ್ತು ಸೂಜಿ-ದಾರಗಳನ್ನು ಕೊಂಡು ತಂದ. ವಸ್ತ್ರದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಕಬ್ಬಿನ ಸಿಪ್ಪೆಗಳನ್ನು ಆಕರ್ಷಕ ಆಕಾರಕ್ಕೆ ಕತ್ತರಿಸಿ, ರಂಗು ರಂಗಿನ ಬಣ್ಣ ಹಚ್ಚಿ, ಸೂಜಿಯಿಂದ ದಾರ ಪೋಣಿಸಿ ಸುಂದರವಾದ ಹಾರಗಳನ್ನು ಮಾಡಿದ. ಬೇರೆ ಬೋಗಿಗಳಿಗೆ ಹೋಗಿ ತಾನು ತಯಾರಿಸಿದ್ದ ಹಾರಗಳನ್ನು ಇತರ ಪ್ರಯಾಣಿಕರಿಗೆ ಮಾರಾಟ ಮಾಡಿ ಬಂದ ಹಣವನ್ನು ಕಿಸೆಗೆ ಇಳಿಬಿಟ್ಟುಕೊಂಡು ಮುಂದಿನ ನಿಲ್ದಾಣದಲ್ಲಿ ಇಳಿದುಹೋದ. ಇದೇನು ನಿಜವಾದ ಘಟನೆಯೋ ಅಥವಾ ಕಾಲ್ಪನಿಕ ಕತೆಯೋ ಗೊತ್ತಿಲ್ಲ. ಅಂತೂ ಇದು ಜಪಾನೀಯರ Work culture ಅನ್ನು ಎತ್ತಿ ತೋರಿಸುತ್ತದೆ.
ಬಹಳ ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಒಂದು ಅಂತಾರಾಷ್ಟ್ರೀಯ ಸಮ್ಮೇಳನ ನಡೆದಿತ್ತು. ಅದೇ ಸಂದರ್ಭದಲ್ಲಿ ಯಾವುದೋ ಕ್ರಿಕೆಟ್ ಮ್ಯಾಚ್ ಸಹ ನಡೆಯುತ್ತಿತ್ತು. ಆಗಿನ್ನೂ ದೂರದರ್ಶನ ಇರಲಿಲ್ಲ. ಆಕಾಶವಾಣಿಯದೇ ದರ್ಬಾರು. ಅದರಲ್ಲಿ ದೆಹಲಿಯಿಂದ ಕೇಳಿಬರುತ್ತಿದ್ದ “ಕನ್ನಡ ವಾರ್ತೆಗಳು: ಓದುತ್ತಿರುವವರು ಉಪೇಂದ್ರ ರಾವ್/ನಾಗಮಣಿ ಎಸ್ ರಾವ್” ಅವರ ಕನ್ನಡ ವಾಚನ ಶೈಲಿ ಈಗಿನ ದೂರದರ್ಶನದ ಯಾವ ಲಲನಾಮಣಿಯರಿಗೂ ಬರುವುದಿಲ್ಲ. ಈ ಮಾತಿನಿಂದ ಈಗಿನ news readers ಗಳಿಗೆ ಬೇಸರವುಂಟಾದರೆ ಬಾನುಲಿಯ ಸಂಗ್ರಹಾಲಯದಲ್ಲಿ (archive) ಇರುವ ಅವರ ಪೂರ್ವಜರ ಧ್ವನಿಮುದ್ರಿಕೆಗಳನ್ನು ಹುಡುಕಿ ಹೊರತೆಗೆದು ಆ ಹಿರಿಯ ಜೀವಗಳ ಸಿರಿಕಂಠದಿಂದ ಹೊರಬರುತ್ತಿದ್ದ ಕನ್ನಡ ಶಬ್ದಗಳ ಉಚ್ಚಾರಣೆ, ಉಸಿರಿನ ನಿಲುಗಡೆ ಹೇಗೆ ಇರುತ್ತಿತ್ತು ಎಂಬುದನ್ನು ಕಿವಿಯಾರೆ ಕೇಳಿ ಅನುಕರಿಸುವುದೊಳಿತು.
ಆಗಿನ ಕಾಲದ ಯುವಕರಿಗೆ All India Radio ಗಿಂತ ಸಿಲೋನ್ (ಈಗಿನ ಶ್ರೀಲಂಕಾ) ರೇಡಿಯೋ ಸ್ಟೇಷನ್ ಮೇಲೆಯೇ ಹೆಚ್ಚಿನ ಮೋಹ. ಅದರಲ್ಲಿ ಬಿತ್ತರಿಸಲಾಗುತ್ತಿದ್ದ ವಿವಿಧಭಾರತಿ ಕಾರ್ಯಕ್ರಮದಲ್ಲಿ ಹಿಂದೀ ಚಲನಚಿತ್ರಗಳ ಹಾಡುಗಳನ್ನು ಕೇಳುವುದೆಂದರೆ ಯುವಕರಿಗೆ ಪಂಚಪ್ರಾಣ. ಮೇಲೆ ಉಲ್ಲೇಖಿಸಿದ ಮೈಸೂರು ಸಮ್ಮೇಳನದಲ್ಲಿ ಭಾಗವಹಿಸಿದ್ದ ಭಾರತೀಯ ಪ್ರತಿನಿಧಿಗಳನೇಕರು ಕ್ರಾಫರ್ಡ್ ಹಾಲ್ ಮುಂಭಾಗದ ಮೈದಾನದಲ್ಲಿ ಟ್ರಾನ್ಸಿಸ್ಟರ್‌ಗಳನ್ನು ಕಿವಿಗೆ ಅಂಟಿಸಿಕೊಂಡು ಹಿಂದೀ ಸಿನೆಮಾ ಹಾಡು ಮತ್ತು ಕ್ರಿಕೆಟ್ ಕಾಮೆಂಟ್ರಿ ಕೇಳಿ ಖುಷಿಪಡುತ್ತಿದ್ದರು. ಆದರೆ ಅದೇ ಮೈದಾನದ ಮೂಲೆಯೊಂದರಲ್ಲಿ ಕುಳಿತಿದ್ದ ಜಪಾನ್ ದೇಶದ ಪ್ರತಿನಿಧಿಯೊಬ್ಬ ಸಮ್ಮೇಳನದಲ್ಲಿ ಮಂಡಿಸಲಿದ್ದ ಸಂಶೋಧನಾ ಪ್ರಬಂಧಗಳನ್ನು ಓದುತ್ತಿದ್ದ! ಇದಂತೂ ಆಗಿನ ಪತ್ರಿಕೆಗಳಲ್ಲಿ ವರದಿಯಾದ ಸತ್ಯಘಟನೆ.
ಜಪಾನೀಯರು ಶ್ರಮಜೀವಿಗಳು, ದೇಶಪ್ರೇಮಿಗಳು, ವಿಜ್ಞಾನದಲ್ಲಿ ಸ್ವತಃ ಹೆಚ್ಚಿನ ಸಂಶೋಧನೆಗಳನ್ನು ಮಾಡದೇ ಇದ್ದರೂ ಯೂರೋಪ್ ಮತ್ತು ಅಮೇರಿಕದ ವಿಜ್ಞಾನಿಗಳು ಮಾಡಿದ ಅನೇಕ ಮೂಲಭೂತ ಸಂಶೋಧನೆಗಳನ್ನು ಕಾರ್ಯರೂಪಕ್ಕೆ ಅಳವಡಿಸಿ ಜಗತ್ತಿನಲ್ಲಿ ಹೆಸರು ಮಾಡಿದ, ಅಮೇರಿಕದವರಿಗೂ Made in Japan ಎಂಬ ಹುಚ್ಚು ಹಿಡಿಯುವಂತೆ ಮಾಡಿದ ವಣಿಕ್ ಶ್ರೇಷ್ಠರು. ನಮ್ಮ ನಾಡಿನ ಜನರ ಬಾಯಲ್ಲಿ ಬಸವಜಯಂತಿಯಂದು ಕೇಳಿಬರುವ ಕಾಯಕವೇ ಕೈಲಾಸ ಎಂಬ ತತ್ವ ನಿಜವಾಗಿ ಕಾರ್ಯರೂಪಕ್ಕೆ ಬಂದಿರುವುದು ಜಪಾನೀಯರ ಜೀವನಕ್ರಮದಲ್ಲಿ, ಅವರು ಎಂದೂ ಹೆಚ್ಚಿನ ವೇತನಕ್ಕಾಗಿ ಮುಷ್ಕರ ನಡೆಸಿ ತಾವು ಕೆಲಸಮಾಡುತ್ತಿರುವ ಕಂಪನಿ ಮುಳುಗುವಂತೆ ಮಾಡಿದವರಲ್ಲ. ಹಾಗೆಂದು ಅಲ್ಲಿ ಮುಷ್ಕರವೇ ಇಲ್ಲವೆಂದು ಹೇಳಲಾಗದು. ಆದರೆ ಅಲ್ಲಿಯ ಮುಷ್ಕರನಿರತ ಕಾರ್ಮಿಕರು ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗಿ lockout ಆಗುವಂತೆ ಮಾಡುವ ಬದಲು, ತೋಳಿಗೆ ಕಪ್ಪುಬಟ್ಟೆ ಧರಿಸಿ ನಿಗದಿತ ಅವಧಿಗಿಂತಲೂ ಹೆಚ್ಚು ಕಾಲ ದುಡಿದು ಕಂಪನಿಯ ಆದಾಯವನ್ನು ಹೆಚ್ಚಿಸಿ, ಹೆಚ್ಚಿನ ವೇತನಕ್ಕಾಗಿ ಆಗ್ರಹಪಡಿಸುವ ಜಾಯಮಾನ ಉಳ್ಳವರು. ಹಾಗಲ್ಲದೇ ಹೋಗಿದ್ದರೆ ಮೊನ್ನೆ ಸಂಭವಿಸಿದ ಸುನಾಮಿ-ಭೂಕಂಪಗಳಲ್ಲಿ ಜಪಾನ್ ದೇಶದ ಆರ್ಥಿಕ ಸ್ಥಿತಿ ಎಂದೂ ತಲೆಯೆತ್ತದಂತೆ ಕುಸಿದುಬೀಳುತ್ತಿತ್ತು. “When things get rough, remember: it is the rubbing that brings out shine!” ಉಜ್ಜಿದಾಗಲೇ ಹೊಳಪು ಬರುವುದು ಎಂಬಂತೆ ಮತ್ತೆ ಅವರು ತಮ್ಮ ದೇಶವನ್ನು ಕಟ್ಟಿ ಬೆಳಸುತ್ತಾರೆಂಬುದರಲ್ಲಿ ಸಂಶಯವಿಲ್ಲ.
ಮೇಲಿನ ಮಾತುಗಳನ್ನು ಬರೆಯಲು ಕಾರಣ ಕಳೆದ ವಾರ ಜಪಾನಿನ ಮಹಿಳೆ ಶ್ರೀಮತಿ Aya Ikegame ತಮ್ಮ ಪತಿಯೊಂದಿಗೆ ನಮ್ಮ ಮಠಕ್ಕೆ ಬಂದು ಮೂರು ದಿನಗಳ ಕಾಲ ತಂಗಿದ್ದರು. ಕನ್ನಡವನ್ನು ನಿರರ್ಗಳವಾಗಿ ಮಾತನಾಡಬಲ್ಲ ಈ ಜಪಾನೀ ಯುವ ಮಹಿಳೆ ಹಿಂದೆಯೂ ಒಂದೆರಡು ಬಾರಿ ಬಂದಿದ್ದರು. ಇಂಗ್ಲೆಂಡಿನ Edinburgh ವಿಶ್ವವಿದ್ಯಾನಿಲಯದಲ್ಲಿ “Citizenship after Orientalism” ಎಂಬ ವಿಷಯ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಪ್ರತಿ ಸೋಮವಾರ ಸಿರಿಗೆರೆಯಲ್ಲಿ ನಡೆಯುವ ನಮ್ಮ ಸದ್ಧರ್ಮ ನ್ಯಾಯಪೀಠದ ಕಾರ್ಯಕಲಾಪಗಳನ್ನು ಅಧ್ಯಯನ ಮಾಡುವುದು ಅವರ ಪ್ರಮುಖ ಉದ್ದೇಶವಾಗಿತ್ತು. ಕರ್ನಾಟಕದಲ್ಲಿರುವ ಮಠಪೀಠಗಳು ಧಾರ್ಮಿಕ ಸಂಸ್ಥೆಗಳಾಗಿಯೂ ಹೇಗೆ ಸಾಮಾಜಿಕ ಸಂಸ್ಥೆಗಳಾಗಿ (civic institute ions) ರೂಪಗೊಂಡು ಸಾಮಾಜಿಕ ಸೇವೆಯನ್ನು ಮಾಡುತ್ತಿವೆಯೆಂಬುದು ಅವರ ವಿಶೇಷ ಅಧ್ಯಯನದ ಗುರಿ.
ಸಹಜವಾಗಿ ನಮ್ಮ ಸಂಭಾಷಣೆ ಇತ್ತೀಚೆಗೆ ಅವರ ದೇಶದಲ್ಲಿ ನಡೆದ ಸುನಾಮಿ ದುರಂತದತ್ತ ತಿರುಗಿತು. ಆರಂಭದಲ್ಲಿ ಅವರ ತಂದೆ-ತಾಯಿ ಬಂಧುಬಾಂಧವರು ಸುರಕ್ಷಿತವಾಗಿ ಇರುವ ಬಗ್ಗೆ ಉಭಯಕುಶಲೋಪರಿ. ಅವರ ಸಹೋದರಿ ದುರಂತ ಸಂಭವಿಸಿದ ಸ್ಥಳದಿಂದ ಹತ್ತಿಪ್ಪತ್ತು ಕಿ.ಮೀ ಹತ್ತಿರದ ಸಮುದ್ರ ತೀರದಲ್ಲಿಯೇ ಆ ದಿನ ಕಾರನ್ನು ಸ್ವತಃ ನಡೆಸುತ್ತಿದ್ದು ಹೇಗೆ ಸ್ವಲ್ಪದರಲ್ಲಿಯೇ ಪಾರಾದಳೆಂಬ ಸಂಗತಿಯನ್ನು ಗದ್ಗದ ಕಂಠದಿಂದ ವಿವರಿಸಿದರು. ಪತ್ರಿಕೆಗಳಲ್ಲಿ ವರದಿಯಾದಂತೆ ನಿಮ್ಮ ದೇಶದಲ್ಲಿ ಆ ಸಂದರ್ಭದಲ್ಲಿ ಯಾವ ದರೋಡೆ, ಲೂಟಿ, ಕಳ್ಳತನಗಳು ಸಂಭವಿಸಲಿಲ್ಲವೇ ಎಂಬ ನಮ್ಮ ಪ್ರಶ್ನೆಗೆ ಆ ಜಪಾನೀ ಮಹಿಳೆ ತಮ್ಮ ದೇಶದವರ ದೇಶಾಭಿಮಾನ, ಇಂತಹ ಸಂಕಟಪರಿಸ್ಥಿತಿಯಲ್ಲಿ ಅವರಲ್ಲಿರುವ ಪರಸ್ಪರ ಸಹಕಾರ, ಒಗ್ಗಟ್ಟು ಮತ್ತು ಮಾನವೀಯ ಭಾವನೆಯ ಬಗ್ಗೆ ತುಂಬಾ ಅಭಿಮಾನದಿಂದ ಹೇಳಿಕೊಂಡರು. ಆದರೂ ಟೋಕಿಯೋ ಮತ್ತೊ ಒಸಾಕಾದಂತಹ ಪ್ರಸಿದ್ಧನಗರನಿವಾಸಿಗಳಿಗೂ ಮತ್ತು ಅಲ್ಲಿಯ ಗ್ರಾಮೀಣ ಜನರಿಗೂ ಇರುವ ವಿಭಿನ್ನ ಮನೋಧರ್ಮವನ್ನು ಅವರು ವಿಶ್ಲೇಷಣೆ ಮಾಡಿದರು. ನಗರನಿವಾಸಿಗಳು ಮಾರುಕಟ್ಟೆಯಿಂದ ತಮ್ಮ ನಿತ್ಯಬಳಕೆಯ ವಸ್ತುಗಳನ್ನು ಅವಶ್ಯಕತೆಗಿಂತ ಹೆಚ್ಚಾಗಿ ಖರೀದಿ ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದರು. ಗ್ರಾಮೀಣ ಜನರು ತಮ್ಮಲ್ಲಿದ್ದ ವಸ್ತುಗಳನ್ನು ಅವಶ್ಯಕತೆ ಇರುವ ಹಳ್ಳಿಯ ಇತರ ಜನರಿಗೆ ಹಂಚುವ ಔದಾರ್ಯ ತೋರಿಸಿದರು. ನಗರನಿವಾಸಿಗಳು ಆರಂಭದಲ್ಲಿ ಹೆಚ್ಚು ಹೆಚ್ಚು ಸಂಗ್ರಹಿಸಿಟ್ಟುಕೊಂಡಿದ್ದರೂ ನಂತರ ಮಾರುಕಟ್ಟೆಯಲ್ಲಿ ಅಭಾವ ನಿರ್ಮಾಣವಾದಾಗ ಸರ್ಕಾರದ ಕರೆಯ ಮೇರೆಗೆ ತಮಗೆ ಬೇಕಾದಷ್ಟನ್ನು ಮಾತ್ರ ಇಟ್ಟುಕೊಂಡು ಹೆಚ್ಚಾಗಿ ಖರೀದಿಸಿದ್ದನ್ನು ಬೇರೆಯವರಿಗೆ ಅನುಕೂಲವಾಗಲೆಂದು ಮಾರುಕಟ್ಟೆಗೆ ಹೋಗಿ ಹಿಂತಿರುಗಿಸುವ ಮೂಲಕ ಅಸಂಗ್ರಹ ಬುದ್ಧಿಯನ್ನು ತೋರಿದರು. ಎಲ್ಲರಿಗೂ ಗೊತ್ತಿರುವಂತೆ ಈ ಮಹಾದುರಂತದಲ್ಲಿ ಸಾವಿರಾರು ಜನರನ್ನು ದೈತ್ಯಾಕಾರದ ಸುನಾಮಿ ಅಲೆಗಳು ದೋಚಿಕೊಂಡು ಹೋದವು. ಆದರೆ ಬದುಕುಳಿದು ಕಷ್ಟಕ್ಕೆ ಸಿಲುಕಿದ ಜನರಾರೂ ಸತ್ತವರ ಆಸ್ತಿಪಾಸಿಗಳನ್ನು ದೋಚಲಿಲ್ಲ! ಸುನಾಮಿ ಅಲೆ ದಾರಿಬೀದಿಗಳಲ್ಲಿ ಬಿಸಾಡಿದ್ದ ಸತ್ತವರ ಕಾರುಗಳನ್ನು ಕದಿಯಲಿಲ್ಲ. ಅಷ್ಟೇ ಏಕೆ ಅವುಗಳಲ್ಲಿದ್ದ ಪೆಟ್ರೋಲನ್ನೂ ಮುಟ್ಟಲಿಲ್ಲ, ಪೆಟ್ರೋಲ್ ಅಭಾವದ ಕಾರಣ ಮೇಲಧಿಕಾರಗಳ ಗಮನಕ್ಕೆ ತಂದು ಅವರ ಅನುಮತಿ ಪಡೆದು ಆ ಕಾರುಗಳಲ್ಲಿದ್ದ ಪೆಟ್ರೋಲನ್ನು ಪಡೆದರೇ ಹೊರತು ಕದಿಯಲಿಲ್ಲ. ದೂರದ ಅಮೇರಿಕೆಯಲ್ಲಿ ನೆಲೆಸಿರುವ ಜಪಾನೀ ನಾಗರಿಕನೊಬ್ಬ ಇಂತಹ ಸಂದರ್ಭದಲ್ಲಿ ತನ್ನ ತಂದೆ-ತಾಯಂದಿರನ್ನು ಮತ್ತು ಬಂಧುಗಳನ್ನಷ್ಟೇ ಅಮೇರಿಕೆಗೆ ಕರೆಸಿಕೊಂಡರೆ ತಾನೊಬ್ಬ ಸ್ವಾರ್ಥಿಯಾಗುತ್ತೇನೆಂದು ಬರೆದಿದ್ದಾನೆ. ಅದರ ಬದಲು ತಾನೇ ಸ್ವತಃ ತಾಯ್ನಾಡಿಗೆ ಹೋಗಿ ಅಲ್ಲಿಯ ಜನರ ಕಣ್ಣೀರೊರೆಸಲು ಬಯಸಿದ್ದಾನೆ. “I do not want to just sit in front of TV and cry because I see their tears. But I want to be of some help to the people of my country in their suffering.”
ಸಹೃದಯ ಓದುಗರೇ! ಇದೇ ಅಲ್ಲವೇ ನಿಜವಾದ ದೇಶಭಕ್ತಿ ಮತ್ತು ಮಾನವೀಯ ಧರ್ಮ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 12.5.2011