ರಾಜಕೀಯದ ರಾಡಿ ತೊಳೆಯುವುದು ಹೇಗೆ?

  •  
  •  
  •  
  •  
  •    Views  

ಪ್ರಪಂಚದಲ್ಲಿ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದರೆ ಭಾರತ. ಪ್ರಜಾಪ್ರಭುತ್ವವಿರುವ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮತದಾರರೂ ಅಧಿಕ, ರಾಜಕೀಯ ಪಕ್ಷಗಳೂ ಅಧಿಕ. ಇತ್ತೀಚೆಗೆ ಅಧಿಕಾರ ಲಾಲಸೆಯಿಂದ ಅಪವಿತ್ರ ರಾಜಕೀಯ ಧೃವೀಕರಣ ಆರಂಭವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟಗಾರರು ಭವಿಷ್ಯದಲ್ಲಿ ದೇಶವು ಹೇಗಿರಬೇಕೆಂದು ಕನಸು ಕಂಡಿದ್ದರೋ ಅದಕ್ಕೆ ವಿರುದ್ಧವಾಗಿ ಸಮಕಾಲೀನ ವಿದ್ಯಮಾನಗಳು ಜರುಗುತ್ತಿವೆ. ತ್ಯಾಗ ಬಲಿದಾನಗಳು  ಅಂದಿನ ಮೌಲ್ಯಗಳಾಗಿದ್ದವು. ಆದರೆ ಇಂದು ಪ್ರಜಾಪ್ರಭುತ್ವ ಇರುವುದು ಜನರ ಯೋಗಕ್ಷೇಮಕ್ಕೆ ಎಂಬುದು ಮಾಯವಾಗಿ ಅದು ಇರುವುದು ರಾಜಕಾರಣಿಗಳ ಯೋಗಕ್ಷೇಮಕ್ಕೆ ಎಂಬ ಸ್ಥಿತಿ ನಿರ್ಮಾಣವಾಗಿದೆ. ಒಮ್ಮೆ ಜನರಿಂದ ಆಯ್ಕೆಯಾದರೆ ತೀರಿತು, ಅವರ ಆಟಾಟೋಪಗಳಿಗೆ ಅಡೆತಡೆಗಳೇ ಇಲ್ಲ. ಭ್ರಷ್ಟಾಚಾರವು ರಕ್ತಬೀಜಾಸುರನ ಸಂತತಿಯಂತೆ ನಿತ್ಯವೂ ವರ್ಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿರ್ಮೂಲನಕ್ಕೆ ಅಣ್ಣಾ ಹಜಾರೆಯವರು ಕೈಗೊಂಡಿರುವ ಅಭಿಯಾನಕ್ಕೆ ಜನತೆಯಿಂದ ಅಭೂತಪೂರ್ವವಾದ ಬೆಂಬಲ ದೊರಕಿ ಲೋಕಪಾಲ ಮಸೂದೆ ಬಹುವಾಗಿ ಚರ್ಚೆಗೆ ಗ್ರಾಸವಾಗಿದೆ. ಅದನ್ನು ದುರ್ಬಲಗೊಳಿಸುವ ವ್ಯವಸ್ಥಿತ ಹುನ್ನಾರಗಳೂ ನಡೆಯುತ್ತಿವೆ. ಈ ಮಸೂದೆಯಿಂದಲೂ ಭ್ರಷ್ಟಾಚಾರವನ್ನು ಪರಿಹರಿಸಲು ಸಾಧ್ಯವಾಗುವುದೆಂಬ ಪೂರ್ಣ ನಂಬಿಕೆ ಇಲ್ಲ. ಸ್ವತಃ ನಾನೇ ಚುನಾವಣೆಗೆ ನಿಂತರೂ ಗೆಲ್ಲುವುದಿಲ್ಲ ಎಂಬ ಹಜಾರೆಯವರ ಮಾತಿನಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆಗೆ ಒದಗಿದ ಸ್ಥಿತಿಯೇ ಲೋಕಪಾಲ ಮಸೂದೆಗೂ ಬಂದರೆ ಆಶ್ಚರ್ಯವೇನಿಲ್ಲ, ಅದನ್ನೊಂದು ಬಟ್ಟೆಯ ಹಾವನ್ನಾಗಿ ಪರಿವರ್ತಿಸುವುದರಲ್ಲಿ ನಮ್ಮ ರಾಜಕಾರಣಿಗಳಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಭ್ರಷ್ಟಾಚಾರವೆನ್ನುವುದು ಪಾಪಾಸು ಕಳ್ಳಿಯಂತೆ ಬೆಳೆದು ನಿಂತ ನಂತರ ಅದನ್ನು ಕಳೆಯುವ ಪ್ರಯತ್ನಕ್ಕಿಂತ ಅದು ಬೆಳೆಯದಂತೆ ತಡೆಗಟ್ಟುವುದು ಹೆಚ್ಚು ವಿಹಿತ. ನಮ್ಮ ಅಭಿಪ್ರಾಯದಲ್ಲಿ ಇಂದಿನ ಆಯಾ ರಾಂ, ಗಯಾ ರಾಂ, ಗರಮಾ ಗರಂ ರಾಜಕೀಯ ರಾಡಿಯನ್ನು ತೊಳೆಯಲು ಕೆಲವು ಸುಲಭೋಪಾಯಗಳಿವೆ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಈ ಲೇಖನ.

ಚುನಾವಣೆಗಳು ನಡೆದು ಫಲಿತಾಂಶ ಬಂದ ನಂತರ ಎಲ್ಲರ ಕಣ್ಣು ಅಧಿಕಾರ ಗದ್ದುಗೆಯ ಮೇಲೆ ಇರುತ್ತದೆ. ಅಧಿಕಾರವೇ ಪ್ರಮುಖವಾಗಿ ಜನರ ಹಿತ ನೇಪಥ್ಯಕ್ಕೆ ಸರಿಯುತ್ತದೆ. ಬಹುಮತ ಪಡೆದ ಪಕ್ಷವು ಅಧಿಕಾರದ ಗದ್ದುಗೆ ಹಿಡಿಯುತ್ತದೆ. ಒಂದು ವೇಳೆ ಬಹುಮತಕ್ಕೆ ಅಲ್ಪ ಕೊರತೆ ಬಿದ್ದರೆ ಅದನ್ನು ಹೇಗಾದರೂ ಸರಿ ತುಂಬಿಕೊಂಡು ಅಧಿಕಾರವನ್ನು ಹಿಡಿಯುವ ಯತ್ನ ನಡೆಯುತ್ತದೆ. ಅತಂತ್ರ ಸ್ಥಿತಿ ಇದ್ದರಂತೂ ಶಾಸಕರುಗಳು ಕುದುರೆಗಳಂತೆ ವ್ಯಾಪಾರವಾಗುತ್ತಾರೆ (Horse Trading). 

ಇನ್ನು ವಿರೋಧ ಪಕ್ಷದಲ್ಲಿ ಕುಳಿತವರೂ ಸುಮ್ಮನಿರುವುದಿಲ್ಲ, ಅವರೂ ಆಡಳಿತ ಪಕ್ಷದ ಸದಸ್ಯರನ್ನು ಸೆಳೆಯಲು ಯತ್ನಿಸುತ್ತಾರೆ. ಆಡಳಿತದಲ್ಲಿರುವವರನ್ನು ಕೆಡವಲು ಸದಾ ಹವಣಿಸುತ್ತಿರುತ್ತಾರೆ. ಆಡಳಿತದಲ್ಲಿರುವವರಿಗೆ ಹೇಗಾದರೂ ಸರಿ ಕುರ್ಚಿ ಉಳಿಸಿಕೊಳ್ಳುವ ಬಯಕೆ, ವಿರೋಧ ಪಕ್ಷದವರಿಗೆ ಅವರನ್ನು ಕೆಡವಿ ಅಧಿಕಾರ ಗದ್ದುಗೆ ಏರುವ ತವಕ. ಈ ರೀತಿಯ ತಂತ್ರ, ಪ್ರತಿತಂತ್ರಗಳ ಅತಿ ರಂಜಿತ ವರದಿಗಳನ್ನು ನೋಡಿ, ಕೇಳಿ, ಓದಿ ಜನ ರೋಸಿಹೋಗಿದ್ದಾರೆ. ಗಂಡಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಸ್ಥಿತಿ, ರೈತರ ಗೋಳಿಗೆ ಸ್ಪಂದಿಸಬೇಕಾದ ಶಾಸಕರು, ಮಂತ್ರಿಗಳಿಗೆ ಸ್ವಲ್ಪವೂ ಪುರುಸೊತ್ತಿಲ್ಲ. ಎಲ್ಲರೂ ತಂತಮ್ಮ ಸ್ವಹಿತಾಸಕ್ತಿಯಲ್ಲಿ, ರಾಜಕೀಯ ಹಗ್ಗಜಗ್ಗಾಟದಲ್ಲಿಯೇ ಪೂರ್ಣಾವಧಿ ತೊಡಗಿಸಿಕೊಂಡಿದ್ದಾರೆ.

ನೀವು ಯಾವ ಪಕ್ಷದಲ್ಲಿದ್ದೀರಿ? ಎಂದು ಯಾರನ್ನಾದರೂ ಕೇಳಿದರೆ ಚುನಾವಣೆಗೆ ನಿಲ್ಲಲು ಯಾವ ಪಕ್ಷದವರು ಟಿಕೆಟ್ ಕೊಡುತ್ತಾರೋ ಆ ಪಕ್ಷ ಎನ್ನುವಂತಾಗಿದೆ. ಅಂಥವರನ್ನು ನೋಡಿದಾಗ ನಮಗೆ ನೆನಪಾಗುವುದು ಬಸವಣ್ಣನವರು ಕಟುವಾಗಿ ನುಡಿದಿರುವ ಈ ಮುಂದಿನ ವಚನ: “ಕಂಡ ಕಂಡವರ ಗಂಡರೆಂದೆಂಬ ದುಂಡೆಯನವಳ ಸಜ್ಜನೆ ಎನ್ನಬಹುದೇ?” ಈ ಮಾತನ್ನು ಅವರು ಭಕ್ತ ಮತ್ತು ಭಗವಂತನ ಮಧ್ಯೆ ಇರುವ ಸಂಬಂಧವನ್ನು ಕುರಿತು ಹೇಳಿದ್ದಾರೆ. ಮದುವೆಯಾದ ಹೆಣ್ಣು ದಾರಿಬೀದಿಯಲ್ಲಿ ಓಡಾಡುವವರನ್ನೆಲ್ಲಾ ತನ್ನ ಗಂಡ ಎಂದು ಹೇಳಿಕೊಳ್ಳಲು ಬರುವುದಿಲ್ಲ. ಹಾಗೆ ಹೇಳಿಕೊಳ್ಳುವವಳು ಗರತಿ ಎನಿಸುವುದಿಲ್ಲ. ಬಸವಣ್ಣನವರೇ ಇನ್ನೊಂದೆಡೆ ಹೇಳಿರುವಂತೆ “ನಂಬಿದ ಹೆಂಡತಿಗೆ ಗಂಡನೊಬ್ಬ, ನಂಬಬಲ್ಲ ಭಕ್ತಂತೆ ದೇವನೊಬ್ಬ ಬೇಡ ಬೇಡ ಅನ್ಯ ದೈವವೆಂಬುದು ಹಾದರ ಕಾಣಿರೋ”, ನಿಜವಾದ ಭಕ್ತನು ಒಬ್ಬ ದೇವರನ್ನು ನಂಬಬೇಕು; ಒಬ್ಬ ದೇವರನ್ನು ಪೂಜಿಸಬೇಕು. ಒಬ್ಬ ದೇವರಿಂದ ತನ್ನ ಇಷ್ಟಾರ್ಥ ಸಿದ್ದಿಸಲಿಲ್ಲವೆಂದು ಮತ್ತೊಬ್ಬ ದೇವರಿಗೆ ಹರಕೆ ಹಾಕಿಕೊಳ್ಳುವುದು ಹಾದರ ಮಾಡಿದಂತೆ. ಅಂತಹ ಹಾದರದ ಕೆಲಸ ಇಂದಿನ ಎಲ್ಲ ರಾಜಕೀಯ ಪಕ್ಷಗಳಿಂದಲೂ ನಡೆದಿದೆ. 

  • ಪಕ್ಷನಿಷ್ಠೆ ಎಂಬುದು ಯಾವ ಪಕ್ಷದ ಸದಸ್ಯರಲ್ಲಿಯೂ ಇಲ್ಲ, ತತ್ವ-ಸಿದ್ಧಾಂತಗಳೆಂಬುದು ಬರೀ ಬುಡುಬುಡಿಕೆ. ಎಲ್ಲ ಪಕ್ಷಗಳಲ್ಲಿಯೂ ಅಧಿಕಾರದ ಹವಣಿಕೆಯೇ ತಾರಕ ಮಂತ್ರ. ದುಡ್ಡಿದ್ದವನು ಯಾವ ಪಕ್ಷದಿಂದ ಯಾವಾಗ ಬೇಕಾದರೂ ನಿಲ್ಲಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ. ಪಕ್ಷಗಳಲ್ಲಿಯೂ ಸಹ ತಮ್ಮ ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಿ ದುಡ್ಡಿದ್ದವರಿಗೆ ಮಾತ್ರ ಮಣೆ ಹಾಕುವ ಪ್ರವೃತ್ತಿ ಬೆಳೆದಿದೆ. ಎದುರಾಳಿ ಪಕ್ಷದ ಅಭ್ಯರ್ಥಿ ಯಾರು, ಅವನನ್ನು ಸೋಲಿಸಬಲ್ಲ ತಮ್ಮ ಪಕ್ಷದ ಸಮರ್ಥ ಅಭ್ಯರ್ಥಿ ಯಾರು ಎಂದು ಲೆಕ್ಕ ಹಾಕುವುದಕ್ಕಿಂತ ಕೊನೆ ಗಳಿಗೆಯಲ್ಲಿ ಇನ್ನೊಂದು ಪಕ್ಷದಿಂದ ಟಿಕೆಟ್ ಸಿಗದ ಅತೃಪ್ತ ವ್ಯಕ್ತಿಯನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡು ಟಿಕೆಟ್ ಕೊಡುವ ರಾಜಕೀಯ ತಂತ್ರಗಾರಿಕೆ ಹೆಚ್ಚಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಕಂಡುಬಂದ ಅಸಹ್ಯಕರ ರಿಸಾರ್ಟ್ ರಾಜಕೀಯ ಮತ್ತು ಆಪರೇಷನ್ ಗಳನ್ನು ತಡೆಗಟ್ಟಲು ನಮ್ಮ ಅಭಿಪ್ರಾಯದಲ್ಲಿ ಇರುವ ಸುಲಭ ಪರಿಹಾರೋಪಾಯಗಳು ಇಂತಿವೆ: 

  • ವಿವಿಧ ಸಂಘ-ಸಂಸ್ಥೆಗಳ ಸದಸ್ಯರ ಹೆಸರು ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಣಿಯಾದಂತೆ ಪ್ರತಿಯೊಂದು ರಾಜಕೀಯ ಪಕ್ಷವೂ ತನ್ನ ಸದಸ್ಯರ ಪಟ್ಟಿಯನ್ನು ಕಡ್ಡಾಯವಾಗಿ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸಬೇಕು. ಯಾವುದೇ ರಾಜಕೀಯ ಪಕ್ಷದಿಂದ ಚುನಾವಣೆಗೆ ನಿಲ್ಲಬೇಕೆಂದು ಬಯಸುವ ಅಭ್ಯರ್ಥಿಯು ಆ ಪಕ್ಷದ ಸದಸ್ಯನಾಗಿ ಕನಿಷ್ಠ ಐದು ವರ್ಷಗಳು ಆಗಿರಬೇಕು. ಒಂದು ದಿನ ಕಡಿಮೆ ಇದ್ದರೂ ಚುನಾವಣಾ ಆಯೋಗವು ಅಂಥವನನ್ನು ಅನರ್ಹಗೊಳಿಸಬೇಕು. 

  • ಯಾವುದೇ ಕಾರಣದಿಂದ ಒಂದು ರಾಜಕೀಯ ಪಕ್ಷದ ಸದಸ್ಯ ಮತ್ತೊಂದು ರಾಜಕೀಯ ಪಕ್ಷ ಸೇರಿದರೆ ತಕ್ಷಣವೇ ಆ ರಾಜಕೀಯ ಪಕ್ಷದಿಂದ ಟಿಕೆಟ್ ಪಡೆಯಲು ಅವಕಾಶ ಇರಬಾರದು. ಆ ಪಕ್ಷದ ಟಿಕೆಟ್ ಪಡೆಯಲು ಮತ್ತೆ ಐದು ವರ್ಷ ಕಾಯುವಂತಾಗಬೇಕು. 

  • ಈಗಿನ ಪಕ್ಷಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ತರಬೇಕು. ಗುಂಪು ಗುಂಪಾಗಿಯೂ ಪಕ್ಷಾಂತರ ಮಾಡಲು ಅವಕಾಶ ಇರಬಾರದು.  ಯಾವುದೇ ಪಕ್ಷದಿಂದ ಗೆದ್ದ ಅಭ್ಯರ್ಥಿ ಪಕ್ಷದ ಆಂತರಿಕ ಆಡಳಿತದಿಂದ ಉಸಿರುಗಟ್ಟುವ ವಾತಾವರಣ ಉಂಟಾದರೆ ರಾಜೀನಾಮೆ ಕೊಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಬಹುದು. ಸ್ವತಂತ್ರ ಅಭ್ಯರ್ಥಿಗಳಾಗಿ ನಿಂತು ಗೆದ್ದವರಿಗೆ ಯಾವುದೇ ರಾಜಕೀಯ ಪಕ್ಷವನ್ನು ಸೇರಲು ಅವಕಾಶ ಇರಬಾರದು. ಸರಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದು. ಆದರೆ ಸಚಿವ ಸಂಪುಟಕ್ಕೆ ಸೇರಲು ಅವಕಾಶ ಇರಬಾರದು. ಮಂತ್ರಿಪದವಿ ಸಿಗದ ಅತೃಪ್ತ ಶಾಸಕರನ್ನು ತೃಪ್ತಿಪಡಿಸಲು ಇರುವ ನಿಗಮ-ಮಂಡಳಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಆಯಾಯ ನಿಗಮ-ಮಂಡಳಿಗಳ ಕಾರ್ಯಭಾರವನ್ನು ಅವುಗಳಿಗೆ ಸಂಬಂಧಿಸಿದ ಸಚಿವಾಲಯವೇ ನಿರ್ವಹಿಸಬೇಕು.

  • ಸರಕಾರ ರಚನೆ ಮಾಡಲು ಬಹುಮತವೇ ಇರಬೇಕೆಂಬ ನಿಯಮವನ್ನು ಸಡಿಲಗೊಳಿಸಬೇಕು. ಹೆಚ್ಚಿನ ಸೀಟುಗಳನ್ನು ಪಡೆದ ಪಕ್ಷವೇ ಸರಕಾರ ರಚನೆ ಮಾಡಲು ಅವಕಾಶವಿರಬೇಕು. ಒಂದೂವರೆ ಲಕ್ಷ ಮತದಾರರು ಇರುವ ಕ್ಷೇತ್ರದಲ್ಲಿ ಓಟುಗಳು ಹಂಚಿಹೋಗಿ 25 ಸಾವಿರ ಓಟು ಪಡೆದವನು ಗೆಲ್ಲಬಹುದಾದರೆ ಹೆಚ್ಚಿನ ಸೀಟುಗಳನ್ನು ಪಡೆದ ಪಕ್ಷ ಸರಕಾರವನ್ನು ಏಕೆ ರಚಿಸಬಾರದು? 

  • ಆಡಳಿತ ಪಕ್ಷ ಮಾಡುವುದೆಲ್ಲವೂ ಸರಿ ಎಂದು ನಂಬಲಾಗದು. ಅದು ಮಾಡುವುದೆಲ್ಲವನ್ನೂ ವಿರೋಧಿಸಬೇಕೆಂಬ ಮನೋಧರ್ಮವೂ ವಿರೋಧಪಕ್ಷದವರಲ್ಲಿ ಇರಕೂಡದು. ಸದನದಲ್ಲಿ ಮಂಡಿಸುವ ಬಿಲ್ ಪಾಸಾಗಲು ಬಹುಮತ ಇರಬೇಕು. ಸದನದಲ್ಲಿ ಯಾವುದೇ ಬಿಲ್ಲನ್ನು ಮಂಡಿಸುವಾಗ ಆಡಳಿತ ಪಕ್ಷಕ್ಕೆ ಜನರ ಬಗ್ಗೆ ಕಾಳಜಿ ಇರಬೇಕು. ಒಂದು ಒಳ್ಳೆಯ ಬಿಲ್ಲನ್ನು ಸದನದಲ್ಲಿ ಮಂಡಿಸಿದರೆ ಅದನ್ನು ವಿರೋಧಿಸಲು ವಿರೋಧ ಪಕ್ಷ ಅಂಜುವಂತಿರಬೇಕು. 

  • ಸಹೃದಯ ಓದುಗರೇ, ಕುರಿಕಾಯಲು ನೇಮಿಸಿದ ತೋಳಗಳಂತೆ ಆಗಿರುವ ನಮ್ಮ ಜನಪ್ರತಿನಿಧಿಗಳೆಂಬ ಕೊಬ್ಬಿದ ಗೂಳಿಗಳಿಗೆ ಮೂಗುದಾರ ಏರಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 19.5.2011