ವೈಧವ್ಯ: ಹೀಗಳಿಕೆ ಏಕೆ?
ಮಠದ ಸ್ವಾಮಿಗಳೊಬ್ಬರು ಒಂದು ಹಳ್ಳಿಗೆ ದಯಮಾಡಿಸಿದ್ದರು. ಅಪರೂಪಕ್ಕೆ ಆಗಮಿಸಿದ್ದ ಅವರ ದರ್ಶನಾಶೀರ್ವಾದ ಪಡೆಯಲು ಶಿಷ್ಯರೆಲ್ಲರೂ ಸಾಲುಗಟ್ಟಿ ನಿಂತಿದ್ದರು. ಆ ಸಾಲಿನಲ್ಲಿ ಒಬ್ಬ ಯುವ ಮಹಿಳೆ ಇದ್ದಳು. ದುರದೃಷ್ಟವಶಾತ್ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಆಕೆಯ ಗಂಡ ಸತ್ತುಹೋಗಿದ್ದ. ಸಂಪ್ರದಾಯದ ಪ್ರಕಾರ ಆಕೆ ತಲೆ ಬೋಳಿಸಿಕೊಂಡಿದ್ದು ಕೆಂಪುಸೀರೆಯನ್ನು ಉಟ್ಟುಕೊಂಡಿದ್ದಳು. ಚಿಕ್ಕವಯಸ್ಸಿನಲ್ಲಿಯೇ ವಿಧವೆಯಾಗಿದ್ದ ಅವಳು ತುಂಬಾ ಧಾರ್ಮಿಕಪ್ರವೃತ್ತಿಯುಳ್ಳವಳಾಗಿದ್ದಳು. ಸ್ವಾಮಿಗಳು ಸಾಲುಗಟ್ಟಿ ಬಂದು ನಮಸ್ಕರಿಸಿದ ಶಿಷ್ಯರಿಗೆ ತೀರ್ಥಪ್ರಸಾದವನ್ನು ಅನುಗ್ರಹಿಸುತ್ತಿದ್ದರು. ಆ ಯುವ ಮಹಿಳೆಯು ತನ್ನ ಸರದಿ ಬಂದಾಗ ತುಂಬಾ ಭಾವುಕಳಾಗಿ ಸ್ವಾಮಿಗಳಿಗೆ ಮಂಡಿಯೂರಿ ನಮಸ್ಕರಿಸಿ ತೀರ್ಥಪ್ರಸಾದ ಪಡೆಯಲು ವಿನೀತಳಾಗಿ ಕೈಚಾಚಿದಳು. ಅವಳನ್ನು ನೋಡುತ್ತಿದ್ದಂತೆಯೇ ಸ್ವಾಮಿಗಳು ಕೆಂಡಾಮಂಡಲವಾಗಿ ಕೈಯಲ್ಲಿದ್ದ ಉದ್ಧರಣೆ ಸೌಟನ್ನು ಬೀರಿ ಎಸೆದರು. “ಮುಂಡೆ, ಪ್ರಸಾದಕ್ಕೆ ಕೈಚಾಚುತ್ತಿದ್ದಾಳೆ” ಎಂದು ಸಿಡಿಮಿಡಿಗೊಂಡು ಎದ್ದು ದಡದಡನೆ ಹತ್ತಿರದಲ್ಲಿದ್ದ ಬಾವಿ ಕಟ್ಟೆಗೆ ಹೋಗಿ ತಲೆಯ ಮೇಲೆ ಮಡಿನೀರನ್ನು ಸುರಿದುಕೊಳ್ಳತೊಡಗಿದರು. ಸ್ವಾಮಿಗಳ ಈ ವರ್ತನೆ ಮುಗ್ದ ಶಿಷ್ಯರಿಗೆ ತಪ್ಪಾಗಿ ಕಾಣಿಸಲಿಲ್ಲ. ಆ ವಿಧವೆಯದೇ ತಪ್ಪು ಎನ್ನುವಂತೆ ಆಕ್ಷೇಪಿಸತೊಡಗಿದರು. ಆ ವಿಧವೆಯೂ ಸಹ ಮರುಮಾತನಾಡದೆ ತಲೆತಗ್ಗಿಸಿಕೊಂಡು ದುಃಖಿಸುತ್ತಾ ಮನೆಯತ್ತ ಧಾವಿಸಿದಳು. ಇದು ಕಾಲ್ಪನಿಕ ಕತೆಯಲ್ಲ. ನಿಜವಾಗಿ ನಡೆದ ಸತ್ಯ ಘಟನೆ. ಬಹಳ ವರ್ಷಗಳ ಹಿಂದೆ ಸಿರಿಗೆರೆಯ ನಮ್ಮ ಮಠದ ಕಾಲೇಜಿನ ತಪಾಸಣೆಗೆಂದು ಬಂದಿದ್ದ ಮೈಸೂರು ವಿಶ್ವವಿದ್ಯಾನಿಲಯದಿಂದ ಹಿರಿಯ ಪ್ರಾಧ್ಯಾಪಕರೊಬ್ಬರು (ಹೆಸರು ಈಗ ನೆನಪಿಲ್ಲ) ನಮ್ಮೊಡನೆ ಮಾತನಾಡುವಾಗ ಪ್ರಾಸಂಗಿಕವಾಗಿ ಹೇಳಿದ ಮನಮಿಡಿಯುವ ಘಟನೆ. ಈ ಪ್ರಸಂಗ ಅಷ್ಟಕ್ಕೇ ನಿಲ್ಲಲಿಲ್ಲ. ಆ ಪ್ರಾಧ್ಯಾಪಕರು ಮುಂದುವರಿದು ಹೇಳಿದ ಸ್ವಾರಸ್ವಕರ ಸಂಗತಿಯೆಂದರೆ: ಆ ವಿಧವೆಗೆ ಪ್ರಸಾದ ಕೊಡಲು ನಿರಾಕರಿಸಿದ ಅದೇ ಸ್ವಾಮಿಗಳು ಕಾರ್ಯಾರ್ಥವಾಗಿ ದೆಹಲಿಯಲ್ಲಿದ್ದಾಗ ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರ ಮನೆಗೆ ಸ್ವತಃ ಹೋಗಿ ಪ್ರಸಾದವನ್ನು ಕೊಟ್ಟುಬಂದರಂತೆ! ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಕಟ್ಟಳೆಗಳು ಬಡವರಿಗೇ ಒಂದು ಬಲಿಷ್ಟರಿಗೇ ಒಂದು; ಪುರುಷರಿಗೆ ಒಂದು ಸ್ತ್ರೀಯರಿಗೇ ಒಂದು ಆಗಿರುವುದು ವಿಷಾದನೀಯ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” (ನಾರಿಯರಿಗೆ ಗೌರವ ಸಲ್ಲುವೆಡೆಯಲ್ಲಿ ದೇವತೆಗಳು ಸಂತೃಪ್ತಿಯಿಂದ ಇರುತ್ತಾರೆ) ಎಂದು ಹೆಣ್ಣಿಗೆ ಅತ್ಯಂತ ಪೂಜನೀಯ ಸ್ಥಾನವನ್ನು ನೀಡಿದ ನಮ್ಮ ದೇಶವು ಪುರುಷನಿಗೆ ಸರಿಸಮಾನವಾದ ಬದುಕನ್ನು ಹೆಣ್ಣಿಗೆ ನೀಡುವಲ್ಲಿ ಸೋತಿದೆ ಎಂದೇ ಹೇಳಬೇಕಾಗುತ್ತದೆ.
ವಿಧವೆ ಆದಳೆಂದರೆ ಅವಳನ್ನು ತಲೆ ಬೋಳಿಸಿ ಕೆಂಪು ಸೀರೆ ಉಡಿಸಿ ವಿಕಾರಗೊಳಿಸಿ ಮೂಲೆಗೆ ಕೂರಿಸುತ್ತಿದ್ದ ಕಾಲ ಇತ್ತು. ಈಗ ಅದು ಇಲ್ಲವಾದರೂ ಮನೋಭಾವ ಮಾತ್ರ ಬದಲಾಗಿಲ್ಲ. ವಿಧವೆಯಾದವಳು ಕುಂಕುಮ ಧರಿಸುವಂತಿಲ್ಲ, ಹೂ ಮುಡಿಯುವಂತಿಲ್ಲ, ಬಳೆ ಹಾಕಿಕೊಳ್ಳುವಂತಿಲ್ಲ. ಗಂಡ ಕಟ್ಟಿದ್ದು ತಾಳಿ ಮಾತ್ರ, ಹೂವು, ಅರಿಸಿಣ, ಕುಂಕುಮ, ಬಳೆ ಆಕೆಗೆ ಗಂಡನಿಂದ ಬಂದವುಗಳಲ್ಲ, ಆಕೆ ಹುಟ್ಟಿನಿಂದ ಧರಿಸುತ್ತಿದ್ದವುಗಳು. ಅವನ್ನೇಕೆ ತೆಗೆಯಬೇಕು? ಗಂಡ ಸತ್ತಾಗ ತಾಳಿಯನ್ನು ತೆಗೆಸುವ ಸಮಾಜ ವಿಧವೆಯಾದ ಆಕೆಯ ಗಂಡ ಯಾರೆಂದು ಕೇಳಿದರೆ ಸತ್ತ ಗಂಡನ ಹೆಸರನ್ನೇ ತಾನೆ ಹೇಳುವುದು? ಗಂಡ ಸತ್ತಾಗ ಆಕಾಶವೇ ಕಳಚಿ ಬಿದ್ದಂತಾಗಿ ದುಃಖತಪ್ತಳಾದ ಹೆಂಡತಿಗೆ ಯಾವ ಅಲಂಕಾರವೂ ಬೇಕೆಂದೆನಿಸುವುದಿಲ್ಲ. ಮೈಮೇಲಿರುವ ಆಭರಣಗಳನ್ನು ಸಹಜವಾಗಿ ಕಿತ್ತು ಬಿಸಾಡುತ್ತಾಳೆ. ಆಕೆಯ ಉದ್ವಿಗ್ನ ಮನಃಸ್ಥಿತಿಯಲ್ಲಿ ಉಂಟಾಗುವ ಈ ಸಹಜ ಪ್ರತಿಕ್ರಿಯೆಯನ್ನು ಒಂದು ಶಾಸ್ತ್ರವನ್ನಾಗಿ ಮಾಡುವುದು ಗಾಯದ ಮೇಲೆ ಬರೆ ಎಳೆದಂತೆ ಆಗುವುದಿಲ್ಲವೇ?
ಮಗ ಸತ್ತರೆ ಮನೆಹಾಳು, ಸೊಸೆ ಸತ್ತರೆ ಸೋಬಾನೆ ಎನ್ನುತ್ತದೆ ಗಾದೆ. ಸೊಸೆ ಸತ್ತರೆ ಮಗನಿಗೆ ಹೆಣ್ಣು ಕೊಡಲು ಸಾಲುಗಟ್ಟಿ ನಿಲ್ಲುತ್ತಾರೆ. ಮಗ ಸತ್ತರೆ ಮನೆತನ ಬೆಳೆಯದೆ ಹಾಳಾಗುತ್ತದೆ ಎಂದು ಕೊರಗುವ ಜನ ಸೊಸೆಯ ವಿಚಾರವಾಗಿ ಏಕೆ ಚಿಂತಿಸುವುದಿಲ್ಲ? ವಿಧುರ ಮಗನಿಗೆ ಹೊಸ ಬದುಕು ಇದೆ ಎಂದಾದರೆ ಅಂಥದೇ ಬದುಕು ವಿಧವೆ ಸೊಸೆಗೆ ಏಕೆ ಬೇಡ? ವಿಧವೆಯರು ಮಂಗಳ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ, ಆಕೆಯ ನೆರಳು ಸಹ ಬಿದ್ದರೂ ಮದುವೆಯಾಗುತ್ತಿರುವ ತಮ್ಮ ಮಗಳೂ ಎಲ್ಲಿ ವಿಧವೆಯಾಗಿಬಿಡುತ್ತಾಳೋ ಎಂಬ ಭಯ ಹೆತ್ತವರಿಗೆ. ಮದುಮಕ್ಕಳಿಗೆ ಸುಮಂಗಲೆಯರಿಂದ ಆಶೀರ್ವಾದ ಮಾಡಿಸುವುದು ನಡೆದು ಬಂದಿರುವ ಸತ್ ಸಂಪ್ರದಾಯ. ಆದರೆ ನಮ್ಮ ಅಭಿಪ್ರಾಯದಲ್ಲಿ ಮದುಮಕ್ಕಳಿಗೆ ವಿಧವೆಯಿಂದ ಆಶೀರ್ವಾದ ಮಾಡಿಸಿದರೆ ಕೆಟ್ಟದ್ದೇನೂ ಆಗುವುದಿಲ್ಲ; ಆಕೆ ಖಂಡಿತವಾಗಿಯೂ ಭಾವುಕಳಾಗಿ ನನಗೆ ಬಂದ ಕಷ್ಟ ನಿನಗೆ ಬಾರದಿರಲಿ ಎಂದು ಮನತುಂಬಿ ಹರಸುತ್ತಾಳೆ.
ಭಾರತೀಯ ಮಹಿಳೆ ಮುತ್ತೈದೆ ಸಾವನ್ನು ಬಯಸುತ್ತಾಳೆ. ಜನಪದಗೀತೆಯೊಂದರಲ್ಲಿ ಗರತಿಯೊಬ್ಬಳು ದೇವರನ್ನು ಹೀಗೆ ಬೇಡಿಕೊಂಡಿದ್ದಾಳೆ:
ಅಂಗೈಯ ಒಳಗಣ ಲಿಂಗಮೂರುತಿ ಸ್ವಾಮಿ
ಮಂಗಳಾರತಿಯ ನಾ ಬೆಳಗಿ |
ಬೇಡುವೆ ಮಾರಾಯರ ಮುಂದೆ ಮರಣಾವ
ಗಂಡ ಇದ್ದಕ್ಕಿದ್ದಂತೆಯೇ ಮೃತಪಟ್ಟರೆ ಕುಟುಂಬ ಮತ್ತು ಸಮಾಜದಲ್ಲಿ ಅನುಭವಿಸಬೇಕಾದ ಯಾತನೆಗಳನ್ನು ನೆನೆಸಿಕೊಂಡು ಅವುಗಳಿಂದ ಪಾರಾಗಲು ಹೀಗೆ ಮುತ್ತೈದೆ ಸಾವನ್ನು ದೇವರಲ್ಲಿ ಬೇಡಿಕೊಂಡಂತೆ ತೋರುತ್ತದೆ. ಮುತ್ತೈದೆಯಾಗಿ ಸತ್ತವಳನ್ನು ಪುಣ್ಯವಂತೆ ಎಂದು ಕೊಂಡಾಡುವ ಸಮಾಜ ವಿಧವೆಯನ್ನು ಪಾಪಿಷ್ಠಳನ್ನಾಗಿ ಕಾಣುವ ಕ್ರೂರ ದೃಷ್ಟಿಯನ್ನು ಹೊಂದಿದೆ. ಗಂಡ ಸತ್ತರೆ ಹೆಂಡತಿಯೂ ಪತಿಯೊಡನೆ ಸಹಗಮನ ಮಾಡಿಕೊಳ್ಳುವ ಪದ್ಧತಿ ಜಾರಿಯಲ್ಲಿದ್ದುದು ಇದೇ ಕಾರಣಕ್ಕಾಗಿ ಇರಬೇಕು. ಸತಿ ಪದ್ದತಿ ಸಮಾಜದಲ್ಲಿ ಎಷ್ಟು ವ್ಯಾಪಕವಾಗಿತ್ತು ಎಂಬುದಕ್ಕೆ ನಾಡಿನುದ್ದಗಲಕ್ಕೆ ಹರಡಿರುವ ಮಾಸ್ತಿ ಕಲ್ಲುಗಳೇ ಸಾಕ್ಷಿ. ಒಟ್ಟಾರೆ ಭಾರತೀಯ ಸಮಾಜ ವಿಧವೆಯಾದ ಮಹಿಳೆಯ ಬದುಕನ್ನು ನರಕಸದೃಶವನ್ನಾಗಿ ಮಾಡಿದೆ. ಬದುಕುವುದಕ್ಕಿಂತ ಸಾಯುವುದೇ ಲೇಸು ಎಂಬ ಹತಾಶಭಾವನೆಯನ್ನುಂಟುಮಾಡಿದೆ.
ಭಾರತೀಯ ಸಮಾಜದಲ್ಲಿ ಹೆಗ್ಗಳಿಕೆಗೆ ಪಾತ್ರವಾದ ಈ ಮುತ್ತೈದೆ ಸಾವನ್ನು ಕುರಿತು ಸಮಕಾಲೀನ ಹಿರಿಯ ಲೇಖಕಿ ಶ್ರೀಮತಿ ಜಯಾ ರಾಜಶೇಖರ್ ಮಾಡಿರುವ ಚಿಂತನೆ ತೀರಾ ವಿಭಿನ್ನ ಹಾಗೂ ಭಾವಪೂರ್ಣ. ಇತ್ತೀಚೆಗೆ ಪ್ರಕಟವಾದ ಅವರ ಆತ್ಮಕಥನ “ಸ್ಮೃತಿಬಿಂಬ”ದಲ್ಲಿ ಬರೆದಿರುವ ಅವರ ವಿಚಾರಧಾರೆ ಕೇವಲ ಬೌದ್ದಿಕಸ್ತರದಲ್ಲಿ ಮೂಡಿಬಂದ ಬರಹವಾಗಿರದೆ ಅಗಲಿಹೋದ ಬಾಳಸಂಗಾತಿಯ ಮೇಲಿನ ಗಾಢವಾದ ಪ್ರೀತಿಯ ನಾಡಿ ಮಿಡಿತವಾಗಿದೆ:
“ನಾನು ಎಂದೂ ಮುತ್ತೈದೆ ಸಾವು ಬೇಕೆಂದು ಬಯಸಲಿಲ್ಲ. ನಾನು ಮೊದಲು ಹೋದರೆ ಇವರು ಹೇಗಿರುತ್ತಾರೆ, ಅವರನ್ನು ಯಾರ ಕೈಲಿ ಕೊಟ್ಟು ಹೋಗಲಿ, ಜೊತೆಯ ಜೀವ ಇಲ್ಲದಾಗ ಯಾರಿಗೂ ಒಂಟಿತನ ಸಹಿಸಲಾರದ ದುಃಖ, ಆ ದುಃಖ ನನಗಿರಲಿ, ಅವರಿಗೆ ಬೇಡ. ಇದರ ಜೊತೆಗೆ ಹೆಣ್ಣು ಹೇಗಾದರೂ ಗಂಡಿಗಿಂತ ದುಃಖ ಸಹಿಸಬಲ್ಲಳು - ಮುಂತಾಗಿ ಅಂದುಕೊಳ್ಳುತ್ತಾ ದೇವರಲ್ಲಿ ಮುತ್ತೈದೆ ಸಾವು ಬೇಕೆಂದು ಬೇಡಲಿಲ್ಲ. ಕೊನೆಗಾಲದಲ್ಲಿ ನಾನು ಅವರಿಗೆ ಏನಾದರೂ ಮಾಡಲು ಬೇಕಾಗಬಹುದು ಎಂದು ಅನ್ನಿಸಿತ್ತು. ಹೆಣ್ಣುಮಕ್ಕಳಿಗೆ ಸಹಜವಾಗಿ ಇರುವ ಈ ಮುತ್ತೈದೆ ಸಾವಿನ ಬಯಕೆ ನನಗಿರದೆ ವಿರುದ್ಧ ದಿಕ್ಕಿನಲ್ಲಿ ಯೋಚಿಸುವಂತಾದದ್ದಕ್ಕೆ ಕಾರಣವಿದೆ. ಹೆಂಡತಿಯನ್ನು ಕಳೆದುಕೊಂಡ ಕೆಲವು ಗಂಡಸರು ಜೀವನದ ಕೊನೆಯ ದಿನಗಳನ್ನು ಬಹಳ ಕಷ್ಟದಿಂದ ಕಳೆದದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ.”
ಶ್ರೀಮತಿ ಜಯಾ ರಾಜಶೇಖರ್ ಅವರು ಮೇಲಿನ ಮಾತುಗಳಿಗೆ ಪೂರಕವಾಗಿ ಕೆಲವು ಮಾತುಗಳು: ಮನುಷ್ಯನ ಬಾಳು ಒಂದು ಸುದೀರ್ಘ ಪ್ರಯಾಣವಿದ್ದಂತೆ. ಬಾಳ ಪಯಣದಲ್ಲಿ ಗಂಡ ಹೆಂಡಿರು ಸಹಪ್ರಯಾಣಿಕರು. ಅವರ ಪ್ರಯಾಣ ಒಂದೆಡೆಯಿಂದ ಆರಂಭವಾಗುವುದಿಲ್ಲ, ಒಂದೆಡೆಗೆ ಮುಗಿಯುವುದೂ ಇಲ್ಲ. ಮಾರ್ಗಮಧ್ಯದಲ್ಲಿ ಇಬ್ಬರೂ ಸಂಧಿಸಿ ಸಹಪ್ರಯಾಣಿಕರಾಗುತ್ತಾರೆ. ಪ್ರಯಾಣಿಕ ತನ್ನ ಸಹ ಪ್ರಯಾಣಿಕರೊಂದಿಗೆ ಎಷ್ಟೇ ಅನ್ಯೋನ್ಯತೆ ಬೆಳೆಸಿಕೊಂಡಿದ್ದರೂ ನಿಲ್ದಾಣ ಬಂದಾಗ ಇಳಿದು ಹೋಗಲೇ ಬೇಕು. ಬದುಕಿನ ಪ್ರಯಾಣದಲ್ಲಿ ಗಂಡನ ನಿಲ್ದಾಣ ಬೇಗ ಬರುತ್ತದೋ, ಹೆಂಡತಿಯದು ಬೇಗ ಬರುತ್ತದೋ ಇಬ್ಬರಿಗೂ ಗೊತ್ತಿಲ್ಲ. ಮೊದಲು ಇಳಿದ ಪಯಣಿಗ ನೀಡಿದ ಸಾಹಚರ್ಯದ ಸಿಹಿಕಹಿ ಸ್ಮರಣೆಯಲ್ಲಿ ಉಳಿದ ಪಯಣಿಗ ತನ್ನ ಪಾಲಿನ ಮಿಕ್ಕ ಪ್ರಯಾಣವನ್ನು ಮುಂದುವರಿಸಲೇ ಬೇಕು, ತನ್ನ ನಿಲುಗಡೆ ಬಂದಾಗ ಇಳಿಯಲೂ ಬೇಕು! ಬೇರೆ ಆಯ್ಕೆ ಇಲ್ಲ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 26.5.2011