ಬೇಸತ್ತ ಮನಕ್ಕೆ ಬೇಕಾದುದೇನು?
ನಾಡಿನ ಇಂದಿನ ರಾಜಕೀಯ ವಿದ್ಯಮಾನಗಳನ್ನು ನೋಡಿ ನೋಡಿ, ಓದಿ ಓದಿ ಜನರ ಮನಸ್ಸು ರೋಸಿಹೋಗಿದೆ. ಕಳೆದ ವಾರ ಬರೆದ “ಬೆಕ್ಕಿಲ್ಲದ ಮನೆಯಲ್ಲಿ ಇಲಿಗಳ ಚಿನ್ನಾಟ” ಎಂಬ ನಮ್ಮ ಅಂಕಣ ಬರಹವೂ ಸಹ ಅದನ್ನು ಕುರಿತೇ ಇರಬಹುದೆಂಬ ನಿರೀಕ್ಷೆ ಸುಳ್ಳಾಗಿ ದೂರದ ಗುಜರಾತಿನ ಓದುಗರೊಬ್ಬರು ತುಂಬಾ ಸಂತಸಪಟ್ಟು ಒಂದು ಇ-ಮೇಲ್ ಬರೆದಿದ್ದಾರೆ. ಮತ್ತೋರ್ವ ಓದುಗರಾದ ಗೀತಾ ತಮ್ಮ ಲೇಖನ ನನ್ನ ಕಾಲೇಜು ದಿನಗಳನ್ನು, ನನ್ನ ಸಂಸ್ಕೃತ ಗುರುಗಳನ್ನು ನೆನಪಿಗೆ ತಂದವು. ಅವರು ನಮಗೆ ಕೇವಲ ಪಾಠಗಳನ್ನು ಮಾಡದೆ ಜೀವನದ ಪಾಠಗಳನ್ನು ಪ್ರೀತಿಯಿಂದ ಕಲಿಸಿದರು ಎಂದು ಹೃತ್ಪೂರ್ವಕ ವಂದನೆ ಸಲ್ಲಿಸಿ ಬರೆದಿದ್ದಾರೆ. ಅಂದರೆ ಜನರು ರಾಜಕೀಯ ರಾಡಿಯಿಂದ ಬೇಸತ್ತು ಅದನ್ನು ಓದಲೂ ಮುಜುಗರಪಟ್ಟುಕೊಂಡಿದ್ದಾರೆ ಎಂದೇ ಅರ್ಥ. ಬದಲಾಗಿ ಅವರು ಸಾಹಿತ್ಯದ ಸವಿಗಾಗಿ ಹಾತೊರೆಯುತ್ತಿದ್ದಾರೆಂದೇ ತೋರುತ್ತದೆ. ಸಂಸ್ಕೃತದಲ್ಲಿ ಒಂದು ಸೂಕ್ತಿ ಇದೆ:
ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಂ |
ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ | |
ಕಾವ್ಯ-ಶಾಸ್ತ-ವಿನೋದದಲ್ಲಿ ಬುದ್ದಿವಂತರು ಕಾಲವನ್ನು ಅರ್ಥಪೂರ್ಣವಾಗಿ ಬಳಸಿಕೊಂಡರೆ ಮೂರ್ಖರು ದುರ್ವ್ಯಸನ, ದುರಾಚಾರ, ನಿದ್ರೆ, ಜಗಳಗಳಲ್ಲಿ ವ್ಯರ್ಥವಾಗಿ ಕಳೆಯುತ್ತಾರೆ ಎಂದು ಈ ಸೂಕ್ತಿಯ ಆಶಯ. ಇದರಲ್ಲಿ ಮೊದಲನೆಯ ವರ್ಗಕ್ಕೆ ಜನಸಾಮಾನ್ಯರೂ, ಎರಡನೆಯ ವರ್ಗಕ್ಕೆ ರಾಜಕಾರಣಿಗಳೂ ಸೇರಿದಂತೆ ತೋರುತ್ತದೆ. ಇಂದು ರಾಜಕಾರಣಿಗಳು ದೇಶದ ಸಮಸ್ಯೆಗಳನ್ನು ದಿನದಿನಕ್ಕೂ ಕಗ್ಗಂಟಾಗಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಪ್ರಾಚೀನ ಕವಿಗಳು ಸಾಹಿತ್ಯಕ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಿದ್ದರೆಂದು ತೋರಿಸಲು ಈ ಲೇಖನ.
ಸಂಸ್ಕೃತದಲ್ಲಿ 'ಸಮಸ್ಯಾಪೂರ್ತಿ' ఎంబ ಒಂದು ಕಾವ್ಯಪ್ರಕಾರವಿದೆ. ಇದು ಒಂದು ರೀತಿಯಲ್ಲಿ ಆಶುಭಾಷಣ ಸ್ಪರ್ಧೆ ಇದ್ದಂತೆ. ಇದರಲ್ಲಿ ಕವಿಯ ಕಾವ್ಯರಚನಾಕೌಶಲವನ್ನು ಒರೆಗೆ ಹಚ್ಚಿದಂತೆ ಆಗುತ್ತದೆ. ಒಂದು ನಿರ್ದಿಷ್ಟ ಛಂದಸ್ಸಿನ ಭಾಗವಾಗಿ ಕೆಲವು ಪದಪುಂಜಗಳನ್ನು ಕೊಡಲಾಗುತ್ತದೆ. ಅವೇ ಶಬ್ದಗಳನ್ನು ಬಳಸಿಕೊಂಡು ಅದೇ ಛಂದಸ್ಸಿನಲ್ಲಿ ಕವಿತೆಯನ್ನು ಪೂರ್ಣಗೊಳಿಸುವುದಕ್ಕೆ 'ಸಮಸ್ಯಾಪೂರ್ತಿ' ಎಂದು ಕರೆಯುತ್ತಾರೆ. ಉದಾಹರಣೆಗೆ ಸಿಂಧೂರಬಿಂದುರ್ವಿಧವಾಲಲಾಟೇ” (ಕುಂಕುಮದ ಬೊಟ್ಟು ವಿಧವ ಹಣೆಯೊಳಗೆ) ಎಂಬುದೊಂದು ಸಮಸ್ಯೆ. ಇವೇ ಶಬ್ದಗಳನ್ನು ಬಳಸಿಕೊಂಡು ಕವಿತೆಯನ್ನು ರಚನೆ ಮಾಡಬೇಕು. ಇಲ್ಲಿ ಕಾವ್ಯ ರಚನೆ ಮಾಡಲು ಉದ್ಭವಿಸುವ ಮೊದಲನೆಯ ಸಮಸ್ಯೆಯೇ: ವಿಧವೆಯ ಹಣೆಯ ಮೇಲೆ ಕುಂಕುಮದ ಬೊಟ್ಟು ಇರಲು ಹೇಗೆ ಸಾಧ್ಯ? ಇಂತಹ ಕ್ಲಿಷ್ಟ ಸಮಸ್ಯೆಯನ್ನು ಜಾಣ್ಮೆಯಿಂದ ಪರಿಹರಿಸಿ ರಚಿಸಿದ ಅಪರೂಪದ ಶ್ಲೋಕ ಹೀಗಿದೆ.
ಕಾ ಭಾತಿ ಭಾಲೇ ವರವರ್ಣಿನೀನಾಂ
ಕಾ ರೌತಿ ದೀನಾ ಮಧುಯಾಮಿನೀಷು |
ಕಸ್ಮಿನ್ ವಿಧತ್ತೇ ಶಶಿನಂ ಮಹೇಶಃ
ಸಿಂಧೂರಬಿಂದುರ್ವಿಧವಾಲಲಾಟೇ||
(ಭಾವಾನುವಾದ)
ಸುಮಂಗಲೆಯರ ಹಣೆಯಲ್ಲಿ ಶೋಭಿಸುವುದೇನು?
ಹುಣ್ಣಿಮೆಯ ರಾತ್ರಿಯೊಳು ಅಳುವ ಹೆಂಗಳೆ ಯಾರು?
ಶಶಿಧರನು ಚಂದಿರನ ಧರಿಸಿರುವನೆಲ್ಲಿ?
ಕುಂಕುಮದ ಬೊಟ್ಟು, ವಿಧವೆ, ಹಣೆಯೊಳಗೆ.
ಈ ಸಮಸ್ಯೆಯಲ್ಲಿರುವ ಪದಗಳನ್ನು ಒಟ್ಟಾಗಿ ಗ್ರಹಿಸದೆ ಬಿಡಿ ಬಿಡಿಯಾಗಿ ಪ್ರತ್ಯೇಕಿಸಿ ಮೇಲಿನ ಮೂರು ಸಾಲುಗಳಲ್ಲಿ ಮೂರು ಪ್ರಶ್ನೆಗಳನ್ನು ಹಾಕಿ ಕೊನೆಯ ಸಾಲಿನಲ್ಲಿ ಮೂರು ಉತ್ತರ ಸಿಗುವಂತೆ ಜೋಡಿಸಿರುವ ಕವಿಯ ಜಾಣ್ಮೆ ಆಧುನಿಕ Quiz Competitionಗೂ ಮೀರಿದ ಬೌದ್ಧಿಕ ಪ್ರತಿಭೆಯಾಗಿದೆ.
ಈ ಮುಂದಿನ ಸಮಸ್ಯಾಪೂರ್ತಿಯನ್ನು ಗಮನಿಸಿ. ಇಲ್ಲಿ ಕೊಟ್ಟಿರುವ 'ಸಮಸ್ಯೆ' ಯಾವ ಶಾಬ್ದಿಕ ಅರ್ಥವೂ ಇಲ್ಲದ 'ಠಠಂಠ ಠಂಠಂಠ ಠಠಂಠ ಠಂಠಂ' ಎಂಬ ಶಬ್ದ. ಇದು 'ಇಂದ್ರವಜ್ರಾವೃತ್ತ ಛಂದಸ್ಸಿನಲ್ಲಿದೆ. ಜಾಣ ಕವಿಯೊಬ್ಬ ಎಂತಹ ಸುಮಧುರವಾದ ಕಲ್ಪನೆಯನ್ನು ಮಾಡಿಕೊಂಡು ಈ ಕವಿತೆಯನ್ನು ರಚಿಸಿದ್ದಾನೆ. ನೋಡಿ.
ರಾಮಾಭಿಷೇಕೇ ಮದವಿಹ್ವಲಾಯಾಃ
ಕರಾಚ್ಚ್ಯುತೋ ಹೇಮಘಟಸ್ತರುಣ್ಯಾಃ |
ಸೋಪಾನಮಾಸಾದ್ಯ ಚಕಾರ ಶಬ್ದಂ
ಠಠಂಠ ಠಂಠಂಠ ಠಠಂಠ ಠಂಠಂ||
(ಭಾವಾನುವಾದ)
(ನಡೆದಿತ್ತು ಶ್ರೀರಾಮನ ಪಟ್ಟಾಭಿಷೇಕ
ಸಾಗಿದಳು ಸಖಿ ವೈಯಾರದಿಂ ಅಂತಃಪುರದೊಳು
ಜಾರಿಬಿತ್ತು ಕೈಯೊಳಗಿನ ಬಂಗಾರದ ಬಿಂದಿಗೆ
ಉರುಳಿತ್ತು ಮೆಟ್ಟಿಲೊಳು ಮಾಡುತ್ತ ಶಬ್ದ
“ಠಠಂಠ ಠಂಠಂಠ ಠಠಂಠ ಠಂಠಂ!)
ಇನ್ನೊಂದು ಆಕರ್ಷಕವಾದ ಸಮಸ್ಯಾಪೂರ್ತಿ ಶ್ಲೋಕ ಹೀಗಿದೆ. ಇಲ್ಲಿ ಕೊಟ್ಟಿರುವ ಸಮಸ್ಯೆಯೂ ಸಹ ಯಾವ ಶಾಬ್ದಿಕ ಅರ್ಥವಿಲ್ಲದ ಗುಲುಗ್ಗುಲುಗ್ಗುಲುಗ್ಗುಲು ಎಂಬ ಶಬ್ದ.
ಜಂಬೂಫಲಾನಿ ಪಕ್ವಾನಿ ಪತಂತಿ ವಿಮಲೇ ಜಲೇ
ಕಪಿಕಂಪಿತಶಾಖಾಭ್ಯೋ ಗುಲುಗ್ಗುಲುಗ್ಗುಲುಗ್ಗುಲು
(ಭಾವಾನುವಾದ)
ನದಿಯ ದಡದಲ್ಲಿತ್ತೊಂದು ನೇರಿಲಹಣ್ಣಿನ ಮರಅದುರಿದವು ಕೊಂಬೆಗಳು ಮಂಗಗಳಿಂದ
ಉದುರಿದವು ಮಾಗಿದ ಹಣ್ಣುಗಳು
ಮೇಲಿಂದ ಸೇರಿದವು ಗುಲುಗ್ಗುಲು... ಎನ್ನುತ್ತ ನಿರ್ಮಲ ನೀರೊಳಗೆ
ನಮ್ಮ ಪರಮಾರಾಧ್ಯ ಗುರವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾಶಿಯಲ್ಲಿ ಓದುತ್ತಿರುವಾಗ ಅಪ್ರತಿಮ ಕಾವ್ಯರಚನಾ ಕೌಶಲವನ್ನು ಹೊಂದಿದ್ದರು. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಕಾಶಿಯಲ್ಲಿ ಪ್ರಕಟವಾಗುತ್ತಿದ್ದ ಅಮರಭಾರತೀ ಎಂಬ ಮಾಸಪತ್ರಿಕೆಯ ಸಮಸ್ಯಾಪೂರ್ತಿ ಎಂಬ ವಿಭಾಗದಲ್ಲಿ ಅವರ ಅನೇಕ ಸಂಸ್ಕೃತ ಕವಿತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಶಾರ್ದೂಲವಿಕ್ರೀಡಿತದಲ್ಲಿರುವ ಒಂದು ಕವಿತೆ ಹೀಗಿದೆ:
ಪೀಯೂಷಾಂಶುಗಭಸ್ತಿಭಿರ್ಧವಲಿತೇ ಕಾಷ್ಠಾಂತರಾಲೇ ಸ್ಪುರ -
ಜ್ಜೋತ್ಸ್ನಾ-ಜಾಲ-ಗಲತ್-ಸುಧಾರಸ-ಲವೈರಾಪ್ಲಾವಿತೇ ಭೂತಲೇ |
ಕಾಂತಂ ಪ್ರೋಷಿತಮಂಜಸಾ ಸ್ಮೃತಿಪಥಾಯಾತಂ ವಿದಿತ್ವಾ ಪುನರ್
ಹಸ್ತ-ನ್ಯಸ್ತ-ಕಪೋಲ-ಜಾಗ್ರದಧೃತಿರ್ಜಾಗರ್ತಿ ನಿತ್ಯಂ ವಧೂಃ ||
-(ಅಮರಭಾರತೀ 20.3.1935)
(ಭಾವಾನುವಾದ)
ಹುಣ್ಣಿಮೆಯ ಚಂದಿರನ ಹಾಲು ಚೆಲ್ಲುವ ಕಿರಣ
ನಟ್ಟಿರುಳ ಬಾನಿನಲಿ ಬೆಳಗುತಿರಲು
ಬೆಳುದಿಂಗಳ ಬಟ್ಟಲಿಂ ಸುರಿವ ಸುಧಾರಸವು
ಇಳೆಯೊಳಗೆ ಭೋರ್ಗರೆದು ಹರಿಯುತಿರಲು
ಕಡಲಾಚೆ ಪಯಣಿಸಿದ ನಲ್ಮೆಯಾ ನಲ್ಲನು
ಒಡನೆಯೇ ಸ್ಮೃತಿಪಥದಿ ಮರಳಿ ಬರಲು
ಮತ್ತೆ ತಿಳಿದೆಚ್ಚರದಿ ಗಲ್ಲದಡಿ ಕೈಯಿಟ್ಟು
ಇರುಳೆಲ್ಲ ಇನಿಯನಂ ಜಾನಿಸಿಹಳು
ನಮ್ಮ ಗುರುವರ್ಯರ ಈ ಪ್ರತಿಭೆ ಮಠದ ಹೊಣೆಗಾರಿಕೆಯನ್ನು ಹೊತ್ತುಕೊಂಡ ಮೇಲೆ ಕಮರಿಹೋಗಿದ್ದು ಸಮಾಜಕ್ಕೆ ಲಾಭವಾದರು ಸಂಸ್ಕೃತ ಸಾಹಿತ್ಯಕ್ಕೆ ಆದ ಬಹು ದೊಡ್ದ ನಷ್ಟವೆಂದೇ ಹೇಳಬೇಕು.
ನಮ್ಮ ಗುರುವರ್ಯರು ನಮ್ಮನ್ನು ಕಾಶಿಗೆ ಓದಲು ಕಳುಹಿಸಿದಾಗ ಆತ್ಮೀಯ ಗೆಳೆಯರೊಬ್ಬರ ಮನೆಗೆ ಹೋಗುವ ಸಂದರ್ಭ ಒದಗಿ ಬಂದಿತ್ತು. ಅವರ ತಂದೆ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದು ಅನೇಕ ಕವಿತೆಗಳನ್ನು ರಚಿಸಿದ್ದರು. ಒಬ್ಬ ಸಂನ್ಯಾಸಿಯ ಮನೋಧರ್ಮವನ್ನು ಗಮನದಲ್ಲಿರಿಸಿಕೊಂಡು ಅವರು ರಚಿಸಿದ ಒಂದು ಕವಿತೆ ತುಂಬಾ ಮನೋಜ್ಞವಾಗಿದೆ. ಚಂದ್ರನನ್ನು ಕುರಿತು ಶೃಂಗಾರ ರಸದಲ್ಲಿ ಕವಿತೆಯನ್ನು ಬರೆಯಲು ಸಂನ್ಯಾಸಿಯೊಬ್ಬರನ್ನು ಯಾರೋ ಕೇಳಿದರಂತೆ. ಸಂನ್ಯಾಸಿಗೆ ಸಂದಿಗ್ಧತೆ ಉಂಟಾಯಿತು. ಶೃಂಗಾರ ರಸ ಬರುವಂತಹ ಸನ್ನಿವೇಶಗಳ ಪರಿಕಲ್ಪನೆ ಸಂನ್ಯಾಸ ಧರ್ಮಕ್ಕೆ ವಿರುದ್ಧ, ಅಂತಹ ಪರಿಕಲ್ಪನೆಗಳ ಅಭಾವ ಕಾವ್ಯಧರ್ಮಕ್ಕೆ ವಿರುದ್ಧ. ಸಂನ್ಯಾಸಧರ್ಮಕ್ಕೂ, ಕಾವ್ಯಧರ್ಮಕ್ಕೂ ಚ್ಯುತಿ ಬರದಂತೆ ಅವರು ರಚಿಸಿದ ಅಪರೂಪದ ಸಂಸ್ಕೃತ ಶ್ಲೋಕ ಹೀಗಿದೆ:
ಯೇಷಾಂ ವಲ್ಲಭಯಾ ಸಮಂ ಕ್ಷಣಮಿವ ಕ್ಷಿಪ್ರಂ ಕ್ಷಪಾ ಕ್ಷೀಯತೇ
ತೇಷಾಂ ಶೀತಕರೋ ವಿಧುಃ ವಿರಹಿಣಾಮುಲ್ಕೇವ ಸಂತಾಪಕಃ |
ಅಸ್ಮಾಕಂ ನ ಚ ವಲ್ಲಭಾ ನ ವಿರಹಃ ತೇನೋಭಯಭ್ರಂಶಿಣಾಂ
ಚಂದ್ರೋ ರಾಜತಿ ದರ್ಪಣಾಕೃತಿರಸೌ ನೋಷ್ಣೋನ ವಾ ಶೀತಲಃ | |
(ಭಾವಾನುವಾದ)
ಬಾನಿನೊಳ್ ವಿಹರಿಸುವ ಹುಣ್ಣಿಮೆಯ ಚಂದಿರನು
ವಿರಹಿಗಳ ಹೃದಯವನು ಉರಿಸುತಿಹನು
ಪ್ರಾಣ ವಲ್ಲಭೆಯೊಡನೆ ಇರುಳ ಕಳೆಯುವ ಪತಿಗೆ
ಮಧುರ ಮಿಲನದ ಚಣದ ತಂಪನೀಯುವನು
ಸತ್ಯ-ಶಿವ-ಸೌಂದರ್ಯವನಾಸ್ವಾದಿಸುವ ಯೋಗಿಗಂ
ರಾಗ-ತಾಪಗಳಿಲ್ಲ, ರೋಷ ಹರುಷಗಳಿಲ್ಲ
ಶೀತೋಷ್ಣಭಾವಗಳ ಭೇದವಿಲ್ಲ
ಭೂತಾಯಿ ಬಾನಿನೊಳ್ ಪಿಡಿದೆತ್ತಿ ತೋರುತಿಹ
ವ್ಯೋಮ ಮೂರುತಿ ಶಿವನ ಚಿತ್ಕಳೆಯ ಬಿಂಬಿಸುವ
ರನ್ನಗನ್ನಡಿಯಂತೆ ರಾಜಿಸಿಹನು!!
ಕನ್ನಡ ಸಾಹಿತ್ಯದಲ್ಲಿಯೂ ಸಮಸ್ಯಾಪೂರ್ತಿಯ ಇಂಥ ಕಾವ್ಯರಚನೆಗಳು ದೊರೆಯುತ್ತವೆ. ಕಂತಿ ಹಂಪನ ಸಮಸ್ಯೆಗಳು ಎಂಬ ಪುಟ್ಟ ಕೃತಿಯು ಕವಿ ಹಂಪನಿಗೂ ಕಂತಿಗೂ ಮಧ್ಯೆ ಅಂತಹ ಸಮಸ್ಯಾಪೂರ್ತಿ ಸ್ಪರ್ಧೆ ನಡೆಯುತ್ತಿದ್ದುದನ್ನು ಚಿತ್ರಿಸುತ್ತದೆ. ದನಮಂ ಕಡಿಕಡಿದು ಬಸದಿಗೆಳೆಯುತ್ತಿರ್ದರ್ ಎಂಬುದು ಹಂಪ ಒಡ್ಡಿದ ಸಮಸ್ಯೆ, ಅಹಿಂಸಾವಾದಿಗಳಾದ ಜೈನರು ದನಗಳನ್ನು ಕಡಿಯುವುದೆಂದರೇನು? ಅವನ್ನು ಬಸದಿಗೆಳೆಯುವುದೆಂದರೇನು? ತಬ್ಬಿಬ್ಬುಗೊಳಿಸುವ ಈ ಸಮಸ್ಯೆಯನ್ನು ಕಂತಿಯು ಪೂರ್ತಿ ಮಾಡಿರುವುದು ಹೀಗೆ: “ಘನತರ ಸುರುಚಿರ ಸಚ್ಚಂದನಮಂ ಕಡಿಕಡಿದು ಬಸದಿಗೆಳೆಯುತ್ತಿರ್ದರ್”. “ದನಮಂ ಎಂಬುದನ್ನು ಸಮಸ್ಯಾಪೂರ್ತಿಯಲ್ಲಿ ಚಂದನಮಂ ಎಂದು ಮಾಡಿರುವುದರ ಚಮತ್ಕಾರವನ್ನೂ ಔಚಿತ್ಯವನ್ನೂ ಗಮನಿಸಬೇಕು. “ಸತ್ತವಳೆದ್ದು ತೌರೂರಿಗೆ ಪೋದಳ್ ಎಂಬ ಸಮಸ್ಯೆಯನ್ನು ಅತ್ತೆ ಮೈದುನ ನಾದಿನಿಯರ ಕಾಟವನ್ನು ತಾಳಲಾರದೆ ಬೇಸತ್ತವಳೆದ್ದು ತೌರೂರಿಗೆ ಪೋದಳ್” ಎಂದು ಪೂರ್ತಿಗೊಳಿಸಿರುವುದು ಇನ್ನೊಂದು ಉದಾಹರಣೆಯಾಗಿದೆ. ಹಾಗೆಯೇ “ಇಲಿಯಂ ಮುರಿಮುರಿದು ತಿನ್ನುತಿರ್ಪರ್ ಎಂಬುದನ್ನು ಸರಸಿಜಾಕ್ಷಿಯರ ವರಹಸ್ತದಿಂದ ಕರಿದ ಚಕ್ಕಿಲಿಯಂ ಮುರಿಮುರಿದು ತಿನ್ನುತಿರ್ಪರ್ ಎಂಬುದು ಅಂಥದೇ ಮತ್ತೊಂದು ಸಂದರ್ಭ.
ಸಹೃದಯ ಓದುಗರೇ! ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಸಮಾಜದ ಕೊಳಕುಗಳನ್ನಷ್ಟೇ ನೋಡುತ್ತಾ ದ್ವೇಷ, ಸೇಡು, ಕುತಂತ್ರಗಳು ಹೆಣೆಯುವ ಸಮಸ್ಯೆಗಳನ್ನು ಹೊದ್ದುಕೊಂಡು ಮಲಗುವ ವೀಕ್ಷಕರ ಮನಗಳಿಗೆ ಈ “ಸಮಸ್ಯಾಪೂರ್ತಿಗಳು ಸ್ವಲ್ಪವಾದರೂ ಮುದನೀಡಬಹುದಲ್ಲವೇ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 9.6.2011