ಅಪರಾತ್ರಿಯಲ್ಲೊಂದು ಟೆಲಿಫೋನ್ ಕರೆ!
ಈ ವಾರದ ಲೇಖನದ ಶೀರ್ಷಿಕೆ ಯಾವುದೋ ಪತ್ತೇದಾರಿ ಕಾದಂಬರಿಯ ಕಥಾವಸ್ತುವಿನಂತಿದೆ ಎಂದು ನಿಮಗೆ ಅನ್ನಿಸಬಹುದು. ಆದರೆ ನಾವೀಗ ಬರೆಯಹೊರಟಿರುವುದು ಕಾದಂಬರಿಯನ್ನಲ್ಲ, ಅಮೇರಿಕಾ ಪ್ರವಾಸದ ಕೆಲವು ಅನುಭವಗಳನ್ನು, ಕಳೆದ ವಾರದ ಅಂಕಣದಲ್ಲಿ VSNA ವಾರ್ಷಿಕ ಸಮ್ಮೇಳನ ನಡೆದ ಬಾಸ್ಟನ್ ನಗರದ ಬಗ್ಗೆ ಕೆಲವು ಸಂಗತಿಗಳನ್ನು ಬರೆಯಲಾಗಲಿಲ್ಲ. ಬಾಸ್ಟನ್ ಅಮೇರಿಕೆಯ ಆರು (Maine, New Hampshire, Vermont, Massachusetts, Rhode Island and Connecticut) ರಾಜ್ಯಗಳನ್ನೊಳಗೊಂಡ ಬ್ರಿಟಿಷರ ವಸಾಹತು ಪ್ರದೇಶವಾದ New England ನಲ್ಲಿರುವ ಪ್ರಮುಖ ಬಂದರು ನಗರ. ಅಮೇರಿಕೆಯ ಈಶಾನ್ಯ ದಿಕ್ಕಿನ ಅಟ್ಲಾಂಟಿಕ್ ಕಡಲ ತೀರದಲ್ಲಿರುವ ಈ ಪ್ರದೇಶದಲ್ಲಿ 17ನೆಯ ಶತಮಾನದ ಆರಂಭದಲ್ಲಿ ಅನೇಕ ಬ್ರಿಟಿಷ್ ನಾಗರಿಕರು ಇಲ್ಲಿಗೆ ವಲಸೆ ಬಂದು ನೆಲೆಸಿದರು. 150 ವರ್ಷಗಳ ನಂತರ ತಮ್ಮ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧವೇ ಇಲ್ಲಿಯ ನಿವಾಸಿಗಳು ಹೋರಾಡಿದರು. ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ತಮ್ಮ ಪ್ರತಿನಿಧಿಗಳು ಯಾರೂ ಇಲ್ಲವೆಂದು ಸುಂಕ ಕೊಡಲು ನಿರಾಕರಿಸಿದರು. ಈಸ್ಟ್ ಇಂಡಿಯಾ ಕಂಪನಿಯು 1773 ರಲ್ಲಿ ಲಂಡನ್ ನಿಂದ ತನ್ನ ಮೂರು ಹಡಗುಗಳಲ್ಲಿ ಈ ಬಂದರಿಗೆ ತಂದಿದ್ದ 90,000 ಪೌಂಡ್ ತೂಕದ ಟೀಪುಡಿಯನ್ನು ಚಳುವಳಿಗಾರರು ಸಮುದ್ರಕ್ಕೆ ಎಸೆದರು. ಅವರ ಈ ಕೆಚ್ಚೆದೆಯ ಇತಿಹಾಸ ಪ್ರಸಿದ್ಧ Boston Tea Party ಹೋರಾಟವೇ ಅಮೇರಿಕೆಯ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿತು.
ಬಾಸ್ಟನ್ ನಗರದಿಂದ ಮುಂದೆ ನಮ್ಮ ಪ್ರಯಾಣ Orlando, Tampa ಮುಖಾಂತರ Florida ರಾಜ್ಯದ Jacksonville ನಗರಕ್ಕೆ ದಾರಿಯುದ್ದಕ್ಕೂ ಶಿಷ್ಯರ ಮನೆಗಳಲ್ಲಿ ಪೂಜೆ, ಅಮೇರಿಕನ್ನಡ ಮಕ್ಕಳೊಂದಿಗೆ ಸಂವಾದಗೋಷ್ಠಿ: ದೇವರು ಇದ್ದಾನೆಯೇ? ಅವನೊಂದಿಗೆ ಮಾತನಾಡಲು ಸಾಧ್ಯವೇ? ಮನುಷ್ಯ ಹುಟ್ಟಲು ಕಾರಣವೇನು? ಸತ್ತ ಮೇಲೆ ಎಲ್ಲಿಗೆ ಹೋಗುತ್ತಾನೆ? ಪುನರ್ಜನ್ಮವೆಂಬುದು ಇದೆಯೇ? ನಿಮಗೆ ಮಕ್ಕಳು ಇದ್ದಾರೆಯೇ? ನೀವೇಕೆ ಮದುವೆಯಾಗುವುದಿಲ್ಲ? ಈ orange ಬಣ್ಣದ ಬಟ್ಟೆಯನ್ನೇ ಏಕೆ ಧರಿಸುತ್ತೀರಿ? ಇತ್ಯಾದಿ, ಇತ್ಯಾದಿ. ಕಳೆದ ಮೂರು ದಶಕಗಳಿಂದ ಇಲ್ಲಿಯ ಮಕ್ಕಳ ಮನೋಧರ್ಮವನ್ನು ಬಲ್ಲ ನಮಗೆ ಇವು ಯಾವೂ ಅಚ್ಚರಿ ಮೂಡಿಸುವ, ಬೆಚ್ಚಿಬೀಳಿಸುವ ಪ್ರಶ್ನೆಗಳಾಗಿರಲಿಲ್ಲ. ಇವು ಸಹಸ್ರಾರು ವರ್ಷಗಳಿಂದ ಮನುಕುಲವನ್ನು ಕಾಡುತ್ತಾ ಬಂದಿರುವ ಜಟಿಲ ಪ್ರಶ್ನೆಗಳು. ಯಸ್ಮಾತ್ ಪರಂ ನಾ ಪರಮಸ್ತಿ ಕಿಂಚಿತ್, ಯಾಸ್ಮಾನ್ನಾಣೀಯೋ ನ ಜ್ಯಾಯೋsಸ್ತಿ ಕಶ್ಚಿತ್, ಪರೇಣ ನಾಕಂ ನಿಹಿತಂ ಗುಹಾಯಾಂ ವಿಭ್ರಾಜತೇ ಯದ್ಯತಯೋ ವಿಶಂತಿ. ತನ್ನ ತಾನರಿದು ತಾನಾರೆಂದು ತಿಳಿಯಬಲ್ಲಡೆ ತಾನೇ ದೇವ ಕಾಣಾ, ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯಾ! ಇತ್ಯಾದಿ ಅನುಭಾವದ ನುಡಿಗಳು ಮನುಷ್ಯನ ಕಣ್ಣಿಗೆ ಕಾಣದ ಒಳಪ್ರಪಂಚವನ್ನು ಒಳಹೊಕ್ಕು ಮಾಡಿದ ಆಧ್ಯಾತ್ಮಿಕ ಶೋಧನೆಯಾದರೆ, ಮನುಷ್ಯನ ಕಣ್ಣಿಗೆ ಕಾಣುವ ಬಾಹ್ಯಪ್ರಪಂಚದ ಶೋಧನೆ ಮೊನ್ನೆ NASA ದಿಂದ ನಡೆದ ಬಾಹ್ಯಾಕಾಶ ಕ್ಷಿಪಣಿಯ ಯಶಸ್ವಿ ಉಡಾವಣೆ. ನಾಲ್ವರು ಗಗನಯಾತ್ರಿಗಳನ್ನು ಆಕಾಶದಲ್ಲಿ 250 ಮೈಲಿ ಎತ್ತರದಲ್ಲಿರುವ International Space Centre ಗೆ ಹೊತ್ತೊಯ್ದ ಅಟ್ಲಾಂಟಿಸ್ ಗಗನನೌಕೆಯ ಕೊನೆಯ ಉಡಾವಣೆ. ಅದುವರೆಗೆ ಹತ್ತಾರು ಬಾರಿ ಆಕಾಶಕ್ಕೆ ಹಾರಿದ ಸಾಧನೆಯ ಹಿರಿಮೆ ಅದರದು ಹವಾಮಾನದ ವೈಪರೀತ್ಯದಿಂದಾಗಿ ಉಡಾವಣೆ ಆ ದಿನ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನವಿತ್ತು. ಆದರೂ ವಿಜ್ಞಾನಿಗಳು ಧೃತಿಗೆಡಲಿಲ್ಲ ಬಹುಮಟ್ಟಿಗೆ (70%) ಉಡಾವಣೆ ಆಗುವುದಿಲ್ಲವೆಂದು ದೂರದರ್ಶನದಲ್ಲಿ ಬಿತ್ತರಿಸಲಾದ ಊಹಾಪೋಹಗಳ ಸುದ್ದಿ ತಲೆಕೆಳಗಾಗಿ ಗಗನನೌಕೆ ಆಗಸದತ್ತ ಹೊರಡಲು ಸಿದ್ದವಾಗಿ ಕ್ಷಣಗಣನೆ ಆರಂಭವಾಯಿತು. 9, 8,…5…2, 1, 0 = ಢಮಾರ್…! ಕೊನೆಗೂ ಅಟ್ಲಾಂಟಿಸ್ ಗಗನನೌಕೆ ಬೆಂಕಿಯ ಉಂಡೆಗಳನ್ನು ಉಗುಳುತ್ತಾ, ಬಿಳಿಯ ಕಾರ್ಮೋಡಗಳ ದಟ್ಟಹೊಗೆಯನ್ನು ಎಬ್ಬಿಸಿ ಭೋರ್ಗರೆಯುತ್ತಾ ಆಕಾಶದೆಡೆಗೆ ಭೋಂಕನೆ ಹಾರಿಯೇ ಬಿಟ್ಟಿತು. ಅದರ ಆರ್ಭಟ ಮತ್ತು ರಭಸದಿಂದ ಸುತ್ತಮುತ್ತ ಉಂಟಾದ ಭಾರೀ ಕಂಪನ ಅದುರಿತು ಪದಾಘಾತದಿಂದ ಧರೆ ಎನ್ನುವ ಬಸವಣ್ಣನವರ ವಚನವನ್ನು ನೆನಪಿಸುವಂತಿತ್ತು! ಅಮೇರಿಕೆಯ ಉದ್ದಗಲದಿಂದ ಸುಮಾರು ಹತ್ತು ಲಕ್ಷ ಜನರು ಹಿಂದಿನ ರಾತ್ರಿಯೇ ಬಂದು ಕೆನೆಡಿ ಬಾಹ್ಯಾಕಾಶ ತಾಣದಲ್ಲಿ ಹಿಂದಿನ ರಾತ್ರಿಯೇ ಡೇರೆ ಹಾಕಿಕೊಂಡು ಸಿಡಿಲು-ಗುಡುಗಿನ ಆರ್ಭಟಗಳ ಮಧ್ಯೆ go or no go ಎಂದು ತುದಿಗಾಲ ಮೇಲೆ ನಿಂತು ಕಾದಿದ್ದ ಜನ ಅವಾಕ್ಕಾಗಿ ಗಗನನೌಕೆ ಕಣ್ಮರೆಯಾಗುವವರೆಗೂ ಕಣ್ಣೆವೆಯಿಕ್ಕದೆ ನೋಡಿದರು. ಬಹುಮಹಡಿಯ Launching Pad ನಿಂದ ಬೇರ್ಪಟ್ಟು ಆಗಸಕ್ಕೆ ಧುಮ್ಮಿಕ್ಕಿದ ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆಯನ್ನು ನೋಡಿ ಅದುವರೆಗೆ ಉಸಿರು ಬಿಗಿ ಹಿಡಿದುಕೊಂಡು ನಿಂತಿದ್ದ ಜನರ ಬಾಯಿಂದ ಹೊರಟ ಉದ್ಗಾರ: Wow, What an Incredible and Amazing Launch!
ಸಾವಿನ ಭಯವಿಲ್ಲದೆ ಆಕಾಶದ ನೆತ್ತಿಯನ್ನು ಭೇದಿಸಿ ನುಗ್ಗಿದ ಗಗನಯಾತ್ರಿಕರ ಸಾಹಸಕೃತ್ಯವನ್ನು ನೆನೆಯುತ್ತಾ ಮಲಗಿದ್ದಾಗ ಹಾಸಿಗೆಯ ಪಕ್ಕದಲ್ಲಿದ್ದ ಮೊಬೈಲ್ ಫೋನ್ ರಿಂಗಣಿಸಿ ತಟ್ಟನೆ ಎಚ್ಚರವಾಯಿತು. ಮಂಪರು ನಿದ್ರೆಯಲ್ಲಿ ಗಡಿಯಾರದತ್ತ ಕಣ್ಣುಹಾಯಿಸಿದಾಗ ಅಪರಾತ್ರಿ 2.45 ಗಂಟೆಯಾಗಿತ್ತು. ಮೊಬೈಲ್ ಫೋನ್ ಕೈಗೆತ್ತಿಕೊಂಡಾಗ ಕಾಣಿಸಿದ್ದು ಅಮೇರಿಕೆಯ ದೂರವಾಣಿ ಸಂಖ್ಯೆಯಲ್ಲ, ಭಾರತದಿಂದ ಬಂದ ಕರೆ. ಯಾವುದೋ ತುರ್ತು ಕರೆ ಇರಬೇಕೆಂದು ಅಂದುಕೊಳ್ಳುತ್ತಿದ್ದಂತೆಯೇ ಆ ಕಡೆಯಿಂದ ಕೇಳಿ ಬಂದದ್ದು ಅಪ್ಪಟ ಕನ್ನಡ ಶೈಲಿಯಲ್ಲಿ ಹಲೋ ಎಂದು ಅಬ್ಬರಿಸಿದ ಅಪರಿಚಿತ ವ್ಯಕ್ತಿಯ ಒರಟು ದನಿ. ಆತನಿಗೆ ಹಲೋ ಎಂದು ಉತ್ತರಿಸಿದರೂ ಸರಿಯಾಗಿ ಕೇಳಿಸಿದಂತೆ ಕಾಣಲಿಲ್ಲ. ಮತ್ತೆ ಆತ ಏರುದನಿಯಲ್ಲಿ ಯಾರು ಮಾತಾಡೋದು? ಎಂದು ಜೋರು ಮಾಡಿ ಕೇಳಿದ. “ನಿಮಗೆ ಯಾರು ಬೇಕಾಗಿತ್ತು ಎಂದು ಕೇಳಿದರೂ ಆತ ಕೇಳಿಸಿಕೊಳ್ಳದೆ ಯಾರು ನೀವು ಮಾತಾಡೋದು? ಎಂದು ಮತ್ತಷ್ಟೂ ಏರುದನಿಯಲ್ಲಿ ನಮ್ಮನ್ನೇ ಕೇಳತೊಡಗಿದ. ನ್ಯಾಯಾಲಯದ ಸಾಕ್ಷಿಕಟ್ಟೆಯಲ್ಲಿ ಆರೋಪಿಯನ್ನು ನಿಲ್ಲಿಸಿ ಪ್ರಶ್ನಿಸುವ ವಕೀಲರ ಧಾಟಿಯಂತಿತ್ತು ಆತನ ಗಡಸು ದನಿ. ನಾವು ಸಿರಿಗೆರೆಯ ಗುರುಗಳು ಎಂದು ಹೇಳುತ್ತಿದ್ದಂತೆಯೇ ಆತ ಮಾತು ಮುಂದುವರಿಸದೆ ತಕ್ಷಣವೇ ಫೋನ್ ಕಟ್ ಮಾಡಿದ. ಯಾರಿರಬಹುದು, ಏತಕ್ಕಾಗಿ ಮಾಡಿರಬಹುದು ಏನೊಂದೂ ಗೊತ್ತಾಗಲಿಲ್ಲ. ಆತನ ಫೋನ್ ನಂಬರ್ ನಮ್ಮ ಮೊಬೈಲ್ನಲ್ಲಿ ದಾಖಲಾಗಿದ್ದರೂ ಅದನ್ನು CBI ತನಿಖೆಗೆ ಒಪ್ಪಿಸಬೇಕೆಂಬ ಅಪೇಕ್ಷೆಯೇನೂ ನಮಗಿಲ್ಲ.
ಫೋನ್ ಕೆಳಗಿಡುತ್ತಿದ್ದಂತೆಯೇ ನಮಗೆ ನೆನಪಾಗಿದ್ದು ಇದೇ ರೀತಿ ಕಳೆದ ತಿಂಗಳು ಸಿರಿಗೆರೆಯಲ್ಲಿದ್ದಾಗ ಅಮೇರಿಕೆಯಿಂದ ಬಂದ ಅಪರಿಚಿತ ಕರೆ, ಆದರೆ ಆ ಕರೆಯಲ್ಲಿ ಸೌಜನ್ಯತೆ ಇತ್ತು, ದನಿಯಲ್ಲಿ ಮಾರ್ದವತೆ ಇತ್ತು. "Hi, can I speak to Gayatri Nagaraj?” ಎಂದು ಕೇಳಿದಾಗ ಆ ಮಹಿಳೆ ಮಾತನಾಡಬಯಸಿದ ವ್ಯಕ್ತಿ ನಾವಲ್ಲವೆಂದು ತಿಳಿದೊಡನೆಯೇ I am really sorry, I called the wrong number” ಎಂದು ಕ್ಷಮೆ ಯಾಚಿಸಿದಳು. ಏನನ್ನಾದರೂ ಕೇಳುವಾಗ please ಎಂದು ಹೇಳುವುದು, ಏನನ್ನಾದರೂ ಪಡೆದಾಗ Thank you? ಎಂದುಹೇಳುವುದು, ತನ್ನ ವರ್ತನೆಯಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗದಿರಲೆಂದು Excuse me/sorry ಎಂದೆಲ್ಲಾ ಹೇಳುವುದು ಇಲ್ಲಿಯ ಜನರ ಸಜ್ಜನಿಕೆ. ನಾಗರಿಕ ಸಮಾಜದಲ್ಲಿ ಪರಸ್ಪರರಿಗೆ ತೋರಿಸುವ ಗೌರವಭಾವನೆ. ಮಾತೆತ್ತಿದರೆ ವಿದೇಶೀ ಸಂಸ್ಕೃತಿಯನ್ನು ಹಳಿಯುವ ಭಾರತೀಯರು ದೈನಂದಿನ ಜೀವನದಲ್ಲಿ ವಿದೇಶೀಯರು ತೋರುವ ಸೌಜನ್ಯವನ್ನು ಮನಗಾಣುವುದಿಲ್ಲ. ಕೆಲವೊಂದು ವಿಚಾರಗಳಲ್ಲಿ ಸಭ್ಯತೆ ಹಾಗೂ ಶಿಷ್ಟಾಚಾರಗಳನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕೆನಿಸುತ್ತದೆ. ನಮ್ಮ ಜನರು ಹಲೋ ಎಂಬ ಶಬ್ದವನ್ನು ಮಾತ್ರ ಕಲಿತಿದ್ದಾರೆಯೇ ಹೊರತು ದೂರವಾಣಿಯ ಶಿಷ್ಟಾಚಾರವನ್ನು ಕಲಿತಿಲ್ಲ, ಆಚೆ ಬದಿಯಲ್ಲಿ ಫೋನ್ ರಿಸೀವ್ ಮಾಡಿದ ತಕ್ಷಣವೇ ಫೋನ್ ಮಾಡಿದ ವ್ಯಕ್ತಿ ತಾನು ಯಾರೆಂಬುದನ್ನು ಹೇಳಬೇಕು; ಇಲ್ಲವೇ ತನಗೆ ಯಾರು ಬೇಕೆಂಬುದನ್ನು ಹೇಳಬೇಕು. ಹಾಗೆ ಮಾಡದೆ ಫೋನ್ ರಿಸೀವ್ ಮಾಡಿದವರನ್ನೇ ಯಾರು ನೀವು ಎಂದು ಕೇಳುವುದು ಅಸಭ್ಯತನ. ಅದೇ ಪ್ರಶ್ನೆಯನ್ನು ಫೋನ್ ರಿಸೀವ್ ಮಾಡಿಕೊಂಡವರು ಕೇಳಿದರೆಂದರೆ ಅದನ್ನು ಉದ್ದಟತನವೆಂದು ಫೋನ್ ಮಾಡಿದವರು ಭಾವಿಸುತ್ತಾರೆ. ತಮ್ಮ ಹೆಸರನ್ನು ಕೇಳಿದರೆ ಅದು ಅವರ ಅಂತಸ್ತಿಗೆ ಧಕ್ಕೆ ಎಂದು ಭಾವಿಸುವವರೂ ಇದ್ದಾರೆ. ತಮ್ಮ ದನಿಯನ್ನು ಗುರುತಿಸಿ ಅವರು ಮಾತನಾಡಬಯಸಿದ ವ್ಯಕ್ತಿಗೆ ಫೋನ್ ಕೊಡಬೇಕೆಂದು ನಿರೀಕ್ಷಿಸುತ್ತಾರೆ.
ಶಿಷ್ಟಾಚಾರವನ್ನು ಕಲಿಸಬೇಕಾದವರು ಮನೆಯಲ್ಲಿ ತಂದೆ-ತಾಯಂದಿರು. ಪಾಶ್ಚಾತ್ಯರಾಷ್ಟ್ರಗಳಲ್ಲಿ ಈಗ ಅದನ್ನು ಕಲಿಸಬೇಕಾದ ಹೊರೆ ಶಾಲಾ ಶಿಕ್ಷಕ/ಶಿಕ್ಷಕಿಯರ ಮೇಲೆ ಬಿದ್ದಿದೆ. ಶಾಲೆಗೆ ಹೋಗುವ ಮುನ್ನ ಮಕ್ಕಳು ಮನೆಯಲ್ಲಿ ಬೆಳೆಯುವುದರಿಂದ ಈ ವಿಷಯದಲ್ಲಿ ಹೆಚ್ಚಿನ ಹೊಣೆಗಾರಿಕೆ ತಾಯಂದಿರ ಮೇಲಿದೆಯೆಂಬುದು ಪರಿಣತರ ಅಭಿಪ್ರಾಯ. ಶಿಷ್ಟಾಚಾರಗಳು ಯಾವುದೇ ದೇಶ/ಸಮಾಜದಲ್ಲಿ ಅದರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ರೂಪುಗೊಳ್ಳುವ ಸಭ್ಯ ನಡವಳಿಕೆಗಳು. ಒಂದು ದೇಶ/ಸಮಾಜದ ಅತ್ಯುತ್ತಮ ಸಭ್ಯ ನಡವಳಿಕೆ ಮತ್ತೊಂದು ದೇಶ/ಸಮಾಜದಲ್ಲಿ ತೀರ ಕೆಟ್ಟ ಅಸಭ್ಯವರ್ತನೆಯಾಗಿ ಕಾಣಬಹುದು. ತಟ್ಟೆಯಲ್ಲಿ ಏನೂ ಬಿಡದಂತೆ ಉಣ್ಣುವುದು ಭಾರತೀಯ ಸಂಸ್ಕೃತಿ. ಚೀನಾ ದೇಶದಲ್ಲಿ ಹಾಗೆ ಮಾಡಿದರೆ ಅದು ಆತಿಥೇಯರಿಗೆ ಅವಮಾನ ವಂತೆ! ಇತ್ತೀಚೆಗೆ ನಮ್ಮ ದೇಶದ ಮದುವೆ ಊಟಗಳಲ್ಲೂ ಈ ಚೀನೀ ಸಂಸ್ಕೃತಿ ನುಸುಳಿರುವಂತೆ ತೋರುತ್ತದೆ. ಇದರಿಂದ ಹೆಣ್ಣು ಹೆತ್ತವರಿಗೆ ಖುಷಿಯೇನೂ ಇಲ್ಲ. ಸದ್ಯ ಬೀಗರು ಅವರನ್ನು ಗೋಳುಹೊಯ್ದುಕೊಳ್ಳದಂತೆ ಉಂಡು ಹೋದರೆ ಸಾಕು. ಎಲೆಯಲ್ಲಿ ಎಷ್ಟೇ ಉಗಿದರೂ ಪರವಾಗಿಲ್ಲ, ಮರೆಯಲ್ಲಿ ಉಗಿಯುವುದನ್ನು ಸಹಿಸರು.
ಸೌಜನ್ಯತೆ ಭಾರತೀಯರಿಗೆ ಹೊಸದೇನಲ್ಲ. ಆದರೆ ಎದುರಿಗೆ ಸಿಕ್ಕಾಗ ಸೌಜನ್ಯದಿಂದ ಮಾತನಾಡಿಸಿದಂತೆ ಫೋನಿನಲ್ಲಿ ಮಾತನಾಡುವಾಗ ಸೌಜನ್ಯತೆ ತೋರುವುದು ನಮ್ಮ ಜನರಿಗೆ ಇನ್ನೂ ಮೈಗೂಡಿಲ್ಲ. ದೂರದಲ್ಲಿರುವವರನ್ನು ಕೂಗಿ ಕರೆದಂತೆ ಫೋನ್ ಮಾಡುವಾಗಲೂ ಅಬ್ಬರಿಸಿ ಮಾತನಾಡುವ ಸ್ವಭಾವ ನಮ್ಮ ಜನರದು. ಜೋರಾಗಿ ಕೂಗದಿದ್ದರೆ ದೂರದಲ್ಲಿರುವವರಿಗೆ ಕೇಳುವುದಿಲ್ಲವೆಂದು ಅವರು ಭ್ರಮಿಸಿದಂತೆ ತೋರುತ್ತದೆ. ಬೆಂಗಳೂರಿನ ರಾಜಭವನದಿಂದ ಎಷ್ಟೇ ಜೋರಾಗಿ ಕೂಗಿದರೂ ಆ ಕೂಗು ಸಾಗರದಾಚೆ ಅಮೇರಿಕೆಯ ಶ್ವೇತಭವನಕ್ಕೆ ಕೇಳಲು ಸಾಧ್ಯವೇ?
ಶ್ವೇತಭವನ ಎಂದಾಕ್ಷಣ ನಮಗೆ ನೆನಪಾಗಿದ್ದು ಅಮೇರಿಕೆಯ ಅಧ್ಯಕ್ಷರಾಗಿದ್ದ ಲಿಂಡನ್ ಜಾನ್ಸನ್, ಇದೇನು ಕಟ್ಟುಕತೆಯೋ ಸತ್ಯಕತೆಯೋ ಗೊತ್ತಿಲ್ಲ. ಒಮ್ಮೆ ಜಾನ್ಸನ್ ಭಾರತದಲ್ಲಿರುವ ತಮ್ಮ ರಾಯಭಾರಿ ಜಾನ್ ಕೆನ್ನೆತ್ ಗೆ ಫೋನ್ ಮಾಡಿದರು. ರಾಯಭಾರಿಯ ಆಪ್ತ ಸಹಾಯಕಿಯಾಗಿದ್ದ ಮಿಸ್ ಎಮಿಲಿ ಫೋನನ್ನು ರಿಸೀವ್ ಮಾಡಿಕೊಂಡರೂ ರಾಯಭಾರಿಗೆ ಕೊಡಲಿಲ್ಲ. ಸಂದೇಶವೇನಾದರೂ ಇದ್ದರೆ ಹೇಳಿನಂತರ ತಿಳಿಸುತ್ತೇನೆ ಎಂದಳು. ಕಾರಣ ರಾಯಭಾರಿ ಕೆನ್ನೆತ್ ತಮಗೆ ತುಂಬಾ ದಣಿವಾಗಿದೆಯೆಂದೂ ಯಾವ ಫೋನನ್ನೂ ಕೊಡಬಾರದೆಂದೂ ಆಕೆಗೆ ಹೇಳಿ ಮಲಗಿದ್ದರು. ನೀನು ಯಾರ ಜೊತೆಗೆ ಮಾತನಾಡುತ್ತಿರುವೆಯೆಂಬ ಪರಿವೆ ಇದೆಯೇ? ಎಂದು ಜಾನ್ಸನ್ ಸಿಡಿಮಿಡಿಗೊಂಡು ಮತ್ತೆ ಕೇಳಿದರು. ಅದಕ್ಕೆ ಎಮಿಲಿ ಕೊಟ್ಟ ಉತ್ತರ: “Yes, Sir! But I am serving the US Ambassador and not the US President!” ಕೆನ್ನೆತ್ ಎದ್ದಮೇಲೆ ವಿಷಯ ತಿಳಿದು ಜಾನ್ಸನ್ಗೆ ಫೋನ್ ಮಾಡಿ ಕ್ಷಮೆ ಯಾಚಿಸಿದರು. ಮಿಸ್ ಎಮಿಲಿಯನ್ನು ಕೂಡಲೇ ಕೆಲಸದಿಂದ ರಿಲೀವ್ ಮಾಡಬೇಕೆಂದು ಅಧ್ಯಕ್ಷ ಜಾನ್ಸನ್ ಆದೇಶಿಸಿದರು. ಆಕೆಯ ತಪ್ಪೇನೂ ಇಲ್ಲವೆಂದು ರಾಯಭಾರಿ ಹೇಳಿದರೂ ಕೇಳಲಿಲ್ಲ. ಆದರೆ ಜಾನ್ಸನ್ ರಿಲೀವ್ ಮಾಡಲು ಆದೇಶ ಮಾಡಿದ್ದು ಆಕೆಯನ್ನು ಕೆಲಸದಿಂದ ವಜಾ ಮಾಡಲು ಅಲ್ಲ; ಅಂತಹ ನಿಷ್ಠಾವಂತ ಆಪ್ತಸಹಾಯಕಿ White House ನಲ್ಲಿ ತನಗೆ ಬೇಕು ಎಂದು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 14.7.2011