ಭಕ್ತಿಯ ಅತಿರೇಕಗಳು

  •  
  •  
  •  
  •  
  •    Views  

ಹಳ ವರ್ಷಗಳ ಹಿಂದೆ ಅಮೇರಿಕೆಯ ಪಿಟ್ಸ್ಬರ್ಗ್ ನಗರಕ್ಕೆ ಹೋದಾಗ ಶಿಷ್ಯರೊಬ್ಬರ ಮನೆಯಲ್ಲಿ ಪೂಜೆ ಇತ್ತು. ಅವರ ಸ್ನೇಹಿತರನೇಕರು ಆಹ್ವಾನಿತರಾಗಿ ಬಂದಿದ್ದರು. ಪೂಜೆ ಪ್ರಸಾದ ಮುಗಿದ ಮೇಲೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಾಗ ವಿಚಾರ ಭಾರತೀಯ ಹಬ್ಬಗಳ ಕಡೆ ತಿರುಗಿತು. ಅವರ ಪುಟ್ಟ ಮಗ ನಮಗೆ ಒಂದು ಪ್ರಶ್ನೆಯನ್ನು ಹಾಕಿ ಎಲ್ಲರನ್ನೂ ತಬ್ಬಿಬ್ಬಾಗಿಸಿದ: “Swamiji, tell me why the tommy of Ganesha, the elephant head God, is so big although he does not eat?" ಗಣಪತಿಯು ತನ್ನ ಕೈಯಲ್ಲಿ ಕರ್ಜಿಕಾಯಿ, ಕಡುಬು, ಚಕ್ಕುಲಿ ಇತ್ಯಾದಿ ತಿಂಡಿತಿನುಸುಗಳನ್ನು ಇಟ್ಟುಕೊಂಡಿದ್ದರೂ ಉಣ್ಣುವುದಿಲ್ಲ. ಆದರೂ ಅವನ ಹೊಟ್ಟೆ ಏಕೆ ಅಷ್ಟೊಂದು ದಪ್ಪವಾಗಿದೆ? ಈ ಪ್ರಶ್ನೆ ಆ ಬಾಲಕನ ಮನಸ್ಸಿನಲ್ಲಿ ಮೂಡಿಬರಲು ಕಾರಣವೇನಿರಬಹುದೆಂದು ತಿಳಿಯುವ ಕುತೂಹಲ ನಮಗೆ ಉಂಟಾಯಿತು. ನಮ್ಮ ದೇಶದಲ್ಲಿ ಹಬ್ಬಗಳನ್ನು ಆಚರಿಸಿದಂತೆ ಅಲ್ಲಿ ನೆಲೆಸಿರುವ ಭಾರತೀಯರೂ ಆಚರಿಸುತ್ತಾರೆ. ಕೆಲವು ದಿನಗಳ ಹಿಂದೆ ಅವರ ಮನೆಯಲ್ಲಿ ಸಾಂಪ್ರದಾಯಿಕವಾಗಿ ಗಣಪತಿ ಹಬ್ಬವನ್ನು ಆಚರಿಸಿದ್ದರಂತೆ. ಹಬ್ಬದ ನಿಮಿತ್ತ ಅಡುಗೆ ಸಿದ್ಧವಾಗಿದ್ದರೂ ಪೂಜೆ ಆಗಿರಲಿಲ್ಲ. ಗಣಪತಿಗೆ ನೈವೇದ್ಯ ಮಾಡಿರಲಿಲ್ಲ. ಹುಡುಗನಿಗೆ ಬಹಳ ಹಸಿವಾಗಿತ್ತು. ಆದರೆ ದೇವರಿಗೆ ನೈವೇದ್ಯ ಮಾಡದೆ ಮಗನಿಗೆ ಉಣಬಡಿಸಲು ತಾಯಿ ಸಿದ್ಧಳಿರಲಿಲ್ಲ. ಬಾಲಕ ತಾಯಿಯೊಂದಿಗೆ ವಾಗ್ವಾದಕ್ಕಿಳಿದ. “ಕಳೆದ ವರ್ಷವೂ ಇದೇ ರೀತಿ ನೀನು ಗಣಪತಿಯ ಮುಂದೆ ಎಲೆ ಹಾಕಿ ವಿವಿಧ ಭಕ್ಷಭೋಜ್ಯಗಳನ್ನು ಬಡಿಸಿದ್ದೆ. ಎಷ್ಟು ಹೊತ್ತಾದರೂ ಗಣಪತಿ ಉಣ್ಣಲಿಲ್ಲ. ನಾನು ಕಂಡಂತೆ ಎಲೆಯ ಮೇಲೆ ಬಡಿಸಿದ ಆಹಾರಪದಾರ್ಥಗಳು ಹಾಗೆಯೇ ಇದ್ದವು. ನನಗೆ ಹಸಿವಾಗಿದೆ. ಏಕೆ ಉಣ್ಣಲು ಬೇಗನೆ ಬಡಿಸುವುದಿಲ್ಲ?” ದೇವರಿಗೆ ನೈವೇದ್ಯ ಮಾಡದೆ ಉಣ್ಣಬಾರದು ಮಗುಎಂದು ತಾಯಿ ಕೊಟ್ಟ ಸಾಂಪ್ರದಾಯಿಕ ಉತ್ತರ ಮಗನ ತಾರ್ಕಿಕ ಬುದ್ಧಿಗೆ ಸಮಾಧಾನವನ್ನುಂಟುಮಾಡಲಿಲ್ಲ. ಉಂಬ ಜಂಗಮ ಮನೆಗೆ ಬಂದರೆ ನಡೆ ನಡೆ ಎಂಬರು, ಉಣ್ಣದ ಲಿಂಗಕೆ ಬೋನವ ಎಡೆಹಿಡಿಯೆಂಬರಯ್ಯಾ ಎಂಬ ಬಸವಣ್ಣನವರ ವಚನ ನಮಗೆ ನೆನಪಾಯಿತು. ನಮ್ಮ ಧಾರ್ಮಿಕ ನಂಬುಗೆ ಮತ್ತು ಆಚರಣೆಗಳನ್ನು ಕುರಿತು ಸುದೀರ್ಘಕಾಲ ಸಂವಾದ ನಡೆಯಿತು. ಇದೇ ರೀತಿ ನಮ್ಮ ದೇಶದಲ್ಲಿಯೇ ನಮ್ಮ ಅನುಭವಕ್ಕೆ ಬಂದ ಮತ್ತೊಂದು ಘಟನೆ ನೆನಪಾಯಿತು. ತಿಪಟೂರಿನ ಸಮೀಪದ ಹಳ್ಳಿಯೊಂದರ ಕಾರ್ಯಕ್ರಮ ಮುಗಿಸಿಕೊಂಡು ಶಿಷ್ಯರ ಮನೆಯಲ್ಲಿ ಏರ್ಪಡಿಸಿದ್ದ ಪೂಜೆಗೆ ಬರುವ ಹೊತ್ತಿಗೆ ರಾತ್ರಿ ಬಹಳ ವೇಳೆಯಾಗಿತ್ತು. ಹಸಿವಾಗಿದೆಯೆಂದು ಮನೆಯಲ್ಲಿದ್ದ ಅವರ ಮಗ ಎಷ್ಟೇ ಅತ್ತು ಕರೆದರೂ ಸಂಪ್ರದಾಯಸ್ಥರಾದ ತಂದೆತಾಯಂದಿರು ಗುರುಗಳ ಪೂಜೆ ಆಗಿಲ್ಲವೆಂದು ಉಣಬಡಿಸದ ಕಾರಣ ಆ ಬಾಲಕ ಅತ್ತೂ ಅತ್ತೂ ಮಲಗಿದ್ದ! ಆ ಬಾಲಕನನ್ನು ಏಳಿಸಿ ಉಣ್ಣಿಸುವವರೆಗೂ ನಮಗೆ ಸಮಾಧಾನವಾಗಲಿಲ್ಲ. 

ಮೇಲಿನ ಘಟನೆಗಳು ಭಾರತೀಯ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದ ಭಕ್ತಿಪಂಥದ ಸುಳುಹುಗಳು. ಭಕ್ತಿಕನ್ಯೆಯು ದ್ರಾವಿಡ ದೇಶದಲ್ಲಿ ಹುಟ್ಟಿ, ಕರ್ನಾಟಕದಲ್ಲಿ ಬೆಳೆದು, ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಸಂಚರಿಸಿ, ವೃಂದಾವನದಲ್ಲಿ ಸುಂದರ ಯುವತಿಯಾಗಿ ರೂಪುಗೊಂಡಳೆಂದು ಪದ್ಮಪುರಾಣದಲ್ಲಿ ವರ್ಣಿಸಲಾಗಿದೆ:

ಉತ್ಪನ್ನಾ ದ್ರವಿಡೇ ಸಾsಹಂ ವೃದ್ಧಿಂ ಕರ್ನಾಟಕೇ ಗತಾ  |
ಕ್ವಚಿತ್ ಕ್ವಚಿನ್ ಮಹಾರಾಷ್ಟ್ರೇ ಗುರ್ಜರೇ ಜೀರ್ಣತಾಂ ಗತಾ ||
ವೃಂದಾವನಂ ಪುನಃ ಪ್ರಾಪ್ಯ ನವೀನೇವ ಸುರೂಪಿಣೀ |
ಜಾತಾsಹಂ ಯುವತೀ ಸಮ್ಯಕ್ ಪ್ರೇಷ್ಠರೂಪಾ ತು ಸಾಂಪ್ರತಂ ||

ಮೇಲಿನ ಘಟನೆಗಳಿಗಿಂತಲೂ ಕ್ರೂರವಾದ ಘಟನೆಗಳು ಭಕ್ತಿಸಾಹಿತ್ಯದಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಎರಡನ್ನು ಇಲ್ಲಿ ನೋಡಬಹುದು. ಪ್ರಾಚೀನ ಶೈವಧರ್ಮದಲ್ಲಿ ಭಕ್ತಿಪಾರಮ್ಯವನ್ನು ಮೆರೆದ ಅರವತ್ತುಮೂರು ಪುರಾತನರಲ್ಲಿ ಸಿರಿಯಾಳ-ಚಂಗಳೆ ಮತ್ತು ನಿಂಬಿಯಕ್ಕನ ಕಥಾನಕಗಳು ಹೀಗಿವೆ:

1.ಈಗಿನ ತಮಿಳು ನಾಡಿನ ಕಾಂಚೀಪುರದಲ್ಲಿ ಸಿರಿಯಾಳ-ಚಂಗಳೆ ಎಂಬ ಪರಮಶಿವಭಕ್ತ ದಂಪತಿಗಳು ಇದ್ದರು. ಅವರಿಗೆ ಚೀಲಾಳ ಎಂಬ ಒಬ್ಬ ಮಗನಿದ್ದ. ಭಕ್ತಿಸಂಪನ್ನರಾದ ಅವರು ನಿತ್ಯವೂ ಜಂಗಮದಾಸೋಹವನ್ನು ನಡೆಸಿಕೊಂಡು ಬಂದಿದ್ದರು. ಇವರ ಭಕ್ತಿ-ಭಾವವನ್ನು ಪರೀಕ್ಷಿಸಲು ಶಿವನು ಜಂಗಮವೇಷಧಾರಿಯಾಗಿ ಬರುತ್ತಾನೆ. ಆ ತಪಸ್ವಿಯನ್ನು ಸಿರಿಯಾಳ ದಂಪತಿಗಳು ತಮ್ಮ ಮನೆಗೆ ಆದರದಿಂದ ಬರಮಾಡಿಕೊಂಡು ಪಾದಪೂಜೆಯನ್ನು ಮಾಡಿ ಪ್ರಸಾದ ಸ್ವೀಕರಿಸಲು ಬೇಡಿಕೊಳ್ಳುತ್ತಾರೆ. ಆದರೆ ಅವರು ಸಿದ್ಧಪಡಿಸಿದ ವಿಶೇಷ ಭಕ್ಷ್ಯಭೋಜ್ಯಗಳನ್ನು ಆ ತಪಸ್ವಿ ಉಣ್ಣಲು ಇಷ್ಟಪಡುವುದಿಲ್ಲ. ಅವನು ಬಯಸಿದ್ದೇನು? ಸತ್ಕುಲಪ್ರಸೂತನಾದ, ಕೋಮಲಾಂಗನಾದ, ಎಳೆಯ ವಯಸ್ಸಿನ ಬಾಲಕನ ದೇಹದ ಮಾಂಸದಿಂದ ಮಾಡಿದ ಭೋಜನವನ್ನು, ಆರುತಿಂಗಳಿಗೊಮ್ಮೆ ನಡೆಸುವ ತನ್ನ ಈ ವ್ರತವನ್ನು ಪೂರೈಸುವುದು ಸುಲಭಸಾಧ್ಯವಲ್ಲವೆಂದರೂ ಶಿವಭಕ್ತ ಸಿರಿಯಾಳ ಮುಂದಾಗುತ್ತಾನೆ. ಅಂತಹ ಸಲ್ಲಕ್ಷಣಗಳನ್ನುಳ್ಳಯಾರಾದರೂ ಬಾಲಕನನ್ನು ಪಟ್ಟಣದಲ್ಲಿ ಖರೀದಿಸಿ ತಪಸ್ವಿಯ ವ್ರತವನ್ನು ಪೂರೈಸಲು ತನ್ನ ಹೆಂಡತಿ ಚಂಗಳೆಯೊಂದಿಗೆ ಸಮಾಲೋಚಿಸುತ್ತಾನೆ. ಅದಕ್ಕೆ ಅವಳು ಶಿವ ಶಿವ ಬೆಳ್ತನಂ ನಿಮಗೆ ಸಲ್ವುದೆ? (ಈ ಹುಚ್ಚುತನ ನಿಮಗೇಕೆ?) ಎಂದು ಗಂಡನಿಗೆ ಹೇಳಿದಳಾದರೂ ಬೇರೆಯವರ ಮಗನ ಬದಲು ತಮ್ಮ ಮಗನನ್ನೇ ಕೊಂದು ಉಣಬಡಿಸಲು ಸೂಚಿಸುತ್ತಾಳೆ. ಅದಕ್ಕಾಗಿ ಆ ದಂಪತಿಗಳು ಪಾಠಶಾಲೆಗೆ ಹೋಗಿ ಮಗನನ್ನು ಕರೆದುಕೊಂಡು ಬರುವ ಮೊದಲೇ ತಪಸ್ವಿಯು ತಲೆಮರಿಸಿಕೊಂಡು ಹೋಗಿ ಅವರ ಮಗನಾದ ಚೀಲಾಳನನ್ನು ಕಾಣುತ್ತಾನೆ. ಋಷಿವೇಷದ ರಾಕ್ಷಸನಿಗೆ ನಿನ್ನನ್ನು ಬಲಿಕೊಡುತ್ತಾರೆ, ಎಲ್ಲಿಯಾದರೂ ತಪ್ಪಿಸಿಕೊಂಡು ಹೋಗಿ ಜೀವ ಉಳಿಸಿಕೋ ಎಂದು ಹೇಳುತ್ತಾನೆ. ಚೀಲಾಳ ಹೆದರುವುದಿಲ್ಲ. ದೇಹ ಮೋಡದ ನೆರಳಿನಂತೆ ನಶ್ವರ, ಎಂದಾದರೂ ಸಾಯಲೇಬೇಕಲ್ಲವೇ ಎಂದು ತಂದೆತಾಯಿಗಳ ಇಚ್ಛೆಯಂತೆ ನಡೆದುಕೊಳ್ಳಲು ಸಿದ್ಧನಾಗುತ್ತಾನೆ. ಸಿರಿಯಾಳ-ಚಂಗಳೆಯರು ಮಗನ ಧೈರ್ಯಕ್ಕೆ ಮೆಚ್ಚಿ ಅವನ ತಲೆಯನ್ನು ತುಂಡರಿಸಿ ಅಡುಗೆ ಮಾಡಿ ತಪಸ್ವಿಗೆ ಉಣಬಡಿಸುತ್ತಾರೆ. ಜೊತೆಯಲ್ಲಿ ಊಟಮಾಡಲು ನಿಮ್ಮ ಮಗನನ್ನು ಕರೆಯಿರಿ ಎಂದು ತಪಸ್ವಿ ಹೇಳುತ್ತಾನೆ. ತಪಸ್ವಿಯ ಆಣತಿಯನ್ನು ಮೀರಬಾರದೆಂದು ಚಂಗಳೆ ಹೊರಗೆ ಹೋಗಿ ಸುಕುಮಾರಶಿರೋಮಣಿ ಬಾರಾ, ಶಿವಭೋಜ್ಯಕಳೇವರ ಬಾರಾ ಎಂದು ಕರೆಯುತ್ತಾಳೆ. ಆಕೆಯ ಮುದ್ದು ಮಗ ಚೀಲಾಳ ಓಡಿಬರುತ್ತಾನೆ. ತಪಸ್ವಿಯ ವೇಷದಲ್ಲಿದ್ದ ಶಿವನು ಅವರೆಲ್ಲರಿಗೂ ಕೈಲಾಸದಲ್ಲಿ ಗಣಪದವಿಯನ್ನು ನೀಡುತ್ತಾನೆ. 

2.ಕೈಲಾಸದಲ್ಲಿದ್ದ ಪ್ರಮಥಗಣಂಗಳನ್ನು ನೋಡಿ ತನ್ನಂತೆ ಮಗನನ್ನು ವಧಿಸಿ ಶಿವನಿಗೆ ಅರ್ಪಣೆಮಾಡಿದವರು ಇಲ್ಲಿ ಯಾರಿದ್ದಾರೆಂದು ಸಿರಿಯಾಳನ ಮನಸ್ಸಿನಲ್ಲಿ ಅಹಂಕಾರ ಮೊಳಕೆಯೊಡೆಯುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಶಿವನು ಜಂಗಮವೇಷಧಾರಿಯಾಗಿ ಸಿರಿಯಾಳನನ್ನು ಭೂಲೋಕಕ್ಕೆ ಕರೆತರುತ್ತಾನೆ. ಇಬ್ಬರೂ ಶಿವಭಕ್ಕೆ ನಿಂಬಿಯಕ್ಕನ ಮನೆಗೆ ಬರುತ್ತಾರೆ. ಶಿವನಲ್ಲಿ ಅಪಾರ ಭಕ್ತಿಯನ್ನಿಟ್ಟಿದ್ದ ನಿಂಬಿಯಕ್ಕ ಶಿವಭಕ್ತರ ಮನೆಗೆ ನೀರನ್ನು ತಂದು, ಅವರ ಮನೆಯ ದನಕರುಗಳನ್ನು ಕಾಯ್ದು ಜಂಗಮಸೇವೆಯನ್ನು ಮಾಡುತ್ತಿರುತ್ತಾಳೆ. ತನ್ನ ಮನೆಗೆ ಬಂದ ಜಂಗಮರನ್ನು ನೋಡಿ ನಮ್ರತೆಯಿಂದ ನಮಸ್ಕರಿಸಿ ಭೋಜನಕ್ಕೆ ಅಣಿಮಾಡುತ್ತಾಳೆ. ಬಂದ ಜಂಗಮರು ಆಯಾಸದಿಂದ ನಿದ್ರೆಮಾಡಿದಂತೆ ನಟಿಸುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡು ನಿಂಬಿಯಕ್ಕ ನೀರನ್ನು ತರಲು ಬಿಂದಿಗೆಯನ್ನು ತೆಗೆದುಕೊಂಡು ಹೊರಗೆ ಹೋಗುತ್ತಾಳೆ. ಅದೇ ಸಂದರ್ಭಕ್ಕೆ ಸರಿಯಾಗಿ ದನ ಕಾಯಲು ಹೋಗಿದ್ದ ಅವಳ ಮಗ ಮನೆಗೆ ಬರುತ್ತಾನೆ. ಇಡೀ ದಿನವೆಲ್ಲಾ ದಣಿದಿದ್ದ ಅವನು ಅಮ್ಮಾ, ಅಮ್ಮಾ, ಹಸಿವಾಗಿದೆ ಎಂದು ಮನೆಯೊಳಗೆ ಕಾಲಿಡುತ್ತಾನೆ. ತಾಯಿ ಮನೆಯಲ್ಲಿ ಇಲ್ಲದೇ ಇರುವುದನ್ನು ನೋಡಿ ಹಸಿವಿನ ಬಾಧೆ ತಾಳಲಾರದೆ ಅಡುಗೆಮನೆಯಲ್ಲಿ ಅತ್ತಿತ್ತ ಅಲೆದಾಡುತ್ತಾನೆ. ತಾಯಿ ಮಾಡಿಟ್ಟ ಅಡುಗೆಯಲ್ಲಿ ಒಂದು ಹೂರಿಗೆಯನ್ನು ಅವಸರದಲ್ಲಿ ತೆಗೆದುಕೊಂಡು ತಿನ್ನುತ್ತಾನೆ. ಅಷ್ಟರಲ್ಲಿ ತಾಯಿ ಬರುತ್ತಾಳೆ. ಜಂಗಮರಿಗೆ ಮಾಡಿಟ್ಟ ಮೀಸಲು ಅಡುಗೆಯನ್ನು ಮಗ ಎಂಜಲು ಮಾಡಿದನೆಂದು ತಾಯಿ ಕೋಪಗೊಳ್ಳುತ್ತಾಳೆ. ಸಿಟ್ಟಿನಿಂದ ಒನಕೆಯನ್ನು ತೆಗೆದುಕೊಂಡು ಛಿಃ ಛಿಃ ಕೆಟ್ಟ ನಾಯಿ ಎಂದು ಮಗನನ್ನು ನಾಯಿಗೆ ಹೊಡೆದಂತೆ ಹೊಡೆದು ಸಾಯಿಸಿ ಅವನ ಹೆಣವನ್ನು ದರದರನೆ ಎಳೆದುಕೊಂಡು ಹೋಗಿ ಹಾಳು ಹಳ್ಳಕ್ಕೆ ಎಸೆದು ಮೇಲೆ ಹುಲ್ಲು ಮುಚ್ಚುತ್ತಾಳೆ. ಮನೆಗೆ ಹಿಂದಿರುಗಿ ಬಂದು ಸ್ನಾನಮಾಡಿ ಹೊಸದಾಗಿ ಅಡುಗೆಮಾಡಿ ಜಂಗಮರಿಗೆ ಉಣಬಡಿಸುತ್ತಾಳೆ. ಹಸಿದುಬಂದ ಮಗನ ಮೇಲೆ ಕರುಣೆಬೇಡವೇ ಅವನನ್ನೂ ಊಟಕ್ಕೆ ಕರೆ ಎಂದು ಜಂಗಮವೇಷಧಾರಿ ಶಿವ ಹೇಳುತ್ತಾನೆ. ಇದೆಲ್ಲಾ ನಾಟಕ ಬೇಡ, ಸಿರಿಯಾಳನಂತೆ ನಿನ್ನ ಹಂಗಿನಲ್ಲಿರಲು ನಾನು ಬಯಸುವುದಿಲ್ಲ, ಸುಮ್ಮನೆ ಊಟಮಾಡು ಎಂದು ಶಿವನಿಗೆ ಝಂಕಿಸಿ ಹೇಳುತ್ತಾಳೆ. ಶಿವನು ಆಕೆಯನ್ನು ಅವಳ ಮಗನೊಂದಿಗೆ ಕೈಲಾಸಕ್ಕೆ ಕರೆದುಕೊಂಡುಹೋಗುವುದಾಗಿ ಹೇಳಿದರೂ ನಿನ್ನ ಕೈಲಾಸವೂ ಬೇಡ, ನಿನ್ನ ಬೆಳ್ಳಿಬೆಟ್ಟವೂ ಬೇಡ, ನಾನು ಈ ಭೂಲೋಕದಲ್ಲಿಯೇ ಇರುತ್ತೇನೆ ಎಂದು ನಿಂಬಿಯಕ್ಕ ಕಡ್ಡಿಮುರಿದಂತೆ ಹೇಳುತ್ತಾಳೆ. 

3.ಇಂಥದೇ ಒಂದು ಪ್ರಸಂಗ ಕ್ರೈಸ್ತರ ಧರ್ಮಗ್ರಂಥವಾದ ಬೈಬಲ್‌ನ ಹಳೆಯ ಒಡಂಬಡಿಕೆಯಲ್ಲಿ (Old Testament) ಬರುತ್ತದೆ. ಆಬ್ರಹಂ ಮತ್ತು ಅವನ ಪತ್ನಿ ಸಾರಾಳಿಗೆ ಇಳಿ ವಯಸ್ಸಿನಲ್ಲಿ ದೇವರ ಕೃಪೆಯಿಂದ ಐಸಾಕ್ ಎಂಬ ಒಬ್ಬ ಮಗ ಹುಟ್ಟುತ್ತಾನೆ. ದೇವರು ಅವನನ್ನು ಪರೀಕ್ಷಿಸಲು ನಿನ್ನ ಪ್ರೀತಿಗೆ ಪಾತ್ರನಾದ ಮಗನನ್ನು ಮೊರಾ (Moriah) ಎಂಬ ಬೆಟ್ಟದ ಮೇಲೆ ಹೋಗಿ ಬಲಿಕೊಡು ಎಂದು ಆಜ್ಞಾಪಿಸುತ್ತಾನೆ. ಆಬ್ರಹಂ ಹಿಂದುಮುಂದು ಯೋಚಿಸದೆ ತನ್ನ ಮಗನನ್ನು ಆ ಬೆಟ್ಟದ ಮೇಲೆ ಕರೆದುಕೊಂಡು ಹೋಗಿ ಬಲಿಪೀಠಕ್ಕೆ ಕಟ್ಟಿಹಾಕಿ ದೇವರ ಆಜ್ಞೆಯಂತೆ ಕೊಲ್ಲಲು ಮುಂದಾಗುತ್ತಾನೆ. ಕೊನೆಯ ಗಳಿಗೆಯಲ್ಲಿ ಆಶರೀರವಾಣಿಯೊಂದು ನಿಲ್ಲು, ಕೊಲ್ಲಬೇಡ; ದೇವರ ಮೇಲಿನ ನಿನ್ನ ವಿಶ್ವಾಸವನ್ನು ಸಾಬೀತುಪಡಿಸಿದ್ದೀಯಾ ಎಂದು ಹೇಳಿ ತಡೆದು ನಿಲ್ಲಿಸುತ್ತದೆ. 

ಮೇಲಿನ ಕಥಾನಕಗಳನ್ನು ಪರಿಶೀಲಿಸಿದಾಗ ಭಕ್ತಿಯ ಪರಾಕಾಷ್ಠೆಯಲ್ಲಿ ಭಕ್ತರು ಕೈಗೊಳುವ ತೀರ್ಮಾನಗಳು ಮತ್ತು ಅವರ ಆಚರಣೆಗಳು ಇಂದಿನ ಕಣ್ಣಿಗೆ ವಿಕೃತ ನಡವಳಿಕೆಗಳಂತೆ ಕಾಣುತ್ತವೆ. ಎಷ್ಟೇ ಶ್ರೇಷ್ಠ ಭಕ್ತರೆನಿಸಿದರೂ ಸಮಕಾಲೀನ ಕಾನೂನಿನ ಪರಿಭಾಷೆಯಲ್ಲಿ ಅವರನ್ನು ಕ್ರಿಮಿನಲ್‌ಗಳೆಂದೇ ಪರಿಗಣಿಸಬೇಕಾಗುತ್ತದೆ. ಇಂದಿನ ಕೋರ್ಟುಗಳಲ್ಲಿ ಅವರ ವಿಚಾರಣೆಯೇನಾದರೂ ನಡೆದರೆ ಅವರು ಸುಳ್ಳು ನುಡಿಯುವುದಿಲ್ಲವಾದ್ದರಿಂದ ಉದ್ದೇಶ (Intention), ತಯಾರಿ (Preparation) ಮತ್ತು ಜಾರಿ (Commission) - ಈ ಮೂರು ಹಂತಗಳಲ್ಲೂ ಅವರು ಅಪರಾಧಿಗಳೆಂದು ಸಾಬೀತಾಗುವುದರಲ್ಲಿ ಸಂಶಯವಿಲ್ಲ. ಮೇಲೆ ಪ್ರಸ್ತಾಪಿಸಲಾದ ಎಲ್ಲ ಭಕ್ತರ ವರ್ತನೆಗಳು ಇಂಡಿಯನ್ ಪೀನಲ್ ಕೋಡ್‌ನ ಯಾವುದಾದರೊಂದು ಕಾಲಂನ ಅನ್ವಯ ಘೋರಾತಿಘೋರ ಶಿಕ್ಷೆಯನ್ನು ವಿಧಿಸಬಹುದಾದ ಅಪರಾಧಗಳೇ ಆಗಿವೆ. ಆದರೆ ಅವರ ಭಕ್ತಿ ಈ ಯಾವುದೇ ತರ್ಕಕ್ಕೆ ಮತ್ತು ಕಾನೂನಿಗೆ ನಿಲುಕುವುದಿಲ್ಲ. ಅವರ ಬದುಕಿನ ದಿಕ್ಕೇ ವಿಭಿನ್ನವಾಗಿರುವುದರಿಂದ ಲೋಕದ ನಡೆಯಂತೆ ಅವರ ನಡೆ ಇರುವುದಿಲ್ಲ. ಲೋಕ ಮೆಚ್ಚುತ್ತದೆ ಅಥವಾ ಬಿಡುತ್ತದೆ ಎಂದು ಅವರು ಎಂದೂ ಯೋಚಿಸಲಿಲ್ಲ. ಅವರು ಬದುಕಿದ್ದು ಏನಿದ್ದರೂ ತಮ್ಮ ಒಳದನಿ ಮೆಚ್ಚುವಂತೆ ಮಾತ್ರ; ಲಿಂಗ ಮೆಚ್ಚಿ ಅಹುದು ಅಹುದು ಎನ್ನುವಂತೆ ಅವರು ಬದುಕಿದರು; ಲೋಕ ಏನೆಂದೀತು ಎಂಬ ಅಳುಕು ಅವರಿಗೆ ಎಳ್ಳನಿತೂ ಇರಲಿಲ್ಲ. ಅವರು ಪ್ರವಾಹದ ವಿರುದ್ಧ ಈಜಿದ ಮೀನುಗಳೇ ಹೊರತು ನದಿಯ ನೀರಿನ ಸೆಳೆತದಲ್ಲಿ ಸಾಗಿದ ಕಸಕಡ್ಡಿಗಳಲ್ಲ. 

ಹಾಗಾದರೆ ಈ ಪರಾಕಾಷ್ಠೆಗಳನ್ನು ಸಮರ್ಥಿಸಬಹುದೇ? ಅವು ಅನುಕರಣೀಯವೇ? ಈ ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಎಂದು ನೇರ ಉತ್ತರ ಕೊಡುವುದು ಕಷ್ಟ. ಮೇಲ್ನೋಟಕ್ಕೆ ಇವು ಸಮರ್ಥನೀಯವೂ ಅಲ್ಲ, ಅನುಕರಣೀಯವೂ ಅಲ್ಲ. ಹಾಗಂತ ಭಕ್ತಿಯ ಗರಗಸಕ್ಕೆ ಕೊರಳೊಡ್ಡಿ, ತಮ್ಮ ತನು ಮನ ಧನಗಳನ್ನು ತೃಣಕ್ಕಿಂತ ಕಡೆಯಾಗಿ ಕಂಡು ದೇವರನ್ನೇ ಸೋಲಿಸಿದ ಅವರ ಭಕ್ತಿಪಾರಮ್ಯವನ್ನು ಮೆಚ್ಚದಿರಲು ಸಾಧ್ಯವೂ ಇಲ್ಲ. ಇಂತಹ ಅಡಕತ್ತರಿಯಲ್ಲಿ ಜಿಜ್ಞಾಸುಗಳು ಮತ್ತು ವಿಚಾರವಾದಿಗಳು ಸಿಕ್ಕಿಹಾಕಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಆಡಿದ ಮಾತುಗಳೇ ಈ ಮುಂದಿನ ವಚನಗಳು: 

ಮುನ್ನಿನವರು ಹೋದ ದಾರಿ ಭಯ ಕಾಣಿರಣ್ಣಾ... 
ಸಿರಿಯಾಳನ ಮಗನ ಬೇಡಿದಂದಿಂದ ಭಯ, ಕಾಣಿರಣ್ಣಾ
ದಾಸನ ವಸ್ತ್ರವ ಸೀಳಿದಂದಿಂದ ಭಯ, ಕಾಣಿರಣ್ಣಾ
ಆಘಟಿತಘಟಿತರು, ವಿಪರೀತಚರಿತರು
ಕೂಡಲಸಂಗನ ಶರಣರು ನಡೆದ ದಾರಿ ಭಯ ಕಾಣಿರಣಾ! 
                                                                            (ಬಸವಣ್ಣ)

ಕರುಣಾಕರ ನೀನೆಂದೆನಿಸಿಕೊಂಬೆ 
ಸಿರಿಯಾಳನ ಮಗನ ಬೇಡುವರೇನಯ್ಯಾ? 
ನಿತ್ಯತೃಪ್ತಿ ನೀನೆಂದೆನಿಸಿಕೊಂಬೆ 
ಚೆನ್ನನ ಮನೆಯಲುಂಬರೇನಯ್ಯಾ? 
ನಿಮ್ಮ ಮಹಿಮೆಯ ನೀವೇ ಬಲ್ಲಿರಿ 
ಎನ್ನನುದ್ಧರಿಸಯ್ಯಾ ಶಂಭುಜಕ್ಕೇಶ್ವರ! 
(ಹಿರೇಜಂಬೂರು ಸತ್ಯಕ)

ಭಕ್ತನಿಗೆ ಭಗವಂತನ ಮೇಲಿರುವ ಅದಮ್ಯ ವಿಶ್ವಾಸವೇ ಭಕ್ತಿ. ಅದು ಬುದ್ಧಿಯ ಶುಷ್ಕ ತರ್ಕಕ್ಕೆ ನಿಲುಕುವ ವಸ್ತುವಲ್ಲ. ಅದೊಂದು ಹೃದಯಾಂತರಾಳದಿಂದ ಹೊರಹೊಮ್ಮುವ ಅಲೌಕಿಕ ಭಾವನೆಯ ತುಡಿತ. ಬದುಕಿನ ಎಲ್ಲ ಬಂಧನಗಳಿಂದ ಕಳಚಿಕೊಂಡು ನಿತ್ಯನಿರಂತರವಾದ ಆನಂದಾನುಭೂತಿಯನ್ನು ಪಡೆಯುವ ತವಕ. ಕೆಲವೊಮ್ಮೆ ದೇವರನ್ನು ನಂಬಿಯೂ ನಂಬಲಾರದಂತಹ ಸ್ಥಿತಿಗೆ ಜೀವನದ ವಿಷಮ ಸನ್ನಿವೇಶಗಳು ಎಳೆದೊಯ್ಯುತ್ತವೆ. ಆದರೆ ನಿಜವಾದ ಭಕ್ತನು ಎಂತಹ ವಿಷಮ ಸನ್ನಿವೇಶದಲ್ಲಿಯೂ ದೇವರ ಮೇಲಿನ ತನ್ನ ನಂಬುಗೆಯನ್ನು ಕಳೆದುಕೊಳ್ಳುವುದಿಲ್ಲ. ಹಾಗೆ ಬಂದೆರಗಿದ ವಿಪತ್ತುಗಳೆಲ್ಲಾ ದೇವರ ದಿವ್ಯಾನುಗ್ರಹವೆಂದೇ ಭಾವಿಸುತ್ತಾನೆ. ಈ ಭಕ್ತರ ನಡವಳಿಕೆಗಳನ್ನು ಅಕ್ಷರಶಃ ಸರಿಯೆಂದು ಒಪ್ಪಿದಾಗ ಗೊಂದಲ ಉಂಟಾಗುವುದು ಸಹಜ. ಇವುಗಳನ್ನು ಪಾರಮಾರ್ಥಿಕ ಜೀವನ ಮೌಲ್ಯಗಳ ಪ್ರತಿಮೆಗಳನ್ನಾಗಿ (Symbols) ತೆಗೆದುಕೊಳ್ಳಬೇಕೇ ವಿನಾ ಅನುಕರಣೀಯ ನಡವಳಿಕೆಗಳನ್ನಾಗಿ (models) ಅಲ್ಲ, ಭಕ್ತಿಯೆಂಬುದು ಸುಲಭವಲ್ಲ, ಅದು ಎರಡೂ ಬದಿಯಿಂದ ಕೊಯ್ಯುವ ಗರಗಸ ಇದ್ದಂತೆ ಎನ್ನುತ್ತಾರೆ ಬಸವಣ್ಣನವರು. ಭಕ್ತನು ವಿಪತ್ತುಗಳ ಸರಮಾಲೆಯೇ ಎದುರಾದರೂ ಒಪ್ಪಿಕೊಂಡ ಮೌಲ್ಯಗಳನ್ನು ಬಿಡುವುದಿಲ್ಲ ಎಂಬುದಕ್ಕೆ ಪ್ರತಿಮೆಗಳನ್ನಾಗಿ ಈ ನಡವಳಿಕೆಗಳನ್ನು ಅರ್ಥೈಸಿದರೆ ಇಂದಿನ ಮೌಲ್ಯರಹಿತ ಬದುಕಿಗೆ ಒಂದು ಸಂದೇಶ ದೊರೆತೀತು.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 27.1. 2011