ಎಮಿಲಿ ಎಲ್ಲಮ್ಮನಾದರೆ...!
ಅರವತ್ತರ ದಶಕದಲ್ಲಿ ಅಮೇರಿಕೆಯ ಅಧ್ಯಕ್ಷರಾಗಿದ್ದ ಲಿಂಡನ್ ಜಾನ್ಸನ್ ಭಾರತದಲ್ಲಿದ್ದ ಅವರ ರಾಯಭಾರಿ ಜಾನ್ ಕೆನ್ನೆತ್ ಗಾಲ್ ಬ್ರೆತ್‌ಗೆ ಫೋನ್ ಮಾಡಿದಾಗ ರಾಯಭಾರಿಯ ಆಪ್ತಸಹಾಯಕಿ ಮಿಸ್ ಎಮಿಲಿ ಫೋನ್ ಕೊಡಲು ನಿರಾಕರಿಸಿದಳೆಂಬ ವಿಚಾರವನ್ನು ಹಿಂದಿನ ವಾರದ ಅಂಕಣದ ಕೊನೆಯಲ್ಲಿ ಪ್ರಸ್ತಾಪಿಸಿದ್ದು ನಿಮಗೆ ನೆನಪಿರಬಹುದು. ಇದು ಸತ್ಯಘಟನೆಯೋ ಅಥವಾ ಕಾಲ್ಪನಿಕ ಕತೆಯೋ ಎಂದು ಅನುಮಾನಿಸಿದ್ದ ನಮಗೆ ಮಾರನೆಯ ದಿನವೇ ಅಟ್ಲಾಂಟಾ ಪ್ರವಾಸದಲ್ಲಿರುವಾಗ ನ್ಯೂಯಾರ್ಕ್ ರಾಜಧಾನಿ ಆಲ್ಬನಿಯಿಂದ ಬಂದ ಒಂದು ಮಿಂಚೋಲೆ (e-mail) ತುಂಬಾ ಸಂತೋಷವನ್ನುಂಟುಮಾಡಿತು. ಓದುಗರು ಎಷ್ಟು ಜಾಣರಿರುತ್ತಾರೆಂಬುದಕ್ಕೆ ಇದೊಂದು ನಿದರ್ಶನ. ವಿಜಯಕರ್ನಾಟಕ ಮತ್ತಿತರ ಕನ್ನಡ ಪತ್ರಿಕೆಗಳ ಅಂತರಜಾಲ ಆವೃತ್ತಿಯನ್ನು ಈ ದೇಶದಲ್ಲಿರುವ ಅನೇಕ ಕನ್ನಡಿಗರು ಓದುವ ಅಭ್ಯಾಸವನ್ನಿಟ್ಟುಕೊಂಡಿದ್ದಾರೆ. ದೂರದಲ್ಲಿರುವ ಇವರಿಗೆ ಕನ್ನಡದ ಸೆಳೆತ ನಮಗಿಂತಲೂ ಹೆಚ್ಚು. “ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು” ಎಂಬ ಕವಿತೆಯ ಸಾಲುಗಳನ್ನು ಕಾವ್ಯರ್ಷಿ ಕುವೆಂಪುರವರು ಇಲ್ಲಿಯ ಕನ್ನಡಿಗರನ್ನೇ ಕುರಿತು ಬರೆದಂತಿದೆ. ಕನ್ನಡನಾಡಿನಲ್ಲಿರುವ ಕನ್ನಡಿಗರು ಮುಂಜಾನೆ ಮೈಮುರಿಯುತ್ತಾ ಕಣ್ತೆರೆದು ಬೆಳಗಿನ ಬೆಡ್‌ಕಾಫಿಯನ್ನು ಗುಟುಕರಿಸಿ ದಿನಪತ್ರಿಕೆಯನ್ನು ಕೈಗೆತ್ತಿಕೊಳ್ಳುವ ಮೊದಲೇ ಅಮೇರಿಕೆಯಲ್ಲಿ ನೆಲೆಸಿರುವ ಕನ್ನಡಿಗರು ಹಿಂದಿನ ಸಂಜೆಯೇ ಆಫೀಸಿನಿಂದ ಮನೆಗೆ ಬಂದೊಡನೆ ಅಂತರಜಾಲದಲ್ಲಿ ಕನ್ನಡ ಪತ್ರಿಕೆಗಳನ್ನು ತುಂಬಾ ಆಸಕ್ತಿಯಿಂದ ಓದಿ ಆಸ್ವಾದಿಸಿರುತ್ತಾರೆ. ಕಾಲಮಾನದ ವ್ಯತ್ಯಾಸದಿಂದ ಬೆಂಗಳೂರಿನ ಸಂಜೆ ವಾಣಿ ಇಲ್ಲಿಯವರಿಗೆ ಮುಂಜಾನೆ ವಾಣಿ! ಉಳಿದೆಲ್ಲ ದಿನಪತ್ರಿಕೆಗಳೂ ಮುಸ್ಸಂಜೆವಾಣಿಗಳು! ಅಂತಹ ಓದುಗರಲ್ಲೊಬ್ಬರಾದ ಆಲ್ಬನಿ ಯುವ ಸಾಫ್ಟ್ ವೇರ್ ಎಂಜಿನಿಯರಾದ ಸಿದ್ದೇಶ್ ಕಳೆದ ವಾರದ ನಮ್ಮ ಲೇಖನ ಅಪರಾತ್ರಿಯಲ್ಲೊಂದು ಟೆಲಿಫೋನ್ ಕರೆ ಓದಿ ಅದರಲ್ಲಿ ಪ್ರಸ್ತಾಪಿಸಿದ ಘಟನೆ ಕಟ್ಟುಕತೆಯಲ್ಲ ನಿಜವಾಗಿಯೂ ನಡೆದ ಘಟನೆಯೆಂದು ದೃಢೀಕರಿಸಿರುತ್ತಾರೆ. ಅದಕ್ಕೆ ಪುರಾವೆಯಾಗಿ 1981 ರಲ್ಲಿ ಪ್ರಕಟವಾದ ರಾಯಭಾರಿ ಜಾನ್ ಕೆನ್ನೆತ್ ಗಾಲ್‌ಬ್ರೆತ್ ಅವರ ಆತ್ಮಕತೆ “A Life In Our Times” ಎಂಬ ಗ್ರಂಥದಲ್ಲಿ ಈ ಘಟನೆಯ ವಿವರಗಳಿವೆಯೆಂದು ಈ ಮುಂದಿನ ಆಯ್ದಭಾಗವನ್ನು ಕಳುಹಿಸಿದ್ದಾರೆ.
"It had been a wearying day, and I asked Emily to hold all telephone messages while I had a nap. Shortly thereafter the phone rang. Lyndon Johnson was calling from the White House. “Get me Ken Galbraith. This is Lyndon Johnson.”
“He is sleeping, Mr. President. He said not to disturb him.”
“Well, wake him up. I want to talk to him.”
“No, Mr. President. I work for him, not you.”
When I called the President back, he could scarcely control his pleasure.
“Tell that woman I want her here in the White House.”
ಈ ಘಟನೆಯಲ್ಲಿ ಆಪ್ತ ಸಹಾಯಕಿ ಮಿಸ್ ಎಮಿಲಿ ತೋರಿದ ದಿಟ್ಟತನ ಮೆಚ್ಚಬೇಕಾದದ್ದು. ಅಮೇರಿಕೆಯ ಅಧ್ಯಕ್ಷ ಅಧಿಕಾರದಲ್ಲಿ ಎಷ್ಟೇ ದೊಡ್ಡವನಾಗಿದ್ದರೂ ಆಕೆ ಮಣಿಯುವುದಿಲ್ಲ, ತಾನು ಸೇವೆ ಮಾಡುತ್ತಿರುವ ರಾಯಭಾರಿಯ ನಿರ್ದೇಶನವನ್ನು ಆಕೆ ತಪ್ಪದೆ ಪರಿಪಾಲಿಸುತ್ತಾಳೆ. ತನ್ನ ಯಜಮಾನ ನೀಡಿದ ನಿರ್ದೇಶನವೇ ಆಕೆಗೆ ಪ್ರಮುಖವಾಗುತ್ತದೆ. ದೊಡ್ಡ ಅಧಿಕಾರದಲ್ಲಿರುವ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿ ನೌಕರಿಯನ್ನು ಕಳೆದುಕೊಳ್ಳಬೇಕಾಗಬಹುದೆಂಬ ಅಂಜಿಕೆ ಅಥವಾ ಭೀತಿ ಆಕೆಗೆ ಎಳ್ಳಷ್ಟೂ ಇರುವುದಿಲ್ಲ. ಅದೇ ರೀತಿ ಅಧ್ಯಕ್ಷ ಲಿಂಡನ್ ಜಾನ್ಸನ್ ತೋರಿದ ಪ್ರತಿಕ್ರಿಯೆಯೂ ಸಹ ಇಲ್ಲಿ ತುಂಬಾ ಮೆಚ್ಚಬೇಕಾದದ್ದೇ, ಯಃಕಶ್ಚಿತ್ ನೌಕರಿಯಲ್ಲಿರುವ ಮಿಸ್ ಎಮಿಲಿಯ ವರ್ತನೆ ಕ್ಷಣಕಾಲ ಬೇಸರ ತರಿಸಿದ್ದರೂ ಆಕೆಯ ಕರ್ತವ್ಯಪ್ರಜ್ಞೆಯನ್ನು ಗೌರವಿಸುವ ಔದಾರ್ಯ, ಅಂತಹ ಆಪ್ತಸಹಾಯಕಿ ತನ್ನ ಕಾರ್ಯಾಲಯದಲ್ಲಿರಬೇಕು ಎಂದು ಮೆಚ್ಚುಗೆ ಸೂಚಿಸುವ ಗುಣಗ್ರಾಹಿತ್ವ ಆತನಲ್ಲಿರುವುದನ್ನು ಮನಗಾಣಬಹುದಾಗಿದೆ.
ಸಹೃದಯ ಓದುಗರೇ! ಇಂತಹ ಒಂದು ಘಟನೆ ನಮ್ಮ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮಧ್ಯೆ ಘಟಿಸಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿದ್ದೀರಾ? ನಮಗೆ ನಿಮ್ಮ ಅನುಭವಗಳನ್ನು ಬರೆದು ಕಳುಹಿಸಿ ಎಂದು ಕೇಳಿದರೆ ಅದೊಂದು ದೊಡ್ಡ ಚಾರಿತ್ರಿಕ ಗ್ರಂಥವೇ ಆದೀತು. ಅಮೇರಿಕೆಯ ಮಿಸ್ ಎಮಿಲಿಯನ್ನು ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಎಲ್ಲಮ್ಮ ಎಂದು ಹೆಸರಿಸೋಣ. ಆ ಎಲ್ಲಮ್ಮ ನಮ್ಮ ರಾಜಕಾರಣಿಗಳ ಮೇಲಧಿಕಾರಿಗಳ ಕೈಯಲ್ಲಿ ಉಳಿಯಲು ಸಾಧ್ಯವೇ? ಮಂತ್ರಿಗಳ ಫೋನು ಬಂದಾಗ ಏಕೆ ತಿಳಿಸಲಿಲ್ಲ ಎಂದು ನೋಟೀಸು ಕೊಡುತ್ತಿದ್ದರು. ವಿಚಾರಣಾಸಮಿತಿಯನ್ನು ನೆಪಮಾತ್ರಕ್ಕೆ ನೇಮಕಮಾಡಿ ಅವಿಧೇಯತೆಯ ಆರೋಪದ ಮೇಲೆ ವಿಚಾರಣೆ ಮುಗಿಯುವುದರೊಳಗೆ ಮೂರೇ ದಿನಗಳಲ್ಲಿ ಮಿಸ್ ಎಲ್ಲಮ್ಮನನ್ನು ಡಿಸ್ ಮಿಸ್ ಮಾಡುತ್ತಿದ್ದರು. ಇಲ್ಲವೇ ನೀರಿಲ್ಲದ ಎಲ್ಲಮ್ಮನ ಗುಡ್ಡಕ್ಕೆ ವರ್ಗಾವಣೆ ಮಾಡುತ್ತಿದ್ದರು. ನಮ್ಮ ದೇಶದ ಕೆಲವು ಅಧಿಕಾರಿಗಳು ದೈವಾಂಶಸಂಭೂತರು. ತಾಯಿಯ ಆಜ್ಞೆಯನ್ನು ಪಾಲಿಸಿದ ಪಾರ್ವತಿಯ ಮುದ್ದುಮಗ ಗಣೇಶ ಬಾಗಿಲಿಗೆ ಅಡ್ಡಬಂದನೆಂದು ತಲೆಯನ್ನೇ ತುಂಡರಿಸಿದ ಶಿವನ ವಂಶೋಧ್ಭವರು!
ಅಮೇರಿಕೆಯಲ್ಲಿ ಮೇಲಧಿಕಾರಿ ಮತ್ತು ನೌಕರರ ಮಧ್ಯೆ ಯಜಮಾನ ಮತ್ತು ಆಳು (master and servant) ಎಂಬ ಜೀತದಾಳಿನ ಸಂಬಂಧವಿರುವುದಿಲ್ಲ, “The boss need not be right all the time and he/she can be Wrong and set right by a sub-ordinate and such mistakes are gracefully accepted” ಎನ್ನುತ್ತಾರೆ. ಇಲ್ಲಿಯ ಭಾರತೀಯ ಯುವ ಸಾಫ್ಟ್ ವೇರ್ ಎಂಜಿಯರ್ ಸಿದ್ದೇಶ್. ಮೇಲಧಿಕಾರಿಗಳನ್ನು ಸರ್ ಎನ್ನದೆ ಹೆಸರು ಹಿಡಿದು ಕರೆಯುವಷ್ಟು ಸ್ನೇಹಮಯ ವಾತಾವರಣ ಇಲ್ಲಿರುವುದು ಒಂದು ವಿಶೇಷ. ಹಾಗೆಂದು ಕೆಲಸದಲ್ಲಿ ಅಶ್ರದ್ದೆ ತೋರಿಸುವಂತಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವುದು, ನಿಯಮಿತ ಅವಧಿಯಲ್ಲಿ ಮಾಡಬೇಕಾದ ಕೆಲಸವನ್ನು ಪೂರೈಸುವುದು ಇಲ್ಲಿಯ ಕಾರ್ಯವೈಖರಿ. ಇಲ್ಲಿರುವ ಭಾರತೀಯರಾರೂ ನಮ್ಮ ದೇಶದ ಮಂತ್ರಿಮಹೋದಯರ ಶಿಫಾರಿಸು ಪತ್ರ ಪಡೆದು ಬಂದು ನೌಕರಿ ಸೇರಿದವರಲ್ಲ. ಇಲ್ಲಿಯ ಸೆನೆಟರ್‌ಗಳ ಬಾಲಂಗೋಚಿಗಳೂ ಅಲ್ಲ, ಸ್ವಂತ ಬುದ್ಧಿಮತ್ತೆ ಮತ್ತು ಸತತ ಪರಿಶ್ರಮಗಳಿಂದ ಮೇಲೆ ಬಂದವರು. ಇಲ್ಲಿ ಯಾವ ನೌಕರರೂ/ಅಧಿಕಾರಿಗಳೂ ರಾಜಕಾರಣಿಗಳಿಗೆ ಕಪ್ಪ-ಕಾಣಿಕೆಗಳನ್ನು ಕೊಡುವ ಪ್ರಮೇಯವಿಲ್ಲ. ಆದರೆ ಕೆಲಸ ಮಾಡುವ ಕ್ಷಮತೆ ಇಲ್ಲದವರು ನೌಕರಿಯಲ್ಲಿ ಒಂದು ಕ್ಷಣವೂ ಮುಂದುವರಿಯಲು ಸಾಧ್ಯವಿಲ್ಲ. ಮಾರನೆಯ ದಿನವೇ ಟೇಬಲ್ ಮೇಲೆ ಕೆಲಸದಿಂದ ಬಿಡುಗಡೆ ಮಾಡಿದ pinkslip ಇರುತ್ತದೆ. ದಿನವೂ ಅದರ ಭಯದಿಂದಲೇ ಆಫೀಸಿಗೆ ಹೋಗುತ್ತಾರೆ. ಕೆಲಸ ಕಳೆದುಕೊಂಡವರನ್ನು ಜಾತಿಯ ಬಲದ ಮೇಲೆ ಸಂರಕ್ಷಿಸುವ ರಾಜಕೀಯ ದುರಂಧರರು ಇಲ್ಲಿಲ್ಲ. ಯಾವ ಸಬೂಬು ಹೇಳಿದರೂ ಕೇಳುವುದಿಲ್ಲ.
ಸಬೂಬು ಎಂದೊಡನೆ ನಮ್ಮ ನೆನಪಿಗೆ ಬಂದ ರೋಚಕವಾದ ಕನ್ನಡ ಜಾನಪದಗೀತೆ ಹೀಗಿದೆ:
ನೂಲಲ್ಯಾಕೆ ಚೆನ್ನಿ, ನೂಲಲ್ಯಾಕೆ ಚೆನ್ನಿ?
ರಾಟೆ ಇಲ್ಲೋ ಜಾಣಾ, ರಾಟೆ ಇಲ್ಲೋ ಜಾಣಾ.
ನೂಲಲ್ಯಾಕೆ ಚೆನ್ನಿ, ನೂಲಲ್ಯಾಕೆ ಚೆನ್ನಿ?
ಕದಿರು ಇಲ್ಲೋ ಜಾಣಾ, ಕದಿರು ಇಲ್ಲೋ ಜಾಣಾ.
ನೂಲಲ್ಯಾಕೆ ಚೆನ್ನಿ, ನೂಲಲ್ಯಾಕೆ ಚೆನ್ನಿ?
ಅರಳೆ ಇಲ್ಲೋ ಜಾಣಾ, ಅರಳೆ ಇಲ್ಲೋ ಜಾಣಾ.
ನೂಲಲ್ಯಾಕೆ ಚೆನ್ನಿ, ನೂಲಲ್ಯಾಕೆ ಚೆನ್ನಿ?
ಗೆಳತಿಯರಿಲ್ಲೋ ಜಾಣಾ, ಗೆಳತಿಯರಿಲ್ಲೋ ಜಾಣಾ.
ನೂಲಲ್ಯಾಕೆ ಚೆನ್ನಿ, ನೂಲಲ್ಯಾಕೆ ಚೆನ್ನಿ?
ಗುಗ್ಗರಿ ಇಲ್ಲೋ ಜಾಣಾ, ಗುಗ್ಗರಿ ಇಲ್ಲೋ ಜಾಣಾ.
ನೂಲಲ್ಯಾಕೆ ಚೆನ್ನಿ, ನೂಲಲ್ಯಾಕೆ ಚೆನ್ನಿ?
ಬರೋದಿಲ್ಲೋ ಜಾಣಾ, ಬರೋದಿಲ್ಲೋ ಜಾಣಾ
ಗಂಡನೊಬ್ಬ ತನ್ನ ಹೆಂಡತಿ ಚೆನ್ನಿ ನೂಲು ತೆಗೆಯದೇ ಇರುವುದನ್ನು ನೋಡಿ ಏಕೆಂದು ಕೇಳುತ್ತಾನೆ. ಅದಕ್ಕೆ ಅವಳು ರಾಟೆ ಇಲ್ಲವೆಂದು ಹೇಳುತ್ತಾಳೆ. ಗಂಡ ಮಾರುಕಟ್ಟೆಗೆ ಹೋಗಿ ರಾಟೆ ಕೊಂಡು ತಂದುಕೊಡುತ್ತಾನೆ. ಆದರೂ ಹೆಂಡತಿ ನೂಲು ತೆಗೆಯುವುದಿಲ್ಲ. ಏಕೆಂದು ಕೇಳಿದಾಗ ರಾಟೆಗೆ ಬೇಕಾದ ಕದಿರು ಇಲ್ಲವೆಂದು ಹೇಳುತ್ತಾಳೆ. ಗಂಡ ಕದಿರನ್ನು ತಂದುಕೊಡುತ್ತಾನೆ. ಆದರೂ ಹೆಂಡತಿ ನೂಲು ತೆಗೆಯದಿದ್ದಾಗ ಏಕೆಂದು ಕೇಳಿದರೆ ನೂಲು ತೆಗೆಯಲು ಬೇಕಾದ ಅರಳೆ ಇಲ್ಲವೆಂದು ಹೇಳುತ್ತಾಳೆ. ಹೀಗೆ ಗಂಡ ಪ್ರತಿಯೊಂದು ಸಾರಿ ಕೇಳಿದಾಗಲೂ ಹೆಂಡತಿ ಏನಾದರೊಂದು ಇಲ್ಲವೆಂದು ಸಬೂಬು ಹೇಳುತ್ತಾಳೆ. ಕೊನೆಗೆ ಜೊತೆಯಲ್ಲಿ ಹರಟೆ ಹೊಡೆಯಲು ಬೇಕಾದ ಆಕೆಯ ಗೆಳತಿಯರಿಗೆ ಬರ ಹೇಳಿ, ಅವರೊಂದಿಗೆ ಸಂತೋಷದಿಂದ ಬಾಯಲ್ಲಿ ಮೆಲ್ಲಲು ಕಡಲೆಕಾಯಿ ಗುಗ್ಗರಿಯನ್ನು ತಂದುಕೊಟ್ಟ ಮೇಲೂ ಹೆಂಡತಿ ನೂಲದೇ ಇದ್ದಾಗ ಗಂಡ ನೂಲಲ್ಯಾಕೆ ಚೆನ್ನಿ, ನೂಲಲ್ಯಾಕೆ ಚೆನ್ನಿ? ಎಂದು ಕೇಳಿದ್ದಕ್ಕೆ ಚೆನ್ನಿ ಕೊನೆಯಲ್ಲಿ ಕೊಟ್ಟ ಉತ್ತರ: “ಬರೋದಿಲ್ಲೋ ಜಾಣಾ, ಬರೋದಿಲ್ಲೋ ಜಾಣಾ! ಅದನ್ನು ಆ ಚೆನ್ನಿ ಮೊದಲೇ ಹೇಳಿದ್ದರೆ ಗಂಡನಿಗೆ ರಾಟೆಯನ್ನು ತರುವ ತಾಪತ್ರಯವೇ" ಇರುತ್ತಿರಲಿಲ್ಲ. ಇಂತಹ ಚೆನ್ನಿಗರು ನಮ್ಮ ದೇಶದಲ್ಲಿ ಬಹಳ. ಇವರಿಗೆ ಐದಂಕಿಯ ವೇತನ ಬೇಕೆಹೊರತು ಕೆಲಸ ಮಾಡುವುದು ಬೇಕಿಲ್ಲ. ಕೆಲಸ ಮಾಡಲು ಅವರಿಗೆ ಬರುವುದು. ಇಂಥವರೇನಾದರೂ ಅಮೇರಿಕೆಗೆ ಬಂದರೆ ತಿನ್ನಲು ಗುಗ್ಗರಿಯು ಸಿಕ್ಕುವುದಿಲ್ಲ.
ನಮ್ಮ ದೇಶದಲ್ಲಿ ಎಮಿಲಿಯಂತವರು ಸಿಗುವುದು ಅಪರೂಪ. ಒಂದು ಪಕ್ಷ ಅದೇ ಎಮಿಲಿ ಭಾರತದಲ್ಲಿಯೇ ಇರಲು ನಿರ್ಧರಿಸಿ ಎಲ್ಲಮ್ಮನೆಂದು ಹೆಸರು ಬದಲಾಯಿಸಿಕೊಂಡು ದೆಹಲಿಯ ಪಾರ್ಲಿಮೆಂಟಿನಲ್ಲಿ ಕೆಲಸಕ್ಕೆ ಸೇರಿಕೊಂಡರೆ ಕೆಲವೇ ದಿನಗಳಲ್ಲಿ ಹಿಂಬಡ್ತಿ ಪಡೆದು ಬೆಂಗಳೂರಿನ ವಿಧಾನಸೌಧಕ್ಕೆ ವರ್ಗಾವಣೆಗೊಂಡು ಅಲ್ಲಿಯೂ ಅಧಿಕಾರಶಾಹಿಯ ಕಿರುಕುಳ ತಾಳದೆ ಉಧೋ ! ಉಧೋ! ಎನ್ನುತ್ತಾ ಎಲ್ಲಮ್ಮನ ಗುಡ್ಡ ಸೇರುವುದಾದರೆ ಆಶ್ಚರ್ಯವಿಲ್ಲ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 21.7.2011