ಟೆಲಿಫೋನ್ ಕದ್ದಾಲಿಕೆ
ನ್ಯೂಯಾರ್ಕ್ ನಗರದಿಂದ ಹೊರಡುವಾಗ ಮಿಂಚೋಲೆಯಲ್ಲಿ (e-mail) ಬರೆದು ಕಳುಹಿಸಿದ್ದ ಕಳೆದ ವಾರದ ಅಂಕಣ ನಮಗಿಂತ ಮೊದಲು ಬೆಂಗಳೂರು ತಲುಪಿ ಆಗಲೇ ವಿಜಯಕರ್ನಾಟಕದಲ್ಲಿ ಮುದ್ರಿತವಾಗಿ ವಿಮಾನದಿಂದ ಮಧ್ಯರಾತ್ರಿ ಕೆಳಗಿಳಿಯುತ್ತಿದ್ದಂತೆಯೇ ನೀವೇಕೆ ತಡವಾಗಿ ಬಂದಿರಿ? ಎಂದು ನಮ್ಮನ್ನು ನೋಡಿ ಅಣಕಿಸಿದಂತಿತ್ತು! ಮೂರು ದಶಕಗಳ ಹಿಂದೆ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗ ಬರೆಯುತ್ತಿದ್ದ Air Mail ಪತ್ರಗಳು ಆಮೆ ನಡಿಗೆಯಲ್ಲಿ ಭಾರತ ತಲುಪುತ್ತಿದ್ದ ಕಾಲ ನೆನಪಾಗಿ ನವನಾಗರೀಕ ಸಮಾಜ ಎಂತಹ ನಾಗಾಲೋಟದಲ್ಲಿ ಸಾಗಿದೆಯೆಂದು ಅಚ್ಚರಿ ಮೂಡಿಸಿತು. ಈ ಆಧುನಿಕ ತಾಂತ್ರಿಕ ಸೌಲಭ್ಯ ಇಲ್ಲದೇ ಹೋಗಿದ್ದರೆ ನಮ್ಮ ಅಂಕಣ ಬರಹವನ್ನು ಎಂದೋ ನಿಲ್ಲಿಸಬೇಕಾಗುತ್ತಿತ್ತು. ಮಠ ತಲುಪಿ ತುರ್ತು ಸಂದೇಶವೇನಾದರೂ ಇದೆಯೇ ಎಂದು ಐ-ಫೋನ್ ಚೆಕ್ ಮಾಡಿದಾಗ “Your article is the perfect answer for the question "why there is brain drain from India" ಎಂದು ಅಪರಿಚಿತ ಓದುಗರೊಬ್ಬರಿಂದ ಪ್ರತಿಭಾಪಲಾಯನ ಸಮರ್ಥಿಸುವ ಪ್ರತಿಕ್ರಿಯೆಯೂ ಬಂದಿತ್ತು. ಪ್ರತಿಕ್ರಿಯಿಸಿದವರು ದೂರದ ಫ್ರಾನ್ಸ್ ದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ಸಂಶೋಧನೆಯಲ್ಲಿ ನಿರತರಾಗಿರುವ ಉತ್ಸಾಹಿ ಕನ್ನಡಿಗರಾದ ಆನಂದ ಕುಮಾರ್. ಇಂತಹ ಸಂಶೋಧಕರು, ಸಾಹಿತಿಗಳು, ದಾರ್ಶನಿಕರು, ವಿಜ್ಞಾನಿಗಳು ಮತ್ತು ತಂತ್ರಜ್ಞರೇ ಭಾರತದ ಹಿರಿಮೆ-ಗರಿಮೆಗಳನ್ನು ಜಗತ್ತಿನಲ್ಲಿ ಸ್ಥಾಪಿಸಿದವರು. ಜಗತ್ತಿನ ದೊಡ್ಡಣ್ಣನೆನಿಸಿದ ಅಮೇರಿಕೆಯ ಅಧ್ಯಕ್ಷ ಒಬಾಮಾರವರ ಎದೆ ತಲ್ಲಣಿಸುವಂತೆ ಮಾಡಿರುವವರು ಬೆಂಗಳೂರಿನ ಯುವ ಸಾಫ್ಟ್‌ವೇರ್ ಎಂಜಿನಿಯರುಗಳು. ಜಗತ್ತಿನ ಭೂಪಟದಲ್ಲಿ ಬೆಂಗಳೂರನ್ನು ಗುರುತಿಸುವಂತೆ ಮಾಡಿರುವ ಅವರು ಅಭಿನಂದನಾರ್ಹರು. ಅವರ ಪರಿಶ್ರಮದಿಂದ All roads lead to Rome ಎನ್ನುವ ಕಾಲ ಹೋಗಿ All roads lead to Bangalore ಎನ್ನುವಂತಾಗಿದೆ.
ಬ್ರಹ್ಮಾಂಡದ ಕಣ್ಣು ಭೂಮಿ. ಈ ಭೂಮಿಯ ಕಣ್ಣು ಭಾರತ, ಅಂತಹ ಪುಣ್ಯಭೂಮಿ ಭಾರತ ಒಂದೆಡೆ ಆಧುನಿಕ ತಂತ್ರಜ್ಞಾನ, ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸಾಧನೆಗಳಲ್ಲಿ ಅನ್ಯಾದೃಶವಾದ ಪ್ರಖ್ಯಾತಿಯನ್ನು ಪಡೆದರೆ ಮತ್ತೊಂದೆಡೆ ಸಾರ್ವಜನಿಕ ಜೀವನದಲ್ಲಿ ಅಷ್ಟೇ ಕುಖ್ಯಾತಿಯನ್ನು ಪಡೆದು ತಲೆತಗ್ಗಿಸುವಂತಾಗಿರುವುದು ಅತ್ಯಂತ ದುರದೃಷ್ಟಕರ. ಭ್ರಷ್ಟಾಚಾರದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಭಾರತವನ್ನು ಮೊದಲನೆಯ ಸ್ಥಾನಕ್ಕೆ ಏರಿಸಲು ನಮ್ಮ ದೇಶದ ರಾಜಕೀಯ ಧುರೀಣರು ಅಹರ್ನಿಶಿ ಶ್ರಮಿಸುತ್ತಿರುವಂತೆ ತೋರುತ್ತದೆ!
ಅಮೇರಿಕೆಯಲ್ಲಿದ್ದಾಗ ಕಳೆದ ಎರಡು ವಾರಗಳಿಂದ ಟೆಲಿಫೋನ್ ಸಂಭಾಷಣೆಯ ಸುತ್ತ ಹರಿದಾಡಿದ ನಮ್ಮ ಲೇಖನಿಗೆ ಖಂಡಖಂಡಾತರಗಳನ್ನು ದಾಟಿಬಂದರೂ out of coverage area ಆಗುತ್ತಿಲ್ಲ. ಎಲ್ಲಿಯೇ ಹೋಗಲಿ ಟೆಲಿಫೋನ್ ಕದ್ದಾಲಿಕೆ ಸುದ್ದಿಗಳು ಪ್ರಪಂಚದಾದ್ಯಂತ ಪತ್ರಿಕೆಗಳ ಮುಖಪುಟಗಳಲ್ಲಿ ಕಣ್ಣಿಗೆ ರಾಚುತ್ತಿದ್ದವು. ಮಾರ್ಗಮಧ್ಯೆ ಪ್ಯಾರಿಸ್‌ನಲ್ಲಿ ಬೆಂಗಳೂರಿಗೆ ಹೊರಡುವ ವಿಮಾನವನ್ನು ಹತ್ತಿ ಕುಳಿತಾಗ ಗಗನಸಖಿ ತಂದುಕೊಟ್ಟ ಅಮೇರಿಕೆಯ ಪ್ರಸಿದ್ದ ಇಂಗ್ಲೀಷ್ ದಿನಪತ್ರಿಕೆ “The Wall Street Journal” (Europe Edition) ನಲ್ಲಿದ್ದ ಅಗ್ರ ಲೇಖನ “A British Watergate?” ನಮ್ಮ ಕಣ್ಣಿಗೆ ಬಿತ್ತು. ಲೇಖಕರು ಇತ್ತೀಚೆಗೆ ಇಂಗ್ಲೆಂಡಿನಲ್ಲಿ ನಡೆದ ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ದಶಕಗಳ ಹಿಂದೆ ಅಮೇರಿಕೆಯ ಅಧ್ಯಕ್ಷರಾಗಿದ್ದ ನಿಕ್ಸನ್ ಕಾಲದ ವಾಟರ್‌ಗೇಟ್ ಪ್ರಕರಣಕ್ಕೆ ಹೋಲಿಸಿ ಬರೆದಿದ್ದರು. ಆ ಪ್ರಕರಣದಲ್ಲಿ ಸಿಲುಕಿಕೊಂಡ ಅಧ್ಯಕ್ಷ ನಿಕ್ಸನ್ ಅಧಿಕಾರದಿಂದ ನಿರ್ಗಮಿಸಬೇಕಾಯಿತೆಂಬುದು ಜಗತ್ತಿನ ಜನರೆಲ್ಲರಿಗೂ ಗೊತ್ತಿರುವ ಸಂಗತಿ. ಅದೇ ರೀತಿ ಇಂಗ್ಲೆಂಡಿನಲ್ಲಿ ಪ್ರಕಟವಾಗುತ್ತಿದ್ದ ಸುಮಾರು 40 ಲಕ್ಷ ಓದುಗರಿದ್ದ “News of the World” ಎಂಬ ಇಂಗ್ಲೀಷ್ ದಿನ ಪತ್ರಿಕೆ ಪ್ರಜ್ಞಾವಂತ ಬ್ರಿಟಿಷ್ ನಾಗರಿಕರ ಆಕ್ರೋಶಕ್ಕೆ ಒಳಗಾಗಿ ವಾರದ ಹಿಂದೆಯಷ್ಟೇ ದಿಢೀರನೆ ಸ್ಥಗಿತಗೊಂಡಿತು. ಅದರ ಮಾಲೀಕನಾದ 80 ವರ್ಷ ಹಿರಿಯ ವಯಸ್ಸಿನ ರೂಪರ್ಟ್ ಮುರ್ಡೋಕ್ “This is the most humble day in my life” ಎಂದು ಸಾರ್ವಜನಿಕರ ಎದುರು ಕ್ಷಮೆ ಯಾಚನೆ ಮಾಡುವಂತಾಯಿತು. ಅದಕ್ಕೆ ಕಾರಣ ಆ ಪತ್ರಿಕೆಯ ವರದಿಗಾರರು ಮಾಡಿದ ಟೆಲಿಫೋನ್ ಕದ್ದಾಲಿಕೆ ಮತ್ತು ಬೇಹುಗಾರಿಕೆ. ಅದು ಬಯಲಿಗೆ ಬಂದ ಹಿನ್ನೆಲೆ ತುಂಬಾ ಕುತೂಹಲಕಾರಿಯಾಗಿದೆ:
ಇಲ್ಲಿಗೆ 9 ವರ್ಷಗಳ ಹಿಂದೆ ಇಂಗ್ಲೆಂಡಿನಲ್ಲಿ ಮಿಲಿ ಡೌಲರ್ (Milly Dowler) ಎಂಬ ಶಾಲಾ ಬಾಲಕಿ ಒಂದು ದಿನ ಶಾಲೆಗೆ ಹೋದವಳು ಮನೆಗೆ ಹಿಂದಿರುಗಲೇ ಇಲ್ಲ. ಅರ್ಧಗಂಟೆಯೊಳಗೆ ಬರುವುದಾಗಿ ತಂದೆಗೆ ತನ್ನ ಮೊಬೈಲ್‌ನಿಂದ ಫೋನ್ ಮಾಡಿದ ಬಾಲಕಿ ಎಷ್ಟು ಹೊತ್ತಾದರೂ ಸುಳಿವೇ ಇಲ್ಲ. ಮನೆಯಿಂದ ಓಡಿಹೋಗಿರಬಹುದೆಂದು ಅಕ್ಕಪಕ್ಕದವರು ಭಾವಿಸಿದರೆ ಅಂತಹ ಕಾರಣವೇನೂ ಇಲ್ಲ ಯಾರೋ ಅವಳನ್ನು ಅಪಹರಿಸಿದ್ದಾರೆಂದು ತಂದೆತಾಯಿ ಆತಂಕ ವ್ಯಕ್ತಪಡಿಸಿ ಪೋಲೀಸರಿಗೆ ದೂರು ಸಲ್ಲಿಸಿದರು. ದೇಶಾದ್ಯಂತ ಪೋಲೀಸರು ಹುಡುಕಲು ಆರಂಭಿಸಿದರು. ಆರು ತಿಂಗಳ ನಂತರ ದಟ್ಟಡವಿಯ ಗಿಡಮರಗಳ ಪೊದೆಯಲ್ಲಿ ಬಾಲಕಿಯ ಶವ ಪತ್ತೆಯಾಯಿತು. ಆದರೆ ಪೊಲೀಸರು ಕೊಲೆಪಾತಕಿಯನ್ನು ಪತ್ತೆ ಮಾಡಲು ವರ್ಷಗಳೇ ಹಿಡಿದವು. ಕಳೆದ ತಿಂಗಳು ನ್ಯಾಯಾಲಯ ವಿಚಾರಣೆ ನಡೆಸಿ ಆತನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ ಜೈಲಿಗೆ ಹಾಕಿತು. ವಿಚಾರಣೆಯ ಸಂದರ್ಭದಲ್ಲಿ ದುರ್ದೈವಿ ಬಾಲಕಿಯ ಮೊಬೈಲ್ ಫೋನಿನಲ್ಲಿದ್ದ ಧ್ವನಿಸುದ್ದಿಯನ್ನು (Voice Mail) ಕದ್ದಾಲಿಸಿರುವುದು ಪೊಲೀಸರಿಗೆ ಪತ್ತೆಯಾಯಿತು. ಹಾಗೆ ಕದ್ದಾಲಿಸಿದ ವ್ಯಕ್ತಿ “News of the World” ಪತ್ರಿಕೆಯ ವರದಿಗಾರ ಎಂದು ತಿಳಿಯಿತು. ಆ ಪತ್ರಿಕೆಯ ವರದಿಗಾರರು ಬಿಸಿ ಬಿಸಿ ಸುದ್ದಿಗಾಗಿ ಖಾಸಗಿ ಬೇಹುಗಾರರ ಸಂಪರ್ಕ ಇರಿಸಿಕೊಂಡು ಅನೇಕ ವರ್ಷಗಳಿಂದ ಬ್ರಿಟಿಷ್ ರಾಜಮನೆತನದವರನ್ನೂ ಒಳಗೊಂಡಂತೆ ಅನೇಕ ಗಣ್ಯವ್ಯಕ್ತಿಗಳ ಟೆಲಿಫೋನ್ ಸಂಭಾಷಣೆಯನ್ನು ಕದ್ದಾಲಿಸುತ್ತಿರುವುದು ಬೆಳಕಿಗೆ ಬಂದು ಅದರ ವಿರುದ್ದ ಬ್ರಿಟಿಷ್ ನಾಗರೀಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅದರ ಪರಿಣಾಮವೇ 168 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಆ ಪತ್ರಿಕೆಯ ಹೀನಾಯ ಅವಸಾನ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಜ್ಞಾವಂತ ಜನರಿದ್ದಾರೆ. ತಮ್ಮ ನೇತಾರರ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರ ಸಣ್ಣ ಪುಟ್ಟ ಚಲನವಲನಗಳನ್ನೂ ಅಲ್ಲಿನ ಜನ ಹದ್ದಿನ ಕಣ್ಣಿನಿಂದ ಗಮನಿಸುತ್ತಿರುತ್ತಾರೆ. ಕೆಲವು ವರ್ಷಗಳ ಹಿಂದೆ ಅಮೇರಿಕೆಯ ಅಧ್ಯಕ್ಷರಾಗಿದ್ದ ಕ್ಲಿಂಟನ್ ವಿಮಾನ ನಿಲ್ದಾಣದಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾಗ ಭದ್ರತಾಪಡೆಯವರು ರಕ್ಷಣೆಯ ದೃಷ್ಟಿಯಿಂದ ಇತರ ಪ್ರಯಾಣಿಕರ ವಿಮಾನಗಳನ್ನು ಕೆಳಗೆ ಇಳಿಯದಂತೆ ಆಕಾಶದಲ್ಲಿ ಕೆಲವು ನಿಮಿಷಗಳ ಕಾಲ ಕಾಯಿಸಿದ್ದಕ್ಕೆ ದೊಡ್ಡ ಗಲಾಟೆಯೇ ಆಯಿತು. ಈ ವಿಚಾರವಾಗಿ ಇದೇ ಅಂಕಣದಲ್ಲಿ ಹಿಂದೆ ವಿವರವಾಗಿ ಬರೆಯಲಾಗಿದೆ. ಕ್ಷೌರಮಾಡಿಸಿಕೊಳ್ಳಲು ವಿಮಾನ ನಿಲ್ದಾಣವೇ ಬೇಕಾಗಿತ್ತೇ ಎಂದು ಜನರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಕ್ಲಿಂಟನ್ ದೂರದರ್ಶನದಲ್ಲಿ ಕಾಣಿಸಿಕೊಂಡು ಸಾರ್ವಜನಿಕರ ಕ್ಷಮಾಪಣೆ ಕೇಳಿಕೊಂಡ ನಂತರವೇ ಗಲಾಟೆ ತಣ್ಣಗಾಯಿತು. ಇಂಥ ಘಟನೆ ನಮ್ಮ ದೇಶದಲ್ಲಿ ತಪ್ಪು ಎಂದು ಅನ್ನಿಸುವುದೇ ಇಲ್ಲ. ನಮ್ಮ ಮಂತ್ರಿ ಮಹೋದಯರು ತಡವಾಗಿ ಬಂದಷ್ಟೂ, ಬಿಸಿಲಿನಲ್ಲಿ ಕಾಯಿಸಿದಷ್ಟೂ ದೊಡ್ಡವರು ಎಂದು ಭಾವಿಸಿ ನಮ್ಮ ಜನರು ಅವರಿಗೆ ನಡೆಮಡಿ ಹಾಸುತ್ತಾರೆ. ಟೆಲಿಪೋನ್ ಕದ್ದಾಲಿಕೆಯು ಪ್ರಜ್ಞಾವಂತ ಜನರುಳ್ಳ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಒಂದು ನೀತಿಬಾಹಿರ ಕೃತ್ಯವೆಂದು, ವೈಯಕ್ತಿಕ ಸ್ವಾತಂತ್ರ್ಯದ (privacy) ಅಪಹರಣವೆಂದು ಅಲ್ಲಿನ ಜನ ಭಾವಿಸುವುದು ಸಹಜವೇ ಆಗಿದೆ. ಆದರೆ ನಮ್ಮ ದೇಶದ ಬಹುಸಂಖ್ಯಾತ ಜನರು ಅನಕ್ಷರಸ್ಥರು. ಸುಲಭವಾಗಿ ಮೋಸ-ವಂಚನೆಗಳಿಗೆ ತುತ್ತಾಗುವ ಮುಗ್ಗರು. ಇಂದಿನ ಹೊಲಸು ರಾಜಕೀಯ ರಂಗದಲ್ಲಿ ಖಂಡನೆಗೊಳಗಾದ ಟೆಲಿಪೋನ್ ಕದ್ದಾಲಿಕೆಯು ಒಂದು ಸಲ್ಲದ ನಡವಳಿಕೆ ಎಂದು ನಮ್ಮ ದೇಶದ ಜನಸಾಮಾನ್ಯರಿಗೆ ಅನ್ನಿಸುವುದೇ ಇಲ್ಲ. ದೈನಂದಿನ ಜೀವನದ ಜಂಜಾಟದಲ್ಲಿ ಅವರಿಗೆ ಅದೊಂದು ದೊಡ್ಡ ಸುದ್ದಿಯೇ ಅಲ್ಲ, ಅದರಿಂದ ನಮಗಾಗಬೇಕಾದ್ದು ಏನಿದೆ ಎಂದು ತಾತ್ಸಾರದ ಮಾತುಗಳನ್ನಾಡುತ್ತಾರೆ.
ಹಣದ ಆಸೆಗೆ, ಹೆಂಡ-ಸಾರಾಯಿ ಸೀಸೆಗೆ ತಮ್ಮ ಪವಿತ್ರ ಮತಗಳನ್ನು ಮಾರಿಕೊಳ್ಳುವ ಬಹುಸಂಖ್ಯಾತ ಅನಕ್ಷರಸ್ಥ ಮತದಾರರು ಒಂದು ಕಡೆ, ಜಾತಿ ಮತಗಳ ಹೆಸರಿನಲ್ಲಿ ಓಟು ಬ್ಯಾಂಕುಗಳನ್ನು ಸೃಷ್ಟಿಸಿಕೊಂಡು ಅಕ್ರಮ ಮಾರ್ಗಗಳಿಂದ ಕುರ್ಚಿ ಹಿಡಿಯುವ/ಬೀಳಿಸುವ ಕ್ಷುದ್ರ ರಾಜಕಾರಣಿಗಳು ಮತ್ತೊಂದು ಕಡೆ. ನ್ಯಾಯವಾಗಿ ಜೈಲಿನಲ್ಲಿರಬೇಕಾಗಿದ್ದ ಅನೇಕ ಕಳ್ಳರೂ, ಫಟಿಂಗರೂ, ಕೊಲೆಗಡುಕರೂ ಈಗ ಪ್ರಜಾಪ್ರತಿನಿಧಿಗಳಾಗಿ ಶಾಸನಸಭೆ/ಲೋಕಸಭೆಯ ಕುರ್ಚಿಗಳನ್ನು ಅಲಂಕರಿಸಿದ್ದಾರೆ. ಅಕ್ರಮ ಸಕ್ರಮಗೊಳಿಸುವ ಪರಿಣತಿ ಪಡೆದ ನಮ್ಮ ದೇಶದ ಆಡಳಿತದಲ್ಲಿ ಟೆಲಿಫೋನ್ ಕದ್ದಾಲಿಕೆಯನ್ನು ಶಾಸನಬದ್ಧಗೊಳಿಸಿ ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳ ಟೆಲಿಫೋನ್ ಸಂಭಾಷಣೆಗಳನ್ನು ಸಮಗ್ರವಾಗಿ ಧ್ವನಿಮುದ್ರಿಸಿಕೊಂಡು ದೇಶದ ಭದ್ರತೆಯ ದೃಷ್ಟಿಯಿಂದ ಅಗತ್ಯವಾದವುಗಳನ್ನು ಮಾತ್ರ ಗೋಪ್ಯವಾಗಿರಿಸಿ ಉಳಿದವುಗಳನ್ನು ಸಾರ್ವಜನಿಕರ ಪರಾಂಬರಿಕೆಗೆ ಸಿಗುವಂತೆ ಮಾಡಿದರೆ ಅವರ ದೇಶಸೇವೆಯ ಘನಂದಾರಿ ಕೆಲಸ ಏನೆಂದು ಬಯಲಾಗುತ್ತದೆ.
ಸಹೃದಯ ಓದುಗರೇ! ಕುರಿಗಳನ್ನು ಕಾಯುವ ಕೆಲಸವನ್ನು ತೋಳನಿಗೆ ಒಪ್ಪಿಸಿ ಕುರುಬ ನಿರುಮ್ಮಳವಾಗಿ ಮನೆಯಲ್ಲಿ ಮಲಗಿದಂತೆ ಆಗಿದೆ ನಮ್ಮ ದೇಶದ ಪ್ರಜಾಪ್ರಭುತ್ವದ ಸ್ಥಿತಿ! ಉತ್ತಿಷ್ಠತ, ಜಾಗ್ರತ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 28.7.2011