ತನಗೆ ತಾನೇ ವೈರಿ, ತನಗೆ ತಾನೇ ಗೆಳೆಯ

  •  
  •  
  •  
  •  
  •    Views  

My dear Brothers and Sisters of America” ಎಂದು ಸಂಬೋಧಿಸಿ ಅಮೇರಿಕನ್ನರನ್ನು ರೋಮಾಂಚನಗೊಳಿಸಿದ ಸ್ವಾಮಿ ವಿವೇಕಾನಂದರು ಜಗತ್ತಿನಲ್ಲಿ ಯಾರಿಗೆ ಗೊತ್ತಿಲ್ಲ. ಶತಮಾನದ ಹಿಂದೆ ಚಿಕಾಗೋದಲ್ಲಿ ಮಾಡಿದ ಅವರ ಉದ್ಬೋಧಕ ಭಾಷಣ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದ ಜನರನ್ನು ತುದಿಗಾಲ ಮೇಲೆ ನಿಲ್ಲಿಸಿತು. ತೇಜಃಪುಂಜವಾದ ವ್ಯಕ್ತಿತ್ವವುಳ ಕಾಷಾಯ ವಸ್ತ್ರಧಾರಿಯನ್ನು ನೋಡಿ ಕಣ್ಣುಗಳು ನಿಬ್ಬೆರಗಾದವು. ಅದುವರೆಗೆ “Ladies and Gentlemen” ಎಂಬ ಮಾಮೂಲೀ ನುಡಿಗಟ್ಟನ್ನು ಕೇಳಿದ್ದ ಕಿವಿಗಳು ಒಮ್ಮೆಲೇ ನೆಟ್ಟಗಾದವು. ಎಂದೂ ಕೇಳರಿಯದ, ಊಹೆಗೂ ನಿಲುಕದ ಮಾನವೀಯ ಸ್ಪಂದನದ ಮಾತನ್ನು ಕೇಳಿ ಹೃದಯ ತುಂಬಿಬಂತು. ಭಾಷಣದ ಕೊನೆಯಲ್ಲಿ ಔಪಚಾರಿಕವಾಗಿ ಕರತಾಡನ ಮಾಡುತ್ತಿದ್ದ ಕೈಗಳು ಭಾಷಣದ ಆರಂಭದಲ್ಲಿಯೇ ಕಿವಿಗಡಚಿಕ್ಕುವಂತೆ ಕರತಾಡನ ಮಾಡತೊಡಗಿದವು. ಆರಂಭದಲ್ಲಿ ಆಡಿದ ಒಂದೇ ಒಂದು ನುಡಿ ಆ ಕಾಲದ ಜನರನ್ನು ಮಂತ್ರಮುಗ್ಧರನ್ನಾಗಿಸಿತು. ಭಾರತದ ವೀರಸಂನ್ಯಾಸಿಯೊಬ್ಬ ಜಗತ್ತಿನ ಜನರ ಮನಸ್ಸನ್ನು ಕ್ಷಣಾರ್ಧದಲ್ಲಿ ಗೆದ್ದಿದ್ದ.... 

ಭಾರತೀಯರಿಗೆ ಚಿಕಾಗೋ ಎಂದಾಕ್ಷಣ ನೆನಪಾಗುವುದು ನೂರು ವರ್ಷಗಳ ಹಿಂದಿನ ಮೇಲಿನ ಘಟನೆ. ಆದರೆ ಬದಲಾವಣೆಯಾಗಿದೆ. ಚಿಕಾಗೋ ಅಮೇರಿಕೆಯ ಜನರ ಬಾಯಲ್ಲಿ ಭ್ರಷ್ಟಾಚಾರದ ತವರೂರೆಂಬ ಕುಖ್ಯಾತಿಯನ್ನು ಪಡೆದಿದೆ. ಈ ನಗರ ಇರುವ ಇಲಿನಾಯ್ಸ್ ರಾಜ್ಯ ಅಮೇರಿಕೆಯಲ್ಲಿಯೇ ಅತ್ಯಂತ ಭ್ರಷ್ಟ ರಾಜ್ಯವೆಂಬ ಕೆಟ್ಟ ಹೆಸರನ್ನು ಪಡೆದಿದೆ. ಇಲ್ಲಿಯ ರಾಜಕೀಯ ಆಡಳಿತದ ಮೇಲೆ ಸ್ವಾಮಿ ವಿವೇಕಾನಂದರ ಪ್ರಭಾವಕ್ಕಿಂತ ಹೆಚ್ಚಾಗಿ ಭಾರತದ ಭ್ರಷ್ಟ ರಾಜಕಾರಣಿಗಳ ಪ್ರಭಾವ ಬಿದ್ದಂತೆ ತೋರುತ್ತದೆ. ಎರಡು ವರ್ಷಗಳ ಹಿಂದೆ ಇದೇ ಅಂಕಣದಲ್ಲಿ ಈ ವಿಚಾರವಾಗಿ ಬರೆಯಲಾಗಿತ್ತು. 1971 ರಿಂದ ಇಲ್ಲಿಯವರೆಗೆ ಒಂದು ಸಾವಿರ ಜನರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗಿದೆ. ಅವರಲ್ಲಿ ಗವರ್ನರ್, ಮೇಯರ್‌ಗಳು, ಸೆನೆಟರ್‌ಗಳು, ಪೋಲೀಸ್ ಅಧಿಕಾರಿಗಳು ಅಲ್ಲದೆ ನ್ಯಾಯಾಧೀಶರುಗಳೂ ಇದ್ದಾರೆಂಬುದು ಇಲ್ಲಿ ಗಮನಾರ್ಹ. ಚಿಕಾಗೋ ಡೆಮೊಕ್ರಾಟಿಕ್ ಪಕ್ಷದ ಭದ್ರಕೋಟೆ. ಅಮೇರಿಕೆಯ ಅಧ್ಯಕ್ಷರಾದ ಬರಾಕ್ ಒಬಾಮಾ ಈ ಮೊದಲು ಚಿಕಾಗೋ ಸೆನೆಟರ್ ಆಗಿದ್ದರು. ಎರಡು ವರ್ಷಗಳ ಹಿಂದೆ ಅಧ್ಯಕ್ಷರಾದ ಮೇಲೆ ತೆರವಾದ ಅವರ ಸ್ಥಾನಕ್ಕೆ ಇಲಿನಾಯ್ಸ್ ಗವರ್ನರ್ ನಾಮನಿರ್ದೇಶನ ಮಾಡಬೇಕಾಗಿತ್ತು. ಅಮೇರಿಕೆಯಲ್ಲಿ ನಮ್ಮ ದೇಶದಲ್ಲಿದ್ದಂತೆ ಮರುಚುನಾವಣೆಗಳು ಆಗುವುದಿಲ್ಲ. ನಾಮನಿರ್ದೇಶನ ಮಾಡಬೇಕಾಗಿದ್ದ ಆಗಿನ ಗವರ್ನರ್ ರೋಡ್ ಬ್ಲಾಗೋಯೆವಿಚ್ (Rod Blagojevich) ಯಾರು ಹೆಚ್ಚು ಹಣ ಕೊಡುತ್ತಾರೋ ಅವರನ್ನು ಆಯ್ಕೆಮಾಡುವುದಾಗಿ ಫೋನಿನಲ್ಲಿ ಯಾರೊಂದಿಗೋ ಮಾತನಾಡಿ FBI ಗೆ ಸಿಕ್ಕಿಬಿದ್ದಿದ್ದರು. ಕಳೆದ ಎರಡು ವರ್ಷಗಳಿಂದ ವಿಚಾರಣೆ ನಡೆದು ಎರಡು ವಾರಗಳ ಹಿಂದೆ ನ್ಯಾಯಾಲಯವು ಅವರಿಗೆ ಶಿಕ್ಷೆಯನ್ನು ವಿಧಿಸಿತು. ಅವರ ಹಿಂದೆ ಇದ್ದ ಗವರ್ನರ್ ಜಾರ್ಜ್ ರಯಾನ್ (George Ryan) ಸಹ ಲಂಚದ ಆರೋಪದ ಮೇಲೆ ಜೈಲು ಕಂಬಿ ಎಣಿಸಬೇಕಾಯಿತು. ಪಾನಮತ್ತನಾಗಿ ಕಾರನ್ನು ವೇಗವಾಗಿ ಓಡಿಸಿ ಅಪಘಾತಕ್ಕೆ ಕಾರಣನಾದ ಓರ್ವ ಗಣ್ಯ ವ್ಯಕ್ತಿಯನ್ನು ಪೋಲೀಸರು ಹಿಡಿದು ಕೊಟ್ಟರೆ ಅವನಿಂದ ದುಡ್ಡು ತೆಗೆದುಕೊಂಡು ಕ್ಷಮಾದಾನ ಮಾಡಿದ್ದು ಆ ಗವರ್ನರ್ ಮಾಡಿದ ಅಪರಾಧ. 

ಅಮೇರಿಕೆಯಲ್ಲಿ ಎಷ್ಟೇ ಭ್ರಷ್ಟಾಚಾರವಿದ್ದರೂ ಅದು ಮೇಲ್ಮಟ್ಟದಲ್ಲಿದೆಯೇ ಹೊರತು ಜನಸಾಮಾನ್ಯರ ಸ್ತರದಲ್ಲಿಲ್ಲ. ಅಲ್ಲಿಯ ರಾಜಕಾರಣಿಗಳಿಗೆ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಹಣವನ್ನು ಅಧಿಕೃತವಾಗಿ ಚೆಕ್ ಮೂಲಕವೇ ಕೊಡಲು ಅವಕಾಶವಿದೆ. ಅದಕ್ಕೆ ತೆರಿಗೆ ವಿನಾಯಿತಿಯೂ ಸಹ ಇದೆ. ಆದರೆ ರಾಜಕಾರಣಿಗಳು ಅದಕ್ಕೆ ಸರಿಯಾದ ಲೆಕ್ಕ ಇಡಬೇಕು. ಚುನಾವಣೆಯ ಖರ್ಚಿಗೆಂದು ಸರಕಾರವೂ ಸಹಾಯಧನ ನೀಡುತ್ತದೆ. ಆದರೆ ಆ ಸಹಾಯ ಧನವನ್ನು ಪಡೆದವರು ಸಾರ್ವಜನಿಕರಿಂದ ಹಣ ಪಡೆಯುವಂತಿಲ್ಲ.

ಜಗತ್ತಿನಾದ್ಯಂತ ನಿತ್ಯವೂ ಹೀಗೆ ಬಿತ್ತರವಾಗುವ ಸುದ್ದಿಗಳನ್ನು ಮಾಧ್ಯಮಗಳು ಪ್ರಾದೇಶಿಕ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳೆಂದು ಸ್ಥೂಲವಾಗಿ ವರ್ಗೀಕರಿಸುತ್ತವೆ. ಸುದ್ದಿಯು ಎಲ್ಲಿಯದೇ ಆಗಲಿ, ಯಾವ ಸ್ತರದ್ದೇ ಆಗಿರಲಿ ಅದರ ಹಿಂದೆ ಕೆಲಸ ಮಾಡುವ ಮನುಷ್ಯನ ಮಾನಸಿಕ ವ್ಯಾಪಾರ ಮಾತ್ರ ಒಂದೇ ಆಗಿರುವುದನ್ನು ನೋಡಬಹುದು. ಮನುಷ್ಯನ ಎಲ್ಲ ಅಡ್ಡನಡವಳಿಕೆಗಳಿಗೂ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರವೆಂಬ ಆರು ದುರ್ಗುಣಗಳು ಕಾರಣವೆಂದು ಭಾರತೀಯ ದ್ರಷ್ಟಾರರು ಗುರುತಿಸಿದ್ದಾರೆ. ಅವುಗಳನ್ನು ಅರಿಷಡ್‌ ವರ್ಗಗಳೆಂದು ಕರೆಯುತ್ತಾರೆ. ಅರಿ ಎಂದರೆ ಸಂಸ್ಕೃತದಲ್ಲಿ ವೈರಿ ಎಂದರ್ಥ. ಕನ್ನಡದಲ್ಲಿ ಅದೊಂದು ಕ್ರಿಯಾಪದವಾಗಿ ಬಳಕೆಯಾಗುವಾಗ ಬಹಳ ಸಂದರ್ಭಗಳಲ್ಲಿ ತಿಳಿ ಎಂಬರ್ಥವನ್ನು ಪಡೆದುಕೊಳ್ಳುತ್ತದೆ. (ಉದಾ: “ಅರಿತರೆ ಶರಣ ಮರೆತರೆ ಮಾನವ, ಅರಿತರಿತು ಮಾಡಿದ ಪಾಪ) ಮನುಷ್ಯನ ಮನಸ್ಸಿನಲ್ಲಿ ಹಿತೈಷಿಯ ವೇಷದಲ್ಲಿ ಒಳಗೆ ಬೈಚಿಟ್ಟುಕೊಂಡು ಅಪಾರ ಅನರ್ಥವನ್ನೇ ಮಾಡುವ ಇವುಗಳ ಬಗೆಗೆ ಅರಿಯುವುದು, ಅವುಗಳನ್ನು ಹತೋಟಿಯಲ್ಲಿಡುವುದು ಬಹಳ ಮುಖ್ಯ. ಅವುಗಳಿಗೆ ತಕ್ಕಂತೆ ಮನುಷ್ಯನ ಪಂಚೇಂದ್ರಿಯಗಳೂ ತಾಳ ಹಾಕುತ್ತವೆ. ಕಣ್ಣು ನಾಲಿಗೆ ಮನವು ತನ್ನವೆಂದೆನಬೇಡ, ಅವು ತನ್ನ ತಾ ಕೊಂದಾವು ಎನ್ನುತ್ತಾನೆ ಸರ್ವಜ್ಞ. 

ಮನುಷ್ಯ ತನ್ನ ವೈರಿಗಳನ್ನು ಜೀವನದಲ್ಲಿ ಹುಡುಕಬೇಕಾಗಿಲ್ಲ. ತನ್ನೊಳಗೇ ಆ ಆರು ವೈರಿಗಳು ಇದ್ದಾರೆ. ಆತ್ಮೈವ ಆತ್ಮನೋ ಬಂಧುಃ, ಆತ್ಮೈವ ರಿಪುರಾತ್ಮನಃ ಎನ್ನುತ್ತದೆ ಭಗವದ್ಗೀತೆ, ತನಗೆ ಬೇರೆಯವರು ಶತ್ರುಗಳೂ ಅಲ್ಲ, ಗೆಳೆಯರೂ ಅಲ್ಲ, ತನಗೆ ತಾನೇ ವೈರಿ, ತನಗೆ ತಾನೇ ಗೆಳೆಯ. ಬೇರೆಯವರು ತನ್ನ ವೈರಿಗಳಾಗುವುದಾಗಲೀ, ಗೆಳೆಯರಾಗುವುದಾಗಲೀ ಸುಪ್ತವಾದ ಈ ಆರು ವೈರಿಗಳ ವರ್ತನೆಯನ್ನೇ ಅವಲಂಬಿಸಿರುತ್ತದೆ. ಅರಿಷಡ್ ವರ್ಗಗಳ ಸೆಳೆತಕ್ಕೆ ಒಳಗಾದರೆ ತನಗೆ ತಾನೇ ಶತ್ರು; ಅವುಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ತನಗೆ ತಾನೇ ಮಿತ್ರ. ಆದ್ದರಿಂದ ದೈನಂದಿನ ಹೋರಾಟ ಆಗಬೇಕಾಗಿರುವುದು ಅರಿಷಡ್ ವರ್ಗಗಳೊಂದಿಗೇ ಹೊರತು ಹೊರಗಿನ ಶತ್ರುಗಳ ಮೇಲಲ್ಲ. ಮನುಷ್ಯ ಹಾಳಾಗುವುದು ಇವುಗಳ ಮೇಲಿನ ಹತೋಟಿ ತಪ್ಪಿದಾಗ, ಅದು ಹೇಗೆಂಬುದನ್ನು ಭಗವದ್ಗೀತೆಯು ಈ ಕೆಳಗಿನ ಶ್ಲೋಕದಲ್ಲಿ ಚೆನ್ನಾಗಿ ಮನದಟ್ಟುಮಾಡಿಕೊಟ್ಟಿದೆ: 

ಧ್ಯಾಯತೋ ವಿಷಯಾನ್ ಪುಂಸಃ ಸಂಗಃ ತೇಷೂಪಜಾಯತೇ 
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೊಧೋಭಿಜಾಯತೇ
ಕ್ರೋಧಾದ್ ಭವತಿ ಸಂಮೋಹಃ ಸಂಮೋಹಾದ್ ಸೃತಿವಿಭ್ರಮಃ 
ಸ್ಮತಿಭ್ರಂಶಾದ್ ಬುದ್ಧಿನಾಶಃ ಬುದ್ಧಿನಾಶಾತ್ ಪ್ರಣಶ್ಯತಿ! 
- ಭಗವದ್ಗೀತೆ (2.62-63)

ಮನುಷ್ಯನು ಯಾವುದೇ ವಿಷಯವನ್ನು ದೀರ್ಘಕಾಲ ಚಿಂತಿಸುವಾಗ ಅದರ ಬಗ್ಗೆ ಆಸಕ್ತಿಯುಂಟಾಗುತ್ತದೆ. ಆ ಆಸಕ್ತಿಯಿಂದ ಅದನ್ನು ಪಡೆಯಬೇಕೆಂಬ ಹಂಬಲ ಅವನಿಗೆ ಉಂಟಾಗುತ್ತದೆ. ತನ್ನ ಹಂಬಲ ಈಡೇರದಿದ್ದಾಗ ಅಡ್ಡಿಪಡಿಸಿದವರ ಮೇಲೆ ಕೋಪ ಉಂಟಾಗುತ್ತದೆ. ಆ ಕೋಪದಲ್ಲಿ ಮನುಷ್ಯ ಕಾರ್ಯಾಕಾರ್ಯ ವಿವೇಚನೆಯನ್ನು ಕಳೆದುಕೊಳ್ಳುತ್ತಾನೆ. ವಿವೇಚನೆಯಿಲ್ಲದ ವ್ಯಕ್ತಿ ಮಾಡಬಾರದ ಅನರ್ಥ ಕಾರ್ಯದಲ್ಲಿ ತೊಡಗುತ್ತಾನೆ. ಅದರಿಂದ ದುರ್ಬುದ್ದಿ ಆವರಿಸಿ ಮನುಷ್ಯ ಹಾಳಾಗುತ್ತಾನೆ. 

ಕಾಮಕ್ರೋಧಾದಿ ಅರಿಷಡ್ ವರ್ಗಗಳನ್ನು ಮೆಟ್ಟಿ ನಿಲ್ಲುವುದು ಸುಲಭವಲ್ಲ. ಆದರೆ ಸನ್ಮಾರ್ಗದಲ್ಲಿ ನಡೆಯಬೇಕೆನ್ನುವವನಿಗೆ ಅವುಗಳನ್ನು ಎದುರಿಸುವುದು ಅನಿವಾರ್ಯ. ಅವುಗಳನ್ನು ಮೆಟ್ಟಿ ನಿಲ್ಲುವುದೆಂದರೆ ಅವುಗಳ ದಮನವಲ್ಲ, ಅವುಗಳನ್ನು ಪಳಗಿಸುವುದು. ದಮನ ಮಾಡಿದಷ್ಟೂ ಅವು ಸಿಡಿದೇಳುತ್ತವೆ. “Action and reaction are equal and opposite” ಎಂಬ ನ್ಯೂಟನ್ನನ ನಿಯಮ ಭೌತಶಾಸ್ತ್ರಕ್ಕೆ ಸರಿಹೊಂದಬಹುದು. ಆದರೆ ಮನುಷ್ಯನ ಮನಃಸ್ಥಿತಿಗೆ ಅನ್ವಯಿಸುವುದಿಲ್ಲ. ಗೋಡೆಗೆ ಚೆಂಡು ಅಪ್ಪಳಿಸಿದರೆ ಅಷ್ಟೇ ರಭಸವಾಗಿ ಹಿಂದಕ್ಕೆ ಪುಟಿಯುತ್ತದೆಯೆಂಬುದು ನಿಜ. ಆದರೆ ಮನುಷ್ಯನ ನಿತ್ಯದ ಬದುಕನ್ನು ಗಮನಿಸಿ ಹೇಳುವುದಾದರೆ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ವಿರುದ್ಧವಾಗಿದ್ದರೂ ಅವು ಸಮನಾಗಿರುವುದಿಲ್ಲ. ಕ್ರಿಯೆಯ ಹಲವಾರು ಪಟ್ಟು ಪ್ರತಿಕ್ರಿಯೆಯು ದೊಡ್ಡದಾಗಿರುತ್ತದೆ. ಜಗಳ ಮಾಡುವವರನ್ನೇ ಗಮನಿಸಿ. ಒಬ್ಬನು ಎದುರಾಳಿಯನ್ನು ಹಂಗಿಸಿ ನೀನು ಎಂದರೆ ಇನ್ನೊಬ್ಬನು ಕೇವಲ ನೀನು ಎನ್ನುವುದಿಲ್ಲ, ಅದಕ್ಕೆ ಬದಲಾಗಿ ನಿಮ್ಮಪ್ಪ ಎನ್ನದೇ ಬಿಡುವುದಿಲ್ಲ! ಅರಿಷಡ್‌ ವರ್ಗಗಳ ವಿಷಯವೂ ಹಾಗೆಯೇ. ಅವುಗಳನ್ನು ದಮನ ಮಾಡುವುದರ ಬದಲು ಪಳಗಿಸಿ ಒಳಿತಿಗೆ ಬಳಸುವುದರಲ್ಲಿಯೇ ಬಾಳಿನ ಜಾಣೆ ಅಡಗಿರುವುದು. ಈ ಅರ್ಥದಲ್ಲಿಯೇ ವೀರವಿರಾಗಿಣಿ ಅಕ್ಕಮಹಾದೇವಿ ಹೇಳಿದ್ದು: 

ಹಾವಿನ ಬಾಯ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 4.8.2011