ಉನ್ನತ ಸ್ಥಾನ ಮತ್ತು ಆಪ್ತಸಹಾಯಕರು
ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯವಿಷಯಗಳ ಜೊತೆಗೆ ನೀತಿಪಾಠ ಎಂಬುದಿರುತ್ತದೆ. ಶಿಕ್ಷಣದ ಪ್ರಾಥಮಿಕ ಹಂತದಲ್ಲಿರುವ ಈ ನೀತಿಪಾಠ ಉನ್ನತಶಿಕ್ಷಣದಲ್ಲಿ ಇರುವುದಿಲ್ಲ. ಮಕ್ಕಳಿಗೇ ಏಕೆ ಈ ನೀತಿಪಾಠ, ದೊಡ್ಡವರಿಗೆ ಏಕಿಲ್ಲ? ಮಕ್ಕಳು ಸುಲಭವಾಗಿ ಕೇಳಿಸಿಕೊಳ್ಳುತ್ತಾರೆ; ದೊಡ್ಡವರು ಕೇಳಿಸಿಕೊಳ್ಳುವುದಿಲ್ಲ, ಉಡಾಫೆ ಮಾತನಾಡುತ್ತಾರೆ. ವಾಸ್ತವವಾಗಿ ಇಬ್ಬರಿಗೂ ಇದರ ಅವಶ್ಯಕತೆ ಇದೆ - ಒಬ್ಬರು ಒಳ್ಳೆಯ ಚಾಳಿಯನ್ನು ಕಲಿಯಲು (to learn), ಇನ್ನೊಬ್ಬರು ಕಲಿತ ಚಾಳಿಯನ್ನು ಕೈಬಿಡಲು (to unlearn).
ಮಕ್ಕಳಿಗೆ ಶಾಲೆಯ ಪಠ್ಯವಿಷಯಗಳಿಗಿಂತ ನೀತಿಕಥೆಗಳೆಂದರೆ ಬಹಳ ಇಷ್ಟ. ಅಜ್ಜ ಅಜ್ಜಿಯರಿಗೆ ಒಂದು ಕಥೆ ಹೇಳು ಎಂದು ದುಂಬಾಲು ಬೀಳುತ್ತಾರೆ. ಕಥೆಯ ಕೇಳೆಲೆ ಕಂದ ಎಂದರೆ ಸಾಕು ಆರಂಭಿಸುವ ಮುನ್ನವೇ ಮಗು ಹೂ ಅನ್ನುತ್ತದೆ. ಮನುಷ್ಯನಲ್ಲಿರುವ ಈ ಕೌತುಕವನ್ನು ಜಗತ್ತಿನ ನೀತಿಬೋಧಕರು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಕಥೆಯನ್ನು ಹೇಳುವ ನೆಪದಲ್ಲಿ ಜೀವನದ ಪಾಠ, ಐಹಿಕ ಬದುಕಿನಲ್ಲಿ ಇರಬೇಕಾದ ರೀತಿ ನೀತಿ, ಬದುಕಿನಾಚೆ ಇರುವ ಸತ್ಯದ ಕುರಿತು ಮನಂಬುಗುವಂತೆ ಉಪದೇಶಿಸಿದ್ದಾರೆ. ಇಸೋಪನ ನೀತಿಕಥೆಗಳು, ಬೈಬಲ್ಲಿನ ಕಥೆಗಳು, ವೇದೋಪನಿಷತ್ತಿನ ಕಥೆಗಳು, ವಡ್ಡಾರಾಧನೆಯ ಕಥೆಗಳು, ಝನ್ ಕಥೆಗಳು, ನಾಸಿರುದ್ದೀನ್ ಕಥೆಗಳು, ರಾಮಕೃಷ್ಣ ಪರಮಹಂಸರ ಕಥೆಗಳು ಇದಕ್ಕೆ ನಿದರ್ಶನ. ರಾಮಾಯಣ, ಮಹಾಭಾರತ, ಭಾಗವತಗಳ ತುಂಬಾ ಇಂಥ ಕಥೆಗಳು ಇಡಿಕಿರಿದಿವೆ. ಹೀಗೆ ಜಗತ್ತಿನಾದ್ಯಂತ ನೀತಿಬೋಧನೆಗೆ ಕಥಾಮಾಧ್ಯಮವನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಸಂಸ್ಕೃತದಲ್ಲಿ ಪಂಚತಂತ್ರದ ಕಥೆಗಳು ಹುಟ್ಟಿದ್ದೇ ಈ ನೀತಿಬೋಧನೆಗಾಗಿ, ಕಥಾರಂಭದಲ್ಲಿ ಬರುವ ಮಹಿಲಾರೋಪ್ಯನಗರದ ಅಮರಶಕ್ತಿ ಎಂಬ ರಾಜ ಮತ್ತು ಅವನ ಬಹುಶಕ್ತಿ, ಉಗ್ರಶಕ್ತಿ, ಅನಂತಶಕ್ತಿ ಎಂಬ ವಿವೇಕಶೂನ್ಯ ಮಕ್ಕಳ ಕಥಾಪ್ರಸಂಗ ಕೇವಲ ಸಾಂಕೇತಿಕ, ಆ ಮೂವರೂ ರಾಜಕುಮಾರರನ್ನು ಆರೇ ತಿಂಗಳಲ್ಲಿ ಜಾಣರನ್ನಾಗಿ ಮಾಡುವ ಪಣ ತೊಟ್ಟ ವಿಷ್ಣುಶರ್ಮನ ಪಂಚತಂತ್ರದ ಕಥೆಗಳನ್ನು ಕೇಳದ ಭಾರತೀಯ ಮಕ್ಕಳಿಲ್ಲ, ಹನ್ನೊಂದನೆಯ ಶತಮಾನದಷ್ಟು ಪೂರ್ವದಲ್ಲಿಯೇ ಯೂರೋಪ್ ತಲುಪಿ ಸ್ಪಾನಿಷ್, ಇಟಾಲಿಯನ್, ಜರ್ಮನ್, ಇಂಗ್ಲೀಷ್ ಮೊದಲಾದ ಭಾಷೆಗಳಿಗೆ ಭಾಷಾಂತರಗೊಂಡ ಪ್ರಖ್ಯಾತಿ ಈ ಪಂಚತಂತ್ರಕ್ಕಿದೆ.
ಆಧುನಿಕ ಮಕ್ಕಳಿಗೆ ಟಿ.ವಿ ಗಳಲ್ಲಿ ಬರುವ ಮಿಕಿ ಮೌಸ್ ಕಥೆಗಳು ತುಂಬಾ ಇಷ್ಟ. ಎಷ್ಟೇ ಹಸಿವಾದರೂ ಮರೆತು ಟಿ.ವಿ ಮುಂದೆ ಕಣ್ಣು ಕೀಲಿಸಿಕೊಂಡು ನೋಡುತ್ತಾ ಕುಳಿತಿರುತ್ತವೆ. ಪಂಚತಂತ್ರದ ಕಥೆಗಳೂ ಸಹ ಮಕ್ಕಳ ಮನಸ್ಸನ್ನು ಅದೇ ರೀತಿಯಲ್ಲಿ ಸೆರೆ ಹಿಡಿಯುತ್ತವೆ. ಟಿ.ವಿ.ಯಲ್ಲಿ ಪ್ರಸಾರವಾಗುವ ಮಿಕಿ ಮೌಸ್ ಸೀರಿಯಲ್‌ಗಳ ಉದ್ದೇಶ ಕೇವಲ ರಂಜನೆಯಾಗಿರುತ್ತದೆ. ಆದರೆ ಪಂಚತಂತ್ರದ ಕಥೆಗಳು ಮಕ್ಕಳಿಗೆ ಜೀವನದರ್ಶನವನ್ನು ಮಾಡಿಸುತ್ತವೆ. ಈ ಕಥೆಗಳ ಉದ್ದೇಶ ಮನರಂಜನೆಯಲ್ಲ, ಮನೋವಿಕಾಸ, ಲೌಕಿಕ ಜೀವನಕ್ಕೆ ಸಂಬಂಧಿಸಿದಂತೆ ವ್ಯಾವಹಾರಿಕ ಜ್ಞಾನವನ್ನು ಬೋಧಿಸುತ್ತವೆ. ಅದಕ್ಕನುಗುಣವಾಗಿ ನಿರೂಪಿಸಿದ ಕಥೆಯ ಒಡಲಿನಲ್ಲಿ ಸೂಕ್ತಿಗಳು, ನೀತಿವಾಕ್ಯಗಳು ಹೇರಳವಾಗಿ ಬರುತ್ತವೆ. ಇಲ್ಲಿಯ ಕಥೆಗಳು ಸುಭಾಷಿತಗಳನ್ನು ಸಮರ್ಥಿಸಲು ಇರುವ ನಿದರ್ಶನಗಳಂತೆ ತೋರುತ್ತವೆ. ಅಂತಹ ಒಂದು ಪಂಚತಂತ್ರದ ಕಥೆ ಹೀಗಿದೆ:
ಒಬ್ಬ ರಾಜನಿದ್ದ. ಅವನು ತನ್ನ ಸೇವೆಗಾಗಿ ಒಂದು ಕೋತಿಯನ್ನು ನೇಮಿಸಿಕೊಂಡಿದ್ದ. ಆ ಕೋತಿ ರಾಜನ ಆತ್ಮೀಯ ಒಡನಾಡಿಯಾಗಿತ್ತು. ರಾಜನ ವಿಶ್ವಾಸಕ್ಕೆ ಪಾತ್ರವಾಗಿದ್ದ ಆ ಕೋತಿಯು ಅರಮನೆಯಲ್ಲಿ ನಿರಾತಂಕವಾಗಿ ಯಾರ ಭಯವೂ ಇಲ್ಲದೆ ಎಲ್ಲೆಂದರಲ್ಲಿ ಓಡಾಡಿಕೊಂಡಿತ್ತು. ಒಮ್ಮೆ ರಾಜಕಾರಣದಲ್ಲಿ ದಣಿದಿದ್ದ ರಾಜ ವಿಶ್ರಾಂತಿ ಪಡೆಯಲು ಬಯಸಿ ಅಂತಃಪುರದಲ್ಲಿ ಮಲಗಿದ್ದ. ನಿಷ್ಠಾವಂತ ಸೇವಕನೆನಿಸಿದ್ದ ಕೋತಿ ಹಾಸಿಗೆಯ ಪಕ್ಕದಲ್ಲಿ ಕುಳಿತು ಕೈಯಲ್ಲಿ ಬೀಸಣಿಕೆ ಹಿಡಿದು ರಾಜನ ಮುಖಕ್ಕೆ ಗಾಳಿಯನ್ನು ಬೀಸುತ್ತಿತ್ತು. ಕ್ಷಣಾರ್ಧದಲ್ಲಿ ರಾಜನಿಗೆ ಗಾಢ ನಿದ್ರೆ ಆವರಿಸಿತು. ಸ್ವಲ್ಪ ಹೊತ್ತಿನಲ್ಲಿಯೇ ರಾಜನ ಮುಖದ ಮೇಲೆ ಒಂದು ನೊಣ ಬಂದು ಕುಳಿತುಕೊಂಡಿತು. ರಾಜನಿಗೆ ನಿದ್ರಾಭಂಗ ಆಗಬಾರದೆಂದು ಆಲೋಚಿಸಿ ಕೋತಿ ಆ ನೊಣವನ್ನು ಬೀಸಣಿಕೆಯಿಂದ ಓಡಿಸಿತು. ಅದನ್ನು ಓಡಿಸಲು ಎಷ್ಟೇ ಪ್ರಯತ್ನಿಸಿದರೂ ನೊಣ ಮತ್ತೆ ಮತ್ತೆ ರಾಜನ ಮುಖದ ಮೇಲೆ ಬಂದು ಕುಳಿತುಕೊಳ್ಳುತ್ತಿತ್ತು. ಕೋತಿಗೆ ಬಹಳ ಸಿಟ್ಟು ಬಂತು. ಅದಕ್ಕೆ ಸರಿಯಾದ ಶಾಸ್ತಿಯನ್ನು ಮಾಡಬೇಕೆಂದು ತೀರ್ಮಾನಿಸಿ ಕೈಯಲ್ಲಿ ಒಂದು ಹರಿತವಾದ ಖಡ್ಗವನ್ನು ತೆಗೆದುಕೊಂಡು ನೊಣದ ಮೇಲೆ ಬಲವಾಗಿ ಹೊಡೆಯಿತು. ನೊಣ ಅತ್ತ ಹಾರಿ ಹೋಯಿತು. ಇತ್ತ ರಾಜನ ಪ್ರಾಣವೂ ಹಾರಿಹೋಯಿತು. ಕೋತಿಯು ನೊಣವನ್ನು ಓಡಿಸಲು ಮಾಡಿದ ವಿಫಲ ಪ್ರಯತ್ನದಲ್ಲಿ ರಾಜನ ತಲೆ ತುಂಡರಿಸಿ ದೇಹ ರಕ್ತದ ಮಡುವಿನಲ್ಲಿ ಮುಳುಗಿತ್ತು!
ಈ ಕಥೆಯ ನೀತಿ ಏನು? ಪಂಚತಂತ್ರದ ಈ ಕಥೆಯಲ್ಲಿ ಬೇರೆ ಕಥೆಗಳಲ್ಲಿ ಬರುವಂತಹ ಯಾವುದೇ ರೀತಿಯ ಶ್ಲೋಕಗಳಿಲ್ಲ, ಖಚಿತವಾದ ಶಬ್ದಗಳಲ್ಲಿ ಕಥೆಯ ನೀತಿಯನ್ನು ಹೇಳಲು ಸಹ ಹೋಗಿಲ್ಲ. ಆದರೆ ಕಥೆ ಮಾತ್ರ ತುಂಬಾ ರೋಚಕವಾಗಿದೆ. ಇಲ್ಲಿರುವುದು ಕೇವಲ ರೋಚಕತೆ ಅಲ್ಲ; ಜೀವನ ಪಾಠ. ಕಥೆಯ ನೀತಿಯನ್ನು ಕಥಾಕಾರ ಕೇಳುಗರ ಊಹೆಗೆ ಬಿಟ್ಟಿದ್ದಾನೆಯೇ ಹೊರತು ಶಾಬ್ದಿಕವಾಗಿ ಎಲ್ಲೂ ಏನನ್ನೂ ಹೇಳಲು ಹೋಗಿಲ್ಲ. ಇದೊಂದು ಚಿಕ್ಕ, ಚೊಕ್ಕ, ಆಬಾಲವೃದ್ದರು ಕೇಳಿ ಆನಂದಿಸಬಹುದಾದ ಕಥೆ. ಕಥೆಯನ್ನು ಕೇಳಿದ ಮೇಲೆ ಮಂಗನ ವರ್ತನೆಯ ಬಗೆಗೆ ನಗು ಬರುವುದು ಸಹಜ. ಆದರೆ ಇಲ್ಲಿ ಹೇಳ ಬಯಸಿರುವುದು ಮಂಗನ ವರ್ತನೆಯನ್ನು ಕುರಿತು ಅಲ್ಲ. ಸ್ವಭಾವತಃ ಚಪಲಚಿತ್ತವುಳ, ಅಂತಹ ಮಂಗನನ್ನು ಸೇವಕನನ್ನಾಗಿ ನೇಮಿಸಿಕೊಂಡ ರಾಜನ ಅವಿವೇಕಿತನವನ್ನು ಕುರಿತು. ಉನ್ನತ ಸ್ಥಾನದಲ್ಲಿರುವವರು ಹೇಗೆ ಎಚ್ಚರದಿಂದ ಇರಬೇಕು. ಎಂಥವರನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು, ಎಂಥವರನ್ನು ಇಟ್ಟುಕೊಳ್ಳಬಾರದು ಎಂಬ ವಿವೇಚನೆ ಇರಬೇಕೆಂದು ಇದು ಬೋಧಿಸುತ್ತದೆ.
ಉನ್ನತ ಸ್ಥಾನದಲ್ಲಿರುವವರು ಎತ್ತರಕ್ಕೇರಿದಷ್ಟೂ ಕೆಳಗೆ ಬೀಳುವ ಅಪಾಯ ಬಹಳ, ಅವರು ಮನೆಯ ಯಜಮಾನನಾಗಿರಬಹದು, ಮಂತ್ರಿಯಾಗಿರಬಹುದು, ಮಠದ ಗುರುವೂ ಆಗಿರಬಹುದು. ಸರಿಯಾದ ಸಲಹೆಗಾರರು, ಸಹಾಯಕರು ಇಲ್ಲದೇ ಹೋದರೆ, ಅವರೇ ಕೊಳ್ಳೆ ಹೊಡೆಯುವ ಕಳ್ಳರಾಗಿದ್ದರೆ ಅಥವಾ ದಿಕ್ಕು ತಪ್ಪಿಸುವವರಾಗಿದ್ದರೆ ಪತನ ಶತಃಸಿದ್ದ. ಮನೆಯ ಯಜಮಾನನಾಗಿದ್ದರೆ ಎರಡು ಕಾಲಿನ ಹೆಗ್ಗಣಗಳು ಮನೆಯ ಅಸ್ತಿವಾರವನ್ನು ಹಾಳುಗೆಡವುತ್ತವೆ. ಮಠದ ಗುರುವಾಗಿದ್ದರೆ ಹಿಂದಿನವರು ಜತನದಿಂದ ಕಾಪಾಡಿಕೊಂಡು ಬಂದ ಆಸ್ತಿಗಳು, ಭಕ್ತರು ಸದುದ್ದೇಶದಿಂದ ಕೊಡಮಾಡಿದ ಪರಂಪರಾಗತ ಸೊತ್ತುಗಳು ಬಿಕರಿಯಾಗುತ್ತವೆ. ಮಂತ್ರಿಯಾದರೆ ನಾಡಿನ ಸಂಪತ್ತು ಲೂಟಿಯಾಗಿರುತ್ತದೆ, ತನ್ನ ಸುತ್ತ ಇರುವವರು ಮಾಡಿದ ತಪ್ಪಿನಿಂದ ಅಧಿಕಾರ ಕಳೆದುಕೊಂಡು, ಮಾನ ಮರ್ಯಾದೆಯನ್ನೂ ಕಳೆದುಕೊಂಡು, ಪರಪ್ಪನ ಅಗ್ರಹಾರದ ಅತಿಥಿಯಾಗಬೇಕಾಗುತ್ತದೆ. ಚಿನ್ನದ ತಟ್ಟೆಯಲ್ಲಿ ಮೃಷ್ಟಾನ್ನ ಭೋಜನವನ್ನು ಮಾಡಿದವರು ಭಿಕ್ಷುಕರಂತೆ ಹಿಡಿಯನ್ನಕ್ಕೂ ಕೈಚಾಚಬೇಕಾಗುತ್ತದೆ. ಇದೊಂದು ಜಾರುದಾರಿಯ ದುರ್ಗಮ ಪ್ರಯಾಣ. ಎಷ್ಟೇ ಪ್ರಯತ್ನಪಟ್ಟು ತಡೆದರೂ ಅನಾಹುತ ಆಗಿಯೇ ತೀರುತ್ತದೆ. Prevention is better than cure ಎಂಬಂತೆ ರೋಗ ಬಂದ ನಂತರ ಔಷಧೋಪಚಾರ ಮಾಡುವ ಬದಲು ರೋಗವೇ ಬರದಂತೆ ತಡೆಯುವುದು ಮುಖ್ಯ. ಉನ್ನತಸ್ಥಾನದಲ್ಲಿರುವವರು ಇದನ್ನು ಚೆನ್ನಾಗಿ ನೆನಪಿಡಬೇಕು. ಆರಂಭದಿಂದಲೂ ಎಚ್ಚರಿಕೆಯಿಂದ ಆದ್ಯತೆಗಳನ್ನು ಮತ್ತು ತನ್ನ ಹಿತೈಷಿಗಳನ್ನು ಗುರುತಿಸಿಕೊಳ್ಳಬೇಕು.
ತಮಗೆ ಸಹಾಯಕರಾಗಿರುವವರು ಕೇವಲ ನಿಷ್ಟಾವಂತರು, ಬುದ್ಧಿವಂತರು, ಪ್ರಾಮಾಣಿಕರು ಆಗಿದ್ದರೆ ಸಾಲದು. ಇವೆಲ್ಲ ಗುಣಗಳು ಎರಕ ಹೊಯ್ದ ವಿವೇಕವಂತರಾಗಿರುವುದು ಬಹು ಮುಖ್ಯ. ಅಂತಹವರು ಸಿಗುವುದು ಅಪರೂಪವಾದರೂ ಯಾರಾರಲ್ಲಿ ಎಷ್ಟೆಷ್ಟು ಪ್ರಮಾಣದ ಯಾವಾವ ಗುಣಗಳು ಇವೆ ಎಂಬ ಅರಿವು ಉನ್ನತ ಸ್ಥಾನದ ವ್ಯಕ್ತಿಗಳಲ್ಲಿ ಇರಬೇಕು. ಅವರಲ್ಲಿರುವ ಈ ಗುಣಗಳನ್ನಾಧರಿಸಿ ಸಹಾಯಕರು ಮತ್ತು ಸಲಹೆಗಾರರನ್ನು ಬಳಸಿಕೊಳ್ಳುವ ವಿವೇಕ ಅವರಲ್ಲಿರಬೇಕು. ಅವಿವೇಕಿ ಸಹಾಯಕರನ್ನು ನಂಬಿ ಎಚ್ಚರ ತಪ್ಪಿದರೆ “ಅವ್ಯವಸ್ಥಿತಚಿತ್ತಾನಾಂ ಪ್ರಸಾದೋsಪಿ ಭಯಂಕರಃ” ಎನ್ನುವಂತೆ ಮೇಲ್ಕಂಡ ಕಥೆಯಲ್ಲಿ ಮಂಗನಿಂದ ಆದಂತಹ ಅನಾಹುತ ಘಟಸುವುದು ಖಂಡಿತ! ತಪ್ಪು ನೇರವಾಗಿ ತನ್ನದಲ್ಲವೆಂದರೂ ಆಳು ಮಾಡಿದ ತಪ್ಪಿಗೆ ಒಡೆಯನು ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ:
“ ಭೃತ್ಯಾಪರಾಧಃ ಸ್ವಾಮಿನೋ ದಂಡಃ ”
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 15.9.2017