ಬೆಳಗಿನೊಳಗಣ ಮಹಾಬೆಳಗು!.
ಐವತ್ತರ ದಶಕ. ಆಗಿನ್ನೂ ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಒಬ್ಬ ಹಳ್ಳಿಯ ಹುಡುಗ. ನಮ್ಮ ಜನ್ಮಸ್ಥಳವು ತುಂಗಭದ್ರೆಯು ಒಂದುಗೂಡುವ ಸಂಗಮದ ಒಂದು ಸಣ್ಣ ಹಳ್ಳಿ. ಎಂಟು ಮೈಲಿ ದೂರದಲ್ಲಿರುವ ಶಿವಮೊಗ್ಗ ಮತ್ತು ಅಕ್ಕಪಕ್ಕದ ನಾಲ್ಕಾರು ಹಳ್ಳಿಗಳನ್ನು ಬಿಟ್ಟರೆ ಪ್ರಪಂಚ ಇಷ್ಟೊಂದು ವಿಶಾಲವಾಗಿದೆಯೆಂಬ ಪರಿಜ್ಞಾನವೇ ಆಗ ಇರಲಿಲ್ಲ. ಭೂಗೋಳದಲ್ಲಿ ಬೇರೆ ಬೇರೆ ದೇಶಗಳ ಜನಜೀವನ, ಕಸುಬು, ಮಳೆ-ಬೆಳೆ ಇತ್ಯಾದಿ ವಿಷಯಗಳನ್ನು ಓದಿದ್ದರೂ ಆ ಎಳವೆಯಲ್ಲಿ ಅವು ಪರೀಕ್ಷೆಯಲ್ಲಿ ಉತ್ತರ ಬರೆಯಲು ಮಾತ್ರ ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳಾಗಿದ್ದವೇ ಹೊರತು ವಾಸ್ತವಿಕರೂಪದ ಪರಿಕಲ್ಪನೆಗಳಾಗಿರಲಿಲ್ಲ.
ಹತ್ತಿರದ ಹಳ್ಳಿಯೊಂದಕ್ಕೆ ಗುರುಗಳೊಬ್ಬರು ದಯಮಾಡಿಸಿದ್ದರು. ಸಂದರ್ಭ ಏನೆಂದು ಸರಿಯಾಗಿ ನೆನಪಿಲ್ಲ. ಸಭೆಯ ಆರಂಭದಲ್ಲಿ ಗುರುಗಳ ಮುಂದೆ ಕೆಲವು ಭಕ್ತಿಗೀತೆಗಳನ್ನು ಹಾಡಿದೆವು. ಗುರುಗಳು ತುಂಬಾ ಸಂತೋಷಪಟ್ಟರು. ಹತ್ತಿರ ಕರೆದು ಮೈದಡವಿ ಯಾರೀ ಹುಡುಗ? ಎಂದು ಕೇಳಿದರು. ಪಕ್ಕದಲ್ಲಿ ಗೊತ್ತಿದ್ದವರೊಬ್ಬರು ಪರಿಚಯಿಸಿದರು. ಈ ಹುಡುಗನಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇದೆ ಎಂದು ಮಾತು ಮುಂದುವರಿಸಿದ ಅವರು ಶಿವಮೊಗ್ಗದ ಪೇಟೆಯ ಬೀದಿಯಲ್ಲಿ ಭಿಕ್ಷುಕನೊಬ್ಬನು ನುಡಿಸುತ್ತಿದ್ದ ತೆಂಗಿನ ಚಿಪ್ಪಿನ ಪಿಟೀಲನ್ನು ನೋಡಿ ಈ ಹುಡುಗನೂ ಹಾಗೆಯೇ ಮನೆಯ ಹಿಂಬದಿಯಲ್ಲಿ ಮರದ ಕೆಳಗೆ ಬಿದ್ದಿದ್ದ ತೆಂಗಿನ ಚಿಪ್ಪಿಗೆ ತಂತಿ ಬಿಗಿದು ಪಿಟೀಲು ನುಡಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಹೇಳಿದರು. ಗುರುಗಳು ನಸುನಕ್ಕು ನಮ್ಮ ಮಠದಲ್ಲಿ ಒಂದು ಒಳ್ಳೆಯ ಪಿಟೀಲು ಇದೆ, ಅದನ್ನು ಯಾರೂ ಬಳಸದೆ ಧೂಳು ತಿನ್ನುತ್ತಿದೆ, ಮಠಕ್ಕೆ ಹಿಂದಿರುಗಿದ ಮೇಲೆ ಅದನ್ನು ನಿನಗೆ ಕಳುಹಿಸಿಕೊಡುತ್ತೇವೆ, ಚೆನ್ನಾಗಿ ನುಡಿಸುವುದನ್ನು ಕಲಿ ಎಂದು ಹೇಳಿ ಹೋದರು. ಅದು ಇಂದು ಸಭೆ-ಸಮಾರಂಭಗಳಲ್ಲಿ ರಾಜಕಾರಣಿಗಳು ಕೊಡುವ ಪೊಳ್ಳು ಆಶ್ವಾಸನೆಗಳಂತೆ ಆಗಿರಲಿಲ್ಲ. ಮಾರನೆಯ ದಿನವೇ ಮಠದ ಮಾರ್ಗವಾಗಿ ಬಂದ ಹಸಿರು ಬಣ್ಣದ ಗಜಾನನ ಬಸ್ಸಿನಲ್ಲಿ ಪಿಟೀಲು ಬಂದೇ ಬಿಟ್ಟಿತು! ಅದನ್ನು ಕಳುಹಿಸಿದ ಗುರುಗಳೇ ನಮ್ಮ ಪರಮಾರಾಧ್ಯ ಗುರುಗಳಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರು ಅಂದು ಕಳಹಿಸಿಕೊಟ್ಟಿದ್ದ ಆ ಪಿಟೀಲಿನ ತಂತಿಗಳಲ್ಲಿ ಎಂತಹ ಮಾಂತ್ರಿಕ ಶಕ್ತಿಯಿತ್ತೋ ಏನೋ ಅವು ನಮ್ಮನ್ನು ಪರಮಪೂಜ್ಯ ಗುರುವರ್ಯರ ಪವಿತ್ರ ಸಾನಿಧ್ಯಕ್ಕೆ ಹತ್ತಿರ ಹತ್ತಿರವಾಗಿ ಎಳೆದು ತಂದವು!....
ಎಪ್ಪತ್ತರ ದಶಕ. ಬೆನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವಿಗೆಂದು ಸೂತಸಂಹಿತೆಯೆಂಬ ಪ್ರಾಚೀನ ಗ್ರಂಥವನ್ನು ಕುರಿತು ಸಿದ್ಧಪಡಿಸುತ್ತಿದ್ದ ನಮ್ಮ ಸಂಶೋಧನಾ ಪ್ರಬಂಧ (thesis) ಮುಕ್ತಾಯದ ಹಂತದಲ್ಲಿತ್ತು. ಏತನ್ಮಧ್ಯೆ ಪೂಜ್ಯ ಗುರುವರ್ಯರು ಮಠದ ಅಧಿಕಾರದಿಂದ ನಿವೃತ್ತರಾಗ ಬಯಸಿ ಅಧಿಕೃತವಾಗಿ ಒಂದು ತ್ಯಾಗಪತ್ರವನ್ನು ಅಚ್ಚುಹಾಕಿಸಿ ಹೊರಡಿಸಿದ ಪ್ರಕಟಣೆಯು ಮಠದ ಶಿಷ್ಯರನ್ನೂ ಮತ್ತು ನಾಡಿನ ಜನರನ್ನೂ ದಂಗುಬಡಿಸಿತು. ದಿಗ್‌ಭ್ರಾಂತಿಗೊಂಡ ಶಿಷ್ಯಸಮುದಾಯವು ಆಗಿನ ಗೃಹಸಚಿವರೂ ಮಠದ ಶಿಷ್ಯರೂ ಆದ ಎಚ್. ಸಿದ್ಧವೀರಪ್ಪನವರ ಮುಂದಾಳುತನದಲ್ಲಿ ದಾವಣಗೆರೆಯಲ್ಲಿ ಭಾರೀ ಸಭೆ ಸೇರಿ ಎಷ್ಟೇ ಒತ್ತಾಯಪಡಿಸಿದರೂ ಗುರುಗಳು ತಮ್ಮ ತ್ಯಾಗಪತ್ರವನ್ನು ಹಿಂತೆಗೆದುಕೊಳ್ಳಲು ಒಪ್ಪಲಿಲ್ಲ. 1967 ರಷ್ಟು ಹಿಂದೆಯೇ ದಾವಣಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ತಮ್ಮ ಅರವತ್ತನೆಯ ವಯಸ್ಸಿನಲ್ಲಿ ನಿವೃತ್ತರಾಗುವುದಾಗಿ ಬಹಿರಂಗವಾಗಿ ಘೋಷಿಸಿದ್ದರು. ಅದನ್ನು ಶಿಷ್ಯರಾರೂ ಅಷ್ಟಾಗಿ ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಯಾವುದೇ ಮಠ-ಪೀಠಕ್ಕೆ, ಸಂಘ-ಸಂಸ್ಥೆಗಳಿಗೆ ಒಬ್ಬ ವ್ಯಕ್ತಿಯು ಸಾಯುವತನಕ ಅಂಟಿಕೊಂಡಿರಬಾರದು, ಅದರಿಂದ ಅವುಗಳ ಶ್ರೇಯೋಭಿವೃದ್ಧಿಗೆ ಧಕ್ಕೆಯೆಂದು ಅವರ ದೃಢನಿಲುಮೆಯಾಗಿತ್ತು. ಶಿಷ್ಯ ಪ್ರಮುಖರೂ, ವಯೋವೃದ್ದರೂ, ಹೈಕೋರ್ಟಿನ ನಿವೃತ್ತ ಅಡ್ವೊಕೇಟ್ ಜನರಲ್ ಆಗಿದ್ದ ಶ್ರೀ ಜಿ. ಚನ್ನಪ್ಪನವರ ಅಧ್ಯಕ್ಷತೆಯಲ್ಲಿ ಒಂದು ಉತ್ತರಾಧಿಕಾರಿ ಆಯ್ಕೆ ಸಮಿತಿ ರಚನೆಯಾಗಿ ಕಾಶಿಯಲ್ಲಿ ಓದುತ್ತಿದ್ದ ನಮ್ಮನ್ನೇ ಉತ್ತರಾಧಿಕಾರಿ ಎಂದು ಸರ್ವಾನುಮತದಿಂದ ತೀರ್ಮಾನಿಸಿತು. ನಮ್ಮ ವಿದ್ಯಾಭ್ಯಾಸ ಮುಗಿಯುವವರೆಗೂ ಗುರುವರ್ಯರೇ ಪೀಠದಲ್ಲಿ ಮುಂದುವರಿಯಬೇಕೆಂದೂ ತೀರ್ಮಾನವಾಯಿತು.
ಬಹಳ ವರ್ಷಗಳಿಂದಲೂ ಕರ್ನಾಟಕದಿಂದ ದೂರದಲ್ಲಿದ್ದ ನಮಗೆ ಬಾಲ್ಯದಿಂದಲೂ ಸಾಕಿ ಬೆಳಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಕಾಶಿಗೆ ಕಳುಹಿಸಿಕೊಟ್ಟಿದ್ದ ನಮ್ಮ ಪರಮಾರಾಧ್ಯ ಗುರುಗಳ ನೆನಪು ಆಗಾಗ್ಗೆ ಒತ್ತರಿಸಿ ಬಂದು ಮನಸ್ಸು ಖಿನ್ನವಾಗಿತ್ತು. ಪ್ರತಿ ಸಾರಿ ಸಿರಿಗೆರೆಯಿಂದ ಕಾಶಿಗೆ ಹೊರಡುವಾಗಲೂ ಚಿಕ್ಕಜಾಜೂರು ರೈಲ್ವೆ ನಿಲ್ದಾಣದವರೆಗೆ ಬಂದು ಮಧ್ಯರಾತ್ರಿಯವರೆಗೂ ಇದ್ದು ರೈಲು ಹತ್ತಿಸಿ ಕಳುಹಿಸುತ್ತಿದ್ದ ಅವರ ತಾಯ್ತನದ ಹೃದಯವು ನಮ್ಮನ್ನು ಅವರತ್ತ ಗಾಢವಾಗಿ ಸೆಳೆದಿತ್ತು. ಮಠದ ಶಿಷ್ಯಸಮುದಾಯವು ಮಾಡಿದ್ದ ತೀರ್ಮಾನವನ್ನು ಕೇಳಿ ಇಂತಹ ಗುರುತರ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯವೇ ಎಂದು ಮನಸ್ಸು ಅಧೈರ್ಯಗೊಂಡಿತ್ತು. ಒಮ್ಮೆ ಇದ್ದಕ್ಕಿದ್ದಂತೆಯೇ ಶ್ರೀಗುರುಗಳವರು ಬಯಲಾದರೆಂಬ ಶೋಕವಾರ್ತೆಯು ರೇಡಿಯೋದಲ್ಲಿ ಹೇಳಿದಂತೆ ದುಃಸ್ವಪ್ನವು ಬಿದ್ದು ದಿಗ್ ಭ್ರಾಂತರಾಗಿ ಎದ್ದು ಕುಳಿತೆವು. ಮನಸ್ಸು ತುಂಬಾ ಉದ್ವಿಗ್ನಗೊಂಡಿತ್ತು. ಬೆಳಗಾಗುತ್ತಲೇ ಅಂಚೆಯವನು ಒಂದು ಟೆಲಿಗ್ರಾಂ ತಂದುಕೊಟ್ಟನು. “ನಿನ್ನನ್ನು ನೋಡುವಂತಾಗಿದೆ ಕೂಡಲೇ ಸಿರಿಗೆರೆಗೆ ಹೊರಟು ಬಾ” ಎಂದು ಆ ತಂತಿಯಲ್ಲಿ ಗುರುಗಳ ಸಂದೇಶವಿತ್ತು. ತಡಮಾಡಲಿಲ್ಲ. ಗುರುಗಳ ದರ್ಶನಕ್ಕಾಗಿ ಮನಸ್ಸು ಹಾತೊರೆಯುತ್ತಿತ್ತು. ಕೂಡಲೇ ಸಿರಿಗೆರೆಗೆ ಬಂದು ನೋಡಿದಾಗ ಗುರುಗಳು ಆರೋಗ್ಯವಾಗಿಯೇ ಇದ್ದರು. ಸಮಾಧಾನದ ನಿಟ್ಟುಸಿರು ಬಿಟ್ಟು ಬೇಗನೆ ಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಬರುವುದಾಗಿ ಅರಿಕೆಮಾಡಿಕೊಂಡಾಗ ಗುರುಗಳು “ನೀನು ನಮ್ಮ ದೇಶದಲ್ಲಷ್ಟೇ ಓದಿದರೆ ಸಾಲದು. ನಿನಗೆ ಪಟ್ಟಕಟ್ಟುವ ಮೊದಲು ಪರದೇಶದಲ್ಲಿಯೂ ಓದಿ ಬರಬೇಕು.
ಜಗದ್ದುರುವಾಗುವವನು ಜಗತ್ತನ್ನು ಸುತ್ತಿ ತಿಳಿದುಕೊಂಡು ಬರಬೇಕು ಎಂದು ಆಜ್ಞಾಪಿಸಿದರು. ಅಧಿಕಾರ ಬಿಟ್ಟುಕೊಡಲು ಇವರಿಗೆ ಇಷ್ಟವಿಲ್ಲ. ಅದಕ್ಕಾಗಿಯೇ ಉತ್ತರಾಧಿಕಾರಿಯನ್ನು ಹೊರದೇಶಕ್ಕೆ ಕಳುಹಿಸಿ ತಾವೇ ಮುಂದುವರಿಯಲು ಈ ಸನ್ನಾಹ” ಎಂದು ಕೆಲವರು ಕೊಂಕು ನುಡಿದರು. “ಹೊರದೇಶಕ್ಕೆ ಹೋದವರು ಎಲ್ಲಿಯಾದರೂ ವಾಪಾಸು ಬರುವುದುಂಟೇ?” ಎಂದು ಮತ್ತೆ ಕೆಲವರು ಮೂಗು ಮುರಿದರು. ಆದರೆ ಗುರುಗಳಿಗೆ ಆ ಯಾವ ಅಪನಂಬಿಕೆ ಇರಲಿಲ್ಲ. ಅವರು ಆಗಾಗ್ಗೆ ನಮಗೆ ಸಂಸ್ಕೃತದಲ್ಲಿ ಬರೆಯುತ್ತಿದ್ದ ಪತ್ರಗಳು ನಮ್ಮನ್ನು ಮಾನಸಿಕವಾಗಿ ಸಿದ್ಧಗೊಳಿಸುತ್ತಿದ್ದವು. ಅಂತಹ ಪತ್ರಸರಣಿಯಲ್ಲಿ ಅವರು ಒಮ್ಮೆ ಬರೆದ ಒಂದು ಅಪರೂಪದ ಪತ್ರ ಈಗ ಕೈಗೆ ಸಿಗುತ್ತಿಲ್ಲವಾದರೂ ನಮಗೆ ನೆನಪಿರುವಂತೆ ಅದರಲ್ಲಿದ್ದ ಈ ಮುಂದಿನ ಮಾತು ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿತು: “ಶ್ವಾ ಇವ ಶೂಕರ ಇವ ಜೀವಿತೇ ಕೋsರ್ಥಃ ತ್ವಮೇವ ವದ!” (ನಾಯಿಯ ಹಾಗೆ, ಹಂದಿಯ ಹಾಗೆ ಜೀವನ ನಡೆಸುವುದರಲ್ಲಿ ಯಾವ ಪುರುಷಾರ್ಥವಿದೆ, ನೀನೇ ಹೇಳು).
ಅಧಿಕಾರಕ್ಕಾಗಿ ಹಪಹಪಿಸುವ ಈ ಕಾಲದಲ್ಲಿ ಅಧಿಕಾರದ ಗದ್ದುಗೆಗೆ ಅಂಟಿಕೊಳ್ಳದೆ ಸ್ವಯಂನಿವೃತ್ತಿಯನ್ನು ಘೋಷಿಸಿ ಅಪಾರ ಶಿಷ್ಯಸಮುದಾಯವುಳ್ಳ, ಮಠದ ಗುರುತರ ಹೊಣೆಗಾರಿಕೆಯನ್ನು ನಮ್ಮ ಮೇಲೆ ಹೊರಿಸಿದಾಗ ಇದೆಲ್ಲವನ್ನೂ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯವೇ ಎಂಬ ಅಳುಕು ಶಿಷ್ಯರಿಗೆ ಇತ್ತು. ಆದರೆ ಪೂಜ್ಯ ಗುರುವರ್ಯರ ಹೃದಯದಲ್ಲಿ ಮಾತ್ರ ಎಳ್ಳಷ್ಟೂ ಆ ಅಳುಕು ಇರಲಿಲ್ಲ, ಏನೇನೂ ಅನುಭವವಿಲ್ಲದವರಿಗೆ ಪಟ್ಟ ಕಟ್ಟಿದಿರಿ, ಮುಂದೇನು ಗತಿ! ಎಂದು ಗಾಬರಿಗೊಂಡ ಶಿಷ್ಯರಿಗೆ ಪೂಜ್ಯ ಗುರುವರ್ಯರು ನಸುನಗುತ್ತಾ ನೀಡಿದ ಮಾರುತ್ತರವೆಂದರೆ: ನಾಯಿಮರಿಗೆ ಯಾರಾದರೂ ಈಜು ಕಲಿಸಿ ನೀರಿಗೆ ಹಾಕುತ್ತಾರೇನೋ? ಅದು ತಂತಾನೇ ಕಲಿತುಕೊಳ್ಳುತ್ತದೆ, ಯೋಚಿಸಬೇಡಿ.
ಯಾವ ಜನ್ಮದ ಪುಣ್ಯವೋ ಬಾಲ್ಯದಿಂದಲೂ ನಮ್ಮನ್ನು ಕೈಹಿಡಿದು ನಡೆಸಿ ಅಪಾರ ಅಂತಃಕರಣದಿಂದ ದೇಶ-ವಿದೇಶಗಳಲ್ಲಿ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಿ ಬೆಳೆಸಿದ ಅವರ ಮಾತೃಹೃದಯವನ್ನು ಎಷ್ಟು ಸ್ಮರಿಸಿದರೂ ಸಾಲದು. ಅವರ ಅಪಾರ ಕರುಣೆ ಮತ್ತು ಶಿಷ್ಯವಾತ್ಸಲ್ಯಗಳನ್ನು ಬಣ್ಣಿಸಲು ಶಬ್ದಗಳು ಸಾಲವು. ಸಮುದ್ರಮಥನದ ಸಂದರ್ಭದಲ್ಲಿ ಉಕ್ಕೇರಿದ ನಂಜನ್ನು ನುಂಗಿದ ವಿಷಕಂಠನಂತೆ ಸಾಮಾಜಿಕ ಬದುಕಿನ ಸಂದರ್ಭದಲ್ಲಿ ಬಂದೊದಗಿದ ಎಲ್ಲ ಹಾಲಾಹಲವನ್ನು ಹಸನ್ಮುಖಿಗಳಾಗಿ ಉಂಡು ಸಮಾಜಶಿಶುವಿಗೆ ಹಾಲನ್ನುಣಿಸಿದವರು ನಮ್ಮ ಲಿಂಗೈಕ್ಯ ಗುರುವರ್ಯರು.
ಸಹೃದಯ ಓದುಗರೇ! ಅಂತಹ ಮಹಾನ್ ಚೇತನ ನಮ್ಮನ್ನಗಲಿ ಇದೇ ಸೆಪ್ಟೆಂಬರ್ 24 ಕ್ಕೆ 19 ವರ್ಷಗಳಾದವು. ತನ್ನಿಮಿತ್ತ ಈ ಲೇಖನ. ಆಗಲಿದ ಆ ದಿವ್ಯಚೇತನಕ್ಕೆ ಭಾವಪೂರ್ಣ ಶ್ರದ್ದಾಂಜಲಿ!
ಶಿವನ ಚಿತ್ಕಳೆಯನಿಳೆಗೆ ಬೆಳಗಿ
ಬೆಳಗಿನೊಳಗೆ ಮಹಾಬೆಳಗಾಗಿ ಕಂಗೊಳಿಸಿದಾತಂಗೆ
ಮರಣವೆಂದೊಡೆಂತಯ್ಯಾ- ಮಹಾಜ್ಯೋತಿ ತಾನಾದನಲ್ಲದೆ…
ಅದು ಕಾರಣ ಎನ್ನ ವರಗುರು ಶಿವಕುಮಾರಪ್ರಭು
ನೆನೆದವರ ಮನದೊಳಗಿಪ್ಪ
ಸದ್ಭಕ್ತರ ಅಂಗೈಯ ಲಿಂಗವಾಗಿಪ್ಪ ನೋಡಾ ಬಸವಣ್ಣ ಸಾಕ್ಷಿಯಾಗಿ! - (ಮಹಾದೇವ ಬಣಕಾರ)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 22.9.2011