ಭಕ್ತಿಸಂಭಾಷಣೆ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಒಂದು ಸಣ್ಣ ಹಳ್ಳಿ, ಅದರ ಹೆಸರು ನಿಡಗಟ್ಟ. ಆ ಊರಿನಲ್ಲಿ ಆಂಜನೇಯಸ್ವಾಮಿಯ ದೇವಸ್ಥಾನವಿದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗರ ಆರಾಧ್ಯದೇವರು ಈ ಆಂಜನೇಯ. ಮನೆಯಲ್ಲಿ ಯಾವುದೇ ಮಂಗಳಕಾರ್ಯವಿರಲಿ, ಎಲ್ಲಿಗೇ ಹೋಗುವುದಿರಲಿ ಹಳ್ಳಿಗರು ಈ ದೇವರ ಅಪ್ಪಣೆಯನ್ನು ಕೇಳದೆ ಏನನ್ನೂ ಮಾಡುವುದಿಲ್ಲ. ಒಮ್ಮೆ ಹತ್ತಿರದ ಚೆಟ್ಟಳ್ಳಿ ಗ್ರಾಮದ ಒಬ್ಬ ರೈತನ ಎತ್ತುಗಳಿಗೆ ಜ್ವರ ಬಂದಿತ್ತು. ಆ ರೈತ ಪ್ರತಿದಿನ ಬೆಳಿಗ್ಗೆ ಸ್ನಾನಮಾಡಿ ಮಡಿಯುಟ್ಟು ಆಂಜನೇಯನ ಗುಡಿಗೆ ಹೋಗಿ ದೇವರ ಮುಂದೆ ಕುಳಿತು “ನನ್ನ ಎತ್ತುಗಳಿಗೆ ಬಂದ ಕಾಯಿಲೆಯನ್ನು ನೀನೇ ವಾಸಿ ಮಾಡುತ್ತೀಯೋ, ಇಲ್ಲವೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೋ?” ಎಂದು ಅಪ್ಪಣೆ ಕೇಳಿದ. ದೇವರು ಅಪ್ಪಣೆ ಕೊಡಲಿಲ್ಲ. ಸತತವಾಗಿ ಒಂದು ವಾರ ಕಾಲ ಆಂಜನೇಯಸ್ವಾಮಿಯ ಪೂಜಾಕೈಂಕರ್ಯ ನಡೆಸಿದ ಹಳ್ಳಿ ರೈತ ದೇವರ ಅಪ್ಪಣೆ ಸಿಗದೆ ನಿರಾಶನಾಗಿ ಹಿಂತಿರುಗುತ್ತಿದ್ದ. ಒಂದು ದಿನ ದಾರಿಯಲ್ಲಿ ಅದೇ ಊರಿನಲ್ಲಿದ್ದ ಅವನ ಭಾವ ಎದುರಾದ. ಆತನು ಬೆಳಿಗ್ಗೆ ಮನೆಯಿಂದ ದನಕರುಗಳನ್ನು ಹೊರಗೆ ಮೇಯಲು ಬಿಟ್ಟು ದನದ ಕೊಟ್ಟಿಗೆಯನ್ನು ಸ್ವಚ್ಛಮಾಡಿ ಸಗಣಿಪುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗಿ ತಿಪ್ಪೆಗೆ ಹಾಕಿ ವಾಪಾಸು ಬರುತ್ತಿದ್ದ. ಅನಿರೀಕ್ಷಿತವಾಗಿ ಎದುರಾದ ತನ್ನ ಬಂಧುವನ್ನು ನೋಡಿ ಕ್ಷೇಮಸಮಾಚಾರ ವಿಚಾರಿಸಿದಾಗ ವಿಷಯ ತಿಳಿದು ದೇವರ ಮೇಲೆ ಸಿಟ್ಟಿಗೆದ್ದ. “ಅದ್ಯಾಕೆ ದೇವರು ಅಪ್ಪಣೆ ಕೊಡಲ್ಲ, ನಾನು ಕೇಳುತ್ತೇನೆ ಬಾ” ಎಂದು ತನ್ನ ಬಂಧುವನ್ನು ಸೀದಾ ಆಂಜನೇಯನ ಗುಡಿಗೆ ಕರೆದುಕೊಂಡು ಹೋದ. ದೇವರ ಎದುರು ನಿಂತು ಸಗಣಿಮೆತ್ತಿದ್ದ ಕೈಗಳನ್ನೇ ಜೋಡಿಸಿ “ನಿನ್ನಿಂದ ನಮ್ಮ ಹುಡುಗ ಕೇಳಬಾರದ್ದನ್ನ ಏನಪ್ಪಾ ಕೇಳಿದ್ದಾನೆ, ನಿನ್ನಿಂದ ಇವನ ಎತ್ತುಗಳನ್ನು ಹುಷಾರುಮಾಡಲು ಆಗುತ್ತದೆಯೋ ಇಲ್ಲವೋ ಹೇಳು, ಏಕೆ ಹೀಗೆ ಸುಮ್ಮನೆ ಸತಾಯಿಸುತ್ತಿದ್ದೀಯಾ?” ಎಂದು ದೇವರನ್ನು ತರಾಟೆಗೆ ತೆಗೆದುಕೊಂಡ. ಆಂಜನೇಯಸ್ವಾಮಿ ತಟ್ಟನೆ ಬಲಗಡೆಗೆ ಹೂವು ಕೊಟ್ಟ! ಸ್ನಾನಮಾಡಿ ಮಡಿಯುಟ್ಟು ಹೋದವನಿಗೆ ಒಲಿಯದ ದೇವರು ಹಾಳು ಮುಖದಲ್ಲಿ ಹೋದವನಿಗೆ ಒಲಿದಿದ್ದ! ಅವನ ಗಡುಸು ದನಿ ಮತ್ತು ಒರಟುತನದಲ್ಲಿ ದೇವರ ಬಗ್ಗೆ ಅಪಾರ ನಂಬಿಕೆ ಇತ್ತು!
ಈ ಸ್ವಾರಸ್ಯಕರ ಘಟನೆಯನ್ನು ಹಳ್ಳಿಯ ಭಾಷೆಯಲ್ಲಿ ಹಾಸ್ಯಪಟು ಚೆಟ್ನಳ್ಳಿ ಮಹೇಶ್ ಹೇಳುವಾಗ ಸಭೆಗಳಲ್ಲಿ ನಗುವಿನ ಅಲೆ. ಅರಳು ಹುರಿದಂತೆ ಪಟಪಟನೆ ಮಾತನಾಡುವ ವಾಕ್‌ಪಟುತ್ವವನ್ನು ಕರಗತಮಾಡಿಕೊಂಡಿರುವ ಮಹೇಶ್ ಮಾತಿಗೆ ಮನಸೋಲದವರೇ ಇಲ್ಲ. ಇದನ್ನು ಕೇಳಿದಾಗಲೆಲ್ಲಾ ನಮ್ಮ ನೆನಪಿಗೆ ಬರುವುದು ಬೇಡರ ಕಣ್ಣಪ್ಪನ ಕಥೆ. ಶುಚಿರ್ಭೂತನಾಗಿ ಶಾಸ್ತ್ರೋಕ್ತವಾಗಿ ಮಂತ್ರೋಚ್ಚಾರಣೆ ಮಾಡಿ ಪೂಜೆ ಸಲ್ಲಿಸಿದ ಪೂಜಾರಿಗೆ ಒಲಿಯದ ದೇವರು ಕಾಡುಮನುಷ್ಯನಾದ ಆಚಾರವಿಚಾರಗಳನ್ನೇನೂ ತಿಳಿಯದ ಬೇಡರ ಕಣ್ಣಪ್ಪನಿಗೆ ಒಲಿದನೆಂದು ಪುರಾಣಪುಣ್ಯಕಥೆಯಲ್ಲಿ ಕೇಳಿದ್ದೀರಿ. ಭಕ್ತಿಸಂಪನ್ನವಾದ ಹೃದಯ ಭಗವಂತನೊಂದಿಗೆ ಆತ್ಮೀಯ ಸಂಭಾಷಣೆಯಲ್ಲಿ ತೊಡಗುತ್ತದೆ. “ದೇವರಿಗೆ ಹೋಗಬೇಕು ದಾರಿಬಿಡೋ ಪೂಜಾರಿ, ದೇವರಿಗೂ ನನಗೂ ಒಳಮಾತು” ಎಂದು ಪೂಜಾರಿಯನ್ನು ಪಕ್ಕಕ್ಕೆ ಸರಿಸಿ ದೇವರೊಂದಿಗೆ ಆತ್ಮೀಯವಾಗಿ ಮಾತನಾಡಬಯಸುತ್ತಾಳೆ ಜನಪದ ಮಹಿಳೆ, ಬೇಡರ ಕಣ್ಣಪ್ಪನ ಉದಾಹರಣೆಯನ್ನೇ ಕೊಟ್ಟು ದೇವರೊಂದಿಗೆ ಬಸವಣ್ಣನವರು ನಡೆಸಿದ ಭಕ್ತಿಸಂಭಾಷಣೆ ಹೀಗಿದೆ:
ನರ ಕೂರಂಬಿನಲೆಚ್ಚ, ಅವಂಗೊಲಿದೆಯಯ್ಯಾ,
ಅರಳಂಬಿನಲೆಚ್ಚ ಕಾಮನನುರುಹಿದೆಯಯ್ಯಾ.
ಇರುಳು ಹಗಲೆನ್ನದೆ ಪ್ರಾಣಿಘಾತಕವ ಮಾಡಿದ
ಬೇಡನ ಕೈಲಾಸಕೊಯ್ದೆಯಯ್ಯಾ,
ಎನ್ನನೇತಕ್ಕೊಲ್ಲೆ ಕೂಡಲಸಂಗಮ ದೇವಾ?
ಹರಿತವಾದ ಬಾಣಗಳಿಂದ ನಿನ್ನನ್ನು ಹೊಡೆದ ಅರ್ಜುನನಿಗೆ ಪಾಶುಪತಾಸ್ತ್ರವನ್ನು ಅನುಗ್ರಹಿಸಿದೆ. ಕೋಮಲವಾದ ಹೂಬಾಣಗಳನ್ನು ನಿನ್ನ ಮೇಲೆ ಬಿಟ್ಟ ಮನ್ಮಥನನ್ನು ಕೆಂಗಣ್ಣಿನಿಂದ ನೋಡಿ ಸುಟ್ಟು ಬೂದಿಮಾಡಿದೆ. ಕಾಡಿನಲ್ಲಿ ಬೇಟೆಯಾಡಿ ಪ್ರಾಣಿವಧೆ ಮಾಡುತ್ತಿದ್ದ ಬೇಡರ ಕಣ್ಣಪ್ಪನಿಗೆ ಕೈಲಾಸಪದವಿಯನ್ನು ಅನುಗ್ರಹಿಸಿದೆ. ಆದರೆ ನನ್ನ ಮೇಲೆ ನಿನ್ನ ಅನುಗ್ರಹವಿಲ್ಲವೇಕೆ ದೇವರೇ? ಎಂದು ಬಸವಣ್ಣನವರ ಭಕ್ತಿಸಂಪನ್ನ ಹೃದಯ ಕೂಡಲಸಂಗನನ್ನು ತರ್ಕಬದ್ಧವಾಗಿ ಪ್ರಶ್ನಿಸುತ್ತದೆ. ಲೌಕಿಕ ಜೀವನದಲ್ಲಿ ಆತ್ಮೀಯ ಗೆಳೆಯನ ನಡವಳಿಕೆಯನ್ನು ಗಮನಿಸಿ ನಿನಗೇನಾದರೂ ಬುದ್ದಿ ಇದೆಯೇ? ಎಂದು ಕೇಳುವ ಧಾಟಿಯಲ್ಲಿವೆ ಇಲ್ಲಿಯ ಮಾತುಗಳು. ಇದೇ ಧಾಟಿಯಲ್ಲಿ ಪುರಂದರದಾಸರು ಪುರಾಣಪುಣ್ಯಕಥೆಗಳನ್ನು ಉದಾಹರಿಸಿ ತರ್ಕಬದ್ಧವಾದ ವಾದವನ್ನು ಮುಂದಿಟ್ಟು ದೇವರನ್ನು ಹಂಗಿಸುವ ಈ ಮುಂದಿನ ಪದ್ಯವನ್ನು ಗಮನಿಸಿ:
ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರು ಈ ಜಗದೊಳಗೆ ಒಬ್ಬರನು ಕಾಣೆ
ಕಲಹ ಬಾರದ ಮುನ್ನ ಕರ್ಣನನು ನೀ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲನ ಬೇಡುತ ಪೋಗಿ ಬಲಿಯ ತನುವನು ತುಳಿದೆ
ಮೊಲೆಯನುಣಿಸಲು ಬಂದ ಪೂತಿನಿಯ ಕೊಂದೆ
ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯವ ಅರಿಯೆ
ದೊರೆ ಪುರಂದರವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಪುಟ್ಟಲೊಲ್ಲದು ಕೇಳು ಹರಿಯೆ
ದೇವರ ವರ್ತನೆ ತರ್ಕಾತೀತ. ಏಕೆ ಹೀಗೆಂದು ಸಮರ್ಥನೆ ನೀಡಲು ಬರುವುದಿಲ್ಲ. ದೇವರ ವಿಷಯವಾಗಿ ಹೇಳುವಾಗ ಅಘಟಿತಘಟನೆಗಳು ಸಂಭವಿಸುತ್ತವೆಯೆಂಬುದು ಭಕ್ತಿಸಂಪನ್ನ ಹೃದಯದ ಬಲವಾದ ನಂಬಿಕೆ. “ನೀನೊಲಿದರೆ ಕೊರಡು ಕೊನರುವುದಯ್ಯಾ, ನೀನೊಲಿದರೆ ಬರಡು ಹಯನಹುದಯ್ಯಾ, ನೀನೊಲಿದರೆ ವಿಷವು ಅಮೃತವಹುದಯ್ಯಾ” ಎನ್ನುತ್ತಾರೆ ಬಸವಣ್ಣನವರು. ಅದಾವುದನ್ನೂ ಪ್ರಶ್ನೆಮಾಡದೆ “ನಿಮ್ಮ ಮಹಿಮೆಯನ್ನು ನೀವೇ ಬಲ್ಲಿರಿ, ಎನ್ನನುದ್ಧರಿಸಯ್ಯಾ ಶಂಭುಜಕ್ಕೇಶ್ವರ!” ಎಂದು ಶರಣಾಗತಳಾಗುತ್ತಾಳೆ ಹಿರೇಜಂಬೂರಿನ ಸತ್ಯಕ್ಕ.
ದೇವರ ದಯಾಗುಣ, ಭಕ್ತಪರಾಧೀನತೆ, ಅಪಾರ ಶಕ್ತಿ ಹಾಗೂ ಉನ್ನತ ಮಹಿಮೆಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿ ಹಾಡಿ ಸ್ತುತಿಸುವುದು ವಾಡಿಕೆ. ಅದು ಜಪತಪಾದಿಗಳಿಗಿಂತಲೂ ಶ್ರೇಷ್ಠವೆಂಬ ಭಾವನೆ ಇದೆ. ಕೋಟ್ಯನುಕೋಟಿ ಜಪವನು ಮಾಡಿ ಕೋಟಲೆಗೊಳ್ಳಲದೇಕೆ ಮನವೆ? ಕಿಂಚಿತ್ತು ಗೀತವೊಂದು ಅನಂತಕೋಟಿ ಜಪ ಎಂದು ಬಸವಣ್ಣನವರು ಹೇಳುವುದು ಈ ಅರ್ಥದಲ್ಲಿಯೇ. ಲೌಕಿಕ ಬದುಕಿನಲ್ಲಿಯೂ ಸಹ ನಿಂದಿಸುವುದಕ್ಕಿಂತ ಸ್ತುತಿಸುವುದು ಒಳ್ಳೆಯದು ಎಂಬ ಅಭಿಪ್ರಾಯವೇ ಇದೆ. ಕುರುಡಿ ಎನ್ನುವುದಕ್ಕಿಂತ ಚೆನ್ನಕ್ಕ ಎನ್ನುವುದು ಲೇಸು ಎಂಬ ಗಾದೆ ಮಾತೇ ಇದೆ. ಆಗಲೇ ಆ ಚೆನ್ನಕ್ಕ ನಿಮ್ಮ ಪಾತ್ರೆತುಂಬ ಮಜ್ಜಿಗೆ ತಂದು ಸುರಿಯುವುದು. ಒಂದು ವೇಳೆ ನೀವು ಪಾತ್ರೆ ಒಯ್ದಿರದಿದ್ದರೆ ಆಕೆಯ ಮನೆಯ ಪಾತ್ರೆಯನ್ನೇ ಕೊಟ್ಟು ಅದಕ್ಕೆ ಮಜ್ಜಿಗೆ ಸುರಿದು ಮಾತಿಗೆ ಶುರುಹಚ್ಚಿಕೊಳ್ಳುತ್ತಾಳೆ!
ಆದರೆ ಈ ಎಲ್ಲ ಥಿಯರಿಗಳಿಗೆ ವಿಭಿನ್ನವಾಗಿ ದೇವರ ಮಹಿಮೆಯ ಮರೆಯಲ್ಲಿರುವ ಕುಟಿಲತೆ, ಅವಗುಣಗಳನ್ನು ಮುಖಕ್ಕೆ ರಾಚುವಂತೆ ಹೇಳಿ ದೇವರ ಪ್ರಾರ್ಥನೆ ಮಾಡುವ ಪದ್ಧತಿಯೂ ಇದೆ. ಅದೇ ನಿಂದಾಸ್ತುತಿ, ಭಕ್ತನು ದೇವರೊಂದಿಗೆ ಬೆಳೆಸಿಕೊಂಡಿರುವ ಆತ್ಮೀಯತೆಯ ಪ್ರತೀಕವಿದು. ತಾಯಿ ತನ್ನ ಪುಟಾಣಿ ಮಗುವನ್ನು ಚೀ ಕಳ್ಳ ಎಂದು ಮೆಲುದನಿಯಲ್ಲಿ ನಿಂದಿಸುವುದನ್ನು ನೀವು ನೋಡಿದ್ದೀರಿ. ತನ್ನ ಮಗು ಕಳ್ಳನಾಗಬೇಕೆಂಬ ಅಪೇಕ್ಷೆ ಯಾವ ತಾಯಿಗೂ ಇರಲು ಸಾಧ್ಯವಿಲ್ಲ. ಬೊಚ್ಚು ಬಾಯಲ್ಲಿರುವ ಒಂದೆರಡು ಹಲ್ಲು ಕಾಣುವಂತೆ ಕಿಲಕಿಲ ನಕ್ಕು ಆ ನಿಂದನೆಗೆ ಮಗು ಸ್ಪಂದಿಸಿದಾಗ ತಾಯಿಯ ಆನಂದಕ್ಕೆ ಪಾರವೇ ಇಲ್ಲ, ನಿಂದಾಸ್ತುತಿಯ ಪರಿಯೂ ಇದೇ.
ದೇವರು ಮತ್ತು ಭಕ್ತನ ಸಂಬಂಧವನ್ನು ಕುರಿತಂತೆ ಹಲವಾರು ಭಾವಗಳಿವೆ. ಸ್ವಾಮಿ-ಭೃತ್ಯ, ತಂದೆ-ಮಗ, ತಾಯಿ-ಮಗ, ಸತಿ-ಪತಿ, ಸಖ ಇತ್ಯಾದಿ. ಭಕ್ತರು ತಾವು ನಂಬಿದ ದೈವವನ್ನು ತುಂಬಾ ಆಪ್ತವಾದ ಧಾಟಿಯಲ್ಲಿ ಅನುಸಂಧಾನಗೈಯುತ್ತಾರೆ. ದೇವರೊಂದಿಗೆ ನಡೆಸುವ ಅವರ ಭಕ್ತಿ ಸಂಭಾಷಣೆಯಲ್ಲಿ ತಾನು ಭಗವಂತನಿಗೆ ಏನೂ ಕಡಿಮೆ ಇಲ್ಲವೆಂಬ ಭಾವ ಹಣಿಕಿ ಹಾಕುವುದೂ ಉಂಟು. ದೇವರಿಗೆ ಹಸಿವಾದಾಗ ನಾನು ಎಡೆ ಹಿಡಿದು ಉಣಬಡಿಸುತ್ತೇನೆ. ಕುಡಿಯಲು ನೀರು ಕೊಡುತ್ತೇನೆ. ಆ ದೇವರು ದೇವರಾಗಿದ್ದರೆ ನನ್ನನ್ನೇಕೆ ಸಲಹುವುದಿಲ್ಲ? ಎಂದು ಹೃದಯಂಗಮವಾಗಿ ಪ್ರಶ್ನಿಸುತ್ತಾರೆ ಅನುಭಾವಿಯಾದ ಅಲ್ಲಮಪ್ರಭು. ಇಲ್ಲಿ ನಾನು ಎಂಬುದು ಅಹಂಕಾರದ ಮಾತಲ್ಲ. ತನ್ನ ತಾನರಿದು ತಾನಾರೆಂದು ತಿಳಿಯಬಲ್ಲಡೆ ತಾನೇ ದೇವ ಕಾಣಾ ಎಂಬ ಅನುಭಾವ ಮಾತು:
ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರಾ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 29.9.2011