ಶುಭ ಅಶುಭ ಎಲ್ಲಿದೆ?
"Why is the number ten afraid of seven?” (ಹತ್ತರ ಸಂಖ್ಯೆಗೆ ಏಳನ್ನು ಕಂಡರೆ ಏಕೆ ಹೆದರಿಕೆ?) ಅಮೇರಿಕೆಯ ಶಾಲಾ ಮಕ್ಕಳು ಓರಿಗೆಯ ಗೆಳೆಯರೊಂದಿಗೆ ಹರಟುವಾಗ ಕೇಳುವ ಒಂದು ಜಾಣ ಪ್ರಶ್ನೆ. ಅದಕ್ಕೆ ಅವರು ಕೊಡುವ ಅಷ್ಟೇ ಜಾಣ್ಮೆಯ ಉತ್ತರ “Because 7 8 9”, ಪ್ರಶ್ನೆ ಮತ್ತು ಉತ್ತರ ಎರಡೂ ಒಗಟಾಗಿ ಗೋಚರಿಸುತ್ತವೆಯಲ್ಲವೇ? ಉತ್ತರದಲ್ಲಿರುವ ಸಂಖ್ಯೆ ಎಂಟನ್ನು “eight” ಎಂದು ಸಂಖ್ಯೆಯನ್ನಾಗಿ ಓದಿಕೊಳ್ಳದೆ “ate” ಎಂದು ಕ್ರಿಯಾಪದವನ್ನಾಗಿ ಓದಿಕೊಂಡರೆ ಮಕ್ಕಳ ಜಾಣ್ಮೆ ನಿಮಗೆ ಅರ್ಥವಾಗುತ್ತದೆ. ಏಳನೆಯ ಸಂಖ್ಯೆ ಒಂಭತ್ತನ್ನು ತಿಂದುಹಾಕಿದ್ದರಿಂದ (Seven ate nine) ಅದರ ನಂತರ ಬರುವ ಸಂಖ್ಯೆಯಾದ ಹತ್ತಕ್ಕೆ ಏಳನ್ನು ಕಂಡರೆ ಹೆದರಿಕೆ ಎಂದು ಮಕ್ಕಳ ವಿನೋದ! ನಿರ್ಜೀವಿ ಸಂಖ್ಯೆಗಳಿಗೆ ಮನುಷ್ಯರ ಭಾವನೆಗಳನ್ನು ತುಂಬಿ ಜೀವಂತಗೊಳಿಸಿರುವ ಮಕ್ಕಳ ಈ ವಿನೋದ ಪ್ರವೃತ್ತಿ ಮೆಚ್ಚಬೇಕಾದ್ದೇ.
ಹತ್ತರ ಸಂಖ್ಯೆಗೆ ಏಳನ್ನು ಕಂಡರೆ ಭಯ ಎಂಬುದು ಮಕ್ಕಳ ಪರಿಕಲ್ಪನೆಯಾದರೂ ಸಂಖ್ಯೆ 13 ರನ್ನು ಕಂಡರೆ ಅಮೇರಿಕೆಯ ಬಹುಪಾಲು ಜನರಿಗೆ ಭಯ ಎಂಬುದು ವಾಸ್ತವ ಸಂಗತಿ. ಹದಿಮೂರನೆಯ ಸಂಖ್ಯೆ ಅವರ ದೃಷ್ಟಿಯಲ್ಲಿ ಅಶುಭ, 1970 ರಲ್ಲಿ ಅಮೇರಿಕೆಯ ಬಾಹ್ಯಾಕಾಶ ವಿಜ್ಞಾನಿಗಳು ಅಪೋಲೋ ಉಪಗ್ರಹವನ್ನು ಚಂದ್ರನೆಡೆಗೆ ಹಾರಿಸಿದರು. ಆ ಹಿಂದಿನ ಎಲ್ಲ ಉಪಗ್ರಹಗಳು ಯಶಸ್ವಿ ಉಡಾವಣೆಯನ್ನು ಕಂಡಿದ್ದರೂ ಆ ಅಪೋಲೋ ಮಾತ್ರ ಯಶಸ್ವಿಯಾಗಲಿಲ್ಲ, ಉಡಾವಣೆಯಾದ ಕೆಲವೇ ಗಂಟೆಗಳಲ್ಲಿ ಅದರಲ್ಲಿದ್ದ ಆಮ್ಲಜನಕದ ಟ್ಯಾಂಕ್ ಆಕಸ್ಮಿಕವಾಗಿ ಆಸ್ಫೋಟಗೊಂಡಿತ್ತು. ಅಪಾಯವನ್ನರಿತ ವಿಜ್ಞಾನಿಗಳು ಎಚ್ಚರ ವಹಿಸಿ ಉಡಾವಣೆಯನ್ನು ಮಧ್ಯದಲ್ಲಿಯೇ ನಿಲ್ಲಿಸಿ ಬಹಳ ಕಷ್ಟಪಟ್ಟು ಅದರಲ್ಲಿದ್ದ ಗಗನಯಾತ್ರಿಕರನ್ನು ಸಂರಕ್ಷಣೆ ಮಾಡಿದರು. ಉಡಾವಣೆ ಯಶಸ್ವಿಯಾಗದಿರಲು ವಿಜ್ಞಾನಿಗಳು ಕೊಟ್ಟ ಕಾರಣ ಅದರಲ್ಲಿ ಅನಿರೀಕ್ಷಿತವಾಗಿ ಉಂಟಾಗಿದ್ದ ತಾಂತ್ರಿಕ ದೋಷ. ಆದರೆ ಅಮೇರಿಕೆಯ ಜನ ಮಾತನಾಡಿದ್ದು ಅದು 13 ನೆಯ ಸಂಖ್ಯೆಯನ್ನು ಹೊತ್ತಿದ್ದ ಉಪಗ್ರಹ, ಅದನ್ನು ಹಾರಿಸಿದ್ದು 13 ಗಂಟೆ 13 ನಿಮಿಷಕ್ಕೆ, ಹದಿಮೂರನೆಯ ಸಂಖ್ಯೆ ಅಶುಭವಾದ್ದರಿಂದ ಅದು ಯಶಸ್ವಿಯಾಗಲಿಲ್ಲ!
ಹದಿಮೂರನೆಯ ಸಂಖ್ಯೆ ಅಶುಭ ಎಂಬ ಭಯ ಪಾಶ್ಚಾತ್ಯರಲ್ಲಿ ಎಷ್ಟರಮಟ್ಟಿಗೆ ಬೇರೂರಿದೆಯೆಂದರೆ ಅಲ್ಲಿಯ ಪ್ರವಾಸಿಗರಾರೂ ಹೋಟೆಲ್‌ಗಳ 13 ನೇ ಸಂಖ್ಯೆಯ ಕೊಠಡಿಯಲ್ಲಿ ವಾಸವಾಗಿರಲು ಇಷ್ಟಪಡುವುದಿಲ್ಲ. ಇದನ್ನರಿತ ಹೋಟೆಲ್ ಮಾಲೀಕರೂ ಸಹ ತಮ್ಮ ಹೋಟೆಲ್‌ನಲ್ಲಿ 13 ನೆಯ ಕೊಠಡಿಗೆ 13 ಎಂಬ ಸಂಖ್ಯೆಯನ್ನು ಬಳಸದೆ 12ಎ ಎಂದು ನಮೂದಿಸುತ್ತಾರೆ. ಇನ್ನು ಕೆಲವರು ಆ ಕೊಠಡಿಗೆ ಇಂಗ್ಲೀಷ್ ವರ್ಣಮಾಲೆಯಲ್ಲಿ 13 ನೆಯ ಅಕ್ಷರವಾದ M ಬಳಸುತ್ತಾರೆ. ಇದೇ ರೀತಿ ಬಹುಮಹಡಿಯ ಗಗನಚುಂಬಿ ಕಟ್ಟಡಗಳ ವಿನ್ಯಾಸದಲ್ಲಿ 13ನೆಯ ಅಂತಸ್ತು ಇರುವುದಿಲ್ಲ, 13 ನೆಯ ಅಂತಸ್ತು ಇಲ್ಲದೆ ಅದರ ಮೇಲ್ಬಾಗದ ಅಂತಸ್ತುಗಳನ್ನು ನಿರ್ಮಿಸಲು ಹೇಗೆ ಸಾಧ್ಯ ಎಂದು ನಿಮಗೆ ಆಶ್ಚರ್ಯವಾಗಬಹುದು. ಅಲ್ಲಿಯ ಆರ್ಕಿಟೆಕ್ಟ್ ಗಳು ಪ್ರವಾಸಿಗರ ಈ ಮೂಢನಂಬಿಕೆಯನ್ನು ಗಮನದಲ್ಲಿರಿಸಿಕೊಂಡೇ 13 ನೆಯ ಅಂತಸ್ತನ್ನು 14 ಎಂದು ನಮೂದಿಸಿರುತ್ತಾರೆ. ಅಲ್ಲಿಯ ಲಿಫ್ಟ್ ಗಳಲ್ಲಿಯೂ 13 ನೆಯ ಸಂಖ್ಯೆ ಇರುವುದಿಲ್ಲ.
ಪಾಶ್ಚಾತ್ಯರಲ್ಲಿ 13 ನೇ ಸಂಖ್ಯೆ ಅಶುಭ ಎಂಬ ನಂಬಿಕೆ ಎಷ್ಟು ಗಾಢವಾಗಿದೆಯೆಂದರೆ 13 ಜನ ಒಟ್ಟಿಗೆ ಒಂದೇ ಮೇಜಿನ ಬಳಿ ಊಟಕ್ಕೆ ಕೂರುವಂತಿಲ್ಲ. ಲಂಡನ್ ಮಹಾನಗರದಲ್ಲಿ Trafalgar Square ನಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ Savoy Hotel ಎಂಬ ಪ್ರಸಿದ್ದ ಹೋಟೆಲ್ ಇದೆ. ಶತಮಾನಗಳ ಇತಿಹಾಸವುಳ್ಳ ಈ ಹೋಟೆಲ್‌ನಲ್ಲಿ 1898 ರಲ್ಲಿ ಒಂದು ಔತಣಕೂಟ ಏರ್ಪಾಡಾಗಿತ್ತು. ಆ ಔತಣಕೂಟದಲ್ಲಿ 13 ಜನ ಪ್ರತಿಷ್ಠಿತ ವ್ಯಕ್ತಿಗಳು ಭಾಗವಹಿಸಿದ್ದರು. ದುರದೃಷ್ಟವಶಾತ್ ಅವರಲ್ಲೊಬ್ಬರನ್ನು ಆಗಂತುಕನೊಬ್ಬ ಗುಂಡಿಕ್ಕಿ ಕೊಂದನು. ಅಂದಿನಿಂದ ಅನಿವಾರ್ಯವಾಗಿ 13 ಜನರು ಅತಿಥಿಗಳು ಊಟಕ್ಕೆ ಕೂರಲೇ ಬೇಕಾದ ಪ್ರಸಂಗವೇನಾದರೂ ಬಂದರೆ ಅಂಥವರಿಗಾಗಿ ಈ ಹೋಟೆಲ್ ಒಂದು ವಿಶೇಷ ವ್ಯವಸ್ಥೆಯನ್ನು ಮಾಡಿದೆ. 13 ಜನ ಅತಿಥಿಗಳ ಪಕ್ಕದಲ್ಲಿ 14 ನೆಯ ಕುರ್ಚಿಯೊಂದನ್ನು ಹಾಕಲಾಗುತ್ತದೆ. ಆ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮುಖ್ಯ ಅತಿಥಿ ಯಾರು ಗೊತ್ತೇ? Kasper ಎಂಬ ಹೆಸರಿನ ಒಂದು ಕರಿ ಬೆಕ್ಕು! ಅದೂ ನಿಜವಾದ ಬೆಕ್ಕಲ್ಲ. ಮರದಿಂದ ಮಾಡಿದ ಮೂರು ಅಡಿ ಎತ್ತರದ ಒಂದು ಸುಂದರವಾದ ವಿಗ್ರಹ, ಅದರ ಕೊರಳಿಗೆ ಗಂಟೆ ಕಟ್ಟುವ ಬದಲು ನ್ಯಾಪ್ಕಿನ್ ಕಟ್ಟಿ ಎಲ್ಲ ಅತಿಥಿಗಳಿಗೂ ಬಡಿಸಿದಂತೆ ಭಕ್ಷಭೋಜ್ಯಗಳನ್ನು ಬಡಿಸಲಾಗುತ್ತದೆ! ಇದರಿಂದಾಗಿ ಅಂದಿನಿಂದ ಇಂದಿನವರೆಗೆ ಯಾವ ದುರ್ಘಟನೆಗಳೂ ಸಂಭವಿಸಿಲ್ಲವಂತೆ! ಹೀಗೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿ 13 ನೆಯ ಸಂಖ್ಯೆ ಅಶುಭ ಎಂಬ ಬಲವಾದ ನಂಬಿಕೆ ಬರಲು ಬೈಬಲ್‌ನಲ್ಲಿ ಉಲ್ಲೇಖಿತವಾಗಿರುವ “The last Supper” ಎಂಬ ಘಟನೆಯೇ ಕಾರಣ ಎಂದು ಹೇಳುತ್ತಾರೆ. ಏಸುಕ್ರಿಸ್ತನಿಗೆ 12 ಜನ ಶಿಷ್ಯರಿದ್ದರು. ಒಂದು ರಾತ್ರಿ ಏಸುವೂ ಸೇರಿದಂತೆ ಹದಿಮೂರು ಜನರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಅವರಲ್ಲೊಬ್ಬ Judas ಎಂಬ ಶಿಷ್ಯ ಗುರುದ್ರೋಹವನ್ನು ಎಸಗುತ್ತಾನೆ. ಈ ವಿಷಯ ಗೊತ್ತಿದ್ದರೂ ಏಸು ಕಣ್ತಪ್ಪಿಸಿಕೊಂಡು ಹೋಗುವುದಿಲ್ಲ. ಅದರ ಪರಿಣಾಮವಾಗಿ ಮಾರನೆಯ ದಿನ ಏಸು ಶಿಲುಬೆಯನ್ನು ಏರಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಖ್ಯೆ 13 ಅಶುಭ ಎಂದು ಹಣೆಪಟ್ಟಿಯನ್ನು ಪಡೆದಿದೆ ಎನ್ನುತ್ತಾರೆ.
ನಮ್ಮ ದೇಶದಲ್ಲಿ 7 ಮತ್ತು 11 ಸಂಖ್ಯೆಗಳನ್ನು ಅಶುಭ ಎಂದು ಭಾವಿಸುವುದುಂಟು. ಇದರ ಹುಚ್ಚನ್ನು ಹಚ್ಚಿಕೊಂಡು ದೇಶಾಂತರ ತಿರುಗಿ ಮರಣಹೊಂದಿದ ವೈದ್ಯರನ್ನು ನಾವು ಕಣ್ಣಾರೆ ಕಂಡಿದ್ದೇವೆ. ಮಗಳನ್ನು ಮಂಗಳವಾರ ಕಳಿಸಬಾರದು, ಸೊಸೆಯನ್ನು ಶುಕ್ರವಾರ ಕಳಿಸಬಾರದು ಎಂಬ ನಂಬಿಕೆ ನಮ್ಮ ಜನರಲ್ಲಿದೆ. ಯಾವುದೋ ಸಂದರ್ಭದಲ್ಲಿ ಸಂಭವಿಸಿದ ಅಹಿತಕರ ಘಟನೆಗಳು ಈ ಸಂಖ್ಯೆ ಮತ್ತು ದಿನಗಳಿಗೆ ಅಶುಭ ಎಂಬ ಅಪಖ್ಯಾತಿಯನ್ನು ತಂದಿವೆ. ಎಲ್ಲ ಸಂಖ್ಯೆಗಳಂತೆ 420 ಸಹ ಒಂದುಸಂಖ್ಯೆ. ಆದರೆ ಈ ಸಂಖ್ಯೆಗೆ ಕನ್ನಡದಲ್ಲಿಲ್ಲದ ಅರ್ಥ ಇಂಗ್ಲೀಷ್ ಮತ್ತು ಹಿಂದಿಯಲ್ಲಿದೆ. ಹಳ್ಳಿಗರ ಬಾಯಲ್ಲಿ ಅವನು ಬಹಳ four twenty ಮನುಷ್ಯ ಎಂದರೆ ತುಂಬಾ ಕೆಟ್ಟವನು, ಕೇಡಿ, ಮೋಸಗಾರ ಎಂದರ್ಥ. ಅದಕ್ಕೆ ಕಾರಣ ಇಂಡಿಯನ್ ಪೀನಲ್ ಕೋಡಿನ 420 ನೆಯ ಕಲಂನಲ್ಲಿ ನಮೂದಾಗಿರುವ ಕಾನೂನುಬಾಹಿರ ನಡವಳಿಕೆಗಳು. ಅದೇಕೋ ಏನೋ ಕನ್ನಡದಲ್ಲಿ ನಾಲ್ಕು ನೂರಾ ಇಪ್ಪತ್ತು ಎಂದರೆ ಹಿಂದಿಯಲ್ಲಿರುವಂತೆ ಚಾರ್ ಸೌ ಬೀಸ್ (ಮೋಸಗಾರ) ಎಂಬ ಅರ್ಥ ಧ್ವನಿಸುವುದಿಲ್ಲ.
ಚುನಾವಣೆಗಳು ಬಂದಾಗ ಶುಭ ಅಶುಭಗಳ ಲೆಕ್ಕಾಚಾರಕ್ಕೆ ಎಲ್ಲಿಲ್ಲದ ಪ್ರಾಶಸ್ಯ ಬರುತ್ತದೆ. ಚುನಾವಣೆಯ ಪೂರ್ವದಲ್ಲಿ ಯಾವಾವ ಪೂಜೆ, ಹೋಮ, ಹವನ ಮಾಡಿಸುವುದು ಪ್ರಶಸ್ತ ಎಂಬ ಲೆಕ್ಕಾಚಾರ ನಡೆಯುತ್ತದೆ. ಜ್ಯೋತಿಷಿಗಳಿಗಂತೂ ಇದು ಸುವರ್ಣಕಾಲ. ಅಭ್ಯರ್ಥಿಗಳು ತಂತಮ್ಮ ಕುಂಡಲಿಗಳನ್ನು ಹಿಡಿದು ಜ್ಯೋತಿಷಿಗಳ ಬೆನ್ನು ಬೀಳುತ್ತಾರೆ. ತಮ್ಮ ಗ್ರಹಗತಿಗಳನ್ನು ಅನುಸರಿಸಿ ಯಾವ ದಿನ ನಾಮಪತ್ರ ಸಲ್ಲಿಸಬೇಕು, ಯಾವ ದಿನ ಪ್ರಚಾರ ಆರಂಭಿಸಬೇಕು, ಎಲ್ಲಿಂದ ಆರಂಭಿಸಬೇಕು ಎಂದು ಜ್ಯೋತಿಷಿಗಳಿಂದ ಸಲಹೆ ಪಡೆಯುತ್ತಾರೆ. ತಮ್ಮನ್ನು ಸೋಲಿಸುವವರಾಗಲೀ ಗೆಲ್ಲಿಸುವವರಾಗಲೀ ಮತದಾರರೇ ಎಂಬುದನ್ನು ತಿಳಿದಿದ್ದರೂ ತಮ್ಮ ನಂಬುಗೆಯ ಜ್ಯೋತಿಷಿಯ ಸಲಹೆಯನ್ನು ಆಧರಿಸಿಯೇ ಎಲ್ಲ ಪ್ರಕ್ರಿಯೆಗಳನ್ನು ಅಭ್ಯರ್ಥಿಗಳು ಆರಂಭಿಸುತ್ತಾರೆ.
ಕರ್ನಾಟಕದಲ್ಲಿ ಚಾಮರಾಜ ನಗರಕ್ಕೆ ಯಾವ ಮುಖ್ಯ ಮಂತ್ರಿಯೂ ಅಪ್ಪಿ ತಪ್ಪಿ ಕಾಲಿಡುವುದಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದರೆ ಅವರು ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ ಎಂಬ ನಂಬಿಕೆ ಇದೆ. ಇದನ್ನು ಕಳೆಯಲು ಕೇರಳದಿಂದ ಋತ್ವಿಜರನ್ನು ಕರೆಸಿ ಅಲ್ಲಿನ ಚಾಮರಾಜೇಶ್ವರ ದೇವಸ್ಥಾನದಲ್ಲಿ ಶಾಂತಿ ಮಾಡಿಸಿದ್ದಾರೆ. ಇನ್ನು ಮುಂದೇನಾದರೂ ಈ ಊರಿನ ಅನಿಷ್ಟ ಪರಿಹಾರವಾಗಿ ಹೊಸ ಮುಖ್ಯಮಂತ್ರಿ ಕಾಲಿಡುವ ಸಾಹಸ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಹೃದಯ ಓದುಗರೇ! ಈ ವಿಷಯ ಕುರಿತು ಬರೆಯಲು ಕಾರಣ ಇಂದು ದಿನಾಂಕ 13. ಇದನ್ನು ಓದಿದ ಮೇಲೆ ನೀವು ರಜೆ ಹಾಕಿ ಮನೆಯಲ್ಲಿ ಇರುತ್ತೀರೋ ಅಥವಾ ಕೆಲಸಾರ್ಥ ಹೊರಗೆ ಹೋಗುತ್ತೀರೋ? ಶುಭ ಅಶುಭ ಎಂಬುದು ಯಾವುದೇ ಸಂಖ್ಯೆ, ದಿನ ಅಥವಾ ವಸ್ತುವಿನಲ್ಲಿ ಇಲ್ಲ. ಅದನ್ನು ಪರಿಭಾವಿಸುವ ಮನಸ್ಸಿನಲ್ಲಿದೆ. ಧೃಡವಾದ, ಪವಿತ್ರವಾದ, ಪರಿಶುದ್ದ ಹೃದಯ ಮತ್ತು ಸಂಕಲ್ಪ ಶಕ್ತಿ ಇರುವವನಿಗೆ ಎಲ್ಲ ದಿನಗಳೂ ಶುಭವೆ. ದೇವರನ್ನು ನಂಬಿ ಬದುಕಿನ ಮಾರ್ಗದಲ್ಲಿ ನಡೆಯುವವನಿಗೆ ಬದುಕಿನ ಕಷ್ಟಗಳೂ ಸುಖದ ಮತ್ತೊಂದು ಮಗ್ಗುಲೇ ಆಗಿರುತ್ತವೆ. ಅವನಿಗೆ ಬಿಸಿಲೂ ಸಹ ಬೆಳದಿಂಗಳಾಗುತ್ತದೆ:
ಅಂದು ಇಂದು ಮತ್ತೊಂದೆನಬೇಡ
ದಿನವಿಂದೇ ಶಿವಶರಣೆಂಬವಂಗೆ;
ದಿನವಿಂದೇ ಹರಶರಣೆಂಬವಂಗೆ;
ದಿನವಿಂದೇ ನಮ್ಮ ಕೂಡಲ ಸಂಗನ ಮಾಣದೆ ನೆನೆವಂಗೆ. - (ಬಸವಣ್ಣನವರು)
ಸಕಲ ಗ್ರಹಬಲ ನೀನೆ ಸರಸಿಜಾಕ್ಷ
ನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೆ
ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ
ದಿವರಾತ್ರಿಯು ನೀನೆ ನವ ವಿಧಾನವು ನೀನೆ
ಭವರೋಗಹರ ನೀನೆ ಭೇಷಜನು ನೀನೆ.
-(ಪುರಂದರದಾಸರು)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 13.10.2011