ನಂಬಿಕೆ-ಅಪನಂಬಿಕೆ-ಮೂಢನಂಬಿಕೆ
ರಾಣೇಬೆನ್ನೂರು ತಾಲ್ಲೂಕಿನ ಒಂದು ಹಳ್ಳಿ. ಅದರ ಹೆಸರು ಆಣೂರು. ಆ ಹಳ್ಳಿಯಿಂದ ಹಿರಿಯ ವಯಸ್ಸಿನ ಯಜಮಾನರೊಬ್ಬರು ತಮ್ಮ ಮಗನ ಮದುವೆಗೆ ನಮ್ಮನ್ನು ಆಹ್ವಾನಿಸಲು ಮಠಕ್ಕೆ ಬಂದಿದ್ದರು. ಕಾರ್ಯಗಳ ಒತ್ತಡದಲ್ಲಿ ಒಪ್ಪಿಕೊಳ್ಳಲು ಆಗಿರಲಿಲ್ಲ. ತುಂಬಾ ಭಕ್ತಿಸಂಪನ್ನರಾದ ಆ ಯಜಮಾನರಿಗೆ ನಮ್ಮನ್ನು ಕರೆಸದೆ ಮಗನ ಮದುವೆ ಮಾಡಲು ಸುತರಾಂ ಇಷ್ಟವಿರಲಿಲ್ಲ. ನಮ್ಮ ಕಾರಣಕ್ಕಾಗಿ ಅವರ ಮಗನ ಮದುವೆ ಮುಂದಕ್ಕೆ ಹೋಯಿತು. ಮದುವೆಯ ಕನಸನ್ನು ಕಾಣುತ್ತಿರುವ ಮದುಮಕ್ಕಳು ನಮ್ಮನ್ನು ಬಯ್ದುಕೊಂಡಿರಬೇಕು ಎನಿಸಿತು. ಗುರುಗಳ ಸಮ್ಮುಖದಲ್ಲಿಯೇ ತಮ್ಮ ಮಗನ ಮದುವೆ ಮಾಡಬೇಕೆಂಬ ಉತ್ಕಟೇಚ್ಛೆ ಆ ಯಜಮಾನರದಾಗಿತ್ತು. “ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದು” ಎಂದು ಬಸವಣ್ಣನವರು ಹೇಳುವಂತೆ ಕೊನೆಗೂ ಅವರು ನಮ್ಮನ್ನು ಒಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅನೇಕ ಬಾರಿ ಮಠಕ್ಕೆ ಬಂದಿದ್ದ ಅವರನ್ನು ನಿರಾಸೆಗೊಳಿಸಲು ಇಷ್ಟವಿರಲಿಲ್ಲ. ನಮಗೆ ಅನುಕೂಲವಾದ ದಿನಾಂಕವನ್ನು ಸೂಚಿಸಿದಾಗ ಅವರಿಗೆ ಉಂಟಾದ ಸಂತೋಷಕ್ಕೆ ಪಾರವೇ ಇಲ್ಲ. ಮದುವೆಯ ದಿನದಂದು ಇಡೀ ಊರಿನ ಜನರ ಸಂಭ್ರಮ ಹೇಳತೀರದು. ಊರ ಹೊರವಲಯದಿಂದ ಮದುವೆ ಮನೆಯವರೆಗೆ ತಳಿರು ತೋರಣ ಕಟ್ಟಿ, ಬೀದಿಗೆ ನೀರು ಸಿಂಪಡಿಸಿ, ಭಜನೆ ಮತ್ತು ಮಂಗಳವಾದ್ಯದೊಂದಿಗೆ ನಮ್ಮನ್ನು ಬರಮಾಡಿಕೊಂಡರು.
ಮನೆಯೊಳಗೆ ಕಾಲಿರಿಸಿದಾಗ ಮನೆಯ ಯಜಮಾನರು ಪಾದಪೂಜೆಗೆಂದು ಅಣಿಮಾಡಿಕೊಂಡಿದ್ದರು. ಹಳೆಯ ಕಾಲದ ಮನೆ. ಬೆಳಕು ಅಷ್ಟಾಗಿ ಇರಲಿಲ್ಲ. ಮನೆ ನೋಡಾ ಬಡವರು, ಮನ ಘನ ಸಂಪನ್ನರು ಎಂಬ ಬಸವಣ್ಣನವರ ವಚನ ನೆನಪಾಯಿತು. ಪುರೋಹಿತರ ಮಂತ್ರೋಚ್ಚಾರಣೆಯೊಂದಿಗೆ ದೀಪದ ಮಂದ ಬೆಳಕಿನಲ್ಲಿಯೇ ಪೂಜೆ ಆರಂಭವಾಯಿತು. ಬಂಧುಬಾಂಧವರು ಮನೆಯೊಳಗೆ ಕಿಕ್ಕಿರಿದು ಸುತ್ತುವರಿದಿದ್ದರು. ಗಾಳಿಯಾಡಲೂ ಸ್ಥಳವಿರಲಿಲ್ಲ. ಶಿಷ್ಯರು ಭಾವಪರವಶರಾಗಿ ಪೂಜೆ ಸಲ್ಲಿಸುವಾಗ ನಮ್ಮ ಕಣ್ಣುಗಳು ಅಕ್ಕಪಕ್ಕದಲ್ಲಿಟ್ಟಿರುವ ಜೋಡಿದೀಪಗಳ ಮೇಲೆ, ಕರ್ಪೂರದಾರತಿಯ ಮೇಲೆ ಇರುತ್ತವೆ. ಕಾರಣ ದೀಪದ ಶಿಖೆ ಮೈಮರೆತು ಪೂಜೆಯಲ್ಲಿ ತಲ್ಲೀನರಾದ ಶಿಷ್ಯರ ಬಟ್ಟೆಗೆ ಎಲ್ಲಿ ತಗುಲುತ್ತದೆಯೋ ಎಂಬ ಆತಂಕ ನಮಗೆ ಆ ದಿನ ಎಂದೂ ಘಟಿಸದ ಘಟನೆ ನಡೆದುಹೋಯಿತು. ನಮ್ಮ ಆತಂಕ ನಿಜವಾಯಿತು. ಆದರೆ ದೀಪದ ಶಿಖೆ ತಗುಲಿದ್ದು ಶಿಷ್ಯರ ಬಟ್ಟೆಗಲ್ಲ, ನಮ್ಮ ಬಟ್ಟೆಗೆ! ಮಹಿಳೆಯೊಬ್ಬಳು ಆರತಿ ಬೆಳಗಿ ಪಕ್ಕದಲ್ಲಿಟ್ಟಿದ್ದ ಕಳಶದ ದೀಪ ನಮ್ಮ ಮೊಣಕಾಲ ಬಳಿ ಪಂಜೆಗೆ ಹೊತ್ತಿಕೊಂಡು ಉರಿಯಲಾರಂಭಿಸಿತು. ಅದನ್ನು ನಮಗಿಂತ ಮೊದಲು ಗಮನಿಸಿದ ತಾಯಂದಿರು ಹೌಹಾರಿ ಕೂಡಲೇ ನಂದಿಸಿದರು. ಆಗಲೇ ಅಂಗೈಯಗಲಕ್ಕೆ ಬಟ್ಟೆ ಸುಟ್ಟಿದ್ದರೂ ನಮಗೆ ಏನೂ ಆಗಿರಲಿಲ್ಲ. ನಮ್ಮನ್ನು ಆಹ್ವಾನಿಸಿದ್ದ ಯಜಮಾನರಿಗೆ ದಿಗಿಲಾಯಿತು. ತನ್ನಿಂದ ಗುರುಗಳಿಗೆ ಅಪಚಾರವಾಯಿತಲ್ಲಾ ಎಂದು ಖಿನ್ನಗೊಂಡ ಅವರು ಇದರಿಂದ ಮುಂದೆ ಯಾವ ವಿಪತ್ತು ತನಗೆ ಕಾದಿದೆಯೋ ಏನೋ ಎಂದು ಚಿಂತಾಕ್ರಾಂತರಾದರು. ಎಷ್ಟು ಸಮಾಧಾನಪಡಿಸಿದರೂ ಉದ್ವಿಗ್ನಗೊಂಡ ಅವರ ಮನಸ್ಸು ತಿಳಿಗೊಳಲಿಲ್ಲ. ತನ್ನಿಂದ ಎಂತಹ ಪ್ರಮಾದವಾಯಿತಲ್ಲಾ ಎಂದು ದುಃಖಿಸತೊಡಗಿದರು. ಅವರ ಆಲೋಚನಾಲಹರಿಯನ್ನೇ ಅನುಸರಿಸಿ ಭವಿಷ್ಯದಲ್ಲಿ ನಿಮ್ಮ ಮನೆತನದಲ್ಲಿ ಆಗಬಹುದಾದ ದೊಡ್ಡ ದುರಂತ ಈ ಘಟನೆಯಿಂದ ತಪ್ಪಿಹೋಯಿತೆಂದು ತಿಳಿಯಿರಿ ಎಂದು ಹೇಳಿದಾಗ ಆ ಯಜಮಾನರು ಸ್ವಲ್ಪಮಟ್ಟಿಗೆ ಸಮಾಧಾನದ ನಿಟ್ಟುಸಿರುಬಿಟ್ಟರು. ಈಗಲೂ ಅವರು ನಮಗೆ ಸಿಕ್ಕಾಗ ಹಾಗೆ ಆಗಬಾರದಾಗಿತ್ತು ಎಂದು ತಮ್ಮ ಮನಸ್ಸಿನ ಅಳಲನ್ನು ತೋಡಿಕೊಳ್ಳುತ್ತಾರೆ. ಏನೂ ಚಿಂತಿಸಬೇಡಿ ದೇವರಲ್ಲಿ ನಂಬಿಕೆ ಇಟ್ಟು ಧೈರ್ಯವಾಗಿರಿ ಎಂದು ನಾವು ಹೇಳುತ್ತಲೇ ಬಂದಿದ್ದೇವೆ.
ವಿಚಾರವಂತರಿಗೆ ಇದೊಂದು ಆಕಸ್ಮಿಕ ಘಟನೆ; ಭಕ್ತಿಸಂಪನ್ನರಿಗೆ ಇದು ಆಘಾತಕಾರಿ ಘಟನೆ, ವಿಚಾರವಂತರು ಈ ಘಟನೆಯನ್ನು ಆಕಸ್ಮಿಕವೆಂದು ಎಷ್ಟೇ ತರ್ಕಬದ್ಧವಾಗಿ ಬಣ್ಣಿಸಿದರೂ ಇಂತಹ ಘಟನೆಗಳಿಂದ ಅವರಿಗೆ ಮುಜುಗರ (embarrassment) ಆಗುವುದಂತೂ ಖಚಿತ. ಇಂತಹ ಸಂದರ್ಭಗಳಲ್ಲಿ ಅವರು “I am sorry” ಎಂದು ಕ್ಷಮಾಯಾಚನೆ ಮಾಡಿ ಕೈಚೆಲ್ಲುತ್ತಾರೆ. ಭಕ್ತಿಸಂಪನ್ನರು ಹಾಗಲ್ಲ. ಇಂತಹ ಘಟನೆಗಳಿಂದ ಅವರು ಮುಂದೆ ಏನಾಗಬಹುದೋ ಏನೋ ಎಂಬ ಆತಂಕ, ಭಯ ಹಾಗೂ ತಲ್ಲಣಗಳಿಗೆ ಒಳಗಾಗುತ್ತಾರೆ. ಅದರ ಪರಿಹಾರಕ್ಕಾಗಿ ಜ್ಯೋತಿಷ್ಯದ ಮೊರೆ ಹೋಗುತ್ತಾರೆ. ಮುಳುಗುವವನಿಗೆ ಹುಲ್ಲುಕಡ್ಡಿ ಆಶ್ರಯವಾಯಿತು ಎಂಬಂತೆ ಜ್ಯೋತಿಷಿಗಳು ಸೂಚಿಸುವ ಹೋಮ, ಹವನ, ಸಂಧಿಶಾಂತಿಗಳನ್ನು ಮಾಡಿಸಿ ಮನಸ್ಸಿಗೆ ನೆಮ್ಮದಿಯನ್ನು ಪಡೆಯುತ್ತಾರೆ.
ಒಬ್ಬ ಊಟ ಮಾಡುತ್ತಿರುವಾಗ ಗೋಡೆಯ ಮೇಲೆ ಹಲ್ಲಿ ಓಡಾಡುತ್ತಿರುವುದನ್ನು ನೋಡಿದ. ಇನ್ನೊಂದು ತುತ್ತನ್ನು ಉಂಡು ಮೇಲೆ ನೋಡಿದಾಗ ಹಲ್ಲಿ ಅಲ್ಲಿರಲಿಲ್ಲ. ಹಲ್ಲಿ ತನ್ನ ತಟ್ಟೆಯಲ್ಲಿಯೇ ಬಿದ್ದು ಅದನ್ನು ನುಂಗಿದ್ದೇನೆಂಬ ಭ್ರಮೆ ಅವನಿಗೆ ಉಂಟಾಯಿತು. ವಾಂತಿ ಮಾಡುವಂತಾಯಿತು, ಆದರೆ ವಾಂತಿಯಾಗಲಿಲ್ಲ. ಜಾಣನೊಬ್ಬ ಅವನಿಗೆ ವಾಂತಿಯ ಮದ್ದನ್ನು ಕೊಟ್ಟ. ವಾಂತಿಯಾಗುತ್ತಿರುವಾಗ ಕಣ್ಮರೆಸಿ ಮೊದಲೇ ತನ್ನಲ್ಲಿ ಅಡಗಿಸಿಟ್ಟುಕೊಂಡಿದ್ದ ಹಲ್ಲಿಯನ್ನು ವಾಂತಿಯಲ್ಲಿ ಹಾಕಿದ. ನೋಡಿಲ್ಲಿ ನೀನು ನುಂಗಿದ್ದ ಹಲ್ಲಿ ಹೊರಬಂದಿದೆ ಎಂದು ಜಾಣ ತೋರಿಸಿದ. ಉಂಡವನು ಅವನ ಮಾತನ್ನು ನಂಬಿ ನಿರಾಳನಾದ. ಚಿಕಿತ್ಸಕ ಮಾಡಿದ್ದು ಬೇರೇನೂ ಅಲ್ಲ; ಉಂಡವನ ಮನೋದೌರ್ಬಲ್ಯದ ಹಲ್ಲಿಯನ್ನು ಹೊರಹಾಕಿದ್ದ!
ಮಕ್ಕಳು ಅಳುವಾಗ ತಾಯಂದಿರು ಹಂಚಿಕಡ್ಡಿಗೆ ಬೆಂಕಿ ಹಚ್ಚಿ ನಿವಾಳಿಸಿ ಮೂಲೆಯಲ್ಲಿಡುತ್ತಾರೆ. ಅದು ಚಟಚಟನೆ ಸಿಡಿದು ಬೂದಿಯಾದಾಗ ಬೂದಿಯನ್ನು ಮಗುವಿನ ಹಣೆಗೆ ಹಚ್ಚುತ್ತಾರೆ. ಮಾನಸಿಕ ಕಿರಿಕಿರಿಗೆ ಒಳಗಾದ ಮಗು ಈ ನಿವಾಳಿಸುವ ಪ್ರಕ್ರಿಯೆಯನ್ನು ತನ್ಮಯವಾಗಿ ನೋಡುವುದರಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದರಿಂದ ಅಳುವನ್ನು ನಿಲ್ಲಿಸುತ್ತದೆ. ಮನಶ್ಯಾಸ್ತ್ರವನ್ನು ಬಲ್ಲ ನಮ್ಮ ಹಿರಿಯರು ಕಂಡುಕೊಂಡ ಉಪಾಯಗಳು ಇವು.
ಬೆಕ್ಕು, ಕಾಗೆ ಅಡ್ಡಬಂದರೆ ಕಾರನ್ನು ನಿಲ್ಲಿಸುವ ಅಳ್ಳೆದೆಯ ಚಾಲಕರು ಇದ್ದಾರೆ. ಆ ಬೆಕ್ಕು ಅಥವಾ ಕಾಗೆಗಳಿಗೆ ನೀವು ಎಲ್ಲಿಗೆ ಹೋಗುತ್ತೀರೆಂದು ಏನು ಗೊತ್ತು? ಅವು ತಮ್ಮ ಪಾಡಿಗೆ ತಾವು ಆಹಾರವನ್ನು ಹುಡುಕಿಕೊಂಡು ಹೋಗುತ್ತಿರುತ್ತವೆ. ವಾಸ್ತವವಾಗಿ ನಿಮ್ಮ ವಾಹನವೇ ಅವುಗಳಿಗೆ ಅಡ್ಡ ಬಂದಿರುವುದು. ಅವುಗಳ ಮೇಲಿನ ಕರುಣೆಯಿಂದ ನೀವು ನಿಮ್ಮ ವಾಹನವನ್ನು ನಿಲ್ಲಿಸಿದರೆ ಅಭ್ಯಂತರವಿಲ್ಲ. ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಅತಿಯಾದ ವೇಗದಿಂದ ಸಂಭವಿಸುವ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸರನ್ನು ನೇಮಿಸುವ ಬದಲು ಹೆಚ್ಚು ಹೆಚ್ಚು ಬೆಕ್ಕುಗಳನ್ನೂ, ಕಾಗೆಗಳನ್ನೂ ಶ್ವಾನದಳದಂತೆ ನೇಮಿಸಿಕೊಳ್ಳುವುದು ಒಳ್ಳೆಯದೆಂದು ತೋರುತ್ತದೆ. ಬೇಕಾದರೆ ಅವುಗಳಿಗೆ ಮಾರ್ಜಾಲದಳ, ಕಾಕಪಡೆ ಎಂದು ಹೆಸರಿಡಬಹುದು. ಅವು ಯಾವ ಚಾಲಕರ ಜೇಬನ್ನೂ ಕತ್ತರಿಸುವುದಿಲ್ಲ; ಯಾವ ತುಟ್ಟಿಭತ್ಯಯನ್ನು ಕೇಳುವುದಿಲ್ಲ!
ಶಕುನ ಅಪಶಕುನಗಳಲ್ಲಿ ನಂಬಿಕೆ ಇಡುವುದು, ಕಟ್ಟಡ ನಿರ್ಮಾಣದಲ್ಲಿ ವಾಸ್ತುದೋಷ ಕಾಣುವುದು ಇತ್ಯಾದಿಗಳು ದುರ್ಬಲ ಮನಸ್ಸಿನ ಪ್ರತೀಕ. ಅನೇಕ ರಣರಂಗಗಳಲ್ಲಿ ಹೋರಾಡಿ ಅಪ್ರತಿಮವೀರನೆನಿಸಿದ ಅರ್ಜುನನೂ ಸಹ “ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ” ಎಂದು ಅನೇಕ ಅಪಶಕುನಗಳನ್ನು ಕಂಡು ಕುರುಕ್ಷೇತ್ರದಲ್ಲಿ ಯುದ್ಧಮಾಡಲು ಹಿಂಜರಿದ ಪ್ರಸಂಗ ಭಗವದ್ಗೀತೆಯ ಆರಂಭದ ಅಧ್ಯಾಯದಲ್ಲಿ ಬರುತ್ತದೆ.
ಭಯ ಮತ್ತು ಅಜ್ಞಾನಗಳಿಂದ ಉಂಟಾದ ಅತಾರ್ಕಿಕ ನಂಬಿಕೆಯೇ ಮೂಢನಂಬಿಕೆ. ಮನುಷ್ಯ ಹಲವು ನಂಬಿಕೆಗಳನ್ನು ಮೀಟುಗೋಲಾಗಿಸಿಕೊಂಡು ಭವಸಾಗರದ ಹರಿಗೋಲಿನಲ್ಲಿ ಸಾಗುತ್ತಾನೆ. ಅಂತಹ ನಂಬಿಕೆ ಅಥವಾ ವಿಶ್ವಾಸಗಳನ್ನು ಬುದ್ಧಿಯಿಂದ ಅಳೆಯುವುದಾಗಲೀ ವ್ಯಾಖ್ಯಾನಿಸುವುದಾಗಲೀ ಸಾಧ್ಯವಿಲ್ಲ. ನಂಬಿಕೆ ಮತ್ತು ಮೂಢನಂಬಿಕೆಗಳ (Faith and Superstition) ಮಧ್ಯೆ ಗೆರೆ ಎಳೆಯುವುದು ಬಹಳ ಕಷ್ಟ. ಒಬ್ಬರ ನಂಬಿಕೆ ಮತ್ತೊಬ್ಬರಿಗೆ ಮೂಢನಂಬಿಕೆಯಾಗಿ ಕಾಣಬಹುದು. ಮೂಢನಂಬಿಕೆಯುಳ್ಳವರು ಪ್ರಜ್ಞಾವಂತರನ್ನು ನಂಬಿಕೆ ಇಲ್ಲದ ಸಂದೇಹವಾದಿಗಳು ಎಂದು ಆರೋಪಿಸುತ್ತಾರೆ. ಪ್ರಜ್ಞಾವಂತರು ಅಂಥವರನ್ನು ಬುದ್ದಿ ಇಲ್ಲದ ಮೂಢರು ಎಂದು ಮೂದಲಿಸುತ್ತಾರೆ. ಇಬ್ಬರದೂ ವಿಭಿನ್ನ ಮನಃಸ್ಥಿತಿ. ಮೂಢನಂಬಿಕೆಯಲ್ಲಿ ಕಾರ್ಯಕಾರಣ ಭಾವ ಇರುವುದಿಲ್ಲ. ಮೂಢನಂಬಿಕೆಯನ್ನು ತರ್ಕದ ನಿಕಶಕ್ಕೆ ಒಡ್ಡಿದಂತೆ ನಂಬಿಕೆಯನ್ನು ಒಡ್ಡಲು ಬರುವುದಿಲ್ಲ, ಅದು ತರ್ಕಾತೀತ.
ಜ್ಯೋತಿಷ್ಯವನ್ನು ಖಗೋಳ ವಿಜ್ಞಾನವನ್ನಾಗಿ ಒಪ್ಪಿಕೊಳ್ಳಬಹುದೇ ಹೊರತು ಆಕಾಶದಲ್ಲಿರುವ ಗ್ರಹ ನಕ್ಷತ್ರಗಳು ಮನುಷ್ಯನ ಜೀವನವನ್ನು ನಿಯಂತ್ರಿಸಬಲ್ಲವೇ ಎಂಬುದು ವಿವಾದಾಸ್ಪದ ವಿಚಾರ. ರಾಹುಕಾಲ, ಗುಳಿಕಕಾಲದ ಲೆಕ್ಕಾಚಾರ ಹಾಕುವ ಜನರು ಈ ಕೆಳಕಂಡ ವಿವೇಕದ ಮಾತುಗಳನ್ನು ಅರ್ಥಮಾಡಿಕೊಳ್ಳುವುದು ಒಳ್ಳೆಯದು:
ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ,
ರಾಶಿ-ಕೂಟ-ಋಣಸಂಬಂಧ ಉಂಟೆಂದು ಹೇಳಿರಯ್ಯಾ,
ಚಂದ್ರಬಲ, ತಾರಾಬಲ ಉಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ - (ಬಸವಣ್ಣನವರು)
ಪಕ್ಷ ಮಾಸವು ನೀನೆ ಪರ್ವಕಾಲವು ನೀನೆ,
ನಕ್ಷತ್ರ ಯೋಗ ತಿಥಿಕರಣ ನೀನೆ,
ಎನ್ನೊಡೆಯ ಪುರಂದರವಿಠಲನೆ
ಶ್ರುತಿಗೆ ಸಿಲುಕದ ಅಪ್ರತಿಮ ಮಹಿಮ ನೀನೆ - (ಪುರಂದರದಾಸರು)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 13.10.2011