ಬಂಜರು ಭೂಮಿಯೊಳೊಂದು ಬೆಳೆ
ಒಂದು ಸಂತೆಯಲ್ಲಿ ತರಕಾರಿ ಮಾರುವ ಅಜ್ಜಿಯೊಬ್ಬಳು ಕುಳಿತಿರುತ್ತಾಳೆ, ತರಕಾರಿ ಖರೀದಿಸಲು ಒಬ್ಬ ಮಹಿಳೆ ಬರುತ್ತಾಳೆ. ಏನನ್ನೋ ಕೊಂಡುಕೊಳ್ಳಲು ಬಯಸಿ ಇದರ ಬೆಲೆ ಎಷ್ಟು? ಎಂದು ಕೇಳುತ್ತಾಳೆ. ಅಷ್ಟರಲ್ಲಿ ಒಬ್ಬ ರೈತ ಬರುತ್ತಾನೆ. ಅವನ ಎತ್ತು ತಪ್ಪಿಸಿಕೊಂಡು ಹೋಗಿರುತ್ತದೆ. ಅಜ್ಜಿ, ಈ ದಾರಿಯಲ್ಲಿ ಎತ್ತು ಹೋಗಿದ್ದನ್ನು ನೋಡಿದೆಯಾ?” ಎಂದು ಕೇಳುತ್ತಾನೆ. ಅಜ್ಜಿಯು ಇಬ್ಬರಿಗೂ ಒಂದೇ ಉತ್ತರ ಕೊಡುತ್ತಾಳೆ: “ನಾಕಾಣೆ”! ತರಕಾರಿ ಖರೀದಿಸಲು ಬಂದ ಮಹಿಳೆ ಅದನ್ನು ಕೇಳಿ ತಾನು ಕೊಂಡುಕೊಳ್ಳಲು ಬಯಸಿದ ತರಕಾರಿಯ ಬೆಲೆ ನಾಲ್ಕು ಆಣೆ ಎಂದು ಅಜ್ಜಿ ಹೇಳಿದಳೆಂದು ತಿಳಿದುಕೊಳ್ಳುತ್ತಾಳೆ. ಎತ್ತು ಕಳೆದುಕೊಂಡ ರೈತ ಆ ದಾರಿಯಲ್ಲಿ ಎತ್ತು ಹೋಯಿತೇ ಇಲ್ಲವೇ ಎಂಬ ವಿಚಾರವಾಗಿ ಅಜ್ಜಿ ನನಗೆ ಗೊತ್ತಿಲ್ಲ ಎಂದು ಹೇಳಿದಳೆಂದು ತಿಳಿದುಕೊಳ್ಳುತ್ತಾನೆ.
ಇನ್ನೊಂದು ಪ್ರಕರಣ, ಅಡಿಗೆಮನೆಯಲ್ಲಿ ಮಗಳು ತಾಯಿಯನ್ನು ಅಮ್ಮಾ, ಒಲೆಯ ಮೇಲೆ ಏನು ಇಡಲಿ?” ಎಂದು ಕೇಳುತ್ತಾಳೆ. ಅಷ್ಟರಲ್ಲಿ ಶಾಲೆಗೆ ಹೋಗುವ ಮಗ ಓಡೋಡಿ ಬಂದು "ಅಮ್ಮಾ, ಇಂದು ಸ್ಕೂಲ್ ಇದೆಯಾ?” ಎಂದು ಕೇಳುತ್ತಾನೆ. ಇಬ್ಬರಿಗೂ ತಾಯಿ ಒಂದೇ ಉತ್ತರ ಕೊಡುತ್ತಾಳೆ: Holiday!” ಅದನ್ನು ಕೇಳಿ ಮಗಳು ಒಲೆಯ ಮೇಲೆ ಹಾಲು ಇಡಲು (ಹಾಲಿಡೆ) ತಾಯಿ ಹೇಳಿದಳೆಂದು ತಿಳಿದುಕೊಳ್ಳುತ್ತಾಳೆ. ಇಂದು ಶಾಲೆಗೆ ರಜಾ ಇದೆ ಎಂದು ತಾಯಿ ಹೇಳಿದಳೆಂದು ಮಗ ತಿಳಿದುಕೊಳ್ಳುತ್ತಾನೆ. ಇದರಿಂದ ಇನ್ನೊಂದು ಅರ್ಥವೂ ಧ್ವನಿಸುತ್ತದೆ: ಮಗಳು ಸರಕಾರ ಇತ್ತೀಚೆಗೆ ಮುಚ್ಚಲು ಬಯಸಿದ್ದ ಕನ್ನಡ ಶಾಲೆಗೆ ಹೋಗುವ ಅಪ್ಪಟ ಕನ್ನಡದ ಹುಡುಗಿ ಇರಬೇಕು, ಮಗ ಇಂಗ್ಲೀಷ್ ಕಾಂನ್ವೆಂಟಿಗೆ ಹೋಗುವ ಕಂಗ್ಲೀಷ್ ಹುಡುಗ ಇರಬೇಕು!
ಇಂತಹ ಹಲವು ಪ್ರಸಂಗಗಳನ್ನು ನಿರೂಪಿಸಿ ಇಬ್ಬರಿಗೂ ಒಂದೇ ಉತ್ತರ ಕೊಡಬೇಕು, ಏನದು? ಎಂದು ಕೇಳಿ ಮಕ್ಕಳು ನಿಮ್ಮನ್ನು ತಬ್ಬಿಬ್ಬಾಗಿಸಬಹುದು. ನಿಮ್ಮಿಂದ ಉತ್ತರ ಕೊಡಲು ಸಾಧ್ಯವಾಗದಿದ್ದಾಗ ಅವರೇ ಉತ್ತರಿಸಿ ಖುಷಿಪಡುವುದನ್ನು ನೀವು ನೋಡಿರಬಹುದು. ಮಕ್ಕಳು ಇಂತಹ ಪ್ರಶ್ನೆ ಕೇಳಿದಾಗ ನಿಮಗೆ ಉತ್ತರ ಗೊತ್ತಿದ್ದರೂ ಗೊತ್ತಿಲ್ಲವೆಂದು ನಟಿಸಬೇಕು. ಆಗ ಮಕ್ಕಳಿಗೆ ಆಗುವ ಆನಂದ ಅಸದಳ. ಒಂದೇ ಶಬ್ದಕ್ಕೆ ಸಂದಾರ್ಭಾನುಸಾರ ವಿಭಿನ್ನ ಅರ್ಥವಿರುವ ವಿಚಾರವಾಗಿ ಸಂಸ್ಕೃತ ಕಾವ್ಯಮೀಮಾಂಸೆಯಲ್ಲಿ (poetics) ಕೊಡುವ ಪ್ರಸಿದ್ದ ಉದಾಹರಣೆಯೆಂದರೆ: ಸೈಂಧವಮಾನಯ. ಸಂಸ್ಕೃತದಲ್ಲಿ ಸೈಂಧವ ಶಬ್ದಕ್ಕೆ ಉಪ್ಪು ಮತ್ತು ಕುದುರೆ ಎಂದು ಎರಡು ಅರ್ಥಗಳಿವೆ. ಊಟಕ್ಕೆ ಕುಳಿತಾಗ ಸೈಂಧವಮಾನಯ ಎಂದರೆ “ಉಪ್ಪನ್ನು ತಾ ಎಂದು ತಿಳಿದುಕೊಳ್ಳಬೇಕು. ಯುದ್ಧಕ್ಕೆ ಹೊರಟಾಗ ಸೈಂಧವಮಾನಯ ಎಂದರೆ ಕುದುರೆಯನ್ನು ತೆಗೆದುಕೊಂಡು ಬಾ ಎಂದು ತಿಳಿದುಕೊಳ್ಳಬೇಕು. ಊಟಕ್ಕೆ ಕುಳಿತಾಗ ಕುದುರೆಯನ್ನು ತಂದು ನಿಲ್ಲಿಸಿದರೆ, ಯುದ್ಧಕ್ಕೆ ಹೊರಟಾಗ ಉಪ್ಪನ್ನು ತಂದುಕೊಟ್ಟರೆ ಎಂತಹ ಆಭಾಸ!
ಹಲವು ಪ್ರಶ್ನೆಗಳಿಗೆ ಒಂದೇ ಉತ್ತರವನ್ನು ನೀಡುವ ಈ ತರಹದ ಜಾಣೆಯ ಪ್ರಸಂಗ ಪ್ರಮುಖ ಉಪನಿಷತ್ತುಗಳಲ್ಲಿ ಒಂದಾದ ಬೃಹದಾರಣ್ಯಕದಲ್ಲಿ ಬರುತ್ತದೆ. ಒಮ್ಮೆ ದೇವತೆಗಳು, ಮನುಷ್ಯರು ಮತ್ತು ರಾಕ್ಷಸರು ಸೃಷ್ಟಿಕರ್ತನಾದ ಪ್ರಜಾಪತಿಯ ಹತ್ತಿರ ಹೋಗಿ ಅನೇಕ ವರ್ಷಗಳ ಕಾಲ ಅಧ್ಯಯನ ಮಾಡುತ್ತಾರೆ. ಅಧ್ಯಯನ ಪರಿಸಮಾಪ್ತಿಗೊಂಡ ಮೇಲೆ ಪ್ರಜಾಪತಿಯಿಂದ ಬೀಳುವಾಗ “ನಮಗೆ ತಮ್ಮ ಕೊನೆಯ ಸಂದೇಶವೇನು? ಎಂದು ಕೇಳುತ್ತಾರೆ. ಅದಕ್ಕೆ ಪ್ರಜಾಪತಿ ಎಲ್ಲರಿಗೂ ದ ಎಂಬ ಒಂದೇ ಒಂದು ಅಕ್ಷರದ ಸಂದೇಶ ನೀಡಿ, ಅರ್ಥವಾಯಿತೇ?” ಎಂದು ಕೇಳುತ್ತಾನೆ. ಎಲ್ಲರೂ ಹೌದು ಎಂದು ತಲೆಯಲ್ಲಾಡಿಸುತ್ತಾರೆ. ಏನೆಂದು ಅರ್ಥಮಾಡಿಕೊಂಡಿರಿ?” ಎಂದು ಪ್ರಜಾಪತಿ ಮುಂದುವರಿದು ಕೇಳಿದಾಗ ಅವರು ಹೀಗೆ ಹೇಳುತ್ತಾರೆ:
ದೇವತೆಗಳು: ದ ಎಂದರೆ ದಾಮೃತ ಎಂದರ್ಥ; ಅಂದರೆ ನೀವು ತುಂಬ ವಿಷಯಲೋಲುಪರು, ಸಂಯಮದಿಂದ ವರ್ತಿಸಿರಿ ಎಂದು ತಾವು ನಮಗೆ ಸಂದೇಶ ನೀಡಿದ್ದೀರಿ.
ಮನುಷ್ಯರು: ದ ಎಂದರೆ ದತ್ತ ಎಂದರ್ಥ; ಅಂದರೆ ನೀವು ತುಂಬಾ ಸ್ವಾರ್ಥಿಗಳು, ಲೋಭಿಗಳು, ದಾನಧರ್ಮ ಮಾಡಿರಿ ಎಂದು ತಾವು ನಮಗೆ ಸಂದೇಶ ನೀಡಿದ್ದೀರಿ.
ರಾಕ್ಷಸರು: ದ ಎಂದರೆ ದಯಧ್ವಮ್ ಎಂದರ್ಥ; ಅಂದರೆ ನೀವು ತುಂಬಾ ಕೂರಿಗಳು, ದಯಾಗುಣವನ್ನು ಬೆಳೆಸಿಕೊಳ್ಳಿರಿ ಎಂದು ತಾವು ನಮಗೆ ಸಂದೇಶ ನೀಡಿದ್ದೀರಿ.
ಮೂವರೂ ಮೂರು ರೀತಿಯಲ್ಲಿ ಅರ್ಥಮಾಡಿಕೊಂಡಿದ್ದರೂ ನೀವು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದೀರಿ ಎಂದು ಪ್ರಜಾಪತಿ ಮೆಚ್ಚುಗೆ ವ್ಯಕ್ತಪಡಿಸಿ ಸಂತುಷ್ಟಿಯಿಂದ ಅವರನ್ನು ಬೀಳ್ಕೊಡುತ್ತಾನೆ. ಇದು ದೇವತೆಗಳು, ಮನುಷ್ಯರು ಮತ್ತು ರಾಕ್ಷಸರ ಸ್ವಭಾವಕ್ಕೆ ಅನುಗುಣವಾಗಿಯೇ ಇದೆ. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನ ಆಳದಲ್ಲಿ ತಾನು ಮಾಡುತ್ತಿರುವ ತಪ್ಪುಗಳ ಅರಿವು ಹೇಗೆ ಸುಪ್ತವಾಗಿ ಇರುತ್ತದೆ ಎಂಬುದರ ಪ್ರತೀಕ (Symbol) ಇಲ್ಲಿದೆ. ವಿಷಯಲೋಲುಪತೆ, ಸ್ವಾರ್ಥ, ಕೌರ್ಯ ಅನುಕ್ರಮವಾಗಿ ದೇವತೆಗಳು, ಮನುಷ್ಯರು ಮತ್ತು ರಾಕ್ಷಸರಲ್ಲಿ ಮಾತ್ರ ಇರದೆ ಈ ಮೂರೂ ದುರ್ಗುಣಗಳು ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿವೆ ಎಂಬುದನ್ನು ಇಲ್ಲಿ ಮನಗಾಣಬೇಕು. ಇದನ್ನೇ ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ ಹೀಗೆ ವಿವರಿಸಿದ್ದಾರೆ: “ನ ದೇವಾ ಅಸುರಾ ವಾsನ್ನೇ ಕೇಚನ ವಿದ್ಯಂತೇ ಮನುಷೋಭ್ಯಃ” ಅಂದರೆ ದೇವತೆಗಳಾಗಲೀ, ರಾಕ್ಷಸರಾಗಲೀ ಮತ್ತಾರೇ ಆಗಲಿ ಮನುಷ್ಯರನ್ನು ಬಿಟ್ಟು ಬೇರೆ ಇಲ್ಲ. ದೈವೀಗುಣಗಳು, ರಾಕ್ಷಸೀಗುಣಗಳು ಎಲ್ಲಾ ಇರುವುದು ಮನುಷ್ಯನಲ್ಲಿಯೇ,
ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಈ ರೋಚಕ ಕಥಾಪ್ರಸಂಗ ಪ್ರಸಿದ್ದ ಆಂಗ್ಲ ಕವಿ T.S Eliot ಮೇಲೆ ತುಂಬಾ ಪ್ರಭಾವ ಬೀರಿದೆ. ಅವನು ರಚಿಸಿದ “The Waste Land” ಎಂಬ ಸುದೀರ್ಘ ಕವಿತೆಯಲ್ಲಿ ಮೇಲೆ ವಿವರಿಸಿದ ಪ್ರಜಾಪತಿಯ ಏಕಾಕ್ಷರ ಸಂದೇಶವಿದೆ. ಅದರ ವಿಭಿನ್ನಾರ್ಥಗಳನ್ನು ಸೂಚಿಸುವ ದಾಮೃತ, ದತ್ತ, ದಯಧ್ವಮ್ ಎಂಬ ಮೂರೂ ಸಂಸ್ಕೃತ ಶಬ್ದಗಳು ಇಂಗ್ಲೀಷ್ ಕವಿತೆಯಲ್ಲಿ ಯಥಾವತ್ತಾಗಿ ಬಳಕೆಯಾಗಿವೆ. ಆದರೆ ಕವಿ ಈ ಶಬ್ದಗಳನ್ನು ಬಳಸಿರುವ ಕ್ರಮ (ದತ್ತ, ದಯಧ್ವಂ, ದಾಮ್ಯತ) ಮತ್ತು ಸನ್ನಿವೇಶ ಮಾತ್ರ ಬೇರೆ. ಮೂಲ ಕವಿತೆಯ ಆಯ್ದಭಾಗ ನಮ್ಮ ಭಾವಾನುವಾದದೊಂದಿಗೆ ಹೀಗಿದೆ:
Ganga was sunken, and the limp leaves