ಶಾಂತಿವನದಿಂದ ಬೃಂದಾವನಕ್ಕೆ
ಜನಸಾಮಾನ್ಯರು ರೈಲುಬಸ್ಸುಗಳಲ್ಲಿ ಪ್ರಯಾಣಿಸುವುದಕ್ಕೂ ಸ್ಥಾನಮಾನವುಳ್ಳವರು ವಿಮಾನದಲ್ಲಿ ಪ್ರಯಾಣಿಸುವುದಕ್ಕೂ ಒಂದು ಪ್ರಮುಖವಾದ ವ್ಯತ್ಯಾಸವಿದೆ. ಜನಸಾಮಾನ್ಯರು ಪ್ರಯಾಣದ ಅವಧಿಯಲ್ಲಿ ಪಕ್ಕದಲ್ಲಿ ಕುಳಿತವರನ್ನು ಯಾವುದೇ ಬಿಗುಮಾನವಿಲ್ಲದೆ ಮಾತನಾಡಿಸುತ್ತಾರೆ. ಔಪಚಾರಿಕವಾಗಿ ಆರಂಭವಾದ ಅವರ ಸಂಭಾಷಣೆ ಕ್ರಮೇಣ ಆತ್ಮೀಯತೆಯ ಸ್ವರೂಪವನ್ನು ಪಡೆದು ಅದುವರೆಗೆ ಅಪರಿಚಿತರಾಗಿದ್ದವರು ಒಂದೆರಡು ಗಂಟೆಗಳ ಪ್ರಯಾಣದಲ್ಲಿ ಜನ್ಮಜನ್ಮಾಂತರದ ಬಂಧುಗಳಾಗಿಬಿಡುತ್ತಾರೆ. ವಿಮಾನಗಳಲ್ಲಿ ಪ್ರಯಾಣಿಸುವವರು ಹಾಗಲ್ಲ, ಅವರು ದೊಡ್ಡ ದೊಡ್ಡ ಸ್ಥಾನಮಾನವುಳ್ಳವರು, ಶ್ರೀಮಂತರು, ಬಿಗಿದುಟಿಯ ಬಿಗುಮಾನದವರು. ಬ್ಯುಸಿನೆಸ್ ಅಥವಾ ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ಪಯಣಿಸುವ VIP ಗಳಂತೂ ಸುಕೋಮಲೆಯರಾದ ಗಗನಸಖಿಯರಿಗಿಂತಲೂ ಸುಕುಮಾರರು! ಅವರು ಧರಿಸಿರುವ ಕೋಟುಗಳನ್ನು ಪ್ರಯಾಣದ ವೇಳೆ ಒಪ್ಪ ಓರಣವಾಗಿ ಇಡಲು ಗಗನಸಖಿಯರ ಸಹಾಯವೇ ಬೇಕು. ವಿಮಾನದೊಳಗೆ ಕೋಟುಗಳನ್ನಿಡಲು ಇರುವ ತಾಣಕ್ಕೆ ಸ್ವತಃ ಹೋಗಿ ಹ್ಯಾಂಗರ್‌ಗೆ ಹಾಕಿ ಇಡುವುದು ಅವರ ಗೌರವಕ್ಕೆ ಕುಂದೋ ಅಥವಾ ಹಾಗೆ ಇಡಲು ವಿಮಾನಯಾನದಲ್ಲಿ ಅವಕಾಶ ಇಲ್ಲವೋ ಕೇಳಲು ಸಾಧ್ಯವಾಗಿಲ್ಲ. ಧರಿಸಿದ ಕೋಟನ್ನು ಬಿಚ್ಚಿ ಗಗನಸಖಿಯರ ಕೈಗೆ ಕೊಡುವಾಗ ಅವರ ಮುಖದಲ್ಲಿ ಮೂಡುವ ಮಂದಹಾಸ ಅಸದೃಶ! ಗಗನಸಖಿಯರಿಗೆ ಮಂದಹಾಸ ಬೀರುವ ಅವರು ಪಕ್ಕದಲ್ಲಿ ಕುಳಿತಿರುವವರನ್ನು ಮಾತನಾಡಿಸುವುದಿರಲಿ ಕಣ್ಣೆತ್ತಿಯೂ ಸಹ ನೋಡುವುದಿಲ್ಲ. ಅಪರಿಚಿತರಾಗಿ ವಿಮಾನವೇರಿದವರು ಅಪರಿಚಿತರಾಗಿಯೇ ಇಳಿದುಹೋಗುತ್ತಾರೆ. ಅಂಥವರನ್ನು ನೋಡಿದಾಗಲೆಲ್ಲಾ ನಮಗೆ ನೆನಪಾಗುವುದು ಬಸವಣ್ಣನವರ ಈ ಮುಂದಿನ ವಚನ: “ಹಾವ ತಿಂದವರ ನುಡಿಸಬಹುದು, ಗರ ಹೊಡೆದವರ ನುಡಿಸಬಹುದು, ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ...!” (ಹಾವು ಕಚ್ಚಿದವರನ್ನು ಮಾತನಾಡಿಸಬಹುದು, ಭೂತ ಹಿಡಿದವರನ್ನು ಮಾತನಾಡಿಸಬಹುದು, ಶ್ರೀಮಂತಿಕೆಯ ಭೂತ ಹಿಡಿದವರನ್ನು ಮಾತ್ರ ಮಾತನಾಡಿಸುವದು ಬಹಳ ಕಷ್ಟ).
ಆದರೆ ಈ ವಚನವನ್ನು out of the context ತೆಗೆದುಕೊಂಡು ವಿಮಾನದಲ್ಲಿ ಪ್ರಯಾಣಿಸುವವರೆಲ್ಲರನ್ನೂ ಶ್ರೀಮಂತಿಕೆಯ ಅಥವಾ ದೊಡ್ಡಸ್ತಿಕೆಯ ಭೂತ ಹಿಡಿದವರು ಎಂದು ಆಪಾದಿಸುವುದು ಸರಿಯಾಗಲಾರದು. ಪಕ್ಕದಲ್ಲಿ ಕುಳಿತಿರುವವರು ತಮ್ಮ ದೈನಂದಿನ ವ್ಯವಹಾರದಲ್ಲಿ ದಣಿದು ಬಂದಿರಬಹುದು, ಪ್ರಯಾಣದ ಅವಧಿಯಲ್ಲಿ ಅವರು ದಣಿವಾರಿಸಿಕೊಳ್ಳಲು ಬಯಸಿರಬಹುದು. ಅವರನ್ನು ಮಾತಿಗೆ ಎಳೆದು ಕಿರಿಕಿರಿಯುಂಟುಮಾಡಬಾರದು, ಅವರ privacy ಗೆ ಧಕ್ಕೆಯುಂಟುಮಾಡಬಾರದು ಎಂದು ಮೌನ ಧರಿಸುವುದು ನವನಾಗರೀಕ ಸಮಾಜದ ಒಂದು ಸಭ್ಯ ನಡವಳಿಕೆಯೂ ಹೌದು. ಹಾಗೆಂದು ಕೆಲವಾರು ಗಂಟೆಗಳ ಪ್ರಯಾಣದಲ್ಲಿ ಪಕ್ಕದಲ್ಲಿರುವವರೊಂದಿಗೆ ಒಂದೂ ಮಾತು ಆಡದೆ ಸುಮ್ಮನೆ ಕುಳಿತುಕೊಳ್ಳುವುದೂ ಸಹ ಇನ್ನೊಂದು ರೀತಿಯ ಅಸಭ್ಯ ನಡವಳಿಕೆಯೆಂದೇ ನಮ್ಮ ಭಾವನೆ. “ಏನಿ ಬಂದಿರಿ? ಹದುಳವಿದ್ದಿರಾ? ಎಂದರೆ ನಿಮ್ಮ ಮೈಸಿರಿ ಹಾರಿಹೋಹುದೇ?” (ಏನ್ ಬಂದ್ರಿ, ಚೆನ್ನಾಗಿದ್ದೀರಾ? ಎಂದು ಕೇಳಿದರೆ ನಿಮ್ಮ ಶ್ರೀಮಂತಿಕೆ ಹಾಳಾಗಿ ಹೋಗುತ್ತದೆಯೇ?) ಎಂದು ಪ್ರಶ್ನಿಸುತ್ತಾರೆ ಬಸವಣ್ಣನವರು. ಅನೇಕ ವೇಳೆ ಪಕ್ಕದಲ್ಲಿರುವವರನ್ನು ಮಾತನಾಡಿಸಬೇಕೇ ಇಲ್ಲವೇ ಎಂಬುದನ್ನು ನಿರ್ಧರಿಸುವುದೇ ಒಂದು ದೊಡ್ಡ ಸವಾಲಾಗುತ್ತದೆ. ಮಾತನಾಡಿಸಬೇಕೆಂದು ಬಯಸಿದರೂ ಅಪರಿಚಿತ ಸಹಪ್ರಯಾಣಿಕರ ಪ್ರತಿಕ್ರಿಯೆ ಹೇಗಿರಬಹುದೆಂದು ಊಹಿಸುವುದು ಕಷ್ಟ. ಸೀಟಿನಲ್ಲಿ ಕುಳಿತುಕೊಳ್ಳುವಾಗ ಸೌಜನ್ಯಕ್ಕಾಗಿ ಒಂದೆರಡು ಉಭಯಕುಶಲೋಪರಿ ಮಾತುಗಳನ್ನಾಡಲು ಯಾರ ಅಭ್ಯಂತರವೂ ಇರುವುದಿಲ್ಲ. ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡಿಕೊಂಡು ನಂತರ ಮಾತು ಮುಂದುವರಿಸಬೇಕೇ ಬೇಡವೇ ಎಂದು ನಿರ್ಧರಿಸುವುದು ಒಳ್ಳೆಯದು. ಅನೇಕ ವರ್ಷಗಳ ನಮ್ಮ ಅನುಭವದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಗಳಲ್ಲಿ ಯಾರೂ ಹೆಚ್ಚು ಮಾತನಾಡಲು ಅಷ್ಟಾಗಿ ಇಷ್ಟಪಡುವುದಿಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅಪರಿಚಿತರೊಂದಿಗೆ ಮಾತನಾಡಬಾರದೆಂದು ಅಲ್ಲಿಯ ತಾಯಂದಿರು ಮಕ್ಕಳಿಗೆ ಹೇಳಿಕೊಡುತ್ತಾರೆ. ಅಪರಿಚಿತರು ಏನನ್ನಾದರೂ ತಿನ್ನಲು ಕೊಟ್ಟರೆ ತೆಗೆದುಕೊಳ್ಳಬಾರದೆಂದೂ ಅವರು ಮಕ್ಕಳಿಗೆ ಕಲಿಸಿಕೊಟ್ಟಿರುತ್ತಾರೆ. ಈಗೀಗಲಂತೂ ಪ್ರತಿಯೊಬ್ಬ ಪ್ರತಿಷ್ಠಿತ ಪ್ರಯಾಣಿಕರ ಹತ್ತಿರವೂ laptop ಅಥವಾ I-pad ಇದ್ದು ಎಲ್ಲರೂ ಅವರವರ ವ್ಯವಹಾರಗಳಲ್ಲಿ ಮಗ್ನರಾಗಿಬಿಡುತ್ತಾರೆ. ಭೂಮಿಯ ಮೇಲಿರುವ ಅವರ ಕಛೇರಿಯಲ್ಲಿ ದೊರೆಯದ ಅನಿರ್ಬಾಧಿತ ಸಮಯ ಅವರಿಗೆ ಆಗಸದಲ್ಲಿ ದೊರೆಯುತ್ತದೆ. ಪಕ್ಕದಲ್ಲಿರುವ ಜೀವಂತವ್ಯಕ್ತಿಯೊಂದಿಗೆ ಮಾತನಾಡುವುದಕ್ಕಿಂತ ನಿರ್ಜೀವ ಯಂತ್ರದೊಂದಿಗೇ ಅವರ ಸಂವಾದ ಹೆಚ್ಚು!
ವಿಮಾನಯಾನದ ಬಗ್ಗೆ ಇಷ್ಟೆಲ್ಲಾ ಬರೆಯಲು ಕಾರಣ ಕಳೆದ ವಾರ ಸಿರಿಗೆರೆಯ ಶಾಂತಿವನದಿಂದ ಹೊರಟು ಬೆಂಗಳೂರು-ದೆಹಲಿ ಮಾರ್ಗವಾಗಿ ಬೃಂದಾವನಕ್ಕೆ ಪಯಣಿಸುವಾಗ ಪಕ್ಕದ ಸೀಟಿನಲ್ಲಿ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ಕುಳಿತಿದ್ದರು. ಉಭಯ ಕುಶಲೋಪರಿಯ ನಂತರ “May I know you?” ಎಂಬ ನಮ್ಮ ಪ್ರಶ್ನೆಗೆ ಅವರಿಂದ ದೊರೆತ ಪ್ರತಿಕ್ರಿಯೆ ಮೇಲಿನ ಮಾತುಗಳಿಗೆ ಅಪವಾದವೋ ಎನ್ನುವ ರೀತಿಯಲ್ಲಿತ್ತು. ಬೆಂಗಳೂರಿನಿಂದ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಳಿಯುವರೆಗೂ ನಮ್ಮಿರ್ವರ ಮಧ್ಯೆ ಆತ್ಮೀಯವಾದ ಸುದೀರ್ಘ ಸಂಭಾಷಣೆ ನಡೆಯಿತು. ಅವರು ನಮ್ಮ ದೇಶದ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ Rear Admiral, 1971 ರಲ್ಲಿ ಭಾರತ-ಪಾಕಿಸ್ತಾನದ ಮಧ್ಯೆ ನಡೆದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುದ್ಧನೌಕೆ ವಿಕ್ರಾಂತ್ ಈಗ ನಿಷ್ಕ್ರಿಯಗೊಂಡು ಮೂಜಿಯಂ ಸೇರಿದ್ದು ಅದರ ಜಾಗದಲ್ಲಿ ಬಂದಿರುವ ಆಧುನಿಕ ಯುದ್ಧನೌಕೆ ವಿಕ್ರಮಾದಿತ್ಯ ಕುರಿತು ನೀಡಿದ ಅವರ ವಿವರಣೆ ರೋಮಾಂಚನವನ್ನುಂಟುಮಾಡಿತು. ದೇಶಕ್ಕಾಗಿ ಅವರು ಸಲ್ಲಿಸುತ್ತಿರುವ ಸೇವೆಯ ಬಗ್ಗೆ ಪ್ರಶಂಶೆಯ ಮಾತುಗಳನ್ನಾಡಿದಾಗ ಅವರಿಂದ ಬಂದ ಪ್ರತಿಕ್ರಿಯೆ “I have not made any big sacrifice. I am just doing my job for which I am paid” (ನನ್ನದೇನೂ ದೊಡ್ಡ ತ್ಯಾಗವಲ್ಲ: ನನ್ನ ಕರ್ತವ್ಯವನ್ನು ನಾನು ಮಾಡುತ್ತಿದ್ದೇನೆ, ಅದಕ್ಕಾಗಿ ನಾನು ವೇತನವನ್ನು ಪಡೆಯುತ್ತಿದ್ದೇನೆ). ನಮ್ಮ ಸಂಭಾಷಣೆಯ ಮಧ್ಯೆ ಆಹಾರಪಾನೀಯಗಳನ್ನು ವಿತರಿಸಲು ಬಂದ ಗಗನಸಖಿ ಅವರನ್ನು “Veg or Non-veg?” ಎಂದು ಕೇಳಿದಳು. ಅವರು ಕ್ಷಣಕಾಲ ಚಿಂತಿಸಿ ಸಸ್ಯಾಹಾರವನ್ನು ಕೇಳಿ ಪಡೆದರು. ನೌಕಾಪಡೆಯಲ್ಲಿರುವ ಆ ಹಿರಿಯ ಅಧಿಕಾರಿ ಆರೋಗ್ಯದ ಕಾರಣಕ್ಕಾಗಿ ಸಸ್ಯಾಹಾರ ಪಡೆದಿರಬಹುದು ಎಂಬ ನಮ್ಮ ಊಹೆ ತಪ್ಪಾಗಿತ್ತು. ಅವರು ಮಾಂಸಾಹಾರದ ಬದಲು ಸಸ್ಯಾಹಾರವನ್ನು ಪಡೆದದ್ದು ನಮ್ಮ ಕಾರಣಕ್ಕಾಗಿ. ನಮ್ಮ ಎದುರಿಗೆ ಮಾಂಸಾಹಾರವನ್ನು ಸೇವಿಸಿ ನಮಗೆ ಮುಜುಗರವನ್ನುಂಟುಮಾಡಬಾರದೆಂಬುದು ಅವರ ಅಂತರಂಗದ ಆಶಯವಾಗಿತ್ತು! ದೇಶದ ರಕ್ಷಣೆಯ ಹೊಣೆ ಹೊತ್ತ ನೌಕಾಪಡೆಯ ಹಿರಿಯ ಅಧಿಕಾರಿಯ ಆ ನಿರ್ಧಾರದ ಹಿಂದಿರುವ ಸಾತ್ವಿಕತೆ ಮತ್ತು ಧರ್ಮಭೀರುತ್ವ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತು. ಮನಸ್ಸಿಗೆ ಮೌನ ಆವರಿಸಿತು.
ಒಂದೆರಡು ದಿನಗಳ ಹಿಂದೆ ನಡೆದ ಇನ್ನೊಂದು ಘಟನೆ ಮಿಂಚಿನಂತೆ ಸುಳಿಯಿತು. ಹರಿಹರ ತಾಲ್ಲೂಕಿನ ಮೂಲೆಯಲ್ಲಿರುವ ಒಂದು ಹಳ್ಳಿ. ಅದರ ಹೆಸರು ಕೆಂಚನಹಳ್ಳಿ, ಅಲ್ಲಿಯ ಒಂದು ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದ ಮಾರನೆಯ ದಿನವೇ ಆ ಗ್ರಾಮದ ಹಿರಿಯರು ಮತ್ತೆ ಸಿರಿಗೆರೆಗೆ ಬಂದಿದ್ದರು. “ಏನು ಬಂದಿರಿ? ಎಂದು ವಿಚಾರಿಸಿದಾಗ ಅವರು ಏನೋ ತಪ್ಪು ಮಾಡಿದವರಂತೆ ಗದ್ಗದಿತರಾಗಿದರು. ಹರಿವಾಣದ ತುಂಬ ತಂದಿದ್ದ ಹಣ್ಣುಕಾಯಿಗಳನ್ನು ಮುಂದಿಟ್ಟು ಅದರ ಮಧ್ಯೆ ಕಾಣಿಕೆಯನ್ನಿಟ್ಟು “ನಿನ್ನೆ ಹಳ್ಳಿಯಲ್ಲಿ ನಡೆದ ನಮ್ಮ ಕಾರ್ಯಕ್ರಮದಲ್ಲಿ ಗುರುಕಾಣಿಕೆ ಕೊಡುವುದನ್ನು ಮರೆತು ಅಪರಾಧ ಮಾಡಿದ್ದೇವೆ, ದಯಮಾಡಿ ಸ್ವೀಕರಿಸಿ ಕ್ಷಮಿಸಬೇಕು” ಎಂದು ಭಾವಪರವಶರಾಗಿ ನುಡಿದರು. ಅವರ ಹಳ್ಳಿಗೆ ಹೋದಾಗ ಹಾರತುರಾಯಿ ಸಮರ್ಪಿಸಿ ತುಂಬಾ ಗೌರವದಿಂದಲೇ ಬರಮಾಡಿಕೊಂಡಿದ್ದರು. ಭಕ್ತಾದಿಗಳು ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿದ್ದರು. ಆದರೆ ಗ್ರಾಮದ ವತಿಯಿಂದ ಗುರುಕಾಣಿಕೆಯನ್ನು ಸಮರ್ಪಿಸಿಲ್ಲವೆಂಬ ಅಪರಾಧಿಪ್ರಜ್ಞೆ ಅವರನ್ನು ಬಲವಾಗಿ ಕಾಡಿಸಿತ್ತು. ಕೇಳಲಾಗದು ಜಂಗಮ, ಕೇಳಿಸಿಕೊಳ್ಳಲಾಗದು ಭಕ್ತ ಎಂಬ ಬಸವಣ್ಣನವರ ವಚನ ನೆನಪಾಯಿತು.
ನಮ್ಮ ಯಾತ್ರೆಯ ಉದ್ದೇಶ “ಭಕ್ತಿ ಮತ್ತು ಸಂನ್ಯಾಸ” ಎಂಬ ವಿಷಯ ಕುರಿತು ಬೃಂದಾವನದಲ್ಲಿ ಏರ್ಪಾಡಾಗಿದ್ದ ಮೂರು ದಿನಗಳ ರಾಷ್ಟ್ರೀಯ ಸಂವಾದಗೋಷ್ಠಿ, ಮೇಲಿನ ಎರಡೂ ಘಟನೆಗಳು ಗೋಷ್ಠಿಯ ವಿಷಯಕ್ಕೆ ಹೊಸ ಭಾಷ್ಯವನ್ನು ಬರೆದಂತಿದ್ದವು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ 22.12.2011
ಬಿಸಿಲು ಬೆಳದಿಂಗಳು