ಅಜ್ಞಾತ ಓದುಗರ ಪರವಾಗಿ ಸ್ವೀಕರಿಸಿದ ಆದಿಕವಿ ಪುರಸ್ಕಾರ

  •  
  •  
  •  
  •  
  •    Views  

ಹಾಭಾರತದ ಪಾಂಡವರಂತೆ ಇಡೀ ಒಂದು ವರ್ಷ ಕಾಲ ಮಠದ ಶಾಂತಿವನದಲ್ಲಿ ನಮ್ಮ ಅಜ್ಞಾತವಾಸ! ಆದರೆ ಪಗಡೆ ಆಟದಿಂದ ಅಲ್ಲ, ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಾಣುವಿನ ಅಟ್ಟಹಾಸದಿಂದ. ಒಂದು ವರ್ಷದ ಈ ಕಾಲಾವಧಿ ಯಲ್ಲಿ ಶಾಂತಿವನದಿಂದ ಮೂರೇ ಕಿ.ಮೀ. ದೂರದಲ್ಲಿರುವ ಸಿರಿಗೆರೆಗೆ ಮೂರೇ ಮೂರು ಬಾರಿ ನಮ್ಮ ಭೇಟಿ: ಕಳೆದ ಸೆಪ್ಟೆಂಬರ್ 24ರಂದು ನಮ್ಮ ಪರಮಾರಾಧ್ಯ ಗುರುವರ್ಯರ ಶ್ರದ್ಧಾಂಜಲಿ ದಿನದಂದು ಅವರ ಗದ್ದುಗೆಗೆ ಭಕ್ತಿ ಸಮರ್ಪಣೆ ಮಾಡಲು ಹೋದಾಗ, ಡಿಸೆಂಬರ್ ತಿಂಗಳಿನಲ್ಲಿ ನಡೆದ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡಲು ಹೋದಾಗ ಮತ್ತು ಶಾಲೆಗಳು ಪುನರಾರಂಭವಾದ ಮೇಲೆ ಫೆಬ್ರವರಿ ತಿಂಗಳ ಆರಂಭದಲ್ಲಿ ಶಾಲೆಗೆ ಹೋಗಿ ಮಕ್ಕಳನ್ನು ಮಾತನಾಡಿಸಿದಾಗ, ಈ ಮಧ್ಯೆ ಅನೇಕ ಮಂತ್ರಿಮಹೋದಯರು, ರಾಜಕೀಯ ಧುರೀಣರು ಮತ್ತು ಶಿಷ್ಯ ಪ್ರಮುಖರು ನಮ್ಮ ದರ್ಶನಕ್ಕೆ ಬರುವ ಒತ್ತಾಸೆ ವ್ಯಕ್ತಪಡಿಸಿದರೂ ನಮ್ಮಿಂದ ನಿರಾಕರಣೆ! ದೂರವಾಣಿಯಲ್ಲಿಯೇ ಅವರೊಂದಿಗೆ ಮಾತುಕತೆ, ಸಾಮಾಜಿಕ ಜವಾಬ್ದಾರಿಯನ್ನು ಹೊತ್ತವರು ಜನಸಾಮಾನ್ಯರಿಗೆ ಮಾರ್ಗದರ್ಶಕರಾಗಬೇಕು. ಅವರ ನಡೆ ಅನುಕರಣೀಯವಾಗಿರಬೇಕು. ಅವರೇ ತಪ್ಪಿ ನಡೆದರೆ ಆಗುವ ಅನಾಹುತಕ್ಕೆ ಯಾರು ಹೊಣೆ? ನಮ್ಮನ್ನು ಕಾಣಲು ಬಯಸಿದ್ದ ಅನೇಕ ಮಂತ್ರಿಮಾನ್ಯರು ಕೆಲವೇ ದಿನಗಳಲ್ಲಿ ಕೊರೊನಾ ವೈರಾಣುವಿಗೆ ಗುರಿಯಾಗಿ ಆಸ್ಪತ್ರೆಗೆ ದಾಖಲಾದರು. ಅವರ ಕ್ಷೇಮಸಮಾಚಾರವನ್ನು ವಿಚಾರಿಸಲು ದೂರವಾಣಿ ಕರೆ ಮಾಡಿದಾಗ ನಮ್ಮನಿರಾಕರಣೆಯ ಹಿಂದಿದ್ದಸದಾಶಯವನ್ನು ಜ್ಞಾಪಿಸಿಕೊಂಡರು. ಹತ್ತಾರು ದಿನಗಳಲ್ಲಿ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಸಮಾಧಾನವನ್ನುಂಟುಮಾಡಿತು. ಕೊರೊನಾ ಹಿನ್ನೆಲೆಯಲ್ಲಿ ಸಭೆ ಸಮಾರಂಭಗಳಲ್ಲಿ ಆಶೀರ್ವಚನ ನೀಡದೆ ಇಲ್ಲಿಗೆ ಒಂದು ವರ್ಷವಾಯಿತು. ಇದರಿಂದ ಏನೋ ಆಕಾಶ ಕಳಚಿ ಬಿದ್ದಿದೆ ಎಂದು ನಮಗೆ ಅನ್ನಿಸುವುದಿಲ್ಲ. ಮದುವೆ, ಗೃಹಪ್ರವೇಶ, ಸಮಾರಾಧನೆ ಇತ್ಯಾದಿ ಅನೇಕ ಕಾರ್ಯಕ್ರಮಗಳಿಗೆ ನಮಗೂ ಸಾಂಪ್ರದಾಯಿಕ 021 ನಮ್ಮ ಗುರುವರ್ಯರು ಹೋಗಿ ಅವುಗಳನ್ನು 'ಸರ್ವಶರಣ ಸಮ್ಮೇಳನ'ಗಳನ್ನಾಗಿ ಪರಿವರ್ತಿಸಿ ಅನೇಕ ಧಾರ್ಮಿಕ, ವೈಚಾರಿಕ ಭಾಷಣಗಳನ್ನು ಮಾಡಿದರು. ಆದರೆ ಕಾಲಾನುಕ್ರಮದಲ್ಲಿ ಅವೂ ಹೊಸ ಸಂಪ್ರದಾಯಗಳಾಗಿ ಮಾರ್ಪಟ್ಟು ತಮ್ಮ ಮೂಲ ಆಶಯವನ್ನು ಕಳೆದುಕೊಂಡಿವೆ. ಶಿಷ್ಯರ ಒತ್ತಾಸೆಗೆ ಮಣಿದು ಅನಿವಾರ್ಯವಾಗಿ ಈ ಕೌಟುಂಬಿಕ ಸಮಾರಂಭಗಳಲ್ಲಿ ಭಾಗವಹಿಸಬೇಕಾಗಿ ಬಂದ ನಮಗೆ ಕಳೆದ ನಲವತ್ತು ವರ್ಷಗಳ ಸಾರ್ವಜನಿಕ ಜೀವನದಲ್ಲಿ ಮೂವತ್ತು ವರ್ಷಗಳು ಇಂತಹ ಸಮಾರಂಭಗಳಿಗೆ ಹೋಗುವ ಓಡಾಟದಲ್ಲಿ ಅಪವ್ಯಯವಾಗಿ ಹೋಗಿವೆ. “ಅಯ್ಯಾ, ನಿಮ್ಮ ಮನ್ನಣೆಯೇ ಮಸೆದ ಅಲಗಾಗಿ ತಾಗಿತ್ತಲ್ಲಾ! ಅಯ್ಯೋ ನೊಂದೆನು ಸೈರಿಸಲಾರೆನು ಕೂಡಲಸಂಗಮ ದೇವಾ! ಎಂದು ಬಸವಣ್ಣನವರು ನೊಂದು ನುಡಿದಂತೆ ಪರಿತಪಿಸುವಂತಾಗಿದೆ. ನಮ್ಮ ಸಂಸ್ಥೆಯ ಶಾಲಾಕಾಲೇಜುಗಳ ಸಾಮಾನ್ಯ ನೌಕರರಿಗೂ ಇರುವ ರಜಾ ಸೌಲಭ್ಯ ನಮಗೆ ಇಲ್ಲದಂತಾಗಿದೆ. ಆಕ್ಸ್ ಫರ್ಡ್, ಕೇಂಬ್ರಿಜ್ ಮೊದಲಾದ ಪಾಶ್ಚಾತ್ಯ ವಿಶ್ವವಿದ್ಯಾನಿಲಯಗಳ ಪ್ರೊಫೆಸರ್ಗಳಿಗೆ ನಾಲೈದು ವರ್ಷಗಳಿಗೊಮ್ಮೆ ಆರು ತಿಂಗಳು ಅಥವಾ ಒಂದು ವರ್ಷಕಾಲ ರಜಾ ತೆಗೆದುಕೊಳ್ಳುವ ಸೌಲಭ್ಯವಿದೆ. ಇದಕ್ಕೆ Sabbatical Leave ಎಂದು ಕರೆಯುತ್ತಾರೆ. ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನ ಮಾಡಲು ಅವರಿಗೆ ಈ ರಜೆಯನ್ನು ಕೊಡಲಾಗುತ್ತದೆ. ಇಂಥ ಒಂದು ಸಂದರ್ಭದಲ್ಲಿಯೇ ಕೆನಡಾದ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿದ್ದ ಹಿರೇಮಲ್ಲೂರು ಈಶ್ವರನ್ ರವರು ಧಾರವಾಡಕ್ಕೆ ಬಂದು ಕಳೆದ ಅಂಕಣದಲ್ಲಿ ಪ್ರಸ್ತಾಪಿಸಿದ ತಮ್ಮ ಆತ್ಮಕಥನ 'ವಲಸೆ ಹೋದ ಕನ್ನಡಿಗನ ಕಥೆ' ಬರೆದದ್ದು, ನಾಲ್ಕು ದಶಕಗಳ ನಂತರ ನಮಗೆ ಕೊರೊನಾ ದೊರೆಕಿಸಿಕೊಟ್ಟSabbatical Leave ನಲ್ಲಿ ಸಾರ್ವಜನಿಕರ ಹಿತಕ್ಕಾಗಿ ನಮ್ಮ ಸಮಯವನ್ನು ಸಂಪೂರ್ಣವಾಗಿಸದುಪಯೋಗ ಪಡಿಸಿಕೊಳ್ಳುವ ಸ್ವಾತಂತ್ರ್ಯ ನಮಗೆ ದೊರೆಯಿತು. ಕಳೆದ ಮಾರ್ಚ್- ಏಪ್ರಿಲ್ ತಿಂಗಳುಗಳಲ್ಲಿ ಆಂಧ್ರದ ನಂದ್ಯಾಲದಲ್ಲಿ ತೀವ್ರ ಕೊರೊನಾ ಬಿಕ್ಕಟ್ಟಿನಲ್ಲಿ ಕಂಗಾಲಾಗಿದ್ದ ಕರ್ನಾಟಕ ಮತ್ತು ತೆಲಂಗಾಣದ ಸುಮಾರು ಒಂದು ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ದಾಸೋಹ ವ್ಯವಸ್ಥೆಯನ್ನು ಮಾಡಿ ಅವರವರ ಮನೆಗಳಿಗೆ ಸುರಕ್ಷಿತವಾಗಿ ತಲುಪುವಂತೆ ಮಾಡಲು ಸಾಧ್ಯವಾಯಿತು. ನಮ್ಮ ಸಂಸ್ಥೆಯ ಶಾಲಾ ಕಾಲೇಜುಗಳ ಸುಗಮವಾದ ಆಡಳಿತ ನಿರ್ವಹಣೆಗೆ ಬೇಕಾದ ಮೊಬೈಲ್ ಆ್ಯಪ್ ಆವಿಷ್ಕರಣ ಮಾಡಲು ಸಾಧ್ಯವಾಯಿತು. ಸರಕಾರದಿಂದ ಮುಂಜೂರು ಮಾಡಿಸಿದ್ದನಾಲ್ಕಾರು ಏತನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬರುವಂತೆ ಮಾಡಲು, ಇದಕ್ಕೆ ಎದುರಾದ ಅಡೆತಡೆಗಳನ್ನು ನಿವಾರಣೆ ಮಾಡಲು ಇತ್ಯಾದಿ ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸಲು ಕಾಲಾವಕಾಶ ದೊರೆಯಿತು. ಸವಾಲುಗಳನ್ನು ಅವಕಾಶಗಳನ್ನಾಗಿ ಮಾಡಿಕೊಳ್ಳುವುದೆಂದರೆ ಇದೇ ಅಲ್ಲವೆ! 

ನಮ್ಮ ಮಠವನ್ನೂ ಒಳಗೊಂಡಂತೆ ಇಂದು ಬಹುತೇಕ ಮಠಗಳು ಆಧ್ಯಾತ್ಮಿಕ ಕೇಂದ್ರಗಳಾಗುವುದಕ್ಕಿಂತ ಹೆಚ್ಚಾಗಿ ಶಿಷ್ಯರ ಲೌಕಿಕ ಆಶೋತ್ತರಗಳನ್ನು ಈಡೇರಿಸುವ ತಾಣಗಳಾಗಿವೆ. ನಮ್ಮ ಅನುಭವದಲ್ಲಿ ಯಾರಾದರೂ ಕೈಯಲ್ಲಿ ದೊಡ್ಡಹಾರಗಳನ್ನು ಹಿಡಿದುಕೊಂಡು ಬಂದರೆಂದರೆ ನಮ್ಮ ಕೊರಳಿಗೆ ಉರುಲು ಬಿತ್ತೆಂದೇ ಅರ್ಥ! ಆ ಅಸಾಮಾನ್ಯ ಹಾರದ ಹಿಂದೆ ಅಸಾಮಾನ್ಯ ಕೆಲಸವನ್ನು ಸಾಧಿಸಿಕೊಳ್ಳುವ ಹುನ್ನಾರವೇ ಇರುತ್ತದೆ! ಆದರೆ ಕಳೆದ ಭಾನುವಾರ ಸಿರಿಗೆರೆಯಲ್ಲಿ ಸರಳವಾಗಿ ನಡೆದ 'ಆದಿಕವಿ ಪುರಸ್ಕಾರ' ಮತ್ತು 'ವಾಗ್ದೇವಿ ಪ್ರಶಸ್ತಿ' ಪ್ರದಾನ ಸಮಾರಂಭ ವಿಭಿನ್ನವಾಗಿತ್ತು. ಸಿರಿಗೆರೆಗೆ ರಾಜಕೀಯ ಧುರೀಣರು ಹೆಲಿಕಾಪ್ಟರ್ನಲ್ಲಿ ಬರುವುದು ಆಶ್ಚರ್ಯಸಂಗತಿಯೇನಲ್ಲ. ಆದರೆ ಅಂದಿನ ಸಭೆಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಬೆಂಗಳೂರಿನಿಂದ ಸಿರಿಗೆರೆಗೆ ಹೆಲಿಕಾಪ್ಟರಿನಲ್ಲಿ ಬಂದು ಪುರಸ್ಕಾರ ಪ್ರದಾನ ಮಾಡಿದ್ದು ಸೋಜಿಗವನ್ನುಂಟುಮಾಡಿತ್ತು. ಓದಿದ್ದು ವೈದ್ಯಕೀಯ ವಿಜ್ಞಾನವಾದರೂ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವನ್ನು ಪಡೆದು ಕಾವ್ಯರಚನೆ ಮಾಡುವ ಸಾಮರ್ಥ್ಯವನ್ನು ಹೊಂದಿದ ಡಾ. ಶಂಕರ ರಾಜಾರಾಮನ್ ಅವರಿಗೆ 'ವಾಗ್ದೇವಿ ಪ್ರಶಸ್ತಿ' ಯನ್ನು ಪ್ರದಾನ ಮಾಡಿದವರು ಇಸ್ರೋ ಮಾಜಿ ವಿಜ್ಞಾನಿ ಕೆ. ಹರೀಶ್ ರವರು. 'ಆದಿಕವಿ ಪುರಸ್ಕಾರ' ಪ್ರದಾನ ಮಾಡಿದವರು ಉದ್ಯಮಿಗಳಾದ ಎಸ್ ಜಯರಾಮ್ರವರು ಮೈಸೂರು ಮಹಾರಾಜರ ಆಸ್ಥಾನ ವಿದ್ವಾಂಸರಾಗಿದ್ದ ನರಸಿಂಹಾಚಾರ್ ಮೊಮ್ಮೊಗ, ಅವರದು ನಿರ್ವ್ಯಾಜ ಭಕ್ತಿ ಮತ್ತು ಶುದ್ಧ ಸಾಹಿತ್ಯ ಪ್ರೇಮ! ಸಮಾರಂಭದಲ್ಲಿ ನಮಗೆ ನೆನಪಾಗಿದ್ದು ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪನವರ ಕವಿತೆ: ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? (ಸಾಮಗಾನ: 1951) 

ತಮ್ಮ ಆತ್ಮಕಥನ 'ಚತುರಂಗ'ದಲ್ಲಿ ಹೇಳಿರುವಂತೆ ಇದು ಅವರ ವಿದ್ಯಾಗುರು ತ.ಸು ಶಾಮರಾಯರನ್ನು ಕುರಿತು ಬರೆದ ಪದ್ಯ ಆದರೆ ಇದನ್ನು ಓದಿದಾಗಲೆಲ್ಲಾ ಹಾಡನ್ನು ಕೇಳಿದಾಗಲೆಲ್ಲಾ ನಮ್ಮ ಮತ್ತು ನಮ್ಮ ಗುರುವರ್ಯರ ಸಂಬಂಧವನ್ನು ಕುರಿತೇ ಜಿ.ಎಸ್. ಎಸ್ ಬರೆದಿದ್ದಾರೇನೋ ಎಂಬ ಭಾವನೆ ನಮ್ಮ ಹೃದಯದಲ್ಲಿ ಮೂಡಿ ಭಾವುಕರಾಗುತ್ತೇವೆ. ಇಲ್ಲಿ ಕವಿಗೆ ತಮ್ಮ ವಿದ್ಯಾ ಗುರುಗಳ ಬಗೆಗೆ ಇರುವ ಅನನ್ಯ ಶ್ರದ್ಧಾಭಕ್ತಿ ಒಂದೆಡೆ ಕಾಣಿಸಿದರೆ ಮತ್ತೊಂದೆಡೆ ಗುರುಗಳಿಗೆ ಶಿಷ್ಯನ ಮೇಲೆ ಇದ್ದ ಶಿಷ್ಯವಾತ್ಸಲ್ಯವೂ ಗೋಚರಿಸುತ್ತದೆ. ಈ ಕವಿತೆಯು ಗುರು-ಶಿಷ್ಯರ ಸಂಬಂಧಕ್ಕೆ ಮಾತ್ರ ಮೀಸಲಾದ ಪದ್ಯವಾಗಿರಬೇಕಾಗಿಲ್ಲ, ಸಾಂಸಾರಿಕೆ ಜೀವನದಲ್ಲಿ ಪತಿ-ಪತ್ನಿಯರ ಮಧ್ಯೆ ಇರಬೇಕಾದ ಗಾಢವಾದ ಸಂಬಂಧದ ದ್ಯೋತಕವೂ ಆಗಬಹುದು. If you want to stop someone from loving you, you must marry him/her ನಿಮ್ಮ ಬೆನ್ನ ಹಿಂದೆ ಬಿದ್ದ ವ್ಯಕ್ತಿ ನಿಮ್ಮನ್ನು ಪ್ರೀತಿಸದಂತೆ ಮಾಡಬೇಕೆಂದರೆ ಅವನನ್ನು/ಅವಳನ್ನು ಮದುವೆಯಾಗಬೇಕು) ಎಂಬವ್ಯಂಗ್ಯೋಕ್ತಿಯೊಂದು ಆಂಗ ಭಾಷೆಯಲ್ಲಿದೆ. ಇಂದಿನ ಕೌಟುಂಬಿಕ ಜೀವನವನ್ನು ನೋಡಿದರೆ ಇದು ಎಷ್ಟೊಂದು ಸತ್ಯ ಅಲ್ಲವೇ? ಮದುವೆಯಾದ ಹೊಸತರಲ್ಲಿ 'ಚಂದ್ರಮುಖಿ'ಯಾಗಿ ಕಂಡವಳು ಮೂರೇ ತಿಂಗಳಿಗೆ 'ಶೂರ್ಪನಖಿ'ಯಾಗಿ ಕಂಡು ವಿವಾಹ ವಿಚ್ಛೇದನ ಬಯಸುವ ಆಧುನಿಕ ಯುವಕ-ಯುವತಿಯರಿಗೆ ಅತ್ಯವಶ್ಯಕವಾಗಿ ಬೇಕಾದ ಪ್ರೀತಿಯ ಸಂದೇಶವು ಈ ಕವಿತೆಯಲ್ಲಿ ಅಡಗಿದೆ. 'ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು ಕೇಳುವಿರಿ' ಎನುವ ಆತ್ಮವಿಶ್ವಾಸ ಮತ್ತು ಪ್ರೀತಿಯ ಸೆಲೆ ಬಾಳಸಂಗಾತಿಗಳಾದವರ ಹೃದಯದಲ್ಲಿದ್ದರೆ ಜೀವನದಲ್ಲಿ ಅದಕ್ಕಿಂತ ಹೆಚ್ಚಿನ ಸುಖ ಅವರಿಗೆ ಮತ್ತೇನು ಬೇಕು? 

ಕವಿ ಹಾಡುವ ಹಕ್ಕಿ ಇದ್ದಂತೆ. ಹಕ್ಕಿಗೆ ಯಾವ ಬಹುಮಾನ ಯಾರುಕೊಡುತ್ತಾರೆ? ಅದುಹಾಡುವುದುತನ್ನ ಸ್ವ-ಸಂತೋಷಕ್ಕಾಗಿ Call a red rose by any name; it smells as good ಎಂದು ಷೇಕ್ಸ್ ಪಿಯರ್ ಹೇಳುತ್ತಾನೆ. ಕೆಂಪು ಗುಲಾಬಿಯನ್ನು ಕಪ್ಪು ಗುಲಾಬಿಯೆಂದು ಕರೆದರೂ ಅದು ತನ್ನ ಕಂಪನ್ನು ಬಿಟ್ಟುಕೊಡುವುದಿಲ್ಲ, ಸುಗಂಧ ಸೂಸುವುದು ಹೂವಿನ ನೈಜಧರ್ಮ. ಕವಿಯೂ ಸಹ ಹಾಗೆಯೇ ಅವನು ಬರೆಯುವುದು ಹಾಡುವುದು ಎಲ್ಲ ಸ್ವ-ಸಂತೋಷಕ್ಕಾಗಿ, ಬಿರುದು ಸನ್ಮಾನಗಳು ಅವನಿಗೆ ನಗಣ್ಯ. ಯಾರು ಕೇಳಲಿ ಬಿಡಲಿ, ಕೇಳಿ ಮೆಚ್ಚಲಿ, ಕೇಳದೆ ಕಿವಿ ಮುಚ್ಚಲಿ ಕವಿಗೆ ತನ್ನ ಹೃದಯದಾಳದ ತೀವ್ರತರ ಭಾವನೆಗಳನ್ನು ಅಭಿವ್ಯಕ್ತಿಸದ ಹೊರತು ಸಮಾಧಾನವಾಗುವುದಿಲ್ಲ, ಕವಿತೆಯ ಈ ಸಾಲುಗಳನ್ನು ಓದುತ್ತಾ ಹೋದಂತೆ ದೇವರನ್ನು ಕುರಿತು ಅಯ್ಯಾ ನೀನು ಕೇಳಿದರೆ ಕೇಳು ಕೇಳದಿದ್ದರೆ ಮಾಣು; ನಾ ಹಾಡಿದಲ್ಲದೆ ಸೈರಿಸಲಾರೆನು ಎನ್ನುವ ಅಕ್ಕಮಹಾದೇವಿಯ ಹೃದಯದ ತುಡಿತ ಹಾಗೂ 'ಆನು ಒಲಿದಂತೆ ಹಾಡುವೆ' ಎನ್ನುವ ಬಸವಣ್ಣನ ನಿರ್ವ್ಯಾಜ ಭಕ್ತಿ ಈ ಕವಿತೆಯಲ್ಲಿ ಮೈದಾಳಿದಂತಿವೆ. 

'ವಿಜಯ ಕರ್ನಾಟಕ' ಪತ್ರಿಕೆಯು ನಮ್ಮ ಈ 'ಬಿಸಿಲು ಬೆಳದಿಂಗಳು' ಅಂಕಣ ಬರಹಕ್ಕೆ ವಸಂತ ಕಾಲದಲ್ಲಿ ಕೋಗಿಲೆ ಬಂದು ಕುಳಿತು ಕೂಜಿಡುವ ಮಾಮರ ಇದ್ದಂತೆ! 2008ರಲ್ಲಿ ಆರಂಭವಾದ ಈ ಅಂಕಣ ಬರಹಕ್ಕೆ ಮೊಟ್ಟ ಮೊದಲು ಚಾಲನೆ ನೀಡಿದವರು ಪತ್ರಿಕೆಯ ಆಗಿನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರು. ವರ್ಷಕ್ಕೆ ಒಂದೋ ಎರಡೋ ಪ್ರಾಸಂಗಿಕವಾಗಿ ಬರೆದ ಲೇಖನಗಳು ಪುಸ್ತಕರೂಪದಲ್ಲಿ ಪ್ರಕಟವಾಗಿದ್ದವು. ಸಾರ್ವಜನಿಕ ಜೀವನದಲ್ಲಿರುವ ನಮಗೆ ನಿಯಮಿತವಾಗಿ ಬರೆಯುವುದು ಕಷ್ಟ ಎಂದರೂ ಬರೆಯಲಾಗದ ವಾರ ತಮ್ಮ ಈ ಪುಸ್ತಕಗಳಲ್ಲಿರುವ ಲೇಖನಗಳನ್ನೇ ಬಳಸಿಕೊಳ್ಳುವುದಾಗಿ ಹೇಳಿ ನಮ್ಮನ್ನು ಈ ಅಂಕಣ ಬರಹದ 'ಖೆಡ್ಡಾ'ಕ್ಕೆ ಕೆಡವಿದರು ಅವರು. ಮುಂದೆ ಬಂದ ಎಲ್ಲ ಸಂಪಾದಕರೂ ಬರೆಯುವುದನ್ನು ನಿಲ್ಲಿಸಬಾರದೆಂದು ಒತ್ತಾಯಿಸತೊಡಗಿದರು. ಮರ್ಯಾದೆ ಉಳಿಸಿಕೊಳ್ಳಲಿಕ್ಕಾಗಿ ಕೆಲವು ವರ್ಷಗಳ ಕಾಲ ಬರೆದು ನಂತರ ಮಠ ಮತ್ತು ಸಾಮಾಜಿಕ ಹೊಣೆಗಾರಿಕೆಯ ಒತ್ತಡಗಳ ಮಧ್ಯೆ ಇನ್ನು ಮುಂದೆ ಬರೆಯಲು ಸಾಧ್ಯವಾಗುವುದಿಲ್ಲ ಎಂದು ಸಂಪಾದಕರಿಗೆ ತಿಳಿಸಿಬಿಡೋಣ ಎನ್ನುವಷ್ಟರಲ್ಲಿ ಓದುಗರಿಂದ 'ಭಯೋತ್ಪಾದನೆ'ಯ ಮಿಂಚೋಲೆಗಳು! ಬರೆಯುವುದನ್ನು ನಿಲ್ಲಿಸಿದರೆ ಮಠದ ಮಹಾದ್ವಾರಕ್ಕೆ ಬಂದು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆಯೊಡ್ಡುವ ಸದಭಿರುಚಿಯ 'ಸತ್ಯಾಗ್ರಹಿ'ಗಳು! ಅಂಕಣ ಬರಹ ಪ್ರಕಟವಾದ ಕೆಲ ಹೊತ್ತಿನಲ್ಲಿಯೇ ಮಿಂಚೋಲೆಯಲ್ಲಿ WhatsApp ಗುಂಪುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಓದುಗರ ಪ್ರತಿಕ್ರಿಯೆಗಳು ನಮ್ಮನ್ನು ಬೆರಗುಗೊಳಿಸಿವೆ. 

ವೇದವ್ಯಾಸರು ಹೇಳಿದ ಹಾಗೆ ಮಹಾಭಾರತವನ್ನು ಬರೆದ ಗಣೇಶನಂತೆ ನಮ್ಮಿಂದ ಈ “ಬಿಸಿಲು ಬೆಳದಿಂಗಳು' ಅಂಕಣವನ್ನು ಬರೆಸುತ್ತಿರುವವರು ಪ್ರಬುದ್ಧ ಓದುಗರು! ಯಾರಾದರೂ ಸನ್ಮಾನಿತರು ಕಾರಣಾಂತರಗಳಿಂದ ಗೈರುಹಾಜರಾದರೆ ಅವರ ಪರವಾಗಿ ಅವರ ತಂದೆ-ತಾಯಂದಿರು ಬಹುಮಾನವನ್ನು ಸ್ವೀಕರಿಸುವಂತೆ ಅಜ್ಞಾತ ಓದುಗರ ಪರವಾಗಿ ಈ 'ಆದಿಕವಿ ಪುರಸ್ಕಾರ'ವನ್ನು ಸ್ವೀಕರಿಸಿದ್ದು ಇದರ ನಿಜವಾದ ವಾರಸುದಾರರು ಸಮಸ್ತ ಸಹೃದಯ ಓದುಗರು! 

ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ 
ಮತ್ತಾವ ಪದವಿಯನೊಲ್ಲೆನಯ್ಯಾ! 
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ 
ಮಹಾಪದವಿಯನೆ ಕರುಣಿಸಾ ಕೂಡಲಸಂಗಮದೇವಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.25-2-2021
ಬಿಸಿಲು ಬೆಳದಿಂಗಳು