ಯಾಂತ್ರಿಕ ಶಿವರಾತ್ರಿ ಜಾಗರಣೆ ನಿದ್ದೆಗೇಡು!

  •  
  •  
  •  
  •  
  •    Views  

ವಸಂತ ಋತು ಬಂದಿತೆಂದರೆ ಹಣ್ಣೆಲೆಗಳು ಉದುರಿ ಬೋಳು ಬೋಳಾದ ಮರಗಿಡಗಳಲ್ಲಿ ಚಿಗುರೆಲೆಗಳು ಕಾಣಿಸಿಕೊಳ್ಳುತ್ತವೆ. ಇಡೀ ನಿಸರ್ಗವೇ ಸರ್ವಾಭರಣ ಸುಂದರಿಯಾದ ನವವಧುವಿನಂತೆ ಕಂಗೊಳಿಸುತ್ತದೆ. ಅದೇ ರೀತಿ ಜೀವನದ ಜಂಜಾಟದಲ್ಲಿ ಸೋತು ಸುಣ್ಣವಾದ ಮನುಷ್ಯರ ಬದುಕಿನಲ್ಲಿ ಹಬ್ಬ ಹರಿದಿನಗಳು ವಸಂತೋತ್ಸವದ ನವಪಲ್ಲವದಂತೆ ಜೀವನೋತ್ಸಾಹವನ್ನು ತುಂಬುತ್ತವೆ. ಸಹಸ್ರಾರು ವರ್ಷ ಗಳಿಂದ ಭಾರತೀಯರು ಆಚರಿಸಿಕೊಂಡು ಬಂದಿರುವ ಅನೇಕ ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದು. ಶಿವರಾತ್ರಿಯನ್ನು ಕುರಿತು ಅನೇಕ ಪುರಾಣ ಪುಣ್ಯಕಥೆಗಳು ಇವೆ. ಅವುಗಳಲ್ಲಿ ಒಂದು ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮನು ಶರಮಂಚದ ಮೇಲೆ ಮಲಗಿದ್ದಾಗ ಸ್ಮರಿಸಿಕೊಂಡ ಕಥಾನಕ ಹೀಗಿದೆ:

ಇಕ್ಷ್ವಾಕು ವಂಶದಲ್ಲಿ ಚಿತ್ರಭಾನು ಎಂಬ ಹೆಸರಿನ ಒಬ್ಬ ಮಹಾರಾಜನಿದ್ದ. ಅವನು ಮಹಾಶಿವರಾತ್ರಿಯಂದು ತನ್ನ ರಾಣಿಯೊಂದಿಗೆ ಉಪವಾಸ ವ್ರತವನ್ನು ಆಚರಿಸುತ್ತಿದ್ದ. ಅದಕ್ಕೆ ಕಾರಣ ಅವನು ತನ್ನ ಪೂರ್ವ ಜನ್ಮದಲ್ಲಿ ಕಾಶಿಯಲ್ಲಿ "ಸುಸ್ವರ" ಎಂಬ ಹೆಸರಿನ ಒಬ್ಬ ಬೇಡನಾಗಿದ್ದ. ಕಾಡಿನಲ್ಲಿ ಪ್ರಾಣಿಪಕ್ಷಿಗಳನ್ನು ಬೇಟೆಯಾಡಿ ತಂದು ಮಾರಾಟ ಮಾಡಿ ಬಂದ ಹಣದಲ್ಲಿ ತನ್ನ ಸಂಸಾರ ನಿರ್ವಹಣೆ ಮಾಡುತ್ತಿದ್ದ. ಒಂದು ದಿನ ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ ಬಹಳ ಹೊತ್ತಿನವರೆಗೂ ಯಾವ ಪ್ರಾಣಿಯೂ ಸಿಗಲಿಲ್ಲ. ಸಂಜೆಗತ್ತಲು ಆವರಿಸುತ್ತಿದ್ದಂತೆ ಒಂದು ಜಿಂಕೆ ಸಿಕ್ಕಿತು. ಅದನ್ನು ಬೇಟೆಯಾಡಿ ಹೊತ್ತುಕೊಂಡು ಹೊರಡುವುದರೊಳಗೆ ಕಗ್ಗತ್ತಲು ಆವರಿಸಿತು. ಆಗ ಬೇಟೆಯಾಡಿದ ಜಿಂಕೆಯನ್ನು ಮರದ ಕೊಂಬೆಗೆ ಕಟ್ಟಿ ಮರವನ್ನೇರಿ ಕುಳಿತ. ರಾತ್ರಿಯೆಲ್ಲಾ ಮಡದಿ ಮಕ್ಕಳದೇ ಚಿಂತೆ. ಹಸಿದ ಹೊಟ್ಟೆಯಲ್ಲಿಯೇ ಮಲಗಿರಬಹುದೆಂದು ನೆನೆಸಿಕೊಂಡು ಕಣ್ಣೀರು ಸುರಿಸಿದ. ಅದೇ ಚಿಂತೆಯಲ್ಲಿ ರಾತ್ರಿಯೆಲ್ಲಾ ಹಸಿವು ನೀರಡಿಕೆ ಎನ್ನದೆ, ಅನ್ಯಮನಸ್ಕನಾಗಿ ಮರದ ಮೇಲಿಂದ ಒಂದೊಂದೇ ಎಲೆಯನ್ನು ಕಿತ್ತು ಕೆಳಕ್ಕೆ ಹಾಕತೊಡಗಿದ. ಮುಂಜಾವದ ನಸುಕಿನಲ್ಲಿಯೇ ಮರದಿಂದ ಇಳಿದು ಜಿಂಕೆ ಹೊತ್ತು ಊರ ಕಡೆ ಧಾವಿಸಿ, ಮಾರಾಟ ಮಾಡಿ ಆಹಾರ ಸಾಮಗ್ರಿಗಳನ್ನು ಕೊಂಡು ತಂದು ಮಡದಿಗೆ ಕೊಟ್ಟ. ಮಡದಿ ಅಡುಗೆ ಮಾಡಿ ಗಂಡನಿಗೆ ಪ್ರೀತಿಯಿಂದ ಉಣಬಡಿಸಿದಳು. ಕೈತುತ್ತು ಬಾಯಿಗೆ ಸೇರುವುದರೊಳಗೆ ಭಿಕ್ಷುಕನೊಬ್ಬ ಮನೆಯ ಬಾಗಿಲಲ್ಲಿ ನಿಂತು ಬೇಡುತ್ತಿರುವುದು ಕೇಳಿಸಿತು. ಬೇಡನಿಗೆ ಉಣ್ಣಲು ಮನಸ್ಸು ಬರಲಿಲ್ಲ, ತನ್ನ ತಟ್ಟೆಯಲ್ಲಿದ್ದ ಅನ್ನವನ್ನೇ ಭಿಕ್ಷುನಿಗೆ ಕೊಟ್ಟ ಸಾಕ್ಷಾತ್ ಶಿವನೇ ಭಿಕ್ಷುಕನ ವೇಷದಲ್ಲಿ ಬಂದಿದ್ದನು. ಹಿಂದಿನ ರಾತ್ರಿ ಬೇಡ ಹತ್ತಿ ಕುಳಿತಿದ್ದ ಮರ ಬಿಲ್ವ ಮರವಾಗಿತ್ತು. ಬೇಡ ಸುರಿಸಿದ ಕಣ್ಣೀರೇ ಮರದ ಬುಡದಲ್ಲಿದ್ದ ಶಿವಲಿಂಗಕ್ಕೆ ಅಭಿಷೇಕವಾಗಿತ್ತು. ರಾತ್ರಿಯೆಲ್ಲಾ ಮರದಿಂದ ಕಿತ್ತು ಕೆಳಗೆ ಹಾಕುತ್ತಿದ್ದ ಎಲೆಯೇ ಲಿಂಗದ ಮೇಲೆ ಬೀಳುತ್ತಿದ್ದ ಬಿಲ್ವಪತ್ರೆಯಾಗಿತ್ತು. ಬೇಡ ತನಗೆ ಅರಿವಿಲ್ಲದೆಯೇ ಇಡೀ ರಾತ್ರಿ ಶಿವನ ಪೂಜೆ ಮಾಡಿದಂತಾಗಿತ್ತು. ಹೀಗಾಗಿ ಶಿವ ಅವನಿಗೆ ಕೈಲಾಸ ಪದವಿಯನ್ನು ಅನುಗ್ರಹಿಸಿದ. ಈ ಹಿನ್ನೆಲೆಯಲ್ಲಿ ಶಿವರಾತ್ರಿಯಂದು ಇಡೀ ರಾತ್ರಿ ಜಾಗರಣೆ, ಉಪವಾಸ, ಶಿವನ ನಾಮಸ್ಮರಣೆ ಮಾಡುವುದು ನಮ್ಮ ಪರಂಪರೆಯಲ್ಲಿ ನಡೆದು ಬಂದಿದೆ. 

 ಆದರೆ, ಈ ಕಥೆ ಅನೇಕ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ತಾನು ಹತ್ತಿ ಕುಳಿತಿರುವುದು ಬಿಲ್ವಮರ, ಅದರಿಂದ ಕಿತ್ತು ಕೆಳಗೆ ಎಸೆಯುತ್ತಿರುವುದು ಬಿಲ್ವಪತ್ರೆ, ಬುಡದಲ್ಲಿರುವುದು ಶಿವಲಿಂಗ, ತನ್ನ ಕಣ್ಣೀರು ಬೀಳುತ್ತಿರುವುದು ಆ ಲಿಂಗದ ಮೇಲೆ, ಇದಾವುದರ ಪರಿವೇ ಇಲ್ಲದ ಆ ಬೇಡ ಇಡೀ ರಾತ್ರಿ ಮಾಡುತ್ತಿದ್ದ ಯಾಂತ್ರಿಕ ದೈಹಿಕ ಕ್ರಿಯೆ ಶಿವನ ಪೂಜೆ ಹೇಗಾಗಬಲ್ಲುದು? ತಿಳಿಯದೆ ಮಾಡುವ ಕ್ರಿಯೆಗಳು ಫಲಕಾರಿಯಾಗಲು ಸಾಧ್ಯವಿಲ್ಲ ಎಂದು ಅಲ್ಲಗಳೆಯುವವರೂ ಇದ್ದಾರೆ; ತಿಳಿಯಲಿ ತಿಳಿಯದಿರಲಿ ಒಟ್ಟಾರೆ ಮಾಡಿದ ಕ್ರಿಯೆಗೆ ತಕ್ಕ ಪ್ರತಿಫಲ ದೊರಕೇ ದೊರಕುತ್ತದೆ ಎಂದು ನಂಬುವವರೂ ಇದ್ದಾರೆ. ಮಗು ತಿಳಿಯದೆ ಬೆಂಕಿಯನ್ನು ಮುಟ್ಟಿದರೆ ಕೈ ಸುಡುವುದಿಲ್ಲವೇ? ಮನುಷ್ಯ ತಿಳಿಯದೆ ವಿಷವನ್ನು ಕುಡಿದರೆ ಸಾಯುವುದಿಲ್ಲವೇ? ಆದರೆ ಪೂಜೆ ಮಾಡುತ್ತಿದ್ದೇನೆಂಬ ಅರಿವೇ ಇಲ್ಲದೆ ಬೇಡ ಮಾಡುತ್ತಿದ್ದ ಇಂಥ ಯಾಂತ್ರಿಕ ಕ್ರಿಯೆಯನ್ನು ನೋಡಿ ಮೋಸ ಹೋಗುವಷ್ಟು ಶಿವನು ದಡ್ಡನೇ? ಸರ್ವಜ್ಞನೆನಿಸಿಕೊಂಡ ಶಿವನಿಗೆ ತನ್ನನ್ನು ನಿಜವಾದ ಭಕ್ತಿಯಿಂದ ಪೂಜೆ ಮಾಡುತ್ತಿರುವ ಸದ್ಭಕ್ತ ಯಾರು? ಕಾಟಾಚಾರಕ್ಕೆ ಮಾಡುತ್ತಿರುವ ಡಾಂಭಿಕ ಯಾರೆಂದು ತಿಳಿದಿರಲೇ ಬೇಕಲ್ಲವೇ? ಹಾಗೆ ನೋಡಿದರೆ ಆ ಬೇಡ ಮಾಡುತ್ತಿದ್ದುದು ಕಾಟಾಚಾರ ಅಥವಾ ಒಟ್ಟಾರೆ ಪೂಜೆಯೇ ಅಲ್ಲ, ಇಲ್ಲಿ ಶಿವನು ಮೆಚ್ಚುವಂಥದ್ದೇನಿದೆ? ಬಹುಶಃ ಆ ಬೇಡನ ಹೃದಯದಲ್ಲಿ ತನ್ನ ವೈಯಕ್ತಿಕ ಸುಖಕ್ಕಿಂತ ತನ್ನ ಮಡದಿ-ಮಕ್ಕಳ ಮತ್ತು ಭಿಕ್ಷುಕನ ಬಗ್ಗೆ ಇದ್ದ ಮಾನವೀಯ ಭಾವನೆಗಳು ಶಿವನಿಗೆ ಹೆಚ್ಚು ಪ್ರಿಯವೆನ್ನಿಸಿರಬೇಕು. 

ಕೆಲವೊಮ್ಮೆ ಈ ಸಾಂಪ್ರದಾಯಿಕ ಆಚರಣೆಗಳು ಕಾಲಕ್ರಮೇಣ ಹೊಸ ಹೊಸ ರೂಪವನ್ನು ತಾಳುತ್ತಾ ಹೋಗುತ್ತವೆ. ಶ್ರೀಕೃಷ್ಣನ ಜನ್ಮಸ್ಥಳ ಮಥುರಾ ನಗರದ ಸಮೀಪದಲ್ಲಿರುವ ಬೃಂದಾವನದ ಹೊರವಲಯದಲ್ಲಿ "ಗೋಪೀಶ್ವರ್ ಮಹಾದೇವ್" ಎಂಬ ಹೆಸರಿನ ಶಿವದೇವಾಲಯವಿದೆ. ಎಲ್ಲೆಲ್ಲಿ ಶ್ರೀಕೃಷ್ಣನ ಪುಣ್ಯಕ್ಷೇತ್ರಗಳಿವೆಯೋ ಅಲ್ಲೆಲ್ಲಾ ಈಶ್ವರನ ದೇವಾಲಯಗಳೂ ಇವೆ: ಮಥುರಾದಲ್ಲಿ "ಭೂತೇಶ್ವರ ಮಹಾದೇವ್", ಗೋವರ್ಧನದಲ್ಲಿ "ಚಕ್ರೇಶ್ವರ ಮಹಾದೇವ್", ನಂದಗಾಂವ್ ನಲ್ಲಿ"ನಂದೀಶ್ವರ ಮಹಾದೇವ" ಇತ್ಯಾದಿ! ಬೃಂದಾವನದಲ್ಲಿರುವ "ಗೋಪೀಶ್ವರ್ ಮಹಾದೇವ್" ದೇವಾಲಯ ಕುರಿತು ಒಂದು ರೋಚಕ ಐತಿಹ್ಯವಿದೆ. ಬೃಂದಾವನದಲ್ಲಿ ಗೋಪಿಕೆಯರೊಂದಿಗೆ ನಡೆಯುತ್ತಿದ್ದ ಶ್ರೀಕೃಷ್ಣನ "ಮಹಾರಾಸಲೀಲೆ" ಯನ್ನು ನೋಡಬೇಕೆಂದು ಶಿವನಿಗೆ ಮನಸ್ಸಾಯಿತಂತೆ. ಅದಕ್ಕಾಗಿ ಶಿವನು ಪಾರ್ವತಿಯೊಡನೆ ಬೃಂದಾವನಕ್ಕೆ ಬಂದಾಗ ಪಾರ್ವತಿಗೆ ಮಾತ್ರವೇ ಪ್ರವೇಶ ದೊರೆಯಿತು. ಬೃಂದಾವನದ ಹೊರವಲಯದಲ್ಲಿಯೇ ಬೃಂದಾ ಎಂಬ ಗೋಪಿ ಶಿವನನ್ನು ತಡೆದು ನಿಲ್ಲಿಸಿ, ರಾಸಲೀಲೆಯಲ್ಲಿ ಭಾಗವಹಿಸಲು ಗೋಪಿಕಾ ಸ್ತ್ರೀಯರಿಗೆ ಮಾತ್ರ ಅವಕಾಶವಿದೆಯೇ ಹೊರತು ಕೃಷ್ಣನನ್ನು ಬಿಟ್ಟು ಬೇರಾವ ಪರಪುರುಷರಿಗೂ ಅವಕಾಶವಿಲ್ಲವೆಂದು ಪ್ರವೇಶ ನಿರಾಕರಿಸಿದಳಂತೆ. ಇದರಿಂದ ನಿರಾಶೆಗೊಂಡ ಶಿವನು ಹಿಂದಿರುಗಿ ಹೋಗಿ ಗೋಪಿಯ ರೂಪವನ್ನು ಧರಿಸಿ ಮತ್ತೆ ಬಂದಾಗ ಅವನನ್ನು ಗೋಪಿಕಾ ಸ್ತ್ರೀಯೆಂದೇ ಭ್ರಮಿಸಿದ ಬೃಂದಾ ಒಳಗೆ ಬಿಟ್ಟಳಂತೆ. ಇದನ್ನು ಗಮನಿಸಿದ ಶ್ರೀಕೃಷ್ಣ ನೂತನವಾಗಿ ಸೇರ್ಪಡೆಯಾದ ಈ ಗೋಪಿಗೆ "ಗೋಪೀಶ್ವರಾ" ಎಂದು ಹೆಸರಿಟ್ಟು ತನ್ನ ರಾಸಲೀಲೆಯ ಸಂರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಗೋಪಿಯ ವೇಷದಲ್ಲಿದ್ದ ಶಿವನಿಗೆ ವಹಿಸಿದನಂತೆ! ಇದರಿಂದ ಎಲ್ಲಾ ಗೋಪಿಕೆಯರ ಒಡತಿಯಾದ ರಾಧೆ ಮುನಿಸಿಕೊಂಡಳು. ನಂತರ ಕೃಷ್ಣನಿಂದ ನಿಜ ಸಂಗತಿಯನ್ನು ತಿಳಿದು ಸಂತಸಪಟ್ಟಳಂತೆ. ಈ ಹಿನ್ನೆಲೆಯಲ್ಲಿ "ಗೋಪೀಶ್ವರ ಮಹಾದೇವ್" ಎಂಬ ಶಿವ ದೇವಾಲಯ ಬೃಂದಾವನದಲ್ಲಿ ಮೈದಾಳಿತು.

ಬೃಂದಾವನಕ್ಕೆ ಬರುವ ಯಾತ್ರಾರ್ಥಿಗಳು ಮೊದಲು ಈ ಗೋಪೀಶ್ವರ ಮಹಾದೇವನ ದರ್ಶನ ಮಾಡುತ್ತಾರೆ. "ಗೋಪಿಶ್ವರ್ ಮಹಾದೇವ"ನ ಗುಡಿಯಲ್ಲಿರುವ ಶಿವಲಿಂಗವನ್ನು ಗೋಪಿಕಾಸ್ತ್ರೀಯರ ವಸ್ತ್ರಾಭರಣಗಳಿಂದ ಅಲಂಕರಿಸುತ್ತಾರೆ. ಇದುವರೆಗೂ ಸಾಂಪ್ರದಾಯಿಕವಾಗಿ ಸೀರೆ, ರವಿಕೆ, ಬಳೆ, ಕುಂಕುಮ, ಬಾಚಣಿಕೆಗಳಿಂದ ಅಲಂಕರಿಸಿಕೊಂಡು ಬಂದಿದ್ದ "ಗೋಪೀಶ್ವರ್ ಮಹಾದೇವ"ನ ಪಕ್ಕದಲ್ಲಿ ಈಗ ಆಧುನಿಕ ವಿದ್ಯಾವಂತ ಮಹಿಳೆಯರ ವ್ಯಾನಿಟಿ ಬ್ಯಾಗ್, ಲೇಡೀಸ್ ಪರ್ಸ್ ಮತ್ತು ಲಿಪ್ಸ್ಟಿಕ್ ಗಳು ಕಾಣಿಸಿಕೊಳ್ಳುತ್ತಿವೆ! ಇವುಗಳ ಜೊತೆಗೆ ಇನ್ನು ಮುಂದೆ ಶಿವಲಿಂಗದ ಎಡಬಲದಲ್ಲಿ ಆಧುನಿಕ ಮಹಿಳೆಯರ ನಿತ್ಯವಿನೂತನ ಸೌಂದರ್ಯ ವರ್ಧಕಗಳ, ಸುಗಂಧ ದ್ರವ್ಯಗಳ (cosmetics) ಕರಂಡಕಗಳು ಸೇರ್ಪಡೆಯಾಗುತ್ತಾ ಹೋದರೆ ಮುಂದೊಂದು ದಿನ "ಗೋಪೀಶ್ವರ್ ಮಹಾದೇವ"ನ ಈ ಗುಡಿ ಆಧುನಿಕ ಗೋಪಿಕೆಯರ "ಸೌಂದರ್ಯ ವರ್ಧನ ಕೇಂದ್ರ" (Beauty Parlor) ಆಗಬಹುದು! 

ನಾವು ದೆಹಲಿಗೆ ಹೋದಾಗಲೆಲ್ಲಾ ಬೃಂದಾವನದ ಜಮುನಾ ತೀರದ ದಂಡೆಯಲ್ಲಿರುವ ಶ್ರೀಚೈತನ್ಯಸಂಸ್ಥಾನಕ್ಕೆ ಹೋಗದೆ ಹಿಂದಿರುಗಿದ ಸಂದರ್ಭಗಳಿಲ್ಲ. ಅದಕ್ಕೆ ಕಾರಣ ಅದರ ಆಚಾರ್ಯರಾದ ಶ್ರೀವತ್ಸ ಗೋಸ್ವಾಮಿಯವರು, ನಮ್ಮೊಡನೆ ಎಪ್ಪತ್ತರ ದಶಕದಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಓದಿದವರು. ಸಂಸ್ಕೃತ ವಿಭಾಗದಲ್ಲಿ ನಮ್ಮ ಸಂಶೋಧನಾ ಕಾರ್ಯ ನಡೆದಿದ್ದರೆ ತತ್ವಜ್ಞಾನ ವಿಭಾಗದಲ್ಲಿ ಅವರ ಸಂಶೋಧನಾಕಾರ್ಯ ಸಾಗಿತ್ತು. ವೈಷ್ಣವರಲ್ಲಿ ರಾಮಾನುಜ, ನಿಂಬಾರ್ಕ, ಚೈತನ್ಯ ಇತ್ಯಾದಿ ಅನೇಕ ಸಂಪ್ರ ದಾಯಗಳಿವೆ. ಶ್ರೀವೈಷ್ಣವ ಸಂಪ್ರದಾಯದ ಬಹುತೇಕ ಆಚಾರ್ಯರು ಗೃಹಸ್ಥರು. ನಮ್ಮ ಗೆಳೆಯರಾದ ಗೋಸ್ವಾಮಿಯವರು ಚೈತನ್ಯಸಂಪ್ರದಾಯದವರು. ನಮ್ಮ ನಮ್ಮ ಸಂಪ್ರದಾಯಗಳು ಏನೇ ಇದ್ದರೂ ನಮ್ಮ ಗೆಳೆತನ ಅವುಗಳಿಂದ ಅತೀತವಾದುದು. ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಳಿದು ಕಾರಿನಲ್ಲಿ ಒಟ್ಟಿಗೆ ಕುಳಿತು ಹೊರಡುವಾಗ ನಮಗೆ ನೆನಪಾಗಿದ್ದು ಪುರಂದರದಾಸರು ಹೃದಯತುಂಬಿ ಹಾಡಿದ "ಬೃಂದಾವನದೊಳು ಆಡುವನ್ಯಾರೆ ಚಂದಿರ ವದನೆ ನೋಡೋಣ ಬಾರೇ"! ಸಿಂಧುಭೈರವಿ ರಾಗ ದಲ್ಲಿರುವ ಈ ದೇವರನಾಮವನ್ನು ಪಿಟೀಲಿನಲ್ಲಿ ನುಡಿಸಲು ನಾವು ಕಲಿತದ್ದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿದ್ದಾಗ ಪಿಟೀಲು ಚೌಡಯ್ಯನವರ ಬಿಡಾರಂ ಕೃಷ್ಣಪ್ಪ ಕಲಾಶಾಲೆಯಲ್ಲಿ. ಪುರಂದರದಾಸರ ಈ ದೇವರ ನಾಮದ ಅರ್ಥವನ್ನು ಕನ್ನಡ ಬಾರದ ಗೋಸ್ವಾಮಿಯವರಿಗೆ ತಿಳಿಹೇಳಿದಾಗ ಶ್ರೀಕೃಷ್ಣನ ಆರಾಧಕರಾದ ಅವರಿಗೆ ಆದ ಸಂತೋಷ ಹೇಳತೀರದು. ಪ್ರಯಾಣದುದ್ದಕ್ಕೂ ವಿಭಿನ್ನ ಸಂಪ್ರದಾಯಗಳಲ್ಲಿರುವ ಏಕತೆಯ ವಿಚಾರವಾಗಿ ನಮ್ಮ ಅವರ ಮಧ್ಯೆ ಮುಕ್ತ ಸಂವಾದ ನಡೆಯಿತು. ಅವರ ಚಿಕ್ಕ ಸೊಸೆ ಆಸ್ಥಾ "ಬಸೋ ಮೊರೇ ನೈನನ್ ಮೇಂ ನಂದಲಾಲ್! ಸಾಂವರಿ ಸೂರತ್ ಮೋಹನಿ ಮೂರತ್, ನೈನಾ ಬನೇ ಬಿಸಾಲ್! ಅಧರ್ ಸುಧಾರಸ್ ಮುರಲೀ ರಾಜತ್! ಎಂದು ಸುಶ್ರಾವ್ಯವಾಗಿ ಮೀರಾ ಭಜನ್ ಹಾಡಿದರು. ಅದನ್ನು ಕೇಳಿ ಅದೇ ಅರ್ಥವುಳ್ಳ ಬಸವಣ್ಣನವರ "ನಾಮಾಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಮನದಲ್ಲಿ ನಿಮ್ಮ ನೆನಹು ತುಂಬಿ" ಎಂಬ ವಚನವನ್ನು ಅವರ ಗಮನಕ್ಕೆ ತಂದಾಗ ಎರಡರಲ್ಲಿಯೂ ಇರುವ ಭಕ್ತಿಭಾವಗಳ ಸಾಮ್ಯತೆಯನ್ನು ಮನಗಂಡು ಭಾವುಕರಾದರು. ಅವರ ಸೊಸೆ ಬಸವಣ್ಣನವರ ಈ ವಚನದ ಒಂದೊಂದು ಶಬ್ದವನ್ನೂ ನಿಧಾನವಾಗಿ ನಮ್ಮಿಂದ ಕೇಳಿ ಹಿಂದಿ ಲಿಪಿಯಲ್ಲಿ ಬರೆದುಕೊಂಡು ರಾಗಬದ್ಧವಾಗಿ ಹಾಡಿದರು. 

"ಶಿವರಾತ್ರಿ"ಯಂದು ಮಾಡುವ ಜಾಗರಣೆ ಮತ್ತು ಉಪವಾಸದ ಹಿಂದಿನ ಮೂಲ ಆಶಯ ಮನುಷ್ಯ ವರ್ಷಕ್ಕೊಮ್ಮೆಯಾದರೂ ಸಾಂಸಾರಿಕ ಜೀವನದ ಜಂಜಾಟವನ್ನು ಮರೆತು ಶಿವನನ್ನು ಆರಾಧಿಸಿ ಶರೀರದ ಹಸಿವು-ತೃಷೆಗಳನ್ನು ಮೆಟ್ಟಿ ನಿಂತು ತನ್ನೊಳಗೆ ಅಡಗಿರುವ ಆತ್ಮದ ಅರಿವನ್ನು ಪಡೆಯಲಿ; ಆಧ್ಯಾತ್ಮಿಕ ಹಸಿವು-ತೃಷೆಗಳ ಕಡೆ ಗಮನ ಹರಿಸಲಿ ಎಂಬುದಾಗಿದೆ. ಯಾಂತ್ರಿಕವಾಗಿ ಆಚರಿಸುವ "ಶಿವರಾತ್ರಿ" ನಿದ್ದೆಗೇಡು. ನಿದ್ದೆಗಣ್ಣಿನಲ್ಲಿ ಆಕಳಿಸುತ್ತಾ ಮಾಡುವ ಮಾರನೆಯ ದಿನದ ಕೆಲಸವೂ ಹಾಳು! ಆದಕಾರಣ ಸರಕಾರವು ಶಿವರಾತ್ರಿಯ ದಿನದಂದು ರಜಾ ಕೊಡದೆ ಶಿವರಾತ್ರಿಯ ಮಾರನೆಯ ದಿನ ರಜಾ ಕೊಡುವುದು ಸೂಕ್ತ ಎನಿಸುತ್ತದೆ. ರಾತ್ರಿಯೆಲ್ಲಾ ತೂಕಡಿಸದೆ ಜಾಗರಣೆ ಮಾಡಬೇಕೆಂದು ಟಿವಿ ಮುಂದೆ ಕುಳಿತು ಒಂದರ ಮೇಲೊಂದು ಸಿನಿಮಾಗಳನ್ನು ನೋಡಿದರೆ ಅದು "ಸಿನಿಮಾ ರಾತ್ರಿ"ಯಾಗಬಲ್ಲುದೇ ಹೊರತು "ಶಿವರಾತ್ರಿ"ಯಾಗಲು ಸಾಧ್ಯವಿಲ್ಲ. "ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು" ಎನ್ನುತ್ತಾರೆ ಬಸವಣ್ಣನವರು. ಅಂದರೆ ನಿತ್ಯವೂ ರಾತ್ರಿ ಜಾಗರಣೆ ಮಾಡಬೇಕೆಂದರ್ಥವಲ್ಲ; ತನ್ನ ನಡೆ-ನುಡಿಗಳಲ್ಲಿ ಮನುಷ್ಯ ಸದಾ ಜಾಗರೂಕನಾಗಿರಬೇಕೆಂದರ್ಥ.  

ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೋ,
ಶರಣ ನಡೆದುದೆ ಪಾವನ ಕಾಣಿರೋ,
ಶರಣ ನುಡಿದುದೆ ಶಿವತತ್ವ ಕಾಣಿರೋ!
ಕೂಡಲ-ಸಂಗನ ಶರಣನ
ಕಾಯವೇ ಕೈಲಾಸ ಕಾಣಿರೋ!

ತನ್ನ ನಡೆ-ನುಡಿಯಲ್ಲಿ ಪರಿಶುದ್ದನಾದ ವ್ಯಕ್ತಿ ರಾತ್ರಿ ಹೊತ್ತು ಸಾಂಪ್ರದಾಯಿಕವಾಗಿ ಜಾಗರಣೆ ಮಾಡದೆ ನಿದ್ರೆ ಮಾಡಿದರೂ ಅದು ಒಂದು ರೀತಿಯಲ್ಲಿ ಶಿವನ ಧ್ಯಾನವೇ ಆಗಿರುತ್ತದೆ. ಹಗಲು ಹೊತ್ತು ಎದ್ದು ಕುಳಿತು ತನ್ನ ದೈನಂದಿನ ಕೆಲಸದಲ್ಲಿ ತೊಡಗಿದ್ದರೂ ಅದು ಪವಿತ್ರವಾದ ಶಿವರಾತ್ರಿಯ ಜಾಗರಣೆಯಾಗಿರುತ್ತದೆ. ಅಂತರಂಗ-ಬಹಿರಂಗ ಶುದ್ದಿಯುಳ್ಳ ಅಂತಹ ವ್ಯಕ್ತಿಯ ಶರೀರವೇ ಶಿವನ ಆವಾಸ ಸ್ಥಾನವಾದ ಕೈಲಾಸವಾಗಿರುತ್ತದೆ! "ಕಾಯಕವೇ ಕೈಲಾಸ" ಎಂಬುದು ಬಹಿರಂಗ ಕ್ರಿಯೆಯಲ್ಲಿ ಕಂಡುಬರುವ ಪರಿಶುದ್ಧಿಯಾದರೆ "ಕಾಯವೇ ಕೈಲಾಸ" ಎಂಬುದು ಅಂತರಂಗದಲ್ಲಿ ಕಂಡುಬರುವ ಪರಿಶುದ್ಧಿ!

ಸಹೃದಯ ಓದುಗರೇ! ನಿಮ್ಮೆಲ್ಲರಿಗೂ ಆತ್ಮೋನ್ನತಿಯ ಮಾರ್ಗವನ್ನು ತೋರಿಸುವ ಮಹಾಶಿವರಾತ್ರಿಯ ಶುಭಾಶಂಸನೆಗಳು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.11-3-2021
ಬಿಸಿಲು ಬೆಳದಿಂಗಳು