ಅಪ್ಪಟ ಭಾರತೀಯ ಗ್ರಹಿಣಿಯಾದ ಹಾಲೆಂಡ್ ಮಹಿಳೆ!
ಕೆನಡಾದ ಟೊರೊಂಟೋ ನಗರದ ಯಾರ್ಕ್ ಕೆ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು ಸಮಾಜ ಶಾಸ್ತ್ರಜ್ಞರಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದ ಹಿರೇಮಲ್ಲೂರ್ ಈಶ್ವರನ್ರವರ ಆತ್ಮಕಥೆ 'ವಲಸ ಹೋದ ಕನ್ನಡಿಗನ ಕತೆ'ಯನ್ನು ಕುರಿತು ಕಳೆದ ತಿಂಗಳು ಇದೇ ಅಂಕಣದಲ್ಲಿ ಬರೆದ ಲೇಖನವನ್ನು ನೀವು ಓದಿರಬಹುದು, ಅವರ ಧರ್ಮಪ ಶೈಲಜಾ (ಮೂಲ ಹೆಸರು ವೋಬಿನ್) ರವರು ಇತ್ತೀಚೆಗೆ ಬರೆದ ಎರಡು ಪುಸ್ತಕಗಳನ್ನು ಕೆನಡಾದಿಂದ ನಮಗೆ ಕಳುಹಿಸಿರುತ್ತಾರೆ: 1. Early Years in India 2. Reminiscing My Story. ಮೊದಲನೆಯ ಪುಸ್ತಕವನ್ನು "Special mention to the Guru's: The late Shivakumara Swamiji and the reigning Dr. Shivamurthy Swamiji of the Sirigere Matt, who both guided our Destiny" ಎಂದು ನಮ್ಮ ಗುರುವರ್ಯರಿಗೂ ಮತ್ತು ನಮಗೂ ಒಟ್ಟಿಗೆ ಅರ್ಪಣೆ ಮಾಡಿರುತ್ತಾರೆ. ಎರಡನೆಯದಾದ " "Reminiscing My Story" ಎಂಬ ಪುಸ್ತಕವನ್ನು ಅವರ ಹೆತ್ತ ತಂದೆತಾಯಿಗಳಾದ Aernout ಮತ್ತು Hette ಅವರಿಗೆ ಅರ್ಪಣೆ ಮಾಡಿದ್ದಾರೆ. ಅವರ ಈ ಆತ್ಮಕಥನವು ಕೆಳಕಂಡ ಗಂಭೀರವಾದ ಪ್ರಶ್ನೆಗಳಿಂದ ಆರಂಭವಾಗುತ್ತದೆ.
ನಮ್ಮ ಭವಿತವ್ಯವನ್ನು (Destiny)ಆಕಾಶದಲ್ಲಿರುವ ನಕ್ಷತ್ರಗಳು ರೂಪಿಸುತ್ತವೆಯೋ? ಅಥವಾ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುತ್ತೇವೆಯೋ? ಕೆಲವು ವೇಳೆ ಒಂದು ವಿಶೇಷವಾದ ಆಕಸ್ಮಿಕ ಘಟನೆ ನಮ್ಮ ಜೀವನದ ದಿಕ್ಕನ್ನೇ ಬದಲಿಸಬಹುದು. ಕೊಳದ ನೀರಿಗೆ ಎಸೆದ ಒಂದು ಸಣ್ಣ ಕಲ್ಲು ಕೊಳದ ಸುತ್ತ ಅಲೆಗಳನ್ನುಂಟುಮಾಡಿ ಕೊಳದ ಸ್ವರೂಪವನ್ನೇ ಬದಲಾಯಿಸುತ್ತದೆ. ಹಾಗೆಯೇ ನಮ್ಮ ಜೀವನದಲ್ಲಿ ಸಂಭವಿಸುವ ಕೆಲವು ವಿಶೇಷ ಘಟನೆಗಳು ಅಥವಾ ನಿತ್ಯ ಜೀವನದಲ್ಲಿ ಸಂಭವಿಸುವ ಸಾಧಾರಣ ಘಟನೆಗಳೂ ಸಹ ನಮ್ಮ ಜೀವನದ ಗತಿಯನ್ನೇ ಬದಲಿಸಬಹುದು. ಬಂದ ಅವಕಾಶಗಳನ್ನು ಸರಿಯಾಗಿ ಗುರುತಿಸಿ ಸದುಪಯೋಗಪಡಿಸಿಕೊಂಡು ನಾವೇ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದೇ? ಅಥವಾ ಸರಿಯಾದ ಅಯ್ಕೆಯನ್ನು ಮಾಡಿಕೊಳ್ಳುವುದೇ ನಮ್ಮ ಅದೃಷ್ಟವೇ? ಬಹಳ ವರ್ಷಗಳ ಹಿಂದೆ ಆಕಸ್ಮಿಕವಾಗಿ ಭೇಟಿಯಾದ ವ್ಯಕ್ತಿ ನನ್ನ ಬಾಳಸಂಗಾತಿಯಾಗಿದ್ದು ನನ್ನ ಅದೃಷ್ಟವೇ? ಅಥವಾ ಆತನನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳಬೇಕೆಂಬ ನನ್ನ ನಿರ್ಧಾರ ಅದೃಷ್ಟವೇ?
ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಇಬ್ಬರೂ ಪರಸ್ಪರ ಸಂಧಿಸಿದ್ದು ಹೇಗೆ ಎಂದು ವೋಬಿನ್ 8 ನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ. ಒಮ್ಮೆ ಆಸ್ಪತ್ರೆಯಿಂದ ರಾತ್ರಿ ಪಾಳೆಯ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದಾಗ Aij Moeder ಮತ್ತು ಅಕ್ಕ Agnes ಒಂದು ಕುತೂಹಲಕರ ಸಂಗತಿಯನ್ನು ತಿಳಿಸಿದರು. ಹಿಂದಿನ ವಾರ ಒಬ್ಬ ಭಾರತೀಯ ಯುವಕ ಬಂದಿದ್ದ. ಸಮಾಜಶಾಸ್ತ್ರ ಕುರಿತು ಲೈಡನ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದಾನೆ. ನಮ್ಮ ಕೌಟುಂಬಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಒಂದು ಪ್ರಶ್ನಾವಳಿಯನ್ನು ಕೊಟ್ಟು ನಮ್ಮ ಸಂದರ್ಶನ ನಡೆಸಲು ಮತ್ತೆ ಬರುವುದಾಗಿ ಹೇಳಿ ಹೋದ. ತುಂಬಾ ಪ್ರತಿಭಾನ್ವಿತವಾಗಿ ಕಾಣಿಸಿದ. ಆತ Hague ನಗರದಲ್ಲಿಯೂ ವಾಸವಾಗಿದ್ದಾನೆ. ನಿನ್ನ ವಿಳಾಸ ಮತ್ತು ಟೆಲಿಫೋನ್ ನಂಬರ್ ಕೊಟ್ಟಿರುತ್ತೇನೆ ಎಂದು ಅಕ್ಕ ಹೇಳಿದಳು. ಕೆಲವು ದಿನಗಳ ನಂತರ ಈಶ್ವರನ್ ವೋಬಿನ್ ಗೆ ಫೋನ್ ಮಾಡಿ ಒಂದು ಉದ್ಯಾನವನದಲ್ಲಿ ಸಂದರ್ಶನ ನಡೆಸಿದರು. ಆ ದಿನ ನಡೆಸಿದ ಸಂದರ್ಶನವೇ ವೋಬಿನ್ ರವರ ಭವಿಷ್ಯ ಜೀವನಕ್ಕೆ ಒಂದು ತಿರುವನ್ನು ನೀಡಿತು. ಈಶ್ವರನ್ ರವರ ಪ್ರತಿಭೆಗೆ ವೋಬಿನ್ ಹೃದಯದಲ್ಲಿ ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು. ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದಲು ಹೆಚ್ಚಿನ ಹಣ ಸಹಾಯ ಮಾಡಿದ್ದ ನಮ್ಮ ಗುರುವರ್ಯರ ಸಮ್ಮುಖದಲ್ಲಿಯೇ ಮದುವೆಯಾಗ ಬಯಸಿ ನಮ್ಮ ಮಠಕ್ಕೆ ಬಂದರು.
ನಮ್ಮ ಮಠದಲ್ಲಿ ಜರುಗಿದ ಮದುವೆಯ ಸಂದರ್ಭವನ್ನು ತಮ್ಮ ಆತ್ಮಕತೆಯ 12ನೆಯ ಅಧ್ಯಾಯಕ್ಕೆ ವೋಬಿನ್ ಕೊಟ್ಟ ಶೀರ್ಷಿಕೆ: Uniting a Daughter of the Stars with the Son of the Soil. (ನಕ್ಷತ್ರ ಕುವರಿಯನ್ನು ಮಣ್ಣಿನ ಮಗನ ಕೈ ಹಿಡಿಯುವಂತೆ ಮಾಡಿದಾಗ). “ನನಗೆ ಕನ್ನಡ ಬರಲ್ಲ, ಅತ್ತೆ, ನಾದಿನಿ ನೀಲಮ್ಮ, ಮೈದುನನ ಪುಟಾಣಿ ಮಗ ರವಿಂದ್ರ ಅವರಿಗೆ ಇಂಗ್ಲಿಷ್ ಬರಲ್ಲ. ಆದರೆ ಅವರ ಮುಖದ ಮೇಲಿನ ಮಂದಹಾಸ ನಾನೂ ಆ ಕುಟುಂಬದಲ್ಲಿ ಒಬ್ಬಳು ಎಂಬ ಸಂತೃಪ್ತ ಭಾವವನ್ನು ತುಂಬಿತು! ಅತ್ತೆ ಬಸಪ್ಪ ಉಡುತ್ತಿದುದು ಸಾಂಪ್ರದಾಯಿಕ ಸೀರೆ, ತಲೆಯ ಮೇಲೆ ಸೆರಗು ಹೊದೆಯುತ್ತಿದ್ದರು. ಅಂದವಾದ ಮುಖದ ಮೇಲೆ ಸಿಹಿಯಾದ ಮಾಸದ ಮುಗುಳು ನಗೆಯ ಮಂದಾರ! ಭಾರತೀಯ ಸಂಪ್ರದಾಯದಂತೆ ನಾನು ಬಾಗಿ ಪಾದಮುಟ್ಟಿ ನಮಸ್ಕಾರ ಮಾಡಿದೆ. ಅದು ನಮ್ಮಿಬ್ಬರ ಜೀವನದಲ್ಲಿ ಅವಿಸ್ಮರಣೀಯ ಅನುಭವ. ಆಗಲೇ ನಾನು ಸಂಕಲ್ಪ ಮಾಡಿದೆ: ಆದಷ್ಟು ಬೇಗ ಕನ್ನಡ ಕಲಿಯಬೇಕು!'' ಎಂದು ವೋಬಿನ್ ದಾಖಲಿಸುತ್ತಾರೆ.
''ಮದುವೆಯ ಹಿ೦ದಿನ ದಿನ ನನ್ನನ್ನು ಮತ್ತು ನನ್ನ ಭಾವೀ ಬಂಧು ಬಳಗವನ್ನು ಒಂದು ಬಸ್ಸಿನಲ್ಲಿ ಸಿರಿಗೆರೆ ಮಠಕ್ಕೆ ಕರೆದೊಯ್ಯಲಾಯಿತು . ಬಸ್ಸನ್ನು ಕುಳಿತುಕೊಳ್ಳುವಾಗ ಹಿರಿಯರು ಮತ್ತು ಮಕ್ಕಳು ವಿದೇಶಿ ಬಿಳಿ ಹುಡುಗಿಯಾದ ನನ್ನನ್ನು ಕುತೂಹಲಭರಿತ ಕಣ್ಣುಗಳಿಂದ ನೋಡತೊಡಗಿದರು. ಸಿರಿಗೆರೆ ಮಠವನ್ನು ತಲುಪಿದಾಗ ಮಠದ ಮಹಾದ್ವಾರದ ಮೇಲು ಮಹಡಿಯಲ್ಲಿ ವಾಸವಾಗಿದ್ದ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಬಿಡಾರಕ್ಕೆ ಕರೆದುಕೊಂಡು ಹೋದರು. ಪರಮಪೂಜ್ಯರು ನಮ್ಮನ್ನು ನೋಡಿ ತುಂಬಾ ಸಂತೋಷಪಟ್ಟರು. My first impression of His Holiness was the awareness that I was in the presence of a saintly person a person whose mind and body was superior to that of those surrounding him. He was very warm-hearted and sensitive and understanding of the feelings Ishwaran and I had for each other".
ಆ ದಿನ ರಾತ್ರಿ ಮಠದ ಒಂದು ಹಾಲ್ನಲ್ಲಿ ಗಂಡಸರು ಮತ್ತೊಂದು ಹಾಲ್ ನಲ್ಲಿ ಹೆಂಗಸರು ಮಲಗಿದರು. ಹಾಸಿಗೆಗಳಿಲ್ಲ: ಎಲ್ಲರೂ ತಂತಮ್ಮ ಚಾಪೆ, ಜಮಖಾನೆ, ಹಾಸಿಗೆ, ಹೊದಿಕೆ ತಂದಿದರು. ಆಶ್ಚರ್ಯದ ಸಂಗತಿಯೆಂದರೆ ನನಗಾಗಿ ಯಾರೂ ಚಾಪೆ ಸಹ ತಂದಿರಲಿಲ್ಲ. ನನ್ನ ಗೆಳತಿಯರು ಕೂಡಲೇ ಚಾಪೆ, ಹಾಸಿಗೆ ದಿಂಬು ಒದಗಿಸಿದರು! ಸುಸ್ತಾಗಿತ್ತು, ಗಾಢ ನಿದ್ದೆಗೆ ಜಾರಿದೆ. ಬೆಳಗಿನ ಜಾವ ಮಂಗಳವಾದ್ಯಗಳ ನಿನಾದಕ್ಕೆ ಎಚ್ಚರವಾಯಿತು. ನನ್ನ ಮದುವೆ ಅಂದು ಬೆಳಗಿನ ಆರು ಗಂಟೆಗೆ!
ಸ್ನಾನದ ನಂತರ ಈಶ್ವರನ್ ತಂಗಿ ಶಂಕರವ್ವ ಸೀರೆ ಉಡಿಸಿದರು. ಬನಾರಸ್ ಸಿಲ್ಕ್ ಸೀರೆ. ತಿಳಿ ಹಳದಿ ಬಣ್ಣದ ಸೀರೆ, ಕೆಂಪು ವರ್ಣದ ಚಿನ್ನದ ಎಳೆಗಳ ಕಸೂತಿಯ ಮನಸೆಳೆಯುವ ಅಂದದ ಸೀರೆ! ನಾದಿನಿ ಮತ್ತು ಇನ್ನಿಬ್ಬರು ಮಹಿಳೆಯರು ಮದುವೆಯ ಮಂಟಪಕ್ಕೆ ನನ್ನನ್ನು ಕರೆತಂದರು. ಮಂಗಳವಾದ್ಯಗಳು ಮೊಳಗಿ ವಧುವಿನ ಆಗಮನವನ್ನು ಸಾರಿದವು. ಸ್ಟೇಜಿನ ಮೇಲೆ ಹಾಕಿದ ಕುರ್ಚಿಯಲ್ಲಿ ನನ್ನನ್ನು ಕೂರಿಸಿದರು. ನನ್ನ ಪಕ್ಕದ ಖಾಲಿ ಕುರ್ಚಿ ಮದುವಣಿಗನಿಗಾಗಿ! ನಂತರ ಗಂಡಿನ ಕಡೆಯವರು ಬಂದರೆಂಬುದನ್ನು ಮಂಗಳವಾದ್ಯಗಳ ನಿನಾದವು ಸಾರಿತು. ಇಬ್ಬರು ಮಹಿಳೆಯರು ಎರಡು ಕುರ್ಚಿಗಳ ಮಧ್ಯೆ ಒಂದು ಟವೆಲನ್ನು ಅಡ್ಡವಾಗಿ ಅಂತರ ಪಟ) ಹಿಡಿದಿದ್ದರು. ಮದುವೆಗೆ ಮುಂಚೆ ಗಂಡು ಹೆಣ್ಣು ನೋಡಬಾರದು, ಬೇರೆ ಬೇರೆ ಕುಟುಂಬಗಳಿಗೆ ಸೇರಿದವರು ಎಂಬುದರ ಸಂಕೇತವದು. ಪುರೋಹಿತರು ಹಚ್ಚಿದ ಊದುಬತ್ತಿಯ ಹೊಗೆಯಿಂದ ನನಗೆ ಸೀನು ಬಂದುಬಿಟ್ಟಿತು. ನಂತರ ಕೆಲವು ಮಂತ್ರಗಳ ಪಠಣ. ಆಮೇಲೆ ಅಂತರಪಟವನ್ನು ಸರಿಸಲಾಯಿತು; ಇಬ್ಬರೂ ಒಬ್ಬರನ್ನೊಬ್ಬರು ನೋಡುವಂತಾಯಿತು. ಪರಿಮಳಭರಿತ ಹೂಗಳ ಹಾರಗಳನ್ನು ಪರಸ್ಪರ ಹಾಕಿದೆವು. ಪುರೋಹಿತರು ತೆಂಗಿನ ಕಾಯಿ ಒಡೆದು ತೀರ್ಥವನ್ನು ಇಬ್ಬರ ತಲೆಯ ಮೇಲೆ ಪ್ರೋಕ್ಷಣೆ ಮಾಡಿದರು. ನಂತರ ಸಂಸ್ಕೃತದಲ್ಲಿ ಏಳು ಪ್ರಮಾಣಗಳನ್ನು ಮಾಡಿಸಿದರು. ಆವರು ಹೇಳಿದಕ್ಕೆಲ್ಲಾ ಇಬ್ಬರೂ “ಹೌದು, ಹಾಗೇ ಮಾಡುತ್ತೇವೆ' ಎಂದು ಪ್ರಮಾಣ ಮಾಡಿದೆವು. ಇದಕ್ಕೆ ಸಪ್ತಪದಿ ಎನ್ನುತ್ತಾರೆ: 1. ಪರಸ್ಪರ ಬೆಂಬಲಕ್ಕೆ ನಿಲ್ಲುತ್ತೇವೆ. 2. ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನು ಬೆಳೆಸಿಕೊಳ್ಳುತ್ತೇವೆ. 3. ಐಹಿಕ ಸುಖಭೋಗಗಳನ್ನು ಪರಸ್ಪರ ಹಂಚಿಕೊಳ್ಳುತ್ತೇವೆ. 4. ಶಕ್ತಿಶಾಲಿ ಮತ್ತು ಶೀಲವಂತ ಮಕ್ಕಳನ್ನು ಪಡೆದು ಬೆಳೆಸುತ್ತೇವೆ. 5. ನಮಗೆ ಜ್ಞಾನ, ಸುಖ ಮತ್ತು ಶಾಂತಿ ಬೇಕು. 6, ಎಲ್ಲಾ ಕಾಲಮಾನದ (Season) ಹಣ್ಣುಗಳನ್ನು ಸವಿಯುತ್ತೇವೆ 7, ನಾವಿಬ್ಬರೂ ಯಾವಾಗಲೂ ಗೆಳೆಯರಾಗಿ ಉಳಿದು ಪರಸ್ಪರ ಅನ್ನೋನ್ಯವಾಗಿರುತ್ತೇವೆ' ಎಂಬುವೇ ಏಳು ಹೆಜ್ಜೆಗಳ ಅನುಬಂಧ!
ನಂತರ ಉಂಗುರಗಳ ಬದಲಾವಣೆ ಆಯಿತು. ಈಶ್ವರನ್ ನನ್ನ ಕೊರಳಿಗೆ ಮಂಗಳಸೂತ್ರಧಾರಣೆ ಮಾಡಿದರು. ನಮ್ಮ ದೇಶಗಳಲ್ಲಿ ಇರುವಂತೆ ವಧುವನ್ನು ಚುಂಬಿಸುವ ಪದ್ಧತಿ ಹಿಂದೂ ಸಾಂಪ್ರದಾಯಿಕ ವಿವಾಹದಲ್ಲಿ ಇಲ್ಲವೇ ಇಲ್ಲ! ಸಿರಿಗೆರೆಯ ಸುತ್ತಮುತ್ತಲ ಹಳ್ಳಿಗಳ ಜನರು ಮದುವೆಯನ್ನು ಸಾಕ್ಷೀಕರಿಸಲು ಬಂದಿದ್ದರು. ವೇದಿಕೆಯ ಎದುರು ಹಾಸಿದ ಜಮಖಾನೆಗಳ ಮೇಲೆ ಎಡಭಾಗದಲ್ಲಿ ಗಂಡಸರು, ಬಲಭಾಗದಲ್ಲಿ ಹೆಂಗಸರು ಶಿಸ್ತಾಗಿ ಕುಳಿತಿದ್ದರು. ಹೆಂಗಸರು ಉತ್ತಮೋತ್ತಮ ಸೀರೆ ಒಡವೆಗಳನ್ನು ಧರಿಸಿ ಕಂಗೊಳಿಸುತ್ತಿದ್ದರು. ಅದೊಂದು ಅದ್ಭುತ, ಸಂತಸ ತುಂಬಿದ, ನಗೆಚೆಲ್ಲುವ ಜನಸಂದಣಿ. ಸಾಲಾಗಿ ಬಂದು ಶುಭಾಶಯ ಕೋರಿ ತಲೆಯ ಮೇಲೆ ಪುಷ್ಪವೃಷ್ಟಿ ಮಾಡಿದರು. ಪುಟ್ಟ ಪುಟ್ಟ ಹಣದ ಉಡುಗೊರೆ ನೀಡಿ ಸಂಭ್ರಮಿಸಿದರು. ಚಿಕ್ಕ ತಟ್ಟೆಯಲ್ಲಿ ಎಣ್ಣೆಯ ನೀಲಾಂಜನಗಳು, ಕುಂಕುಮ, ಆರತಿ. ನಮ್ಮ ಮುಖದ ಮುಂದೆ ಪ್ರದಕ್ಷಿಣಾಕಾರವಾಗಿ ಸುತ್ತಿಸಿ ಆರತಿ ಮಾಡಿ 'ಗಂಡನ ಹೆಸರು ಹೇಳು' ಎಂದು ಹಾಸ್ಯ ಚಟಾಕಿ ಹಾರಿಸಿದರು. ಭಾರತೀಯ ಮಹಿಳೆಯರು ಗಂಡನನ್ನು ಹೆಸರು ಹಿಡಿದು ಕರೆಯುವುದಿಲ್ಲ; ಬದಲಾಗಿ 'ರೀ' ಎಂದು ಮಾತಾಡಿಸುತ್ತಾರೆ. ನಾನು 'ಈಶ್ವರನ್' ಎಂದು ಹೆಸರು ಹೇಳಿದಾಗ ಮುಸು ಮುಸು ನಗುತ್ತಿದ್ದರು!''
ಈಶ್ವರನ್ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಫ್ರೋಫೆಸರ್ ಆಗಿ ನೇಮಕಗೊಂಡ ನಂತರ ಧಾರವಾಡದ ಕ್ಯಾಂಪಸ್ನಲ್ಲಿ ಮನೆ ಸಿಕ್ಕಿತು. ಅಳಿಯಂದಿರು ಮತ್ತು ಸೊಸೆಯಂದಿರು 7 ಜನ ಮನೆಯಲ್ಲಿ ವಾಸಕ್ಕೆ ಬಂದರು. ಹಿರಿಯನಾದ ರವಿಗೆ 12 ವರ್ಷ, ಆತನ ಇಬ್ಬರು ತಂಗಿಯರು ಮುಕ್ತಿ ಮತ್ತು ಶಾಂತು, ನೀಲಮ್ಮ, ಗಂಗು, ರಮೇಶ ಮತ್ತು ಬೇಬಿ ಶಶಿ ಇವರು ಈಶ್ವರನ್ ತಂಗಿಯ ಮಕ್ಕಳು. ಮನೆಯ ಆಳು ರುದ್ರಯ್ಯ, ಈಶ್ವರನ್ ತುಂಬಾ ಶಿಸ್ತಿನ ಮನುಷ್ಯ, ಮಕ್ಕಳ ಅಶಿಸ್ತನ್ನು ಸಲವೂ ಸಹಿಸುತ್ತಿರಲಿಲ್ಲ, ""ಅಷ್ಟೊಂದು ಬಿಗಿಯಾಗಿರುವ ಅವಶ್ಯಕತೆಯಿರಲಿಲ್ಲ. ಆದರೆ ಹೊಸ ಗಂಡನ ಜೊತೆ ಜಗಳವಾಡಲು ನನಗೆ ಇಷ್ಟವಿರಲಿಲ್ಲ!"
ತಿಂಗಳುಗಳುರುಳಿದವು, ಅಗಾಗ ಮಾವ ಮನೆಗೆ ಬರುತ್ತಿದ್ದರು. ಬಿಳಿ ಉಡುಪು, ತಲೆಯ ಮೇಲೆ ಬಿಳಿ ರುಮಾಲು, ಪ್ರಶಾಂತ ಚಿತ್ತದ ಅಧಿಕಾರಯುತ ಮನುಷ್ಯ, ಯಾವಾಗಲೂ ತಮ್ಮ ಕೋಣೆಯಲ್ಲಿ ಪ್ರಾರ್ಥನಾ ಶ್ಲೋಕಗಳನ್ನು ಓದಿಕೊಳ್ಳುತ್ತಿದ್ದರು. ಸಂಜೆಯ ಹೊತ್ತು ಮಕ್ಕಳನ್ನು ಕೂರಿಸಿಕೊಂಡು ಕನ್ನಡ ವರ್ಣಮಾಲೆಯನ್ನು ಬಾಯಿಪಾಠ ಮಾಡಿಸುತ್ತಿದ್ದರು, ಮಗ್ಗಿ ಕಲಿಸುತ್ತಿದ್ದರು. ಧಾರ್ಮಿಕ ಪುರುಷರ, ಅದರಲ್ಲೂ ವಿಶೇಷವಾಗಿ ಬಸವೇಶ್ವರರ ಕತೆಗಳನ್ನು ಹೇಳುತ್ತಿದ್ದರು.
ಹಬ್ಬದ ಸಂದರ್ಭದಲ್ಲಿ ಅತ್ತೆಯೂ ಊರಿಂದ ಬರುತ್ತಿದ್ದರು. ನಮ್ಮ ಜೊತೆ ಆರಾಮವಾಗಿ ಕಾಲ ಕಳೆಯುವುದು ಅವರಿಗೆ ಬಲು ಇಷ್ಟವಾಗುತ್ತಿತ್ತು. ಆಳುಗಳಿಗೆ ಹೇಳಿ ಕೆಲಸ ಮಾಡಿಸುತ್ತಿದ್ದರು. ಅಡುಗೆ ಮನೆ ಉಸ್ತುವಾರಿ ಅವರದ್ದೇ, ಅವರು ಪಾಠಶಾಸ್ತ್ರ ಪ್ರವೀಣೆ, ಹಬ್ಬಗಳಲ್ಲಿ ಅವರು ತಯಾರಿಸುತ್ತಿದ್ದ ಸಿಹಿಖಾದ್ಯಗಳು ತುಂಬಾ ರುಚಿಕಟ್ಟಾಗಿರುತ್ತಿದ್ದವು, ಅವರ ಹೋಳಿಗೆ ಮತ್ತು ಅದರ ಜೊತೆ ತುಪ್ಪ ಅಥವಾ ಮಾವಿನ ಹಣ್ಣುಗಳ ಸೀಜನ್ನಲ್ಲಿ ಸೀಕರಣೆ ಸವಿಯನ್ನು ಮರೆಯುವಂತಿಲ್ಲ ನಾವಿಬ್ಬರೂ ಮಾತಾಡುತ್ತಿದ್ದುದು ಕೈಸನ್ನೆ, ಬಾಯಿ ಸನ್ನೆಯಲ್ಲಿಯೇ ಹೆಚ್ಚು. ಅವರಿಗೆ ನಾನೆಂದರೆ ಬಹಳ ಪ್ರೀತಿಯಿತ್ತು. ಪರಸ್ಪರ ಮುಗುಳಗೆ ನಮ್ಮ ಪ್ರಮುಖ ಸಂವಹನ ಭಾಷೆಯಾಗಿತ್ತು. ನನಗೆ ಕನ್ನಡ ಕಲಿಸಲು ನಿವೃತ್ತ ಶಾಲಾ ಮಾಸ್ತರೊಬ್ಬರನ್ನು ಗೊತ್ತು ಮಾಡಿದರು. ನಾನು ಕನ್ನಡ ಬರೆಯಲು, ಓದಲು ಬಹು ಬೇಗ ಕಲಿತು ಅತ್ತೆ, ಮಾವ, ಸೇವಕರು ಮತ್ತು ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡತೊಡಗಿದೆ. ತರಕಾರಿ ತರಲು ಮಾರುಕಟ್ಟೆಗೂ ಹೋಗಿ ಬರತೊಡಗಿದೆ. ಕೆ. ಈಶ್ವರನ್, ಬಾಲ್ಯದ ಹೆಸರು ಈಶ್ವರಗೌಡಾ ಪಾಟೀಲ. ಅವರಿಗೆ ತಂದೆ ತಾಯಿಗಳ ಅಪಾರ ಪ್ರೀತಿ ದೊರಕಿ ಮುಂದೆ ಬಂದಿದ್ದರು. ತಮ್ಮ ತಂದೆ ತಾಯಿಗಳ ತ್ಯಾಗವನ್ನು ಈಶ್ವರನ್ ಎಂದೂ ಮರೆಯಲಿಲ್ಲ. ಇದೇ ಸಂದರ್ಭದಲ್ಲಿ ದಾಂಪತ್ಯದ ಬಳ್ಳಿ ಹೂಬಿಟ್ಟಿತು; ಅರುಂಧತಿ ಹುಟ್ಟಿದಳು.
ಪಾಶ್ಚಾತ್ಯ ಮಹಿಳೆ ಅಪ್ಪಟ ಭಾರತೀಯ ಗೃಹಿಣಿಯಾದ ಪರಿ ಇದು! ಇಂದಿನ ಸೊಸೆಯಂದಿರಿಗೆ 90 ವರ್ಷದ ಗಡಿ ದಾಟಿರುವ ಈ ಬಿಳಿ ಸೊಸೆಯಿಂದ ಕಲಿಯಬೇಕಾದ್ದು ಬಹಳವಿದೆ. ಇತ್ತೀಚೆಗೆ ಅವರು ನಮಗೆ ಬರೆದ ಪತ್ರದ ಈ ಮುಂದಿನ ಆಯ್ದ ಸಾಲುಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿಸಿದವು.
Dear Honorable Dr Shivamurthy Swamiji, My family and I are all fine, the kids are growing up into wonderful responsible and intelligent young adults and teen agers. I keep in contact through e-mail with my relatives in India. I don't think I will be able to visit India anymore since old age is creeping up!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.8-4-2021
ಬಿಸಿಲು ಬೆಳದಿಂಗಳು