ಅಷ್ಟೋತ್ತರ ಶತಾಯುಷಿ ಶಬ್ದಬ್ರಹ್ಮ ಜೀವಿ!
ಕನ್ನಡದ ಶಬ್ದಬ್ರಹ್ಮ, ಸಂಶೋಧಕ, ನುಡಿಗಾರುಡಿಗ, ನಡೆದಾಡುವ ನಿಘಂಟು ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪ್ರೊ ಜಿ. ವೆಂಕಟಸುಬ್ಬಯ್ಯನವರು ವಯೋಸಹಜ ಅನಾರೋಗ್ಯದ ಕಾರಣ ದಿನಾಂಕ 18-4-2021ರಂದು ಭಾನುವಾರ ತಡ ರಾತ್ರಿ ತಮ್ಮ 108ನೇ ವಯಸ್ಸಿನಲ್ಲಿ ಇಹಲೋಕದ ಬದುಕಿಗೆ ವಿದಾಯ ಹೇಳಿದರು. ಮಂತ್ರಜಪದಲ್ಲಿ108ನೇ ಸಂಖ್ಯೆ ಪವಿತ್ರ ಸ್ಥಾನವನ್ನು ಪಡೆದಿದೆ. ಅಂತೆಯೇ 108 ವರ್ಷಗಳ ಸುದೀರ್ಘ ಕಾಲ ಪವಿತ್ರ ಜೀವನವನ್ನು ಇಹದಲ್ಲಿ ಬಾಳಿದವರು ಅವರು.
ಹಿರಿಯ ಕನ್ನಡ ಸಾಹಿತಿಗಳು ಸರಸ್ವತೀಪುತ್ರರು, ಲಕ್ಷ್ಮೀಪುತ್ರರಲ್ಲ. ಈಗಿನಂತೆ ಅವರಿಗೆ ಲಕ್ಷಾಂತರ ರೂ.ಗಳ ಯುಜಿಸಿ ವೇತನ ಬರುತ್ತಿರಲಿಲ್ಲ, ಬಹಳ ಕಷ್ಟದಿಂದ ಜೀವನ ನಡೆಸಿ ಸಾಹಿತ್ಯ ಸೇವೆ ಮಾಡಿದವರು ಅವರು. ವರಕವಿ ದ.ರಾ ಬೇಂದ್ರೆಯವರು ಆಗಾಗ 'ಬೆಂದು ಬೆಂದು ಬೇಂದ್ರೆ ಆದೆ ಎಂದು ಹೇಳುತ್ತಿದ್ದರಂತೆ. ವೈಯಕ್ತಿಕ ಬದುಕಿನ ಹಾದಿ ಅವರಿಗೆಂದೂ ಹೂವಿನ ಹಾಸಾಗಿರಲಿಲ್ಲ, ಎತ್ತ ಹೊರಳಿದರೂ ಬರೀ ಮುಳ್ಳುಗಳೇ! ಶಬ್ದಬ್ರಹ್ಮರೆಂದೇ ಹೆಸರಾದ ಪ್ರೊ| ಜಿ. ವೆಂಕಟಸುಬ್ಬಯ್ಯನವರು 1943 ರಲ್ಲಿ ದಾವಣಗೆರೆಯ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿದ್ದರು. ಆಗ ಅವರಿಗೆ ಬರುತ್ತಿದ್ದ ವೇತನ ತಿಂಗಳಿಗೆ ಕೇವಲ 35 ರೂ.ಗಳು. ದುಡಿಮೆಯ ಹಣ ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಆಗ ದಾವಣಗೆರೆಯಲ್ಲಿ ನಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಬಡ ಮಕ್ಕಳಿಗೆಂದು 1922ರಲ್ಲಿ ಸ್ಥಾಪಿಸಿದ್ದ ಒಂದು ವಿದ್ಯಾರ್ಥಿನಿಲಯವಿತ್ತು. ಅದರಲ್ಲಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಪಾಠ ಹೇಳಿಕೊಡುವಂತೆ ನಮ್ಮ ಪರಮಾರಾಧ್ಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಕರೆ ಹೋಯಿತು. 'ಜೀವಿ'ಯವರಿಗೆ ನೌಕರಿಯಲ್ಲಿ ಸಿಗುತ್ತಿದ್ದವೇತನಕ್ಕಿಂತ ಎರಡು ಪಟ್ಟು ಅಂದರೆ 75 ರೂ.ಗಳನ್ನು ನಮ್ಮ ಗುರುವರ್ಯರು ಕೊಟ್ಟರು. ಜೀವನ ರಥ ನೆಮ್ಮದಿಯಿಂದ ಸಾಗಿತು. ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ನೀಡಿದ ಪತ್ರಿಕಾ ಸಂದರ್ಶನವೊಂದರಲ್ಲಿ ಅವರೇ ಇದನ್ನು ಸ್ಮರಿಸಿಕೊಂಡಿದ್ದಾರೆ. ಈ ವಿಷಯ ನಮಗೆ ತಿಳಿದೇ ಇರಲಿಲ್ಲ. ಉಪಕಾರ ಸ್ಮರಣೆ ಎಂಬುದು ಈಗಿನ ದಿನಮಾನಗಳಲ್ಲಿ ವಿರಳಾತಿ ವಿರಳವಾದ ಒಂದು ಮೌಲ್ಯ! ಅಂತಹ ಮೌಲ್ಯವನ್ನು ಜೀವಿಸಿದವರು 'ಜೀವಿ'!
ನಮ್ಮ ಗುರುವರ್ಯರು ಅವರಿಗೆ ಕೊಡಮಾಡಿದ್ದ75 ರೂ. ಗಳು ಈಗ ನಗಣ್ಯವಾಗಿ ತೋರಬಹುದು. ಆದರೆ 1943ರಲ್ಲಿ ಇದ್ದ ಚಿನ್ನದ ಬೆಲೆ ಒಂದು ತೊಲಕ್ಕೆ 62 ರೂ.ಗಳು ಮಾತ್ರ. ಈಗ ಚಿನ್ನದ ಬೆಲೆ 48,690 ರೂ.ಗಳಿಗೆ ಏರಿದೆ. ಅಂದರೆ ನಮ್ಮ ಗುರುಗಳು ಆಗ ಕೊಡುತ್ತಿದ್ದ 75 ರೂ.ಗಳ ಮೌಲ್ಯ ಇಂದಿನ ಲೆಕ್ಕಾಚಾರದಲ್ಲಿ 67,200 ರೂ.ಗಳಿಗೆ ಸಮಾನ ಎಂಬುದನ್ನು ಗಮನಿಸಬೇಕು. ಮಠದಿಂದ ಆದ ಸಹಾಯಕ್ಕೆ ಅವರು ಜೀವನವಿಡೀ ಕೃತಜ್ಞರಾಗಿದ್ದರು. ಈಗ ತುತ್ತಿಟ್ಟವರ ಬಟ್ಟು (ಬೆರಳು) ಕಚ್ಚುವ ಕೃತಘ್ನರೇ ಜಾಸ್ತಿ. ಆದಕಾರಣವೇ 'ಹಾವಿಗೆ ಹಾಲೆರೆದರೇನು ಫಲ?' ಎಂದು ಪುರಂದರ ದಾಸರು ಹಾಡಿದ್ದು, ಭುಜಂಗಾನಾಂ ಪಯಃಪಾನಂ ಕೇವಲಂ ವಿಷವರ್ಧನಂ ಎನ್ನುತ್ತದೆ ಸಂಸ್ಕೃತ ಸೂಕ್ತಿ. ಹಾವಿಗೆ ಹಾಲೆರೆದರೆ ಹಾಲು ಕುಡಿದ ಹಾವು ಹಾಲಿನ ಸಾತ್ವಿಕ ಗುಣಗಳನ್ನೇನೂ ಅಳವಡಿಸಿಕೊಳ್ಳುವುದಿಲ್ಲ; ಪ್ರಾಣಾಂತಿಕವಾದ ವಿಷವನ್ನೇ ಕಾರುತ್ತದೆ. ಇದಕ್ಕೆ ಅಪವಾದವೆಂಬಂತೆ 'ಜೀವಿ' ಯವರು ಬದುಕಿರುವುದನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅವರ ವೃತ್ತಿಜೀವನದ ಆರಂಭದಲ್ಲಿ ನಮ್ಮ ಗುರುಗಳು ನೀಡಿದ ಉದಾರ ಸಹಾಯವನ್ನು ಸ್ಮರಿಸಿಕೊಂಡಿರುವುದರಲ್ಲಿ ಕಾಣಬಹುದು.
ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಬರಲು ನಮ್ಮ ಮಠದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಆರ್. ವೆಂಕಟೇಶ ಶೆಟ್ಟಿಯವರನ್ನು ಕಳುಹಿಸಿದಾಗ ಅವರು ತುಂಬಾ ಸಂತೋಷಪಟ್ಟು ಹಳೆಯ ನೆನಪುಗಳನ್ನು ಹಂಚಿಕೊಂಡರು. ಅಲ್ಲದೆ 2012ರಲ್ಲಿ ಕಡೂರಿನಲ್ಲಿ ನಡೆದ ನನ್ನ ಮನದ ವಾರ್ಷಿಕ ಸಮಾರಂಭವಾದ 'ತರಳಬಾಳು ಹುಣ್ಣಿಮೆ ಮಹೋತ್ಸವ'ದ ಸ್ಮರಣಸಂಚಿಕೆಗೆ ಅವರು 'ತರಳಬಾಳು ಮಠ ಮತ್ತು ನಾನು ಎಂಬ ಲೇಖನವನ್ನೂ ಬರೆದು ಕಳುಹಿಸಿದರು. ಅದರ ಅಯ್ಕೆ ಕೆಲವು ಸಾಲುಗಳು ಹೀಗಿವೆ:
“ನಾನು ದಾವಣಗೆರೆಗೆ ಹೋದಾಗ ಅಲ್ಲಿಯ ಹೆಡ್ ಮಾಸ್ಟರವರು 'ನೀವು ಬರುವುದಿಲ್ಲ ಎಂದುಕೊಂಡಿದ್ದ ಬಂದೇ ಬಿಟ್ಟಿರಲ್ಲಾ!' ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ರಜೆಯ ಮೇಲೆ ಇದ್ದ ಬೇರೆ ಅಧ್ಯಾಪಕರ ನಾಲ್ಕು ತಿಂಗಳ ತಾತ್ಕಾಲಿಕ ಕಾಲಾವಧಿಗೆ ಎಂ.ಎ, ಬಿ.ಟಿ. ಮಾಡಿದವರು ಯಾರು ಬರುತ್ತಾರೆ ಎಂಬುದು ಅವರ ಊಹೆಯಾಗಿತ್ತು. ನನ್ನ ಪರಿಸ್ಥಿತಿಯನ್ನು ಅವರಿಗೆ ತಿಳಿಸಿ ಕೆಲಸಕ್ಕೆ ಸೇರಿಕೊಂಡೆ. ನಾನು ಕನ್ನಡ ಅಧ್ಯಾಪಕ, ಆದರೆ ಅದು ಇಂಗ್ಲೀಷ್ ಮೇಷ್ಟರ ಜಾಗ ನಾನು ಇಂಗ್ಲೀಷ್ ಪಾಠ ಹೇಳಬೇಕಾಗಿ ಬಂತು. ನನಗೆ ಬಿ.ಟಿ ಪದವಿಯಲ್ಲಿ ಒಳ್ಳೆಯ ಶಿಕ್ಷಣ ದೊರಕಿದ್ದರಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸಾಕಷ್ಟು ಪರಿಚಯ ಇದ್ದದ್ದರಿಂದ ಅದು ನನಗೇನೂ ಕಷ್ಟವಾಗಲಿಲ್ಲ. ನಾನು ತರಗತಿಗೆ ಹೋಗಿ ಮೊದಲನೆ ಪಾಠವನ್ನು ಮಾಡಿ ನಾನು ಇಳಿದುಕೊಂಡಿದ್ದ ಕೊಠಡಿಗೆ ಹಿಂದಿರುಗಿದೆ. ಅದೇ ದಿನ ಸಾಯಂಕಾಲ ಸಿರಿಗೆರೆಯ ತರಳಬಾಳು ಮಠದವರು ದಾವಣಗೆರೆಯಲ್ಲಿ ನಡೆಸುತ್ತಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಲಯದಿಂದ ಒಬ್ಬ ಅಧಿಕಾರಿಗಳು ಬಂದು ನನ್ನನ್ನು ಕಂಡರು. ಶಾಲೆಯಲ್ಲಿ ನನಗೆ 35 ರೂ. ಸಂಬಳ, ತರಳಬಾಳು - ವಿದ್ಯಾರ್ಥಿನಿಲಯಕ್ಕೆ ಬಂದು ದಿನಕ್ಕೆ ಒಂದು ಗಂಟೆ ಪಾಠ ಮಾಡುವುದಾದರೆ ತಿಂಗಳಿಗೆ 75 ರೂ. ಗಳನ್ನು ಕೊಡುವುದಾಗಿ ಹೇಳಿದರು. ನನಗೆ ಆಶ್ಚರ್ಯವಾಯಿತು. ಹೊಸಬನನ್ನು ಇಷ್ಟು ಬೇಗ ಕಾಣುವುದಕ್ಕೆ ಕಾರಣವೇನು ಎಂದು ಅನುಮಾನಪಟ್ಟೆ, ಆದರೆ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಕೆಲವು ತಿಂಗಳು ಪಾಠ ಮಾಡುತ್ತಿದ್ದಾಗ ನನ್ನ ಶಿಷ್ಯರಾಗಿದ್ದವರಲ್ಲಿ ಕೆಲವರು ಶ್ರೀಮಠದ ಶಿಷ್ಯರೂ ಆಗಿದ್ದರು. ಅವರು ಸ್ವಾಮೀಜಿಯವರಿಗೆ ನನ್ನ ಬಗ್ಗೆ ತಿಳಿವಳಿಕೆ ಕೊಟ್ಟಿದ್ದರೆಂದು ಗೊತ್ತಾಯಿತು.
“ತರಳಬಾಳು ಮಠದ ಬಗ್ಗೆ ನನಗೆ ತುಂಬಾ ಗೌರವವಿತ್ತು. ನಾನು ಸ್ವಾಮೀಜಿಯವರನ್ನು ಮೊದಲು ಕಾಣುವುದಾಗಿಯೂ ಬಳಿಕ ಪಾಠಕ್ಕೆ ಬರುವುದಾಗಿಯೂ ತಿಳಿಸಿದೆ. ಮಾರನೆಯ ದಿನ ಸಿರಿಗೆರೆಯ ಶ್ರೀಮಠಕ್ಕೆ ಹೋಗಿ ಸ್ವಾಮೀಜಿಯವರಿಗೆ ನಮಸ್ಕರಿಸಿ ನನ್ನ ಕೃತಜ್ಞತೆಯನ್ನು ತಿಳಿಸಿದೆ. ಅವರು ನನ್ನ ವಿದ್ಯಾಭ್ಯಾಸದ ಬಗ್ಗೆ ಕೇಳಿದರು. ನಾನು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಜ್ಞಾನವನ್ನು ಪಡೆದಿದ್ದೇನೆ ಎಂದೂ, ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದ್ದೇನೆಂದೂ ಹೇಳಿದೆ. ಬಸವಣ್ಣನವರ ಬಗ್ಗೆ ಅಲ್ಲಮನ ಬಗ್ಗೆ ಸಿದ್ದರಾಮನ ಬಗ್ಗೆ ಅನೇಕ ವಿಷಯಗಳನ್ನು ಕೇಳಿ ನನ್ನ ಉತ್ತರದಿಂದ ತುಂಬಾ ಸಂತೋಷಪಟ್ಟರು. ನಾನು ಇಂಗ್ಲೀಷ್ ಪಾಠವನ್ನು ಚೆನ್ನಾಗಿ ಮಾಡುತ್ತೇನೆಂದು ಹುಡುಗರು ಹೇಳಿದ್ದನ್ನು ಅವರು ನೆನಪಿಗೆ ತಂದುಕೊಂಡು ಈ ಶಕ್ತಿ ನಿಮಗೆ ಹೇಗೆ ಬಂತು ಎಂದು ಕೇಳಿದರು. ನನ್ನ ಇಂಗ್ಲೀಷ್ ಭಾಷೆಯ ಪರಿಜ್ಞಾನವನ್ನು ಅವರಿಗೆ ತಿಳಿಸಿಕೊಟ್ಟೆ ಅವರು ಮಹಾ ತೇಜಸ್ವಿಯಾಗಿದ್ದರು. ಅವರೊಡನೆ ನಾನು ಮಾತನಾಡಿದ್ದರಿಂದ ಅವರಲ್ಲಿ ನನಗಿದ್ದ ಗೌರವ ನೂರರಷ್ಟು ಹೆಚ್ಚಾಯಿತು. ಅವರ ಆಳವಾದ ತಿಳಿವಳಿಕೆಯಿಂದ ನನಗೆ ತುಂಬಾ ಪ್ರಯೋಜನವಾಯಿತು. ಶರಣಸಾಹಿತ್ಯಕ್ಕೆ ಸಂಬಂಧಪಟ್ಟ ಕೆಲವು ಸಮಸ್ಯೆಗಳನ್ನು ಅವರು ನನಗೆ ಪರಿಹರಿಸಿಕೊಟ್ಟರು. ಅಂದಿನಿಂದ ಅವರ ಮೇಲೆ ನನಗೆ ಪರಮಭಕ್ತಿಯುಂಟಾಗಿ ನಾನು ನನ್ನ ವಿದ್ಯಾರ್ಥಿನಿಲಯದ ಪಾಠಗಳನ್ನು ತೃಪ್ತಿಕರವಾಗಿ ಮಾಡಿಕೊಂಡು ಬಂದೆ. ನಿಲಯದ ವಿದ್ಯಾರ್ಥಿಗಳು ನನ್ನ ಬಗ್ಗೆ ತುಂಬಾ ಗೌರವದಿಂದ ನಡೆದುಕೊಂಡು ನನ್ನ ವಿಚಾರವಾಗಿ ಗುರುಗಳಿಗೆ ವರ್ತಮಾನವನ್ನು ಕಳುಹಿಸುತ್ತಾ ಇದ್ದರು. ಹೀಗೆ ನಾಲ್ಕು ತಿಂಗಳುಗಳಿದ್ದು ನಾನು ಆರ್ಥಿಕವಾಗಿ ಸಹಾಯ ಪಡೆದೆ. ನನ್ನ ಕೆಲಸದ ಕಾಲವು ಪೂರೈಸಿ ಹಿಂದಿರುಗುವುದಕ್ಕೆ ಮುಂಚೆ ಸ್ವಾಮೀಜಿಯವರನ್ನು ಕಂಡು ನನ್ನ ಕೃತಜ್ಞತೆಯನ್ನು ತಿಳಿಸಿದೆ. 'ನೀವು ಹಿಂದಕ್ಕೆ ಏಕೆ ಹೋಗಬೇಕು. ನಮ್ಮ ವಿದ್ಯಾರ್ಥಿನಿಲಯದಲ್ಲಿಯೇ ನಿಮಗೂ ಒಂದು ಜಾಗವನ್ನು ಮಾಡಿಕೊಡುತ್ತೇವೆ. ನಿಮ್ಮಂಥವರು ಸಿಕ್ಕುವುದು ಅಪರೂಪ. ನಿಮಗೆ ಸಿಗುವ ಸಂಬಳವನ್ನು ಇನ್ನೂ ಹೆಚ್ಚು ಮಾಡುತ್ತೇವೆ' ಎಂದು ಹೇಳಿದರು. ಆದರೆ ಸಂಸಾರವನ್ನು ಬಿಟ್ಟು ನಾನು ದೂರ ಬಂದವನು ನೂರು ರೂ.ಗಳಲ್ಲಿ ದಾವಣಗೆರೆಯಲ್ಲಿ ಸಂಸಾರ ಮಾಡುವುದು ಕಷ್ಟ ಎಂದು ತಿಳಿದುಕೊಂಡು ಸ್ವಾಮೀಜಿಯವರಿಗೆ ನಮಸ್ಕರಿಸಿ ಹಿಂದಿರುಗಿದೆ.'
ಹೀಗೆ ಹಿರಿಯ ತಲೆಮಾರಿನ ಸಾಹಿತಿಗಳಾದ 'ಜೀವಿ'ಯವರ ಬದುಕಿನ ಮೇಲೊಂದು ಬೀಸುನೋಟ ಹರಿಸಿದರೆ ಅವರು ಹೊತ್ತು ನಿತ್ತರಿಸಿದ ಕಷ್ಟ ನಿಷ್ಟುರಗಳು ಬಾಯ್ದೆರೆದು ದರುಶನ ನೀಡುತ್ತವೆ. ಅವರು ಮಾಡಿದ ಸಾಹಿತ್ಯಸೇವೆಗೆ ಪಡೆಯುತ್ತಿದ್ದ ಸಂಭಾವನೆ ತೀರಾ ಅಲ್ಪ ಕೈಗೆ ಸಿಗುತ್ತಿದ್ದ ವೇತನ ಹೊಟ್ಟೆಗಾದರೆ ಬಟ್ಟೆಗಿಲ್ಲ ಬಟ್ಟೆಗಾದರೆ ಹೊಟ್ಟೆಗಿಲ್ಲ ಎಂಬಷ್ಟು ನಗಣ್ಯ. ಅವರು ಹುಟ್ಟಿದ್ದು ಆರ್ಥಿಕವಾಗಿ ಬಡತನವಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ಮನೆತನದಲ್ಲಿ ಅವರಿಗೆ ಪಿತ್ರಾರ್ಜಿತ ಬಳುವಳಿಯಾಗಿ ಬಂದದ್ದು ಬಡತನ ಮತ್ತು ಬವಣೆಯ ಬದುಕು, ಬವಣೆಯ ಬದುಕು ಎದುರಿಗಿದ್ದರೂ ಅವರು ಮೌಲ್ಯಗಳನ್ನು ಬಿಡಲಿಲ್ಲ ರಾಜಿ ಮಾಡಿಕೊಳ್ಳಲಿಲ್ಲ. ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಾ ಮುಂದೆ ಸಾಗಿದರು. ಅದರಲ್ಲಿಯೇ ಧನ್ಯತೆಯನ್ನು ಕಂಡುಕೊಂಡರು. ಸಾಹಿತ್ಯ ಸರಸ್ವತಿಯ ಸಿರಿಮುಡಿಯು ಪರಿಶೋಭಿಸುವಂತೆ ಮಾಡಿದರು.
ಫೆಬ್ರವರಿ 4, 2011ರಂದು ಬೆಂಗಳೂರಿನಲ್ಲಿ ಆರಂಭವಾದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಪ್ರೊ ಜಿ. ವೆಂಕಟಸುಬ್ಬಯ್ಯನವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮಗೆ ತೊಡಿಸಿದ ಮೈಸೂರು ಪೇಟ ಸಡಿಲವಾಗಿದ್ದನ್ನು ಗಮನಿಸಿ ಹಾರಿಸಿದ ಹಾಸ್ಯ ಚಟಾಕಿ: ನನಗೆ ಟೋಪಿ ಹಾಕಿಸಿಕೊಂಡು ಅಭ್ಯಾಸವಿದೆ. ಆದರೆ ಪೇಟ ಹಾಕಿಸಿಕೊಂಡು ಅಭ್ಯಾಸವಿಲ್ಲ ಶತಮಾನ ದಾಟಿದ ಅವರು ಟೋಪಿ ಹಾಕಿಸಿಕೊಂಡ ಕಹಿ ಅನುಭವಗಳನ್ನು ಕುರಿತು ಯಾವುದಾದರೂ ಪುಸ್ತಕವನ್ನು ಬರೆದಿದ್ದಾರೋ ಇಲ್ಲವೋ ಗೊತ್ತಿಲ್ಲ, ಬರೆಯದಿದ್ದರೆ ಅವರ ಒಡನಾಡಿ ಸಾಹಿತಿಗಳು ಮತ್ತು ಕುಟುಂಬ ವರ್ಗದವರು ನೆನಪಿರುವಷ್ಟು ಪ್ರಸಂಗಗಳನ್ನು ಬರೆದುಕೊಟ್ಟರೆ ನಮ್ಮ ಮಠದಿಂದ ಪ್ರಕಟಿಸಬಹುದು. ಅದು 'ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ' ಜೀವನದ ತೊರೆಗೆ ದಿಕ್ಸೂಚಿಯಾದೀತು.
ನಮ್ಮ ಮಠದೊಂದಿಗೆ ಇದ್ದ ಆತ್ಮೀಯ ಸಂಬಂಧದ ಹಿನ್ನೆಲೆಯಲ್ಲಿ ಲೇಖನದ ಕೊನೆಯಲ್ಲಿ ಅವರು ವ್ಯಕ್ತಪಡಿಸಿದ ಆಸೆ: 'ಈಗಿನ ಸ್ವಾಮೀಜಿಯವರು ಅಧಿಕಾರಕ್ಕೆ ಬಂದ ಮೇಲೆ ನನಗೆ ಒಂದೆರಡು ಸಲ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲು ಆಹ್ವಾನಗಳು ಬಂದಿದ್ದವು. ನನ್ನ ಕಾರ್ಯ ಬಾಹುಳ್ಯದಿಂದ ಅವುಗಳನ್ನು ಸ್ವೀಕರಿಸಲು ಆಗಲಿಲ್ಲ. ಈಗಲೂ ಯಾವಾಗಲಾದರೂ ತರಳಬಾಳು ಸ್ವಾಮೀಜಿಯವರ ದರ್ಶನ ಮಾಡಿಕೊಂಡು ಅವರ ಆಶೀರ್ವಾದವನ್ನು ಪಡೆದು ಹಿಂದಿರುಗಬೇಕೆಂಬ ಆಪೇಕ್ಷೆಯಿದೆ. ನಾನು ಈಗ ಹಣ್ಣುಹಣ್ಣು ಮುದುಕ! ದೇವರು ಆ ಆಸೆಯನ್ನು ಸಫಲಗೊಳಿಸುತ್ತಾನೋ ಇಲ್ಲವೋ ನೋಡಬೇಕು! ಸ್ವಾಮೀಜಿಯವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.' ಅವರ ಈ ಮಾತುಗಳಿಂದ ಗದ್ಗದಿತರಾದ ನಾವು ಅವರ ಈ ಆಸೆಯನ್ನು ಪೂರ್ಣಗೊಳಿಸುವುದಕ್ಕಾಗಿಯೋ ಎಂಬಂತೆ ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿ ದಿನಾಂಕ 12.1.2013 ರಂದು ನಡೆದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲರ 'ಮುಂಜಾವಿ ಗೊಂದು ನುಡಿಕಿರಣ' ಎಂಬ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿ ಸನ್ಮಾನಿಸಿದ್ದು ಅವರಿಗೆ ಅತೀವ ಸಂತೋಷವನ್ನುಂಟು ಮಾಡಿತು. ಅಂದು'ಜೀವಿ'ಯವರು ಸಾರ್ಥಕ ಜೀವನ ಎಂಬ ವಿಷಯ ಕುರಿತು ಮಾತನಾಡಿದರು. ಅಬ್ರಹಾಂ ಲಿಂಕನ್ರ ಬರಹವನ್ನು ವಿಶೇಷವಾಗಿ ಉಲ್ಲೇಖಿಸಿದರು.
ಉದ್ಯಾನ ನಗರಿ ಎನಿಸಿದ ಬೆಂಗಳೂರು ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಕುಖ್ಯಾತಿಯನ್ನು ಪಡೆದಿದೆ. ಗತಿಸಿದವರ ಮುಖದರ್ಶನ ಮಾಡಲೂ ಜನರು ಭಯಪಡುವ ಕಾಲವಿದು. ಅಸ್ತಂಗತರಾದ ಕನ್ನಡದ ಸಾಹಿತ್ಯದ ಶಬ್ದಬ್ರಹ್ಮಪ್ರೊ - ಜಿ. ವೆಂಟಸುಬ್ಬಯ್ಯನವರ ಅಂತಿಮ ದರ್ಶನ ಪಡೆಯಲು ತವಕಿಸುತ್ತಿದ್ದ ಸಾಹಿತಿಗಳು ಮತ್ತು ಸಾಹಿತ್ಯಾಭಿಮಾನಿಗಳು ಗೌರವಯುತವಾಗಿ ಅವರಿಗೆ ವಿದಾಯ ಹೇಳಲೂ ಸಾಧ್ಯವಾಗದ ದುಃಸ್ಥಿತಿ ಅತ್ಯಂತ ದುರದೃಷ್ಟಕರ. ಆದರೆ ಅವರು ಇಹಲೋಕದಿಂದ ಕಣ್ಮರೆಯಾಗಿದ್ದರೂ ಕನ್ನಡ ಸಾರಸ್ವತ ಲೋಕದಲ್ಲಿ ಚಿರಂಜೀವಿ'ಯಾಗಿ ಉಳಿದಿದ್ದಾರೆ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.22-4-2021
ಬಿಸಿಲು ಬೆಳದಿಂಗಳು