ತಾಯಿ ಮಮತೆಯ ಮಡಿಲು ಸೇರಿದ ಶ್ರೇಷ್ಠ ನ್ಯಾಯಮೂರ್ತಿ!

  •  
  •  
  •  
  •  
  •    Views  

ಸುಪ್ರೀಂ ಕೋರ್ಟಿನಲ್ಲಿದ್ದ ಕನ್ನಡದ ಕೊಂಡಿಯೊಂದು ಕಳಚಿದೆ. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ಮೋಹನ ಶಾಂತನಗೌಡರು ದಿನಾಂಕ 24.4.2021ರ ಶುಕ್ರವಾರ ತಡರಾತ್ರಿ 12.30ರ ಸುಮಾರಿಗೆ ಇಹದ ಬದುಕಿಗೆ ವಿದಾಯ ಹೇಳಿದರು. ಕೆಲವು ದಿನಗಳಿಂದ ಅವರ ಆರೋಗ್ಯ ಕ್ಷೀಣಿಸಿದ್ದರಿಂದ ದೆಹಲಿಯ ಗುರುಗ್ರಾಮದ ಮೇದಾಂತಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ; ಒಳ್ಳೆಯ ನೆರಳನ್ನು ನೀಡುವ ಮರಕ್ಕೆ ಜವರಾಯ ಕೊಡಲಿಯನ್ನು ಬಿಸಿಯೇ ಬಿಟ್ಟ! 

ಹಾವೇರಿ ಜಿಲ್ಲೆಯ ಚಿಕ್ಕೆರೂರಲ್ಲಿ 1958ರ ಮೇ 5ರಂದು ಜನಿಸಿದ್ದ ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ಕಾನೂನು ಕಾಲೇಜಿನಲ್ಲಿ ಪದವಿ ಪಡೆದು ನ್ಯಾಯವಾದಿಗಳಾಗಿ ವೃತ್ತಿಜೀವನ ಆರಂಭಿಸಿದರು. ಪ್ರಖ್ಯಾತ ನ್ಯಾಯವಾದಿಗಳಾದ ಐ.ಜಿ ಹಿರೇಗೌಡರ ಹಾಗೂ ಜಸ್ಟೀಸ್ ಶಿವರಾಜ ಪಾಟೀಲರ ಗರಡಿಯಲ್ಲಿ ಅವರು ಪಳಗಿದ್ದರು. ಕರ್ನಾಟಕ ಬಾರ್ ಕೌನ್ಸಿಲ್ ಉಪಾಧ್ಯಕ್ಷರಾಗಿ, ಕರ್ನಾಟಕ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ, ಕೇರಳ ರಾಜ್ಯದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿ ಹಲವಾರು ಹುದ್ದೆಗಳಲ್ಲಿಸೇವೆ ಸಲ್ಲಿಸಿದವರು. 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. 2023 ಮೇ 4ಕ್ಕೆ ಅವರ ಸೇವಾವಧಿ ಕೊನೆಗೊಳ್ಳಬೇಕಾಗಿತ್ತು. ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಲಿ ಎಂಬ ಹಾರೈಕೆ ನಮ್ಮದಾಗಿತ್ತು. ಆದರೆ ವಿಧಿಯ ಲೆಕ್ಕಣಿಕೆಯ ಬರೆಹ ಬೇರೆಯದೇ ಆಗಿತ್ತು! 

ಆಗಾಗ್ಗೆ ಅವರ ನಮ್ಮ ಮಧ್ಯೆ ಮಠ ಮತ್ತು ಸಮಾಜದ ಕ್ಲಿಷ್ಟ ಸಮಸ್ಯೆಗಳ ಬಗ್ಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಯುತ್ತಲಿತ್ತು. ಒಂದು ತಿಂಗಳ ಹಿಂದೆಯಷ್ಟೇ ಅವರ ಆರೋಗ್ಯ ಸರಿಯಿಲ್ಲವೆಂದು ತಿಳಿದು ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರ ಧ್ವನಿ ತೀರಾ ಕ್ಷೀಣವಾಗಿತ್ತು. ಗುರುತಿಸಲು ಆಗಲೇ ಇಲ್ಲ. ಬೇರೆ ಯಾರೊಂದಿಗೋ ಮಾತನಾಡಿದಂತಾಯಿತು. ಆರೋಗ್ಯ ಸರಿಹೋಗುವವರೆಗೆ ಕೋರ್ಟಿಗೆ ಹೋಗದೆ ವಿಶ್ರಾಂತಿ ಪಡೆಯಿರಿ ಎಂಬ ನಮ್ಮ ಸಲಹೆಗೆ ಅವರು ಕೊಟ್ಟ ಉತ್ತರ: “ದೇವರು ಬದುಕಿಸಿ ಇಟ್ಟಿರುವವರೆಗೆ ನನ್ನ ಕರ್ತವ್ಯ ನಿರ್ವಹಣೆಯನ್ನು ನಾನು ಮಾಡಲೇಬೇಕಲ್ಲಾ ಮಾಡುತ್ತೇನೆ, ತಮ್ಮ ಆಶೀರ್ವಾದ ಇರಲಿ!' ಎಂದೇ ಹೇಳಿದರು, ಅದರಂತೆ ನಡೆದೂ ತೋರಿದರು. ಕಾಯಕ ಪ್ರಜ್ಞೆಯನ್ನು ಜೀವನದ ಕೊನೆ ಉಸಿರಿನವರೆಗೂ ತೋರಿದವರು ಅವರು! 

ಅವರ ವೃತ್ತಿನಿಷ್ಠೆಗೊಂದು ಜ್ವಲಂತ ನಿದರ್ಶನ ನಿಮಗೆ ಗೊತ್ತಿರಬಹುದು. ಶಾಸಕತ್ವದಿಂದ ಸಭಾಧ್ಯಕ್ಷರು - ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ 2019ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಕರ್ನಾಟಕದ 17 ಶಾಸಕರ ಅರ್ಜಿಯ ವಿಚಾರಣೆ ನಡೆಸಲು ಮುಖ್ಯ ನ್ಯಾಯಾಧೀಶರು ಮೋಹನ ಶಾಂತನಗೌಡರಿಗೆ ವಹಿಸಿದ್ದರು. ಅವರು Not Before Me ಎಂಬ ಷರಾ ಬರೆದು ವಿಚಾರಣೆಯಿಂದ ಹಿಂದೆ ಸರಿದರು. ಅದಕ್ಕೆ ಕಾರಣ ಅರ್ಜಿದಾರರಲ್ಲಿ ಒಬ್ಬರಾದ ಈಗಿನ ಕೃಷಿ ಸಚಿವರಾದ ಬಿ.ಸಿ ಪಾಟೀಲರು ತಮ್ಮ ಸಂಬಂಧಿ ಎಂಬುದು! ನ್ಯಾಯದಾನದ ಅತ್ಯುನ್ನತ ಮೌಲ್ಯಗಳನ್ನು ಮತ್ತು ನ್ಯಾಯಾಲಯದ ಘನತೆ ಗೌರವಗಳನ್ನು ಎತ್ತಿ ಹಿಡಿದ ಪರಿ ಅದಾಗಿತ್ತು! 

ಜಸ್ಟೀಸ್ ಮೋಹನ ಶಾಂತನಗೌಡರು ನಿಧನರಾದರೆಂಬ ಸುದ್ದಿಯು ಸುದ್ದಿ ವಾಹಿನಿಗಳಲ್ಲಿ ಏಪ್ರಿಲ್ 24ರ ಶುಕ್ರವಾರ ಬೆಳಗ್ಗೆಯಿಂದಲೇ ಪ್ರಸಾರವಾಗುತ್ತಿತ್ತು. ಗಾಬರಿಗೊಂಡು ನಿರಂತರ ನಮ್ಮ ಸಂಪರ್ಕದಲ್ಲಿದ್ದ ಅವರ ಮಗ ಶಿವಪ್ರಸಾದನಿಗೆ ಫೋನ್ ಮಾಡಿದಾಗ ಅವರಿನ್ನೂ ಬದುಕಿದ್ದರು. ತೀವ್ರ ನಿಗಾ ಘಟಕದಲಿದ್ದು ವೈದ್ಯರು ವಿಶೇಷ ಗಮನ ಹರಿಸಿದ್ದರು. ಇನ್ನೂ ಮೂರು ದಿನಗಳ ಕಾಲ ಏನೂ ಹೇಳಲು ಬರುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆಂದು ಶಿವಪ್ರಸಾದನಿಂದ ತಿಳಿಯಿತು. ಬದುಕಿರುವವರನ್ನೂ ಸಹ ಸಾಯಿಸಲು ನಮ್ಮ ಸುದ್ದಿಮಾಧ್ಯಮಗಳು ಏಕಿಷ್ಟು ಆತುರುಪಡುತ್ತಿವೆ ಎಂದು ಯೋಚಿಸುವಾಗ ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಸಾವಿನ ಸಂದರ್ಭ ಸ್ಮರಣೆಗೆ ಬಂತು. ಆಗಲೂ ಅಷ್ಟೇ, ಜೆ.ಪಿ.ಯವರು ಇನ್ನೂ ಬದುಕಿದ್ದಾಗಲೇ ನಿಧನರಾದರೆಂದು ಲೋಕಸಭೆಯಲ್ಲಿ ಸಂತಾಪ ಸೂಚನೆ ನಡೆದೇ ಹೋಯಿತು. ಆ ಕಡೆ ಜೆ.ಪಿ ಇನ್ನೂ ಬದುಕಿಯೇ ಇದ್ದರು! ಈಗಲೂ ಪವಾಡವೇನಾದರೂ ನಡೆದು ಮೋಹನ ಶಾಂತನಗೌಡರು ಬದುಕಿ ಉಳಿಯಲಿ ಎಂಬ ನಮ್ಮ ಹಾರೈಕೆ ಫಲಕಾರಿಯಾಗಲಿಲ್ಲ. ಶುಕ್ರವಾರ ತಡರಾತ್ರಿ ಇಹದ ಬದುಕಿಗೆ ವಿದಾಯ ಹೇಳಿಯೇ ಬಿಟ್ಟರೆಂಬ ದಾರುಣ ಸಂಗತಿ ಅವರ ಮಗನಿಂದ ದೂರವಾಣಿಯಲ್ಲಿ ತಿಳಿದು ಬಹಳ ಹೊತ್ತು ನಿದ್ರೆ ಬರಲಿಲ್ಲ, ಭಾರವಾದ ಹೃದಯದಿಂದ ಹಳೆಯ ನೆನಪುಗಳ ಸುರುಳಿ ಬಿಚ್ಚತೊಡಗಿತು. 

2018ರಲ್ಲಿ ಜಗಳೂರಿನಲ್ಲಿ ನಮ್ಮ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಾಗ ಜಸ್ಟೀಸ್ ಮೋಹನ ಶಾಂತನಗೌಡರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಯುವಕರಾಗಿದ್ದಾಗ ನಮ್ಮ ಗುರುವರ್ಯರ ಸಮ್ಮುಖದಲ್ಲಿ ವಿವಾಹ ನಡೆದು ಅವರು “ಚಿತ್ರದುರ್ಗದ ಅಳಿಯ” ಆಗಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ವಿವಾಹದ ಸಂದರ್ಭದಸ್ತರಣೀಯ ಅನುಭವಗಳನ್ನು ಬಿಚ್ಚಿಟ್ಟು ಸಭಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದರು! ನ್ಯಾಯಾಧೀಶರೆಂದರೆ ಗಂಭೀರವಾಗಿ ಇರುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಜಸ್ಟೀಸ್ ಮೋಹನ ಶಾಂತನಗೌಡರು ಈ ಮಾತಿಗೆ ಅಪವಾದವೆಂಬಂತೆ ಮಕ್ಕಳಲ್ಲಿ ಮಕ್ಕಳಾಗಿ ಹಿರಿಯರಲ್ಲಿ ಹಿರಿಯರಾಗಿ ಇದ್ದರು. ಅವರ ಭಾಷಣದ ಧ್ವನಿಮುದ್ರಿಕೆಯನ್ನು ಆಲಿಸಿದಾಗ ಈ ಕೆಳಗಿನ ಆಯ್ದ ಮಾತುಗಳು ಅವರ ಆರೋಗ್ಯಪೂರ್ಣ ಹಾಸ್ಯಪ್ರಜ್ಞೆಯನ್ನು ಎತ್ತಿ ತೋರಿಸುತ್ತವೆ:

'ಸಿರಿಗೆರೆ ಮಠಕ್ಕೂ ನನಗೂ ಬಾಲ್ಯದಾರಭ್ಯದಿಂದ ಒಳ್ಳೆಯ ಸಂಬಂಧವಿದೆ. ನಮ್ಮ ಮಾವನ ಮನೆ ಚಿತ್ರದುರ್ಗ, ಹಿರಿಯ ಗುರುಗಳಾದ ಶ್ರೀ ಶಿವಕುಮಾರಶಿವಾಚಾರ್ಯ ಮಹಾಸ್ವಾಮಿಗಳವರು ಆಗ ಇದ್ದರು. ನಮ್ಮ ಮಾವನಿಗೆ ಗಂಡುಮಕ್ಕಳಿರಲಿಲ್ಲ ಐದು ಹೆಣ್ಣು ಮಕ್ಕಳಾದವು. ಮಾವನವರು ಗುರುಗಳ ಹತ್ತಿರ ಹೋಗಿ ಕೇಳಿದರು: “ಬುದ್ದೀ! ನನಗೆ ಐದು ಹೆಣ್ಣು ಮಕ್ಕಳಾಗಿವೆ. ಗಂಡು ಮಕ್ಕಳಾಗಿಲ್ಲ ಗಂಡುಮಗ ಯಾವಾಗ ಹುಟ್ಟುತ್ತಾನೆ?'. ಗುರುಗಳು ಹೇಳಿದರಂತೆ 'ನೋಡು ಬಸಪ್ಪಾ ನಿನಗೆ ಆರು ಹೆಣ್ಣುಮಕ್ಕಳಾದ ನಂತರ ಏಳನೆಯವನಾಗಿ ಗಂಡು ಮಗ ಹುಟ್ಟುತ್ತಾನೆ!' ನಮ್ಮ ಮಾವ ಛಲಬಿಡದ ತ್ರಿವಿಕ್ರಮ! ಗುರುಗಳ ಆಶೀರ್ವಾದದಿಂದ ಆರು ಹೆಣ್ಣಾದ ನಂತರ ಗಂಡು ಮಗ ಪ್ರಭು ಪ್ರಸಾದ್ ಹುಟ್ಟಿದ. ನಾನು ಇದನ್ನು ಯಾಕೆ ಹೇಳ್ತಿನಿ ಅಂದರೆ ಆರನೆಯ ಹೆಣ್ಣು ನನಗೆ ಹೆಂಡತಿಯಾಗಿ ಸಿಕ್ಕಳು. ಅಕಾಸ್ಮಾತ್ ನಮ್ಮ ಮಾವ ಗುರುಗಳನ್ನು ಭೇಟಿಯಾಗದಿದ್ದರೆ, ಐದೇ ಹೆಣ್ಣುಮಕ್ಕಳಿಗೆ ತೃಪ್ತಿ ಪಟ್ಟುಕೊಂಡಿದ್ದರೆ ನನಗೆ ಹೆಂಡತೀನೇ ಸಿಗತ್ತಿರಲಿಲ್ಲ!' ಅವರ ಹಾಸ್ಯ ಪ್ರಜ್ಞೆಗೆ ಮತ್ತೊಂದು ಉದಾಹರಣೆ ಈ ಮುಂದಿನ ರೋಚಕ ಪ್ರಸಂಗ, ಇದೇನು ಅವರ ಸ್ವಾನುಭವವೋ ಅಥವಾ ಕಥಾನಕವೋ ಗೊತ್ತಿಲ್ಲ, ಅವರ ಬಾಯಿಂದಲೇ ಕೇಳಿದ್ದು, ಗಣ್ಯವ್ಯಕ್ತಿಯೊಬ್ಬರು ಅವರ ಮನೆದೇವರಿರುವ ಊರಿಗೆ ಹೋಗಿದ್ದರು. ಊರಿನ ಸಿರಿವಂತ ಮುಖಂಡನೊಬ್ಬ ಅವರನ್ನು ಸ್ವಾಗತಿಸಿ ಗುಡಿಯೊಳಗೆ ಕರೆದೊಯ್ದ. ಒಳಗೆ ಗಾಳಿ ಇರಲಿಲ್ಲ ಯಾರೋ ಅಲ್ಲಿದ್ದ ಫ್ಯಾನಿನ ಸ್ವಿಚ್ ಹಾಕಿದರು. ಫ್ಯಾನ್ ತಿರುಗತೊಡಗಿ ತಂಪಾದ ಗಾಳಿ ಸುಳಿದು ಹಾಯೆನಿಸತೊಡಗಿತು. ತಕ್ಷಣವೇ ಆ ಮುಖಂಡ ಏಯ್ ಮೊದ್ಲು ಫ್ಯಾನ್ ಆಫ್ ಮಾಡೋ! ಎಂದು ಏರು ದನಿಯಲ್ಲಿ ಅಪ್ಪಣೆ ಮಾಡಿದ. ಸೆಕೆಯಾಗುತ್ತಿದ್ದರೂ ಫ್ಯಾನ್ ಆಫ್ ಮಾಡಲು ಆತ ಏಕೆ ಹೇಳುತ್ತಿದ್ದಾನೆಂದು ಎಲ್ಲರಿಗೂ ಆಶ್ಚರ್ಯವಾಯಿತು! ಸೂಕ್ಷ್ಮವಾಗಿ ಗಮನಿಸಿದಾಗ ಅರ್ಥವಾಯಿತು. ಆ ಫ್ಯಾನನ್ನು ದೇವಸ್ಥಾನಕ್ಕೆ ದಾನ ಮಾಡಿದವನೇ ಆ ಶ್ರೀಮಂತ! ಫ್ಯಾನಿನ ರೆಕ್ಕೆಗಳ ಮೇಲೆ ಅವನ ಹೆಸರನ್ನು ದೊಡ್ಡದಾಗಿ ಬರೆಸಿದ್ದ. ಫ್ಯಾನ್ ತಿರುಗಿದರೆ ದಾನಿಯಾದ ತನ್ನ ಹೆಸರು ಬಂದ ಗಣ್ಯ ವ್ಯಕ್ತಿಗಳಿಗೆ ಕಾಣಿಸುವುದಿಲ್ಲವಲ್ಲಾ ಎಂಬುದು ಅವನ ಒಳ ಲೆಕ್ಕಾಚಾರವಾಗಿತ್ತು! 

ಈ ಕಥಾನಕವನ್ನು ನಿರೂಪಿಸಿ ಅವರು ಮಾಡಿದ ವಿಶ್ಲೇಷಣೆ: ಜನರನ್ನು ಮೂರು ವಿಧವಾಗಿ ವಿಂಗಡಿಸಬಹುದು. ಪ್ರಕೃತಿ, ಸಂಸ್ಕೃತಿ ಮತ್ತು ವಿಕೃತಿ. 1) ದುಡಿದದ್ದೆಲ್ಲಾ ನನಗೇ ಇರಲಿ ಎಂಬುದು 'ಪ್ರಕೃತಿ'. ಈ ವರ್ಗದ ಜನರು ದಾನ ಮಾಡುವುದಿಲ್ಲ. 2) ನನಗೂ ಇರಲಿ, ಬೇರೆಯವರಿಗೂ ಸಿಗಲಿ ಎಂಬುದು 'ಸಂಸ್ಕೃತಿ'. 3) 'ವಿಕೃತಿ' ಎಂದರೆ ನಾನು ದುಡಿದದ್ದೂ ನನಗೇ, ನೀವು ದುಡಿದದ್ದೂ ನನಗೆ ಎಂಬ ಮನೋಭಾವವುಳ್ಳವರು. ಅಂದರೆ ಲಂಚಕ್ಕೆ ಕೈಯೊಡ್ಡುವ ಜನರಿವರು. ನಾವು ಸಂಸ್ಕೃತಿ ಕಲಿಯೋಣ. ವಿಕೃತಿಯ ಹಂತಕ್ಕೆ ಹೋಗುವುದು ಬೇಡ. ಸಿರಿಗೆರೆಯ ಮಕ್ಕಳು ಕೋಲಾಟ ಪ್ರದರ್ಶನ ಮಾಡಿದರು. ಎಷ್ಟು ಚೆನ್ನಾಗಿದೆ ಎಂದು ನೋಡಿದೆವು. ನಾನು ಯೋಚನೆ ಮಾಡುತ್ತಿದ್ದೆ. ಎಲ್ಲ ಮಕ್ಕಳು ತಾಳ ಮೇಳಕ್ಕೆ ಅನುಗುಣವಾಗಿ ಕರಾರುವಾಕ್ಕಾಗಿ ಹೆಜ್ಜೆ ಹಾಕುತ್ತಿದ್ದರು. ಇದೇ ರೀತಿಯ ಪರಸ್ಪರ ಹೊಂದಾಣಿಕೆ ಸಮಾಜದಲ್ಲಿ ಮೂಡಿ ಬಂದರೆ ಚೆನ್ನಾಗಿರುತ್ತದೆ. ಮಕ್ಕಳ ಹೆಜ್ಜೆಗೆ ಹೆಜ್ಜೆ ಹೊಂದಿಕೆಯಾದಂತೆ ಸಮಾಜದ ಜನರು ಜಾತಿ-ಮತ ಭೇದವಿಲ್ಲದೆ ಹೊಂದಿಕೊಂಡು ನಡೆದರೆ ಎಷ್ಟು ಸೊಗಸು! ಹೀಗೆ ಸಾಗಿತ್ತು ಅವರ ಭಾಷಣದ ಚಿಂತನೆ! 

 “ಸ್ಕೂಲು ಕಾಲೇಜುಗಳಲ್ಲಿ ವಿದ್ಯಾರ್ಥಿ ದೆಸೆಯಿಂದ ಆದರ್ಶಗಳನ್ನು ತುಂಬಿಕೊಂಡಿರುವ ವ್ಯಕ್ತಿ ಮುಂದೆ ಬೆಳೆದು ದೊಡ್ಡವನಾದ ಮೇಲೆ ಕೆಟ್ಟುಹೋಗುತ್ತಾನೆ. ಸಮಾಜ ವ್ಯಕ್ತಿಯನ್ನು ಕೆಡಿಸುತ್ತದೋ, ವ್ಯಕ್ತಿ ಸಮಾಜವನ್ನು ಕೆಡಿಸುತ್ತಾನೋ ಹೇಳುವುದು ಕಷ್ಟ ನಾನೊಬ್ಬ ನ್ಯಾಯಾಧೀಶನಾಗಿ ಎಷ್ಟು ಅನ್ಯಾಯವನ್ನು ತಡೆಯಬಹುದೋ ಅಷ್ಟನ್ನು ಮಾತ್ರ ತಡೆಯಲು ಸಾಧ್ಯ. ಏಕೆಂದರೆ ಕೋರ್ಟಿಗೆ ಬರುವ ಕೇಸುಗಳು ಕೇವಲ 5 ರಿಂದ 10 ಪರ್ಸೆಂಟ್ ಮಾತ್ರ, ಅನ್ಯಾಯವನ್ನು ತಡೆಯುವ ಕೆಲಸ ವೈಯಕ್ತಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಆಗಬೇಕು.

ಹುಣ್ಣಿಮೆ ಸಮಾರಂಭದಲ್ಲಿ ಅವರು ನಮ್ಮ ಮಠ ಪ್ರಕಟಿಸಿದ ಜಗಳೂರಿನ ಹಿರಿಯ ತಲೆಮಾರಿನ ರಾಜಕೀಯ ಮುತ್ಸದ್ದಿ ಇಮಾಂ ಸಾಹೇಬರ "Democracy In India" ಎಂಬ ಗ್ರಂಥವನ್ನು ಲೋಕಾರ್ಪಣೆ ಮಾಡಿ ನಮ್ಮ ದೇಶದ ಪ್ರಜಾಪ್ರಭುತ್ವದ ಏಳು ಬೀಳುಗಳನ್ನು ಚಿತ್ರಿಸಿ ಅವರು ಹೇಳಿದ ಮಾತುಗಳು: “ನಮ್ಮ ದೇಶದ್ದು ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಇದರ ವೈಶಿಷ್ಟ್ಯವೆಂದರೆ ಇಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿರುತ್ತವೆ. ಅವುಗಳನ್ನು ಉಪಯೋಗಿಸಿಕೊಂಡವರು ಖಂಡಿತಾ ಮೇಲೆ ಬರುತ್ತಾರೆ. ಇದಕ್ಕೆ ನಾನೇ ಒಂದು ನಿದರ್ಶನವಾಗಿದ್ದೇನೆ. ಒಂದು ಕುಗ್ರಾಮದಲ್ಲಿ ಹುಟ್ಟಿದ ಸಾಮಾನ್ಯ ಮನುಷ್ಯನಾದ ನಾನು ಇಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶನಾಗಿದ್ದೇನೆ. ಇದು ಪ್ರಜಾಪ್ರಭುತ್ವದಲ್ಲಿ ಮಾತ್ರ ಸಾಧ್ಯ! ಸ್ವಾತಂತ್ರ್ಯ ಎಂಬುದನ್ನು ಇಂದಿನ ಯುವಜನಾಂಗ ಸ್ವೇಚ್ಛೆ ಎಂದು ತಿಳಿದುಕೊಂಡಿರುವುದು ತಪ್ಪು, ಗಾಳಿಪಟವು ಆಕಾಶದಲ್ಲಿ ಸರಿಯಾಗಿ ಹಾರಬೇಕಾದರೆ ನೆಲದ ಮೇಲಿನ ಸೂತ್ರಧಾರನು ನಿಯಂತ್ರಿಸುವುದು ಅತಿ ಅಗತ್ಯ. ಅವನು ಸೂತ್ರವನ್ನು ಕೈಬಿಟ್ಟರೆ ಗಾಳಿಪಟವು ದಿಕ್ಕು ತಪ್ಪಿ ದಿಕ್ಕಾಪಾಲಾಗಿ ನೆಲ ಕಚ್ಚುತ್ತದೆ. ಆದ್ದರಿಂದ ನಮ್ಮ ಯುವಕರು ಮತ್ತು ಯುವತಿಯರು ತಮ್ಮ ತಂದೆ ತಾಯಿಗಳು ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದಾರೆಂದು ದೂಷಿಸದೆ ಗಾಳಿಪಟದ ಸೂತ್ರಧಾರರಂತೆ ಸರಿಯಾದ ದಾರಿಯಲ್ಲಿ ನಡೆಯಲು ಮಾರ್ಗದರ್ಶನ ಮಾಡುತ್ತಿದ್ದಾರೆಂದು ಭಾವಿಸಬೇಕು! ತಲೆಯಲ್ಲಿ ಬುದ್ದಿ ಇದೆ, ಹೃದಯದಲ್ಲಿ ಭಾವನೆ ಇದೆ. ಬುದ್ದಿಯು ಶುಷ್ಕ; ಹೃದಯವು ಕೋಮಲ. ಕೇವಲ ಬುದ್ದಿಯಿಂದ ಯೋಚಿಸದೆ ಹೃದಯದಿಂದಲೂ ಸ್ಪಂದಿಸಬೇಕು. ಎರಡೂ ಹೊಂದಾಣಿಕೆಯಾಗುವ ರೀತಿಯಲ್ಲಿ ನಾವು ನಡೆದುಕೊಂಡರೆ ಮಾತ್ರ ಸುಂದರ ಸಮಾಜದ ನಿರ್ಮಾಣ ಮಾಡಲು ಸಾಧ್ಯ!” 

ಅವರು ದೆಹಲಿಯಿಂದ ಬೆಂಗಳೂರಿಗೆ ಬಂದಾಗಲೆಲ್ಲಾ ಮನೆಯಲ್ಲಿ ತಾಯಿಯ ತೊಡೆಯನ್ನೇ ತಲೆದಿಂಬಾಗಿಸಿಕೊಂಡು ಸಮಾಧಾನವಾಗುವವರೆಗೆ ಮಲಗುತ್ತಿದ್ದರಂತೆ. 'ನಾನು ಹೋದ ಮೇಲೆ ನೀನು ಮನೆಗೆ ಬರುವುದಿಲ್ಲ ಕಣೋ' ಎಂದು ಅವರ ತಾಯಿ ಹೇಳುತ್ತಿದ್ದರಂತೆ! ಈಗ ಅವರ ಸಮಾಧಿಯನ್ನು ಬೆಂಗಳೂರಿನ ರುದ್ರಭೂಮಿಯಲ್ಲಿ ಕಳೆದ ವರ್ಷ (28-7-2020) ಅಗಲಿ ಹೋದ ತಾಯಿಯ ಸಮಾಧಿಯ ಬದಿಯಲ್ಲೇ ಮಾಡಿದ್ದಾರೆ. ಸಾವಿನ ನಂತರವೂ ತಾಯ ಮಮತೆಯ ಮಡಿಲು ಸೇರಿದ್ದಾರೆ ಶ್ರೇಷ್ಠ ನ್ಯಾಯಮೂರ್ತಿ ಮೋಹನ ಶಾಂತನಗೌಡರ್!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.6-5-2021
ಬಿಸಿಲು ಬೆಳದಿಂಗಳು