ದೂರವಾಣಿಯಿಂದ ಸಿಗದ ತಾಣಕ್ಕೆ ಸರಿದು ಹೋದ ಪತ್ರಕರ್ತ

ನಮ್ಮೊಂದಿಗೆ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದ ಹೆಸರಾಂತ ಪತ್ರಕರ್ತ, ಅಂಕಣಕಾರ, ರಾಜಕೀಯ ವಿಶ್ಲೇಷಕ ಮಹದೇವ್ ಪ್ರಕಾಶ್ ಅವರು ನಮ್ಮ ಕರೆಗೆ ತಡಮಾಡದೆ ತಕ್ಷಣವೇ ಉತ್ತರಿಸುತ್ತಿದ್ದರು. ಸುಮಾರು ಹದಿನೈದು ದಿನಗಳ ಹಿಂದೆ ಅದೇಕೋ ಏನೋ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಒಂದೆರಡು ದಿನಗಳ ನಂತರ ಪುನಃ ಕರೆ ಮಾಡಿದಾಗಲೂ ನಿರಂತರವಾಗಿ ಸ್ವಿಚ್ ಆಫ್ ಎಂದೇ ಬರುತ್ತಿತ್ತು. ಅವರ ಗೆಳೆಯರನ್ನು ಸಂಪರ್ಕಿಸಿ ಕೇಳಿದಾಗ ಕೊರೊನಾ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಆಘಾತವುಂಟಾಯಿತು. ಅವರನ್ನು ಸಂಪರ್ಕಿಸಿ ಆರೋಗ್ಯವನ್ನು ವಿಚಾರಿಸಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ! ಸಿರಿಗೆರೆಯ ಕೊರೋನಾ ಪೀಡಿತ ಯುವಕನೊಬ್ಬನನ್ನು ಆಸ್ಪತ್ರೆಗೆ ಸೇರಿಸಲು ಚಿತ್ರದುರ್ಗದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿಯವರಿಗೆ ತುರ್ತು ಕರೆ ಮಾಡಿದಾಗ ಆ ರೋಗಿಗೆ ಅವಕಾಶ ಮಾಡಿಕೊಟ್ಟರಲ್ಲದೆ ಮಹದೇವ್ ಪ್ರಕಾಶ್ ಅವರು ಕೊರೊನಾ ಕಾರಣದಿಂದ ಮೃತಪಟ್ಟರೆಂಬ ದಾರುಣ ಸಂಗತಿಯನ್ನು ತಿಳಿಸಿದರು.
'ವಿಜಯ ಕರ್ನಾಟಕ' ಪತ್ರಿಕೆಯ ಅಂಕಣಕಾರರಾಗಿದ್ದ ಮಹದೇವ್ ಪ್ರಕಾಶ್ ಅವರನ್ನು ಕುರಿತೇ ಈ ಅಂಕಣವನ್ನು ಬರೆಯ ಬೇಕಾದ ಪ್ರಸಂಗ ಬರುತ್ತದೆಂದು ಕನಸುಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ನಿಯಮಿತ ಕಾಲದಲ್ಲಿ ಅಂಕಣವನ್ನು ಬರೆಯು ವುದೆಂದರೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದಂತೆ! ನಮ್ಮ ವಿದ್ಯಾರ್ಥಿ ದೆಸೆಯಲ್ಲಿ ಈಗಿನಂತೆ ಸೆಮಿಸ್ಟರ್ ಪದ್ಧತಿ ಇರಲಿಲ್ಲ. ವರ್ಷಕ್ಕೊಮ್ಮೆ ಪರೀಕ್ಷೆ ಇರುತ್ತಿತ್ತು. ಅದಕ್ಕಾಗಿಯೇ ವರ್ಷವಿಡೀ ಪಾಠ ಪ್ರವಚನಗಳನ್ನು ಕೇಳಿ ಓದಲು ಬರೆಯಲು ಪೂರ್ಣಾವಧಿ ಕಾಲ ಸಿಗುತ್ತಿತ್ತು. ಆದರೆ ಸಾರ್ವಜನಿಕ ಜೀವನದಲ್ಲಿದ್ದು, ಅನೇಕ ಸಾಂಸ್ಥಿಕ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಾ ನಿಯಮಿತ ಕಾಲಾವಧಿಯಲ್ಲಿ ಅಂಕಣ ಬರೆಯುವುದೆಂದರೆ ಕ್ರೀಡಾ ಸ್ಪರ್ಧೆಯಲ್ಲಿ ತಡೆಯೋಟ (Hurdles Race) ಇದ್ದಂತೆ! ಅಂಕಣ ಬರೆಯಲು ತೊಡಗಿದರೆ ಅಡಿಗಡಿಗೆ ಬರುವ ಅಡ್ಡಿ ಆತಂಕಗಳು! ಸಾಂಸ್ಥಿಕ ಜವಾಬ್ದಾರಿಗಳನ್ನು ಅನಿವಾರ್ಯವಾಗಿ ನಿರ್ವಹಿಸಲೇಬೇಕು. ಅಂಕಣ ಬರಹವಂತೂ ಸಕಾಲದಲ್ಲಿ ಹೋಗಲೇಬೇಕು. ಎರಡನ್ನೂ ಸರಿದೂಗಿಸುವುದು ಹಗ್ಗದ ಮೇಲೆ ಹೆಜ್ಜೆ ಇಟ್ಟು ನಡೆದಂತೆ! ಕೊರೊನಾ ಬಂದರೆ ವಿದ್ಯಾರ್ಥಿಗಳ ಪರೀಕ್ಷೆ ಮುಂದಕ್ಕೆ ಹೋಗುತ್ತದೆಯೇ ಹೊರತು ನಮ್ಮ 'ಅಂಕಣ ಬರಹ'ದ ಪರೀಕ್ಷೆಮುಂದಕ್ಕೆ ಹೋಗುವುದಿಲ್ಲ. ಮಾಲೀಕರು ಮರಣ ಹೊಂದಿದರೂ ಪತ್ರಿಕಾ ಸಿಬ್ಬಂದಿಗೆ ರಜೆಯಿಲ್ಲ, ಯಾರೇ ಬದುಕಲಿ, ಸಾಯಲಿ ಸೂರ್ಯೋದಯವಾದಂತೆ ಅಂಕಣಗಳ ವಿಚಾರಗಳ ಹೊಂಗಿರಣಗಳು ಬೆಳಗಾದೊಡನೆ ನಾಡಿನಾದ್ಯಂತ ಪಸರಿಸುತ್ತಲೇ ಇರುತ್ತವೆ. ಹಬ್ಬ ಬಂದರೆ ಮಾತ್ರ ಪತ್ರಿಕಾಲಯಕ್ಕೆ ರಜೆ. ಪತ್ರಿಕೆಗೆ ಆ ದಿನ ಗ್ರಹಣ. ಆ ಗ್ರಹಣದ ದಿನ ಗುರುವಾರವಾದರೆ ಮಾತ್ರ ನಮ್ಮ ಅಂಕಣ ಬರಹಕ್ಕೆ ರಜೆ.
ತಲೆಯಲ್ಲಿ ಎಷ್ಟೇ ವಿಚಾರಗಳು ತುಂಬಿದ್ದರೂ ಅವು ಪರಿಪಕ್ವಗೊಳ್ಳುವುದು ಬರೆದಾಗ ಮಾತ್ರ. ನಮ್ಮಈ ಪಾಕ್ಷಿಕ ಅಂಕಣದ ಸಹೃದಯ ಓದುಗರೇ ಮೌಲ್ಯಮಾಪಕರು, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಮೇಲೆ ಡಾಕ್ಟರೇಟ್ ಪದವಿಗಾಗಿ ಸಂಶೋಧನೆಯಲ್ಲಿ ತೊಡಗಿದಾಗ ನಮಗೆ ಮಾರ್ಗದರ್ಶಕಿಯಾಗಿದ್ದವರು (Research Guide) ಪ್ರೊಫೆಸರ್ ಪದ್ಮಾಮಿಶ್ರಾರವರು. ಲಂಡನ್ ವಿವಿಯಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದವರು. ಅವರ ಮಾರ್ಗದರ್ಶಕ ರಾಗಿದ್ದವರು ಸಂಸ್ಕೃತ ಮತ್ತು ಪ್ರಾಚೀನ ಇತಿಹಾಸದಲ್ಲಿ ವಿಶ್ವವಿಖ್ಯಾತಿಯನ್ನು ಪಡೆದಿದ್ದ ಪ್ರೊಫೆಸರ್ A.L Bashamರವರು. The Wonder that was India ಎಂಬ ಪ್ರಸಿದ್ದ ಗ್ರಂಥದ ಲೇಖಕರಾದ ಅವರು ಆ ಗ್ರಂಥದ ಆರಂಭದಲ್ಲಿ ಭಾರತದ 'ಮ್ಲೇಚ್ಛ ಮಿತ್ರ'ನಾಗಿ (As a friendly Miechaof India) ಈ ಗ್ರಂಥವನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ಪದ್ಮಾಜಿಯವರಿಗೆ ಡಾಕ್ಟರೇಟ್ ಪದವಿ ದೊರೆತಾಗ ಒಂದು ಪುಸ್ತಕವನ್ನು ಬಳುವಳಿಯಾಗಿ ಕೊಡುವಾಗ ಅವರು ಸ್ವಹಸ್ತಾಕ್ಷರದಲ್ಲಿ ಸಂಸ್ಕೃತದಲ್ಲಿಯೇ 'ಇದಂ ಪುಸ್ತಕಂ ಮಿಶ್ರಕುಲಪದ್ಮಾಯೈ ಲಂಡನ್ ನಗರೇ ಡಾಕ್ಟರ್ ಪದಪ್ರಾಪ್ತ್ಯವಸರೇ ತದಧ್ಯಾಪಕೇನ ಸಾದರಂ ಸಮರ್ಪಿತಮ್ ಎಂದು ಬರೆದುಕೊಟ್ಟಿರುವುದನ್ನು ಅವರ ಗ್ರಂಥಾಲಯದಲ್ಲಿ ಓದಿದ ನೆನಪು ನಮ್ಮ ಮನಸ್ಸಿನಲ್ಲಿ ಇನ್ನೂ ಅಚ್ಚ ಹಸಿರಾಗಿದೆ. ಪ್ರೊಫೆಸರ್ ಪದ್ಮಾಜೀಯವರು ನಮ್ಮ ಸಂಶೋಧನಾ ಪ್ರಬಂಧದ ಕರಡು ಪ್ರತಿಯ ಪ್ರತಿಯೊಂದು ವಾಕ್ಯವನ್ನೂ ಓದಿ ಪೂರ್ಣವಿರಾಮ, ಅರ್ಧವಿರಾಮಾದಿ ಚಿಹ್ನೆಗಳನ್ನೂ ಸಹ ಗಮನಿಸಿ ತಿದ್ದುಪಡಿ ಮಾಡುತ್ತಿದ್ದರು. ಅವರು ನಮಗೆ ಹೇಳುತ್ತಿದ್ದ ಒಂದು ಕಿವಿ ಮಾತು: 'ನೀನು ಬರೆದುದನ್ನು ನಿನ್ನಷ್ಟೇ ಬುದ್ಧಿಮತ್ತೆಯುಳ್ಳ ನಿನ್ನ ಸ್ನೇಹಿತರಿಗೆ ಓದಲು ಕೊಡು, ಅವರಿಗೆ ಯಾವ ವಿವರಣೆಯನ್ನೂ ನೀಡಬೇಡ. ನೀನು ಬರೆದ ವಿಚಾರಗಳನ್ನು ಅವರು ಯಥಾವತ್ತಾಗಿ ಗ್ರಹಿಸಿದರೆ ನಿನ್ನ ಬರಹ ಪರಿಪಕ್ವವಾಗಿದೆ ಎಂದರ್ಥ. ಇಲ್ಲದಿದ್ದರೆ ಅವರು ಏಕೆ ತಪ್ಪಾಗಿ ಗ್ರಹಿಸಿದರೆಂದು ಮನದಟ್ಟು ಮಾಡಿಕೊಂಡು ನಿನ್ನ ಬರಹವನ್ನು ಪರಿಷ್ಕರಿಸು.
ಅಂಕಣ ಬರಹವು ನೀಡುವ ಆನಂಕ್ಕೆ ಮೂರು ಆಯಾಮಗಳು ಇವೆ. ಅಂಕಣ ಬರಹವನ್ನು ಬರೆದು ಪೂರೈಸುವ ತನಕ ಮಾನಸಿಕ ಒತ್ತಡ, ತಳಮಳ ಮತ್ತು ತಲ್ಲಣ, ಬರೆದು ಮುಗಿಸಿದ ಮೇಲೆ ನವಜಾತ ಶಿಶುವನ್ನು ನೋಡಿ ಹೆತ್ತ ತಾಯಿ ಹೆರಿಗೆಯ ನೋವನ್ನು ಮರೆತು ಆನಂದಿಸಿದಂತೆ! ಇನ್ನು ಅಂಕಣವನ್ನು ಓದುವ ಸಹೃದಯ ಓದುಗರು ಪಡೆಯುವ ಆನಂದವೇ ಬೇರೆ. ಹುಟ್ಟಿದ ಮಗುವನ್ನು ನೋಡಿ ಬಂಧುಗಳು ಪ್ರೀತಿಯಿಂದ ನೆಟಿಕೆ ಮುರಿದಂತೆ! ಇವೆರಡಕ್ಕಿಂತಲೂ ಭಿನ್ನವಾದ ಮೂರನೇ ಆಯಾಮದ ಆನಂದವೆಂದರೆ ಸ್ವತಃ ಅಂಕಣಕಾರರಾಗಿ ಬೇರೆಯವರ ಅಂಕಣವನ್ನು ಓದಿ - ಆನಂದಿಸುವುದು. ಇದು ಬಹಳ ಅಪರೂಪವೆಂದೇ ಹೇಳಬೇಕು. ಅಂತಹ ಅಪರೂಪದ ಗುಣ ಉಳ್ಳವರು ಮಹದೇವ ಪ್ರಕಾಶ್ ಆಗಿದ್ದರು. 'ವಿಜಯ ಕರ್ನಾಟಕ' ಪತ್ರಿಕೆಯ ಅಂಕಣಕಾರರೆಲ್ಲರೂ ವಿಚಾರಶೀಲ ಓದುಗರಿಗೆ ಸರದಿ ಪ್ರಕಾರ ವಾರಾನ್ನ ಉಣಬಡಿಸುವ ಉದಾರಿಗಳು, ಈಗಿನ ವಿದ್ಯಾರ್ಥಿಗಳೆಲ್ಲಾ Paying Guests ಗಳಾಗಿದ್ದು ಹಿಂದಿನ ಕಾಲದ ವಿದ್ಯಾರ್ಥಿಗಳ ಅನುಭವ ಇಲ್ಲ. ಅಂತಹ ವಿದ್ಯಾಪೋಷಕರೂ ಈಗ ಇದ್ದಂತಿಲ್ಲ. ಕಳೆದ 9 ವರ್ಷಗಳಿಂದ ತಿಂಗಳಲ್ಲಿ ಎರಡು ದಿನ ವಿಚಾರಗಳ ವಾರಾನ್ನ ನೀಡುತ್ತಿದ್ದ ಮಹದೇವ್ ಪ್ರಕಾಶ್ ಇನ್ನಿಲ್ಲವೆಂಬುದು ತುಂಬಾ ದುಃಖಕರ ಸಂಗತಿ, 'ವಿಜಯ ಕರ್ನಾಟಕ'ದಲ್ಲಿ ನಾವು 2008ರಿಂದ 'ಬಿಸಿಲು ಬೆಳದಿಂಗಳು' ಅಂಕಣವನ್ನು ಬರೆಯುತ್ತಾ ಬಂದರೆ ಅವರು ಇದೇ ಪತ್ರಿಕೆಯಲ್ಲಿ 'ಹೊರಳು ನೋಟ' ಅಂಕಣವನ್ನು 2012ರಿಂದ ಬದುಕಿಗೆ ವಿದಾಯ ಹೇಳುವವರೆಗೂ ಬರೆದಿದ್ದಾರೆ. ಒಮ್ಮೆನಮ್ಮ ಅಂಕಣ ಕುರಿತು ಅವರು ವಾಟ್ಸಾಪ್ ಮಾಡಿದ ಈ ಕೆಳಗಿನ ಮೆಚ್ಚುಗೆಯ ಮಾತುಗಳು ನಮ್ಮ ಅಂಕಣದೊಳಗೊಂದು ಅವರ ಅಂಕಣ: ಲೇಖಕರು ಅಥವಾ ಅಂಕಣಕಾರರು ಸಮಾಜಕ್ಕೆ ಹಿಡಿದ ಕನ್ನಡಿ. ನಮ್ಮ ಸಾಮಾಜಿಕ ವ್ಯವಸ್ಥೆಯ ಅಂಕು-ಡೊಂಕುಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಅಧಿಕಾರ ಸೂತ್ರ ಹಿಡಿದವರ ಕಣ್ಣು ತೆರೆಸುವ ಹೊಣೆಗಾರಿಕೆ ಅಂಕಣಕಾರರ ಮೇಲಿರುತ್ತದೆ. They are the watch dogs of this society. ಇಂಥದೊಂದು ಸಾಮಾಜಿಕ ಹೊಣೆಗಾರಿಕೆಯ ಅಂಶ ತಮ್ಮ ಪ್ರತಿ ಅಂಕಣದಲ್ಲೂ ಬಿಂಬಿತ ವಾಗುತ್ತಿದೆ. ಈ ಕಾರಣದಿಂದಲೇ ಹದಿಮೂರು ವರ್ಷಗಳಿಂದ ತಮ್ಮ ಅಂಕಣಗಳು ಮುಂದುವರಿಯುತ್ತಿವೆ. ಈಗಲೂ ಜನಮಾನಸವನ್ನು ಗೆಲ್ಲುವಲ್ಲಿ ಸಫಲ ಆಗಿವೆ. ಪ್ರತಿ ಅಂಕಣವೂ ನವನವ್ಮೋನೇಶಶಾಲಿನಿಯಾಗಿರುತ್ತದೆ. ಅಂಕಣವನ್ನು ಓದಲು ಪ್ರಾರಂಭಿಸಿದರೆ ಕಡೆಯ ಸಾಲಿನವರೆಗೆ ತನ್ನ ಅಯಸ್ಕಾಂತೀಯ ಗುಣದಿಂದ ಓದುಗನ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುತ್ತದೆ.
“ವಿಶೇಷವಾಗಿ ಇಂದಿನ ಅಂಕಣ ನಿಜಕ್ಕೂ ಕೇಂದ್ರ ಸರಕಾರದ 'ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ' ಎಷ್ಟರಮಟ್ಟಿಗೆ ದೋಷಪೂರ್ಣವಾಗಿದೆ. ಇದರಿಂದ ವಿಮಾ ಕಂಪನಿಗಳಿಗೆ ಯಾವ ರೀತಿ ಲಾಭವಾಗಲಿದೆ: ಪ್ರಧಾನಮಂತ್ರಿಯ ಭಾಷಣ ಜನರ ಮನಸ್ಸನ್ನು ಗೆದ್ದಂತೆ, ವಿಮಾಯೋಜನೆ ರೈತರ ಮನ ಗೆಲ್ಲುವಲ್ಲಿ ಯಾವ ರೀತಿ ವಿಫಲವಾಗಿದೆ ಅನ್ನುವ ಅಂಶದ ಮೇಲೆ ತಮ್ಮ ನಿರ್ದಾಕ್ಷಿಣ್ಯ ನಿಲುವು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಯಾರು ಎಷ್ಟೇ ದೊಡ್ಡವರಿರಲಿ ಚಾಟಿಯೇಟು ಬೀಸುವ ತಮ್ಮ ನಿಲುವು ಇತರರಿಗೆ ಮಾದರಿ. ದೋಷಪೂರಿತ ಬೆಳೆವಿಮೆ ಪದ್ಧತಿಗೊಂದು ಪರ್ಯಾಯ ಪರಿಹಾರ ತಂತ್ರಾಂಶ, ನಿಜಕ್ಕೂ ರೈತರ ಬದುಕಿನ ಜನ್ಮಕುಂಡಲಿ. ಇಂತಹ ವಿನೂತನ ಬೆಳೆ ತಂತ್ರಾಂಶ ಅಭಿವೃದ್ಧಿಪಡಿಸುವ ಸಂಬಂಧ ತಾವು ರಾಜೀವ ಚಾವ್ಲಾ ಅವರಿಗೆ ಸಲಹೆ ನೀಡಿ ಅಭಿವೃದ್ಧಿಗೊಳಿಸಿದ 'ಭೂಮಿ ಆನ್ ಲೈನ್ ಪರಿಹಾರ' ನಿಜಕ್ಕೂ ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಲಿದೆ. ಪ್ರಾಯಶಃ ಇದನ್ನು ಕೇಂದ್ರವು ರಾಷ್ಟ್ರಮಟ್ಟದಲ್ಲಿ ಸಾಕಾರಗೊಳಿಸಿದರೂ ಅಚ್ಚರಿಪಡಬೇಕಿಲ್ಲ. ತಮ್ಮ ಇಂಥದೊಂದು ಮಹತ್ವದ ಕೊಡುಗೆ ಕೋಟಿ ಕೋಟಿ ರೈತರ ಬಾಳಿಗೆ ಬೆಳಕಾಗಲಿದೆ. ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ತಂತ್ರಾಂಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೇಳಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದ ಪ್ರತಿಯನ್ನು ನೋಡಿ ನಿಜಕ್ಕೂ ಸಂತೋಷವಾಯಿತು. ಕೇಂದ್ರ ಸರಕಾರವು ಹಾಲಿ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದು ಸ್ಪಷ್ಟವಾಯಿತು ““ಕೋವಿಡ್-19 ಮಹಾಮಾರಿಯನ್ನು ಎದುರಿಸುವ ಕುರಿತು ಬರೆದ ಇತಿಹಾಸದಿಂದ ಪಾಠ ಕಲಿಯದ ಮನುಷ್ಯ' ಎಂಬ ತಮ್ಮ ಲೇಖನ ಕಣ್ಣು ತೆರೆಸುವಂತಹ ಒಂದು ಮೌಲಿಕ ಲೇಖನ; ಕೇವಲ ವ್ಯಕ್ತಿಗಳಷ್ಟೇ ಬದಲಾಗುತ್ತಾರೆ. ಘಟನಾವಳಿಗಳು ಮಾತ್ರ ಅವೇ ಆಗಿರುತ್ತವೆ. ಹೀಗಾಗಿ ಮನುಷ್ಯನ ದೌರ್ಬಲ್ಯಗಳು ತಲೆಮಾರಿನಿಂದ ತಲೆಮಾರಿಗೆ ಅನೂಚಾನವಾಗಿ ನಡೆದುಕೊಂಡು ಬಂದಿವೆ. ಮನುಷ್ಯ ಎಲ್ಲವನ್ನೂ ಅನುಭವಿಸಿಯೇ ಸತ್ಯಾಸತ್ಯತೆಯನ್ನು ತಿಳಿಯುತ್ತೇನೆಂದು ಹೊರಟರೆ ಒಂದು ಜೀವಮಾನವೂ ಸಾಕಾಗುವುದಿಲ್ಲ. ಎನ್ನುವ ಅನೇಕ ಮಾತುಗಳುಳ್ಳ ಈ ಲೇಖನ ಮಾಹಿತಿಗಳ ಕಣಜ. ಪೂಜ್ಯ ಗುರುಗಳ ಬುದ್ಧಿಮತ್ತೆಗೆ ಶರಣು ಶರಣಾರ್ಥಿ ಇಂತಹ ಮಾತುಗಳಿಂದ ಗುಣಗ್ರಾಹಿಗಳಾಗಿದ್ದ ಮಹದೇವ ಪ್ರಕಾಶ್ 1975ರಲ್ಲಿ 'ಲೋಕವಾಣಿ' ದಿನಪತ್ರಿಕೆಯ ಮೂಲಕ ಪತ್ರಿಕಾರಂಗಕ್ಕೆ ಪ್ರವೇಶ ಮಾಡಿದರು. ಯಡಿಯೂರಪ್ಪನವರು ಸಿಎಂ ಆದಾಗ ಅವರ ಮಾಧ್ಯಮ ಸಲಹೆ ಗಾರರಾಗಿ ನೇಮಕಗೊಂಡು ಸೇವೆ ಸಲ್ಲಿಸಿದರು. ಆ ಸಂದರ್ಭ ದಲ್ಲಿಯೇ ಅವರಿಗೆ 'ರಾಜ್ಯೋತ್ಸವ' ಪ್ರಶಸ್ತಿ ಬಂದಿತು. ಅದನ್ನು ಅವರು ಸ್ವೀಕರಿಸಲಿಲ್ಲ. ಅದಕ್ಕೆ ಅವರು ನೀಡಿದ ಕಾರಣ 'ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿರುವುದರಿಂದ ಲಾಬಿ ಮಾಡಿ ಪ್ರಶಸ್ತಿ ಪಡೆದೆನೆಂಬ ಅಪಖ್ಯಾತಿ ಬರಬಾರದು!' ಎಂದು.
'ಈ ಭಾನುವಾರ' ಎಂಬ ಪತ್ರಿಕೆಯನ್ನೂ ಅವರು ಹೊರತರುತ್ತಿದ್ದರು; ವಿವಿಧ ವಾಹಿನಿಗಳ ರಾಜಕೀಯ ವಿಶ್ಲೇಷಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನೇರ, ನಿಷ್ಟುರ ಬರವಣಿಗೆ ಮತ್ತು ಮಾತುಗಳಿಗೆ ಅವರು ಮನೆಮಾತಾಗಿದ್ದರು. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇದೇ ಮೇ 14ರ ಶುಕ್ರವಾರ ಇಹದ ಬದುಕಿಗೆ ತಮ್ಮ 65 ನೇ ವಯಸ್ಸಿನಲ್ಲಿ ವಿದಾಯ ಹೇಳಿಬಿಟ್ಟರು. ನಾಡ ಗಾಯಕರ ಸಿರಿಕಂಠದಿಂದ ಝೇಂಕರಿಸಿದ *'ಜೋಗದ ಸಿರಿಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ ಎಂದು ನಿಸರ್ಗವನ್ನು ಬಣ್ಣಿಸುತ್ತಲೇ ಭೂತಾಯಿಯ ಒಡಲ ಸೇರಿದರು ಕೆ.ಎಸ್ ನಿಸಾರ ಅಹಮದ್ ರವರು. ಪ್ರಖ್ಯಾತ ಕವಿ ಜಯಂತ್ ಕಾಯ್ಕಿಣಿಯವರು ಬರೆದ 'ಕಾಯದಂತೆ ಆಕ್ರಮಿಸಿದೆ ವೈರಿ ಕೊರೊನಾ! ಅದಕೆ ಈಗ ನಾವೇ ದಾರಿ ಆಗದಿರೋಣ! ಕಾಲ ಬುಡಕೆ ಬರುವನಕ ಕಾಯದಿರೋಣ! ಕೈತೊಳೆದೇ ಮುಟ್ಟಬೇಕು ಅಂತಿದ್ದೆವು ಅಂದು! ಮುಟ್ಟಿದರೆ ಏನನೂ ಕೈತೊಳೆಯಬೇಕೆಂದು.. ಭೂಮಿ ಬಾನು ನೀರು ಕಾಡು ಧ್ವಂಸ ಮಾಡುತ ನಾವೆ ತಂದುಕೊಂಡೆವೀಗ ಚಂಡಮಾರುತ! ಈಗಲಾದ್ರು ಅಟ್ಟಹಾಸ ಬಿಟ್ಟು ಬಿಡೋಣ' ಎಂಬ ಕೊರೊನಾ ಕವಿತೆಯನ್ನು ಸುಶ್ರಾವ್ಯವಾಗಿ ಹಾಡುತ್ತಲೇ ಸುಪ್ರಸಿದ್ಧ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾಕ್ಕೆ ಬಲಿಯಾಗಿ ಕೊನೆಯುಸಿರೆಳೆದರು. ಜವರಾಯನ ಹೆಗಲ ಮೇಲಿನ ಕೊಡಲಿಗೆ ಕಿಂಚಿತ್ತೂ ದಯೆ ಇಲ್ಲ. ಒಳೊಳ್ಳೆ ಮರಗಳನ್ನೇ ಅವನು ಹುಡುಕಿ ಹುಡುಕಿ ನೆಲಕ್ಕುರುಳಿಸಿರುವುದು ಈ ನಾಡಿನ ಬಹು ದೊಡ್ಡದುರಂತ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.20-5-2021
ಬಿಸಿಲು ಬೆಳದಿಂಗಳು