ಮುಚ್ಚಿದ ಮನಸ್ಸು vs ತೆರೆದ ಮನಸ್ಸು

ಮುಚ್ಚಿದ ಮನಸ್ಸು ತೆರೆದ ಮನಸ್ಸು ಯಾವುದು ಸರಿ? ಯಾವುದು ತಪ್ಪು? ಮುಂದೆ ನಮ್ಮ ಉತ್ತರವೇನೆಂದು ಕುತೂಹಲದಿಂದ ಓದುವುದಕ್ಕಿಂತ ಮುಂಚೆ ನೀವು ಒಂದು ಕ್ಷಣ ಕಣ್ಣು ಮುಚ್ಚನಿಮ್ಮ ಉತ್ತರವೇನೆಂದು ಚಿಂತಿಸಿರಿ. ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ನೆನಪಿಟ್ಟುಕೊಳ್ಳಿ, ಇಲ್ಲವೇ ಬರೆದಿಟ್ಟುಕೊಳ್ಳಿ, ನಿಮ್ಮ ಪ್ರಕಾರ ಇವೆರಡರಲ್ಲಿ ಯಾವುದನ್ನೇ ಸರಿ ತಪ್ಪು ಎಂದು ನಿರ್ಧರಿಸುವುದಕ್ಕೆ ನೀವು ಕೊಡುವ ಕಾರಣಗಳೇನು? ಅವುಗಳ ಬಗ್ಗೆಯೂ ಚಿಂತಿಸಿರಿ. ನಂತರ ನಮ್ಮ ಉತ್ತರದೊಂದಿಗೆ ತಾಳೆ ನೋಡಿರಿ, ನಮ್ಮ ಉತ್ತರವೇ ಸರಿ ನಿಮ್ಮ ಉತ್ತರ ತಪ್ಪು ಎಂದು ವಾದಿಸಿದರೆ ಏಕೆ ತಪ್ಪು ಎಂದು ಪ್ರತಿಪಾದಿಸದಿದ್ದರೆ ವಿರೋಧಾಭಾಸ ಉಂಟಾಗುತ್ತದೆ ಎಂಬುದು ನಿಮ್ಮ ನೆನಪಿನಲ್ಲಿರಲಿ. 'ತದ್ವಿದ್ದಿ ಪ್ರಣಿಪಾತೇನ ಪರಿಪ್ರಶ್ನೆನ ಸೇವಯಾ ಎಂಬ ಭಗವದ್ಗೀತೆಯ ಉಪದೇಶದಂತೆ ವಿಧೇಯತೆಯೇ ಬೇರೆ ಅಭಿಪ್ರಾಯ ಸ್ವಾತಂತ್ಯವೇ ಬೇರೆ ಎಂಬುದೂ ನಿಮ್ಮ ಗಮನದಲ್ಲಿರಲಿ. “ಹಿರಿಯರಾದರೇನು ಕಿರಿಯರಾದರೇನು? ಅರಿವಿಂಗೆ ಹಿರಿದು ಕಿರಿದುಂಟೇ?' ಎಂದು ನಿರ್ಣಯಿಸಿದ್ದಾರೆ ಚೆನ್ನಬಸವಣ್ಣನವರು.
ನಮ್ಮ ಅಭಿಪ್ರಾಯದಲ್ಲಿ ಮುಚ್ಚಿದ ಮನಸ್ಸು ತೆರೆದ ಮನಸ್ಸು ಪರಸ್ಪರ ವಿರುದ್ದವೆನಿಸಿದರೂ ಎರಡೂ ಸರಿ ಮತ್ತು ಎರಡೂ ತಪ್ಪು ಎಂದರೆ ನೀವು ಆಶ್ಚರ್ಯಚಕಿತರಾಗಬಹುದು. ಇದು ಇನ್ನೊಂದು ರೀತಿಯಲ್ಲಿ ಮುಚ್ಚಿದ ಬಾಗಿಲು ಸರಿಯೇ? ತೆರೆದ ಬಾಗಿಲು ಸರಿಯೇ? ಎಂಬ ಪ್ರಶ್ನೆಯಂತಿದೆ. ದೇಶ ಕಾಲ ಸಂದರ್ಭಾನುಸಾರ ಎರಡೂ ಸರಿ, ಎರಡೂ ತಪ್ಪು ಎಂಬುದನ್ನು ಈ ಮುಂದಿನ ವಿವರಣೆಯಿಂದ ನೀವು ಮನಗಾಣಬಹುದು: ಪೇಟೆ ಪಟ್ಟಣಗಳಲ್ಲಿ ಮನೆಯ ಬಾಗಿಲುಗಳು ಸದಾ ಮುಚ್ಚಿರುತ್ತವೆ. ಅಷ್ಟೇ ಅಲ್ಲ ಬಾಗಿಲ ಮುಂದಿರುವ ಗಿಲ್ ಗೇಟಿಗೆ ಬೀಗ ಹಾಕುವುದಲ್ಲದೆ ಬಾಗಿಲಿಗೆ ಒಳಗಿನಿಂದ ಬೋಲ್ಟ್ ಸಹ ಹಾಕಿರುತ್ತಾರೆ. ಇನ್ನೂ ಮುಂದುವರಿದು ಹೇಳುವುದಾದರೆ ಬಾಗಿಲ ಮಧ್ಯದಲ್ಲಿರುವ ಕಿಂಡಿಯಲ್ಲಿ ಗಾಜಿನ ಮಸೂರವನ್ನು ಅಳವಡಿಸಿರುತ್ತಾರೆ. ಕರೆಗಂಟೆ ಶಬ್ದ ಕೇಳಿಸಿದಾಗ ಬಾಗಿಲ ಬಳಿ ಬಂದು ಈ 'ಕನಕನ ಕಿಂಡಿ'ಯ ಮೂಲಕ ಆಚೆ ಬದಿ ನಿಂತಿರುವ 'ಕೃಷ್ಣ ಯಾರೆಂದು ನೋಡುತ್ತಾರೆ. ತಮ್ಮ ಮನೆಯೊಳಗಿರುವ ಧನಕನಕ ವಸ್ತುಗಳನ್ನು ದೋಚಲು ಬಂದಿರುವ ಕಳ್ಳರೋ ಅಥವಾ ಬಂಧುಬಾಂಧವರೋ/ಸ್ನೇಹಿತರೋ ಎಂದು ಗಮನಿಸಿ ತಮಗೆ ಬೇಕಾದವರಿದ್ದರೆ ಮಾತ್ರ ಬಾಗಿಲು ತೆಗೆಯುತ್ತಾರೆ. ಈಗ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವ ಸೌಲಭ್ಯವಿರುವುದರಿಂದ ಮನೆ ಬಾಗಿಲಿಗೆ ಬಂದ ವ್ಯಕ್ತಿಯ ಚಲನವಲನವೆಲ್ಲವೂ ಕಾಣಿಸುವುದಲ್ಲದೆ ರೆಕಾರ್ಡ್ ಸಹ ಆಗುತ್ತದೆ. ಬೇಡವಾದ ವ್ಯಕ್ತಿಯಾದರೆ ಅದರ ಪುಟೇಜನ್ನು ಯಾವಾಗ ಬೇಕಾದರೂ ನೋಡಬಹುದು.ಬೀಗ ಹಾಕಿಕೊಂಡು ದೂರದೂರಿಗೆ ಹೋಗಿದ್ದರೂ ಮನೆ ಬಾಗಿಲಿಗೆ ಯಾರು ಬಂದಿದ್ದಾರೆಂಬುದುನ್ನು ಲ್ಯಾಪ್ ಟಾಪಿನಲ್ಲೋ, ಮೊಬೈಲಿನಲ್ಲೂ ನೋಡಬಹುದು! ಒಂದೆರಡು ವರ್ಷಗಳ ಹಿಂದೆ ಅಮೆರಿಕೆಯಲ್ಲಿ ನೆಲೆಸಿರುವ ಸಾಫ್ಟ್ ವೇರ್ ಎಂಜಿನಿಯರೊಬ್ಬರು ಬೆಂಗಳೂರಿನ ತಮ್ಮ ಮನೆಗೆ ಕಳ್ಳರು ನುಗ್ಗಲು ಪ್ರಯತ್ನಿಸುತ್ತಿದ್ದಾರೆಂದು ವಿದೇಶದಿಂದಲೇ ಇಲ್ಲಿಯ ಪೊಲೀಸರಿಗೆ ದೂರವಾಣಿ ಕರೆ ಮಾಡಿ ದೂರು ಸಲ್ಲಿಸಿ ಕಳ್ಳರನ್ನು ಹಿಡಿಸಿದ ಪ್ರಕರಣ ನಿಮಗೆ ನೆನಪಿರಬಹುದು. ತಮಗೆ ಬೇಕಾದ ವ್ಯಕ್ತಿಯು ಮನೆಯ ಬಾಗಿಲ ಮುಂದೆ ಬಂದು ನಿಂತಾಗ ತಕ್ಷಣವೇ ಬಾಗಿಲು ತೆರೆಯಬೇಕಾದುದು ಸೌಜನ್ಯ. ಆದರೆ ಅಪಾಯದಿಂದ ಪಾರಾಗಲು ಇಷ್ಟೆಲ್ಲಾ ಕಟ್ಟೆಚ್ಚರವೂ ಅಗತ್ಯ. ಹೀಗೆ ಪೇಟೆ ಪಟ್ಟಣಗಳಲ್ಲಿ ಸದಾ ಮುಚ್ಚಿದ ಬಾಗಿಲೇ ಸರಿ. ಅದು ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವೂ ಹೌದು.
ಇನ್ನು ಹಳ್ಳಿಗಳಿಗೆ ಬಂದರೆ ಮನೆಯ ಬಾಗಿಲುಗಳು ರಾತ್ರಿ ಹೊತ್ತು ಬಿಟ್ಟರೆ ಸದಾ ತೆರೆದೇ ಇರುತ್ತವೆ. ಅಪರಿಚಿತ ವ್ಯಕ್ತಿಗಳು ಹಳ್ಳಿಯ ಮನೆಗಳ ಒಳಗೆ ಅಕ್ರಮವಾಗಿ ನುಗ್ಗುವುದು ಅಪರೂಪ. ಹಾಗೆ ನುಗ್ಗಲು ಯತ್ನಿಸಿದರೆ ಹಳ್ಳಿಯ ಹೆಣ್ಣುಮಕ್ಕಳೇ ಅವರ ತಲೆಬುರುಡೆಯನ್ನು ಕುಟ್ಟುವ ಒನಕೆ ಓಬವ್ವಗಳಾಗುತ್ತಾರೆ! ಮಳೆಗಾಲದಲ್ಲಿ ಗುಡುಗು, ಮಿಂಚು, ಗಾಳಿ, ಮಳೆಯ ಕಾರಣಕ್ಕೆ ಬಾಗಿಲು ಮುಚ್ಚಿದರೂ ಒಳಗಿನಿಂದ ಅಗುಳಿ ಹಾಕುವುದಿಲ್ಲ! ಹಳ್ಳಿಗಳ ತಾಯಂದಿರು ಜಗಜ್ಜನನಿಯಾದ ಪಾರ್ವತಿಯ ಸಂತಾನ. ಆದರೆ ಸ್ನಾನ ಮಾಡುವಾಗ ಯಾರಾದರೂ ಒಳಗೆ ಬಂದುಬಿಟ್ಟರೆ ಏನು ಗತಿ ಎಂಬ ಆತಂಕ ಕೈಲಾಸದಲ್ಲಿ ಪಾರ್ವತಿಗೆ ಇತ್ತೇ ಹೊರತು ಹಳ್ಳಿಯ ನಮ್ಮ ತಾಯಂದಿರಿಗೆ ಇಲ್ಲ ಹೇಗೂ ಗಂಡಸರು ಗಣಪತಿಯಂತೆ ರಾತ್ರಿ ಹೊತ್ತೂ ಮನೆಯ ಹೊರಗೆ ಜಗಲಿಯ ಮೇಲೋ ಫಡಸಾಲೆಯಲ್ಲಿಯೇ ಆರಾಮವಾಗಿ ಮಲಗಿ ಗೊರಕೆ ಹೊಡೆಯುತ್ತಿರುತ್ತಾರೆ! ಇಂತಹ ಗ್ರಾಮೀಣ ಸಂಸ್ಕೃತಿಯಲ್ಲಿ ಹಳ್ಳಿಯ ಮನೆಗಳ ಬಾಗಿಲುಗಳು ತೆರೆದೇ ಇರುವುದು ಸರಿ, ಇದು ನಮ್ಮ ಬಾಲ್ಯದ ಅನುಭವ, ಕಿಟಕಿಗಳಿಲ್ಲದ ಮನೆಗೆ ಬೇಸಿಗೆಯಲ್ಲಿ ಮುಂಬಾಗಿಲಿನಿಂದಲೇ ಹಿತಕರವಾದ ತಂಗಾಳಿ. ಇನ್ನು ಬೆಳಗಿನ ಸ್ನಾನ: ಮನೆಯ ಹಿಂಭಾಗದಲ್ಲಿ ದನದ ಕೊಟ್ಟಿಗೆಯಾಚೆ ಚತುರ್ಭುಜಾಕಾರದ ನಾಲ್ಕು ಚಪ್ಪಡಿ ಕಲ್ಲುಗಳನ್ನು ಜೋಡಿಸಿದ್ದ ಸ್ನಾನಗೃಹ, ಆಗಸವೇ ಮೇಲುಛಾವಣಿ. ನಮ್ಮ ಪೂರ್ವಾಶ್ರಮದ ತಾಯಿ ಗಂಗಮ್ಮ ನಮ್ಮನ್ನು ಎಳವೆಯಲ್ಲಿ ಅದರೊಳಗೆ ಇಳಿಸಿ ತಾನೂ ಇಳಿದುತಲೆಯ ಮೇಲೆ ಹದವಾದ ಬಿಸಿನೀರು ಸುರಿದು ಉಟ್ಟ ಸೀರೆ ಒದ್ದೆಯಾದರೂ ಲೆಕ್ಕಿಸದೆ ಮೈಗೆ ಸೋಪು ಹಚ್ಚಿ ಸ್ನಾನ ಮಾಡಿಸಿದ ನೆನಪು ಇನ್ನೂ ಅಚ್ಚ ಹಸಿರಾಗಿದೆ. ಕತ್ತೆತ್ತಿ ತಾಯಿಯ ವಾತ್ಸಲ್ಯಭರಿತ ಮುಖವನ್ನು ನೋಡಿ 'ಅಮ್ಮಾ! ನನಗೆ ಬೊಜ್ಜು ಬಂದಿದೆ' ಎಂದು ಹೊಟ್ಟೆ ಕಡೆ ಬೆರಳು ಮಾಡಿ ತೋರಿಸಿದಾಗ 'ಇಲ್ಲ ಕಣೋ ಅದು ನಿನ್ನ ಕಿಬ್ಬೊಟ್ಟೆ!' ಎಂದು ನಸು ನಗುತ್ತಾ ಆರೋಗ್ಯಶಾಸ್ತ್ರ ಪಾಠ ಮಾಡಿದ ಮೊದಲು ಗುರು ಆ ಮಹಾತಾಯಿ. ಅವರು ಕಾಲವಾದ 12 ವರ್ಷಗಳ ನಂತರ ನೆನಪಾಗಿ ಬೊಜ್ಜು ಕಾಣಿಸಿತು. ವೈದ್ಯರ ಸಲಹೆ ಮೇರೆಗೆ 'ಋತಭುಕ್, ಮಿತಭುಕ್, ಹಿತಭುಕ್' ಎಂಬ ಸೂಕ್ತಿಗನುಗುಣವಾಗಿ ಯಾವ ಕಾರ್ಯಕ್ರಮಗಳ ಒತ್ತಡವೂ ಇಲ್ಲದ ಕಾರಣ ನಿಯಮಿತವಾಗಿ ಆಹಾರ- ವಿಹಾರ-ಯೋಗಾಸನಗಳಿಂದ 12 ಕೆಜಿ ತೂಕವನ್ನು ಇಳಿಸಿ ಬೊಜ್ಜನ್ನು ಕರಗಿಸಿ ಹೊಟ್ಟೆ ಸಪೂರವಾಗುವಂತೆ ಮಾಡಲು ನಮಗೆ ನೆರವಾಗಿದ್ದು ಕಳೆದ 12 ತಿಂಗಳ ಕಾಲಾವಧಿಯ ಕೊರೊನಾ! ಈ ಮನೆಗಳ ವಿವರಣೆಗೂ ಮನಸ್ಸಿಗೂ ಏನು ಬಾದರಾಯಣ ಸಂಬಂಧ? ಎಂದು ಕೇಳಬಹುದು. ಮನೆಗೆ ಬಾಗಿಲಿರುವಂತೆ ನಮ್ಮ ಮನಸ್ಸಿಗೂ ಬಾಗಿಲುಂಟು. ಅದನ್ನು ತೆರೆದಿಡಬೇಕೋ ಮುಚ್ಚಿಡಬೇಕೋ ಎಂಬುದೀಗ ಪ್ರಶ್ನೆ. ಎರಡೂ ಸರಿ, ಎರಡೂ ತಪ್ಪು ಎನ್ನುವುದಾದರೆ ಹೇಗೆ ಸರಿ, ಹೇಗೆ ತಪ್ಪು? 'ನಿಮ್ಮ ಮನಸ್ಸು ಸದಾ ತೆರೆದಿರಲಿ' (Keep an open mind ) ಎನ್ನುವ ವಿವೇಕದ ಮಾತನ್ನು ಹೇಳುವುದುಂಟು. ಇದು ಎಲ್ಲ ಸಂದರ್ಭಗಳಲ್ಲಿಯೂ ಸರಿ ಎಂದು ನಮಗೆ ಅನಿಸುವುದಿಲ್ಲ. ಈ ಹಿತ ನುಡಿಯ ಹಿಂದೆ ಒಂದು presumption ಇದೆ. ಅದೇನೆಂಬುದನ್ನು ಈ ಮುಂದಿನ ಋಗ್ವೇದ ಮಂತ್ರದಲ್ಲಿ ಕಾಣಬಹುದು. 'ಆ ನೋ ಭದ್ರಾಃ ಕ್ರತವೋ ಯಾಂತು ವಿಶ್ವತಃ' (ಒಳ್ಳೆಯ ವಿಚಾರಗಳು ಎಲ್ಲೆಡೆಯಿಂದ ಬರಲಿ!). ಆದಕಾರಣ 'ನಿಮ್ಮ ಮನಸ್ಸು ಸದಾ ತೆರೆದಿರಲಿ' ಎಂದರೆ ಅದರ ಹಿಂದಿರುವ ಆಶಯ 'ಭದ್ರಾಃ ಕ್ರತವಃ' ಅಂದರೆ 'ಒಳ್ಳೆಯ ವಿಚಾರಗಳಿಗೆ ತೆರೆದಿರಲಿ ಎಂದರ್ಥ. ಕೆಟ್ಟ ವಿಚಾರಗಳಿಗೆ ಅಲ್ಲ ಈ ಕಾರಣಕ್ಕಾಗಿಯೇ ಬಸವಣ್ಣನವರು ಹೇಳಿದ್ದು: 'ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ, ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ, ನಿಮ್ಮ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲ ಸಂಗಮ ದೇವಾ'. ಅಂದರೆ ಕೆಟ್ಟ ವಿಷಯಗಳಿಗೆ ಮನಸ್ಸು ಮುಚ್ಚಿದ ಬಾಗಿಲು ಆಗಿರಲಿ ಎಂದರ್ಥ. ಮನೆಯೊಳಗೆ ಕಳ್ಳಕಾಕರು ಬಾರದಂತೆ ಬಾಗಿಲನ್ನು ಮುಚ್ಚುವುದು ಹೇಗೆ ಅವಶ್ಯಕವೋ ಹಾಗೆಯೇ ಕೆಟ್ಟ ವಿಚಾರಗಳು ನುಸುಳಿ ಬಾರದಂತೆ ಮನದ ಬಾಗಿಲನ್ನು ಮುಚ್ಚುವುದೂ ಅಷ್ಟೇ ಆವಶ್ಯಕ. ಸದ್ ವಿಚಾರಗಳು ಅಡೆತಡೆಯಿಲ್ಲದಂತೆ ಒಳಬರಲು ಮನದ ಬಾಗಿಲನ್ನು ತೆರೆದಿಡಬೇಕು. ಮನಸ್ಸಿನಂತೆ ಮಹದೇವ ಎನ್ನುತ್ತದೆ ಗಾದೆ. ಮನಸ್ಸು ಸದಾ ಏನನ್ನು ಧ್ಯಾನಿಸುತ್ತದೆ ಎಂಬುದು ಅವರವರ ಸಂಸ್ಕಾರದ ಮೇಲೆ ರೂಪುಗೊಳ್ಳುತ್ತದೆ.
ಮನಸ್ಸು ಎಲ್ಲಾ ಇಂದ್ರಿಯಗಳ ಮೂಲ. ಮನಸ್ಸಿನ ಹಿಂದೆ ಇರುವುದೇ ಬುದ್ಧಿ, ಮನಸ್ಸೆಂಬ ಮನೆಯೊಳಗೆ ಮಿತ್ರವೇಷದಲ್ಲಿ 6 ಜನ ಹಿತಶತ್ರುಗಳು ಸೇರಿಕೊಂಡಿರುತ್ತಾರೆ. ಇವರನ್ನು 'ಅರಿಷಡ್ವರ್ಗ'ಗಳು ಎಂದು ಕರೆಯುತ್ತಾರೆ. ಅವುಗಳೆಂದರೆ: 1) ಕಾಮ, 2) ಕ್ರೋಧ, 3) ಲೋಭ, 4) ಮೋಹ, 5) ಮದ 6) ಮತ್ಸರ. ಇವು ಮನೆಯ ಯಜಮಾನನ ಬುದ್ಧಿಯನ್ನು ಹಾಳುಗೆಡವುತ್ತವೆ. ಕರೆ ಗಂಟೆ ಕೇಳಿಸಿದಾಗ ಯಜಮಾನನು ಯಾರದು ನೋಡು ಎಂದು ಹೇಳಿದಾಗ ಈ ಹಿತಶತ್ರುಗಳು ಬಾಗಿಲ ಬಳಿ ಹೋಗಿ ತಮ್ಮ ಗುಂಪಿನ ದರೋಡೆಕೋರರು ಬಂದಿದ್ದರೆ ಮಾತ್ರ ಒಳಗೆ ಬಿಡುತ್ತಾರೆ. ಒಳ್ಳೆಯ ವಿಚಾರಗಳೆಂಬ ಬಂಧುಬಾಂಧವರನ್ನು ಮತ್ತು ಸ್ನೇಹಿತರನ್ನು ಒಳಗೆ ಬಿಡದೆ ಅಸಮಾಧಾನಗೊಂಡು ಹೋಗುವಂತೆ ಮಾಡುತ್ತಾರೆ. ಇವರನ್ನು ನಂಬಿ ಮೋಸಹೋದ ಯಜಮಾನನು ದುರ್ಬುದ್ಧಿಯುಳ್ಳವನು ಎನಿಸಿಕೊಳ್ಳುತ್ತಾನೆ. ಈ ಹಿತಶತ್ರುಗಳನ್ನು ಗುರುತಿಸಿ ಹೊರದೂಡಿದಾಗಮಾತ್ರ ಸುಬುದ್ಧಿಯುಳ್ಳವನಾಗುತ್ತಾನೆ.
ಮುಕ್ತ ಮನಸ್ಸು ಎಂದರೆ ರಾಗದ್ವೇಷಗಳಿಂದ ಕೂಡಿರದ ಮನಸ್ಸು ಎಂದರ್ಥ. ಮನಸ್ಸಿನಲ್ಲಿ ಆವಿರ್ಭವಿಸುವ ಆಲೋಚನೆಗಳು ಮತ್ತು ಭಾವನೆಗಳ ಅಭಿವಕ್ತಿಗೆ ಮೂರು ಆಯಾಮಗಳಿವೆ: 1) ಮೌನ 2) ಮಾತು (ಧ್ವನಿ) ಮತ್ತು ಬರಹ (ಲಿಪಿ). ಇತ್ತೀಚೆಗೆ Smart Phoneಗಳು ಬಂದ ಮೇಲೆ ಹೊಸದಾಗಿ ನಾಲ್ಕನೆಯ ಆಯಾಮ ಸೇರ್ಪಡೆಯಾಗಿದೆ. ಅದೆಂದರೆ WhatsAppನಲ್ಲಿ ನಮಸ್ಕಾರ, ಚಪ್ಪಾಳೆ, ನಗುಮುಖ, ಅಳುಮುಖ ಇತ್ಯಾದಿ ಸಚಿತ್ರ ಸಂಕೇತಗಳನ್ನು ಕಳುಹಿಸುವುದು. 1) ಮೊದಲನೆಯದು ಮೌನ. 'ಮೌನಂ ಸಮ್ಮತಿ ಲಕ್ಷಣಮ್' ಎಂಬ ಸೂಕ್ತಿಯು ಎಲ್ಲರೂ ಅಂದುಕೊಂಡಂತೆ ಎಲ್ಲ ಸಂದರ್ಭಗಳಲ್ಲಿಯೂ ಸಮ್ಮತಿಯ ಸೂಚಕವಾಗುವುದಿಲ್ಲ. ಮೌನವನ್ನು ಮುಖಭಾವದಿಂದ ಅರ್ಥೈಸಬೇಕಾಗುತ್ತದೆ. ವರ ನಿನಗೆ ಒಪ್ಪಿಗೆಯಾದನೇ?' ಎಂದು ಕೇಳಿದಾಗ ಲಜ್ಜೆಯಿಂದ ಕೂಡಿದ ವಧುವಿನ ಮೌನ ಸಮ್ಮತಿಯ ಸೂಚಕ ಎದುರಾಡಲಾಗದೆ ದುಃಖಭರಿತ ಕಣ್ಣುಗಳಿಂದ ಕೂಡಿದ ಮೌನ ಅಸಂತುಷ್ಟಿಯ ದ್ಯೋತಕ. ಏನಾದರೂ ಹೇಳಿದರೆ ಜಗಳ ಉಂಟಾಗಬಹುದು ಎಂದು ನೋವನ್ನು ಸಹಿಸಿಕೊಂಡು ಧರಿಸುವ ಮೌನ ತಾಳ್ಮೆಯ ಸಂಕೇತ. ಕೆಲವರು ಅದನ್ನೇ ದೌರ್ಬಲ್ಯ ಎಂದು ತಪ್ಪಾಗಿ ಗ್ರಹಿಸುವ ಸಾಧ್ಯತೆಯೂ ಇದೆ. 2) ಎರಡನೆಯದು ಮಾತು. ಆಡಿದ ಮಾತು ಗಾಳಿಯಲ್ಲಿ ತೇಲಿ ಹೋಗುತ್ತದೆ. ಕೆಲವರು ನಾನು ಹಾಗೆ ಹೇಳಿಯೇ ಇಲ್ಲ ಎಂದು ನಿರಾಕರಿಸುವವರು ಇದ್ದಾರೆ. ಧ್ವನಿಮುದ್ರಿಕೆಯಲ್ಲಿ ದಾಖಲಾಗಿದ್ದರೆ ಅದು ನನ್ನ ಧ್ವನಿಯೇ ಅಲ್ಲ ಎಂದು ಅಲ್ಲಗಳೆಯುವವರೂ ಇದ್ದಾರೆ. ಗಂಟೆಗಟ್ಟಲೆ ಹೇಳಿ ಕೇಳಿದರೂ ನನಗೆ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ ಎಂದು ಆಪಾದಿಸುವವರೂ ಇದ್ದಾರೆ. 3) ಮೂರನೆಯದು ಬರೆಹ: ಒತ್ತಾಯ ಪೂರ್ವಕವಾಗಿ ಬರೆಸಿಕೊಂಡರು ಎಂದು ಒಬ್ಬರು ಆಪಾದಿಸಿದರೆ, ಓದಲು ಕೊಡಲೇ ಇಲ್ಲ ವಿಶ್ವಾಸದಲ್ಲಿ ಸಹಿ ಮಾಡಿದೆ ಎಂದು ಇನ್ನೊಬ್ಬರು ಆಪಾದಿಸುತ್ತಾರೆ.
ಇಬ್ಬರು ಸಂವಾದ ಮಾಡುವಾಗ ಆ ವ್ಯಕ್ತಿಯು ಆ ವ್ಯಕ್ತಿಯ ವಾದವನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು. ಅದರಂತೆ ಮುಕ್ತಮನಸ್ಸಿನಿಂದ ಕೇಳಿಸಿಕೊಂಡ ಆ ವ್ಯಕ್ತಿಯು ಆ ವ್ಯಕ್ತಿಯ ವಾದವನ್ನು ಒಪ್ಪದೆ ತರ್ಕಬದ್ಧವಾಗಿ ತನ್ನ ವಾದವನ್ನು ಸಮರ್ಥ ರೀತಿಯಲ್ಲಿ ಮಂಡಿಸುತ್ತಾನೆಂದಿಟ್ಟುಕೊಳ್ಳಿ. ಅದಕ್ಕೆ ಆ ವ್ಯಕ್ತಿಯು ಸರಿಯಾದ ಉತ್ತರವನ್ನು ಕೊಡಲಾಗದೆ ತನ್ನ ಮನೋದ್ವಾರವನ್ನು ಮುಚ್ಚಿಟ್ಟು ಮೊಂಡುವಾದವನ್ನು ಮಂಡಿಸಿದರೆ ಅವನದು ಮುಕ್ತ ಮನಸ್ಸು ಆಗುವುದಿಲ್ಲ ಮುಚ್ಚಿದ ಮನಸ್ಸು ಆಗುತ್ತದೆ. ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲು ಸಾಧ್ಯವಾಗದೇ ಇದ್ದಾಗ ಮನಸ್ಸು ಹಳ್ಳ ಹಿಡಿಯುತ್ತದೆ. ರಾಗದ್ವೇಷಗಳಿಂದ ಕೂಡಿದ ಮನಸ್ಸಿಗೆ ತರ್ಕಬದ್ದವಾಗಿ ವಾದ ಮಂಡಿಸಲು ಬರುವುದಿಲ್ಲ.
ಅವರವರ ನಂಬಿಕೆಗೆ ಅನುಸಾರವಾಗಿ ಕೈಲಾಸಕ್ಕೋ ವೈಕುಂಠಕ್ಕೋ ಹೋಗಿ ಪರಮಾತ್ಮನಲ್ಲಿ ಬೆರೆಯಬೇಕೆಂದು ಧರ್ಮಗ್ರಂಥಗಳು ಸಾರುತ್ತವೆ; ಅನುಭಾವಿಗಳು ಅದಕ್ಕಾಗಿ ಹಂಬಲಿಸುತ್ತಾರೆ. ಆದರೆ ಆ ಕೈಲಾಸ ಅಥವಾ ವೈಕುಂಠ ಬೇರೆಲ್ಲೋ ಇರದೆ ನಮ್ಮಲ್ಲೇ ಇದೆ, ನಮ್ಮ ಹೃದಯದಲ್ಲೇ ಇದೆ. ಅಲ್ಲಿಗೆ ತಲುಪುವುದು ಅಷ್ಟು ಸುಲಭವಲ್ಲ ನಿಮಗಿಂತ ಮೊದಲೇ ಅಂತರಂಗದಲ್ಲಿ ಅಡಗಿ ಕುಳಿತಿರುತ್ತಾರೆ ಅರಿಷಡ್ವರ್ಗಗಳೆಂಬ ದುರುಳರು. ಅವರಿಗೆ ಕತ್ತಲೆಂದರೆ ಅತಿ ಪ್ರೀತಿ. ಅವರು ಅಡಗಿರುವುದೇ ತಮಸ್ಸಿನಲ್ಲಿ, ಜೊತೆಗೆ ಅಂತರಂಗದ ಕದವ ಮುಚ್ಚಿ ಬೀಗಮುದ್ರೆ ಮಾಡಲಾಗಿದೆ. ಇಂತಹ ತಲ್ಲಣಗಳನ್ನು ವಿಜಯದಾಸರು ತಮ್ಮ ಈ ಕೀರ್ತನೆಯಲ್ಲಿ ಹೀಗೆ ಕಟ್ಟಿಕೊಡುತ್ತಾರೆ!
ಅಂತರಂಗದ ಕದವು ತೆರೆಯಿತಿಂದು |ಪ||