ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯಬಹುದೇ?

ಈವಾರ ಯಾವ ವಿಷಯವನ್ನು ಕುರಿತು ಬರೆಯಬೇಕೆಂದು ಆಲೋಚಿಸಿದಾಗ ನಮ್ಮ ನೆನಪಿಗೆ ಬಂದದ್ದು ಸುಪ್ರಸಿದ್ದ ಅಂಕಣಕಾರರಾಗಿದ್ದ ಹಾ.ಮಾ. ನಾಯಕ್ ಅವರ ಕಿವಿಮಾತು. ಬಹಳ ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ನಮ್ಮ ಸಮ್ಮುಖದಲ್ಲಿ ಅವರಿಗೆ ಏರ್ಪಡಿಸಿದ್ದ ಒಂದು ಸನ್ಮಾನ ಸಮಾರಂಭ. ಅಂದು ಪಕ್ಕದಲ್ಲಿಯೇ ಕುಳಿತಿದ್ದ ಅವರೊಂದಿಗೆ ಆತ್ಮೀಯ ಸಂಭಾಷಣೆಯಲ್ಲಿ ತೊಡಗಿದಾಗ ನೀವು ಅಂಕಣ ಬರೆಹಕ್ಕೆ ಹೇಗೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ: ನಿತ್ಯ ಜೀವನದಲ್ಲಿ ಕಂಡು ಉಂಡದ್ದನೇ ಬರೆಯಬೇಕು. ಆಗ ಬರೆದದ್ದು ಉತ್ತಮ ಸಾಹಿತ್ಯವಾಗುತ್ತದೆ.'ಅವರಾಡಿದ ಈ ಮಾತು ಈಗಲೂ ನಮ್ಮ ಮನಸ್ಸಿನಲ್ಲಿ ಅಚೊತ್ತಿದಂತೆ ಅಚ್ಚ ಹಸಿರಾಗಿ ಹಸಿರಾಗಿದೆ. ಈ ಮಾತನ್ನು ಮೆಲುಕು ಹಾಕಿದಾಗ ನಮಗೆ ಅನಿಸಿದ್ದು: ವಿಚಾರಗಳು ಅಕ್ಷಯ ಪಾತ್ರೆ ಇದ್ದಂತೆ. ಚಿಂತನೆ ಮಾಡುತ್ತಾ ಹೋದರೆ ಎಂದೂ ಬರಿದಾಗಲು ಸಾಧ್ಯವಿಲ್ಲ, ಇಲ್ಲದಿದ್ದರೆ ಪುಸ್ತಕದ ಮುದ್ರಣಾಲಯ ಗಳು ಎಂದೋ ಮುಚ್ಚಿ ಹೋಗುತ್ತಿದ್ದವು. ಬರೆಯುವ ವಸ್ತುವಿಗಾಗಿ ಅಲ್ಲಿ ಇಲ್ಲಿ ಹುಡುಕಿಕೊಂಡು ಹೋಗಬೇಕಾಗಿಲ್ಲ, ಷಣ್ಮುಖನಂತೆ ಮೂರು ಲೋಕಗಳನ್ನು ಧಾವಂತದಿಂದ ಸುತ್ತಿ ಬರಬೇಕಾಗಿಲ್ಲ, ಗಣಪತಿಯು ಮೂರು ಲೋಕದ ಮಾತಾಪಿತರೆನಿಸಿದ ತನ್ನ ತಂದೆ ತಾಯಿಗಳಾದ ಶಿವ-ಪಾರ್ವತಿಯರನ್ನು ಇದ್ದಲ್ಲಿಯೇ ಸುತ್ತಿ ಮೂರು ಲೋಕಗಳನ್ನು ಸುತ್ತಿದಂತೆ ನಮ್ಮ ಮತ್ತು ನಮ್ಮ ನೆರೆಹೊರೆಯನ್ನು ಅವ ಲೋಕಿಸಿದರೆ ಸಾಕು ಉತ್ತಮ ಸಾಹಿತ್ಯ ನಿರ್ಮಾಣಕ್ಕೆ ಬೇಕಾದ ಸರಕು ಧಾರಾಳವಾಗಿ ದೊರೆಯುತ್ತದೆ. ಅಂತಹ ಲೋಕಾನುಭವದ ಸರಕು ಕಲ್ಪನಾ ಸಾಹಿತ್ಯವಾಗಿಯೂ ರೂಪುಗೊಳ್ಳಬಹುದು, ಜೀವನ ಸಾಹಿತ್ಯ ವಾಗಿಯೂ ರೂಪುಗೊಳ್ಳಬಹುದು. ಬಂಗಾರದ ಗಟ್ಟಿ ಒಂದೇ ಆದರೂ ನುರಿತ ಅಕ್ಕಸಾಲಿಗನ ಕೈಯಲ್ಲಿ ಆಕರ್ಷಕವಾದ ವಿಭಿನ್ನ ಆಕಾರದ ಆಭರಣಗಳು ರೂಪುಗೊಳ್ಳುವಂತೆ! ಕುಶಲ ಕೈಗಳಿಂದ ರೂಪುಗೊಳ್ಳುವ ಸುಂದರವಾದ ಆಭರಣಗಳ ವಿನ್ಯಾಸಕ್ಕೆ ಕೊನೆಯುಂಟೇ? ನಿಮ್ಮ ಕಣ್ಮುಂದಿರುವ ಗಿಡಮರಗಳ ರೆಂಬೆ ಕೊಂಬೆ ಗಳು ಒಂದು ಮರದಲ್ಲಿದ್ದಂತೆ ಮತ್ತೊಂದು ಮರದಲ್ಲಿ ಇವೆಯೇ? ಇದು ಕಳೆದ 13 ವರ್ಷಗಳಿಂದ ನಿರಂತರವಾಗಿ ಬರೆಯುತ್ತಾ ಬಂದ ಈ ಅಂಕಣ ಬರೆಹದಿಂದ ನಮ್ಮ ಸ್ವಾನುಭವಕ್ಕೆ ಬಂದ ಸಂಗತಿ.
ಆಂಗ್ಲಭಾಷೆಯಲ್ಲಿ ಒಂದು ನಾಣ್ಣುಡಿ ಇದೆ: "A doctors door is never closed whereas a priest's door is always open” (ವೈದ್ಯರ ಬಾಗಿಲು ಯಾವಾಗಲೂ ಮುಚ್ಚಿರುವು ದಿಲ್ಲ: ಧರ್ಮಗುರುಗಳ ಬಾಗಿಲು ಸದಾ ತೆರೆದಿರುತ್ತದೆ). ಮೇಲ್ನೋಟಕ್ಕೆ 'ಬಾಗಿಲು ಮುಚ್ಚಿರುವುದಿಲ್ಲ' ಎಂದರೂ ಒಂದೇ, 'ಬಾಗಿಲು ತೆರೆದಿರುತ್ತದೆ ಎಂದರೂ ಒಂದೇ. ಆದರೆ ಸೂಕ್ಷ್ಮವಾಗಿ ಅವಲೋಕಿ ಸಿದಾಗ ಅದರ ಹಿಂದಿರುವ ಮನಸ್ಥಿತಿ ಬೇರೆ ಬೇರೆ. ಕೊರೊನಾ ವೈರಾಣುವಿನ ಕಾರಣದಿಂದ ಆಸ್ಪತ್ರೆಯ ಬಾಗಿಲುಗಳು ಕಳೆದ ಒಂದೂವರೆ ವರ್ಷದಿಂದ ಮುಚ್ಚೇ ಇಲ್ಲ. ಮೇಲಿನ ನಾಣ್ನುಡಿಗೆ ವಿರುದ್ದವಾಗಿ ನಮ್ಮ ಮಠದ ಬಾಗಿಲು ತೆರೆದೇ ಇಲ್ಲ. ಯಾರು ಏನೇ ಆಪಾದನೆ ಮಾಡಿದರೂ ಕೊರೊನಾ ರೋಗಿಗಳಿಗೆ ಮಾತ್ರ ನಮ್ಮ ಮನಸ್ಸು ತಡರಾತ್ರಿಯಾದರೂ ಸದಾ ತೆರೆದೇ ಇತ್ತು, ಇದೆ ಎಂಬುದು ದೂರವಾಣಿಯಲ್ಲಿ ನಮ್ಮ ಸಂಪರ್ಕಕ್ಕೆ ಬಂದು ಗುಣಮುಖರಾದ ಕೊರೊನಾ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಮಾತ್ರ ಚೆನ್ನಾಗಿ ಗೊತ್ತು. ಕೊರೊನಾ ಸೋಂಕಿತನಾದ ಸಿರಿಗೆರೆಯ ರೈತನೊಬ್ಬನಿಗೆ ಫೋನ್ ಮಾಡಿ “ನೀನು ಕುಟುಂಬದ ಸದಸ್ಯರಿಂದ ದೂರ ಇರು' ಎಂದು ತಿಳಿಹೇಳಿದಾಗ 'ಆಗಲಿ ಬುದ್ದಿ' ಎಂದು ಹೇಳಿದ. ಮಾರನೆಯ ದಿನ ಅವನಿಗೆ ವಾಸವಾಗಿರಲು ಮನೆಯಲ್ಲಿ ಪ್ರತ್ಯೇಕ ಕೊಠಡಿ ಇಲ್ಲ ಎಂದು ತಿಳಿದು ಬಂದು ಮತ್ತೆ ಫೋನ್ ಮಾಡಿ 'ಎಲ್ಲಿದ್ದೀಯಪ್ಪಾ' ಎಂದು ಕೇಳಿದಾಗ ಅವನಿಂದ ಬಂದ ಅಚ್ಚರಿಯ ಉತ್ತರ: 'ಊರ ಹೊರಗಿರುವ ನನ್ನ ದನದ ಕೊಟ್ಟಿಗೆಯಲ್ಲಿದ್ದೇನೆ ಬುದ್ದಿ'! ನಮ್ಮ ಹಳ್ಳಿಯ ಜನರು ಅವಿದ್ಯಾವಂತರಾದರೂ ಜಾಣ ರೆಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ವೈರಾಣು ಪರಿಣತರು ಹೇಳಿದ್ದೇ ಹೇಳಿದ್ದು 'ದನದ ಕೊಟ್ಟಿಗೆಯಲ್ಲಿರಿ' ಎಂದು ಇದುವರೆಗೂ ಯಾರೂ ಹೇಳಿದಂತಿಲ್ಲ, ಮೂಕ ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿ ಅವುಗಳ ಹತ್ತಿರವೇ ಮಲಗಿ ಯಾವ ಆಸ್ಪತ್ರೆಗೂ ಹೋಗದೆ 'ದನದ ಕೊಟ್ಟಿಗೆ ಯಲ್ಲಿದ್ದು ಗುಣಮುಖನಾಗಿ ತನ್ನ ಮೊಮ್ಮಕ್ಕಳಿಗೆ ಹಾಲು ಕರೆದುಕೊಂಡು ಬಂದ ನೇಗಿಲಯೋಗಿ' ಅವನು!
ಮಾರ್ಚ್ ತಿಂಗಳು ಒಬ್ಬ ಅಪರಿಚಿತ ಯುವ ಮಹಿಳೆ ತಾನು ಚಿಕ್ಕಂದಿನಿಂದಲೂ ಕೂಡಿಟ್ಟಿದ್ದ ಹಣವನ್ನು ಸತ್ಕಾರ್ಯಕ್ಕೆ ಬಳಸುವಂತೆ ನಮಗೆ ಕಾಣಿಕೆಯನ್ನು ಕೊಟ್ಟು ಆಶೀರ್ವಾದ ಪಡೆಯಲು ಮಠಕ್ಕೆ ಬಂದಿದ್ದಳು. ಕೊರೊನಾದಿಂದ ಮಂತ್ರಿಮಹೋದಯರಾದಿಯಾಗಿ ಯಾರಿಗೂ ನಮ್ಮ ದರ್ಶನ ದೊರೆಯುವುದಿಲ್ಲವೆಂದು ಮಠದ ಸಿಬ್ಬಂದಿ ಹೇಳಿದ ಕಾರಣ ಆ ಮಹಿಳೆ ನಿರಾಶಳಾಗಿ ಹಿಂದಿರುಗಿದಳು. ಈ ವಿಷಯ ನಮ್ಮ ಗಮನಕ್ಕೆ ಬಂದದ್ದು ಆ ಮಹಿಳೆ ಹಿಂದಿರುಗಿದ ಮೇಲೆ 3 ತಿಂಗಳ ನಂತರ ಬರೆದ ಪತ್ರದಿಂದ ತುಂಬಾ ಖಿನ್ನತೆ ಮತ್ತು ಮಾನಸಿಕ ತಳಮಳಕ್ಕೆ ಒಳಗಾಗಿ ತನ್ನ ಕಷ್ಟಗಳನ್ನು ನಮ್ಮ ಹತ್ತಿರ ನಿವೇದಿಸಿಕೊಂಡು ಪರಿಹಾರ ಕಂಡುಕೊಳ್ಳಲು ದೂರದ ಸ್ಥಳದಿಂದ ಬಂದಿದ್ದ ಆ ಮಹಿಳೆ ನಮ್ಮದರ್ಶನ ದೊರೆಯದೆ ಮತ್ತಷ್ಟೂಖಿನ್ನಳಾಗಿ ಹಿಂದಿರುಗಬೇಕಾಯಿತು. ಜೊತೆಯಲ್ಲಿ ಬಂದವರು ಹಸಿವನ್ನು ತಾಳಲಾರದೆ ಮಠದಲ್ಲಿ ಪ್ರಸಾದ ಮಾಡಿದರು. ಆದರೆ ಆ ಮಹಿಳೆಯ ಹಸಿವೇ ಬೇರೆ. ಮಠದ ಉದ್ಯಾನವನದಲ್ಲಿದ್ದ ಒಬ್ಬ ವ್ಯಕ್ತಿಯನ್ನು ನೋಡಿ 'ಗುರುಗಳು ಎಲ್ಲಿದ್ದಾರೆ? ನಾನು ಅವರ ದರ್ಶನ ಪಡೆಯಲೇ ಬೇಕು? ಎಂದಾಗ ಅವನು ಕೊಟ್ಟ ಉತ್ತರ: “ಗುರುಗಳು ನಿಮ್ಮಂತಹ ಸಾಮಾನ್ಯರಿಗೆ ಸಿಗೋದಿಲ್ಲ. VIPಗಳಿಗೆ ಮಾತ್ರ ಸಿಗೋದು. ಕೆಲವು ಸಲ ಅವರಿಗೂ ಸಿಗಲಾರರು. ಇಲ್ಲಿಗೆ ಬರಬೇಕಾದರೆ Appoint ment ತಗೋಂಡೇ ಬರಬೇಕು. ಮೋದಿ, ಅಮಿತ್ ಷಾ ನಂತರ ಇವರೇ!”. ಈ ಮಾತುಗಳನ್ನು ಕೇಳಿ ಆ ಮಹಿಳೆಗೆ ಆಶ್ಚರ್ಯವೂ, ಭಯವೂ ಒಟ್ಟಿಗೇ ಉಂಟಾಯಿತು. 4 ದಶಕಗಳ ಹಿಂದೆ ಆದ ಇದೇ ತೆರನಾದ ಅನುಭವ ನೆನಪಾಯಿತು. ಪರದೇಶದಲ್ಲಿ ಓದಿ ಬಂದ ನಮ್ಮನ್ನು ನೋಡುವ ಶಿಷ್ಯರ ದೃಷ್ಟಿಕೋನವೇ ಬೇರೆ ಇತ್ತು. ಕೆಲವರು ವಿದ್ಯಾವಂತರು ಮತ್ತು ಉದ್ಯಮಿಗಳು ನಮ್ಮ ದರ್ಶನಕ್ಕೆ ಬಂದಾಗ ತಮ್ಮ Visiting Cardsಗಳನ್ನು ಕೊಟ್ಟು ನಮಸ್ಕರಿಸುತ್ತಿದ್ದರು. ಇದನ್ನು ನೋಡಿದ ಹಳ್ಳಿಯ ಜನರು ಈ ಗುರುಗಳ ದರ್ಶನ ಪಡೆ ಯಲು ನಾವೆಲ್ಲಿಂದ Visiting Cards ಗಳನ್ನು ತರೋಣಪ್ಪಾ? ಎಂದು ಕೆಲವರು, ಇನ್ನು ಕೆಲವರು ಇವರು Hitech Swamiji' ಎಂದೂ ತೆರೆಮರೆಯಲ್ಲಿ ಮಾತನಾಡುತ್ತಿದ್ದಾರೆಂದು ತಿಳಿಯಿತು. ನಂತರ ನಮ್ಮ ಕಾರ್ಯಾಲಯದ ಬಾಗಿಲು ತೆರೆಯುತ್ತಿದ್ದಂತೆಯೇ ಎದುರಿಗೆ ಕಾಣುವಂತೆ ಕುಳಿತುಕೊಂಡಾಗ ಇಂತಹ ಮಾತುಗಳು ನಿಂತುಹೋದವು. ಆದರೆ ಮೊದಲನೆಯ ಮಹಡಿಯ ಮೇಲಿದ್ದ ನಮ್ಮ ಕಾರ್ಯಾಲಯದ ಕೊಠಡಿಯಲ್ಲಿ ಮಠದ ಮತ್ತು ವಿದ್ಯಾಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾಗ ಕೆಳಗೆ ದರ್ಶನಾರ್ಥಿಗಳು ಕುಳಿತ್ತಿದ್ದ ಜಾಗಕ್ಕೆ ಬರುವುದು ವಿಳಂಬವಾದರೆ ಅದಕ್ಕೂ ತುಂಬಾ ಕಾಯಿಸುತ್ತಾರೆ' ಎಂಬ ಗೊಣಗಾಟ ಶುರುವಾ ಯಿತು. 'ಗುರುಗಳಿಗೇನು ಕೆಲಸ? ಅಧಿಕಾರಿಗಳು ಇಲ್ಲವೇ ಕೆಲಸ ಮಾಡಲು ?' ಎನ್ನುವ ಆಪಸ್ತರ ಕೇಳಿಬಂತು. ತಹಸೀಲ್ದಾರರ ಕಚೇರಿಯಲ್ಲಿ ಗಂಟೆಗಟ್ಟಲೆ ಹೊರಗೆ ನಿಂತು ಕಾಯುವ ಜನರಿಗೆ ಗುರುಗಳ ಜವಾಬ್ದಾರಿ ಕೆಲಸಗಳು ಹೇಗೆ ಅರ್ಥವಾಗಬೇಕು? ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ' ಎಂಬ ನುಲಿಯ ಚಂದಯ್ಯನ ವಚನವನ್ನು ಬದಲಿಸಿ ಈಗ ಗುರುಗಳಿಗೆ 'ಭಾಷಣ ದಿಂದಲೇ ಜೀವನ್ಮುಕ್ತಿ' ಎನ್ನುವಂತಾಗಿದೆ! 'ಪರ ಉಪದೇಶ್ ಕುಶಲ್ ಬಹುತೇರೇ, ಜೇ ಆಚರಹಿಂ ನ ಹಿ ಘನರೇ' (ಇನ್ನೊಬ್ಬರಿಗೆ ಉಪ ದೇಶ ಮಾಡುವವರು ಬಹಳ ಜನ, ಆದರೆ ಅದರಂತೆ ನಡೆಯು ವವರು ವಿರಳ) ಎನ್ನುವ ಕಬೀರರ ಮಾತು ನೆನಪಾಗುತ್ತದೆ. ಮಾತು ಜ್ಯೋತಿರ್ಲಿಂಗವಾಗಬೇಕು, ನಡೆಯಲ್ಲಿ ಅಳವಡಬೇಕು. "ನುಡಿ ಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ, ಹಿಡಿದಿರ್ದ ಲಿಂಗ ಘಟಸರ್ಪ ಕಾಣಾ' ಎನ್ನುತ್ತಾರೆ ಬಸವಣ್ಣನವರು. 'ಒಳಗೂ ಹೊರಗೂ ಶುದ್ದವ ಹಂಗಲ್ಲದೆ ಕಲ್ಯಾಣದತ್ತಲಡಿ ಇಡಬಾರದು, ನೀನೆಂಬುದನರಿತು ನಾನೆಂಬುದನಳಿದು ತಾನು ತಾನಾದವಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು' ಎನ್ನುತ್ತಾಳೆ ಅಕ್ಕಮಹಾದೇವಿ. ಇದು ಬಸವಣ್ಣನ ವರು ಸ್ಥಾಪಿಸಿದ ಅನುಭವಮಂಟಪದ ತಾಣವಾದ ಈಗಿನ ಬಸವ ಕಲ್ಯಾಣವನ್ನು ಬಣ್ಣಿಸಿದಂತೆ ಕಂಡರೂ ಇದರಲ್ಲಿರುವ 'ಕಲ್ಯಾಣ'ವೆಂಬ ಶಬ್ದ ಕೇವಲ ಪ್ರಾದೇಶಿಕ ಸ್ಥಳವಾದ ಕಲ್ಯಾಣವಷ್ಟೇ ಅಲ್ಲ, ಅಂತರಂಗದ ಆತ್ತೋನ್ನತಿಯ ಕಲ್ಯಾಣ ನೀನೆಂಬುದನರಿತು' ಎಂದರೆ ಈ ಭೌತಿಕ ಶರೀರದಲ್ಲಿರುವ ಆತ್ಮವನ್ನು ಅರಿಯ ಬೇಕೆಂದರೆ 'ನಾನೆಂಬುದನಳಿದು ತನ್ನೊಳಗಿರುವ ನಾನು ಎಂಬ ಅಹಂಕಾರವನ್ನು ಅಳಿಯ ಬೇಕು. ಆಗ ಮಾತ್ರ ತಾನು ಯಾರೆಂಬ ಆತ್ಮಕಲ್ಯಾಣದ ಅರಿವು ಮೂಡುತ್ತದೆ. ಅದುವೇ ಆತ್ಮಸಾಕ್ಷಾತ್ಕಾರ.
ಕಾಣಿಕೆ ಸಲ್ಲಿಸಿ ಆಶೀರ್ವಾದ ಪಡೆಯಬೇಕೆಂದು ಸಿರಿಗೆರೆಗೆ ಬಂದಿದ್ದ ಆ ಅಪರಿಚಿತ ವಿದ್ಯಾವಂತ ಮಹಿಳೆಯು ನಮ್ಮ ದರ್ಶನ ದೊರೆಯದೆ ನಿರಾಸೆಯಿಂದ ಹಿಂದಿರುಗಿದ್ದರೂ ನಮ್ಮ ಮೇಲಿನ ಗುರುಭಕ್ತಿಯನ್ನು ಕಳೆದುಕೊಳ್ಳದೆ ತನ್ನ ಬಾಲ್ಯದಿಂದ ಇಲ್ಲಿಯವರೆಗಿನ ಕೌಟುಂಬಿಕ ಜೀವನ ವೃತ್ತಾಂತ, ಎದುರಿಸಿದ ಸಂಕಷ್ಟಗಳು ಮತ್ತು ಏಳು ಬೀಳುಗಳ ಘಟನಾವಳಿಗಳನ್ನು ಮುಚ್ಚುಮರೆಯಿಲ್ಲದೆ ನಿವೇದಿಸಿಕೊಂಡು ನಮ್ಮ ಮಾರ್ಗದರ್ಶನ ಬಯಸಿದ್ದಾಳೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದರೂ ಕಷ್ಟಪಟ್ಟು ಓದಿದ್ದ ಆಕೆಗೆ ವಿಶ್ವವಿದ್ಯಾ ನಿಲಯದ ಪ್ರಾಧ್ಯಾಪಕಿಯಾಗಬೇಕೆಂಬ ಹಂಬಲ. ಆದರೆ ಅವಕಾಶ ವಂಚಿತಳಾಗಬಹುದೆಂಬ ಖಿನ್ನತೆ, ಆ ಮಹಿಳೆಯಿಂದ ಪತ್ರ ಬಂದ ಒಂದೆರಡು ದಿನಗಳಲ್ಲಿಯೇ ಅದೇ ಹಂಬಲ ಇಟ್ಟುಕೊಂಡಿರುವ ಸ್ನಾತಕೋತ್ತರ ಪದವೀಧರರಾದ 80 ಯುವಕ/ಯುವತಿಯರು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರಾಗಲು ಎಲ್ಲ ಅರ್ಹತೆಗಳನ್ನು ಪಡೆದಿದ್ದರೂ ಹೇಗೆ ಅವಕಾಶವಂಚಿತರಾಗುತ್ತಿದ್ದೇವೆಂದು ಅಲವತ್ತು ಕೊಂಡು ನಮಗೆ ಬರೆದುಕೊಂಡ ಒಂದು ಮಿಂಚೋಲೆ ಕೈಸೇರಿತು. ಅವರ ಮನವಿಯ ಸಾರಾಂಶ: ಅವರು JRF/NET/KSET/ GATE ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿಶ್ವವಿದ್ಯಾನಿಲಯಗಳಲ್ಲಿ ನೇಮಕಾತಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿ ಮುಗಿಸಿ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಹಲವು ವರ್ಷಗಳೇ ಕಳೆದಿವೆ. ವಯಸ್ಸು ಮೀರುತ್ತಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಒಟ್ಟು ಸುಮಾರು 900 ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಆಗುತ್ತಿಲ್ಲ. ಇದೇ ಜುಲೈ 1ರೊಳಗೆ ನೇಮಕಾತಿ ಆಗದಿದ್ದರೆ ರಾಜ್ಯದ ಸಾವಿರಾರು ಯುವಕ ಯುವತಿಯರು ಅವಕಾಶ ವಂಚಿತರಾಗುತ್ತಾರೆ. ಏಕೆಂದರೆ ಇದೇ ವರ್ಷ ಜುಲೈ 1ರಿಂದ ಈ ಖಾಲಿ ಹುದ್ದೆಗಳ ನೇಮಕಾತಿಗೆ ಯುಜಿಸಿ ಹೊಸ ನಿಯಮಾವಳಿಯ ಪ್ರಕಾರ ಪಿಎಚ್ ಡಿ ಪದವಿ ಇರಲೇಬೇಕು. ಈ ಹೊಸ ನಿಯಮವನ್ನು ಜಾರಿಗೊಳಿಸಿದರೆ ಇದುವರೆಗೆ ಇದ್ದ ಅರ್ಹತೆಯನ್ನು ಕಳೆದುಕೊಂಡು ಅವಕಾಶವಂಚಿತರಾಗುತ್ತೇವೆ ಎಂಬ ಭಯ ಇವರನ್ನು ಆವರಿಸಿ ಖಿನ್ನರಾಗಿದ್ದಾರೆ. ಇದಕ್ಕೆ ಕಾರಣರು ಯಾರು? ಯುಜಿಸಿ ಯು 2021ರ ಜುಲೈ ತಿಂಗಳು 1ರಿಂದ ಈ ಹುದ್ದೆಗೆ ಪಿಎಚ್ಡಿಡಿಗ್ರಿಯನ್ನು ಕಡ್ಡಾಯಗೊಳಿಸುವುದಾಗಿ ಮೂರು ವರ್ಷಗಳ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ ಸರಕಾರವು ಕೋವಿಡ್ ಕಾರಣಕ್ಕಾಗಿ ಇದುವರೆಗಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಸಂಕಷ್ಟದ ಕಾರಣ ಅನುಮತಿ ನೀಡುತ್ತಿಲ್ಲ. ಹೀಗಾಗಿ ಕಳೆದ ಅನೇಕ ವರ್ಷಗಳಿಂದ ಇದ್ದ ಎಲ್ಲ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಕಾಯುತ್ತಾ ಕುಳಿತಿರುವ ಈ ಚಾತಕ ಪಕ್ಷಿಗಳನ್ನು ಬರುವ ಜುಲೈ 1ರಿಂದ ಅನ್ವಯವಾಗುವ ಹೊಸ ನಿಯಮ ಒಂದೇ ಗುಂಡಿಗೆ ಉಡಾಯಿಸಿಬಿಡುತ್ತದೆ. ಈ ಪ್ರತಿಭಾನ್ವಿತ ಅಭ್ಯರ್ಥಿಗಳ ತಪ್ಪು ಏನು? ಇವರನ್ನು ರಕ್ಷಣೆ ಮಾಡುವವರು ಯಾರು? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯಬಹುದೇ? ಬರೆ ಎಳೆಯುತ್ತಿರುವವರು ಯಾರು? ಸರಕಾರವೋ, ಯುಜಿ ಸಿಯೋ? ಕೊರೊನಾನೋ? ಇವರ ಅಸಹಾಯಕತೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಕಳೆದ ಮೂರು ದಿನಗಳಿಂದ ದೂರವಾಣಿಯಲ್ಲಿ ಮಾತನಾಡಿ ಎಲ್ಲ ವಿವರಗಳನ್ನು ನೀಡಿ ಮನವರಿಕೆ ಮಾಡಿಕೊಡಲಾಗಿದೆ. ಸರಕಾರವು ಈ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಿ ಯುಜಿಸಿ ನಿಗದಿಪಡಿಸಿರುವ ಜುಲೈ 1ರಿಂದ ಜಾರಿಗೆ ಬರಲಿರುವ ಹೊಸ ನಿಯಮಾವಳಿಯನ್ನು ಕೊರೊನಾ ಮುಗಿಯುವರೆಗೂ ಮುಂದಕ್ಕೆ ಹಾಕಿ ಈಗ ಹಾಲಿ ಇರುವ ಖಾಲಿ ಹುದ್ದೆಗಳನ್ನು ಇದುವರೆಗೆ ಜಾರಿಯಲ್ಲಿರುವ ನಿಯಮಾನುಸಾರ ಭರ್ತಿ ಮಾಡುವ ತೀರ್ಮಾನ ಕೈಗೊಂಡರೆ ಅನೇಕ ಹೊಂಗನಸುಗಳನ್ನು ಹೊತ್ತು ಜೀವನವೆಂಬ ವೃಕ್ಷದ ರೆಂಬೆ ಕೊಂಬೆಗಳ ಮೇಲೆ ಕಾದು ಕುಳಿತಿರುವ ಈ ಸುಂದರ ಪಕ್ಷಿಗಳು ಆಗಸದಲ್ಲಿ ಸಂತಸದಿಂದ ಹಾರಾಡುವಂತಾಗುತ್ತದೆ! ಇಲ್ಲದಿದ್ದರೆ ಮರದ ಮೇಲೆ ಹಾಯಾಗಿ ಕುಳಿತು ವಿಹರಿಸುತ್ತಿದ್ದ ಕ್ರೌಂಚ ಪಕ್ಷಿಯನ್ನು ತನ್ನ ಬಾಣದಿಂದ ಕೊಂದ ಬೇಡನನ್ನು ವಾಲ್ಮೀಕಿಯು ಶಪಿಸಿದಂತಾಗುತ್ತದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.17-6-2021
ಬಿಸಿಲು ಬೆಳದಿಂಗಳು