ಅಧಿಕಾರ ಮತ್ತು ಸಂಪತ್ತಿಗಾಗಿ ಹೊಂಚುಹಾಕುವ ರಣಹದ್ದುಗಳು

  •  
  •  
  •  
  •  
  •    Views  


ಕಾಡಿನಲ್ಲಿರುವ ಹುಲಿಯು ನಮ್ಮನ್ನು ಹುಡುಕಿಕೊಂಡು ಬಂದು ಹಲ್ಲೆ ಮಾಡುವುದಿಲ್ಲ, ನಮ್ಮ ಪಕ್ಕದಲ್ಲಿಯೇ ಇರುವ ಗೋಮುಖವ್ಯಾಘ್ರರು ನಮ್ಮ ಪ್ರಾಣವನ್ನೇ ತಿನ್ನುತ್ತಾರೆ. ಇದು ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಸಾರ್ವಜನಿಕ ಜೀವನಾನುಭವದಲ್ಲಿ ನೊಂದು ಬೆಂದು ಕೆರಳಿ ಬರೆದ ಮಾತು. ಅನೇಕ ವೇಳೆ ಇದು ನಮ್ಮ ಸ್ವಾನುಭವಕ್ಕೂ ಬಂದಿದೆ. ನಮ್ಮ ಸಹಾಯ ಪಡೆದು ಬದುಕು ಕಟ್ಟಿಕೊಂಡವರು ಜನ್ಮಾಪಿ ತಮ್ಮನ್ನು ಮರೆಯುವುದಿಲ್ಲ ಎಂದವರು ಸಾರ್ಥಲಾಲಸೆಗೆ ಬಿದ್ದು ನಮ್ಮ ವಿರುದ್ದವೇ ನಿಂತ ಉದಾಹರಣೆಗಳಿವೆ. 'ತುತ್ತಿಟವರ ಬೆಟ್ಟು ಕಚ್ಚಿದರು' ಎಂಬಂತೆ ಇವರ ವರ್ತನೆ. ಇದು ನಿಮ್ಮ ಅನುಭವಕ್ಕೂ ಬಂದಿರಲು ಸಾಕು. ಸಮಯ ಕಾದು ನಿಮ್ಮ ಮೇಲೆ ಮುಗಿಬೀಳುವವರು ಮಿತ್ರವೇಷದಲ್ಲಿದ್ದು ನಿಮಗೆ ವಂಚನೆ ಮಾಡುವ ಹಿತಶತ್ರುಗಳು! ಅಂಥವರಿಗೆ ಎಷ್ಟೇ ಸಹಾಯ ಮಾಡಿದರೂ ಅವರು ಮಗ್ಗುಲ ಮುಳ್ಳುಗಳಂತೆ ನಿಮ್ಮನ್ನು ಚುಚ್ಚಿ ಗಾಯಗೊಳಿಸುತ್ತಾರೆ. ಅವರು ಯಾವಾಗ ನಿಮ್ಮ ಬೆನ್ನಿಗೆ ಚೂರಿ ಹಾಕುತ್ತಾರೋ ಊಹಿಸಲಾಗದು. ಹಸುವಿಗೆ ಹುಲ್ಲನ್ನು ಹಾಕಿದರೆ ಹಾಲನ್ನು ಕೊಡುತ್ತದೆ. ಹಾವಿಗೆ ಹಾಲೆರೆದರೆ ಅದು ಪ್ರತಿಯಾಗಿ ಕೊಡುವುದು ಹೆಚ್ಚಿನ ಹಾಲನ್ನಲ್ಲ ನಿಮ್ಮ ಪ್ರಾಣವನ್ನೇ ತೆಗೆಯುವ ಹಾಲಾಹಲ ವಿಷವನ್ನು! (ಪಯಪಾನಂ ಭುಜಂಗನಾಂ ಕೇವಲಂ ವಿಷವರ್ಧನಂ), 

ಮಹಾಭಾರತದ ಶಕುನಿಯು ದುರ್ಯೋಧನನ ಜೊತೆಗೇ ಇದ್ದು ಅವನ ಪರಮ ಆಪ್ತನಂತೆ ನಟಿಸುತ್ತಾ ಮಾಡಿದ ದೋಹದಿಂದ ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ದ ನಡೆಯಿತು. 'ಪಿಳ್ಳೆ ಪೆಸರಿಲ್ಲಾಯ್ತು ಕೌರವ ಕುಲಶ್ರೀ!' ಇಂತಹ ದ್ರೋಹಿಗಳಿಂದಲೇ ತುಂಬಿ ತುಳುಕುತ್ತಿದೆ ರಕ್ತಸಿಕ್ತ ಇತಿಹಾಸ! ಕಿತ್ತೂರು ರಾಣಿ ಚೆನ್ನಮ್ಮ ಏಕೆ? ನಿಮಗೇಕೆ ಕೊಡಬೇಕು ಕಪ್ಪ? ಮೋಡ ಮಳೆ ಸುರಿಸುತ್ತದೆ. ಭೂಮಿ ಬೆಳೆ ಬೆಳೆಯುತ್ತದೆ? ನೀವೇನು ಉತ್ತಿರಾ, ಬೆಳೆದಿರಾ, ನೀರು ಹಾಯಿಸಿ ಕಳೆ ಕಿತ್ತಿರಾ? ನಿಮಗೇಕೆ ಕೊಡಬೇಕು ಕಪ್ಪ?' ಎಂದು ಸವಾಲು ಹಾಕಿ ಇಡೀ ದೇಶದ ಇತಿಹಾಸದಲ್ಲಿ ಬ್ರಿಟಿಷರೊಂದಿಗೆ ಮೊಟ್ಟ ಮೊದಲು ಯುದ್ದ ಮಾಡಿ ಗೆಲುವು ಸಾಧಿಸಿದ ವೀರ ರಾಣಿ. ನಂತರ ನಡೆದ ಎರಡನೆಯ ಯುದ್ದದಲ್ಲಿ ಆಕೆ ಬಲಿಯಾದದ್ದು ಅವಳೊಂದಿಗೆ ಇದ್ದು ಬ್ರಿಟಿಷರ ಬಾಯೆಂಜಲಿಗೆ ಜೊಲ್ಲು ಸುರಿಸಿದ ದ್ರೋಹಿಗಳಾದ ಮಲ್ಲಪ್ಪಶೆಟ್ಟಿ ಮತ್ತು ಕಲ್ಲನಗೌಡನ ಸಂಚಿನಿಂದ. ನಂತರ ಬಲಿಯಾದವನು ಸಂಗೊಳ್ಳಿ ರಾಯಣ್ಣ ಇನ್ನು ಟಿಪ್ಪುವಿಗೆ ಮುಳುವಾದವನು ನಯವಂಚಕನಾದ ಮೀರ್ಸಾದಿಕ್! 

ಸೀಸರ್ ದೊರೆಯನ್ನು ಇರಿದು ಕೊಂದವನು ಬೇರಾರೂ ಅಲ್ಲ; ದೊರೆಯು ಅಪಾರವಾಗಿ ನಂಬಿದ್ದ ಗೆಳೆಯ ಬ್ರೂಟಸ್. ಅವನೊಬ್ಬ ಕ್ರೂರ ಮೃಗ. ಶೇಕ್ಸ್ಪಿಯರ್ನ 'ಜೂಲಿಯಸ್ ಸೀಸರ್' ನಾಟಕದ ಮನಮಿಡಿಯುವ ಪ್ರಸಂಗವಿದು. ಸಾಯುವ ಕೊನೆಯ ಕ್ಷಣದಲ್ಲಿ ದೊರೆ ಸೀಸರ್ ಆಘಾತಗೊಂಡು You too Brutus! ಎಂದು ಉದ್ಘರಿಸಿ ಪ್ರಾಣಬಿಡುತ್ತಾನೆ. ಶೇಕ್ಸ್ಪಿಯರನ ಇನ್ನೊಂದು ನಾಟಕ - ಒಥೆಲೋದಲ್ಲಿ ಖಳನಾಯಕ, ಮಹಾನ್ ದ್ರೋಹಿ ಇಯಾಗೋ ಹೇಳುವ ಮಾತು: | am not what I am!. ಹೌದು, ಅಂಥವರು ಹೊರಗೆ ಕಾಣಿಸಿಕೊಳ್ಳುವುದೇ ಬೇರೆ; ಒಳಗೆ ಇರುವುದೇ ಬೇರೆ! 'ಒಳಗೆ ಕುಟಿಲ, ಹೊರಗೆ ವಿನಯ ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ ಬಿಸಾಡುವನವರ ಜಗದೀಶ ಕೂಡಲ ಸಂಗಮದೇವಾ' ಎನ್ನುತ್ತಾರೆ ಬಸವಣ್ಣನವರು. 

ಇಂತಹ ವಿದ್ರೋಹಗಳು ನಡೆದಿರುವುದು ಕೇವಲ ರಾಜಮನೆತನಗಳಲ್ಲಷ್ಟೇ ಅಲ್ಲ; ಧಾರ್ಮಿಕ ಸಂಸ್ಥೆಗಳಲ್ಲೂ ನಡೆದಿವೆ: ಕ್ರೈಸ್ತರಲ್ಲಿ ಅನೇಕ ಪಂಥಗಳಿವೆ. ಅವುಗಳಲ್ಲಿ ಜಗತ್ತಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವರು ಕ್ಯಾಥೋಲಿಕ್ ಕ್ರೈಸ್ತರು. ಅವರ ಧರ್ಮಗುರುಗಳಾದ ಪೋಪ್ರವರು ವಾಸವಾಗಿರುವುದು ರೋಮ್ನ ವ್ಯಾಟಿಕನ್ ನಗರದಲ್ಲಿ ಅದೇ ಒಂದು ಸ್ವತಂತ್ರ ದೇಶವಿದ್ದಂತೆ. ಅದರದೇ ಆದ ಪ್ರತ್ಯೇಕ ನಾಣ್ಯ(currency). ಬೇರೆ ದೇಶಗಳಿಗೆ ಹೋಗುವಾಗ ವೀಸಾ ತೆಗೆದುಕೊಳ್ಳುವಂತೆ ವ್ಯಾಟಿಕನ್ ಪ್ರವೇಶಿಸಲು ANGELS ವೀಸಾ ಪಡೆಯಬೇಕು. ಕ್ರೈಸ್ತಧರ್ಮದಲ್ಲಿ ಸ್ಕೂಲವಾಗಿ ಐದು ತೆರನಾದ ಶ್ರೇಣೀಕೃತ (hierarchical) ಧರ್ಮಗುರುಗಳು ಇರುತ್ತಾರೆ: 1.ಪಾದ್ರಿ 2.ಬಿಷಪ್ 3.ಆರ್ಚ್ಬಿಷಪ್ 4.ಕಾರ್ಡಿನಲ್ಸ್ ಮತ್ತು 5.ಪೋಪ್, ಜಗತ್ತಿನಾದ್ಯಂತ 222 ಕಾರ್ಡಿನಲ್ಗಳು ಇದ್ದಾರೆ. ಅವರೆಲ್ಲರ ಧಾರ್ಮಿಕ ಅಧಿಪತಿಗಳಾಗಿ ಇರುವವರು ಪೋಪ್ ಒಬ್ಬರೇ. ಎರಡು ಸಹಸ್ರ ವರ್ಷಗಳ ಇತಿಹಾಸದಲ್ಲಿ ನಡೆದು ಬಂದ ಸಂಪ್ರದಾಯದ ಪ್ರಕಾರ ಪೋಪ್ ಆಯ್ಕೆ ವಿಶಿಷ್ಟತರವಾಗಿದೆ. ಪೋಪ್ ಮರಣ ಹೊಂದಿದರೆ ನೂತನ ಪೋಪ್ ಆಯ್ಕೆಯಾಗುವುದು ಕಾರ್ಡಿನಲ್ಗಳಲ್ಲಿಯೇ ಒಬ್ಬರು. ಅದಕ್ಕಾಗಿ ಜಗತ್ತಿನಾದ್ಯಂತ ಇರುವ 222 ಕಾರ್ಡಿನಲ್ಗಳು ವ್ಯಾಟಿಕನ್ ನಗರಕ್ಕೆ ಬರುತ್ತಾರೆ. ಸೇಂಟ್ ಪೀಟರ್ ಚರ್ಚಿನಲ್ಲಿ ಮೌನ ವ್ರತ ಧರಿಸಿ ಧ್ಯಾನ ಮಾಡಿ ಮತ ಚಲಾಯಿಸುತ್ತಾರೆ. ಅವರಲ್ಲಿ ಮೂರನೇ ಎರಡು ಭಾಗದಷ್ಟು ಅತ್ಯಧಿಕ ಮತ ಪಡೆದವರನ್ನು ನೂತನ ಪೋಪ್ ಆಗಿ ಆಯ್ಕೆ ಮಾಡುತ್ತಾರೆ. ಸೇಂಟ್ ಪೀಟರ್ ವೃತ್ತದಲ್ಲಿ ಕ್ರೈಸ್ತ ಭಕ್ತರು - ಕುತೂಹಲದಿಂದ ಕಾಯುತ್ತಿರುತ್ತಾರೆ. ನಿಗದಿತ ಪ್ರಮಾಣದಲ್ಲಿ ಮತ ಚಲಾವಣೆ ಆಗದಿದ್ದರೆ ಮೇಲಂತಸ್ತಿನಲ್ಲಿರುವ ಕಿಟಿಕಿಯಿಂದ ಕಪ್ಪು ಹೊಗೆ ಬರುತ್ತದೆ. ಮೂರನೇ ಎರಡು ಭಾಗಕ್ಕೂ ಹೆಚ್ಚಿನ ಮತಗಳು ಒಬ್ಬರಿಗೆ ಬಂದರೆ ಹೊಸ ಪೋಪ್ ಆಯ್ಕೆಯಾದರೆಂಬ ಸಂಕೇತವಾಗಿ ಮೇಲುಪ್ಪುರಿಗೆಯ ಕಿಟಕಿಯಿಂದ ಬಿಳಿ ಹೊಗೆ ಬರುತ್ತದೆ. ವಿಶಾಲವಾದ ವೃತ್ತದಲ್ಲಿ ಕ್ರೈಸ್ತ ಧರ್ಮಿಯರು ಹರ್ಷೋದ್ಧಾರ ವ್ಯಕ್ತಪಡಿಸುತ್ತಾರೆ! ನಾಲ್ಕು ದಶಕಗಳ ಹಿಂದೆ ವಿಯೆನ್ನಾ - ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ರೋಮ್ ನಗರಕ್ಕೆ ಹೋಗಿ ಇದೆಲ್ಲವನ್ನೂ ನೋಡಿದ ದೃಶ್ಯ ನಮ್ಮ ಕಣ್ಮುಂದೆ ಕಟ್ಟಿದಂತಿದೆ. ನೂತನ ಪೋಪ್ ಆಗಿ ಆಯ್ಕೆಯಾದ John Paul-l ರವರು ವಿಯೆನ್ನಾ ನಗರಕ್ಕೆ ಬಂದಾಗ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಅವರನ್ನು ಕಣ್ಣಾರೆ ನೋಡುವ ಸುವರ್ಣಾವಕಾಶ ನಮಗೆ ದೊರಕಿತ್ತು. 

ಇಂತಹ ಒಂದು ಪೋಪ್ ಆಯ್ಕೆಯ ಸಂದರ್ಭ DEMONS ಕುರಿತು Angels and Demons ಎಂಬ ಕಾದಂಬರಿಯನ್ನು Dan Brown ಬರೆದಿರುತ್ತಾರೆ. ಅದನ್ನು ಆಧರಿಸಿ ಆಂಗ್ಲಭಾಷೆಯಲ್ಲಿ ಇದೇ ಹೆಸರಿನ - ಒಂದು ಚಲನಚಿತ್ರವೂ 2009ರಲ್ಲಿ ಬಂದಿರುತ್ತದೆ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಒಳ್ಳೆಯ ಹವ್ಯಾಸವಿರುವ ನಮ್ಮ ಆತ್ಮೀಯ ಶಿಷ್ಯರೂ, ದಾವಣಗೆರೆಯ ಜನತಾವಾಣಿ ಪತ್ರಿಕೆಯ ಯುವ ಸಂಪಾದಕರೂ ಆದ ವಿಕಾಸ್ ಇದರ ಲಿಂಕನ್ನು ನಮಗೆ ಬಹಳ ಹಿಂದೆಯೇ ಕಳುಹಿಸಿದ್ದರು. ಅದರ ಕಥಾವಸ್ತು ಹೀಗಿದೆ: ಮೇಲೆ ವಿವರಿಸಿದಂತೆ ಪೋಪ್ ಮರಣ ಹೊಂದಿದ ಮೇಲೆ ಜಗತ್ತಿನಾದ್ಯಂತ ಎಲ್ಲಾಕಾರ್ಡಿನಲ್ಗಳೂ ನೂತನ ಪೋಪ್ ಆಯ್ಕೆಗೆಂದು ವ್ಯಾಟಿಕನ್ ನಗರಕ್ಕೆ ಬಂದಿದ್ದರು. ಅವರಲ್ಲಿ ನಾಲ್ಕು ಹೆಸರುಗಳು ಕೇಳಿಬರುತ್ತಿದ್ದವು. ಆದರೆ ನಿಗೂಢವಾಗಿ ಆ ನಾಲ್ಕೂ ಜನರು ಅಪಹರಣಗೊಂಡು ಹತ್ಯೆಗೊಳಗಾಗುತ್ತಾರೆ. ಅವರನ್ನು ಅಪಹರಣಕಾರರು ಎಲ್ಲಿಗೆ  ಕರೆದೊಯ್ದಿದ್ದಾರೆ ಎಂದು ಪತ್ತೆ ಹಚ್ಚಿ ರಕ್ಷಣೆ ಮಾಡಲು ವಿಫಲ ಪ್ರಯತ್ನ ಮಾಡಿದವನು ದಿವಂಗತ ಪೋಪ್ರವರ ಸೇವೆ ಮಾಡಿಕೊಂಡಿದ್ದ ಒಬ್ಬ ಯುವ ಪಾದ್ರಿ, ಉಳಿದ ಕಾರ್ಡಿನಲ್ ಗಳೆಲ್ಲರೂ ಪರಸ್ಪರ ಸಮಾಲೋಚಿಸುತ್ತಾರೆ. ಅದುವರೆಗೆ ಇದ್ದ ಸಂಪ್ರದಾಯವನ್ನು ಮುರಿದು ಪ್ರಾಣದ ಹಂಗು ತೊರೆದು ನಾಲ್ವರು ಕಾರ್ಡಿನಲ್ಗಳನ್ನು ಸಂರಕ್ಷಿಸಲು ಸಾಹಸಮಯ ಯತ್ನವನ್ನು ಮಾಡಿದ ಆ ಯುವ ಪಾದ್ರಿಯನ್ನೇ ಮುಂದಿನ ಪೋಪ್ ಆಗಿ ಆಯ್ಕೆ ಮಾಡಿ ಘೋಷಿಸುತ್ತಾರೆ. ಈ ವಿಷಯ ತಿಳಿದ ಗುಪ್ತಚರ ಇಲಾಖೆಯವರು ತಕ್ಷಣವೇ ಕಾರ್ಯೋನ್ಮಖರಾಗುತ್ತಾರೆ. ಹಿಂದಿನ ಪೋಪ್ ಅವರ ಸೇವೆ ಮಾಡಿಕೊಂಡಿದ್ದ ಆ ಯುವ ಪಾದ್ರಿಯು ತಾನೇ ಪೋಪ್ ಆಗಬೇಕೆಂಬ ಆಕಾಂಕ್ಷೆ ಇಟ್ಟುಕೊಂಡು ಆ ಪೋಪ್ ರವರನ್ನೂ ಮತ್ತು ನಾಲ್ವರು ಕಾರ್ಡಿನಲ್ಗಳನ್ನು ಸ್ವತಃ ಹತ್ಯೆ ಮಾಡಿದ ದುರುಳನೆಂದು ಪತ್ತೆಹಚ್ಚುತ್ತಾರೆ. ಹತಾಶನಾದ ಆ ಯುವಪಾದ್ರಿಯು ಸೇಂಟ್ ಪೀಟರ್ ವೃತ್ತದಲ್ಲಿ ಜನರ ಎದುರಿಗೆ ಹಠಾತ್ತನೆ ಮೈಮೇಲೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾಯುತ್ತಾನೆ. 

ಮಠ ಮಂದಿರಗಳಲ್ಲಿ ದ್ರೋಹದ ಪ್ರಸಂಗಗಳು ಇರಲಾರವು ಎಂದು ನೀವು ಭಾವಿಸಿದ್ದರೆ ಅದು ತಪ್ಪು, ಮಠವಾದರೇನು ಮಂದಿರವಾದರೇನು ಅಧಿಕಾರ ಮತ್ತು ಸಂಪತ್ತು ಇರುವ ಕಡೆ ದ್ರೋಹದ ಗೂಡು ಕಟ್ಟದೇ ಬಿಡುವುದಿಲ್ಲ. ನಮ್ಮ ಮಠದಲ್ಲಿಯೇ ಇದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಸಿಗುತ್ತವೆ. ನಮ್ಮ ಗುರುಪಿತಾಮಹರಾದ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳು ಬಲಿಯಾದದ್ದು ಮಠದಲ್ಲಿಯೇ ಇದ್ದ ಚರಂತ ಸ್ವಾಮಿಗಳಿಂದ. ದಾವಣಗೆರೆಯಲ್ಲಿ ಅವರು ಬಡಮಕ್ಕಳಿಗೆಂದು ಸ್ಥಾಪಿಸಿದ್ದ ವಿದ್ಯಾರ್ಥಿನಿಲಯದ ಮೇಲ್ವಿಚಾರಣೆಯನ್ನು ನಡೆಸಿ ಸಿರಿಗೆರೆಗೆ ಬಂದಾಗ(11.8.1938) ತಾಪದಲ್ಲಿ ದಾಹದಿಂದ ದಣಿದ ಗುರುಗಳಿಗೆ ಮಜ್ಜಿಗೆಯಲ್ಲಿ ವಿಷಬೆರೆಸಿ ನೀಡಿ ಬಲಿ ತೆಗೆದುಕೊಂಡರು ಈ ದ್ರೋಹಿಗಳು. ನಮ್ಮ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳಂತೂ ದ್ರೋಹದ ವಿಷವನ್ನುಂಡ ವಿಷಕಂಠರೇ ಆಗಿದ್ದಾರೆ. 

ಇದಕ್ಕೆಲ್ಲ ಕಾರಣವೇನು ಎಂದು ಯೋಚಿಸಿದಾಗ ದೊರೆಯುವ ಉತ್ತರ: ಮನುಷ್ಯನ ಸ್ವಾರ್ಥ ಲಾಲಸೆ. ಎಲ್ಲಿ ತಮಗೆ ಲಾಭವಿಲ್ಲವೋ ಆ ಸ್ಥಳವನ್ನು ಬಿಟ್ಟು ಲಾಭ ಗಿಟ್ಟುವ 'ಫಲವತ್ತಾದ ಸ್ಥಳ'ವನ್ನು ಅನ್ವೇಷಿಸಿ ಈ ಸ್ವಾರ್ಥಿಗಳು ಹೊರಡುತ್ತಾರೆ - ಬೇಟೆ ಸಿಗುವಲ್ಲಿಗೆ ಹಾರಿ ಹೋಗಿ ಕಬಳಿಸಲು ಹೊಂಚು ಹಾಕುವ ರಣಹದ್ದುಗಳಂತೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.1-7-2021
ಬಿಸಿಲು ಬೆಳದಿಂಗಳು