ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೇಕೆ, ಯಾರು ಹೊಣೆ?
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಗಾದೆಯ ಮಾತೇ ಸೊಗಸು. 'ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ' ಎಂದು ಗಾದೆಯ ಮಾತನ್ನೇ ಕುರಿತ ಗಾದೆ ಇದೆ. 'ಉಪಮಾ ಕಾಲಿದಾಸಸ್ಯ ಭಾರವೇರರ್ಥಗೌರವಂ ದಂಡಿನಃ ಪದಲಾಲಿತ್ಯಂ ಮಾಘೆ ಸಂತಿ ತ್ರಯೋ ಗುಣಾಃ ಎಂದು ಸಂಸ್ಕೃತದ ಮಹಾಕವಿಗಳನ್ನು ಕುರಿತು ಹೇಳುವಂತೆ ಕಾಳಿದಾಸನ ಉಪಮೆ, ಭಾರವಿಯ ಅರ್ಥಗೌರವ, ದಂಡಿಯ ಪದಲಾಲಿತ್ಯ ಇವು ಮೂರೂ ಕಾವ್ಯಗುಣಗಳು ಗಾದೆ ಮಾತಿನಲ್ಲಿ ಮುಪ್ಪುರಿಗೊಂಡಿವೆ. ಮಾಘ ಕವಿಯ ಮಹಾಕಾವ್ಯಗಳೂ ಸಹ ಈ ಮೂರೂಗುಣಗಳಿಂದ ಕೂಡಿವೆಯೆಂದರೂ ಇಡೀ ಕಾವ್ಯವನ್ನು ಓದಿದಾಗ ಉಂಟಾಗುವ ರಸಾನುಭೂತಿ ಒಂದೇ ಸಾಲಿನ ಗಾದೆ ಮಾತಿನಲ್ಲಿ ಉಂಟಾಗುತ್ತದೆ. ಗಾದೆಗಳಲ್ಲಿ ಚಾರುತರವಾದ, ಚತುರತರವಾದ ಚತುರ್ಥ ಗುಣವೂ ಇದೆಯೆಂದರೆ ಅತಿಶಯೋಕ್ತಿಯಾಗಲಾರದು. ಅಂದೆಂದರೆ ಪಾಣಿನಿಯ ಸೂತ್ರಗಳಂತೆ ಕೆಲವೇ ಶಬ್ದಗಳಲ್ಲಿ ಸೂತ್ರಬದ್ಧವಾದ, ಲಯಬದ್ಧವಾದ, ಅರ್ಥಪೂರ್ಣವಾದ ಬದುಕಿನ ಬಂಡಿಯ ಕಡೆಗೀಲು! ಗ್ರಾಮೀಣ (Colloquial) ಭಾಷೆಯ ಸೊಗಡೂ ಇದರಲ್ಲಿದೆ. ಒಟ್ಟಾರೆ ಜನಪದರ ಜೀವನಾನುಭವದ ಘನೀಭೂತ ರಸಪಾಕವೇ ಗಾದೆ. ಇದನ್ನು 'ಕುರಿತೋದದೆಯುಂಕಾವ್ಯಪ್ರಯೋಗ ಪರಿಣತ ಮತಿಗಳಾದ ಜನಪದರು ತಮ್ಮ ಆಡುಮಾತಿನಲ್ಲಿ ವಿರಚಿಸಿದ 'ಭಗವದ್ಗೀತೆ' ಎಂದರೂ ತಪ್ಪಲ್ಲ.
ಪ್ರಾಚೀನ ಕವಿಗಳು ರಾಮಾಯಣ, ಮಹಾಭಾರತಗಳನ್ನು ಆಧರಿಸಿ ಕಾವ್ಯರಚನೆ ಮಾಡಿದಂತೆ ಅಜ್ಞಾತ ಜನಪದರು ರಚಿಸಿದ ಈ ಒಂದೊಂದು ಗಾದೆ ಮಾತನ್ನು ಆಧರಿಸಿ ಆಧುನಿಕ ಪ್ರತಿಭಾನ್ವಿತ ಕವಿಗಳು ಅನೇಕ ಮಹಾಕಾವ್ಯಗಳನ್ನೇ ಬರೆಯಬಹುದು. ಜನಸಾಮಾನ್ಯರ ಜೀವನಾನುಭವಗಳನ್ನು ವಿವರಿಸಿ ಲೇಖನಗಳನ್ನೂ ಬರೆಯಬಹುದು. ಗಾದೆ ಮಾತುಗಳು ಸಾರ್ವಕಾಲಿಕ ಸತ್ಯದಿಂದ ಕೂಡಿರುತ್ತವೆ. ಹಿಂದಿನವರ ಜೀವನಾನುಭವದ ಘಟನಾವಳಿಗಳು ಏನೇ ಇರಲಿ, ಅವು 'History repeats itself' ಎನ್ನುವಂತೆ ಎಲ್ಲ ಕಾಲಗಳಲ್ಲಿಯೂ ಮತ್ತೊಂದು ರೂಪದಲ್ಲಿ ಮರುಕಳಿಸುತ್ತವೆ. ಅಂತಹ ಒಂದು ಪ್ರಕರಣವು 2019ರಲ್ಲಿ ಪ್ರತಿ ಸೋಮವಾರ ನಡೆಸುವ ನಮ್ಮ 'ಸದ್ಧರ್ಮ ನ್ಯಾಯಪೀಠ'ದಲ್ಲಿ ದಾಖಲಾಗಿದ್ದು ಅದರ ವಿವರಗಳು ಹೀಗಿವೆ:
ಕರ್ನಾಟಕ ಲೋಕಸೇವಾ ಆಯೋಗವು 2011ರಲ್ಲಿ ಸರಕಾರವು ನೀಡಿದ ನಿರ್ದೇಶನದಂತೆ ಕೆಎಎಸ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ್ದರೂ ಇದುವರೆಗೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವುದಿಲ್ಲ. ಸರಕಾರವು ಆಯ್ಕೆ ಪಟ್ಟಿಯನ್ನೇ ರದ್ದುಗೊಳಿಸಿದೆ. ನೇಮಕಾತಿ ಆದೇಶಗಳನ್ನು ಪಡೆದ ಕೆಲವರು ಕರ್ತವ್ಯದ ಮೇಲೆ ಹಾಜರಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿ ವೇತನವನ್ನು ಪಡೆದಿದ್ದರೂ ಅವರನ್ನೂ ಸಹ ಬಿಡುಗಡೆಗೊಳಿಸಲಾಗಿದೆ. ಯಾರೋ ಕೆಲವರು ಅಭ್ಯರ್ಥಿಗಳು ಲೋಕಸೇವಾ ಆಯೋಗದ ಸದಸ್ಯರಿಗೆ ದೂರವಾಣಿಯಲ್ಲಿ ಕರೆ ಮಾಡಿದ್ದರು ಎಂಬ ಕಾರಣಕ್ಕಾಗಿ ಏನೋ ಗೋಲ್ಮಾಲ್ ನಡೆದಿದೆಯೆಂದು ಅನುಮಾನಿಸಿ ಇಡೀ ಆಯ್ಕೆ ಪಟ್ಟಿಯನ್ನೇ ರದ್ದುಪಡಿಸಿದರೆ ಹೇಗೆ? ಮದುವೆಯ ಮುನ್ನಾ ದಿನ ಹುಡುಗಿಗೆ ಯಾವುದೋ ಹುಡುಗನಿಂದ ಫೋನ್ ಕರೆ ಬಂದಿತ್ತು ಎಂದು ಅನುಮಾನಪಟ್ಟು ಮದುವೆಯೇ ಮುರಿದು ಬಿದ್ದಂತಾಗಿದೆ! ರಾಜ್ಯಾದ್ಯಂತ ಸುಮಾರು 360ಕ್ಕೂ ಹೆಚ್ಚು ಪ್ರತಿಭಾನ್ವಿತ ಯುವಕ ಯುವತಿಯರ ಜೀವನವು ಮೂರಾಬಟ್ಟೆಯಾಗಿದೆ. ಮೂರನೇ ಒಂದು ಭಾಗದಷ್ಟು ಅವರ ವೃತ್ತಿ ಜೀವನವು ಮಣ್ಣುಪಾಲಾಗಿದೆ. ನಾನೇನು ಪಾಪವ ಮಾಡಿದೆನೋ ಬೆಳೆಯುವ ಮುನ್ನವೇ ಕೊಯ್ದರೇ? ಹೇಳಾ ಅಯ್ಯಾ! ಎಂದು ಬಸವಣ್ಣನವರು ಪರಿತಪಿಸಿ ದಂತೆ ಈ ಯುವಕ-ಯುವತಿಯರು ಕಣ್ಣೀರಿಡುವಂತಾಗಿದೆ. ಅವರ ಜೀವನದ ಕನಸುಗಳೆಲ್ಲಾ ಭಗ್ನಗೊಂಡಿವೆ. ಇದ್ದ ನೌಕರಿಗೂ ರಾಜಿನಾಮೆ ಕೊಟ್ಟು ಕಂಗಾಲಾಗಿದ್ದಾರೆ. ವಾಸ್ತವ ಪ್ರಪಂಚದಲ್ಲಿದ್ದೂ 'ಇದೇನೋ ಕೆಟ್ಟ ಕನಸು' ಎಂದು ವಿಷಾದಿಸಿ ತಮ್ಮ ಹಣೆಯ ಬರಹವನ್ನು ಹಳಿಯುವಂತಾಗಿದೆ. ತಮ್ಮ ಮಕ್ಕಳು ಉನ್ನತ ಹುದ್ದೆಗಳಲ್ಲಿರು ವುದನ್ನು ಕಣ್ತುಂಬ ನೋಡಿ ಸಂತಸಪಡಲು ತವಕಿಸುತ್ತಿದ್ದ ಅವರ ತಂದೆ-ತಾಯಂದಿರು ಶೋಕಸಾಗರದಲ್ಲಿ ಕೆಲವರಂತೂ ಅದೇ ಚಿಂತೆಯಲ್ಲಿ ಮರಣ ಹೊಂದಿದ್ದಾರೆ.
ಈ ಯುವಕ-ಯುವತಿಯರ ಕೈಗೆ ಬಂದ ತುತ್ತು ಬಾಯಿಗೆ ಏಕೆ ಬರಲಿಲ್ಲ? ಇವರು ತಮ್ಮ ಸ್ವಂತ ಪ್ರತಿಭೆಯಿಂದ ಗಳಿಸಿದ್ದ ಹುದ್ದೆಗೆ ಸಂಚಕಾರ ಬರಲು ಏನು ಕಾರಣ? ಇದಕ್ಕೆ ಯಾರು ಹೊಣೆ? ಲೋಕ ಸೇವಾ ಆಯೋಗದ ಅಂತಿಮ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಲು ಯಾವುದೇ ಸರಕಾರಕ್ಕೂ ಅಧಿಕಾರವಿಲ್ಲ. ಹಿಂದೆ ಅಧಿಕಾರದಲ್ಲಿದ್ದ ಸರಕಾರದ ರಾಜಕೀಯ ಧುರೀಣರು ಈಗ ವಿರೋಧ ಪಕ್ಷದಲ್ಲಿದ್ದು ಇವರಿಗೆ ಅನ್ಯಾಯವಾಗಿದೆ ಎಂದು ಒಪ್ಪಿ ಕಳೆದ ವರ್ಷ ನಡೆದ ವಿಧಾನಸಭೆಯ ಬಜೆಟ್ ಅವೇಶನದಲ್ಲಿ (ಮಾರ್ಚ್ 2020) ಒಕ್ಕೊರಲಿನಿಂದ ಇವರಿಗೆ ನೇಮಕಾತಿ ಆದೇಶವನ್ನು ನೀಡಲು ಈಗಿನ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಇಲ್ಲಿಗೆ ಒಂದು ವರ್ಷದ ಮೇಲಾಯಿತು. ಆದರೂ ನೇಮಕಾತಿ ಆದೇಶ ಆಗಿರುವುದಿಲ್ಲ.
ಈ ಹಿಂದೆ ತಪ್ಪಾಗಿದ್ದು ಎಲ್ಲಿ? ಹೇಗೆ? ಲೋಕ ಸೇವಾ ಆಯೋಗವು ಸಲ್ಲಿಸಿದ ಅಂತಿಮ ಆಯ್ಕೆ ಪಟ್ಟಿಯು ದೋಷಪೂರ್ಣವಾಗಿದ್ದರೆ ಅಂದಿನ ಸರಕಾರವು ಸಂವಿಧಾನದ ಪರಿಚೇದ 323(2)ರ ಪ್ರಕಾರ ಸಕಾರಣಗಳನ್ನು ಕೊಟ್ಟು ವಿಧಾನಸಭೆಯ ಮುಂದೆ ಮಂಡಿಸಬೇಕಾಗಿತ್ತು. ಕಳೆದ ಮಾರ್ಚ್ ತಿಂಗಳು ಚರ್ಚೆ ನಡೆದಂತೆ ಯಾವ ಚರ್ಚೆಯೂ ಈ ಹಿಂದಿನ ಯಾವ ವಿಧಾನಸಭೆಯ ಅಧಿವೇಶನದಲ್ಲಿಯೂ ನಡೆದಿಲ್ಲ, ಆಗಿನ ಆಯೋಗವೂ ತಪ್ಪು ಮಾಡಿದೆ; ಆಗಿನ ಸರಕಾರವೂ ತಪ್ಪು ಮಾಡಿದೆ. ಆಯೋಗವು ತನ್ನ 2014-15 ರವಾರ್ಷಿಕ ವರದಿಯನ್ನು ತಡವಾಗಿ ಅಂದರೆ 2017ರ ಫೆಬ್ರವರಿ 7ರಂದು ವಿಧಾನಸಭೆಯ ಮುಂದೆ ಮಂಡಿಸಿದೆ. ಅದರಲ್ಲಿ ಈ ಅಭ್ಯರ್ಥಿಗಳ ಆಯ್ಕೆಯ ವಿವಾದವು ಕರ್ನಾಟಕ ಆಡಳಿತ ನ್ಯಾಯಮಂಡಳಿಯ(ಕೆಎಟಿ) ಮುಂದೆ ಇದೆಯೆಂದೂ, ಇನ್ನೂ ತೀರ್ಮಾನ ಆಗಿಲ್ಲವೆಂದೂ ವಿಧಾನಸಭೆಗೆ ತಪ್ಪು ಮಾಹಿತಿ ನೀಡಿದೆ. ಆ ವೇಳೆಗಾಗಲೇ ನ್ಯಾಯಮಂಡಳಿಯು ವಿಚಾರಣೆಯನ್ನು ಪೂರ್ಣಗೊಳಿಸಿ 2016ರ ಅಕ್ಟೋಬರ್ 19ರಂದು ತೀರ್ಪು ನೀಡಿದೆ. ಸಂವಿಧಾನದ ಪರಿಚೇದ 323 (2) ಪ್ರಕಾರ ವಿಧಾನಸಭೆಯ ಮುಂದೆ ಮಂಡನೆ ಆಗಿಲ್ಲ: ಚರ್ಚೆ ನಡೆದಿಲ್ಲ ಆದಕಾರಣ ಆಯೋಗದ ಆಯ್ಕೆ ಪಟ್ಟಿಯ ಪ್ರಕಾರ ನೇಮಕಾತಿ ಆದೇಶವನ್ನು ಸರಕಾರ ಕೊಡಬೇಕು ಎಂದು ನ್ಯಾಯಮಂಡಳಿಯು ಸಷವಾಗಿ ಆದೇಶ ನೀಡಿದೆ.
ಈ ವಿವಾದವು ಉಚ್ಚನ್ಯಾಯಾಲಯದ ಮೆಟ್ಟಿಲೇರಿದಾಗ ಆಗಿನ ಅಡಿಷನಲ್ ಅಡೊಕೇಟ್ ಜನರಲ್ರವರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುತ್ತಾರೆ. ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ದಾಖಲಾದ ಪ್ರಕಾರ: “To a pointed query with regard to laying of report before the Legislature in compliance with Article 323(2) of the Constitution of India, he submitted that the report was tabled during February 2017..."(paras 21 and 26(e). ಆಯೋಗದ ವರದಿಯಲ್ಲಿ ಏನಿದೆ ಎಂಬುದನ್ನು ಉಚ್ಚ ನ್ಯಾಯಾಲಯವು ಪರಿಶೀಲಿಸಲು ಹೋಗಿಲ್ಲ, ಅಡ್ವಕೇಟ್ ಜನರಲ್ರವರ ಮಾತನ್ನೇ ನಂಬಿ ತೀರ್ಪು ನೀಡಿದೆ. ಸರಕಾರವು ವಿಧಾನಸಭೆಯಲ್ಲಿ ನ್ಯಾಯಮಂಡಳಿಯ ಕಡೆ ಬೆರಳು ಮಾಡಿ ತೋರಿಸಿದರೆ, ಉಚ್ಚ ನ್ಯಾಯಾಲಯದಲ್ಲಿ ವಿಧಾನಸಭೆಯ ಕಡೆ ಬೆರಳು ಮಾಡಿ ತೋರಿಸಿದೆ. ನ್ಯಾಯಶಾಸ್ತ್ರದ ಪ್ರಕಾರ 'ಸುಖ ಎಂದರೆ ದುಃಖದ ಅಭಾವ'; ದುಃಖ ಎಂದರೆ ಸುಖದ ಅಭಾವ' ಎಂದು ಹೇಳಿದರೆ ಸುಖ-ದುಃಖಗಳ ಸರಿಯಾದ ಪರಿಭಾಷೆ ಆಗುವುದಿಲ್ಲ: 'ಚಕ್ರಾಪತ್ತಿ' (circular argument) ದೋಷ ಉಂಟಾಗುತ್ತದೆ. ಈ ಚಕ್ರವ್ಯೂಹದಲ್ಲಿ 2011 ರ ಈ ಯುವ ಪ್ರತಿಭಾನ್ವಿತರು ಸಿಲುಕಿಕೊಂಡು ನಲುಗುತ್ತಿದ್ದಾರೆ.
ಆಯೋಗದ ಹಿಂದಿನ ಕಾರ್ಯದರ್ಶಿಗಳುದೋಷಮುಕ್ತರೆಂದು ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಆಯೋಗದ ಉಳಿದ ಸದಸ್ಯರೂ ನಿರ್ದೋಷಿಗಳೆಂದು ಸರಕಾರವು ತೀರ್ಮಾನಿಸಿದೆ. ಹೀಗಿರುವಾಗ ಈ ಯುವ ಪ್ರತಿಭೆಗಳ ಮೇಲೆ ದೋಷ ಹೊರಿಸುವುದು ಎಷ್ಟರಮಟ್ಟಿಗೆ ಸಮಂಜಸ? ನೂರು ಜನ ಅಪರಾಧಿ ಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ: ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವುದು ನ್ಯಾಯಶಾಸ್ತ್ರ ಕೋವಿದರು ಹೇಳುತ್ತಾರೆ. ಕೇವಲ CID ವರದಿಯ ಆಧಾರದ ಮೇಲೆಯೇ ಸರಕಾರವು ಶಿಸ್ತುಕ್ರಮ ಕೈಗೊಳ್ಳುವುದಾದರೆ ದೇಶದಲ್ಲಿ ನ್ಯಾಯಾಲಯಗಳಾದರೂ ಏಕೆ ಬೇಕು?
ಉಚ್ಚನ್ಯಾಯಾಲಯವು ದಿನಾಂಕ 9.3.2018 ರಂದು ನೀಡಿದ ತೀರ್ಪಿನಲ್ಲಿ ಹೀಗೆ ಹೇಳುತ್ತದೆ: “Unless the order of appointment is communicated to the selected candidates, no right shall accrue to them. The reasons for not accepting the recommendations have been laid before the State Assembly. The matter should have ended there." ನ್ಯಾಯಾಲಯದ ಈ ಆಶಯವನ್ನೇ ಅನ್ವಯಿಸಿ ಹೇಳುವುದಾದರೆ ಆಯೋಗವು ಸಲ್ಲಿಸಿದ ಅಂತಿಮ ಆಯ್ಕೆ ಪಟ್ಟಿಯಲ್ಲಿರುವವರ ಪೈಕಿ 34 ಜನ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಅಂದಿನ ಸರಕಾರ ನೀಡಿದೆ. ಸಂಬಂಧಪಟ್ಟ ಇಲಾಖೆಗಳ ತರಬೇತಿಯನ್ನೂ ಪಡೆದಿದ್ದಾರೆ. ಇವರು ಒಂದು ವರ್ಷಕ್ಕೂ ಮೇಲ್ಪಟ್ಟು ವೇತನ ಪಡೆದಿದ್ದಾರೆ. ಹೀಗಿರುವಾಗ ಉಚ್ಚ ನ್ಯಾಯಾಲಯವೇ ಹೇಳುವಂತೆ ಇವರಿಗೆ ಮತ್ತು ಇನ್ನುಳಿದವರಿಗೆ ಆಯ್ಕೆಯಾದ ಹುದ್ದೆಗಳನ್ನು ಪಡೆಯಲು ಸಂವಿಧಾನದತ್ತವಾದ ಹಕ್ಕು ಇರಲೇಬೇಕಲ್ಲವೇ?
ಈ ಯುವ ಪ್ರತಿಭೆಗಳಿಗೆ ಆದ ಅನ್ಯಾಯವನ್ನು ಹಿಂದಿನ ಕಾನೂನು ಸಚಿವರಾದ ಮಾಧುಸ್ವಾಮಿಯವರು ನಮ್ಮ ದರ್ಶನಾಶೀರ್ವಾದ ಪಡೆಯಲು ಕಳೆದ ವರ್ಷ ಜನವರಿಯಲ್ಲಿ ಮಠಕ್ಕೆ ಬಂದಾಗ ಸುದೀರ್ಘ ಚರ್ಚೆ ನಡೆಸಿ ಮನವರಿಕೆ ಮಾಡಿಕೊಡಲಾಗಿದೆ. ಈಗಿನ ಕಾನೂನು ಸಚಿವರೂ ಮತ್ತು ಗೃಹ ಸಚಿವರೂ ಆದ ಬಸವರಾಜ ಬೊಮ್ಮಯಿಯವರಿಗೂ ಸಿರಿಗೆರೆಗೆ ಬಂದಾಗ ಮನವರಿಕೆ ಮಾಡಿಕೊಡಲಾಗಿದೆ. ಮುಖ್ಯಮಂತ್ರಿಗಳೊಂದಿಗೂ ದೂರವಾಣಿಯಲ್ಲಿ ಮಾತನಾಡಿ ಗಮನ ಸೆಳೆಯಲಾಗಿದೆ. ಅವರ ನೇತೃತ್ವದಲ್ಲಿರುವ ಈಗಿನ ಸರಕಾರವು ಹಿಂದೆ ಆದ ದೋಷಗಳನ್ನು ಸರಿಪಡಿಸಿ ಕೂಡಲೇ ಈ ಪ್ರತಿಭಾನ್ವಿತರಿಗೆ ನ್ಯಾಯಬದ್ದವಾಗಿ ದೊರೆಯಬೇಕಾದ ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ನೀಡುವುದು. ಕಾನೂನಿನ ಎಡರು ತೊಡರುಗಳು ಏನಾದರೂ ಇದ್ದರೆ ಅವುಗಳನ್ನು ಕೂಡಲೇ ಸರಿಪಡಿಸುವುದು. ಕಾನೂನು ಇರುವುದು ಜನರ ಒಳಿತಿಗಾಗಿ, ಇಲ್ಲದಿದ್ದರೆ 'Law is an ass' (ಕಾನೂನು ಕತ್ತೆ ಇದ್ದಂತೆ) ಅದು ಯಾವ ಕಡೆಗಾದರೂ ಒದೆಯುತ್ತದೆ ಎಂಬ ನಾಣ್ನುಡಿಗೆ ಇಂಬುಮಾಡಿಕೊಟ್ಟಂತೆ ಆಗುತ್ತದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.15-7-2021
ಬಿಸಿಲು ಬೆಳದಿಂಗಳು