ಲೋಕವ್ಯವಹಾರದಲ್ಲಿ 3 ಪ್ರಶ್ನೆಗಳು!

  •  
  •  
  •  
  •  
  •    Views  

ಮೊನ್ನೆ ತಾನೆ ಶಿಷ್ಯರೊಬ್ಬರು ನಮ್ಮ ಮೊಬೈಲಿಗೆ ಒಂದು ಚಿಂತನಾರ್ಹ ಸಂದೇಶವನ್ನು ವಾಟ್ಸಾಪ್ ಮಾಡಿದ್ದರು. ಸಂದೇಶದ ಆರಂಭದಲ್ಲಿ ಆಕರ್ಷಕವಾದ ಒಂದು ಚಿತ್ರವಿತ್ತು: ಆಕಾಶದಲ್ಲಿ ಗರಿಗೆದರಿ ಹಾರಾಡುತ್ತಿರುವ ಒಂದು ಹದ್ದು ಮತ್ತು ಅದರ ಬೆನ್ನ ಮೇಲೆ ಆರಾಮವಾಗಿ ಕುಳಿತು ಸವಾರಿ ಮಾಡುತ್ತಿರುವ ಕಾಗೆ! ಸಂದೇಶದ ಸಾಲುಗಳು ಹೀಗಿವೆ: ಹದ್ದಿನ ಮೇಲೆ ಕುಳಿತುಕೊಳ್ಳಲು ಧೈರ್ಯ ಮಾಡುವ ಏಕೈಕ ಪಕ್ಷಿಯೆಂದರೆ ಕಾಗೆ, ಹದ್ದಿನ ಬೆನ್ನ ಮೇಲೆ ಕುಳಿತು ಕಾಗೆ ಅದರ ಕುತ್ತಿಗೆಯನ್ನು ಕಚ್ಚುತ್ತದೆ. ಆದರೂ ಹದ್ದು ಪ್ರತಿಕ್ರಿಯಿಸುವುದಿಲ್ಲ. ತನ್ನ ರೆಕ್ಕೆಗಳನ್ನು ವಿಶಾಲವಾಗಿ ತೆರೆಯುತ್ತದೆ. ಆಕಾಶದಲ್ಲಿ ಎತ್ತರಕ್ಕೆ ಏರಲು ಪ್ರಾರಂಭಿಸುತ್ತದೆ. ಹೆಚ್ಚಿನ ಎತ್ತರದ ಹಾರಾಟದಿಂದ ಕಾಗೆಗೆ ಉಸಿರುಗಟ್ಟಿದಂತಾಗಿ ಕೆಳಗೆ ಉರುಳಿ ಬೀಳುತ್ತದೆ. ಅವರ ಪ್ರಕಾರ ಇದರ ತಾತ್ಪರ್ಯ ಕಾಗೆಗಳಂತಹ ವ್ಯಕ್ತಿಗಳೊಂದಿಗೆ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ನಿಮ್ಮ ಕೆಲಸಗಳನ್ನು ಇನ್ನಷ್ಟು ಹೆಚ್ಚಿಸಿದರೆ ಅವರೇ ಆಸಹಾಯಕರಾಗುತ್ತಾರೆ. ಆದರೆ ಇಲ್ಲಿ ಒಂದು ಸಂದೇಹ ಮೂಡುತ್ತದೆ. ಸುಮ್ಮನೆ ದಾರಿ ಹಿಡಿದು ಹೋಗುತ್ತಿರುವ ಸಭ್ಯ ಯುವತಿಯನ್ನು ಬೀದಿ ಕಾಮಣ್ಣರು ಚುಡಾಯಿಸಿದರೆ ಏನೂ ಪ್ರತಿಕ್ರಿಯಿಸದೆ ಸುಮ್ಮನೆ ಮುಂದೆ ನಡೆದು ಹೋಗುತ್ತಾಳೆ. ಆದರೆ ಹತ್ತಿರ ಬಂದು ಅಸಭ್ಯ ರೀತಿಯಲ್ಲಿ ವರ್ತಿಸಿದರೆ ಕಾಲಲ್ಲಿರುವುದನ್ನು ಕೈಗೆ ತೆಗೆದುಕೊಳ್ಳುತ್ತಾಳೆ. ದಾರಿಯಲ್ಲಿರುವ ಜನರೂ ಅವರ ಮೇಲೆ ಮುಗಿಬೀಳುತ್ತಾರೆ. ಹಿಡಿದು ಥಳಿಸುತ್ತಾರೆ. ಎಷ್ಟೇ ತಾಳ್ಮೆ ಯಿಂದ ಇದ್ದರೂ ನಿಮ್ಮನ್ನು ನಿಮ್ಮ ಪಾಡಿಗೆ ಇರಲು ಬಿಡದೆ ನಿಮ್ಮ ಮೇಲೆ ಸವಾರಿ ಮಾಡಲು ಬಂದರೆ ಸುಮ್ಮನಿರಲು ಬರುವುದಿಲ್ಲ, 

ಈ ಕೆಲಸವನ್ನು ನೀವು ಬಹಳ ಹಿಂದೆಯೇ ಮಾಡಬೇಕಾಗಿತ್ತು. ತುಂಬಾ ತಡಮಾಡಿದಿರಿ. Better late than never!” ಎಂದು ಕೆಲವು ಸಂದರ್ಭಗಳಲ್ಲಿ ನಿಮ್ಮ ಆಪ್ತರು ಉದ್ಧರಿಸುತ್ತಾರೆ. ಮತ್ತೆ ಕೆಲವೊಮ್ಮೆ, 'ನೀವು ದುಡುಕಿ ಹೀಗೆ ಮಾಡಬಾರದಾಗಿತ್ತು. ತಪ್ಪು. ಮಾಡಿದಿರಿ, ಎಂದು ಆಕ್ಷೇಪಿಸುತ್ತಾರೆ. ಯಾವ ಕೆಲಸ ಯಾವಾಗ ಹೇಗೆ ಮಾಡಿದರೆ ಸರಿ ಎಂದು ನಿರ್ಧರಿಸು ವುದು ಅಷ್ಟು ಸುಲಭವಲ್ಲ. ಇಂದು ಮಾಡಿದ ಕೆಲಸವನ್ನು ಹಿಂದೆಯೇ ಮಾಡಿದ್ದರೆ ಸೈ ಎನಿಸಿಕೊಳ್ಳುತ್ತಿತ್ತು ಎಂದು ಏನು ಖಾತ್ರಿ? ಅಂದಿನ ವಿದ್ಯಮಾನಗಳನ್ನು ಅರಿಯದೆ ಹೇಳುವುದು ಸರಿಯಾಗಲಾರದು. ಯಾವಾಗಲಾದರೂ ಸರಿಯೇ ದುಡುಕಿ ಆವೇಶಕ್ಕೆ ಒಳಗಾಗಿ ಯಾವ ಕಾರ್ಯವನ್ನೂ ಮಾಡಬಾರದು. ತಾಳ್ಮೆ, ಸಹನೆ ಬಹಳ ಮುಖ್ಯ. 'ತಾಳಿದವನು ಬಾಳಿಯಾನು' ಎಂದು ಹಿರಿಯರ ಅನುಭವದಿಂದ ರೂಪುಗೊಂಡ ಗಾದೆ ಮಾತೇ ಇದೆ. 

ಪ್ರಸಿದ್ದ ರಷ್ಯನ್ ಕತೆಗಾರ ಲಿಯನೋವ್ ಟಾಲ್ ಸ್ವಾಯ್ ಬರೆದ ಒಂದು ಅಪರೂಪದ ಕಥೆ ಹೀಗಿದೆ: ಒಬ್ಬ ರಾಜನಿದ್ದ. ಅವನಿಗೆ ರಾಜ್ಯಾಡಳಿತದಲ್ಲಿ ಮೂರು ಪ್ರಶ್ನೆಗಳು ಕಾಡುತ್ತಿದ್ದವು. 1) ಯಾವುದೇ ಕಾರ್ಯವನ್ನು ಯಾವಾಗ ಆರಂಭಿಸುವುದು ಸೂಕ್ತ? 2) ಯಾರ ಸಲಹೆಯನ್ನು ಪಡೆಯುವುದು ಸೂಕ್ತ? 3) ಯಾವುದು ಮುಖ್ಯ ಕೆಲಸವೆಂದು ನಿರ್ಧರಿಸುವುದು ಹೇಗೆ? ಇವು ಮೂರೂ ಸರಿಯಾಗಿ ತಿಳಿದಿದ್ದರೆ ಆಡಳಿತ ಸುಗಮವಾಗಿ ನಡೆಯುತ್ತದೆಯೆಂಬ ಆಶಯ ರಾಜನದಾಗಿತ್ತು. ಸುದೀರ್ಘವಾಗಿ ಆಲೋಚಿಸಿ ಈ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಡಂಗುರ ಸಾರಿಸಿದ. ಅನೇಕರು ಅರಮನೆಗೆ ಧಾವಿಸಿ ಅನೇಕ ರೀತಿಯ ಉತ್ತರಗಳನ್ನು ನೀಡಿದರು. ಮೊದಲನೆಯ ಪ್ರಶ್ನೆಗೆ ಕೆಲವರಿಂದ ಬಂದ ಉತ್ತರ: 1) ವರ್ಷದಲ್ಲಿ ಯಾವ ತಿಂಗಳು, ಯಾವ ದಿನ ಏನು ಕೆಲಸ ಮಾಡಬೇಕೆಂದು ಒಂದು ಕ್ಯಾಲೆಂಡರ್ ಸಿದ್ದಪಡಿಸಿಕೊಂಡು ಅದರಂತೆ ತಪ್ಪದೆ ಮಾಡಿದರೆ ಹಿಡಿದ ಕಾರ್ಯಸಂಪನ್ನಗೊಳ್ಳುತ್ತದೆ. 2) ಯಾವ ಕೆಲಸ ಯಾವಾಗ ಮಾಡಬೇಕೆಂದು  ಮೊದಲೇ ನಿರ್ಧರಿಸಲು ಬರುವುದಿಲ್ಲ, ಆಯಾಯ ದಿನದಂದೇ ಯಾವ ಕೆಲಸವನ್ನು ಮಾಡಿದರೆ ಸೂಕ್ತ ಎಂದು ಆಲೋಚಿಸಿ ಸಮಯವನ್ನು ವ್ಯರ್ಥವಾಗಿ ಕಳೆಯದೆ ಕಾರ್ಯ ನಿರ್ವಹಿಸಬೇಕು. 3) ಎಲ್ಲಿ ಏನು ನಡೆಯುತ್ತಿದೆಯೆಂದು ರಾಜನು ಎಷ್ಟೇ ಗಮನ ಹರಿಸಿದರೂ ಪ್ರತಿಯೊಂದು ಕೆಲಸವನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ನಡೆಯುವಂತೆ ನಿರ್ಧರಿಸಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಆದಕಾರಣ ರಾಜನು ಅನುಭವಿಗಳ ಒಂದು ಸಮಿತಿಯನ್ನು ರಚಿಸಿ ಅವರಿಂದ ಸಲಹೆ ಪಡೆದು ಯಾವ ಕೆಲಸವನ್ನು ಯಾವಾಗ ಮಾಡಬೇಕೆಂದು ಸೂಕ್ತ ಕಂಡಂತೆ ನಿರ್ಧರಿಸಬೇಕು. 4) ರಾಜನು ಎಲ್ಲ ವಿಚಾರಗಳನ್ನು ಅನುಭವಿಗಳ ಸಮಿತಿಯ ಮುಂದಿಟ್ಟು ಅವರ ಸಲಹೆ ಸೂಚನೆಗಳಿಗಾಗಿ ಕಾಯುತ್ತಾ ಕುಳಿತಿರಲು ಆಗುವುದಿಲ್ಲ. ಕೆಲವೊಮ್ಮೆ ರಾಜನು ಸ್ವತಃ ಆಲೋಚನೆ ಮಾಡಿ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಯಾವುದೇ ಕೆಲಸ ಮಾಡಲು ಅಥವಾ ಬಿಡಲು ಮುಂದೆ ಏನಾಗಬಹುದೆಂಬ ಪರಿಜ್ಞಾನ ರಾಜನಿಗೆ ಇರಬೇಕಾಗುತ್ತದೆ. ಈ ಜ್ಞಾನ ಜೋತಿಷಿಗಳಿಗೆ ಇರುವುದರಿಂದ ಅವರನ್ನು ಕೇಳಿ ನಿರ್ಧರಿಸುವುದು ಒಳ್ಳೆಯದು. ಇನ್ನು ಯಾರ ಸಲಹೆ ಪಡೆಯುವುದು ಸೂಕ್ತ ಎಂಬ ಎರಡನೆಯ ಪ್ರಶ್ನೆಗೆ ಬಂದ ಉತ್ತರ: ಮಂತ್ರಿಗಳು, ಪುರೋಹಿತರು, ವೈದ್ಯರು ಮತ್ತು ಯೋಧರು. ಯಾವುದು ಮುಖ್ಯವಾದ ಕೆಲಸ ಎಂಬ ಮೂರನೆಯ ಪ್ರಶ್ನೆಗೆ ಬಂದ ಉತ್ತರ: ವಿಜ್ಞಾನ, ಯುದ್ದ ದೇವರ ಪೂಜೆ. ಈ ಯಾವ ಉತ್ತರದಿಂದಲೂ ತೃಪ್ತನಾಗದ ಆ ರಾಜ ಯಾರಿಗೂ ಬಹುಮಾನ ಕೊಡಲಿಲ್ಲ ಸಲಹೆ ಕೊಟ್ಟವರು ನಿರಾಸೆಯಿಂದ ಹಿಂದಿರುಗಿದರು. 

ರಾಜನು ತನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಪಡೆಯಲು ಕಾಡಿನಲ್ಲಿದ್ದ ಒಬ್ಬ ಋಷಿಯ ಹತ್ತಿರ ಹೋಗಲು ನಿರ್ಧರಿಸಿ ಹೊರಟ. ಋಷಿಯ ಕುಟೀರ ಕಾಣಿಸುತ್ತಿದ್ದಂತೆ ಕುದುರೆಯಿಂದ ಕೆಳಗಿಳಿದು, ಪೋಷಾಕನ್ನು ಬದಲಾಯಿಸಿ ಸರಳವಾದ ವಸ್ತ್ರಗಳನ್ನು ಧರಿಸಿ ಒಬ್ಬನೇ ಋಷಿಯ ಹತ್ತಿರ ಬಂದ, ಹಿರಿಯ ವಯಸ್ಸಿನ ಋಷಿ ತನ್ನ ಕುಟೀರದ ಮುಂದೆ ನೆಲ ಬಗೆಯುತ್ತಿದ್ದ ರಾಜನು ಆ ಋಷಿಗೆ ನಮಸ್ಕರಿಸಿ ಮೂರು ಪ್ರಶ್ನೆಗಳನ್ನು ಕೇಳಿದ. ಋಷಿ ಯಾವ ಉತ್ತರವನ್ನೂ ಕೊಡಲಿಲ್ಲ, ಕೃಶಕಾಯನಾದ ಆ ಋಷಿಯು ಪ್ರತಿಸಾರಿ ಸಲಿಕೆಯಿಂದ ನೆಲವನ್ನು ಅಗೆಯುವಾಗ ಏದುಸಿರು ಬಿಡುತ್ತಿದ್ದ. ಅದನ್ನು ನೋಡಿ ಮರುಕಗೊಂಡ ರಾಜ, ಋಷಿಯ ಕೈಯಲ್ಲಿದ್ದ ಸಲಿಕೆ ತೆಗೆದುಕೊಂಡು ಭೂಮಿಯನ್ನು ಅಗೆಯತೊಡಗಿದ. ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಲು ಋಷಿ ಹೇಳಿದರೂ ಕೇಳದೆ ರಾಜ ಸಲಿಕೆ ಕೆಲಸವನ್ನು ಮುಂದುವರಿಸಿದ. ಸಂಜೆಯ ಮಬ್ಬುಗತ್ತಲು ಆವರಿಸುತ್ತಿದ್ದಂತೆ ನಿಲ್ಲಿಸಿ, ತನ್ನ ಮೂರು ಪ್ರಶ್ನೆಗಳಿಗೆ ಉತ್ತರ ಕೊಡುವಂತೆ ನಿವೇದಿಸಿಕೊಂಡ. ಋಷಿ ಆಗಲೂ ಉತ್ತರಿಸಲಿಲ್ಲ. ಅಷ್ಟರಲ್ಲಿ ಯಾರೋ ಕುಟೀರದತ್ತ ಓಡಿ ಬರುತ್ತಿರುವುದು ಕಾಣಿಸಿತು. ಹತ್ತಿರ ಬರುತ್ತಿದ್ದಂತೆಯೇ ಆ ಗಡ್ಡಧಾರಿ ವ್ಯಕ್ತಿ ತನ್ನ ಹೊಟ್ಟೆಯನ್ನು ಅದುಮಿ ಹಿಡಿದುಕೊಂಡಿದ್ದು ಗಾಯಗೊಂಡಿದ್ದ ಹೊಟ್ಟೆಯಿಂದ ರಕ್ತ ಸೋರುತ್ತಿತ್ತು! ಕ್ಷಣಾರ್ಧದಲ್ಲಿ ಆ ಅಪರಿಚಿತ ವ್ಯಕ್ತಿ ಮೂರ್ಛೆ ಹೋದ. ಕೂಡಲೇ ರಾಜ ತನ್ನ ಅಂಗವಸ್ತ್ರದಿಂದ ಬ್ಯಾಂಡೇಜು ಕಟ್ಟಿ ರಕ್ತ ಸೋರದಂತೆ ತಡೆಗಟ್ಟಿದ. ಆ ವ್ಯಕ್ತಿ ಸ್ವಲ್ಪ ಹೊತ್ತಿನಲ್ಲಿಯೇ ಎಚ್ಚರಗೊಂಡು ಕುಡಿಯಲು ನೀರು ಕೇಳಿದ. ಅವನಿಗೆ ನೀರು ಕುಡಿಸಿ ಕುಟೀರದೊಳಗೆ ಎತ್ತಿಕೊಂಡು ಹೋಗಿ ಮಲಗಿಸಿದ. ದಿನವೆಲ್ಲಾ ಕೆಲಸ ಮಾಡಿ ಬಳಲಿದ್ದ ರಾಜನೂ ಮಲಗಿ ನಿದ್ರೆಗೆ ಜಾರಿದ. ಮಾರನೆಯ ಬೆಳಗ್ಗೆ ಎದ್ದಾಗ ಆ ಗಡ್ಡಧಾರಿ ವ್ಯಕ್ತಿ ಕೈ ಜೋಡಿಸಿ ರಾಜನ ಕ್ಷಮೆ ಯಾಚಿಸಿದ. “ನೀನು ಯಾರೋ ನನಗೆ ಗೊತ್ತಿಲ್ಲ, ಮಾನವೀಯತೆಯಿಂದ ನಾನು ಮಾಡಿದ ಅಲ್ಪ ಸಹಾಯಕ್ಕಾಗಿ ನೀನೇಕೆ ಕ್ಷಮೆ ಕೇಳುತ್ತೀಯಾ? ಎಂದು ರಾಜ ಕೇಳಿದ. ವಾಸ್ತವವಾಗಿ ಗಡ್ಡಧಾರಿ ವ್ಯಕ್ತಿ ರಾಜನ ಶತ್ರುವಾಗಿದ್ದ. ಆತನ ಸಹೋದರನನ್ನು ರಾಜ ಕೊಂದಿದ್ದ ಅದಕ್ಕಾಗಿ ನೀಡು ತೀರಿಸಿಕೊಳ್ಳಲು ರಾಜನನ್ನು ಮರೆಯಲ್ಲಿ ಬೆನ್ನು ಹತ್ತಿ ಕಾಡಿಗೆ ಬಂದಿದ್ದ, ರಾಜ ಕುದುರೆಯಿಂದ ಇಳಿದು ಕುಟೀರದತ್ತ ಹೋದಾಗ ಗಿಡಮರಗಳ ಪೊದೆಯಲ್ಲಿ ಅಡಗಿ ಕುಳಿತಿದ್ದ ಅವನನ್ನು ಗುರುತಿಸಿ ರಾಜನ ಅಂಗರಕ್ಷಕ ಬಾಣ ಹೊಡೆದು ಗಾಯಗೊಳಿಸಿದ್ದ. “ನಾನು ನಿನ್ನನ್ನು ಕೊಲ್ಲಲು ಬಂದಿದ್ದೆ. ಆದರೆ ನೀನು ನನ್ನ ಪ್ರಾಣ ಉಳಿಸಿದೆ! ನನ್ನ ಪ್ರಾಣ ಇರುವವರೆಗೂ ನಿನ್ನ ಸೇವೆ ಮಾಡುತ್ತೇನೆ, ಎಂದು ಹೇಳಿ ಗಡ್ಡಧಾರಿ ವ್ಯಕ್ತಿ ಗಳಗಳನೆ ಅಳುತ್ತಾ ಮತ್ತೊಮ್ಮೆ ಕ್ಷಮೆ ಯಾಚಿಸಿದ. 

ರಾಜನು ಕುಟೀರದಿಂದ ಹಿ೦ದಿರುಗುವಾಗ ಋಷಿಯನ್ನು ಕಂಡು, “ಈಗಲಾದರೂ ನನ್ನ ಮೂರು ಪ್ರಶ್ನೆಗಳಿಗೆ ಉತ್ತರ ದಯಪಾಲಿಸಿ,” ಎಂದು ಬೇಡಿಕೊಳ್ಳುತ್ತಾನೆ. ""ಈಗಾಗಲೇ ನಿನಗೆ ಉತ್ತರ ಸಿಕ್ಕಿದೆಯಲ್ಲಾ! ಎಂದು ಋಷಿ ಹೇಳುತ್ತಾನೆ. 'ಎಲ್ಲಿ ಯಾವಾಗ, ಹೇಗೆ?' ಎಂದು ರಾಜ ಕೇಳಿದಾಗ ಋಷಿ ವಿವರಿಸುತ್ತಾನೆ: 1) ನೀನು ನನ್ನ ಆಶ್ರಮಕ್ಕೆ ಬಂದಾಗ ನಿಶಕ್ತನಾದ ನನ್ನ ಮೇಲೆ ಅನುಕಂಪ ತೋರಿ ನನ್ನ ಕೈಯಲ್ಲಿದ್ದ ಸಲಿಕೆ ಪಡೆದುಕೊಂಡು ಭೂಮಿಯನ್ನು ಅಗೆದು ನನಗೆ ಸಹಾಯ ಮಾಡಿದ್ದು ಬಹಳ ಮುಖ್ಯವಾದ ಸಮಯ. 2) ನೀನು ರಾಜನಾಗಿದ್ದರೂ ಸಾಮಾನ್ಯ ಪ್ರಜೆಯಾದ ನನ್ನನ್ನು ಪ್ರಮುಖವಾದ ವ್ಯಕ್ತಿಯೆಂದು ಗುರುತಿಸಿದ್ದೆ. 3) ಶಾರೀರಿಕವಾಗಿ ದುರ್ಬಲನಾಗಿದ್ದ ನನಗೆ ಸಹಾಯ ಮಾಡುವುದು ನಿನ್ನ ದೃಷ್ಟಿಯಲ್ಲಿ ಪ್ರಮುಖವಾದ ಕೆಲಸವಾಗಿದ್ದು ನಂತರ ಈ ಗಡ್ಡಧಾರಿ ವ್ಯಕ್ತಿ ಗಾಯಗೊಂಡು ರಕ್ತ ಬಸಿಯುತ್ತಾ ಇದ್ದಾಗ 1) ನೀನು ಅನುಕಂಪೆ ತೋರಿ ಗಾಯಗೊಂಡ ಇವನ ಹೊಟ್ಟೆಗೆ ಬ್ಯಾಂಡೇಜು ಕಟ್ಟಿ ರಕ್ತ ಸುರಿಯದಂತೆ ಮಾಡಿದ ಸಮಯ ತುಂಬಾ ಅಮೂಲ್ಯವಾದದ್ದು. ಹಾಗೆ ಮಾಡದಿದ್ದರೆ ಈತ ಸತ್ತು ಹೋಗುತ್ತಿದ್ದ. 2) ನೀನು ರಾಜನಾಗಿದ್ದರೂ ಈ ಅಪರಿಚಿತ ವ್ಯಕ್ತಿಯನ್ನು ಪ್ರಮುಖವಾದ ವ್ಯಕ್ತಿಯಾಗಿ ಗುರುತಿಸಿದ್ದೆ. 3) ಈತನನ್ನು ಪ್ರಾಣಾಪಾಯದಿಂದ ಪಾರು ಮಾಡುವುದು ನಿನ್ನ ದೃಷ್ಟಿಯಲ್ಲಿ, ಪ್ರಮುಖವಾದ ಕೆಲಸವಾಗಿತ್ತು! ಕೊನೆಯದಾಗಿ, 1) ಅತ್ಯಂತ ಅಮೂಲ್ಯವಾದ ಸಮಯವೆಂದರೆ ಇಂದು, ಈ ಕ್ಷಣ, 2) ಅತ್ಯಂತ ಪ್ರಮುಖವಾದ ವ್ಯಕ್ತಿಗಳು ಎಂದರೆ ಈ ಕ್ಷಣದಲ್ಲಿ ನಿನ್ನ ಹತ್ತಿರ ಇರುವವರು, 3) ಅತ್ಯಂತ ಪ್ರಮುಖವಾದ ಕೆಲಸವೆಂದರೆ ಇತರರಿಗೆ ಸಹಾಯ ಮಾಡುವುದು. ಇದು ಸದಾ ನಿನ್ನ ನೆನಪಿನಲ್ಲಿರಲಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.26-8-2021
ಬಿಸಿಲು ಬೆಳದಿಂಗಳು