ಗುರುಗಳಿಗೆ ಶುಭಾಶಯ ಕೋರುವುದು ಸರಿಯೇ?

  •  
  •  
  •  
  •  
  •    Views  

ವಿಜ್ಞಾನ ಆವಿಷ್ಕಾರಗೊಂಡಂತೆ ದೈನಂದಿನ ಜೀವನದಲ್ಲಿ ವೈಜ್ಞಾನಿಕ ಉಪಕರಣಗಳು, ಸಲಕರಣೆಗಳು ಬದಲಾವಣೆಯಾಗುತ್ತಾ ಹೋಗುತ್ತವೆ. ಹೆಚ್ಚಿನ ಸೌಲಭ್ಯ ನೀಡುವ ಹೊಸ ಉಪಕರಣಗಳು ಬಂದಂತೆ ಹಳೆಯ ಉಪಕರಣಗಳು ಮೂಲೆಗುಂಪಾಗುತ್ತಾ ಹೋಗುತ್ತವೆ. ಹೊಸ ಉಪಕರಣಗಳ ಬಳಕೆ ಹೆಚ್ಚಿದಂತೆ ಆಕರ್ಷಕವಾದ ಹೊಸ ಮಾಡೆಲ್ ಗಳು ಹುಟ್ಟಿಕೊಳ್ಳುತ್ತವೆ. ತಾಂತ್ರಿಕತೆ ಒಂದೇ ಆದರೂ ಉಪಕರಣಗಳ ವಿನ್ಯಾಸಗಳು ಜನರನ್ನು ಆಕರ್ಷಿಸುತ್ತವೆ. ಇವೆಲ್ಲಾವಿಜ್ಞಾನಿಗಳ ಸತತ ಪರಿಶ್ರಮದ ಸತ್ಪಲಗಳು. ಮೊದಲು ಮೂಕಿ ಸಿನೆಮಾಗಳು, ನಂತರ ಕಪ್ಪು ಬಿಳುಪಿನ ಟಾಕಿ ಸಿನೆಮಾಗಳು, ತದನಂತರ ಬಣ್ಣ ಬಣ್ಣದ ಸಿನೆಮಾಗಳು, ಈಗ ಅನಿಮೇಶನ್ ಮೂಲಕ ಅದ್ಭುತ ದೃಶ್ಯಾವಳಿಯುಳ್ಳ ವರ್ಣರಂಜಿತ ಸಿನೆಮಾಗಳು. ಹೀಗೆ ತಂತ್ರಜ್ಞಾನ ಮುಂದುವರಿದಂತೆ ಹಳೆಯವು ಮರೆಯಾಗಿ ಹೊಸ ಹೊಸವು ಮುನ್ನೆಲೆಗೆ ಬರುತ್ತವೆ. ಟೇಪ್ ರೆಕಾರ್ಡ್ಗಳು, ಫೋಟೋ/ ಮೂವಿ ಕ್ಯಾಮೆರಾಗಳು ಮೂಲೆಗೆ ಸೇರಿರಬಹುದು. ಆದರೆ ಧನಿ ಸಂಗ್ರಹಣೆ, ಚಿತ್ರೀಕರಣ ನಿಂತಿಲ್ಲ. ಟೇಪ್ ರೆಕಾರ್ಡರ್/ ಕ್ಯಾಮೆರಾಗಳ ಕೆಲಸವನ್ನು ಈಗ ಕೈಯಲ್ಲಿರುವ ಮೊಬೈಲ್ ಫೋನ್ ಗಳೇ ನಿರಂತರವಾಗಿ ಮಾಡುತ್ತಿವೆ! ಫೋಟೊ ತೆಗೆಸಿಕೊಳ್ಳಲು ಸ್ಟುಡಿಯೋಗೆ ಹೋಗಬೇಕಾಗಿಲ್ಲ. ಲ್ಯಾಬ್ನಲ್ಲಿ ನೆಗೆಟಿವ್ನಿಂದ ಫೋಟೊ ಮುದ್ರಿಸಿ ಕೊಡಲು ಕಾಯಬೇಕಾಗಿಲ್ಲ. ಹಿಂದೆ ದೊಡ್ಡ ದೊಡ್ಡ ಗಾತ್ರದ ಅನೇಕ ಉಪಕರಣಗಳು ಮಾಡುತ್ತಿದ್ದ ಕೆಲಸವನ್ನು ಈಗ ಚಿಕ್ಕದಾದ ಒಂದೇ ಉಪಕರಣ (All in one) ಕ್ಷಣಾರ್ಧದಲ್ಲಿ ಮಾಡುತ್ತದೆ. 

ವಿಜ್ಞಾನವು ಎಷ್ಟೇ ಮುಂದುವರಿಯಲಿ, ಹಳೆಯವು ಎಷ್ಟೇ ಚಲಾವಣೆ ಕಳೆದುಕೊಳ್ಳುತ್ತಾ ಸಾಗಲಿ, ಅಭಿವ್ಯಕ್ತಿಯ ಸ್ವರೂಪ ಬದಲಾಗುತ್ತಾ ಸಾಗುತ್ತದೆಯೇ ಹೊರತು ಭಾವನೆಗಳು ಬದಲಾಗುವುದಿಲ್ಲ; ಅವು ನವನವೀನ! ವಿಜ್ಞಾನದ ಆವಿಷ್ಕಾರವು ನಮ್ಮ ಭಾವನೆಗಳ ಬಾಹ್ಯ ಅಭಿವ್ಯಕ್ತಿಗೆ ಹೊಸ ಹೊಸ ಮಾಧ್ಯಮವನ್ನು ಕಲ್ಪಿಸಿಕೊಡುತ್ತದೆ. ಉದಾಹರಣೆಗೆ ಶುಭಾಶಯ ಕೋರುವುದು ನಿಮಗೇನೂ ಹೊಸದಲ್ಲ, ಗೆಳೆಯರಿಗೆ, ನೆಂಟರಿಷ್ಟರಿಗೆ ಅನೇಕ ಸಂದರ್ಭಗಳಲ್ಲಿ ಶುಭಾಶಯ ಕೋರುತ್ತೀರಿ. ಅದೊಂದು ಶಿಷ್ಟಾಚಾರ, ದೀಪಾವಳಿ, ಯಗಾದಿ, ಕ್ರಿಸ್ಮಸ್, ಮೊಹರಂ ಇತ್ಯಾದಿ ಹಬ್ಬ ಹುಣ್ಣಿಮೆ, ಜನುಮ ದಿನ, ವಿವಾಹ, ಚುನಾವಣೆಯಲ್ಲಿ ಜಯಭೇರಿ, ನೌಕರಿಯಲ್ಲಿ ಬಡ್ತಿ ಇತ್ಯಾದಿ ನಾನಾ ಸಂದರ್ಭಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿಯುತ್ತದೆ. ಹಿಂದೆ ಶುಭಾಶಯ ಕೋರಲು ಟೆಲಿಗ್ರಾಂ ಬಳಸುತ್ತಿದ್ದ ಕಾಲವಿತ್ತು. ಅಂಚೆ ಕಚೇರಿಯಲ್ಲಿ ಶುಭಾಶಯಗಳಿಗೆ ನಿರ್ದಿಷ್ಟವಾದ ಕೋಡ್ ಗಳು ಇರುತ್ತಿದ್ದವು. ಆ ಕೋಡ್ ಸಂಖ್ಯೆ ನಮೂದಿಸಿದರೆ ಸಾಕು ಸಂಬಂಧಪಟ್ಟ ಶುಭಾಶಯದ ಸಂದೇಶ ರವಾನೆಯಾಗುತ್ತಿತ್ತು. ಇದೇ ರೀತಿ ಹಬ್ಬ ಹುಣ್ಣಿಮೆಗಳಲ್ಲಿ ವರ್ಣರಂಜಿತ ಗ್ರೀಟಿಂಗ್ ಕಾರ್ಡುಗಳನ್ನು ಅಂಚೆಯಲ್ಲಿ ಕಳಿಸುವ ಪದ್ಧತಿಯಿತ್ತು. ಇವೆಲ್ಲ ಈಗಿನ ಯುವಪೀಳಿಗೆಗೆ ಗೊತ್ತಿರದ ಸಂಗತಿಗಳು. ಈಗ ಸಾಮಾಜಿಕ ಜಾಲತಾಣಗಳು ಈ ಕೆಲಸಕ್ಕೆ ಬಳಕೆಯಾಗುತ್ತಿವೆ. ನಿಮಗಿಷ್ಟವಾದ ಸಂದೇಶಗಳನ್ನು ಆಕರ್ಷಕ ಚಿತ್ರಗಳ ಸಹಿತ, ಪ್ರಪಂಚದ ಯಾವ ಮೂಲೆಯಲ್ಲಾದರೂ ಇರುವವರಿಗೆ, ಇಷ್ಟವಾದ ಎಷ್ಟು ಜನರಿಗೆ ಬೇಕಾದರೂ ಕ್ಷಣಾರ್ಧದಲ್ಲಿ ಕಳುಹಿಸಬಹುದಾಗಿದೆ. ಹಿಂದಿನಂತೆ ಅಂಚೆ ಚೀಟಿಯನ್ನು ಖರೀದಿಸುವ ಪ್ರಮೇಯವೇ ಇಲ್ಲ. ಬಿಡಿಗಾಸಿನ ವೆಚ್ಚವಿಲ್ಲದೆ ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ನಡೆದುಹೋಗುತ್ತವೆ! ಇಂತಹ ಸಂದೇಶಗಳು ಆತ್ಮೀಯರ ಮನೋಲ್ಲಾಸಕ್ಕೆ ಒಂದೆಡೆ ಕಾರಣವಾದರೆ ಮತ್ತೊಂದೆಡೆ ಈ ಸಾಮಾಜಿಕ ಜಾಲತಾಣಗಳು ಇತ್ತೀಚೆಗೆ ತಮಗಾಗದವರ ತೇಜೋವಧೆ ಮಾಡಲೂ ದುರ್ಬಳಕೆಯಾಗುತ್ತಿವೆ ಎಂಬುದು ವಿಷಾದದ ಸಂಗತಿ. 

ಶುಭಾಶಯಗಳನ್ನು ಕಳುಹಿಸುವುದು ಶಿಷ್ಟಾಚಾರದ ಭಾಗವಾದರೂ ಕೆಲವೊಮ್ಮೆ ಅವುಗಳನ್ನು ಕಳುಹಿಸುವ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಮರೆವೂ ಗೋಚರಿಸುತ್ತದೆ. ನಾಲ್ಕು ದಶಕಗಳ ನಮ್ಮ ಸಾರ್ವಜನಿಕ ಜೀವನದಲ್ಲಿ ನಮಗೆ ಜನ್ಮ ದಿನಾಂಕದಂದು ಶುಭ ಹಾರೈಕೆಗಳು ಬರುತ್ತಿದ್ದುದು ಪಾಶ್ಚಾತ್ಯ ದೇಶಗಳಲ್ಲಿರುವ ನಮ್ಮ ಆತ್ಮೀಯ ಮಿತ್ರರಿಂದ ಮಾತ್ರ. ಬಹುಪಾಲು ಶಿಷ್ಯರಿಗೆ ನಮ್ಮ ಜನ್ಮದಿನಾಂಕವೇ ಗೊತ್ತಿರಲಿಲ್ಲ. ಇತ್ತೀಚೆಗೆ ಅನೇಕ ಶಿಷ್ಯರಿಂದ ಮತ್ತು ಅಭಿಮಾನಿಗಳಿಂದ ಶುಭಹಾರೈಕೆಗಳು ಹೇರಳವಾಗಿ ಬರಲಾರಂಭಿಸಿವೆ. ಕಳೆದ ಗುರುಪೂರ್ಣಿಮಾ ಮತ್ತು ಶಿಕ್ಷಕರ ದಿನಾಚರಣೆಯಂದು ನಮಗೆ ಅನೇಕ ಯುವಕರಿಂದ ಶುಭಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ. ಬಹಳ ಹಿಂದೆ ಹಿರಿಯ ತಲೆಮಾರಿನ ಶಿಷ್ಯರೊಬ್ಬರು ನಮ್ಮ ಜನ್ಮದಿನವನ್ನು ಬಹಿರಂಗವಾಗಿ ಆಚರಿಸಲು ಉತ್ಸುಕತೆ ವ್ಯಕ್ತಪಡಿಸಿದಾಗ ಒಪ್ಪದೆ ಅದನ್ನು ತಡೆಗಟ್ಟಿದ್ದು ಬಹುಪಾಲು ಶಿಷ್ಯರಿಗೆ ಗೊತ್ತಿಲ್ಲ. ಕೌಟುಂಬಿಕ ಸಂಬಂಧಗಳನ್ನು ತೊರೆದು ಮಠದ ಸ್ವಾಮಿಗಳಾದವರಿಗೆ ಶಿಷ್ಯರು ಹೀಗೆ ಶುಭಹಾರೈಕೆಗಳನ್ನು ಕಳುಹಿಸುವುದು ಸರಿಯೇ? ಎಂಬ ಪ್ರಶ್ನೆ ನಮ್ಮನ್ನು ಬಹಳ ವರ್ಷಗಳಿಂದ ಕಾಡಿಸುತ್ತಾ ಬಂದಿದೆ. ಭಕ್ತರ ಹೃದಯದಲ್ಲಿರುವ ಭಕ್ತಿಭಾವನೆಗಳು ಪ್ರಶ್ನಾತೀತವಾದರೂ ಆಳವಾಗಿ ಚಿಂತಿಸಿದಾಗ ಕಂಡುಬರುವ ವ್ಯತ್ಯಾಸವೆಂದರೆ ಅಭಿನಂದನೆ ಬೇರೆ, ಅಭಿವಂದನೆ ಬೇರೆ, ಇವೆರಡರ ಹಿಂದಿರುವ ಭಾವನೆಯ ಸ್ತರಗಳು ವಿಭಿನ್ನ. 70ರ ದಶಕದಲ್ಲಿ ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ನಮ್ಮ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು 750 ಜನ ಶಿಷ್ಯರೊಂದಿಗೆ ವಿಶೇಷ ರೈಲಿನಲ್ಲಿ ಉತ್ತರಭಾರತ ಪ್ರವಾಸ ಕೈಗೊಂಡು ಕಾಶಿಗೆ ದಯಮಾಡಿಸಿದ್ದರು. 30ರ ದಶಕದಲ್ಲಿ ಅವರಿಗೆ ಸಂಸ್ಕೃತ ಪಾಠ ಮಾಡಿದ್ದ ಪಂಡಿತರಾದ ಗೌರೀನಾಥ್ ಪಾಠಕ್ ರವರು ಇನ್ನೂ ಬದುಕಿದ್ದರು. ಜೊತೆಗೆ ಬಂದಿದ್ದ ಅನೇಕ ಶಿಷ್ಯರು ಕಾಶೀ ವಿಶ್ವನಾಥನ ದರ್ಶನಕ್ಕೆಂದು ಧಾವಿಸಿದರೆ ನಮ್ಮ ಗುರುವರ್ಯರು ತಮ್ಮ ವಿದ್ಯಾಗುರುಗಳಾದ ಪಾಠಕರ ದರ್ಶನಕ್ಕೆಂದು ಅವರ ನಿವಾಸಕ್ಕೆ ದಯಮಾಡಿಸಿದರು. ಜ್ಞಾನವೃದ್ದರೂ ವಯೋವೃದ್ಧರೂ ಆದ ಪಾಠಕ್ರವರನ್ನು ನೋಡುತ್ತಿದ್ದಂತೆಯೇ ಒಂದು ಮಠದ ಸ್ವಾಮಿಗಳಾಗಿ ಅವರನ್ನು ಆಶೀರ್ವದಿಸಲು ಮುಂದಾಗದೆ, ಭಾವುಕರಾಗಿ ಅವರ ಪದತಲದಲ್ಲಿ ತಲೆಬಾಗಿ ನಮಸ್ಕರಿಸಿದ ದೃಶ್ಯ ನಮ್ಮ ಕಣ್ಮುಂದೆ ಈಗಲೂ ಅಚ್ಚ ಹಸಿರಾಗಿದೆ. ಪಂಡಿತರು ಅವರ ಕೈಹಿಡಿದು ಮೇಲೆತ್ತಿ ನಮ್ಮತ್ತ ತಿರುಗಿ 'ಗುರು ಗುಡ್ ಹೈ, ಶಿಷ್ಯ ಚೀನೀ!' (ಗುರುವು ಬೆಲ್ಲ, ಶಿಷ್ಯ ಸಕ್ಕರೆ!) ಎಂದು ನಮ್ಮ ಗುರುಗಳ ಪ್ರತಿಭೆಯನ್ನು ಕುರಿತು ಆಡಿದ ಪ್ರಶಂಸೆಯ ಮಾತು ಶಿಷ್ಯಾದಿಚ್ಛೇತ್ | ಪರಾಜಯಮ್' (ಗುರುವಾದವನು ಶಿಷ್ಯನಿಂದ ಪರಾಜಯವನ್ನು ಬಯಸಬೇಕು) ಎಂಬ ಸೂಕ್ತಿಯನ್ನು ನಮ್ಮ ನೆನಪಿಗೆ ತಂದುಕೊಟ್ಟಿತು. 

ಗುರುಪೂರ್ಣಿಮೆಗೂ ಶಿಕ್ಷಕರ ದಿನಾಚರಣೆಗೂ ಏನು ವ್ಯತ್ಯಾಸ? ಎಂದು ಕೇಳಿದರೆ ಗುರುವಿಗೂ ಶಿಕ್ಷಕನಿಗೂ ಏನು ವ್ಯತ್ಯಾಸ ಎಂದು ಕೇಳಿದಂತೆ. ಶಿಕ್ಷಕನು ಶಿಕ್ಷಾಗುರುವಾದರೆ ಗುರುವು ದೀಕ್ಷಾಗುರು. ಶಿಕ್ಷಕನು ವಿದ್ಯಾರ್ಥಿಯ ಬೌದ್ಧಿಕ ವಿಕಾಸಕ್ಕೆ ಕಾರಣನಾದರೆ, ಗುರುವು ಶಿಷ್ಯನ ಆತೋನ್ನತಿಗೆ ಕಾರಣನಾಗುತ್ತಾನೆ. ಒಬ್ಬನೇ ವ್ಯಕ್ತಿ ಕೆಲವೊಮ್ಮೆ ಶಿಕ್ಷಕನೂ ಆಗಬಹುದು ಗುರುವೂ ಆಗಬಹುದು. ವಿದ್ಯೆಯಲ್ಲಿ ಎರಡು ವಿಧ: ಒಂದು ಲೌಕಿಕ ಮತ್ತೊಂದು ಪಾರಲೌಕಿಕ. ಶಿಕ್ಷಕನು ಕಲಿಸಿಕೊಡುವುದು ಲೌಕಿಕ ವಿದ್ಯೆಯಾದರೆ, ಗುರುವು ಕಲಿಸಿ ಹೊಡುವುದು ಪಾರಲೌಕಿಕ ವಿದ್ಯೆ. 'ಸಾ ವಿದ್ಯಾ ಯಾ ವಿಮುಕ್ತಯೇ' (ಯಾವುದು ಮುಕ್ತಿಯನ್ನು ದೊರಕಿಸಿಕೊಡುತ್ತದೆಯೋ ಅದೇ ನಿಜವಾದ ವಿದ್ಯೆ) ಎನ್ನುತ್ತದೆ ವಿಷ್ಣುಪುರಾಣ. 'ವಿದ್ಯೆಯಾ ಅಮೃತಮಶ್ನುತೇ' (ವಿದ್ಯೆಯಿಂದ ಅಮರತ್ವ ದೊರೆಯುತ್ತದೆ) ಎನ್ನುತ್ತದೆ ಈಶಾವಾಸ್ಕೋಪನಿಷತ್. ನರಜನ್ಮವ ತೊಡೆದು ಹರಜನ ಮಾಡುವ, ಭವಬಂಧನವ ಬಿಡಿಸಿ ಪರಮಸುಖವ ತೋರುವ ಗುರುವನ್ನು ಬಯಸಿ ಮಠಕ್ಕೆ ಬರುವ ಶಿಷ್ಯರು ಬಹಳ ಕಡಿಮೆ. 

ಸಿಖ್ ಧರ್ಮಗುರುಗಳಾದ ಗುರುನಾನಕ್ ಹೇಳಿದ ಒಂದು ಅಪರೂಪದ ಕಥಾನಕ ಹೀಗಿದೆ. ಒಮ್ಮೆ ಗುರುನಾನಕರು ಒಂದು ಹಳ್ಳಿಗೆ ಹೋದರು. ಅಲ್ಲಿ ಭೂಮಿ ಢಾಕು ಎಂಬ ಒಬ್ಬ ಕುಖ್ಯಾತ ಕಳ್ಳನಿದ್ದ. ಅವನು ಗುರುನಾನಕರನ್ನು ತನ್ನ ಮನೆಗೆ ಬರುವಂತೆ ನಿವೇದಿಸಿಕೊಂಡ. ನಾನಕರು ಆ ಕಳ್ಳನ ಮೇಲೆ ಕರುಣೆ ತೋರಿ ಬರುವುದಾಗಿ ಒಪ್ಪಿದರು. ಆದರೆ ನಾಲ್ಕು ಷರತ್ತುಗಳನ್ನು ವಿಧಿಸಿದರು: 1) ಬಡವರ ಮನೆಯಲ್ಲಿ ಕಳ್ಳತನ ಮಾಡಬಾರದು, 2) ಇಂದಿನಿಂದ ನೀನು ಸತ್ಯವನ್ನೇ ಹೇಳಬೇಕು, 3) ಯಾರದಾದರೂ ಮನೆಗೆ ಹೋದಾಗ ಏನಾದರೂ ತಿಂದರೆ ಆ ಮನೆಯಲ್ಲಿ ಕಳ್ಳತನ ಮಾಡಬಾರದು, 4) ನೀನು ಮಾಡಿದ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸಬಾರದು. ಈ ಎಲ್ಲ ಷರತ್ತುಗಳಿಗೆ ಕಳ್ಳನು ಒಪ್ಪಿ ನಾನಕರನ್ನು ತನ್ನ ಮನೆಗೆ ಬರಮಾಡಿಕೊಂಡು ಸತ್ಕರಿಸಿದ. ಮಾರನೆಯ ದಿನ ಯಥಾಪ್ರಕಾರ ಕಳ್ಳತನ ಮಾಡಲು ಹೊರಟ. ನಾನಕರಿಗೆ ಮಾತು ಕೊಟ್ಟಂತೆ ಬಡವರ ಮನೆಗೆ ಹೋಗದೆ ರಾಜನ ಅರಮನೆಗೆ ಹೋದ. ಕಾವಲುಗಾರರ ಕಣ್ಣಪ್ಪಿಸಿ ಒಳನುಗ್ಗಲು ಪ್ರಯತ್ನಿಸಿದ. ಎಚ್ಚೆತ್ತ ಕಾವಲುಗಾರನೊಬ್ಬ ಅವನನ್ನು ಹಿಡಿದು ಯಾರೆಂದು ಕೇಳಿದ. 'ನಾನು ಕಳ್ಳತನ ಮಾಡಲು ಬಂದಿದ್ದೇನೆ' ಎಂದು ಸತ್ಯವನ್ನೇ ಹೇಳಿದ. ಕಾವಲುಗಾರನು ನಸುನಕ್ಕು 'ಕಳ್ಳರಾರೂ ಹೀಗೆ ಹೇಳುವುದಿಲ್ಲ, ನೀವು ರಾಜನ ಸ್ನೇಹಿತರೇ ಇರಬೇಕು' ಎಂದು ಹೇಳಿ ಒಳಗೆ ಬಿಟ್ಟ ಗುರುನಾನಕರ ಆಶೀರ್ವಾದದಿಂದ ತನ್ನ ದಾರಿ ಸುಗಮವಾಯಿತೆಂದು ಕಳ್ಳ ಅರಮನೆಯೊಳಗೆ ಪ್ರವೇಶಿಸಿ ಬೆಲೆಬಾಳುವ ಬಂಗಾರದ ಒಡವೆ ವಜ್ರವೈಡೂರ್ಯಗಳನ್ನು ಗಂಟು ಕಟ್ಟಿದ. ಅರಮನೆಯ ಅಡುಗೆ ಮನೆಯಿಂದ ಭಕ್ಷ್ಯಭೋಜ್ಯಗಳ ಸುವಾಸನೆ ಮೂಗಿಗೆ ಬಡಿಯಿತು. ಹಸಿದಿದ್ದ ಕಳ್ಳನು ಒಳಗೆ ಹೋಗಿ ಹೊಟ್ಟೆ ಬಿರಿಯುವಷ್ಟು ಉಂಡ. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಉಂಡ ಮನೆಯಲ್ಲಿ ಕಳ್ಳತನ ಮಾಡಬಾರದು ಎಂದು ಗುರುನಾನಕರು ವಿಧಿಸಿದ್ದ ಮೂರನೆಯ ಷರತ್ತು ನೆನಪಾಯಿತು. ಕಳ್ಳ ಗಂಟನ್ನು ಅಲ್ಲಿಯೇ ಬಿಟ್ಟು ಹೊರನಡೆದ. ಮಾರನೆಯ ಬೆಳಗ್ಗೆ ರಾಜನು ಆ ಕಳಗಂಟನ್ನು ನೋಡಿ ಕಳ್ಳನನ್ನು ಎಲ್ಲಿದ್ದರೂ ಹಿಡಿದು ತರಲು ಕಾವಲುಗಾರರಿಗೆ ಆಜ್ಞಾಪಿಸಿದ. ಕಾವಲುಗಾರರು ನಿರಪರಾಧಿ ಜನರನ್ನು ಹೊಡೆದು ಬಡಿದು ಹಿಂಸಿಸತೊಡಗಿದರು. ಜನರ ಆಕ್ರಂದನವನ್ನು ಕೇಳಿಸಿಕೊಂಡ ಕಳ್ಳನಿಗೆ ತಾನು ಮಾಡಿದ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸಬಾರದೆಂಬ ನಾನಕರ ನಾಲ್ಕನೆಯ ಷರತ್ತು ನೆನಪಾಯಿತು. ಕೂಡಲೇ ರಾಜನ ಮುಂದೆ ಹೋಗಿ ಕೈಜೋಡಿಸಿ 'ನಾನು ಮಾಡಿದ ತಪ್ಪಿಗಾಗಿ ನನಗೆ ಶಿಕ್ಷೆ ಕೊಡಿ, ನಿರಪರಾಧಿ ಜನರನ್ನು ದಂಡಿಸಬೇಡಿ' ಎಂದು ಬೇಡಿಕೊಳ್ಳುತ್ತಾನೆ. ತನ್ನ ತಪ್ಪನ್ನು ಮರೆಮಾಚದೆ ಒಪ್ಪಿಕೊಂಡ ಕಳ್ಳನಿಗೆ ರಾಜನು ಯಾವ ಶಿಕ್ಷೆಯನ್ನೂ ಕೊಡದೆ ಬಿಡುಗಡೆ ಮಾಡುತ್ತಾನೆ. ಕಳ್ಳನು ತನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಪ್ರೇರೇಪಣೆ ಮಾಡಿದ ಗುರುನಾನಕರನ್ನು ಹುಡುಕಿಕೊಂಡು ಹೋಗುತ್ತಾನೆ. 

ಕೊರೊನಾ ಸಂದರ್ಭವು ಈ ಗುರುಶಿಷ್ಯ ಬಾಂಧವ್ಯಕ್ಕೆ ಬಲವಾದ ಕೊಡಲಿ ಪೆಟ್ಟನ್ನು ನೀಡಿದೆ. ಆನ್ಲೈನಿನಲ್ಲಿ ಕಲಿಯುವ ಪಾಠ ಬಸವಣ್ಣನವರು ಹೇಳುವಂತೆ 'ಚಿತ್ರದ ರೂಹು, ಚಿತ್ರದ ಕಬ್ಬು ಅಪ್ಪಿದರೆ ಸುಖವಿಲ್ಲ, ಮೆಲ್ಲಿದರೆ ರುಚಿಯಿಲ್ಲ.' ದೂರಶಿಕ್ಷಣದ ಪರಿಕಲ್ಪನೆ ಹೊಸದೇನೂ ಅಲ್ಲ, ಏಕಲವ್ಯ ಶಸ್ತ್ರಾಭ್ಯಾಸ ಮಾಡಿದ್ದು ದೂರ ಶಿಕ್ಷಣಕ್ಕೆ ಒಂದು ಒಳ್ಳೆಯ ಉದಾಹರಣೆ. ಬಿಲ್ಲುವಿದ್ಯೆಯಲ್ಲಿ ಪಾರಂಗತನಾದ ಏಕಲವ್ಯನ ಶಿಕ್ಷಣಕ್ಕೆ ಗುರು ದ್ರೋಣಾಚಾರ್ಯರ ಹೆಚ್ಚುಗಾರಿಕೆ ಏನೂ ಇಲ್ಲ. ಇರುವುದೆಲ್ಲಾ ಗುರುಭಕ್ತಿಯ ಪರಾಕಾಷ್ಠೆಯ ಮಹಿಮೆ. ಇಡೀ ಭೂಮಿಯನ್ನು ಕಾಗದವನ್ನಾಗಿ ಮಾಡಿ, ಎಲ್ಲಾ ಕಾಡಿನ ಮರಗಳನ್ನು ಲೇಖನಿ ಮಾಡಿ, ಸಪ್ತ ಸಮುದ್ರಗಳನ್ನು ಮಸಿಯನ್ನಾಗಿ ಮಾಡಿ ಬರೆದರೂ ಗುರುವಿನ ಮಹಿಮೆ ವರ್ಣಿಸಲಸದಳ, ಎನ್ನುತ್ತಾರೆ ಕಬೀರದಾಸರು. ದೇವರು ಮತ್ತು ಗುರು ಇಬ್ಬರೂ ಎದುರಾದರೆ ದೇವರಿಗೆ ನಮಸ್ಕರಿಸುವ ಮೊದಲು ಆ ದೇವರನ್ನು ತೋರಿಸಿದ ಗುರುವಿಗೆ ನಮಸ್ಕರಿಸುವುದಾಗಿ ಹೇಳುತ್ತಾರೆ. 

ಸಬ್ ಧರತೀ ಕಾಗಜ್ ಕರೂಂ 
ಲೇಖನೀ ಸಬ್ ಬನ್ರಾಯ್ 
ಸಾತ್ ಸಮುದ್ರ ಕೀ ಮಸಿ ಕರೂಂ 
ಗುರುಗುಣ್ ಲಿಸ್ಕೋ ನ ಜಾಯ್ 
ಗುರು ಗೋವಿಂದ್ ದೋನೋಂ ಖಡೇ 
ಕಾಕೇ ಲಾಗೂಂ ಪಾಯ್ 
ಬಲಿಹಾರೀ ಗುರು ಆಪನೀ 
ಗೋವಿಂದ್ ದಿಯೋ ದಿಖಾಯ್

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.9-9-2021
ಬಿಸಿಲು ಬೆಳದಿಂಗಳು