ಪರರಿಗಾಗಿ ಬದುಕುವ ಸಾರ್ಥಕ ಜೀವನ

“ಒಂದೊಂದೇ ಮೆಟ್ಟಿಲನ್ನು ಹತ್ತಿ ಕೊನೆಯ ಮಹಡಿಯನ್ನು ತಲುಪಿದಾಗ ಉಂಟಾಗುವ ಅನುಭವ ಲಿಫ್ಟ್ನಲ್ಲಿ ಏರಿದ ಅನುಭವಕ್ಕಿಂತ ತೀರಾ ಭಿನ್ನ!” ಎನ್ನುತ್ತಾರೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಶಿವರಾಜ ಪಾಟೀಲರು. ಏಳು ವರ್ಷಗಳ ಹಿಂದೆ ಬಿಡುಗಡೆಗೊಂಡ ಅವರ 'ಮುಂಜಾವಿಗೊಂದು ನುಡಿಕಿರಣ' ಎಂಬ ಅಪರೂಪದ ಗ್ರಂಥದಿಂದ ಆಯ್ದ ಒಂದು ನುಡಿಕಿರಣವಿದು. ಸ್ವತಃ ಮೆಟ್ಟಿಲನ್ನು ಹತ್ತುವಾಗ ಉಂಟಾಗುವ ಶಾರೀರಿಕ ಶ್ರಮ ಲಿಫ್ಟ್ನಲ್ಲಿ ನಿಂತು ಮೇಲೇರುವಾಗ ಇರುವುದಿಲ್ಲ. ಲಿಫ್ಟ್ ಗುಂಡಿಯನ್ನು ಒತ್ತಿದರೆ ಸಾಕು ಯಾವ ಪರಿಶ್ರಮವೂ ಇಲ್ಲದೆ ಕೊನೆಯ ಮಹಡಿಯನ್ನು ಕ್ಷಣಾರ್ಧದಲ್ಲಿ ತಲುಪ ಬಹುದು. ಮಹಡಿಯ ಮೇಲಿಂದ ಸುತ್ತ ಕಣ್ಣು ಹಾಯಿಸಿದಾಗ ಗೋಚರಿಸುವ ವಿಹಂಗಮ ದೃಶ್ಯವನ್ನು ನೋಡಿ ಆನಂದಿಸಬಹುದು. ಆದರೆ ಸ್ವತಃ ಮೆಟ್ಟಿಲುಗಳನ್ನು ಕಷ್ಟಪಟ್ಟು ಹತ್ತಿ ಕೊನೆಯ ಮಹಡಿಯನ್ನು ಮೇಲೇರಿ ಸುತ್ತ ನೋಡುವಾಗ ಸಿಗುವ ಆನಂದ ಅದರಲ್ಲಿರುವುದಿಲ್ಲ ಇದು ಜಸ್ಟಿಸ್ ಶಿವರಾಜ ಪಾಟೀಲರ ಬೌದ್ಧಿಕ ಚಿಂತನೆಯಿಂದ ಮೂಡಿ ಬಂದ ವಿಚಾರವಲ್ಲ. ಅವರ ಸ್ವಾನುಭವದಿಂದ ಮೂಡಿಬಂದ ಸಂಗತಿ. ರಾಯಚೂರು ಜಿಲ್ಲೆಯ ಮಲ್ಲದಕಲ್ ಎಂಬ ಕುಗ್ರಾಮದ ಬಡ ರೈತ ಕುಟುಂಬದಲ್ಲಿ ಜನಿಸಿದ ಅವರು ಸ್ವಂತ ಪರಿಶ್ರಮದಿಂದ ಬದುಕಿನ ಒಂದೊಂದೇ ಮೆಟ್ಟಿಲನ್ನು ಹತ್ತಿ ನಮ್ಮ ದೇಶದ ವರಿಷ್ಠ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನಿವೃತ್ತರಾದವರು.
ಅವರ 80ನೆಯ ಜನ್ಮದಿನೋತ್ಸವದ ಸಂಭ್ರಮಾಚರಣೆ ಕಳೆದ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಾಡಾಗಿತ್ತು. ಸಮಾರಂಭದ ಆರಂಭದಲ್ಲಿ ಪ್ರದರ್ಶಿಸಿದ ಅವರ ಜೀವನದ ಸಾಕ್ಷ್ಯಚಿತ್ರ ಮೇಲಿನ ಮಾತಿಗೆ ಸಾಕ್ಷಿಯಾಗಿತ್ತು. ಬೆಳಗ್ಗೆ 10 ಗಂಟೆಗೆ ಅದರಲ್ಲೂ ಭಾನುವಾರದ ರಜಾ ದಿನ ಬೆಂಗಳೂರಿನ ಜನ ಸೇರುವುದು ಕಷ್ಟ, ಸುತ್ತೂರು ಜಗದ್ಗುರುಗಳವರು ಮತ್ತು ನಾವು ಕಲಾಕ್ಷೇತ್ರವನ್ನು ಸಮಯಕ್ಕೆ ಸರಿಯಾಗಿ ತಲುಪಿದಾಗ ಸಭಾಂಗಣ ಆಗಲೇ ಕಿಕ್ಕಿರಿದು ತುಂಬಿತ್ತು. ನ್ಯಾಯಾಂಗದ ಭೀಷ್ಮಪಿತಾಮಹರೆನಿಸಿದ ವೆಂಕಟಾಚಲಯ್ಯನವರಿಂದ ಹಿಡಿದು ದೆಹಲಿಯ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದ ತಮಿಳುನಾಡು, ರಾಜಸ್ತಾನ ಹೈಕೋರ್ಟ್ ಮತ್ತು ನಮ್ಮ ರಾಜ್ಯದ ಅನೇಕ ನ್ಯಾಯಾಧೀಶರು ಸೇರಿದ್ದರು. ಒಟ್ಟಾರೆ ನ್ಯಾಯಾಂಗ ಕ್ಷೇತ್ರದ ಕೆನೆಪದರೇ ಅಂದು ಸಭಾಂಗಣದ ತುಂಬಾ ಜಮಾಯಿಸಿತ್ತು. ಅದು ಜಸ್ಟಿಸ್ ಶಿವರಾಜ ಪಾಟೀಲರ ಘನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿತ್ತು.
ಶಿವರಾಜ ಪಾಟೀಲರು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಎಂದೂ ತಮ್ಮ ಜೀವನದ ಮೌಲ್ಯಗಳ ಕೀಲಿಕೈಯನ್ನು ಮರೆತವರಲ್ಲ. ನಿವೃತ್ತರಾದ ಮೇಲೆ ಕರ್ನಾಟಕದ ಲೋಕಾಯುಕ್ತರಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಮಾಧ್ಯಮಗಳಲ್ಲಿ ಕೇಳಿಬಂದ ಮಿಥ್ಯಾರೋಪಗಳನ್ನು ಸಾಕ್ಷಾಧಾರಗಳೊಂದಿಗೆ ಬಲವಾಗಿ ತಳ್ಳಿಹಾಕಿ ನಿರ್ಲಿಪ್ತತೆಯಿಂದ ಪದತ್ಯಾಗ ಮಾಡಿದವರು. ಯಾರ ಒತ್ತಾಸೆಗೂ ಮಣಿದು ಮುಂದುವರಿಯಲು ಇಷ್ಟಪಡದೆ ಲೋಕಾಯುಕ್ತ ಹುದ್ದೆಗೆ ಹೆಚ್ಚಿನ ಘನತೆಯನ್ನು ತಂದುಕೊಟ್ಟವರು. ಅವರ ನಿರ್ಗಮನದ ನಂತರ ಅವರಂತಹ ವ್ಯಕ್ತಿತ್ವವುಳ್ಳವರನ್ನು ಆಯ್ಕೆಮಾಡುವುದು ಸರಕಾರಕ್ಕೆ ಕಷ್ಟವಾಯಿತು. ಕೆಲವು ವರ್ಷಗಳ ಹಿಂದೆ ದಾವಣಗೆರೆಯ ಒಂದು ಸಭೆಯಲ್ಲಿ ಅವರು ಉಲ್ಲೇಖಿಸಿದ “Yesterday is a waste paper today is a news paper, tomorrow is a question paper, life is an answer paper” ಎಂಬ ಆಂಗ್ಲನುಡಿಗಟ್ಟು ನಮ್ಮನ್ನು ಚಿಂತನಶೀಲ ರನ್ನಾಗಿ ಮಾಡಿತು. ಅವರು ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ ಆ 47 ದಿನಗಳು ಸಾರ್ವಜನಿಕ ಬದುಕಿನಲ್ಲಿ ಚಿರಂತನವಾಗಿ ನೆನಪಿಡಬೇಕಾದ ಹಾಗೂ ವಿಧಾನಸೌಧದ ಪತ್ರಾಗಾರದಲ್ಲಿ (Archives) ಕಾಯ್ದಿರಿಸಬೇಕಾದ ದಾಖಲೆಗಳೇ ಹೊರತು ಗತಕಾಲಕ್ಕೆ ಸರಿದ ಆ ದಿನಗಳನ್ನು ರದ್ದಿಪತ್ರಿಕೆ ಎನ್ನಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಇದೇ ಅಂಕಣದಲ್ಲಿ ಬರೆದ ನಮ್ಮ ಲೇಖನ ಅನೇಕ ಓದುಗರ ಸೃತಿಯಲ್ಲಿರಬಹುದು.
‘ಸದುವಿನಯವೇ ಸದಾಶಿವನ ಒಲುಮೆಯಯ್ಯಾ' ಎಂದು ಬಸವಣ್ಣನವರು ಹೇಳುವಂತೆ ಅವರಲ್ಲಿ ಎಲ್ಲರೂ ಮನಗಂಡ ಒಂದು ಗುಣವಿಶೇಷವೆಂದರೆ 'ವಿನಯ ಶೀಲತೆ'. ವ್ಯಕ್ತಿಗೆ the triple 'H' ಅಂದರೆ 1) Hard work, 2) Honesty and 3) Humbleness ಇರಬೇಕೆಂದು ಅವರೇ ಆಗಾಗ್ಗೆ ಹೇಳುತ್ತಿರುತ್ತಾರೆ. ಈ ಮೂರೂ ಗುಣಗಳನ್ನು ಅವರು ಅಕ್ಷರಶಃ ಮೈಗೂಡಿಸಿ ಕೊಂಡಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನದಂದೇ ಹುಟ್ಟಿದವರೆಂದು ಅಭಿನಂದನಾ ಭಾಷಣಕಾರರು ಅಭಿಮಾನದಿಂದ ಹೇಳಿದಾಗ ಅವರು ಅದನ್ನೊಂದು ವಿಶೇಷವೆಂದು ಪರಿಭಾವಿಸಿ ಹಿಗ್ಗಲಿಲ್ಲ. ಅವರು ತನ್ನ ಮೊಮ್ಮಗಳು ಕು. ಆರುಷಿ ಸೇರಿದಂತೆ ಅದೇ ದಿನದಂದು ಹುಟ್ಟಿದವರು ಅಂದಿನ ಸಭೆಯಲ್ಲಿಯೇ ಅನೇಕರಿದ್ದಾರೆಂದು ತಮಗೆ ಗೊತ್ತಿರುವವರ ಹೆಸರುಗಳನ್ನು ಹೇಳಿ ಅವರೆಲ್ಲರಿಗೂ ಶುಭ ಹಾರೈಸಿದರು. ಅವರ ಈ ಹಾರೈಕೆ ಗಣಿತಶಾಸ್ತ್ರದಲ್ಲಿ ಬರುವ ಸಂಭವನೀಯತೆ' (Probability Theory) ಎಂಬ ಸಿದ್ದಾಂತವನ್ನು ನಮಗೆ ನೆನಪು ಮಾಡಿಕೊಟ್ಟಿತು. ಈ ಸಂಭವನೀಯತೆಯಲ್ಲಿ Birthday Problem ಸಹ ಒಂದು. ಇದು ತಾಯಿಯ ಹೆರಿಗೆಯ ನೋವಲ್ಲ ಗಣಿತದ ಒಂದು ಲೆಕ್ಕಾಚಾರ.
ಉದಾಹರಣೆಗೆ ಆ ದಿನ ಸಭಾಂಗಣದಲ್ಲಿ ಸೇರಿದ್ದವರಲ್ಲಿ 23 ಜನರನ್ನು ಯಾದೃಚ್ಛಿಕವಾಗಿ (at random) ಆಯ್ಕೆ ಮಾಡಿಕೊಂಡರೆ ಅವರಲ್ಲಿ ಪ್ರತಿಯೊಬ್ಬರ ಜನ್ಮದಿನಾಂಕವನ್ನು ಇನ್ನುಳಿದವರ ಜನ್ಮದಿನಾಂಕದೊಂದಿಗೆ ಹೋಲಿಸಲು 253 ಆವಕಾಶಗಳು (chances) ಸಿಗುತ್ತವೆ. ಇದನ್ನು ಈ ಮುಂದಿನ ಗಣಿತ ಸೂತ್ರದ ಅನ್ವಯ ಲೆಕ್ಕಾಚಾರ ಹಾಕುತ್ತಾರೆ: 23x(23-1)/2=253. ಹೀಗೆ 23 ಜನರ ಗುಂಪಿನಲ್ಲಿ ಪರಸ್ಪರರ ಜನ್ಮದಿನಾಂಕವನ್ನು ಹೋಲಿಕೆ ಮಾಡಿದಾಗ ಅವರಲ್ಲಿ ಕೆಲವರ ಜನ್ಮದಿನಾಂಕವು ಒಂದೇ ಆಗಿರುವ ಸಾಧ್ಯತೆಯು ಶೇಕಡ 50ರಷ್ಟು ಇರುತ್ತದೆ. 365 ಜನರನ್ನು ಆಯ್ಕೆ ಮಾಡಿಕೊಂಡು ಹೋಲಿಸಿದರೆ ಅವರಲ್ಲಿ ಒಂದೇ ಜನ್ಮದಿನಾಂಕವುಳ್ಳ ಅನೇಕ ವ್ಯಕ್ತಿಗಳು ಇರುವುದು ಶೇಕಡ 100ರಷ್ಟು ಖಚಿತ ಎಂದು ಗಣಿತಶಾಸ್ತ್ರಜ್ಞರು ಹೇಳುತ್ತಾರೆ. ಹೀಗೆ ಶೇಕಡ 50ರಷ್ಟು ಅಥವಾ 100ರಷ್ಟು ಎಂದು ಇಲ್ಲಿ ಹೇಳುವುದು ಹೋಲಿಕೆಯ ಸಾಧ್ಯತೆಯೇ ಹೊರತು ಹೋಲಿಕೆಯಾದ ವ್ಯಕ್ತಿಗಳ ಒಟ್ಟು ಸಂಖ್ಯೆಯಲ್ಲ ಎಂಬುದನ್ನು ಮನಗಾಣಬೇಕು. ಆಸ್ಪತ್ರೆಯ ತೀವ್ರನಿಗಾ ಘಟಕಕ್ಕೆ ಸೇರಿದ ರೋಗಿಯು ಬದುಕಿ ಉಳಿಯುವ ವಿಚಾರದಲ್ಲಿ ಮುಂದಿನ 48 ತಾಸು ಏನೂ ಹೇಳಲು ಸಾಧ್ಯವಿಲ್ಲ fifty/fifty chances ಎಂದು ವೈದ್ಯರು ಹೇಳುವಂತೆ, ಕುತೂಹಲಕ್ಕಾಗಿ ಸಿರಿಗೆರೆಯ ನಮ್ಮ ಪ್ರೌಢಶಾಲೆಯಲ್ಲಿ ಈ ವರ್ಷ ಓದಲು ಸೇರಿದ ಸಾವಿರಾರು ಮಕ್ಕಳ ದಾಖಲೆಯನ್ನು ಗಣಕಯಂತ್ರದಲ್ಲಿ ಪರಿಶೀಲಿಸಿದಾಗ ಯಾದೃಚ್ಛಿಕವಾಗಿ ಆಯ್ಕೆ ಮಾಡಿಕೊಂಡ 365 ವಿದ್ಯಾರ್ಥಿಗಳಲ್ಲಿ 128 ಮಕ್ಕಳ ಜನ್ಮದಿನಾಂಕಗಳಲ್ಲಿ ಸಾಮ್ಯತೆ ಇರುವುದು ಕಂಡುಬಂತು. ಈ ವಿದ್ಯಾರ್ಥಿಗಳನ್ನು ಹೆಚ್ಚು ಕಡಿಮೆ 23ರಂತೆ 16 ಗುಂಪುಗಳನ್ನಾಗಿ ವಿಭಾಗಿಸಿದಾಗ 6 ಗುಂಪುಗಳಲ್ಲಿ ಜನ್ಮದಿನಾಂಕಗಳ ಸಾಮ್ಯತೆ ಒಂದ ರಿಂದ ಎರಡರವರೆಗೆ ಇದ್ದು ಉಳಿದ 10 ಗುಂಪುಗಳಲ್ಲಿ ಒಂದೂ ಸಾಮ್ಯತೆ ಕಂಡುಬರಲಿಲ್ಲ. ಇದನ್ನೇ ಗಣಿತಶಾಸ್ತ್ರ ದಲ್ಲಿ “Birthday problem” ಅಥವಾ “Birthday _paradox” ಎಂದು ಕರೆಯುವುದು.
ನಮ್ಮ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ Birthday ಪಾರ್ಟಿಗಳು ಎಲ್ಲರಿಗೂ ಗೊತ್ತಿರುವಂತೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ. ಕಾಲ ಬದಲಾದಂತೆ ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ ಸಂಭವಿಸುವ ಅನಿವಾರ್ಯ ಬೆಳವಣಿಗೆ. ಮಕ್ಕಳ ಹುಟ್ಟು ಹಬ್ಬವನ್ನು ಸಡಗರದಿಂದ ಆಚರಿಸುವ ಪರಿಪಾಠ ಹೆಚ್ಚುತ್ತಿದೆ. ಮಗು ತನ್ನ ಹುಟ್ಟುಹಬ್ಬದ ದಿನ ಆಕರ್ಷಕವಾದ ಆಟಿಕೆಗಳು, ಉಡುಗೊರೆ ದೊರೆಯುತ್ತವೆಂಬ ನಿರೀಕ್ಷೆಯಲ್ಲಿರುತ್ತದೆ. ಇಷ್ಟದ ವಸ್ತು ದೊರೆಯದೇ ಹೋದರೆ ನಿರಾಶೆ ಉಂಟಾಗುತ್ತದೆ. ತನಗೆ ಇಂತಹುದೇ ಬೇಕೆಂದು ಹಠ ಮಾಡುತ್ತದೆ. ದಿನ ಕಳೆದಂತೆ ತನಗೆ ಬೇಕಾದ ವಸ್ತು ಪಡೆಯುವ ಹಂಬಲ ಮತ್ತು ನಿರೀಕ್ಷೆ ಮಗುವಿನ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗಿ ಸ್ವಾರ್ಥಿಯಾಗುತ್ತದೆ. ಇದರ ಬದಲು ಮಗುವನ್ನು ಅನಾಥಾಶ್ರಮಕ್ಕೋ ನಿರ್ಗತಿಕರ ಗುಡಿಸಲಿಗೆ ಕರೆದುಕೊಂಡು ಹೋಗಿ ಬಡ ಮಕ್ಕಳಿಗೆ ತಿಂಡಿತಿನಸು, ಬಟ್ಟೆಬರೆ ಕೊಡಿಸಿದರೆ ಮಗುವಿನ ಮನಸ್ಸಿನಲ್ಲಿ ಅಂತಃಕರಣ, ಅನುಕಂಪೆಯ ಮಾನವೀಯ ಗುಣಗಳು ಅಂಕುರಾರ್ಪಣವಾಗುತ್ತವೆ. ಬೇರೆಯವರಿಂದ ಪಡೆಯಬೇಕೆಂಬ ಸ್ವಾರ್ಥಲಾಲಸೆಯ ಬದಲು ಬೇರೆಯ ವರಿಗೆ ಕೊಡುವ ಔದಾರ್ಯ ಬೆಳೆಯುತ್ತದೆ. ತನ್ನಂತೆ ಉಡಲು ಬಟ್ಟೆ ಇಲ್ಲದ ನಿರ್ಗತಿಕ ಮಕ್ಕಳನ್ನು ನೋಡಿ ತಾನೆಷ್ಟು ಸುದೈವಿ ಎಂಬ ಅರಿವು ಮೂಡುತ್ತದೆ. ತನ್ನನ್ನು ಸುಖವಾಗಿಟ್ಟಿರುವ ತಂದೆ ತಾಯಿಗಳ ಬಗ್ಗೆ ಪ್ರೀತಿ ಇಮ್ಮಡಿಗೊಳ್ಳುತ್ತದೆ.
ಹುಟ್ಟು ಹಬ್ಬದ ಸಂದರ್ಭದಲ್ಲಿ “Many many happy returns of the day” (ಇಂಥ ಸಂತೋಷದ ದಿನಗಳು ಮತ್ತೆ ಮತ್ತೆ ಬರಲಿ) ಎಂಬ ಶುಭ ಹಾರೈಕೆ ಹೇಳುವುದು ಒಂದು ಶಿಷ್ಟಾಚಾರ. ಈ ಶುಭಹಾರೈಕೆಯ ನುಡಿಗಟ್ಟು ಪಾಶ್ಚಾತ್ಯ ರಾಷ್ಟ್ರಗಳಲ್ಲಿ 18ನೆಯ ಶತಮಾನದಿಂದಲೂ ಬಳಕೆಯಲ್ಲಿದೆ. ಆಗಿನ ಕಾಲದಲ್ಲಿ ಯಾವುದೇ ಹಬ್ಬ ಅಥವಾ ಶುಭಕಾರ್ಯಗಳಲ್ಲಿ ಹೀಗೆ ಹಾರೈಸುವ ಪದ್ದತಿ ಇತ್ತು. ಅದು ಕ್ರಮೇಣ ಜನ್ಮದಿನದ ಹಾರೈಕೆಯಾಗಿ ಪರಿಣಮಿಸಿತು. ಇದರ ಅರ್ಥವನ್ನು ಎಲ್ಲರೂ ತಿಳಿದೇ ಹೇಳುತ್ತಾರೆಂದು ನಂಬುವುದು ಕಷ್ಟ, ಹುಟ್ಟುಹಬ್ಬ ಸಂತಸದ ದಿನ, ನಿಜ. ಆದರೆ ಯಾರಿಗೆಂದರೆ ಕುಟುಂಬದ ಸದಸ್ಯರಿಗೆ, ಬಂಧುಗಳಿಗೆ ಮಾತ್ರ. ಜನ್ಮದಿನ ಆಚರಿಸಿಕೊಳ್ಳುವ ವ್ಯಕ್ತಿಗಲ್ಲ. ಏಕೆಂದರೆ ಜನನವೆಂಬುದು ತಾಯಿ ಮತ್ತು ಮಗುವಿಗೆ ನಿಜವಾಗಿಯೂ ದುಃಖದಾಯಕಗಳಿಗೆ. ಯಾವ ತಾಯಿಯೂ ನಗುನಗುತ್ತಾ ಜನ್ಮ ನೀಡುವುದಿಲ್ಲ, ಮಗುವೂ ನಗುನಗುತ್ತಾ ಹುಟ್ಟುವುದಿಲ್ಲ, ಆಳುತ್ತಲೇ ಹುಟ್ಟುತ್ತದೆ. ಹೀಗಿರುವಾಗ ಅದು ಸಂತಸದ ದಿನ ಹೇಗಾಗುತ್ತದೆ? ಹೆರಿಗೆಯ ನೋವಿಗೆ ಸಮಾನವಾದ ನೋವೇ ಇಲ್ಲ ಎಂದು ಬಲ್ಲವರು ಬಣ್ಣಿಸುತ್ತಾರೆ. ಆದರೆ ಆ ಎಲ್ಲ ನೋವನ್ನು ತಾಯಿ ತನ್ನ ಒಡಲ ಕುಡಿಯ ಮುಖವನ್ನು ನೋಡಿ ಮರೆಯುತ್ತಾಳೆ. ನಿತ್ರಾಣಗೊಳಿಸಿದ್ದ ಹೆರಿಗೆಯ ಬೇನೆ ಮಗುವನ್ನು ಕಂಡಾಕ್ಷಣ ಬಿಸಿಲು ಬೆಳದಿಂಗಳಾದಂತೆ ಆಪ್ಯಾಯ ಮಾನವಾಗುತ್ತದೆ.
ಹಳ್ಳಿಗಳಲ್ಲಿ ಜಗಳವಾಡುವಾಗ ತನಗಾಗದ ವ್ಯಕ್ತಿಯನ್ನು ಕಂಡು 'ಹುಟ್ಟಿದ ದಿನ ಕಾಣಿಸಿಬಿಡುತ್ತೇನೆ ನೋಡು' ಎಂದು ಸಿಟ್ಟಿನಿಂದ ಅಬ್ಬರಿಸುವುದನ್ನು ನೀವು ಕೇಳಿರಬಹುದು. ಭಾರತೀಯ ದಾರ್ಶನಿಕರ ದೃಷ್ಟಿಯಲ್ಲಿ ಹುಟ್ಟು ಸಂತಸಪಡುವ ದಿನವಲ್ಲ. ಹುಟ್ಟುವುದೆಂದರೆ ಜೀವಾತ್ಮನು ಶರೀರದ ಬಂಧನಕ್ಕೆ ಒಳಗಾಗುವುದು. ಆದಕಾರಣ ಈ ಶರೀರದೊಳಗಿರುವ ಆತ್ಮವನ್ನು ಬದ್ಧಜೀವಾತ್ಮ ಎಂದು ಕರೆಯುತ್ತಾರೆ. ಮನುಷ್ಯನ ಗುರಿ ಈ ಭವಬಂಧನದಿಂದ ಪಾರಾಗಿ ನಿತ್ಯಸುಖವಾದ ಮುಕ್ತಿಯನ್ನು ಪಡೆಯುವುದು. ತಮ್ಮ 2ನೆಯ ವಯಸ್ಸಿನಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರಾಗಿ ಬೆಳೆದ ಶಿವರಾಜ ಪಾಟೀಲರು ಅಂದು ದೇವರಲ್ಲಿ ಪ್ರಾರ್ಥಿಸಿದ್ದು ಬದುಕಿರುವಷ್ಟು ಕಾಲ ಆರೋಗ್ಯಕಾಯರಾಗಿ ತಮಗಾಗಿ ಬದುಕದೆ ಪರರಿಗಾಗಿ ಬದುಕುವ ಸಾರ್ಥಕ ಜೀವನವನ್ನು!
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ