ವರ್ಣರಂಜಿತ ಪ್ಲೆಕ್ಸ್ ಹಾಗೂ ಬ್ಯಾನರ್ಗಳ ಹಾವಳಿ!

•    Views

ನಮ್ಮ ದೇಶದಲ್ಲಿ ನಡೆಯುವಷ್ಟು ಸಭೆ-ಸಮಾರಂಭಗಳು ಬೇರಾವ ದೇಶಗಳಲ್ಲಿಯೂ ನಡೆಯುವುದಿಲ್ಲ, ದಿನಬೆಳಗಾ ದರೆ ಹಳ್ಳಿಹಳ್ಳಿಗಳಲ್ಲಿ ಪೇಟೆ ಪಟ್ಟಣಗಳಲ್ಲಿ ಒಂದಲ್ಲ ಎರಡಲ್ಲ ಹಲವು ಹತ್ತು ಸಭೆ ಸಮಾರಂಭಗಳು ಸಮ್ಮೇಳನಗಳು ನಡೆಯುತ್ತಲೇ ಇರುತ್ತವೆ. ಅವುಗಳಿಗೆ ಶುಭ ಕೋರಿ ಸಂಯೋಜಕರು ಮತ್ತು ಅಭಿಮಾನಿಗಳು ದಾರಿ ಬೀದಿಗಳಲ್ಲಿ ವರ್ಣರಂಜಿತ ಫೆಕ್ಸ್ ಮತ್ತು ಬ್ಯಾನರ್ಗಳನ್ನು ಹಾಕುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿ ಕಾಣುವ ದೃಶ್ಯವಾಗಿದೆ. ಬ್ಯಾನರ್ಗಳು ಹೆಚ್ಚುಹೆಚ್ಚು ಇದ್ದಷ್ಟೂ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ ಎಂದು ಭಾವಿಸುವ ಜನರಿದ್ದಾರೆ. ಇವು ಖಾಸಗಿಯಾಗಿ ಪರಸ್ಪರ ಟೀಕೆ ಟಿಪ್ಪಣಿಗಳಿಗೂ, ಘರ್ಷಣೆಗಳಿಗೂ ಕಾರಣವಾಗಿವೆಯೆಂಬುದನ್ನು ಅಲ್ಲಗಳೆಯಲಾಗದು. ದಾರಿಯುದಕ್ಕೂ ರಸ್ತೆಯ ಎಡಬಲಗಳಲ್ಲಿ ವೃತ್ತಗಳಲ್ಲಿ ಕಣ್ಣಿಗೆ ರಾಚುವ ಈ ಫಲಕಗಳು ಮೇಲುನೋಟಕ್ಕೆ ಸಭೆ ಸಮಾರಂಭಗಳಿಗೆ ಶುಭವನ್ನು ಕೋರುವ ಸದುದ್ದೇಶದಿಂದ ಕೂಡಿವೆಯೆಂದು ತೋರಿದರೂ ಅವುಗಳ ಹಿಂದೆ ಇರುವ ಅಜೆಂಡವೇ ಬೇರೆ. ಅವುಗಳನ್ನು ಹಾಕಿದವರು ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿದ್ದರೆ ಸಭೆಗೆ ಆಗಮಿಸಲಿರುವ ರಾಜಕೀಯ ನೇತಾರರ ಆಕರ್ಷಕ ಭಾವಚಿತ್ರಗಳ ಜೊತೆಗೆ ತಮ್ಮ ಭಾವಚಿತ್ರಗಳನ್ನೂ ಅಳವಡಿಸಿರುತ್ತಾರೆ. ಇದು ಮೇಲ್ನೋಟಕ್ಕೆ ಅವರ ಮೇಲಿನ ಅಭಿಮಾನವೆಂದು ತೋರಿದರೂ ವಾಸ್ತವವಾಗಿ ಅವುಗಳ ಹಿಂದೆ ಇರುವುದು ತಂತಮ್ಮ Political God Father ಗಳನ್ನು ಓಲೈಸುವ ಹುನ್ನಾರ! ಪಕ್ಷದ ವರಿಷ್ಠರನ್ನು ಓಲೈಸುವ ಪ್ರವೃತ್ತಿಯ ಜೊತೆಗೆ ತಮ್ಮ ಇಮೇಜನ್ನು ಎತ್ತರಿಸಿಕೊಳ್ಳುವ ಹುನ್ನಾರವೂ ಅದರಲ್ಲಿ ಅಡಗಿರುತ್ತದೆ. ಒಂದು ವೇಳೆ ಅವುಗಳನ್ನು ಹಾಕಿದವರು ಉದ್ದಿಮೆದಾರರಾಗಿದ್ದರೆ ಸಮಾರಂಭದ ನೆಪದಲ್ಲಿ ತಮ್ಮ ವಾಣಿಜ್ಯೋದ್ಯಮವನ್ನು ಪ್ರಚುರಪಡಿಸಿಕೊಳ್ಳುವ ಜಾಹೀರಾತುಗಳು ಅವಾಗಿರುತ್ತವೆ! ಸಮಾರಂಭ ಮುಗಿದು ತಿಂಗಳುಗಳೇ ಉರುಳಿದರೂ ಹಾಕಿದ ಪ್ಲೆಕ್ಸ್ಗಳನ್ನಾಗಲೀ ಬ್ಯಾನರ್ ಗಳನ್ನಾಗಲೀ ಯಾರೂ ತೆರವುಗೊಳಿಸುವುದಿಲ್ಲ. ಅವು ಇದ್ದಲ್ಲಿಯೇ ಇದ್ದು ಬಿಸಿಲು-ಮಳೆ-ಗಾಳಿಗೆ ಜಗ್ಗದೆ, ಜರಾಜೀರ್ಣವಾಗುವವರಗೆ ಹಣ ವೆಚ್ಚಮಾಡಿದವರ ಪ್ರಚನ್ನ ಅಭೀಷ್ಟಗಳನ್ನು ಈಡೇರಿಸುತ್ತಾ ಪರಿಸರವನ್ನು ಹಾಳುಗೆಡವುತ್ತವೆ. ಕೆಲವೊಮ್ಮೆ ಅವು ದಾರಿಹೋಕರ ತಲೆಯ ಮೇಲೆ ಬಿದ್ದು ಪ್ರಾಣಾಪಾಯಗಳೂ ಸಂಭವಿಸಿರುತ್ತವೆ. ಇದನ್ನು ಮನಗಂಡೇ ರಾಜ್ಯದ ಹೈಕೋರ್ಟು ಈ ಪ್ಲೆಕ್ಸ್ ಮತ್ತು ಬ್ಯಾನರ್ಗಳಿಗೆ ರಾಜ್ಯಾದಂತ ನಿಷೇಧ ಹೇರಿದೆ. ಆದರೆ ನ್ಯಾಯಾಲಯದ ಈ ಆದೇಶಕ್ಕೆ ಕವಡೆಯ ಕಿಮ್ಮತ್ತನ್ನೂ ಜನ ಕೊಡುತ್ತಿಲ್ಲ. ಅವುಗಳ ಬಳಕೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಹೀಗಾಗಿ ನ್ಯಾಯಾಲಯದ ಈ ಆದೇಶ ಹಲ್ಲುಕಿತ್ತ ಹಾವಿನಂತಾಗಿದೆ.

ಪರಿಸರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಾಲಯವು ಜಾರಿಗೊಳಿಸಿರುವ ಈ ಆದೇಶವನ್ನು ಪಾಲಿಸುವುದು ನಾಗರಿಕರೆಲ್ಲರ ಕರ್ತವ್ಯ. ಆದರೆ ಕೇವಲ ಉಪದೇಶದಿಂದ ಅಥವಾ ಕಾನೂನಿನಿಂದ ಸಮಾಜದಲ್ಲಿ ಬದಲಾವಣೆಯನ್ನು ತರುವುದು ಅಷ್ಟು ಸುಲಭದ ಕಾರ್ಯವಲ್ಲ. ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಈ ಬಾರಿ ಪ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ಹಾಕದಂತೆ ನಿಷೇಧಿಸಿ ಕರೆ ಕೊಟ್ಟಿದ್ದರೂ ಅನೇಕರು ಈಗಾಗಲೇ ಹಾಕಿದ್ದಾರೆ. ಇದೇ ಫೆಬ್ರವರಿ 1 ರಿಂದ 9 ರವರೆಗೆ ಚರಿತ್ರಾರ್ಹ ಸ್ಥಳವಾದ ಹಳೇಬೀಡಿನಲ್ಲಿ ನಡೆಯಲಿರುವ ಈ ಸಮಾರಂಭದ ಪೂರ್ವಸಿದ್ಧತೆಗಳನ್ನು ವೀಕ್ಷಿಸಲು ಮೊನ್ನೆ ಸಿರಿಗೆರೆಯಿಂದ ಹೋಗುವಾಗ ಕಂಡುಬಂದ ದೃಶ್ಯ ಭಿನ್ನವಾಗಿರಲಿಲ್ಲ ಸಂತೇಬೆನ್ನೂರಿನಿಂದ ಕಡೂರುವರೆಗೆ ನಮ್ಮ ಕರೆಯನ್ನು ಅಣಕಿಸುವಂತೆ ತಲೆಯೆತ್ತಿನಿಂತಿದ್ದ ಈ ಬ್ಯಾನರ್ಗಳ ಒಟ್ಟು ಸಂಖ್ಯೆಯನ್ನು ಲೆಕ್ಕ ಹಾಕಿ ಅಂದಾಜು ಮಾಡಿದ ಪ್ರಕಾರ ಅಭಿಮಾನಿ ಶಿಷ್ಯರು ಮಾಡಿರುವ ವೆಚ್ಚ ಸುಮಾರು 25 ಲಕ್ಷ ರೂ.! ಆ ಬ್ಯಾನರ್ಗಳನ್ನು ಹಾಕಿದ್ದ ಕೆಲವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತಿಳಿಹೇಳಿದಾಗ ಕೆಲವರು ನಮ್ಮ ಕರೆಗೆ ಓಗೊಟ್ಟು ತೆರವುಗೊಳಿಸಿದ್ದಾರೆ. ಇನ್ನು ಕೆಲವರು 'ಖರ್ಚು ಮಾಡಿ ಹಾಕಿದ್ದನ್ನು ತೆಗೆಯುವುದು ಹೇಗೆ?' ಎಂಬ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಮತ್ತೆ ಕೆಲವರು 'ಈಗ ತೆಗೆಯಲು ಹೋದರೆ ಸಮಾಜದಲ್ಲಿ ಕೋಲಾಹಲ ಉಂಟಾಗ ಬಹುದು' ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು 'ಅವರು ಹಾಕಿದ್ದಾರೆ. ನಾವು ಹಾಕದಿದ್ದರೆ ಹೇಗೆ?' ಎಂಬ ಸಂದಿಗ್ಧತೆಯಲ್ಲಿದ್ದಾರೆ. ಸಮಾರಂಭ ನಡೆಯಲಿರುವ ಹಳೇಬೀಡು ಮತ್ತು ಬೇಲೂರು ಪ್ರಾಂತ್ಯಗಳಲ್ಲಂತೂ ಕಾರ್ಯಕರ್ತರಿಗೆ ಇದ ರಿಂದ ಎಷ್ಟೇ ನಿರುತ್ಸಾಹ ಉಂಟಾದರೂ ಯಾವ ಬ್ಯಾನರ್ಗಳನ್ನೂ ಹಾಕದೆ ಕಟ್ಟುನಿಟ್ಟಾಗಿ ಪಾಲಿಸಿ ನಮ್ಮ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೇ ರೀತಿ ಹಳ್ಳಿ ಹಳ್ಳಿಗಳಿಂದ ಬರುವ ಭಕ್ತಾದಿಗಳು ತಂತಮ್ಮ ವಾಹನಗಳಿಗೆ ಪ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ಹಾಕಿಕೊಂಡು ಬರದೆ ಶ್ರದ್ದಾಭಕ್ತಿಯಿಂದ ಪಾಲ್ಗೊಳ್ಳಬೇಕೆಂಬುದು ನಮ್ಮ ಆಶಯ.

ರಾಜಕೀಯ ಮುಖಂಡರಿಗೆ ಇವುಗಳು ಬೇಕು, ಅಂಗಡಿ ಮುಂಗಟ್ಟುಗಳವರಿಗೂ ಬೇಕು, ಜನರಿಗೂ ಇವು ಬೇಕು. ಯಾರಿಗೂ ಪರಿಸರದ ಕಾಳಜಿ ಇಲ್ಲವಾಗಿದೆ. ಹೀಗಾದರೆ ಸಮಾಜದಲ್ಲಿ ಪರಿವರ್ತನೆ ತರುವವರು ಯಾರು? ರೋಗಿ ಬಯಸಿದ್ದನ್ನು ವೈದ್ಯ ಕೊಡುವುದಿಲ್ಲ, ಹಾಗೆಯೇ ಜನ ಬಯಸಿದ್ದನ್ನು ಮುಖಂಡನಾದವನು ಕೊಡಬಾರದು; ಜನರಿಗೆ ಯಾವುದು ಹಿತವೋ ಅದನ್ನೇ ಕೊಡಬೇಕು. ಆದ್ದರಿಂದ ಇಂತಹ ವಿಷಮವಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಸಾಮಾಜಿಕ ಕಾಳಜಿಯುಳ್ಳವರು ಮುಂದೆ ಬಂದು ಜನರಿಗೆ ತಿಳಿಹೇಳುವ ಅಗತ್ಯವಿದೆ. ಯಾರ ಮೇಲಿನ ಗೌರವಾದರಗಳಿಂದ ಈ ಪ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ದಾರಿಯ ಇಕ್ಕೆಲಗಳಲ್ಲಿ ಹಾಕಿರುತ್ತಾರೋ ಅವು ಅನೇಕವೇಳೆ ಕೆಳಕ್ಕೆ ಬಿದ್ದು ಜನರ ಕಾಲ್ತುಳಿತಕ್ಕೆ ಒಳಗಾಗಿ ಅಗೌರವಕ್ಕೆ ಕಾರಣವಾಗುತ್ತವೆಯೆಂಬ ಒಳ ಎಚ್ಚರ ಅಭಿಮಾನಿಗಳಿಗೆ ಇರುವುದು ಒಳ್ಳೆಯದು. ದೇವರಿಗೆ ಪೂಜೆ ಸಲ್ಲಿಸಿದ ಹೂಬಿಲ್ವಪತ್ರೆಗಳನ್ನು ಯಾರೂ ದಾರಿಯಲ್ಲಿ ಬಿಸಾಡುವುದಿಲ್ಲ ಜನರು ತುಳಿಯದಿರಲೆಂದು ಶ್ರದ್ದಾಭಕ್ತಿಯಿಂದ ಆಯ್ದು ಗಿಡಮರಗಳ ಬುಡಕ್ಕೆ ಹಾಕುತ್ತಾರೆ. ಅಂತಹ ಭಾವನೆ ಬ್ಯಾನರ್ ಹಾಕುವವರ ಹೃದಯದಲ್ಲಿ ಇದ್ದರೆ ಇಂತಹ ತಪ್ಪುಗಳು ಆಗುವುದಿಲ್ಲ,

ಯಾರೊಂದಿಗೆ ಮಾತನಾಡಿದರೂ ಇದು ಹೀಗೆಯೇ ಏನೂ ಮಾಡಲು ಬರುವುದಿಲ್ಲ ಎಂಬ ನೀರಸ ಪ್ರತಿಕ್ರಿಯೆ. ಆಗ ನಮ್ಮ ನೆರವಿಗೆ ಬಂದದ್ದು ನಮ್ಮ ಪರಮಾರಾಧ್ಯ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರೀವಾಣಿ. 1951ರಲ್ಲಿ ಅಂದರೆ ಇಲ್ಲಿಗೆ 69 ವರ್ಷಗಳ ಹಿಂದೆ ಇದೇ ತರಳಬಾಳು ಹುಣ್ಣಿಮೆ ಮಹೋತ್ಸವವು ಅವರ ಸಮ್ಮುಖದಲ್ಲಿ ಇದೇ ಹಳೇಬೀಡಿನಲ್ಲಿ ನಡೆದಾಗ ನೀಡಿದ ಸಂದೇಶ ಹೀಗಿದೆ:

'ನಮ್ಮ ದೇಶದಲ್ಲಿ ಸಮ್ಮೇಳನ ಸಮಾರಂಭಗಳು ಅನೇಕವಾಗಿ ಜರುಗುತ್ತಿವೆ. ಅವುಗಳಲ್ಲಿ ಮಾತುಗಳಿಗಿರುವಷ್ಟೇ ಕೃತಿಗಳಿಗೂ ಇರಬೇಕಾಗಿದೆ. ಅದಿಲ್ಲದಿರುವುದರಿಂದಲೇ ಜನತಾ ಹಿತದೃಷ್ಟಿಯಿಂದ ಪ್ರಾರಂಭಿಸಲ್ಪಟ್ಟ ಈ ಸಮಾರಂಭಗಳು ಕೇವಲ ವ್ಯಕ್ತಿಗಳ ಮತ್ತು ಪಕ್ಷಗಳ ಪ್ರಚಾರದಲ್ಲಿ ದುರುಪಯೋಗವಾಗುತ್ತಿರುವುದು ಕಂಡುಬರುತ್ತಿದೆ. ಏಕೋದ್ದೇಶವುಳ್ಳ ಸ್ವಾರ್ಥರಹಿತವಾದ ಕಾರ್ಯಕರ್ತರ  ಅಭಾವವೇ ಇದಕ್ಕೆ ಕಾರಣ. ಆದ ಪ್ರಯುಕ್ತ ಅವುಗಳ ಸಂಯೋಜಕರು ದುರುಪಯೋಗಕ್ಕೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು.

ನಮ್ಮ ಗುರುವರ್ಯರ ಈ ಮಾತುಗಳು ಅಂದಿಗಿಂತ ಇಂದಿನ ದಿನಮಾನಕ್ಕೆ ಬಹಳ ಚೆನ್ನಾಗಿ ಅನ್ವಯಿಸುತ್ತವೆ. ಆ ಕಾಲದಲ್ಲಿ ಪ್ಲೆಕ್ಸ್ ಮತ್ತು ಬ್ಯಾನರ್ಗಳ ಹಾವಳಿ ಇಲ್ಲದಿದ್ದರೂ ಜನರ ಸ್ವಭಾವವನ್ನು ಅವರು ಚೆನ್ನಾಗಿಯೇ ಬಲ್ಲವರಾಗಿದ್ದರು. ಅವರ ಆದರ್ಶವೇ ಈ ತರಳಬಾಳು ಹುಣ್ಣಿಮೆಯ ಹಿಂದಿರುವ ಪ್ರೇರಕಶಕ್ತಿ. ನಮ್ಮ ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ದನು ಮಾಘ ಶುದ್ಧ ಹುಣ್ಣಿಮೆಯಂದು ತನ್ನ ಶಿಷ್ಯ ತೆಲಗುಬಾಳು ಸಿದ್ದನನ್ನು ಸದ್ಧರ್ಮ ಪೀಠದ ಮೇಲೆ ಕುಳ್ಳಿರಿಸಿ 'ತರಳ, ಬಾಳು' ಎಂದು ಹರಸಿದ ಚಾರಿತ್ರಿಕ ಹಿನ್ನೆಲೆಯಲ್ಲಿ ಒಂದು ಮಠಕ್ಕೆ ಸಂಬಂಧಿಸಿದ್ದರೂ, ಇದೊಂದು ಸರ್ವಧರ್ಮ ಸಮನ್ವಯ ವೇದಿಕೆಯಾಗಿ ರೂಪುಗೊಂಡು ಸರ್ವಜನಾದರಣೆಯನ್ನು ಪಡೆದಿದೆ. ಮಠದೊಳಗೆ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿದ್ದ ಈ 'ತರಳ ಬಾಳು ಹುಣ್ಣಿಮೆ'ಗೆ ಒಂದು ಸಾಂಸ್ಕೃತಿಕ ಸ್ವರೂಪವನ್ನು ಕೊಟ್ಟವರು ನಮ್ಮ ಲಿಂಗೈಕ್ಯ ಗುರುಗಳವರು. ಅವರ ಮಾತಿನಲ್ಲಿಯೇ  ಹೇಳುವುದಾದರೆ: ತರಳಬಾಳು ಹುಣ್ಣಿಮೆ ಮಹೋತ್ಸವವು ಯಾವುದೇ ಒಂದು ಮಠ-ಪೀಠದ ಮತ್ತು ಮತ-ಪಂಥಗಳ, ಜಾತಿ-ವರ್ಣಗಳ ಚೌಕಟ್ಟಿಗೊಳಪಡದೆ ಅಖಿಲ ಮಾನವತೆಯ ಸಂಘಟನೆಯ ಬಗ್ಗೆ ಮಾರ್ಗದರ್ಶನವೀಯುವುದನ್ನೇ ತನ್ನ ಧ್ಯೇಯವನ್ನಾಗಿಟ್ಟುಕೊಂಡಿದೆ (1976).

ಬೆಳದಿಂಗಳಿಗೆ ಕುಲಜಾತಿ ಸೀಮೆಗಳ ಪರಿಮಿತಿ ಇಲ್ಲ, ಬ್ರಾಹ್ನಣರ ಮನೆಯ ಅಂಗಳದಲ್ಲೂ ಇರುತ್ತದೆ; ಹರಿಜನರ ಕೇರಿಯಲ್ಲೂ ಚೆಲ್ಲುವರಿದಿರುತ್ತದೆ. ಅದಕ್ಕೆ ಯಾವ ಮಡಿ-ಮೈಲಿಗೆಯೂ ಆಗುವುದಿಲ್ಲ ಹಾಗೆಯೇ ಈ ತರಳಬಾಳು ಹುಣ್ಣಿಮೆಗೆ ಜಾತಿವಿಜಾತಿಗಳ, ಮತ-ಪಂಥಗಳ, ಪ್ರಾಂತ-ಪ್ರದೇಶಗಳ ಭೇದವಿಲ್ಲ ವಿಶ್ವಬಂಧು ಮರುಳಸಿದ್ದರ 'ತರಳ, ಬಾಳು' ಎಂಬ ಆಶೀರ್ವಾದ ಬೀಜಮಂತ್ರದಲ್ಲಿರುವ ತಾತ್ತಿಕ ಅರ್ಥಕ್ಕನುಗುಣವಾಗಿ ಮಾನವ ಮಾತ್ರರೆಲ್ಲರ ಅಭ್ಯುದಯವನ್ನು ಹಾರೈಸುತ್ತಾ ನಾಡಿನ ಎಲ್ಲ ಜನಾಂಗದವರ ನಾಡಹಬ್ಬವಾಗಿ ರೂಪುಗೊಂಡಿದೆ. ಕಳೆದ ಶತಮಾನದ ಮಧ್ಯಭಾಗದಿಂದಲೂ ನಿರಂತರವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್ ಮೊದಲಾದ ಎಲ್ಲ ಧರ್ಮೀಯರ ಹೃದಯಗಳಲ್ಲಿ ಭಾವೈಕ್ಯತೆಯ ಬೆಸುಗೆಯನ್ನು ಹಾಕುತ್ತಾ ಬಂದಿದೆ. ನಾಡಿನ ಆಗು-ಹೋಗುಗಳಿಗೆ-ಅದು ಬರಗಾಲವಿರಲಿ, ಯುದ್ಧದ ಭೀತಿ ಇರಲಿ- ಸ್ಪಂದಿಸುತ್ತಾ ಬಂದಿದೆ. ಆಯಾಯ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಜನತೆಗೆ ಮಾನವೀಯ ಮೌಲ್ಯಗಳನ್ನು ಕೇವಲ ವೇದಿಕೆಯ ಮೇಲಿಂದ ಬೋಧಿಸದೆ, ನಿಜ ಜೀವನದಲ್ಲಿ ಕಾರ್ಯಾಚರಣೆಗೆ ತರುವಂತೆ ಪ್ರೇರೇಪಿಸುತ್ತಾ ಬಂದಿದೆ. 1951ರಲ್ಲಿ ನಡೆದ ಇದೇ ಹಳೇಬೀಡಿನ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮತ್ತು ನಂತರದ ಮಹೋತ್ಸವಗಳಲ್ಲಿ ನಮ್ಮ ಪರಮಾರಾಧ್ಯ ಗುರುವರ್ಯರು ನೀಡಿದ ಈ ಕೆಳಕಂಡ ಆಯ್ದ ದಿವ್ಯ ಸಂದೇಶಗಳು ಈಗಲೂ ಪ್ರಸ್ತುತವಾಗಿವೆ:

-ಒಂದು ಕಾಲದಲ್ಲಿ 'ಗ್ಬಲಂ ಕ್ಷತಿಯಬಲಂ ಬ್ರಹ್ಮತೇಜೋ ಬಲಂಬಲಂ' ಎಂಬ ಮಾತೊಂದಿತ್ತು. ಈಗ ಇದರ ವಿಪರೀತವನ್ನು ಜೀವನದಲ್ಲಿ ಕಾಣುತ್ತಲಿದ್ದೇವೆ. ಇಂದು ಬ್ರಹ್ಮತೇಜೋಬಲವೇ ಉಡುಗಿಹೋಗಿದೆ.  ರಾಜಕೀಯ ಬಲವೇ ಎದ್ದು ಕುಳಿತಿದೆ. (1974)

-ಅಡವಿಯಲ್ಲಿರುವ ಹುಲಿಯು ಶತ್ರುವಾದರೂ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಪಕ್ಕದಲ್ಲಿರುವ ಮಾನವನು ಸ್ನೇಹಿತನ ವೇಷದಲ್ಲಿದ್ದು ನಮ್ಮ ಪ್ರಾಣವನ್ನೇ ತಿನ್ನುತ್ತಾನೆ. ಎಲ್ಲಾ ಸ್ವಾಮಿಗಳೂ ಎಲ್ಲಾ ಮಠಗಳೂ ನಮ್ಮವೆಂದುಕೊಳ್ಳಬೇಕೇ ವಿನಾ ಚಿಕ್ಕ ಚಿಕ್ಕ ಒಲೆಗಳನ್ನು ಹೂಡಿ ಚಿಕ್ಕ ಚಿಕ್ಕ ಸಂಸಾರಗಳನ್ನು ಸೃಷ್ಟಿಸಬಾರದು. ವ್ಯಾಪ್ತಿ ಚಿಕ್ಕದಾದಷ್ಟೂ ಮನಸ್ಸು ಚಿಕ್ಕದಾಗುತ್ತದೆ. ಚಿಕ್ಕ ಮನಸ್ಸಿನಲ್ಲಿ ಉನ್ನತ ವಿಚಾರಗಳು ಹುಟ್ಟುವುದಿಲ್ಲ. ತನ್ನ ಸೇವಾ ವ್ಯಾಪ್ತಿಯು ವಿಸ್ತ್ರತ ಪ್ರಪಂಚಕ್ಕೆ ದೊರಕುವುದಿಲ್ಲ (1979)

-ಧರ್ಮವು ಧರ್ಮವಾಗಿ ಉಳಿಯದೆ ಜಾತಿಯ ಸ್ವರೂಪವನ್ನು ಪಡೆದು, ಒಂದು ಜಾತಿಯ ಸಮಾಜವೆಂದು ಶಿಥಿಲಗೊಂಡು ತಮ್ಮ ಜಾತಿಯವರೇ ತಮ್ಮವರೆಂದು ಭಾವಿಸಿ, ಬೇರೆ ಜಾತಿಯವರು ನಮ್ಮವರಲ್ಲ ಎಂಬ ದುರ್ಭಾವನೆ ಬೆಳೆಯುವಂತೆ ಆಗಿದೆ. ಇದು ತೊಲಗಬೇಕು. (1951)

-ಶ್ರೀ ತರಳಬಾಳು ಜಗದ್ಗುರು

ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ

ದಿನಾಂಕ.30.1.2020

ಬಿಸಿಲು ಬೆಳದಿಂಗಳು